Tuesday, 10 November 2020

ಫಾದರ್ ಸ್ಟ್ಯಾನ್ ಸ್ವಾಮಿ ಬಂಧನ - ಸಿ ಮರಿಜೋಸೆಫ್



 ಪ್ರತಿವರ್ಷದ ಅಕ್ಟೋಬರ್ ೪, ಅಸಿಸಿಯ ಸಂತ ಫ್ರಾನ್ಸಿಸರ ಸ್ಮರಣೆಯ ದಿನ. ಈ ಸಲ ಆ ದಿನ ಭಾನುವಾರವಾದ್ದರಿಂದ ಅದರ ಹಿಂದಿನ     ದಿನವೇ ವಿಶ್ವಗುರು ಪೋಪ್ ಫ್ರಾನ್ಸಿಸರು ಇಟಲಿ ದೇಶದ ಅಸಿಸಿ ಪಟ್ಟಣದಲ್ಲಿನ ಫ್ರಾನ್ಸಿಸ್ಕನ್ ಮಠದಲ್ಲಿ ಸಂತ ಫ್ರಾನ್ಸಿಸರ ಸಮಾಧಿಸ್ಥಳದಲ್ಲಿ ಪೂಜೆಯರ್ಪಿಸಿದರು. ಇದೇ ಸಂದರ್ಭದಲ್ಲಿ ಅವರು ಫ್ರಾತೆಲ್ಲೊ ತುತ್ತಿ (ಈಡಿಚಿಣeಟಟo ಖಿuಣಣಥಿ = ಎಲ್ಲರೂ ಒಡಹುಟ್ಟಿದವರೇ) ಎಂಬ ಜಗದ್ಗುರು ಪರಿಪತ್ರಕ್ಕೆ ರುಜು ಹಾಕಿದರು. "ಗಂಡು ಹೆಣ್ಣುಗಳೆರಡೂ ಒಬ್ಬನೇ ಸೃಷ್ಟಿಕರ್ತನಿಂದ ಉಂಟಾದವು" ಎಂಬುದೇ ಈ ಪರಿಪತ್ರದ ಸಾರ ಎನ್ನಲಾಗಿದೆ. ದೇವರು ಸೃಷ್ಟಿಸಿದ ಎಲ್ಲದರ ಮೇಲೂ ಸಂತ ಫ್ರಾನ್ಸಿಸರು ಸಹೋದರತ್ವ ತೋರಿದರು. ಸೂರ್ಯನನ್ನು ಅಣ್ಣ ಎಂದರು, ಚಂದ್ರನನ್ನು ಅಕ್ಕ ಎಂದರು, ಜೀವವನ್ನು ತಮ್ಮ ಎಂದರು, ಸಾವನ್ನು ತಂಗಿ ಎಂದರು. ಈ ಮಹಾನ್ ಸೋದರತ್ವದ ಭಾವನೆಯು ಇಂದು ಜಗತ್ತಿನಲ್ಲಿ ಮಾಯವಾಗುತ್ತಿದೆ, ಎಲ್ಲೆಡೆ ಹಿಂಸೆ, ಜನಾಂಗದ್ವೇಷ, ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂದು ವಿಶ್ವಗುರು ಫ್ರಾನ್ಸಿಸರು ಅಭಿಪ್ರಾಯಪಟ್ಟರು. 

