ನಮ್ಮೂರಿನ ಸಂತ ಜೋಸೆಫರ ಗುಡಿಯ ಉಪದೇಶಿ ಅಜ್ಜ ಬನ್ನಪ್ಪಗೆ, ಆ ಹೆಸರು ಹೇಗೆ ಬಂದಿತು? ಅನ್ನುವುದು ನನಗೆ ಬಹುದಿನಗಳ ಕಾಲ ಯಕ್ಷಪ್ರಶ್ನೆಯಂತೆ ಕಾಡತೊಡಗಿತ್ತು.
ಒಂದು ದಿನ, ನಾಡ ಹಬ್ಬ ದಸರಾ ಹಬ್ಬದ ದಿನ ವಿಷ್ಣು ಘೋರ್ಪಡೆ ಅವರ ಮನೆಗೆ ಹೋದಾಗ, ಅಲ್ಲಿ ಅವರ ಮನೆಯ ಪಡಸಾಲೆಯಲ್ಲಿ ಮಾಡಿದ್ದ ಕಿಲ್ಲೆಯ ಅಂದರೆ ಕೋಟೆಯ ಪ್ರತಿಕೃತಿಯಲ್ಲಿ, ಗೋದಿಯ ಹುಲ್ಲನ್ನು ಬೆಳೆಸಲಾಗಿತ್ತು.
ಹಾಗೆಯೇ ಇನ್ನೊಂದು ಅಗಲವಾದ ಮುಚ್ಚಿದ ಬುಟ್ಟಿಯಲ್ಲಿಯೂ ಗೋದಿ ಹುಲ್ಲನ್ನು ಬೆಳೆಸಲಾಗಿತ್ತು. ಹಳದಿ ಹಸಿರು ಮಿಶ್ರಣದ ಬಣ್ಣದ ಗೋದಿ ಹುಲ್ಲಿನ ಎಸಳುಗಳು, ಸಂಜೆ ಸೂರ್‍ಯನ ಹಳದಿ ಬಣ್ಣದ ಕಿರಣಗಳೂ ಅವುಗಳ ಮೇಲೆ ಬಿದ್ದಾಗ, ಅವು ಬಂಗಾರದ ಎಸಳುಗಳಂತೆ ಮಿರಿಮಿರಿ ಮಿನುಗುತ್ತಿದ್ದವು. ಅವನ್ನು ಅವರು, ಬನ್ನಿ ಬಂಗಾರ ಎಂದು ಕರೆಯುತ್ತಾರೆ.
ದಸರೆಯನ್ನು ಬನ್ನಿ ಹಬ್ಬವೆಂದು ಕರೆದು, ಹಬ್ಬದ ಕೊನೆಯ ದಿನ ಸಂಜೆ ಆ ಹುಲ್ಲನ್ನು ಒಬ್ಬರಿಗೊಬ್ಬರು ಹಂಚಿಕೊಂಡು, `ಬಂಗಾರ ತಗೊಂಡು, ಬಂಗಾರದಂಗಿರೂಣ ಅಂತ ಹೇಳುತ್ತಿದ್ದರು. ಹಿಂದೆ, ಪಾಂಡವರು ಹನ್ನೆರಡು ವರ್ಷದ ವನವಾಸ, ದೇಶಾಂತರ ವಾಸದ ಕೊನೆಯ ಒಂದು ವರ್ಷದಲ್ಲಿ, ತಮ್ಮ ಗುರುತು ಮರೆಮಾಚಿ ಬದುಕಲು ಅನುವಾಗುವಂತೆ. ತಮ್ಮ ತಮ್ಮ ಆಯುಧಗಳನ್ನು ಬನ್ನಿ ಗಿಡದಲ್ಲಿ ಇರಿಸಿದ್ದರಂತೆ. ಅದು ಪಾಂಡವರಿಗೆ ಶುಭದಾಯಕವಾಗಿತ್ತು.
ತಮ್ಮ ಹನ್ನೆರಡು ವರ್ಷಗಳ ವನವಾಸದ, ನಂತರದ ಒಂದು ವರ್ಷದ ಅಜ್ಞಾತ ವಾಸ ತೀರಿದ ಬಳಿಕ ಆ ಗಿಡದ ಹತ್ತಿರ ಬಂದು, ಅದಕ್ಕೆ ಪೂಜಿಸಿ, ಆಶೀರ್ವಾದ ಕೋರಿಕೊಂಡು, ತಮ್ಮ ಆಯುಧಗಳನ್ನು ವಾಪಾಸು ಪಡೆಯುತ್ತಾರೆ. ನಂತರ ನಡೆದ ಕುರುಕ್ಷೇತ್ರ ಯುದ್ಧದಲ್ಲಿ, ಅವರು ಕೌರವರನ್ನು ಸೋಲಿಸುತ್ತಾರೆ. ಹೀಗಾಗಿ ಯುದ್ಧಕ್ಕೆ ಹೊರಡುವವರು ವಿಜಯಿಗಳಾಗಲು ಬಯಸುವವರು, ಬನ್ನಿ ಗಿಡಕ್ಕೆ ಪ್ರಾರ್ಥಿಸುವುದು, ಅದರ ಆಶೀರ್ವಾದ ಕೋರುವುದು ಸಂಪ್ರದಾಯವಾಗಿದೆ.
ಬನ್ನಿ ಗಿಡದ ಎಲೆಗಳಿಗೆ ದಸರಾ ಹಬ್ಬದ ದಿನ ಬಂಗಾರವಾಗುವ ಭಾಗ್ಯ. ಶಮಿ ಎಂದೂ ಕರೆಯಲಾಗುವ ಬನ್ನಿ ಗಿಡದ ಎಲೆಯ ಜೊತೆಜೊತೆಗೆ, ಈ ಗೋದಿ ಹುಲ್ಲನ್ನು ಬನ್ನಿ ಎಂದು, ಬಂಗಾರವೆಂದು ಬಗೆದು, ಒಬ್ಬರಿಗೊಬ್ಬರಿಗೆ ಶುಭವನ್ನು ಕೋರಿ ಪರಸ್ಪರ ವಿನಿಮಯ ಮಾಡಿಕೊಳ್ಳುವ ಪದ್ಧತಿ ಅನಾದಿ ಕಾಲದಿಂದಲೂ ರೂಢಿಯಲ್ಲಿದೆಯಂತೆ.
ನಮ್ಮ ಉಪದೇಶಿ ಬನ್ನಪ್ಪನ ಹೆಸರಿಗೂ ಇದೇ ಮೂಲ ಇದ್ದಿರಬಹುದಾ? ಹಾಂ, ಹೊಳೆಯಿತು. ನಾವು ಹಳೆ ಮೈಸೂರಿನ ಕ್ರೈಸ್ತರು, ಯೇಸುಸ್ವಾಮಿ ಕುಟುಂಬ ತಮ್ಮನ್ನು ಬೆನ್ನಟ್ಟಿ ಬಂದ ದುಷ್ಟ ಹೆರೋದ ಅರಸನ ಸೈನಿಕರಿಂದ ತಪ್ಪಿಸಿಕೊಳ್ಳಲು, ಎದೆಯುದ್ದ ಬೆಳೆದುನಿಂತಿದ್ದ ಬೆಳೆಯ ಹೊಲದಲ್ಲಿ ಮರೆಯಾದುದನ್ನು ಸ್ಮರಿಸಿ ಇಂಥ ಬಗೆಯ ಹುಲ್ಲುಗಳನ್ನು ಬೆಳೆಸುತ್ತೇವೆ,
ನಮ್ಮ ಹಳ್ಳಿಗಳಲ್ಲೆಲ್ಲಾ ಕ್ರಿಸ್ಮಸ್ ಮೊದಲು, ರಾಗಿ ಹುಲ್ಲು, ಗೋದಿ ಹುಲ್ಲು, ಜೋಳದ ಹುಲ್ಲು ಬೆಳೆದು ಮನೆಯ ಗೋದಲಿ ಕಟ್ಟುವುದು ಮತ್ತು ಹೆಚುವರಿ ತಟ್ಟೆಗಳಲ್ಲಿ ಬೆಳಿಸಿದ್ದ ಹುಲ್ಲನ್ನು ಊರ ಗುಡಿಯ ದೊಡ್ಡ ಗೋದಲಿಗಾಗಿ ತಲುಪಿಸುವುದು ನೆನಪಾಯಿತು. ಆ ಹುಲ್ಲನ್ನು ಬನ್ನಿ ಎನ್ನುವುದು. ನಮ್ಮ ನಮ್ಮ ಮನೆಗಳಿಂದ ಗುಡಿಗೆ ಆ ಬನ್ನಿ ಹುಲ್ಲನ್ನು ಹೊತ್ತು ಸಾಗಿಸುತ್ತಿದ್ದವ ಬನ್ನಪ್ಪ ಆಗಿದ್ದಾನೆ!
