ಡಾ. ಸಿಸ್ಟರ್ ಪ್ರೇಮ (ಎಸ್. ಎಮ್. ಎಮ್. ಐ)
ಹಿಂದಿನ ಸಂಚಿಕೆಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು’ ಎಂಬ ಮಾಲಿಕೆಯಲ್ಲಿ ಸ್ವಾತಂತ್ರ್ಯಪೂರ್ವದಲಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಲು ಮಿಶನರಿಗಳನ್ನು ಕಳಿಸುತ್ತಿದ್ದಂತಹ ವಿವಿಧ ಮಿಶನ್ನುಗಳ ಬಗ್ಗೆ ತಿಳಿದಿರುತ್ತೇವೆ. ಈ ಪ್ರಸ್ತುತ ಸಂಚಿಕೆಯಲ್ಲಿ ಆ ಮಿಶನ್ನುಗಳಿಂದ ಆಗಮಿಸಿದ ಮಿಶನರಿಗಳು ತಮ್ಮ ಅಮೂಲ್ಯ ಸಮಯವನ್ನು ಉಪಯುಕ್ತವಾದ ಸಾಹಿತ್ಯಿಕ, ಸಾಮಾಜಿಕ ಮತ್ತು ಔದ್ಯೋಗಿಕ ಕಾರ್ಯಗಳಿಗೆ ವಿನಿಯೋಗಿಸಿಕೊಂಡು ಅಮರ ಸೇವೆಗೆ ಸಾಕ್ಷಿಗಳಾಗಿದ್ದರು ಎಂಬುದನ್ನು ತಿಳಿಸುವಲ್ಲಿ ಪುಟ್ಟ ಪ್ರಯತ್ನ ಮಾಡಿರುತ್ತೇನೆ.
ಸಾಹಿತ್ಯಿಕ ಕಾರ್ಯಗಳು:
ಸಾಹಿತ್ಯಿಕ ಸೇವೆಗೆ ಜೆಸುಯೆಟ್ ಮಿಶನ್ ಸಂಸ್ಥೆ, ಲಂಡನ್, ವೆಸ್ಲಿಯನ್ ಮತ್ತು ಬಾಸೆಲ್ ಮಿಶನ್ನುಗಳ ಮಿಶನರಿಗಳು ಕೊಟ್ಟ ಕೊಡುಗೆ ಅದ್ಭುತವಾದುದು. ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಇತಿಹಾಸವಿದೆ. ಶತ-ಶತಮಾನಗಳಿಂದ ಬೆಳೆದು ಬಂದ ಸಾಹಿತ್ಯವು ಹಲವಾರು ಘಟ್ಟಗಳನ್ನು ದಾಟಿದೆ. ಹೊಸಗನ್ನಡದ ಅರುಣೋದಯ ಸಮಯದಲ್ಲಿ ಕ್ರೈಸ್ತ ಧರ್ಮದ ಉದ್ದೇಶಕ್ಕೆಂದು ಅನೇಕ ಮಿಶನರಿಗಳು ಪ್ರಪಂಚದ ವಿವಿಧ ಭಾಗಗಳಿಂದ ಆಗಮಿಸಿ ಸಾಹಿತ್ಯಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯಕೃಷಿ ಮಾಡಿ ಅಭೂತಪೂರ್ವವಾದ ಕೊಡುಗೆಯನ್ನು ಕೊಟ್ಟಿರುತ್ತಾರೆ. ಪ್ರತಿಯೊಂದು ಮಿಶನ್ನಿನ ಮಿಶನರಿಗಳು ಭಾಷಾ ಚತುರರಾಗಿದ್ದರು. ಮಿಶನರಿಗಳು ಭಾಷೆಗಳನ್ನು ಯಾವ ಉದ್ದೇಶಕ್ಕೆ ಕಲಿತರೆಂಬುದನ್ನು ಜಾನ್ ಮೆಕ್ಕೆರಲ್ ಎಂಬ ಅಧಿಕಾರಿಯು ಕ್ರಿ.ಶ. ೧೮೨೦ರ ತನ್ನ ವ್ಯಾಕರಣ ಪುಸ್ತಕದ ಪ್ರಸ್ತಾವನೆಯಲ್ಲಿ ಹೇಳುತ್ತಾನೆ. ಆಡಳಿತ ನಡೆಸುವುದಕ್ಕಾಗಿಯೂ, ಧರ್ಮಪ್ರಸಾರಕ್ಕಾಗಿಯೂ ಕನ್ನಡವನ್ನು ಕಲಿಯುವುದರ ಅನಿವಾರ್ಯತೆಯಿಂದಾಗಿ ಕನ್ನಡ ವ್ಯಾಕರಣ, ಶಬ್ದಕೋಶಗಳು ಹೊರಬಂದವು. ಸಾಹಿತ್ಯವನ್ನು ಬಹು ಹುಲುಸಾಗಿ ಬೆಳೆಸಬೇಕೆಂಬ ಆಸೆಯನ್ನು ನಾವು ಮಿಶನರಿಗಳಲ್ಲಿ ಕಾಣಬಹುದಾಗಿದೆ.
ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಮಿಶನರಿಗಳನ್ನು ಕುರಿತು ಬರೆಯುವಾಗ ಬಿಎಂಶ್ರೀಯವರು ಕ್ರೈಸ್ತ ಪಾದ್ರಿಗಳ ಸೇವೆಯನ್ನು ಬಹು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಮೊತ್ತಮೊದಲು ಹಳೆಯ ತಾಳೆಯೋಲೆಗಳನ್ನು ಶೋಧಿಸಿ, ಸಾಹಿತ್ಯ ಗ್ರಂಥಗಳನ್ನು ಹೊರತೆಗೆದು, ಅಚ್ಚುಕೂಟವನ್ನು ಒದಗಿಸಿಕೊಟ್ಟು, ಪುಸ್ತಕಗಳನ್ನು ಪ್ರಕಟಿಸಿದವರು ಕ್ರೈಸ್ತ ಮಿಶನರಿಗಳು. ಕನ್ನಡದಲ್ಲಿ ರೆ. ಕಿಟಲ್, ತೆಲುಗಿನಲ್ಲಿ ಡಾ. ಬ್ರೌಸ್ ಹಾಗು ಮಲಯಾಳದಲ್ಲಿ ಡಾ. ಗುಂಡರ್ಟ್ ಹೀಗೆ ಇವರು ಆಯಾ ಭಾಷೆಗಳನ್ನು ಪಂಡಿತರ ಸಹಾಯದಿಂದ ಚೆನ್ನಾಗಿ ಕಲಿತು, ಹಳೆಯ ಗ್ರಂಥಗಳನ್ನು ಬೆಳಕಿಗೆ ತಂದಿದ್ದಲ್ಲದೆ ವ್ಯಾಕರಣ ನಿಘಂಟುಗಳನ್ನು ರಚಿಸಿ, ಭಾಷಾಶಾಸ್ತ್ರ ವ್ಯಾಸಂಗಕ್ಕೆ ಸಾಮಾಗ್ರಿ ಕೂಡಿ ಹಾಕಿದರು. ಆ ಬಳಿಕ ಡಾ. ಕಾಲ್ಡ್‌ವೆಲ್ ಅವರು ಇವರ ಕೆಲಸಗಳನ್ನು ಕ್ರೋಢೀಕರಿಸಿ, ಬಹುಕಾಲ ಶ್ರಮಪಟ್ಟು ಆಳವಾಗಿ ಪರಿಶೋಧಿಸಿ, ಆಯಾ ಭಾಷಾವರ್ಗದಿಂದ ಭಿನ್ನವಾದ ದ್ರಾವಿಡ ಭಾಷಾವರ್ಗವೊಂದುಂಟು ಎಂಬ ಅಭಿಪ್ರಾಯವನ್ನು ಜನಗಳ ಮುಂದಿಟ್ಟರು. ಜೊತೆಗೆ ಇವರಲ್ಲಿ ಸೃಜನಶೀಲ ಗುಣವು ಬೇರೂರಿದ್ದರಿಂದ ಕನ್ನಡದ ಸಾಹಿತ್ಯಿಕ ಬೆಳವಣಿಗೆಗೆ ಸೃಜನಾತ್ಮಕ ಶಕ್ತಿಯನ್ನು ಬಳಸಿಕೊಳ್ಳುವಲ್ಲಿ ಸಫಲರಾದರು. ಕ್ರಿ.ಶ. ೧೮೧೦ರಿಂದ ಕ್ರಿ.ಶ. ೧೮೫೦ರ ಅವಧಿಯಲ್ಲಿ ಇವರಿಂದ ಅನುವಾದ ಕಾರ್ಯವು ಬಹು ಬಿರುಸಾಗಿ ಸಾಗಿತ್ತು. ಕನ್ನಡ ಭಾಷೆಯ ಅಂತಃಸತ್ವವನ್ನು ಗುರುತಿಸುತ್ತಾ ಅದಕ್ಕನುಗುಣವಾಗಿ ಕೃತಿಗಳನ್ನು ರಚಿಸುವುದು ಮತ್ತು ಅವುಗಳ ಪರಿಷ್ಕರಣೆ, ತೌಲನಿಕ ಅಧ್ಯಯನ ಹಾಗೂ ಪೌರಾಣಿಕ ವಿಷಯಗಳ ಮೂಲವನ್ನು ಕಂಡು ಹಿಡಿಯುವ ಕಾರ್ಯಗಳನ್ನು ಇವರು ಕೈಗೆತ್ತಿಕೊಂಡರು ಎಂಬುದಾಗಿ ಬಿಎಂಶ್ರೀಯವರು ಮಿಶನರಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಮ್ಮ ಕೆಲವು ಪುಸ್ತಕಗಳಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ.
ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಮಿಶನರಿಗಳು ಸಲ್ಲಿಸಿರುವ ಸೇವೆಯನ್ನು ಈ ರೀತಿ ಸ್ಮರಿಸಬಹುದು.
· ಕನ್ನಡದ ಪ್ರಾಚೀನ ಗ್ರಂಥಗಳನ್ನು ಸಂಪಾದಿಸಿ, ಉಪಯುಕ್ತವಾದ ಉಪೋದ್ಘಾತ ಬರೆದು ಪ್ರಕಟಿಸಿರುವುದು. ಉದಾಹರಣೆಗೆ ಕವಿರಾಜಮಾರ್ಗ, ಶಬ್ದಮಣಿ ದರ್ಪಣ, ಭಾಷಾಭೂಷಣ, ಕರ್ನಾಟಕ ಶಬ್ದಾನುಶಾಸನ, ಬಸವ ಪುರಾಣ, ಮುದ್ರಾಮಂಜೂಷ.
· ಇಂಗ್ಲೀಷ್‌ನಿಂದ ಮತ್ತು ಇತರ ಭಾಷೆಗಳಿಂದ ಕೆಲವು ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದಿಸಿ ಆ ಸಾಹಿತ್ಯ ಪ್ರಕಾರವನ್ನು ಪರಿಚಯಿಸಿರುವುದು. ಉದಾಹರಣೆಗೆ ಪಿಲ್ಗ್ರಿಮ್ಸ್ ಪ್ರೋಗ್ರೆಸ್ ಪ್ರವಾಸ ಕಥನ, ಸತ್ಯವೇದ ಮತ್ತು ಪರಮಾನಂದ ಗುರುವಿನ ಕಥೆ.
· ಕನ್ನಡದ ಕೆಲವು ಗ್ರಂಥಗಳನ್ನು ಇಂಗ್ಲಿಷ್ ಹಾಗೂ ಇತರ ಭಾಷೆಗಳಿಗೆ ಅನುವಾದಿಸಿರುವುದು. ಉದಾಹರಣೆಗೆ ಶರಣರ ವಚನಗಳು, ದಾಸರ ಕೀರ್ತನೆಗಳು, ಜನಪದ ಲಾವಣಿಗಳು ಮತ್ತು ಗೋವಿಂದ ಪೈಗಳ ಗೊಲ್ಗೊಥಾ.
· ಕನ್ನಡ ಶಾಸನಗಳನ್ನು ಪರಿಶೋಧಿಸಿ, ವ್ಯಾಖ್ಯಾನಿಸಿ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಿಸಿರುವುದು. ಉದಾಹರಣೆಗೆ ಲೂಯಿ ರೈಸ್‍ರವರ ಸಾಧನೆ. ಇವರು ಕನ್ನಡ ಶಾಸನಗಳ ಪಿತಾಮಹ ಎಂದೇ ಪ್ರಸಿದ್ಧರಾಗಿದ್ದಾರೆ.
· ವ್ಯಾಕರಣ, ಛಂದಸ್ಸು, ನಿಘಂಟುಗಳನ್ನು ಸಿದ್ಧಪಡಿಸಿರುವುದು. ಉದಾಹರಣೆಗೆ: ಹಲವು ವ್ಯಾಕರಣ ಗ್ರಂಥಗಳು, ನಿಘಂಟುಗಳು, ಕಿಟೆಲ್ ಕನ್ನಡ-ಇಂಗ್ಲಿಷ್ ಶಬ್ದಕೋಶ.
