Sunday, 8 November 2020

ದೇಹವೇ ದೇವಾಲಯ - ಎಲ್.ಚಿನ್ನಪ್ಪ, ಬೆಂಗಳೂರು.

 


ದೇವರಾದ ಸರ್ವೇಶ್ವರ ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ, ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದರು; ಆಗ ಮನುಷ್ಯನು ಜೀವಾತ್ಮನಾದನು (ಆದಿಕಾಂಡ:೨:೭) 

ದೇವರು ಮನುಷ್ಯನನ್ನು ತಮ್ಮದೇ ರೂಪದಲ್ಲಿ ಹಾಗೂ ತಮ್ಮ ಶ್ವಾಸದಲ್ಲೇ ಸೃಷ್ಟಿಸಿದ್ದರಿಂದ ದೇವರ ಆತ್ಮ ಮನುಷ್ಯನಲ್ಲಿ ನೆಲೆಗೊಂಡಿತು. ಒಂದು ಹಿಡಿ ಮಣ್ಣು ದೇವರ ಸ್ಪರ್ಶದಿಂದ ಮಾಂಸ ರಕ್ತ, ಎಲುಬುಗಳಾಗಿ ಕೂಡಿಕೊಂಡು ದೇಹ ಜೀವ ತಳೆಯಿತು. ದೇವರ ಆತ್ಮವು ಮನುಷ್ಯನಲ್ಲಿ ನೆಲೆಗೊಂಡಿದ್ದರಿಂದ ಅವನ ದೇಹ  ದೇವ ಮಂದಿರವಾಯಿತು. 

ನೀವು ದೇವರ ಆಲಯವಾಗಿದ್ದೀರಿ, ದೇವರ ಆತ್ಮವು ನಿಮ್ಮಲ್ಲಿ ವಾಸಿಸುತ್ತದೆಂದು ನಿಮಗೆ ಚೆನ್ನಾಗಿ ತಿಳಿದಿದೆ (೧ ಕೊರಿಂಥ ೩:೧೬) 

ಹೌದು, ದೇವರು ಇನ್ನೆಲ್ಲೂ ಇಲ್ಲ, ಅವನಿಗೆ ಅಂತಹ ಪ್ರತ್ಯೇಕ ಸ್ಥಳ ಈ ಬ್ರಹ್ಮಾಂಡದಲ್ಲಿಲ್ಲ, ಈ ದೇಹದಲ್ಲೇ ದೈವಿಕ ಶಕ್ತಿ ಅಡಗಿದೆ. ದೇವರು ಮೆಚ್ಚುವಂತಹ ಸತ್ಕಾರ್ಯಗಳ ಮೂಲಕ ಹಾಗೂ ಪರರನ್ನು ತಮ್ಮಂತೆಯೇ ಪ್ರೀತಿಸುವುದರ ಮೂಲಕ ಮನುಷ್ಯ ತನ್ನೊಳಗಿರುವ ದೈವತ್ವವನ್ನು ಜಾಗೃತಗೊಳಿಸಿಕೊಳ್ಳಬೇಕು. ನಮ್ಮ ಕನ್ನಡ ಕಥೋಲಿಕ ಕ್ರೈಸ್ತರಲ್ಲೊಂದು ಜನಪ್ರಿಯ ಗೀತೆ ಇದೆ. ದೇಹವೇ ದೇವಾಲಯ ಎಂಬ ಗೀತೆ. ದೇಹವೇ ದೇವಾಲಯ, ಪರಿಶುದ್ಧ ದೇವಾಲಯ. ಕಲ್ಲಲ್ಲಿ, ಮಣ್ಣಲ್ಲಿ, ಮರದಲ್ಲಿ ಮಾಡಿರುವ ಮೂರ್ತಿಯಲಿ ಪ್ರಭುವೆಂದು ನೆಲೆಸಲಾರನು ಎಂಬ ಅರ್ಥಪೂರ್ಣ ಸಾಹಿತ್ಯದಿಂದ ಕೂಡಿರುವ ಈ ಹಾಡು ದೇವರ ಆತ್ಮ ಮನುಷ್ಯನಲ್ಲೇ ನೆಲೆಸಿದ್ದು ಅದೊಂದು ಪವಿತ್ರ ಮಂದಿರವೆಂದು ಸಾರುತ್ತದೆ. ದೇಹವು ದೇವರ ಪರಿಶುದ್ಧ ಆಲಯವಾಗಿದ್ದು ನಮ್ಮೊಳಗಿರುವ ದೈವತ್ವವನ್ನು ಭಕ್ತಿಯಲ್ಲಿ, ನಡೆಯಲ್ಲಿ, ನುಡಿಯಲ್ಲಿ, ಮತ್ತು ಕೃತಿಯಲ್ಲಿ ಅನಾವರಣಗೊಳಿಸುತ್ತ ಭಗವಂತನನ್ನು ನಮ್ಮ ಆತ್ಮದಲ್ಲೇ ಸಾಕ್ಷಾತ್ಕರಿಸಿಕೊಳ್ಳಬೇಕು. ಹೃದಯದಲ್ಲಿ ಅವನಿಗೊಂದು ಸ್ಥಾನ ನೀಡಬೇಕು. ಅದನ್ನು ಬಿಟ್ಟು ಅವನನ್ನು ಗುಡಿಯಲ್ಲಿ ಅರಸಿದರೆ ಸಿಗಲಾರ. ಭಗವಂತನ ವಾಸಸ್ಥಾನ ಗುಡಿ ಮಂದಿರಗಳಲ್ಲ, ಅವನ ಆತ್ಮ ಮನುಷ್ಯನಲ್ಲಿಯೇ ನೆಲೆಸಿದೆ. 