ಈ ಬನ್ನಪ್ಪನ ಕತೆಯೂ ರೋಚಕವಾಗಿದೆ. ಹಾಗೇ ನೋಡಿದರೆ ಅವನು ನಮ್ಮೂರವನೇ ಅಲ್ಲ. ಈ ಊರಿನ ಬೀಗನೂ ಅಲ್ಲ, ದೂರದ ನೆಂಟನೂ ಅಲ್ಲ. ತುಂಬಾ ವರ್ಷಗಳ ಹಿಂದೆ, ಹಬ್ಬಹರಿದಿನಗಳಂದು ನಮ್ಮೂರಿಗೆ ಬಂದು, ಅಂದ ಚಂದದ ಬಣ್ಣದ ಬಳೆಗಳನ್ನು ಹೊತ್ತು ಮಾರುವ ಬಳೆಗಾರರು, ಅವನನ್ನು ತಂದು ನಮ್ಮ ಗುಡಿಯ ಸ್ವಾಮಿಯ ಮಡಿಲಿಗೆ ಒಪ್ಪಿಸಿದ್ದರಂತೆ. ಅವನು, ಆಗ ಒಂದೋ ಅಥವಾ ಎರಡು ವರ್ಷದ ಮಗು.
ಅವರಿಗೆ ಆ ಮಗು ಊರ ಹೊರಗಡೆ ಪಾಳು ಬಿದ್ದಿರುವ ಆಂಜನೇಯ ದೇವಸ್ಥಾನದ ಹತ್ತಿರದ ಹಾಳು ಬಾವಿಯಲ್ಲಿ ಸಿಕ್ಕಿತ್ತಂತೆ. ಬಳಕೆ ಇಲ್ಲದೇ ಬತ್ತಿದ್ದ ಬಾವಿಯ ಸುತ್ತಲಿನ ಕಲ್ಲುಗಳು ಬಾವಿಯೊಳಗೆ ಉರುಳಿ ಬಿದ್ದಿದ್ದವು. ಮಣ್ಣು ಕುಸಿದು ಬಾವಿ ಬಹುತೇಕ ಮುಚ್ಚಿಯೇ ಹೋಗಿತ್ತು. ಗಿಡಗಂಟಿಗಳು ಒತ್ತಾಗಿ ಬೆಳೆದು ನಿಂತಿದ್ದವು. ಅಂಥದರಲ್ಲಿ ಯಾರೋ ಆ ಕೂಸನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಬಿಸಾಕಿದ್ದರಂತೆ. ಬಳೆಗಾರರು ಅಲ್ಲೇ ಕಲ್ಲಿನ ಮೇಲೆ ಕುಳಿತು ದಣಿವಾರಿಸಿಕೊಳ್ಳುವಾಗ, ಕ್ಷೀಣವಾಗಿ ಮಗುವೊಂದು ಅಳುವ ಸ್ವರ ಕೇಳಿಸಿತಂತೆ. ಗಿಡಗಂಟಿಗಳನ್ನು ಸವರಿ ನೋಡಿದಾಗ, ಅವರಿಗೆ ಆ ಮಗು ಕಾಣಿಸಿತ್ತು.
ಎತ್ತರದ ಆಳು, ಸ್ವಾಮಿ ದೊಡ್ಡ ಚಿನ್ನಪ್ಪ ಅವರು, ಆಗ ನಮ್ಮೂರಿನ ಸಂತ ಜೋಸೆಫರ ಗುಡಿಯ ಪಾಲನಾ ಗುರುಗಳಾಗಿದ್ದರು. ಅವರು ಆ ಮಗುವಿಗೆ ಜೋಸೆಫ್ ಎಂದು ನಾಮಕರಣ ಮಾಡಿದ್ದರು. ನಮ್ಮಜ್ಜ ನಮ್ಮಜ್ಜಿ ಅವನಿಗೆ ಜ್ಞಾನಸ್ನಾನದ ತಂದೆತಾಯಿ ಆಗಿದ್ದರಂತೆ.
ಗುರುಗಳ ನೆರಳಾಗಿ ಅವರ ಗರಡಿಯಲ್ಲಿ ಬೆಳೆದಿದ್ದ ಆತ, ತನ್ನ ಹೆಸರಿನ ಬಗ್ಗೆ, ತನ್ನ ಅದೃಷ್ಟದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ. ಆದಿ ತಂದೆ ಅಬ್ರಹಾಮನ ಮರಿಮೊಮ್ಮಗನ ಹೆಸರು ಜೋಸೆಫ್. ಅವನನ್ನು ಅವನ ಅಣ್ಣಂದಿರು ಮೋಸ ಮಾಡಿ ಬಾವಿಗೆ ತಳ್ಳಿರುತ್ತಾರೆ. ದೇವರ ದಯೆ, ಅವನನ್ನು ಬಾವಿಯಿಂದ ಹೊರಗೆಳೆದ ವ್ಯಾಪಾರಿಗಳ ತಂಡ ಅವನನ್ನು ಇಜಿಪ್ತ ದೇಶಕ್ಕೆ ಕೊಂಡೊಯ್ದಿರುತ್ತಾರೆ. ಅಲ್ಲಿ ಅವನ ಅದೃಷ್ಟ, ಅಲ್ಲಿ ಅವನು ಅರಸ ಫೆರೋನ ಆಡಳಿತದಲ್ಲಿ ಸಚಿವನಾಗುತ್ತಾನೆ. ಆದರೆ, ನನ್ನದು ಇನ್ನೊಂದು ಬಗೆಯ ಅದೃಷ್ಟ. ಬಳೆಗಾರ ವ್ಯಾಪಾರಿಗಳ ಕೈ ಸೇರಿದ ನಾನು, ಈ ಊರಿನ ಸಂತ ಜೋಸೆಫರ ಗುಡಿಯ ಮಡಿಲಿನ ಮಗುವಾಗಿ ಬೆಳೆದೆ, ಈ ಊರವರ ಪ್ರೀತಿಯ ದೆಸೆಯಿಂದ ಬನ್ನಪ್ಪನಾದೆ ಎಂದು ಅವನು ಆಗಾಗ ಹೇಳಿಕೊಂಡಿದ್ದಿದೆ.
ಸ್ವಾಮಿಗಳ ಕೃಪಾಶ್ರಯದಲ್ಲಿ ಬೆಳೆದಿದ್ದ ಅವನು, ಅಕ್ಷರ ಕಲಿಕೆಗೆ ಯಾವ ಶಾಲೆಯ ಬಾಗಿಲನ್ನು ತಟ್ಟಿರಲಿಲ್ಲ. ಆದರೆ, ಬಲ್ಲಿದ ಸ್ವಾಮಿಗಳ ಒಡನಾಟದಲ್ಲಿ ಬೆಳೆದ ಆತನಿಗೆ, ಕನ್ನಡವೂ ಸೇರಿದಂತೆ ಕೆಲವು ವಿದೇಶಿ ಭಾಷೆಗಳ ಅಲ್ಪಸ್ವಲ್ಪ ಪರಿಚಯವೂ ಇತ್ತು. ಲ್ಯಾಟಿನ್ ಅಂದರೆ ಲತೀನ್ ಭಾಷೆಯ ಪದಗಳು ಅವನ ಬಾಯಿ ತುದಿಯಲ್ಲಿಯೇ ನಲಿದಾಡುತ್ತಿದ್ದವು. ಫ್ರೆಂಚ್ ರಾಗದ ಕನ್ನಡ ಹಾಡುಗಳನ್ನು ಅವನು ಭಕ್ತಿಯಿಂದ ಹಾಡುತ್ತಿದ್ದರೆ, ಕೇಳುಗರ ಮನಸ್ಸಿಗೆ ಅದೊಂಥರ ಮುದ ಸಿಗುವುದಿತ್ತು. ವರ್ಷದ ಯಾವುದೇ ತಿಂಗಳಿರಲಿ ಅವನ ಬಾಯಲ್ಲಿ ಸದಾ ಕ್ರಿಸ್ಮಸ್ ಹಬ್ಬದ ಸಂದರ್ಭದ ಹಾಡುಗಳೇ ನಲಿಯುತ್ತಿದ್ದವು.