ಸರಿಸುಮಾರು ಇದೇ ಸಮಯದಲ್ಲಿ ಉತ್ತರ ಇಂಡಿಯಾದಲ್ಲಿ ಫಾದರ್ ಸ್ಟ್ಯಾನ್ ಸ್ವಾಮಿ ಯೇ.ಸ. ಎಂಬ ಎಂಬತ್ಮೂರು ವರ್ಷದ ಕ್ರೈಸ್ತಗುರುವೊಬ್ಬರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ಬಂಧಿಸಿತು. ತಮಿಳುನಾಡಿನ ತಿರುಚ್ಚಿಯಲ್ಲಿ ಜನಿಸಿದ ಸ್ಟಾನ್ ಸ್ವಾಮಿ ಅವರು ಯೇಸುಸಭೆಯ ಗುರುವಾಗಿ ಜಾರ್ಖಂಡ್ ರಾಜ್ಯದಲ್ಲಿ ಸೇವೆ ಮಾಡುತ್ತಿದ್ದಾರೆ. ಸುಮಾರು ೧೯೮೦ರಲ್ಲಿ ಬೆಂಗಳೂರಿನಿಂದ ಜಾರ್ಖಂಡಿಗೆ ತೆರಳಿದ ಅವರು ಕೆಲವು ವರ್ಷಗಳ ಕಾಲ ಚೈಬಾಸಾದಲ್ಲಿರುವ ಜೊಹರ್ (ಜಾರ್ಖಂಡ್ ಮಾನವ ಹಕ್ಕುಗಳ ಸಂಸ್ಥೆ)ಯೊಂದಿಗೆ ಗುರುತಿಸಿಕೊಂಡಿದ್ದರು. ಕಳೆದ ಹದಿನೈದು ವರ್ಷಗಳಿಂದ ಜಾರ್ಖಂಡ್  ರಾಜಧಾನಿ ರಾಂಚಿಯಿಂದ ಸುಮಾರು ಹನ್ನೊಂದು ಕಿಲೋಮೀಟರು ದೂರದ ನಾಮ್ ಕುಮ್ ಎಂಬಲ್ಲಿ ಬಗೈಚ ಅಂದರೆ ಜೆಸ್ವಿತ್ ಸಾಮಾಜಿಕ ಸಂಶೋಧನಾ ಮತ್ತು ತರಬೇತಿ ಕೇಂದ್ರವನ್ನು ನಡೆಸುತ್ತ ಅದರ ಬಡಕುಟೀರದಲ್ಲಿ ವಾಸಿಸುತ್ತ ಆದಿವಾಸಿಗಳ ಹಕ್ಕುಸ್ಥಾಪನೆಯ ಕೆಲಸದಲ್ಲಿ ನಿರತರಾಗಿದ್ದಾರೆ. ಜೊತೆಗೆ ಸಮಾಜದ ಶೋಷಿತರ, ನಿರ್ವಸಿತರ, ಕಾನೂನುವಂಚಿತರ ಪರ ದನಿಯಾಗಿದ್ದಾರೆ.

ಆದಿವಾಸಿಗಳು ನಮ್ಮ ದೇಶದ ಜನಸಂಖ್ಯೆಯ ಶೇ. ೮.೬ರಷ್ಟಿದ್ದು ದೇಶದ ನಟ್ಟನಡುವೆ ಪಶ್ಚಿಮಬಂಗಾಳದಿಂದ ಹಿಡಿದು ಗುಜರಾತ್ ವರೆಗೆ ವ್ಯಾಪಿಸಿದ್ದಾರೆ. ಅಂದರೆ ಪಶ್ಚಿಮಬಂಗಾಳ, ಒಡಿಶಾ, ಬಿಹಾರ, ಝಾರ್ಖಂಡ್, ಛತ್ತೀಸ್ ಗಡ, ಆಂಧ್ರಪ್ರದೇಶ, ಮಹಾರಾಷ್ಟ್ರ ಮಧ್ಯಪ್ರದೇಶ, ರಾಜಾಸ್ಥಾನ್ ಮತ್ತು ಗುಜರಾತುಗಳ ಅರಣ್ಯ ಪ್ರದೇಶಗಳಲ್ಲಿ ಹಬ್ಬಿಹರಡಿದ್ದಾರೆ. ಕುಇ, ಸವುರ, ಗದಬ, ನಾಯ್ಕಿ, ದೇಸಿಯ, ಗೊಂಡಿ, ಕುರುಕ್, ಬೊಂಡ, ಪರ್ಜಿ, ಕೊಂಡ, ನಾಗ್ಪುರಿ, ಸಬರ್ ಮುಂತಾದ ದ್ರಾವಿಡ ಭಾಷೆಗಳನ್ನಾಡುವ ಇವರು ತಮ್ಮದೇ ಆದ ಧಾರ್ಮಿಕ ಕಟ್ಟುಪಾಡುಗಳನ್ನೂ ರೀತಿರಿವಾಜುಗಳನ್ನೂ ಆಚರಿಸುತ್ತಾರೆ. ಇವರನ್ನು ಹಿಂದೂಗಳೆಂದೂ ಇವರ ಭಾಷೆ ಹಿಂದೀ ಎಂದೂ ತಪ್ಪಾಗಿ ಬಿಂಬಿಸಲಾಗುತ್ತಿದೆ. ಇದರ ವಿರುದ್ಧ ಸಿಡಿದೆದ್ದಿರುವ ಜಾರ್ಖಂಡ್ ಆದಿವಾಸಿಗಳು ತಮ್ಮದು ಸಾರ್ನಾ ಧರ್ಮವೆಂದೂ, ತಾವು ಹಿಂದೂಗಳಲ್ಲವೆಂದೂ ಬಹು ಹಿಂದೆಯೇ ಘೋಷಿಸಿದ್ದರು. ತಳಿಶಾಸ್ತ್ರದ ವಿಜ್ಞಾನಿಗಳ ಪ್ರಕಾರ ಇವರು ನಮ್ಮ ದೇಶದ ಮೂಲನಿವಾಸಿಗಳು. 