ದೇವರು ನಮಗೆ ತಮ್ಮ ಆತ್ಮವನ್ನು ನೀಡಿರುವುದರಿಂದ ನಾವು ಅವರಲ್ಲಿಯೂ ಅವರು ನಮ್ಮಲ್ಲಿಯೂ ನೆಲೆಸಿರುವುದನ್ನು ತಿಳಿದುಕೊಳ್ಳುತ್ತೇವೆ. (೧ ಯೋವನ್ನ ೪:೧೩) 

    ಇತರೆ ಧರ್ಮದ ತತ್ವಜ್ಞಾನಿಗಳಲ್ಲಿ ಕೆಲವರು ಇದನ್ನೇ ಪ್ರತಿಪಾದಿಸಿದ್ದಾರೆ. ಹದಿನಾಲ್ಕನೇ ಶತಮಾನದಲ್ಲಿ ಜೀವಿಸಿದ್ದ ಹಾಗು ತನ್ನೊಳಗೆ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಂಡಿದ್ದ ದಾರ್ಶನಿಕ ವೇಮನ ಉಕ್ತಿಯೊಂದನ್ನು ಇಲ್ಲಿ ಉಲ್ಲೇಖಿಸಿದೆ.

ಕಲ್ಲು ದಿನ್ನೆಯಿಂದ ಕಟ್ಟಿಗುಡಿಯ, ಮತ್ತೆ

ಬೇರೆ ಶಿಲೆಯ ಕೊರೆದು, ವಿಗ್ರಹವೆಂದು 

ಪೂಜೆ ಮಾಡಿದಾಗ ಪುಣ್ಯ ಬರುವುದೇನು? 

ಅಂತೆಯೇ ನಮ್ಮ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಜನಪ್ರಿಯ ಗೀತೆಯೊಂದು ಇದೇ ಇಂಗಿತವನ್ನು ವ್ಯಕ್ತಪಡಿಸುತ್ತದೆ.