ಒಮ್ಮೆ ಅವನು ಬಾಲಕನಿದ್ದಾಗ ಮಾಡಿದ ಭಾಷಾ ಕಿತಾಪತಿ ಊರವರಿಗೆ ಫಜೀತಿ ತಂದಿಟ್ಟಿತ್ತು. ಸಿಮೋನಪ್ಪರ ಮನೆಯ ಕೊಟ್ಟಿಗೆಯಲ್ಲಿ ನೂರಾರು ಹಸುಗಳು, ದನಕರುಗಳು ಇದ್ದವು. ಅವರು ಊರ ಪಕ್ಕದ ಹೊಲದಲ್ಲಿ ಬಣಿವೆಗೆ ಬೆರಣಿ ತಟ್ಟಿ ತಟ್ಟಿ ಬೆರಣಿ ಒಣಗಿಸುತ್ತಿದ್ದರು. ಆ ಬೆರಣಿಗಳು ಕೆಲವರ ಒಲೆಗೆ ಇಂಧನವಾಗಿ ಬಳಕೆಯಾಗುತ್ತಿದ್ದವು. ಚಳಿಗಾಲ ಅದೇ ಆಗ ಆರಂಭವಾಗಿತ್ತು. ಒಂದು ದಿನ ಯಾರೋ ದನ ಕಾಯಲು ಹೊರಟವರೊಬ್ಬರು ಸೇದಿ ಎಸೆದಿದ್ದ ಮೋಟು ಬೀಡಿ, ಬೆರಣಿಯ ರಾಶಿಗೆ ಬಿದ್ದಾಗ, ಅಲ್ಲಿ ಬೆಂಕಿ ಹೊತ್ತಿಕೊಂಡಿತ್ತು.
ಅದು ನಿಧಾನವಾಗಿ ಹೊತ್ತಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಲ್ಲಿಗೆ ಹೋಗಿದ್ದ ಬಾಲಕ ಬನ್ನಪ್ಪ, ಅದನ್ನು ಕಂಡು ಸಿಮೋನಪ್ಪರ ಮನೆಗೆ ಹೋಗಿ, `ನಿಮ್ಮ ಬಾನಿಗೆ ಬೆಂಕಿ ಬಿದ್ದಿದೆ ಎಂದಾಗ ಮನೆಯಲ್ಲಿದ್ದವರು ಕಕ್ಕಾಬಿಕ್ಕಿಯಾಗಿದ್ದರು.
ಬಾನು ಅಂದರೆ ಆಕಾಶ. ಸಿಮೋನಪ್ಪನ ಆಕಾಶ ಬೇರೆ, ಬನ್ನಪ್ಪ ಆಕಾಶ ಬೇರೆ ಇರುತ್ತದಾ ಬೆಂಕಿ ಬೀಳಲು? ಎಲ್ಲೋ ಬೆಂಕಿ? ಎಂದು ಬೆದರಿಸಿದಾಗ, ಅವನಿಂದ ಬಂದ ಉತ್ತರ, `ನಿಮ್ಮ ಬಾನಿಗೆ ಬೆಂಕಿ ಬಿದ್ದಿದೆ ಎಂಬುದು ಅವರನ್ನು ಮತ್ತಷ್ಟು ಗೊಂದಲದಲ್ಲಿ ಬೀಳಿಸಿತ್ತು. ಮತ್ತೊಮ್ಮೆ ಕೇಳಿದಾಗ, `ನಿಮ್ಮ ಹೊಲದಲ್ಲಿನ ಬಾನಿಗೆ ಬೆಂಕಿ ಬಿದ್ದಿದೆ ಎಂಬ ಮಾತು, ಮನೆಯಲ್ಲಿದ್ದವರು ಅವರ ಹೊಲಕ್ಕೆ ದೌಡಾಯಿಸುವಂತೆ ಮಾಡಿತ್ತು. ಹೋಗಿ ನೋಡಿದರೆ, ಬೆರಣಿಯ ರಾಶಿಗೆ ಬೆಂಕಿ ಬಿದ್ದಿತ್ತು. ತಕ್ಕಣ ಎಲ್ಲರೂ ಬಾವಿಯಿಂದ ನೀರನ್ನು ಸೆಳೆದು ಸೆಳೆದು ಹಾಕಿ, ಬೆಂಕಿಯನ್ನು ಆರಿಸಿದ್ದರು.
ಇನ್ನೊಂದು ಪ್ರಸಂಗದಲ್ಲಿ ಪರಮ ಪೂಜ್ಯರಾದ ಮೇತ್ರಾಣಿಯವರನ್ನೇ ಬೀಳಿಸಿದ್ದನಂತೆ ಈ ನಮ್ಮ ಉಪದೇಶಿ ಅಜ್ಜ ಬನ್ನಪ್ಪ. ಇದು ನಡೆದದ್ದು, ಅವನು ಬಾಲಕನಾಗಿದ್ದಾಗ ಅಂತೆ. ನೆರೆಹೊರೆಯ ಊರುಗಳಲ್ಲಿ ಮಠದ ಸ್ವಾಮಿಗಳು ಬಂದಾಗ, ಊರಿನ ಮುಖ್ಯ ಬೀದಿಗಳಲ್ಲಿ ಅವರ ಪುರಪ್ರವೇಶವೆಂದು ಅವರನ್ನು ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮೆರವಣಿಗೆ ನಡೆಸಲಾಗುತ್ತಿತ್ತು. ಪೂಜ್ಯ ಸ್ವಾಮಿಗಳು ಕುಳಿತಿದ್ದ ಅಡ್ಡಪಲ್ಲಕ್ಕಿ ಹೊತ್ತವರು, ಬೀದಿಯಲ್ಲಿ ಸಾಗುವಾಗ ಅಲ್ಲಿನ ಮನೆಗಳವರು ಅಡ್ಡಪಲಕ್ಕಿಯವರು ನಡೆಯುವ ಮುಂಚೆ ನೀರು ಸುರಿದು ಬೀದಿಯನ್ನು ಮಡಿ ಮಾಡುತ್ತಿದ್ದರು.
ಅದೇ ಮಾದರಿಯಲ್ಲಿ ಪಟ್ಟಣದಿಂದ ಮೇತ್ರಾಣಿಗಳು ಬಂದಾಗ, ನಮ್ಮ ಊರಲ್ಲೂ ಅವರ ಮೆರವಣಿಗೆಯೂ ನಡೆಯುತ್ತಿತು. ಆದರೆ, ಅದು ಅಡ್ಡಪಲಕ್ಕಿಯಂತೆ ಅಲ್ಲ.
ಮೇತ್ರಾಣಿಗಳ ಸಾರೋಟು ಊರ ಹೊರಗಡೆ ಬಂದು ನಿಲ್ಲುತ್ತಿತ್ತು. ಊರವರು, ಊರ ಪೂರ್ವದ ಪ್ರವೇಶದ ಹತ್ತಿರ ನೆಟ್ಟಿದ್ದ ಶಿಲುಬೆ ಗಡಿಕಲ್ಲಿನ ಹತ್ತಿರ, ಪಟ್ಟಣದಿಂದ ಕರೆಯಿಸಿದ್ದ ಬ್ಯಾಂಡುಬಾಜಾದೊಂದಿಗೆ ಸಿದ್ಧವಾಗಿ ನಿಂತಿರುತ್ತಿದ್ದರು. ಹದಿನೈದು ಇಪ್ಪತ್ತು ಜನ ಶಾಲಾ ಮಕ್ಕಳು, ಬೀದಿಯ ಆ ಕಡೆ ಈ ಕಡೆ ಶಿಸ್ತಿನಿಂದ ನಿಂತಿರುತ್ತಿದ್ದರು. ಬಾಜಾದೊಂದಿಗೆ ಆರಂಭವಾದ ಮೆರವಣಿಗೆಯಲ್ಲಿ ಮೇತ್ರಾಣಿಗಳ ಮುಂದೆ ಒಂದಿಬ್ಬರು ಪೀಠ ಬಾಲಕರು ಸಾಗುತ್ತಿದ್ದರೆ, ಪರಮ ಪೂಜ್ಯ ಮೇತ್ರಾಣಿಗಳು ಮೇಲೆ ವೃತ್ತಾಕಾರದಲ್ಲಿ ತಿರುಗಿದ್ದ ಮಿರಿಮಿರಿ ಮಿಂಚುವ ಹಿತ್ತಾಳೆಯ ಧರ್ಮದಂಡವನ್ನು ಹಿಡಿದುಕೊಂಡು ಬರುತ್ತಿದ್ದರು. ಊರ ಹಿರಿಯರು ಅವರನ್ನು ಹಿಂಬಾಲಿಸುತ್ತಿದ್ದರು.