ಆದರೆ ಸಂಘಪರಿವಾರದ ಪ್ರಕಾರ ಇವರು ವನವಾಸಿಗಳು ಅಂದರೆ ಕಾಡುಜನರು. ಹಿಂದೂ ನಾಗರಿಕ ಸಮುದಾಯವು ಇವರನ್ನು ದಲಿತರಂತೆಯೇ ಅಸ್ಪೃಶ್ಯತೆ, ಹಿಂಸೆ, ಅಪಮಾನ, ಅತ್ಯಾಚಾರ, ದಬ್ಬಾಳಿಕೆಗಳಿಂದ ಶೋಷಿಸುತ್ತಲಿದೆ. ಆದಿವಾಸಿಗಳ ಉದ್ಧಾರಕ್ಕಾಗಿ ಶ್ರಮಿಸುವ ಯಾರನ್ನೇ ಆದರೂ ನಿವಾರಿಸಲು ಸಂಘಪರಿವಾರದ ಶಾಖೆಗಳಾದ ವಿಶ್ವಹಿಂದೂ ಪರಿಷತ್, ಭಜರಂಗದಳ, ರಾಷ್ಟ್ರೀಯ ಸ್ವಯಂಸೇವಕ ಸಂಘಗಳ ಮೂಲಕ ಹಿಂಸೆಯನ್ನು ಪ್ರಚೋದಿಸುತ್ತಾ ಬರುತ್ತಿದೆ.

