Monday, 9 November 2020

ಒಳಿತನ್ನು ಮಾಡುವುದನ್ನು ಮಾತ್ರ ಮರೆಯಬಾರದು

ಪ್ರೀತಿಯ ಅನು, ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಈ ಹಬ್ಬದ ಹಿನ್ನಲೆಯಲ್ಲಿ ಈ ಎರಡು ಕಥೆಗಳನ್ನು ನಿನಗೆ ಹೇಳುತ್ತಿದ್ದೇನೆ. ಮೊನ್ನೆ ನನ್ನ ತಂಗಿ ಮಗ ಕನ್ನಡ ಪಠ್ಯ ಪುಸ್ತಕವನ್ನು ತೆರೆದು, ನಾನು ಪಠ್ಯವನ್ನು ಓದುತ್ತೇನೆ, ನಾನು ಓದುವುದರಲ್ಲಿ ಲೋಪವಿದ್ದರೆ ದಯವಿಟ್ಟು ನನ್ನನ್ನು ತಿದ್ದಿ ಎಂದು ಹೇಳಿ ಓದಲು ಪ್ರಾರಂಭಿಸಿದ. ಪಾಠದ ಹೆಸರು ಬುದ್ಧಿವಂತ ಮುದುಕ. ಕಥೆಯು ತುಂಬ ಆಸಕ್ತಿಕರ ಎಂದೆನಿಸಿ ಇಲ್ಲಿ ಆ ಕಥೆಯ ಒಂದು ಭಾಗವನ್ನು ಹೇಳುತ್ತಿದ್ದೇನೆ:

ಒಮ್ಮೆ ರಾಜನು ಬೇಟೆ ಮುಗಿಸಿ ಹಿಂದಿರುಗುವಾಗ ವಿಶ್ರಾಂತಿ ಬಯಸಿ ದಾರಿಯಲ್ಲಿ ಕಂಡ ಒಂದು ಮನೆಗೆ ಬಂದ. ಅಲ್ಲಿ ಒಬ್ಬ ಮುದುಕ ಮಾವಿನ ಗಿಡವನ್ನು ನೆಟ್ಟು ಪಾತಿ ಮಾಡಿ ನೀರು ಹಾಕುತ್ತಿದ್ದ. ತನ್ನ ಇಳಿ ವಯಸ್ಸಿನಲ್ಲಿಯೂ ಕೆಲಸ ಮಾಡುತ್ತಿರುವನಲ್ಲಾ ಆ ಮುದುಕ ಎಂದು ಆಶ್ಚರ್ಯದಿಂದ ನಿನಗೆ ವಯಸ್ಸು ಎಷ್ಟು? ಎಂದು ಕೇಳಿದ. ಮುದುಕ ನನಗೆ ಮೂರು ವರ್ಷ ಎಂದು ಉತ್ತರಿಸಿದ. ತಕ್ಷಣ ದಂಡನಾಯಕ ಇವರು ಯಾರು ಗೊತ್ತಾ ಇವರು ಈ ನಗರದ ಮಹಾರಾಜರು. ತಲೆ ಹರಟೆ ಉತ್ತರ ನೀಡಬೇಡ. ಮಹಾರಾಜರ ಮುಂದೆ ಅಪಹಾಸ್ಯವೇ? ಎಂದು ಗದರಿಸಿದ. ಅಪ್ಪ ನಾನು ಅಪಹಾಸ್ಯ ಮಾಡುತ್ತಿಲ್ಲ. ನಾನು ಸರಿಯಾದ ಉತ್ತರವನ್ನೇ ನೀಡಿದೆ ಎಂದು ಮುದುಕ ಉತ್ತರ ಕೊಡಲು, ರಾಜನಿಗೆ ಕುತೂಹಲವಾಗಿ ಏನು ಹಾಗೆಂದರೆ ಎಂದು ಪ್ರಶ್ನಿಸಿದ. ಮುದುಕ ನಾನು ಮೂರು ವರ್ಷಗಳ ಹಿಂದಿನವರೆಗೂ ನನಗಾಗಿ, ನನ್ನ ಸಂಸಾರಕ್ಕಾಗಿ ನನ್ನ ಮಕ್ಕಳಿಗಾಗಿ ಜೀವನ ಮಾಡಿದ್ದೆ. ಕಳೆದ ಮೂರು ವರ್ಷಗಳಿಂದ ಸಮಾಜಕ್ಕಾಗಿ ಕೆಲಸ ಮಾಡುತ್ತಿರುವೆ. ಯಾವತ್ತಿನಿಂದ ಒಬ್ಬ ಮನುಷ್ಯ ಪರೋಪಕಾರದಲ್ಲಿ, ಸಮಾಜ ಸೇವೆಯಲ್ಲಿ ತೊಡಗುತ್ತಾನೋ ಅಂದಿನಿಂದ ಅವನ ವಯಸ್ಸು ಆರಂಭವಾಗುತ್ತದೆ. ಆದ್ದರಿಂದ ಈ ರೀತಿಯ ಕೆಲಸದಲ್ಲಿ ತೊಡಗಿ ಮೂರು ವರ್ಷವಾಯಿತು. ಅದಕ್ಕೆ ನನಗೆ ಈಗ ಮೂರು ವರ್ಷ ಎಂದು ಹೇಳಿದೆ ಎಂದ.