ಪಕ್ಕದ ಊರವರು ಮಠದ ಸ್ವಾಮಿಗಳು ಬಂದಾಗ ನೆಲಕ್ಕೆ ನೀರು ಹಾಕುವ ಪದ್ಧತಿ ಪಾಲಿಸಿಕೊಂಡು ಬರುತ್ತಿದ್ದರೆ, ನಮ್ಮ ಊರವರು, ಮೇತ್ರಾಣಿಗಳು ಬರುವ ಹಾದಿಯಲ್ಲಿ ಕೆಂಪು ಬಣ್ಣದ ಚಾಪೆಯನ್ನು ಹಾಸುತ್ತಿದ್ದರು. ಊದ್ದ ಹಾಸುವಷ್ಟು ಕೆಂಪು ಚಾಪೆಗಳು ಸಿಗದ ಕಾರಣ, ಇದ್ದ ಆರು ಮಾರು ಉದ್ದದ ಎರಡು ಚಾಪೆಗಳನ್ನು, ಒಂದರ ನಂತರ ಒಂದು ಇಡುವ ವ್ಯವಸ್ಥೆ ಮಾಡಲಾಗಿತ್ತು. ಈ ಲೆಕ್ಕಾಚಾರದಲ್ಲಿ ಮೊದಲ ಚಾಪೆ ಎರಡನೆಯ ಚಾಪೆಯಾಗುತ್ತಿದ್ದಂತೆ ಅದನ್ನು ತಂದು ಮತ್ತೆ ಮೊದಲನೆಯ ಚಾಪೆಯ ಲೆಕ್ಕಾಚಾರದಲ್ಲಿ ಹಾಕಲಾಗುತ್ತಿತ್ತು.
ಗುಡಿಯ ಬಾಗಿಲ ಹತ್ತಿರ ಮೆರವಣಿಗೆ ಬಂದಿತ್ತು. ಬ್ಯಾಂಡಿನವರು ದೂರ ಮೆರವಣಿಗೆಯಿಂದ ದೂರ ಸರಿದರು. ಪೀಠ ಬಾಲಕರು ಗುಡಿಯ ಬಾಗಿಲಲ್ಲಿದ್ದರು. ಪರಮ ಪೂಜ್ಯ ಮೇತ್ರಾಣಿಗಳು ಮುಂದೆ ಕಾಲಿಡುತ್ತಿದ್ದಂತೆ ಎಡವಿ ಬಿದ್ದರು. ಅಲ್ಲಿಯೇ ಇದ್ದ ಪಾಲನಾ ಗುರು ದೊಡ್ಡ ಚಿನ್ನಪ್ಪ ಅವರು ತಟ್ಟನೇ ಅವರನ್ನು ಹಿಡಿದುಕೊಂಡರು. ಹಿಂದಿರುಗಿ ನೋಡಿದರೆ, ಗುರುಗಳ ಒಡನಾಡಿ ಅನಾಥ ಬಾಲಕ ಜೋಸೆಫ್ ಚಾಪೆ ಎತ್ತುತ್ತಿರುವುದು ಕಾಣಿಸಿತು. ಮೇತ್ರಾಣಿಗಳು ಧುಮುಗುಡುತ್ತಾ ಒಳಗೆ ಸಾಗಿದರೆ, ಸ್ವಾಮಿ ದೊಡ್ಡ ಚಿನ್ನಪ್ಪ ಅವರು ದುರುಗುಟ್ಟಿಕೊಂಡು ನೋಡುತ್ತಾ ಒಳಗೆ ನಡೆದರು. ಮೆರವಣಿಗೆಯನ್ನು ಹಿಂಬಾಲಿಸುತ್ತಿದ್ದವರಿಗೆ ಏನು ನಡೆಯಿತು? ಎಂಬುದು ಗೊತ್ತಾಗಲಿಲ್ಲ.
ಪೂಜೆ ಸಾಂಗವಾಗಿ ನೆರವೇರಿದ ನಂತರ ಮೇತ್ರಾಣಿಗಳು ತಮ್ಮ ಸಾರೋಟು ಹತ್ತಿ ಹೊರಟೆ ಬಿಟ್ಟರು, ಪಾಲನಾ ಗುರು ದೊಡ್ಡ ಚಿನ್ನಪ್ಪ ಅವರು, ಬಾಲಕ ಜೋಸೆಫ್ ನನ್ನು ತರಾಟೆಗೆ ತೆಗೆದುಕೊಂಡರಂತೆ. ಆ ಸಮಯ ಊರ ಹಿರಿಯರೂ ಉಪಸ್ಥಿತರಿದ್ದರು. ಆದರೆ, ಜೋಸೆಫ್ ಎರಡೂ ಚಾಪೆಗಳನ್ನು ತಂದು, ಅದರಲ್ಲಿ ಒಂದು ಚಾಪೆಯ ದಾರ ಕಿತ್ತು ಬಂದಿದ್ದನ್ನು ತೋರಿಸಿ, ಪೂಜ್ಯ ಮೇತ್ರಾಣಿಗಳು ಎಡವಿ ಬಿದ್ದಿದ್ದು ಆ ದಾರದಿಂದ ತಾನು ಚಾಪೆಯನ್ನು ಎತ್ತಿದ್ದರಿಂದ ಅಲ್ಲ ಎಂದು ಸಮಜಾಯಿಷಿಕೊಟ್ಟನಂತೆ. ನಿಜ ಏನೇ ಇದ್ದರೂ, ಮೇತ್ರಾಣಿಗಳನ್ನು ಬೀಳಿಸಿದವ ಎಂಬ ಹೆಗ್ಗಳಿಕೆಯೋ, ಕಪ್ಪು ಚುಕ್ಕೆಯೋ, ಅವನ ಹೆಸರಿಗೆ ಅಂಟಿಕೊಂಡುಬಿಟ್ಟಿತ್ತು.
ಉಪದೇಶಿ ಅಜ್ಜ ಬನ್ನಪ್ಪನ ಮದುವೆಯದ್ದು ಒಂದು ಕತೆ. ಆ ಕಾಲದಲ್ಲಿ ಒಂದೂರಿನ ಗುಡಿಗೆ ಒಬ್ಬರು ಪಾಲನಾ ಗುರುಗಳಾಗಿ ನೇಮಕಗೊಂಡರೆ, ಈಗಿನಂತೆ ಮೂರೋ, ಐದು ವರ್ಷಗಳಿಗೊಮ್ಮೆ ವರ್ಗವಾಗುವ ಪ್ರಮೇಯವೇ ಇರಲಿಲ್ಲ. ಆಗ ಊರಿಗೆ ವರ್ಗವಾಗಿ ಬಂದ ಸ್ವಾಮಿಗಳು ಹದಿನೈದು ವರ್ಷ ತಪ್ಪಿದರೆ ಇಪ್ಪತ್ತು ವರ್ಷಗಳ ಕಾಲ ಒಂದೇ ಗುಡಿಯಲ್ಲಿ ಇದ್ದು ಬಿಡುತ್ತಿದ್ದರು. ನಮ್ಮೂರ ಗುಡಿಯ ಪಾಲನಾ ಗುರು ದೊಡ್ಡ ಚಿನ್ನಪ್ಪ ಸ್ವಾಮಿಗಳು, ಹದಿನೈದು ವರ್ಷ ಅಲ್ಲ ಇಪ್ಪತ್ತೆರಡು ವರ್ಷ ನಮ್ಮುರಲ್ಲೇ ಇದ್ದರಂತೆ.