ಆದಿವಾಸಿಗಳಿಗೆ ಅರಣ್ಯವೇ ವಾಸಸ್ಥಾನ. ನಾಗರಿಕ ಸಮಾಜದ ಎಲ್ಲ      ಅಭಿವೃದ್ಧಿಗಳಿಂದ ದೂರ ಇರುವ ಅವರು ಕಾಡಿನ ಉತ್ಪನ್ನಗಳಿಗೇ ಜೋತುಬಿದ್ದು ತಮ್ಮದೇ ಆದ ಆಚಾರವಿಚಾರ, ಬೆಳೆ, ಕರಕುಶಲಕಲೆ, ವಸ್ತ್ರವಿನ್ಯಾಸ, ರೋಗನಿದಾನ, ವ್ಯಾಪಾರ ವಹಿವಾಟು, ಕಲಾಪ್ರಕಾರಗಳಲ್ಲಿ ತೊಡಗಿರುತ್ತಾರೆ. ಯಾವಾಗ ಅರಣ್ಯಗಳನ್ನು    ಜನಜೀವನದಿಂದ ಮುಕ್ತಗೊಳಿಸಬೇಕು ಎಂಬ ಆದೇಶ ಹೊರಟಿತೋ ಅಂದಿನಿಂದ ಈ ಆದಿವಾಸಿಗಳಿಗೆ ತೊಂದರೆ ಶುರುವಾಯಿತು. ಕಾಡನ್ನೇ ಮನೆ ಮಾಡಿಕೊಂಡು ಕಾಡನ್ನೇ ತಾಯಿಯಂತೆ ಪೂಜಿಸುತ್ತಿದ್ದ ಇವರಿಗೆ ಕಾಡಿನ ಹಕ್ಕನ್ನು ನಿರಾಕರಿಸಲಾಯಿತು ಮಾತ್ರವಲ್ಲ ಬಲವಂತವಾಗಿ ಒಕ್ಕಲೆಬ್ಬಿಸುವ ಪ್ರಯತ್ನಗಳೂ ನಡೆದವು. ಇಂಥ ದಬ್ಬಾಳಿಕೆ ಪರಿಣಾಮವಾಗಿಯೇ ಇಂದು ಆದಿವಾಸಿಗಳು ಸೆಟೆದು ನಿಂತು ತಮ್ಮ ಸಾಮಾಜಿಕ ಹಕ್ಕುಸ್ಥಾಪನೆಗಾಗಿ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಹೋರಾಡುತ್ತಿದ್ದಾರೆ ಎಂದು ಅಲ್ಪಸಂಖ್ಯಾತರ ಹಕ್ಕುಗಳ ಆಯೋಗದ ವರದಿ ದಾಖಲಿಸಿದೆ.

೨೦೦೬ರ ಅರಣ್ಯ ಹಕ್ಕುಗಳ ಕಾಯಿದೆಯು ಜಾರಿಗೆ ಬಂದು ಆದಿವಾಸಿಗಳ ಪಾರಂಪರಿಕ ನೆಲೆ ಮತ್ತು ಅರಣ್ಯಗಳ ಮೇಲಿನ ಅವರ ಹಕ್ಕನ್ನು ಎತ್ತಿಹಿಡಿದಿದೆಯಾದರೂ ಅದಿನ್ನೂ ಜಾರಿಯಾಗಿಲ್ಲ ಎನ್ನಲಾಗುತ್ತಿದೆ. ಇತ್ತೀಚಿನ ಅಂದರೆ ೨೦೧೯ರ ಸರ್ವೋಚ್ಚ ನ್ಯಾಯಾಲಯದ ಆದೇಶವು ಆದಿವಾಸಿಗಳ ಮೇಲೆ ಗದಾಪ್ರಹಾರ ಮಾಡಿದೆ. ಅವರೆಲ್ಲರೂ ಈಗ ಎತ್ತಂಗಡಿಯ ಭೀತಿ ಎದುರಿಸುತ್ತಿದ್ದಾರೆ.