· ಕನ್ನಡ ಶಾಲಾ ಪಠ್ಯಪುಸ್ತಕಗಳನ್ನು ಬರೆದಿರುವುದು.
· ಕನ್ನಡ ನಾಡಿನ ಸಾಹಿತ್ಯದ ಚರಿತ್ರೆ ಬರೆದಿರುವುದು.
· ಚಾರಿತ್ರಿಕ ಲಾವಣಿಗಳನ್ನು ಸಂಗ್ರಹಿಸಿ ಇಂಗ್ಲಿಷ್ ಭಾಷೆಗೆ ಪರಿಚಯಿಸಿದ್ದು. ಉದಾ: ಜೆ ಎಫ್ ಫ್ಲೀಟರು ಸಂಪಾದಿಸಿದ ಲಾವಣಿಗಳು.
· ಜಾನಪದ, ಸ್ಥಳನಾಮ ಅಧ್ಯಯನ, ಭಾಷಿಕ ಅಧ್ಯಯನಕ್ಕೆ ಸಾಮಗ್ರಿ ಒದಗಿಸಿದ್ದು.
· ನವೋದಯ ಕನ್ನಡ ಕವಿತೆಗಳನ್ನು ಬರೆದು ಪ್ರಕಟಿಸಿದ್ದು. ಉದಾಹರಣೆಗೆ ಕಿಟೆಲ್ ಕಾವ್ಯಮಾಲೆ, ಬೈಬಲ್ ಗೀತೆಗಳು ಮತ್ತು ಪ್ರಾರ್ಥನಾ ಗೀತೆಗಳು.
ಅಷ್ಟೇ ಅಲ್ಲದೆ, ಮಿಶನರಿಗಳು ಮುದ್ರಣಯಂತ್ರ ಬಳಸಿ ಗ್ರಂಥಗಳನ್ನು ಮುದ್ರಿಸಿ, ಪ್ರಕಟಿಸುತ್ತಾ ಜನರಿಗೆ ಸರಬರಾಜು ಮಾಡುತ್ತಿದ್ದರು. ಲಂಡನ್ ಮಿಶನಿನ ಮಿಶನರಿಗಳು ಬೈಬಲಿನ ಅನುವಾದದ ಕಾರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟರೆ, ವೆಸ್ಲಿಯನ್ ಮತ್ತು ಬಾಸೆಲ್ ಮಿಶನ್ನಿನ ಮಿಶನರಿಗಳು ಕೃತಿಗಳ ರಚನೆಯಲ್ಲೂ, ದ್ವಿಮತಗಳಿಗೆ ಹೋಲಿಸಿ ಬರೆಯುವುದರಲ್ಲಿಯೂ, ಪ್ರಾಚೀನ ಗ್ರಂಥಗಳ ಪರಿಷ್ಕರಣೆ, ಸಂಗ್ರಹಣೆ ಮತ್ತು ಸಂಪಾದನೆಗಳಿಗೂ, ಶಬ್ದಕೋಶ ರಚನೆಯಂತಹ ವಿಷಯಗಳಿಗೂ ಪ್ರಾಧಾನ್ಯತೆಯನ್ನು ಕೊಟ್ಟಿರುತ್ತಾರೆ.