ಸಂತ ಜೋಸೆಫರ ಗುಡಿಯ ಪಕ್ಕದ ಗುರುಮನೆಯಲ್ಲಿ ಗುರುಗಳೊಂದಿಗೆ ವಾಸವಿದ್ದರೂ, ತಂದೆ ತಾಯಿಗಳಿಲ್ಲದ ಬನ್ನಪ್ಪನನ್ನು ಊರವರು ತಮ್ಮವನೆಂದು ಬಗೆದು ಪ್ರೀತಿಸುತ್ತಿದ್ದರು. ಅವನು ಊರವರ ಮಗನೇ ಆಗಿದ್ದ. ಅವನಿಗೂ ಹರೆಯ ಬಂದಾಗ, ಅವನಿಗೊಂದು ಹೆಣ್ಣು ಕಟ್ಟಿ ಸಂಸಾರಕ್ಕೆ ತೊಡಗಿಸಬೇಕು ಎಂದುಕೊಂಡ ಸ್ವಾಮಿ ದೊಡ್ಡ ಚಿನ್ನಪ್ಪ ಅವರು, ಪಟ್ಟಣದಲ್ಲಿದ್ದ ಅನಾಥಾಶ್ರಮದಲ್ಲಿ ಬೆಳೆದಿದ್ದ ಒಂದು ಚಂದದ ಹುಡುಗಿಯನ್ನು ನೋಡಿಕೊಂಡು ಬಂದರು.
ಊರವರ ಸಮ್ಮುಖದಲ್ಲಿ ನಡೆದ ಮದುವೆಯಲ್ಲಿ ನಮ್ಮಜ್ಜ ವರನ ಪರ ನಿಂತರೆ, ಅನಾಥಾಶ್ರಮದ ಪರವಾಗಿ ಪಟ್ಟಣದ ಕಾನ್ವೆಂಟಿನ ದೊಡ್ಡ ಅಮ್ನೋರು ಬಂದಿದ್ದರಂತೆ. ಸ್ವಾಮಿ ದೊಡ್ಡ ಚಿನ್ನಪ್ಪ ಅವರು, ಪಾಡು ಪೂಜೆಯಲ್ಲಿ ಬನ್ನಪ್ಪ ಮತ್ತು ಅನ್ನಮ್ಮಳ ಮದುವೆ ನೆರವೇರಿಸಿದರು. ಬನ್ನಪ್ಪನ ಮದುವೆಗೆ ಊರ ಜನರೆಲ್ಲಾ ಬಂದಿದ್ದರು.
ಗಂಡ ಹೆಂಡತಿ ಬನ್ನಪ್ಪ, ಅನ್ನಮ್ಮ ಅನ್ಯೋನ್ಯವಾಗಿದ್ದರು. ಸ್ವಾಮಿ ದೊಡ್ಡ ಚಿನ್ನಪ್ಪ ಅವರು ಗುಡಿಯ ಆವರಣದಲ್ಲಿನ ತಮ್ಮ ಗುರುಮನೆಗೆ ಸ್ವಲ್ಪ ದೂರದಲ್ಲಿ ಮಣ್ಣಿನ ಗೋಡೆಯಲ್ಲಿ ಕಟ್ಟಿಸಿದ ನಾಡ ಹೆಂಚಿನ ಮನೆಯನ್ನು ಅವನಿಗೆ ಬಿಟ್ಟುಕೊಟ್ಟರು. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತೆ ಅವನ ಸಂಸಾರ ನಡೆದಿತ್ತು. ಗಂಡ ಹೆಂಡತಿ ಇಬ್ಬರೂ ಗುಡಿ ಆವರಣವನ್ನು ಸ್ವಚ್ಛವಾಗಿಡುತ್ತಾ, ಪೂಜೆಗೆ ಒತ್ತಾಸೆಯಾಗಿ ನಿಲ್ಲತೊಡಗಿದರು. ಬನ್ನಪ್ಪ ಉಪದೇಶಿ ಕೆಲಸದ ಜೊತೆಗೆ ಊರವರ ಕೆಲಸಗಳನ್ನು ಮಾಡಲು ಮುಂದಾಗಿದ್ದ. ತುಂಬು ಗರ್ಭಿಣಿ ಅನ್ನಮ್ಮಳನ್ನು ಊರ ಜನರೇ ಆರೈಕೆ ಮಾಡುತ್ತಿದ್ದರು. ಅವಳ ದಿನಗಳು ತುಂಬಿದ್ದವು.
ಅಂದು ಬನ್ನಪ್ಪ ನೆರೆಯ ಹಳ್ಳಿಯ ಜನರ ತೋಟದಲ್ಲಿನ ತೆಂಗಿನ ಮರಗಳನ್ನು ಇಳಿಸಲು ಹೋಗಿದ್ದ. ಎಷ್ಟೇ ಬೇಗ ಹಿಂದಿರುಗಬೇಕು ಎಂದುಕೊಂಡರೂ ಬರುವಾಗ ತುಂಬಾ ತಡವಾಗಿತ್ತು. ಆ ಊರಿನಿಂದ ಬರುವಾಗ ಸ್ಮಶಾನದ ಪಕ್ಕದ ರಸ್ತೆಯಿಂದಲೇ ಬರಬೇಕಿತ್ತು. ಆ ಸಮಾಧಿ ಜಾಗದ ಸ್ವಲ್ಪ ದೂರದಲ್ಲಿ ಹುಣುಸೆ ಮರವಿತ್ತು.
ಆ ಮರದಲ್ಲಿ ಹೆಣ್ಣು ಪಿಶಾಚಿ ಇದೆಯೆಂದು ಜನ ನಂಬಿದ್ದರು. ಬನ್ನಪ್ಪ ಆ ವಿಶಾಚಿಯ ಇರುವನ್ನು ನಂಬಿದ್ದನೋ ಇಲ್ಲವೋ ಗೊತ್ತಿಲ್ಲ, ಅವನೊಂದಿಗೆ ಊರಿಗೆ ಬರುತ್ತಿದ್ದವ ಆ ಮರದ ಹತ್ತಿರ ಬರುತ್ತಿದ್ದಂತೆ, ಕೂದಲು ಕೆದರಿಕೊಂಡು ಚಳಿಜ್ವರ ಬಂದವರಂತೆ ಗಡಗಡ ನಡುಗತೊಡಗಿದ್ದ. ಅವನನ್ನು ಸಂಭಾಳಿಸಿಕೊಂಡು ಬರುವಷ್ಟರಲ್ಲಿ ಅವನಿಗೆ ಸಾಕುಸಾಕಾಯಿತು.
ಕೆದರಿದ ಕೂದಲಿನವನೊಂದಿಗೆ ಬಂದ ಗಂಡ ಬನ್ನಪ್ಪನನ್ನು ಕಂಡ ಅನ್ನವ್ವ ಬೆದರಿದಳು. ಬೆದರಿಕೆಯಲ್ಲಿದ್ದ ದಿನ ತುಂಬಿದ ಅವಳನ್ನು ಸಮಾಧಾನಪಡಿಸಲು ನಮ್ಮಜ್ಜಿ ಜೊತೆಗಿದ್ದರು. ಸೂಲಗಿತ್ತಿಗೆ ಹೇಳಿ ಕಳುಹಿಸಲಾಗಿತ್ತು. ಸೂಲಗಿತ್ತಿ ಸೂಸಮ್ಮ ಬಂದಳು ಎಂದರೆ, ಹೆರಿಗೆ ಸುಸೂತ್ರವಾಗಿ ನಡೆಯುತ್ತದೆ ಎಂಬುದು ಊರವರ ನಂಬಿಕೆ. ಆದರೆ, ಅನ್ನವ್ವಳ ಪಾಲಿಗೆ ಆ ನಂಬಿಕೆ ಹುಸಿಯಾಯಿತು. ಹೆರಿಗೆಯ ಸಮಯದಲ್ಲಿ ತಾಯಿ ಕೊನೆಯುಸಿರು ಎಳೆದರೆ, ಒಂದೆರಡು ಗಂಟೆಗಳಲ್ಲೇ ಹಸಿಗೂಸಿನ ಉಸಿರೂ ನಿಂತಿತು.
ಈ ಪ್ರಸಂಗದ ನಂತರ, ಬನ್ನಪ್ಪ ಬಹಳ ಬದಲಾದನಂತೆ. ಅದುವರೆಗೂ ಅವನ ಜೀವನ ಒಂದು ಕ್ರಮದಲ್ಲಿ ಸಾಗುತ್ತಿತ್ತು. ಈಗ ಅದು ಹರಿದ ಗಾಳಿ ಪಟದಂತಾಗಿತ್ತು. ಕ್ರಿಸ್ಮಸ್ ಬಂದ ನಂತರವೇ ಆತ ಮಾಮೂಲಿ ಸ್ಥಿತಿಗೆ ಹಿಂತಿರುಗಿದ್ದನಂತೆ.