ವಾಸ್ತವವಾಗಿ ಈ ದಟ್ಟ ಅರಣ್ಯಗಳು ನೈಸರ್ಗಿಕ ಸಂಪತ್ತಿನ ನಿಧಿಯಾಗಿದೆ. ಇಲ್ಲಿ ಅಪಾರ ಪ್ರಮಾಣದ ಕಲ್ಲಿದ್ದಲು, ಕಬ್ಬಿಣ, ಅಲ್ಯುಮಿನಿಯಂ, ಮ್ಯಾಂಗನೀಸ್ ಮುಂತಾದ ಖನಿಜಗಳ ನಿಕ್ಷೇಪಗಳಿವೆ. ಉದ್ಯಮಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಾ ಖನಿಜದ ಗಣಿಗಳನ್ನು ದೀರ್ಘಾವಧಿಗೆ ಗುತ್ತಿಗೆ ಪಡೆಯಲು ಹೊಂಚು ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೆ ಇಲ್ಲಿನ ನದಿಗಳೂ ಕಣಿವೆಗಳೂ ಭಾರೀ ಗಾತ್ರದ ಅಣೆಕಟ್ಟುಗಳನ್ನು ಕಟ್ಟಲು ಅತ್ಯಂತ ಸೂಕ್ತವಾಗಿದ್ದು ವಿದ್ಯುದುತ್ಪಾದನೆಗೆ ಸಹಕಾರಿಯಾಗಲಿದೆ. ನಾಗರಿಕ ಸಮುದಾಯಕ್ಕೆ ವರದಾನವಾಗಲಿರುವ ಈ ಅಭಿವೃದ್ಧಿ ಕಾರ್ಯಗಳಿಂದ ನಿಜವಾಗಿ ಸಂತ್ರಸ್ತರಾಗಲಿರುವವರು ಈ ಆದಿವಾಸಿ ಜನರು. ಅವರೆಲ್ಲರೂ ಇಂದು ಸಂಘಟಿತರಾಗಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ತೊಡಗಿದ್ದಾರೆ. ಆದರೆ ಸರ್ಕಾರವು ಈ ನಡವಳಿಕೆಯನ್ನು ರಾಜದ್ರೋಹ ಎಂದು ಪರಿಗಣಿಸಿದೆ. ಹೋರಾಟಗಾರರಿಗೆ ನಕ್ಸಲರ ಪಟ್ಟಗಟ್ಟಿ ಯದ್ವಾತದ್ವಾ ಹಿಂಸಿಸಿದೆ. 

ಕೆಲವರ್ಷಗಳ ಹಿಂದೆ ಆಡಳಿತಯಂತ್ರವು ಭೇದೋಪಾಯವಾಗಿ ಸಲ್ವಾಜುಡುಮ್ ಎಂಬ ಸಂಘಟನೆಯನ್ನು ಹೋರಾಟಗಾರರ ವಿರುದ್ಧ ಎತ್ತಿಗಟ್ಟಿ ಆದಿವಾಸಿಗಳು ಪರಸ್ಪರ ಹೊಡೆದಾಡುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಈ ಘರ್ಷಣೆಯಲ್ಲಿ ಅನೇಕ ಅಮಾಯಕರು ಪ್ರಾಣ ಕಳೆದುಕೊಂಡರು. ಸಾವಿರಾರು ಹೋರಾಟಗಾರರನ್ನು ಮಾವೋವಾದಿಗಳು ಅಥವಾ ಅವರಿಗೆ ಸಹಾಯ ಮಾಡಿದರು ಎಂಬ ಆರೋಪದ ಮೇಲೆ  ಅನ್ಲಾಫುಲ್ ಆಕ್ಟಿವಿಟೀಸ್ ಪ್ರಿವೆಂಶನ್ ಆಕ್ಟ್ (ಅಕ್ರಮ ಚಟುವಟಿಕೆ ನಿಯಂತ್ರಣ ಕಾಯಿದೆ) ಅನ್ವಯ ಬಂಧಿಸಿ ಸೆರೆಗೆ ತಳ್ಳಲಾಯಿತು.