ಈ ಮಿಶನರಿಗಳು ರಚಿಸಿದ ಒಂದೊಂದು ಕೃತಿಗಳ ಸಾಹಿತ್ಯದಲ್ಲಿ ಭಾಷೆಯ ಪ್ರೌಢಿಮೆ ಎದ್ದುಕಾಣುತ್ತದೆ. ಕಥನಾತ್ಮಕ ಶೈಲಿಯಲ್ಲಿ ಗದ್ಯದ ಹರಿವನ್ನು ಹೆಚ್ಚಾಗಿ ಬಳಸಿರುತ್ತಾರೆ. ’ಹೃದಯ ದರ್ಪಣ’, ’ಯಾತ್ರಿಕನ ಸಂಚಾರ’, ಈ ಅನುವಾದಗಳಲ್ಲಿ ಗದ್ಯ-ಪದ್ಯಗಳಿರುತ್ತವೆ. ಇವರು ರಚಿಸಿದ ಕೃತಿಗಳು ಹೆಚ್ಚಾಗಿ ಕ್ರೈಸ್ತ ಸಭೆಯ ಆರಾಧನೆಗೆ ಸಂಬಂಧಿಸಿದ ಕೃತಿಗಳಾಗಿವೆ. ಅಂದರೆ ಕ್ರೈಸ್ತ ಧರ್ಮದಲ್ಲಿ ನಡೆಯುವ, ಪ್ರಾರ್ಥನೆ, ಸಂಸ್ಕಾರಗಳ ವಿಧಿ-ವಿಧಾನಗಳ ಆಚರಣೆಯಲ್ಲಿ ಹಬ್ಬ-ಹರಿದಿನಗಳಿಗೆ ಸಂಬಂಧಿಸಿದಂತಹ ವಸ್ತು ವಿಷಯವನ್ನೊಳಗೊಂಡಿವೆ. ಲಂಡನ್ ಮತ್ತು ವೆಸ್ಲಿಯನ್ ಸಂಸ್ಥೆಯ ಮಿಷನರಿಗಳು ಹೆಚ್ಚಾಗಿ ಧಾರ್ಮಿಕ ಸಾಹಿತ್ಯದೆಡೆಗೆ ಒಲವು ತೋರಿಸಿದರೆ, ಬಾಸೆಲ್ ಮಿಶನ್ ಸಂಸ್ಥೆಯವರು ಸಾಹಿತ್ಯಕ್ಕೆ ಹೆಚ್ಚಿನ ಬೆಲೆಕೊಟ್ಟು ಸಾಹಿತ್ಯಿಕ ಬೆಳೆಯನ್ನು ತೆಗೆಯುವಲ್ಲಿ ಹೆಚ್ಚು ಮಗ್ನರಾಗಿದ್ದರು.
ಮಿಶನರಿಗಳ ಸಾಹಿತ್ಯವು ಹೊಸಗನ್ನಡದ ಭಾವಗೀತೆ, ಕತೆ, ಕಾದಂಬರಿ, ನಾಟಕ, ಸಾಹಿತ್ಯ ಪ್ರಕಾರಗಳ ಹುಟ್ಟು-ಬೆಳವಣಿಗೆಗೆ ಪ್ರೇರಕ ಶಕ್ತಿಯಾಯಿತು. ಸಭೆಗಳಲ್ಲಿ ಬಳಸುವ ಸಂಗೀತ ಸಂಕೀರ್ತನೆಗಳು ದೇಶೀಯ ಮಾದರಿಯಲ್ಲಿ ಹೋಲಿಕೆಯಾಗಿರುತ್ತವೆ. ಸಂಗೀತಗಳಲ್ಲಿ ಭಾವಗೀತೆಯ ಲಯವನ್ನು, ಸಂಕೀರ್ತನೆಗಳಲ್ಲಿ ಕೀರ್ತನಾ ಲಯವನ್ನು ಗುರುತಿಸುತ್ತವೆ. ಈ ಕೃತಿಗಳಲ್ಲಿ ಕಾಣುವ ಇನ್ನೊಂದು ಮಹತ್ವದ ಅಂಶವೆಂದರೆ ಇವರು ರಚಿಸಿರುವ ಕೃತಿಗಳಲ್ಲಿ ಗಾದೆಮಾತುಗಳ, ನಾಣ್ನುಡಿಗಳ ಪ್ರಾದೇಶಿಕತೆಯನ್ನು ಕಾಣಬಹುದು. ಉದಾಹರಣೆಗೆ ಫರ್ಡಿನಂಡ್ ಕಿಟೆಲ್ ಬರೆದ ಗಾದೆಮಾತುಗಳಲ್ಲಿ ಈ ಅಂಶ ಕಂಡುಬರುತ್ತದೆ. ಮಿಶನರಿಗಳು ಕರ್ನಾಟಕದ ಮೈಸೂರು ಮತ್ತು ಧಾರವಾಡ ಈ ಸ್ಥಳಗಳನ್ನು ತಮ್ಮ ಸಾಹಿತ್ಯ ಚಟುವಟಿಕೆಗಳ ಕೇಂದ್ರ ಸ್ಥಾನವನ್ನಾಗಿ ಆಯ್ಕೆಮಾಡಿಕೊಂಡಿದ್ದರು. ಸಾಹಿತ್ಯಾತ್ಮಕ ಕ್ಷೇತ್ರದಲ್ಲಿ ಇವರು ಸಾಧಿಸಿದ ಅತ್ಯುತ್ತಮ ಸಾಧನೆಯೆಂದರೆ ನಿಘಂಟು ಅಥವಾ ಶಬ್ದಕೋಶದ ರಚನಾಕಾರ್ಯ. ಇದು ಪ್ರತಿಯೊಬ್ಬ ವಿದ್ಯಾವಂತನಿಗೂ ಉಪಯುಕ್ತವಾದುದು ಎಂಬುದನ್ನು ಅರಿತ ಮಿಶನರಿಗಳು ಶಬ್ದಕೋಶಗಳ ರಚನೆಯಲ್ಲಿ ತೊಡಗಿದರು.