ವರ್ಷಗಳು ಉರುಳಿದವು. ಸ್ವಾಮಿ ದೊಡ್ಡ ಚಿನ್ನಪ್ಪ ಅವರೂ ವರ್ಗವಾಗಿ ಹೊರಟುನಿಂತಾಗ, ವಿಧುರನಾಗಿದ್ದ ಬನ್ನಪ್ಪನನ್ನು `ಬನ್ನಪ್ಪಾ, ನನ್ನೊಂದಿಗೆ ಬರುತ್ತೀಯಾ? ಎಂದು ಕೇಳಿದರು. ಅವನಿಗೆ, ಸಾಕಿ ಸಲುಹಿದ ಗುರುಗಳಿಗಿಂತ, ಊರವರ ಪ್ರೀತಿಯ ಋಣಭಾರವೇ ದೊಡ್ಡದಾಗಿ ಕಾಡತೊಡಗಿತ್ತು. ಇಲ್ಲ ಎನ್ನುವಂತೆ ಅಡ್ಡ ಗೋಣು ಅಲ್ಲಾಡಿಸಿದ.
ಹೊಸ ಗುರುಗಳು ಬಂದರು. ಎಂದಿನಂತೆ ಉಪದೇಶಿ ಕೆಲಸ ಮಾಡುತ್ತಿದ್ದರೂ, ಹೊಸ ಗುರುಗಳು ಅವನನ್ನು ಆದಷ್ಟು ದೂರವೇ ಇಡತೊಡಗಿದರು. ಎರಡು ಹೊತ್ತಿನ ಊಟಕ್ಕೆ ಆತ ಹೊರಗೆ ದುಡಿಯುವುದು ಅನಿವಾರ್ಯವಾಯಿತು. ಬೇರೆ ಬೇರೆ ಕೆಲಸಗಳು ಅವನ ಕೈ ಹಿಡಿಯುತ್ತಿದ್ದವು. ಊರ ಜನರನ್ನು ತನ್ನ ಮನೆಯವರೇ ಎಂದುಕೊಂಡಿದ್ದ ಆತ, ಎಂದಿಗೂ ದುಡ್ಡಿಗಾಗಿ ಕೆಲಸ ಮಾಡಿರಲಿಲ್ಲ. ಆತನಿಗೆ ಈಗ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಕಷ್ಟವಾಯಿತು. ಪಟ್ಟಣ ಸೇರಿದ್ದರೆ, ಅವನ ತಿಳಿವಳಿಕೆಯ ಮಟ್ಟದ ಆಧಾರದಲ್ಲಿ ಆ ಕಾಲದಲ್ಲಿ ಒಳ್ಳೆಯ ಕೆಲಸವೇ ಸಿಗುತ್ತಿತ್ತು.
ಊರಲ್ಲಿರುವ ಮನೆಗಳವರಿಗೆ ಉರುವಲಿಗಾಗಿ ಜಾಲಿಮರದ ಮಾವಿನ ಮರದ ಕೊಂಬೆಗಳನ್ನು, ಬೊಡ್ಡೆಗಳನ್ನು ಒಡೆದು ಸೌದೆ ಕಟ್ಟಿಗೆ ಸಿದ್ಧಮಾಡಿ ಕೊಡುವುದು ಅವನ ಹಲವಾರು ಕಾಯಕಗಳಲ್ಲಿ ಒಂದು ಕಾಯಕವಾಗಿತ್ತು. ಸಂತೆಯಲ್ಲಿ ಸಾಮಾನು ಕೊಂಡವರು, ಅವನ್ನು ಅವನ ಮೇಲೆ ಹೊರಿಸಿಕೊಂಡು ಮನೆಗೆ ಹೋಗುತ್ತಿದ್ದರು.
ಯಾರಾದರೂ ಇಂದು ಹೊಲಕ್ಕೆ ಬಾಪಾ, ಇಂದು ಮೆಣಸಿನ ಸಸಿ ನೆಡಬೇಕು ಎಂದರೇ ಅದಕ್ಕೂ ಸೈ ಎನ್ನುತ್ತಿದ್ದ. ಹಂತಿ ಹೊಡೆಯೋಕೆ, ರೆಂಟೆ ಹೊಡೆಯೋಕೆ ಕರೆದರೆ ಆತ ಎಂದೂ ತಪ್ಪಿಸಿಕೊಂಡವನೇ ಅಲ್ಲ. ಸುಗ್ಗಿಯ ಸಮಯದಲ್ಲಿ ಎಲ್ಲರ ಹೊಲಗದ್ದೆಗಳ ಕೆಲಸಕ್ಕೆ ಹೊರಟುಬಿಡುತ್ತಿದ್ದ.
ಮಾವಿನ ಹಂಗಾಮು ಆರಂಭವಾಗುವ ಮೊದಲು ಗಿಡದಿಂದ ಮಾವಿನ ಕಾಯಿ, ಹಣ್ಣುಗಳನ್ನು ಬಡಿಸುವ ಸಮಯ ಬಂದರೆ, ಎಂಥಾ ಎತ್ತರದ ಟೊಂಗೆಯೇ ಇರಲಿ ಉದ್ದ ದೋಟಿಯಿಂದ ಸರಾಗವಾಗಿ ಹಣ್ಣು ಬಿಡಿಸಿ ಬುಟ್ಟಿ ತುಂಬಿಸುತ್ತಿದ್ದ. ಆಗ, ಊರಲ್ಲಿ ಕೆಲವರು ಬೆಳೆದಿದ್ದ ಟೆಂಗಿನ ಗಿಡದಿಂದ ಕಾಯಿಗಳನ್ನು ಇಳಿಸಬೇಕಾದರೇ ವರ್ಷಕ್ಕೊಮ್ಮೆ ಮಲೆನಾಡ ಸೀಮೆ, ಘಟ್ಟದ ಕೆಳಗಿನಿಂದಲೇ ಆಳುಗಳು ಬರುವುದನ್ನು ಕಾಯಬೇಕಿತ್ತು. ಅವರೊಂದಿಗೆ ಸ್ನೇಹ ಬೆಳಸಿ, ಸರಾಗವಾಗಿ ಟೆಂಗಿನ ಗಿಡಗಳನ್ನು ಏರುವುದನ್ನೂ ಆತ ಕಲಿತುಬಿಟ್ಟಿದ್ದ.
ಅವನಿಗೆ ಹೆಂಡಿರು ಮಕ್ಕಳು ಮನೆಮಠ ಎಂಬುದಿರಲಿಲ್ಲ. ಹಸಿವಾದಾಗ ಊರಲ್ಲಿನ ಯಾವುದಾದರು ಒಂದು ಮನೆಯ ಕಟ್ಟೆಯ ಮೇಲೆ ಹೋಗಿ ಕುಳಿತರಾಯಿತು, ಆ ಮನೆಯ ಯಜಮಾನಿ ಅವನಿಗೆ ಊಟ ಬಡಿಸುತ್ತಿದ್ದಳು.
ಯೇಸುಸ್ವಾಮಿಯ ಹುಟ್ಟುಹಬ್ಬ ಕ್ರಿಸ್ಮಸ್ ಬಂದರೆ ಸಾಕು, ಊರ ಮಕ್ಕಳಿಗೆ ಈ ಉಪದೇಶಿ ಅಜ್ಜ ಬನ್ನಪ್ಪನೇ ನೆನಪಾಗುವುದು. ಕ್ರಿಸ್ಮಸ್ ಹಬ್ಬದ ಮುನ್ನಿನ ಹದಿನೈದು ದಿನಗಳ ಕಾಲ, ಸಂಜೆ ಊರಲ್ಲಿನ ಎಲ್ಲಾ ಕ್ರೈಸ್ತರ ಮನೆಗಳ ಮುಂದೆ, ಕ್ರಿಸ್ಮಸ್ ಸಂಭ್ರಮವನ್ನು, ಹಸುಗೂಸು ಶಿಶು ಯೇಸುವಿನ ಬರುವನ್ನು ಸಾರುವ ಹಾಡುಗಳನ್ನು ಹಾಡುವ ತಂಡದ ನೇತೃತ್ವವನ್ನು ಈ ಉಪದೇಶಿ ಬನ್ನಪ್ಪನೇ ವಹಿಸುತ್ತಿದ್ದ.