ಫಾದರ್ ಸ್ಟ್ಯಾನ್ ಸ್ವಾಮಿಯವರು ಅಮಾಯಕ ಅವಿದ್ಯಾವಂತ ಆದಿವಾಸಿಗಳು ಹೀಗೆ ಶೋಷಣೆಗೊಳಗಾಗುವುದನ್ನು ಕಂಡು ಬಹು ನೊಂದರು. ಸೆರೆಮನೆಗೆ ಭೇಟಿ ನೀಡಿ ಮುಗ್ದ ಆದಿವಾಸಿಗಳಿಗೆ ಸಾಂತ್ವನ ಹೇಳಿದರು. ೨೦೧೮ ಏಪ್ರಿಲ್ ೭ರಂದು ತಮ್ಮದೇ ವಾರಪತ್ರಿಕೆಯಲ್ಲಿ ಮಾನವಹಕ್ಕುಗಳ ವಕೀಲೆ ಸುಧಾ ಭಾರದ್ವಾಜ್ ಅವರ ಸಹಯೋಗದಲ್ಲಿ ಪೊಲೀಸು ಅಧಿಕಾರಿಗಳ ನಿರಂಕುಶ ವರ್ತನೆಯ ಹಾಗೂ ಕಾರಣವಿಲ್ಲದೆ ಬಂಧಿತರಾದ ಅಮಾಯಕ ಆದಿವಾಸಿಗಳ ಸ್ಥಿತಿಗತಿಗಳ ಕುರಿತು ದೀರ್ಘ ಲೇಖನ ಬರೆದರು. ಅನುಸೂಚಿತ ಪ್ರದೇಶಗಳಿಗೂ ಪಂಚಾಯತ್ ಆಡಳಿತ (ಪೇಸಾ) ಕಾಯಿದೆ, ೧೯೯೬ ಅನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಅಲ್ಲದೆ ಸಮತಾ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಉದ್ದರಿಸಿದ ಜಮೀನಿನ ಮಾಲಿಕನು ಜಮೀನಿನಲ್ಲಿನ ಖನಿಜಕ್ಕೂ ಒಡೆಯನಾಗಿದ್ದಾನೆ ಎಂಬ ಘೋಷವಾಕ್ಯವನ್ನು ಸಾರುತ್ತಾ ಜನಜಾಗೃತಿ ಮೂಡಿಸಿದ ಕಾರಣಕ್ಕಾಗಿ ಅವರು ಸರ್ಕಾರದ ಕೆಂಗಣ್ಣಿಗೆ ಗುರಿಯಾದರು.

ಈ ನಡುವೆ ೨೦೧೮ ಜನವರಿ ಒಂದರಂದು ಮಹಾರಾಷ್ಟ್ರದಲ್ಲಿ ಮಹಾರ್ ಜನಾಂಗದವರು ಭೀಮಾ-ಕೋರೆಗಾಂವ್ ಯುದ್ಧದ ೨೦೦ನೇ ವರ್ಷಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಗಲಭೆಯೆಬ್ಬಿಸಿದರು. ಆಗಷ್ಟೇ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಬಿಜೆಪಿ ಪಕ್ಷದ ವಿರುದ್ಧ ಜನಾಭಿಪ್ರಾಯ ದಟ್ಟವಾಗುತ್ತಿತ್ತು. ಅದರ ಮುಂದಿನ ವರ್ಷ ನಡೆಯಲಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ವಿರುದ್ಧ ವ್ಯತಿರಿಕ್ತ ಪರಿಣಾಮ ಉಂಟಾಗಬಹುದೆಂದು ಭಾವಿಸಿದ ಬಿಜೆಪಿಯು ತಮ್ಮ ವಿರುದ್ಧ ಮಾತನಾಡುವ ವಿಚಾರವಾದಿಗಳು,     ಬುದ್ದಿಜೀವಿಗಳು, ಮಾನವಹಕ್ಕು ಕಾರ್ಯಕರ್ತರು, ವಕೀಲರು, ವಿದ್ಯಾರ್ಥಿಮುಖಂಡರು, ಬರಹಗಾರರು, ಕವಿಗಳು ಮುಂತಾದವರ ಮೇಲೆ ಕತ್ತಿ ಬೀಸತೊಡಗಿತು. ದೇಶದ ಎಲ್ಲೆಲ್ಲೋ ಇದ್ದ ವಿಚಾರವಾದಿಗಳನ್ನು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಸಿಲುಕಿಸಲಾಯಿತು. ದೇಶದ ಪ್ರಧಾನಿಯನ್ನು ಕೊಲ್ಲಲು ಒಳಸಂಚು ಮಾಡಲೆಂದೇ ಭೀಮಾ ಕೋರೆಗಾಂವ್ ಸಮಾವೇಶ ಆಯೋಜಿಸಿದರು ಎಂದು ಕತೆ ಕಟ್ಟಲಾಯಿತು. ಅಲ್ಲದೆ ಈ ಪ್ರಕರಣದ ವಿಚಾರಣೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಎಂಬ ಸ್ವಾಯುತ್ತ ಕಚೇರಿಯನ್ನು ರೂಪಿಸಲಾಯಿತು. 