ಎಲ್ಲೋ ಹುಡುಕಿದೆ ಇಲ್ಲದ ದೇವರ,

ಕಲ್ಲುಮಣ್ಣುಗಳ ಗುಡಿಯೊಳಗೆ

ಇಲ್ಲೇ ಇರುವ ಪ್ರೀತಿ ಸ್ನೇಹಗಳ 

ಗುರುತಿಸನಾದೆನು ನಮ್ಮೊಳಗೆ

ಅಗೋಚರ, ಅಮೂರ್ತ ದೈವವನ್ನು ಶಿಲೆ, ಲೋಹ, ಕಟ್ಟಿಗೆಯಲ್ಲಿ ಮೂರ್ತೀಕರಿಸಿ ನಂಬಿಕೆ ಆಧಾರದಲ್ಲಿ ಜೀವನ ಪ್ರೀತಿಯನ್ನು ಉಲ್ಬಣಿಸಿಕೊಂಡು ಬರುವ ಒಂದು ಲೌಕಿಕ ರೂಢಿ. ದೇವರು ಮನುಷ್ಯನ ಸೃಷ್ಟಿಯೇ ಹೌದಾದರೂ ಅದು ತನ್ನನ್ನು ತಾನು ನಿಯಂತ್ರಿಸಿಕೊಳ್ಳಲು ಮನುಷ್ಯ ಕಂಡುಕೊಂಡ ಭಯ ಅಥವಾ ಭಕ್ತಿ ಮಾರ್ಗ. ಜೀವನ ಮೌಲ್ಯಗಳು ಕಾಲಾತೀತ, ದೇಶಾತೀತ ಮತ್ತು ಜನಾತೀತ. ಜೀವನ ಮೌಲ್ಯಗಳನ್ನು ರೂಢಿಸಿಕೊಂಡ ಪ್ರತಿ ಮನುಜರು ದೇವರ ಪ್ರತೀಕವೇ, ಮನುಷ್ಯನೊಳಗೆ ದೈವತ್ವವಿದೆ, ದೈವಶಕ್ತಿಯಿದೆ. ಮಾನವೀಯತೆ ಪ್ರಕಟಿಸಿದಾಗಲೇ ಮನುಷ್ಯ ಜೀವನ ಸಾರ್ಥಕ. ಅವುಗಳನ್ನು ಜಾಗೃತಗೊಳಿಸದೆ, ದೇವರನ್ನು ಇನ್ನೆಲ್ಲೋ ಹುಡುಕಿ ಅಲೆಯುವುದು ವ್ಯರ್ಥ. ಹಾಗಂತ ದೇವರೇ ಇಲ್ಲವೆಂದಲ್ಲ, ದೇವರೆಂಬುದು ಒಂದು ನಂಬಿಕೆ. ಆ ನಂಬಿಕೆಯ ಮೇಲೆ, ಗುಡಿ ದೇವಾಲಯಗಳಿಗೆ ಹೋಗುತ್ತೇವೆ. ಗುಡಿ ದೇವಾಲಯಗಳಿಗೆ ಹೋಗುವುದು ತಪ್ಪು ಎಂದು ಯಾವ ಧರ್ಮವೂ ಹೇಳುವುದಿಲ್ಲ.  ನಡೆಯಲ್ಲಿ, ನುಡಿಯಲ್ಲಿ, ವಿನಯ ಸೌಜನ್ಯವನ್ನು ಅಳವಡಿಸಿಕೊಂಡು, ಮಾಡುವ ಕೆಲಸವನ್ನು ಶುದ್ಧಮನಸ್ಸಿನಿಂದ, ಆತ್ಮಪೂರಕವಾಗಿ ಮಾಡಿದರೆ, ನಮ್ಮೊಳಗಿನ ದೈವತ್ವವು ಅನಾವರಣಗೊಳ್ಳುವುದು. ಮನಸ್ಸಿನಲ್ಲಿ ಯಾವುದೇ ನಕಾರಾತ್ಮಕ ಭಾವನೆಗಳಿಗೆ ಎಡೆಮಾಡಿಕೊಡುವುದಿಲ್ಲ. ಪ್ರಸಿದ್ದ ದಾರ್ಶನಿಕ ಬಸವಣ್ಣನ ವಚನವೊಂದು ಮೇಲಿನ ವಿಷಯದ ಬಗ್ಗೆ ಬೆಳಕು ಚೆಲ್ಲುತ್ತದೆ. 