ಇನ್ನೊಂದು ಟಾಮ್ ಮೊರಿಸ್‌ರವರ ಒಯೇಸಿಸ್ ವಿತಿನ್, ಜರ್ನಿ ಒವ್ ಪ್ರೆಪರೇಶನ್ ಎಂಬ ಪುಸ್ತಕದಲ್ಲಿ ಈ ಕಥೆಯನ್ನು ಹೇಳಲಾಗಿದೆ.

ಒಬ್ಬ ವ್ಯಕ್ತಿಗೆ ಬೆಲೆಬಾಳುವ ವಸ್ತುಗಳನ್ನು ಆಭರಣಗಳನ್ನು ಸಂಗ್ರಹಿಸುವ ಹವ್ಯಾಸ. ಚಿನ್ನ ಬೆಳ್ಳಿ ಬೆಲೆ ಬಾಳುವ ಲೋಹಗಳು, ಆಭರಣಗಳು, ದುಬಾರಿ ಕಲಾಕೃತಿಗಳು, ಶಿಲೆಗಳು, ನಾಣ್ಯಗಳು ಹೀಗೆ ಇವುಗಳ ಸಂಗ್ರಹಕ್ಕೆ ತನ್ನ ಇಡೀ ಜೀವನವನ್ನು ಮೀಸಲಿಟ್ಟಿದ್ದ. ದೇಶ ವಿದೇಶಗಳನ್ನು ಸುತ್ತಾಡಿ ಇಂತಹ ಪ್ರಾಚೀನ ಐತಿಹಾಸಿಕ ವಸ್ತುಗಳನ್ನು ಕಲೆಹಾಕುವುದರಲ್ಲಿ ತುಂಬ ಸಂತೋಷಪಡುತ್ತಿದ್ದ. ಪ್ರತಿ ಬಾರಿ ತಂದ ವಸ್ತುಗಳನ್ನು ತನ್ನ ಮನೆಯ ಒಂದು ರೂಮಿನ ಕಪಾಟಿನಲ್ಲಿ ಒಂದರ ಮೇಲೊಂದು ಜೋಡಿಸಿ ಇಡುತ್ತಿದ್ದ. ಮಾತ್ರವಲ್ಲ ಅವನು ಆ ದುಬಾರಿ ವಸ್ತುಗಳ ಜತೆಯಲ್ಲೇ ಮಲಗುತ್ತಿದ್ದ. ಅವನು ಸಂಗ್ರಹಿಸುತ್ತಿದ್ದ ವಸ್ತುಗಳಿಂದ ಕಪಾಟು ತುಂಬಿಕೊಂಡಿತ್ತು. ವಸ್ತುಗಳ ಭಾರ ಹೆಚ್ಚಾದಂತಲ್ಲ, ಕಪಾಟಿನ ಹಲಗೆಗಳು ದುರ್ಬಲಗೊಳ್ಳಲು ಆರಂಭಿಸಿತು. ಕೊನೆಗೆ ಒಂದು ರಾತ್ರಿ ವಸ್ತುಗಳ ಭಾರ ತಾಳಲಾಗದೆ ಮುರಿದು ಬೀಳಲು, ಶೇಖರಿಸಿದ ಎಲ್ಲಾ ಬೆಲೆಬಾಳುವ ದುಬಾರಿ ವಸ್ತುಗಳು ನೆಲಕ್ಕೆ ಬಿದ್ದು ಚೂರು ಚೂರಾದವು.

ಹೌದು, ಎಂಥ ನಷ್ಟ. ಮನುಷ್ಯ ದುಬಾರಿ ವಸ್ತುಗಳನ್ನು ಶೇಖರಿಸುತ್ತಾ ಹೋದ. ಆ ಬೆಲೆಬಾಳುವ ವಸ್ತುಗಳನ್ನು ಇವನ ಕೈಯಲ್ಲಿ ಉಪಯೋಗಕ್ಕೆ ಬರಲಿಲ್ಲ. ಇದೇ ವಸ್ತುಗಳು ಇನ್ನೊಬ್ಬರ ಕೈಯಲ್ಲಿ ಇದ್ದಿದ್ದರೆ ಅವು ಬಹಳ ಉಪಯೋಗಕ್ಕೆ ಬರುತ್ತಿದ್ದವೋ ಎನೋ!

ನಮ್ಮಲ್ಲಿ ಕೂಡ ನಾನಾ ರೀತಿಯ ಸಂಪನ್ಮೂಲಗಳು ಇವೆ. ಆದರೆ ನಾವೆಲ್ಲ ನಮ್ಮೆಲ್ಲಾ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಒಳಿತನ್ನು ಮಾಡುವುದನ್ನು ಮಾತ್ರ ಮರೆಯಬಾರದು.

ಮತ್ತೊಮ್ಮೆ ನಿನಗೆ ಶುಭಾಶಯಗಳನ್ನು ಹೇಳುತ್ತಾ, ನನ್ನ ಮಾತಿಗೆ ಪೂರ್ಣ ವಿರಾಮ ಹೇಳುತ್ತೇನೆ.

ಇಂತಿ ನಿನ್ನವ

ಆನಂದ್

**********


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...