ಇದಾಗಿ ಕೆಲವೇ ತಿಂಗಳಲ್ಲಿ ಅಂದರೆ ೨೦೧೮ ಆಗಸ್ಟ್ ೨೮ರಂದು ೮೩ರ ವಯೋವೃದ್ಧ ಫಾದರ್ ಸ್ಟ್ಯಾನ್ ಸ್ವಾಮಿ ಯೇ.ಸ. ಅವರ ನಿವಾಸದ ಮೇಲೆ ದಾಳಿ ನಡೆಸಿದ ತನಿಖಾಸಂಸ್ಥೆಯು ಅವರಲ್ಲಿದ್ದ ಗಣಕಯಂತ್ರ, ಮೊಬೈಲ್ ಫೋನ್,    ಧ್ವನಿಮುದ್ರಿಕೆಗಳು, ದಸ್ತಾವೇಜುಗಳು, ಕಡತಗಳು ಮುಂತಾವನ್ನು ವಶಕ್ಕೆ ತೆಗೆದುಕೊಂಡಿತು. ಹತ್ತು ತಿಂಗಳ ನಂತರ ಅಂದರೆ ೨೦೧೯ ಜೂನ್ ೧೨ರಂದು ಮತ್ತೊಮ್ಮೆ ಅವರ ಕೋಣೆಯ ಮೇಲೆ ದಾಳಿ ನಡೆಸಿ ಗಣಕಯಂತ್ರ, ಮೊಬೈಲುಗಳನ್ನು ಮಾತ್ರವಲ್ಲದೆ ಮಿನ್ನಂಚೆ, ವಾಟ್ಸಾಪು, ಫೇಸುಬುಕ್ಕುಗಳ ಕೀಲಿಗಳನ್ನೂ ವಶಪಡಿಸಿಕೊಳ್ಳಲಾಯಿತು. ಮೊಗಸಾಲೆ (ಫೇಸುಬುಕ್ಕು) ಮೂಲಕ ಸರ್ಕಾರದ ವಿರುದ್ಧ ವದಂತಿ ಹಬ್ಬಿಸಿ ಸಾರ್ವಜನಿಕರನ್ನು ಪ್ರಚೋದಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಕಳೆದ ಅಕ್ಟೋಬರ್ ಎಂಟರಂದು ಅವರನ್ನು ಬಂಧಿಸಲಾಯಿತು. ಬಂಧಿಸಿ ಮುಂಬೈಗೆ ಕೊಂಡೊಯ್ಯಲಾಯಿತು. ಅವರು ಬಹಿಷ್ಕೃತ ಮಾವೊವಾದಿ ಸಂಘಟನೆಯೊಂದಿಗೆ ಕೈಜೋಡಿಸಿದ್ದಾರೆ ಎಂಬುದು ಪ್ರಮುಖ ಆರೋಪವಾಗಿದೆ.