ಕ್ರಿ.ಶ. ೧೮೧೭ರಲ್ಲಿ ವಿಲಿಯಂ ರೀವ್ ಹೊರತಂದ ಪ್ರಥಮ ಶಬ್ದಕೋಶ, ಕ್ರಿ.ಶ. ೧೮೪೦ರಲ್ಲಿ ಜಾನ್ ಗ್ಯಾರೆಟ್ ರಚಿಸಿದ ಕನ್ನಡ-ಇಂಗ್ಲಿಷ್ ಶಬ್ದಕೋಶ, ಸ್ಯಾಂಡರಸನ್ ಪರಿಷ್ಕರಿಸಿದ ಕನ್ನಡ-ಇಂಗ್ಲಿಷ್ ಶಬ್ದಕೋಶ, ಕ್ರಿ.ಶ. ೧೮೭೬ರಲ್ಲಿ ಪ್ರಕಟವಾದ ಝಿಗ್ಲರನ ಶಬ್ದಕೋಶ ಮತ್ತು ೧೮೯೪ರಲ್ಲಿ ಫರ್ಡಿನಂಡ್ ಕಿಟೆಲರು ರಚಿಸಿದ ಶಬ್ದಕೋಶ ಇವುಗಳೇ ಮಿಶನರಿಗಳ ಪ್ರಪ್ರಥಮ ಕಾರ್ಯ ಸಾಧನೆಗಳು. ಈ ಎಲ್ಲಾ ಕೃತಿಗಳ ಭಾಷಾ ಪ್ರೌಢಿಮೆ, ಶಬ್ದಗಳ ವ್ಯುತ್ಪತ್ತಿ ಅವುಗಳ ಮೂಲ ಮತ್ತು ವಿವಿಧಾರ್ಥಗಳನ್ನು ಗಮನಿಸಿದರೆ ನಿಜಕ್ಕೂ ಕನ್ನಡವು ಮಿಶನರಿಗಳಿಗೆ ಕೃತಜ್ಞವಾಗಿದೆ ಎಂದು ಇ. ಪಿ. ರೈಸ್ ಕ್ಯಾನರಿಸ್ ಲಿಟರೇಚರ್‌ನಲ್ಲಿ ಹೇಳುವ ಮಾತು ನೂರಕ್ಕೆ ನೂರು ಸತ್ಯವೆನಿಸುತ್ತದೆ. ಲಂಡನ್ ಮಿಶನರಿಯಾದ ಬಿ.ಎಲ್. ರೈಸ್ ’ಮೈಸೂರ್ ಗೆಝಟಿಯರ್’ನ್ನು ಸಂಪಾದಿಸಿದರು. ಕನ್ನಡ ಭಾಷೆಯ ಅಧಿಕೃತ ಮತ್ತು ಪ್ರಮುಖ ವ್ಯಾಕರಣ ಗ್ರಂಥವಾದ ’ಕೇಶಿರಾಜನ ಶಬ್ದಮಣಿದರ್ಪಣವನ್ನು’ ಕಿಟೆಲರು ಒಂಬತ್ತು ಹಸ್ತಪ್ರತಿಗಳನ್ನಿಟ್ಟುಕೊಂಡು ಶಾಸ್ತ್ರೀಯವಾಗಿ ಮತ್ತು ಕ್ರಮಬದ್ಧವಾಗಿ ಸಂಪಾದಿಸಿ ಕೊಟ್ಟಿರುತ್ತಾರೆ.