ಉಳ್ಳವರು ಶಿವಾಲಯ ಮಾಡಿಹರು

ನಾನೇನ ಮಾಡುವೆ ಬಡವನಯ್ಯಾ

ಎನ್ನ ಕಾಲೇ ಕಂಬ, ದೇಹವೇ ದೇಗುಲ

ಶಿರಹೊನ್ನಕಳಸವಯ್ಯ

ಸ್ಥಾವರಕ್ಕಳಿವುಂಟು ಜಂಗಮಮಕ್ಕಳಿಗಿಲ್ಲ

     ಮನಸ್ಸಿನಲ್ಲಿ ಸದಾ ಹತಾಶೆ, ನಿರಾಶೆ, ಕೆಟ್ಟ ಭಾವನೆ ಹಾಗು ಪ್ರಾಪಂಚಿಕ ವಿಷಯಗಳನ್ನೇ ತುಂಬಿಕೊಂಡು ಗುಡಿಗೆ ಹೋಗಿ ಮಂತ್ರವನ್ನು ಪಠಿಸಿದರೆ ಆಥವಾ ಅಡ್ಡ ಬಿದ್ದು ಪ್ರಾರ್ಥಿಸಿದರೆ, ಅದು ದೇವರಿಗೆ ಸಲ್ಲದು. ಆ ಅಹವಾಲಿಗೆ ಸದುತ್ತರವೂ ದೊರೆಯದು. ಬಂಧನಕ್ಕೂ ಮುಕ್ತಿಗೂ ಮನಸ್ಸೇ ಮೂಲ ಕಾರಣ. ಮನಸ್ಸನ್ನು ನಿಯಂತ್ರಿಸಿ ನಮ್ಮೊಳಗಿನ ದೈವತ್ವದ ಪ್ರಕಾಶನಕ್ಕೆ ಅನುವುಮಾಡಬೇಕು. ಮನಸ್ಸನ್ನು ಪೂರ್ವಾಗ್ರಹಗಳಿಂದ ದೂರವಿಡಬೇಕು. ಮನಸ್ಸು ಮರ್ಕಟವೂ ಹೌದು, ಕಲ್ಪವೃಕ್ಷವೂ ಹೌದು. ಹದ ತಪ್ಪಿದರೆ ಮರ್ಕಟವಾಗುತ್ತದೆ, ಹದವರಿತರೆ ಕ್ಲಪವೃಕ್ಷವಾಗುತ್ತದೆ. ಜೀವ-ಜೀವನಾರೋಗ್ಯಕ್ಕೆ ಮನಸೇ ಮೂಲ. ಮನಸ್ಸಿನಲ್ಲಿ ಧನಾತ್ಮಕ ಭಾವನೆಗಳನ್ನೇ ರೂಢಿಸಿಕೊಳ್ಳಬೇಕು.  ಈ ಕುರಿತು ರವೀಂದ್ರನಾಥ್ ಟಾಗೂರರ ಕವನವೊಂದು ನಕರಾತ್ಮಕ ಮನಸ್ಸಿನ ಮೇಲೆ ಅರಿವಿನ ಬೆಳಕನ್ನು ಮೂಡಿಸುತ್ತದೆ. ಗುಡಿಗೆ ಹೋಗಿ ದೇವರ ಪೀಠದ ಬಳಿ ಹೂಗಳನ್ನು ಅರ್ಪಿಸುವ ಮುನ್ನ, ತಲೆಬಾಗಿ ಪ್ರಾರ್ಥಿಸುವ ಮುನ್ನ, ಯಾರ ಮುಂದೆ ತಪ್ಪೆಸಗಿರುವೆಯೋ  ಅವರಲ್ಲಿ  ಕ್ಷಮ ಯಾಚಿಸು, ನಿನ್ನ ನೋಯಿಸಿದವರನ್ನು, ಪೀಡಿಸಿದವರನ್ನು,  ದ್ವೇಷಿಸದೆ ಅವರನ್ನು ಪೂರ್ಣ ಹೃದಯದಿಂದ ಕ್ಷಮಿಸು. ನಿನ್ನಲ್ಲಿರುವ ಪಾಪದ ಅಂಧತ್ವವನ್ನು ತೆಗೆದುಬಿಡು, ಅಹಂನ್ನು ಬಿಟ್ಟುಬಿಡು, ಎಲ್ಲರಲ್ಲಿ ಪ್ರೀತಿ ಸೌಜನ್ಯವೆಂಬ ಸೌರಭವನ್ನು ಉದ್ದೀಪನಗೊಳಿಸು ಎಂದು ಹೇಳುತ್ತದೆ. ಬಲಿ ಪೀಠದ ಮುಂದೆ ದೇವರಿಗೆ ಕಾಣಿಕೆಯನ್ನು ಅರ್ಪಿಸಲಿರುವಾಗ ನಿನ್ನ ಸೋದರನಿಗೆ ನಿನ್ನ ಮೇಲೆ ಏನೋ ಮನಸ್ಥಾಪವಿದೆ ಎಂಬುದು ನಿನ್ನ ಅರಿವಿಗೆ ಬಂದರೆ, ನಿನ್ನ ಕಾಣಿಕೆಯನ್ನು ಬಲಿಪೀಠದ ಮುಂದೆಯೇ ಇಟ್ಟುಬಿಡು. ಮೊದಲು ಹೋಗಿ ನಿನ್ನ ಸೋದರನೊಡನೆ ಸಮಾಧಾನಮಾಡಿಕೊ. ಅನಂತರ ಬಂದು ನಿನ್ನ ಕಾಣಿಕೆಯನ್ನು ಅರ್ಪಿಸು. (ಮತ್ತಾಯ ೫: ೨೩,೨೪)  ಶುದ್ಧ ಮತ್ತು ಸ್ವಾಸ್ಥ್ಯ ಮನಸ್ಸನ್ನು ಹೊಂದಲು ಬೈಬಲ್‌ನಿಂದ ನಾವು ಕಲಿಯಬೇಕಾದ ಮುಖ್ಯ ಪಾಠವಿದು. 

    ನಮ್ಮ ಹೃದಯ ಭಗವಂತನ ಮಂದಿರ. ಭಗವಂತನನ್ನು ಗುಡಿ ಮಂದಿರಗಳಲ್ಲಿ ಅರಸುವುದಕ್ಕಿಂತ ಅವನ ಇರುವಿಕೆಯನ್ನು ಭಕ್ತಿಯಿಂದ ಅನುಭವಿಸುವುದರಲ್ಲೇ ಇದೆ ಮುಕ್ತಿಯ ಮಾರ್ಗ. ಹೃದಯ ಯಾವಾಗಲೂ ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು. ಹೃದಯದ ಪರಿಶುದ್ಧತೆ ಬಾಳಿನ ಘನತೆ. ಆಗ ನಾವೂ ಕ್ಷೇಮವೇ ನಮ್ಮ ಹೃದಯವೂ ಪವಿತ್ರವೇ. 

============================


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...