ಇಂಡಿಯಾ ದೇಶದಲ್ಲಿ ಭಯೋತ್ಪಾದಕ ಪಟ್ಟ ಪಡೆದ ಅತ್ಯಂತ ಹಿರಿಯವೃದ್ಧ ಎಂಬುದಾಗಿ ಸ್ಟ್ಯಾನ್ ಅವರನ್ನು ಬಿಬಿಸಿ ಬಣ್ಣಿಸಿದೆ. ಅವರ ಬಿಡುಗಡೆಗಾಗಿ ಒತ್ತಾಯಿಸಿ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆದಿವೆ. ವಿಚಾರಣೆಯ ನೆವದಲ್ಲಿ ಹದಿನೈದು ಗಂಟೆಗಳ ಕಾಲ ತಮ್ಮನ್ನು ಹೇಗೆ ಹೀನಾಯವಾಗಿ ನಡೆಸಿಕೊಂಡರು ಎಂಬ ಬಗ್ಗೆ ಒಂದು ಧ್ವನಿಮುದ್ರಿಕೆಯನ್ನು ಸ್ವಾಮಿಯವರು ಹರಿಬಿಟ್ಟಿದ್ದಾರೆ. ವಯೋವೃದ್ಧ ಫಾದರ್ ಸ್ವಾಮಿಯವರಿಗೆ ಪಾರ್ಕಿನ್ಸನ್ ಕಾಯಿಲೆಯಿದೆ ಆಗಾಗ್ಗೆ ಅವರ ದೇಹಕ್ಕೆ ರಕ್ತ ಮರುಪೂರಣ ಮಾಡಬೇಕಿದೆ, ವಯಸ್ಸಿನ ಕಾರಣ ಅವರಿಗೆ ರುಜು ಹಾಕಲು ಸಹ ಆಗುತ್ತಿಲ್ಲ, ಮೇಲಾಗಿ ಈಗ ಎಲ್ಲೆಡೆ ಕರೋನಾ ಸೋಂಕಿನ ಭೀತಿಯಿದೆ ಈ ಕಾರಣದಿಂದ ಅವರನ್ನು ಬಿಡುಗಡೆ ಮಾಡಬೇಕು ಎಂದ ಅವರ ವಕೀಲರು ವಾದವನ್ನು ಎನ್‌ಐಎ ತಿರಸ್ಕರಿಸಿದೆ. ಕ್ರೈಸ್ತರು ಮಾತ್ರವಲ್ಲದೆ ಇತರ ಧರ್ಮೀಯರೂ ಸ್ವಾಮಿಯವರಿಗೆ ಬೆಂಬಲ ಸೂಚಿಸಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣಯಾರಿ ವಿಜಯನ್, ಇತಿಹಾಸಜ್ಞ ರಾಮಚಂದ್ರ ಗುಹ, ಖ್ಯಾತ ವಕೀಲ ಪ್ರಶಾಂತ್ ಭೂಷಣ್ ನವರು ಸ್ವಾಮಿಯವರ ಪರ ನಿಂತಿದ್ದಾರೆ. ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗಳು, ಮೆರವಣಿಗೆಗಳು, ಆನ್ಲೈನ್ ಚಳವಳಿ ಮುಂತಾದವುಗಳ ಮೂಲಕ ಸಾರ್ವಜನಿಕರು ಸ್ವಾಮಿಯವರ ಬಿಡುಗಡೆಗೆ ಒತ್ತಾಯಿಸುತ್ತಿದ್ದಾರೆ. ಕಾರ್ಡಿನಲ್ ಓಸ್ವಾಲ್ಡ್ ಗ್ರೇಷಿಯಸ್ ನವರು ಹಾಗೂ ವಿಶ್ವಸಂಸ್ಥೆಯ ವಕ್ತಾರರು ಸ್ವಾಮಿಯವರ ತ್ವರಿತ ಬಿಡುಗಡೆಗೆ ಒತ್ತಾಯಿಸಿ ಹೇಳಿಕೆ ನೀಡಿದ್ದಾರೆ. ದೇಶದ ವ್ಯವಸ್ಥೆ ಎತ್ತ ಸಾಗಿದೆ ಎಂಬುದಕ್ಕೆ ಸ್ಟ್ಯಾನ್ ಸ್ವಾಮಿಯವರ ಪ್ರಕರಣ ಕನ್ನಡಿಯಾಗಿದೆ.

---------------------

ಸಿ ಮರಿಜೋಸೆಫ್

ಚಿಂತಕರು, ಸಾಹಿತಿ, ಬೆಂಗಳೂರು

----------------------


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...