ಕ್ರಿಸ್ಮಸ್ ಹಬ್ಬದ ಸಂಭ್ರಮದ ಪಾಡುಪೂಜೆ, ಸಾಂಗ್ಯಗಳು ಮತ್ತು ಇತರ ಪೂಜಾವಿಧಿಗಳು ಸಾಂಗವಾಗಿ ನೆರವೇರಿದ ನಂತರ, ಕಣ್ಮರೆಯಾಗುತ್ತಿದ್ದ ಉಪದೇಶಿ ಬನ್ನಪ್ಪ, ಸಾಂತಾ ಕ್ಲಾಸ್ ತಾತನ ವೇಷ ತೊಟ್ಟು ಎಮ್ಮೆಯ ಮೇಲೆ ಪ್ರತ್ಯಕ್ಷನಾಗುತ್ತಿದ್ದ. ಗುಡಿಯ ಪಾಲನಾ ಗುರುಗಳು ಪಾಲನಾ ಸಭೆಯ ಸದಸ್ಯರ ಮಕ್ಕಳಿಗೆ ಮತ್ತು ಊರ ಮಕ್ಕಳಿಗೇ ಅಂತ ತರಿಸಿದ್ದ ಆಟಿಗೆಗಳನ್ನು ಹಂಚುತ್ತಿದ್ದ.
ಗರಿಗಳ ಹಬ್ಬ ಬಂದರೆ, ಆ ದಿನವೂ ಎಮ್ಮೆಯ ಮೇಲೆ ಪ್ರತ್ಯಕ್ಷ ಆಗುತ್ತಿದ್ದ. ಎಮ್ಮೆಯೇ ಏಕೆ? ಜೆರುಸಲೇಮಿಗೆ ಯೇಸುಸ್ವಾಮಿ ಕತ್ತೆಯ ಮೇಲೆ ಬಂದದ್ದಲ್ಲ ಎಂದು ಕೇಳಿದರೆ, `ನಮ್ಮೂರಲ್ಲೂ ಕತ್ತೆಗಳಿವೆ. ಆದರೆ ಕತ್ತೆಗಳಿಗೆ ಕಿಮ್ಮತ್ತಿಲ್ಲ. ಜಟಕಾದವರು ಕುದುರೆ ಇಟ್ಟುಕೊಂಡಿದ್ದಾರೆ. ಆಕಳು, ಎಮ್ಮೆಗಳಲ್ಲಿ ಎಮ್ಮೆಯೇ ಎಲ್ಲರ ಮನೆಯಲ್ಲಿರುವುದು. ಎಲ್ಲಾ ಮಕ್ಕಳಿಗೂ ಎಮ್ಮೆಗಳ ಹಾಲೇ ಮುಟ್ಟುವುದು ಎಂದು ವಾದಿಸುತ್ತಿದ್ದ.
ನಾನು ಹೈಸ್ಕೂಲಿಗೆ ಸೇರಲೆಂದು ಊರು ಬಿಟ್ಟು ಹೊರಟಾಗ, ತನ್ನ ಇಳಿ ವಯಸ್ಸಿನಲ್ಲಿದ್ದ ಯಪದೇಶಿ ಅಜ್ಜ ಬನ್ನಪ್ಪ, ಧಾರ್ಮಿಕ ಸೋದರರ ಧಿರಿಸು ತೊಟ್ಟು ಪ್ರತ್ಯಕ್ಷನಾಗತೊಡಗಿದ್ದು ಸೋಜಿಗದ ಸಂಗತಿಯಾಗಿತ್ತು. ಎಳೆಯ ವಯಸ್ಸಿನಿಂದ ಸತತ ಇಪ್ಪತ್ತು ವರ್ಷಗಳ ಪಾದ್ರಿಗಳೊಂದಿಗಿನ, ಚರ್ಚಿನ ಒಡನಾಟ, ಅವನಲ್ಲಿ ಸಾಕಷ್ಟು ಧಾರ್ಮಿಕ, ಹಬ್ಬದಾಚರಣೆಗಳ, ಧರ್ಮಸಭೆಯ ಜ್ಞಾನ ಮೂಡಿಸಿತ್ತು.
ಮಾತೆ ಮರಿಯಳ ಸ್ವರೂಪದ ಬಣ್ಣ ಮಾಸಿದಾಗ, ಪೆಂಟರ್ ಪಾಲಣ್ಣ ಬಣ್ಣ ಬಳಿಯಲು ಮುಂದಾದಾಗ, ಬಳಿ ಮತ್ತು ನೀಲಿ ಬಣ್ಣವನ್ನೇ ಹಚ್ಚಬೇಕು ಎಂದು ಪಟ್ಟು ಹಿಡಿಯುತ್ತಿದ್ದ. ನೀಲಿ ಬಣ್ಣ ಅವಳನ್ನು ಆಗಸದ ರಾಣಿ- ಸ್ವರ್ಗದ ರಾಣಿಯೆಂದು ಗುರುತಿಸಿದರೆ, ಸ್ಪಟಿಕದ ಬಿಳಿ ಬಣ್ಣ ಬಿಳುಪು- ನಿಷ್ಕಳಂಕ ಮಾತೆ ಮರಿಯ ಎಂದು ಗುರುತಿಸುವುದಕ್ಕೆ ಸಹಕಾರಿ ಎಂದು ಆತ ಪ್ರತಿಪಾದಿಸುತ್ತಿದ್ದ.
ಆಗಸ್ಟ್ ಹದಿನೈದು, ಮಾತೆ ಮರಿಯಳ ಸ್ವರ್ಗ ಸ್ವೀಕಾರದ ಹಬ್ಬದ ಜೊತೆಗೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ದಿನವೂ ಹೌದು. ಅಂದು ಮಕ್ಕಳಿಗೆ ಸಹಿ ಹಂಚುವುದರಲ್ಲಿ ತೊಡಗಿರುತ್ತಿದ್ದ.
ಸೆಪ್ಟೆಂಬರ್ ಎಂಟು ಮಾತೆ ಮರಿಯಳ ಹುಟ್ಟುಹಬ್ಬದ ದಿನ. ಆರೋಗ್ಯವನ್ನು ಕರುಣಿಸುವ ಮಾತೆ ಮರಿಯಳನ್ನು ಆರೋಗ್ಯಮಾತೆ ಎಂದು ಗೌರವಿಸುವ ದಿನ, ಆ ಸಮಯದಲ್ಲಿ ಉಪದೇಶಿ ಬನ್ನಪ್ಪ, ಊರಲ್ಲಿನ ಎಲ್ಲರ ಮನೆಗಳಿಗೂ ಸ್ವಾಮಿಗಳನ್ನು ಕರೆದುಕೊಂಡು ಹೋಗಿ ಮನೆಯಲ್ಲಿದ್ದ ಅಸ್ವಸ್ಥರ ಆರೋಗ್ಯ ಸುಧಾರಿಸಲೆಂದು ಪ್ರಾರ್ಥನೆ ಮಾಡುವಂತೆ ಮಾಡುತ್ತಿದ್ದ. ಅಕ್ಟೋಬರ್ ೭ ಜಪಮಾಲೆ ರಾಣಿ ಹಬ್ಬ ಬಂದಾಗ, ಊರಲ್ಲಿನ ಹಿರಿಯರಿಗೆ ಮತ್ತು ಮಕ್ಕಳಿಗೆಲ್ಲಾ ಜಪಸರಗಳನ್ನು ಹಂಚುತ್ತಿದ್ದ. ಯಾವುದಾದರೊಂದು ವರ್ಷ ಅವನಿಗೆ ಅದು ಸಾಧ್ಯವಾಗದಿದ್ದರೆ, ಮಾತೆ ಮರಿಯಳ ಪುಟಾಣಿ ಪದಕಗಳನ್ನು ತಂದು ಕೊಡುತ್ತಿದ್ದ.
ಮುಲ್ಕಿ ಪರೀಕ್ಷೆ ಅಂದರೆ, ಇಂದಿನ ಎಸ್ ಎಸ್ ಎಲ್ ಸಿ (ಸೆಕಂಡರಿ ಸ್ಕೂಲ್ ಲಿವಿಂಗ್ ಸರ್ಟಿಫಿಕೇಟ್) ಪರೀಕ್ಷೆ ಸಂದರ್ಭದಲ್ಲಿ ಉಪದೇಶಿ ಅಜ್ಜ ಬನ್ನಪ್ಪ ತೀರಿಕೊಂಡ ಸುದ್ದಿ ಹೊತ್ತು ತಂದಿದ್ದ ನಮ್ಮಣ್ಣ.