ಮಿಶನರಿಗಳು ನಮ್ಮ ನಾಡಿಗೆ ಬಂದಾಗ ಅವರ ಗಮನ ಸೆಳೆದ ವಿಚಿತ್ರ ಸಂಗತಿಯೆಂದರೆ ಹಳಗನ್ನಡದ ಕೃತಿಗಳು ಮತ್ತು ತಾಳೆ ಎಲೆಗಳ ಮೇಲೆ ಬರೆದಿದ್ದ ಹಳಗನ್ನಡಕ್ಕೆ ಸಂಬಂಧಿಸಿದ್ದ ವ್ಯಾಕರಣಗಳೆಲ್ಲ ಗೆದ್ದಲುಹುಳುಗಳಿಗೆ ಆಹುತಿಯಾಗುತ್ತಿದ್ದ ದೃಶ್ಯ. ಈ ಸಂದರ್ಭಲ್ಲಿ ಅವುಗಳನ್ನೆಲ್ಲ ಸಂರಕ್ಷಿಸಿ, ಸಂಪಾದಿಸಿ, ಪ್ರಕಟಣೆ ಮಾಡಬೇಕೆನ್ನುವ ದಿಸೆಯಲ್ಲಿ ಆ ಕಾರ್ಯವನ್ನು ಬಹು ಸಮರ್ಪಕವಾಗಿ ನಿರ್ವಹಿಸಿದರು. ಬಾಸೆಲ್ ಮಿಶನ್ನಿನ ಮಿಶನರಿಗಳಾದ ಝಿಗ್ಲರ್, ಗ್ರೇಟರ್ ಇವರುಗಳು ಕೂಡ ವ್ಯಾಕರಣ ಪರಂಪರೆಗೆ ಉತ್ಕೃಷ್ಟವಾದ ಕೊಡುಗೆಯನ್ನು ನೀಡಿರುತ್ತಾರೆ. ಝಿಗ್ಲರ್ ಮತ್ತು ಕಿಟೆಲ್ ಇವರು ಪ್ರಾಚೀನ ಕನ್ನಡ ವ್ಯಾಕರಣ ಕ್ರಮವನ್ನು ಅನುಸರಿಸಿದರು, ಬಿ. ಗ್ರೇಟರ್‌ರವರು ಇಂಗ್ಲಿಷ್ ವ್ಯಾಕರಣ ಪದ್ಧತಿಯನ್ನು ಅನುಸರಿಸಿದರು. ಕಿಟೆಲರ ಹಳಗನ್ನಡ ವ್ಯಾಕರಣ ಮತ್ತು ಸೂತ್ರಗಳು, ಝಿಗ್ಲರರ ಕನ್ನಡ ಬಾಲವ್ಯಾಕರಣ ಮತ್ತು ಕನ್ನಡ ಶಾಲಾ ವ್ಯಾಕರಣ, ಇವು ವ್ಯಾಕರಣಕ್ಕೆ ಸಂಬಂಧಿಸಿದ ಕೃತಿಗಳು. ಇವು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವವನ್ನು ಪಡೆದಿರುತ್ತವೆ.
ಇಷ್ಟು ಸಾಲದೆಂಬಂತೆ ಗ್ರಂಥ ಸಂಪಾದನಾ ಕ್ಷೇತ್ರಕ್ಕೂ ಮಹತ್ತರವಾದ ಕೊಡುಗೆಯನ್ನು, ವಿಶೇಷವಾಗಿ ಬಾಸೆಲ್ ಮಿಶನ್ನಿನ ಮಿಶನರಿಗಳಾದ ಮೊಗ್ಲಿಂಗ್, ಕಿಟೆಲ್ ನೀಡಿರುತ್ತಾರೆ. ಮೊಗ್ಲಿಂಗ್‌ರು ಕ್ರಿ.ಶ. ೧೮೪೮ರಲ್ಲಿ ತೊರವೆರಾಮಾಯಣ, ದಾಸರ ಪದಗಳು, ಕನಕದಾಸರ ಹರಿಭಕ್ತಿಸಾರ, ಭೀಮಕವಿಯ ಬಸವ ಪುರಾಣ ಇವುಗಳ ಸಂಪಾದನಾ ಕಾರ್ಯದಲ್ಲಿ ಬಹಳಷ್ಟು ಶ್ರಮವಹಿಸಿರುತ್ತಾರೆ. ವಿಲಿಯಂ ರೀವನು ಹಳಗನ್ನಡ ಕೋಶಗಳಾದ ಕರ್ನಾಟಕ ಶಬ್ಧಮಂಜರಿ ಚತುರಾಸ್ಯ ನಿಘಂಟು ಇವುಗಳನ್ನು ಕೇವಲ ಪರಿಶೀಲಿಸಿದರು ಅಷ್ಟೇ, ಆದರೆ ಕಿಟೆಲ್ ಮತ್ತು ಮೋಗ್ಲಿಂಗ್‌ರು ಮಾಡಿದಂತಹ ಸಾಧನೆಯನ್ನು ಮೀರಿಸಲಾಗಲಿಲ್ಲ. ಇವರ ಎಲ್ಲಾ ಸಾಧನೆಯ ಗುರಿಯನ್ನು ತುಸು ಅವಲೋಕಿಸಿದಾಗ ಕನ್ನಡ ಸಾಹಿತ್ಯವನ್ನು ವಿದೇಶಿಯರಿಗೆ ಮತ್ತು ದೇಶಿಯರಿಗೆ ಪರಿಚಯಿಸಬೇಕೆಂಬ ದಿಸೆಯಲ್ಲಿ ಇವರು ಕಾರ್ಯಗೈದಿರುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ತದನಂತರ ಬಂದಂತಹ ಕವಿಗಳು ಇವರ ದಿಟ್ಟತನವನ್ನು ಮೆಚ್ಚಿ ಕನ್ನಡ ಸಾಹಿತ್ಯದ ಹಿರಿಮೆಯನ್ನು ಉತ್ತುಂಗ ಶಿಖರಕ್ಕೇರಿಸಿರುವುದು ಎಲ್ಲರಿಗೂ ತಿಳಿದಿರುವಂತಹ ವಿಷಯ.