ಬನ್ನಪ್ಪನಂಥ ಇನ್ನೊಬ್ಬ ಉಪದೇಶಿ ನಮ್ಮೂರಲ್ಲಿ ಇನ್ನೊಬ್ಬರು ಬರಲೇ ಇಲ್ಲ. ಅವನು ಧಾರ್ಮಿಕ ಸೋದರರ ಧಿರಿಸು ತೊಟ್ಟು ಹೊರಟನೆಂದರೆ, ಎದುರಿಗೆ ಯಾರಿಗಾದರೂ ಬಂದರೂ ಅವರ ಕೈಗೆ, ಜಪಸರವನ್ನೋ, ಪದಕವನ್ನೋ ಇಲ್ಲವೇ ಉತ್ತರಿಕೆಯನ್ನೂ ತಪ್ಪದೇ ಕೊಡುತ್ತಿದ್ದ. ಕ್ರಿಸ್ಮಸ್ ಸಂಭ್ರಮದ ಹಾಡುಗಳು ಗುನುಗುನಿಸುತ್ತಿದ್ದ ಉಪದೇಶಿ ಬನ್ನಪ್ಪ, ಪ್ರತಿದಿನವೂ ಯೇಸುವಿನ ಜನನವನ್ನು ಸಂಭ್ರಮಿಸುವಂತೆ ಮಾಡುತ್ತಿದ್ದ.
ಮಕ್ಕಳಿಗೆ ಬೈಬಲ್ ಕಥನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದ ಬನ್ನಪ್ಪನ ಕಾರಣವಾಗಿಯೇ, ನಮ್ಮೂರಿನ ಮಕ್ಕಳು ಧರ್ಮಕ್ಷೇತ್ರದ ಪ್ರಧಾನ ಕಚೇರಿಯು ನಡೆಸುತ್ತಿದ್ದ ಬೈಬಲ್ ಪ್ರಶ್ನಾವಳಿಯಲ್ಲಿ ಪ್ರಥಮ ದರ್ಜೆಯ ಅಂಕಗಳನ್ನು ಗಳಿಸುತ್ತಿದ್ದರು. ಈಗ ಅವನು ನಮ್ಮ ಜೊತೆಗೆ ಇಲ್ಲ. ಅವನ ಸ್ಥಾನವನ್ನು ತುಂಬಲು ಇನ್ನೊಬ್ಬರು ಇನ್ನೂ ಬಂದಿಲ್ಲ.
ಇದಾಗಿ ಸುಮಾರು ಮೂವತ್ತು ವಸಂತಗಳು ಕಳೆದು ಹೋದರೂ. ಉಪದೇಶಿ ಅಜ್ಜ ಬನ್ನಪ್ಪನ ನೆನಪು ಇನ್ನೂ ಮಾಸಿಲ್ಲ. ಕ್ರಿಸ್ಮಸ್ ಬಂದರೆ ಸಾಕು, ಉಪದೇಶಿ ಅಜ್ಜ ಬನ್ನಪ್ಪನ ಚಿತ್ರ ಮನದ ಕ್ಯಾನವಾಸಿನ ಮೇಲೆ ಮೂಡಿಬಿಡುತ್ತದೆ. ಇಂದಿನ ಮಕ್ಕಳಿಗೆ, ನಮ್ಮ ಹಳ್ಳಿಯಲ್ಲಿ, ನಮ್ಮ ಕಾಲದ ಕ್ರಿಸ್ಮಸ್ ತಾತ ಎಮ್ಮೆಯ ಮೇಲೆ ಬರುತ್ತಿದ್ದ ಸಂಗತಿಯನ್ನು ಹೇಳಿದರೆ, ಅವರು ಗೊಳ್ಳೆಂದು ನಗುವುದು ಸಹಜ.
ತಾತ್ವಿಕವಾಗಿ ವೇದಿಕೆಗಳ ಮೇಲೆ ಚರ್ಚು- ಧರ್ಮಸಭೆ ಭಾರತೀಕರಣಗೊಳ್ಳಬೇಕು, ನೆಲದ ಭಾಷೆಯಲ್ಲಿ, ಸಂಸ್ಕೃತಿಯಲ್ಲಿ ಬೇರು ಬಿಡಬೇಕು ಎಂಬ ಕೂಗು ಆಗಾಗ ಕೇಳಿಬರುತ್ತಲೇ ಇರುತ್ತದೆ. ಹಿಂದೆ ಮೂರ್‍ನಾಲ್ಕು ಶತಮಾನಗಳ ಹಿಂದೆಯೇ ತನ್ನನ್ನೇ ತಾನು ರೋಮನ್ ಬ್ರಾಹ್ಮಣ ಸನ್ಯಾಸಿ ಎಂದು ಕರೆದುಕೊಂಡಿದ್ದ ಮಿಷನರಿ ರಾಬರ್ಟ ಡಿ ನೋಬಿಲಿ, ಕಾವಿ ತೊಟ್ಟಿದ್ದರಂತೆ, ಕಮಂಡಲು ಹಿಡಿದಿದ್ದರಂತೆ!
ಈಗಾಗಲೇ, ಕೇರಳಿಗರ ನಾಡಹಬ್ಬ ಓಣಂ, ತಮಿಳರ ಸುಗ್ಗಿಹಬ್ಬ ಪೊಂಗಲ್- ಹಬ್ಬಗಳು ಚರ್ಚಿನ ಬಾಗಿಲಿಗೆ ಬಂದಿವೆ. ಕನ್ನಡಿಗರ ದಸರಾ, ದೀಪಾವಳಿ ಚರ್ಚಿನೊಳಗೆ ಕಾಲಿಡಲು ತುದಿಗಾಲಲ್ಲಿ ನಿಂತಿವೆ. ಹಿಮಬೀಳದ ನಮ್ಮ ಪರಿಸರದಲ್ಲಿ, ಸಾರಂಗಗಳು ಓಡಿಸುವ ಹಿಮಬಂಡಿ ಏರಿ ಸಾಂತಾಕ್ಲಾಸ್ ಬರುತ್ತಾನೆ ಎಂದುಕೊಳ್ಳುವುದು ಒಂದು ಅಭಾಸವೇ ಸರಿ,
ನಲವತ್ತು ವರ್ಷಗಳ ಹಿಂದೆಯೇ ನಮ್ಮೂರಿನ ಉಪದೇಶಿ ಅಜ್ಜ ಬನ್ನಪ್ಪ, ಸಾಂತಾಕ್ಲಾಸ್ ತಾತನಾಗಿ ಎಮ್ಮೆಯ ಮೇಲೆ ಕುಳಿತುಕೊಂಡು ಬಂದು ಮಕ್ಕಳಿಗೆ ಸಿಹಿ ತಿಂಡಿ, ಆಟಿಕೆ ಸಾಮಾನುಗಳನ್ನು ಒಪ್ಪಿಸುತ್ತಿದ್ದುದು, ನೆಲಮೂಲದಲ್ಲಿಯೇ ಕ್ರಿಸ್ತನನ್ನು ಕಾಣುವ ಅಮಾಯಕನೊಬ್ಬನ ಪ್ರಯತ್ನ ಎಂಬುದನ್ನು ಸುಲಭದಲ್ಲಿ ಅಲ್ಲಗಳೆಯಲಾಗದು.
--------------------------------
ಎಫ್.ಎಂ.ನಂದಗಾವ್, ಬೆಂಗಳೂರು
---------------------------------
(ಕೆಲವು ಪದಗಳ ಅರ್ಥಗಳು: ಉಪದೇಶಿ = ಕೆಟಕಿಸ್ಟ್, ಧರ್ಮದಂಡ = ಕ್ರೂಸರ್, ಮೇತ್ರಾಣಿ = ಬಿಷಪ್, ಧರ್ಮಕ್ಷೇತ್ರ = ಡಯಾಸಿಸ್, ಧರ್ಮಕೇಂದ್ರ = ಪ್ಯಾರಿಷ್, ಪಾಲನಾ ಗುರು = ಪ್ಯಾರಿಷ್ ಪ್ರೀಸ್ಟ್, ಹಾಡುತಂಡ =ಕ್ವಾಯರ್, ಕ್ರಿಸ್ಮಸ್ ಹಾಡುಗಳು = ನೆಟಿವಿಟಿ ಸಾಂಗ್ಸ್, ಕ್ರಿಸ್ಮಸ್ ತಾತ = ಸಾಂತಕ್ಲಾಸ್)
No comments:
Post a Comment