ಒಟ್ಟಾರೆ ಮಿಶನರಿಗಳು ಭಾರತಕ್ಕೆ ಬಂದು ಗ್ರಂಥ ರಚನೆ, ಮುದ್ರಣಕಾರ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಶ್ರದ್ಧೆಯಿಂದ ದುಡಿದರು. ಇವರಿಂದ ಕೆಲವು ದೇಶೀಯ ಮಿಶನರಿಗಳು ಪ್ರೇರಿತರಾಗಿ ಸಾಹಿತ್ಯ ರಂಗದಲ್ಲಿ ಶ್ರಮಿಸುವಂತಾಯಿತು. ಮಿಶನರಿಗಳು ತಮ್ಮ ಅರವತ್ತು ವರ್ಷಗಳ ಕಾಲಾವಧಿಯಲ್ಲಿ ಅನೇಕ ಹೊಸ ವಿಚಾರಗಳನ್ನೂ, ನವೀನ ರೂಪಗಳನ್ನು ಸಾಹಿತ್ಯ ರಂಗದಲ್ಲಿ ಪ್ರತಿಷ್ಠಾಪಿಸಿದ್ದಾರೆ ಜೊತೆಗೆ ಹೊಸಗನ್ನಡ ಚರಿತ್ರೆಯಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ. ಹೀಗೆ ಮಿಶನರಿಗಳು ಹೊಸಗನ್ನಡದ ಉದಯಕಾಲದಲ್ಲಿ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದರು. ಅವರು ಕನ್ನಡದಲ್ಲಿ ಕ್ರೈಸ್ತ ಧಾರ್ಮಿಕ ಸಾಹಿತ್ಯವನ್ನು ರಚಿಸಿದರು. ಪಠ್ಯಪುಸ್ತಕ ಹಾಗೂ ವ್ಯಾಕರಣ ಕೃತಿಗಳನ್ನು ಪರಿಶೀಲಿಸಿ, ಪರಿಷ್ಕರಿಸಿ ಪ್ರಕಟಿಸಿದರು. ಕನ್ನಡಕ್ಕೆ ಅಮೂಲ್ಯವಾದ ನಿಘಂಟನ್ನು ಒದಗಿಸಿಕೊಟ್ಟರು. ವಿದೇಶಿ ಭಾಷೆಗಳಲ್ಲಿ ಸಂಶೋಧನಾ ಲೇಖನಗಳನ್ನು ಬರೆದು ಕನ್ನಡ ಸಾಹಿತ್ಯವನ್ನು ಪಾಶ್ಚಾತ್ಯ ಲೋಕಕ್ಕೆ ಪರಿಚಯಿಸಿದರು.
ಮುಂದಿನ ಸಂಚಿಕೆಯಲ್ಲಿ ಮಿಶನರಿಗಳ ಸೇವೆಯು ಸಾಮಾಜಿಕ ಮತ್ತು ಔದ್ಯೋಗಿಕ ಕಾರ್ಯಗಳಲ್ಲೂ ವಿಸ್ತಾರವಾಗಿತ್ತು ಎಂಬುದನ್ನು ತಿಳಿಸಲಾಗುವುದು.
*******************
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
ReplyDeletejayakumarcsj@gmail.com
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
ReplyDeletejayakumarcsj@gmail.com