· ಎಫ್. ಎಂ. ನಂದಗಾವ್
ಜಗತ್ತು ಹುಟ್ಟಿದ ಬಗೆ ಹೇಗೆ?
ಅದು, ಒಂದಾನೊಂದು ಕಾಲ. ಅದು ಕನಸುಗಳ ಕಾಲದ ಕಾಲ. ಎಲ್ಲವೂ ಖಾಲಿ ಖಾಲಿ. ಎಲ್ಲವೂ ಬಟಾಬಯಲು. ಭೂಮಿಯ ಮೇಲ್ಮೈಯಾವುದೇ ಚಟುವಟಿಕೆಗಳಿಲ್ಲದೇ ಸ್ತಬ್ಧವಾಗಿತ್ತು.
ಆದರೆ, ಭೂಮಿಯ ಕೆಳಗೆ ಅಂದರೆ ಭೂಮಿಯ ಮೇಲ್ಪದರದ ಕೆಳಗೆ ಎಲ್ಲಾ ಬಗೆಯ ಪ್ರಾಣಿ, ಪಕ್ಷಿ ಸಂಕುಲಗಳು ಗಾಢ ನಿದ್ರೆಯಲ್ಲಿದ್ದವು. ಪ್ರಾಣಿ ಪಕ್ಷಿಗಳು ಮತ್ತು ಸರಿಸೃಪಗಳು ತಮ್ಮಗಾಢ ನಿದ್ರೆಯಲ್ಲಿ ಕನಸು ಕಾಣುತ್ತಾ ಮಲಗಿದ್ದವು,
ಒಂದು ಸಮಯದಲ್ಲಿ ಕಾಮನಬಿಲ್ಲಿನ ಬಣ್ಣದ ಭಾರಿ ಸರಿಸೃಪ ಅಂದರೆ ಕಾಮನಬಿಲ್ಲಿನ ಬಣ್ಣದ ಹೆಣ್ಣು ಹೆಬ್ಬಾವು ನಿಧಾನವಾಗಿ ಕಣ್ಣು ತೆರೆಯಿತು. ಕಾರ್ಗತ್ತಲು ಕತ್ತಲು, ಏನೂ ಕಾಣಿಸುತ್ತಿರಲಿಲ್ಲ. ಮೈ ಕೊಡವಿಕೊಂಡು ಎದ್ದ ಆ ಹೆಣ್ಣು ಹೆಬ್ಬಾವು, ತನ್ನ ಸುತ್ತಿದ ದೇಹವನ್ನು ಎಳೆದುಕೊಂಡು ಹೊರಟಿತು. ಅದು ನಿಧಾನವಾಗಿ ಭೂಮಿಯ ಮೇಲ್ಪದರನ್ನು ಸೀಳಿಕೊಂಡು ಹೊರಗೆ ಬಂದೇ ಬಿಟ್ಟಿತು. ನೋಡುವುದೇನು? ಸೂರ್ಯನ ಬಿಸಿಲು ಕಣ್ಣಿಗೆ ರಾಚಿತು. ಎದುರಿಗೆ ವಿಶಾಲವಾದ ಬಯಲು ದಶದಿಕ್ಕುಗಳಲ್ಲಿ ಹರಡಿಕೊಂಡಿತ್ತು. ‘ನೋಡುವಾ’ ಎಂದು ಆ ಹೆಬ್ಬಾವು ಮುಂದೆ ಸಾಗತೊಡಗಿತು.
ತನ್ನ ಭಾರಿಗ್ರಾತ್ರದ ಬಲಶಾಲಿಯಾದ ಉದ್ದದ ಹಗ್ಗದ ದೇಹವನ್ನು ಎಳೆದುಕೊಂಡು ಬಳಕುತ್ತಾ ಸಾಗಿದ ಆ ಹೆಬ್ಬಾವು, ಭೂಮಿಯ ಮೇಲಿನ ಬಟಾಬಯಲಿನಲ್ಲಿ ಓಡಾಡತೊಡಗಿದಾಗ, ಕೊಳ್ಳಗಳು ಬೆಟ್ಟಗಳು ಅಸ್ತಿತ್ವಕ್ಕೆ ಬಂದವು. ಹತ್ತು ಹಲವು ಹುಣ್ಣಿಮೆಗಳ ಕಾಲ ಅದು. ಭೂಮಿಯನ್ನು ಸುತ್ತಿ ಸುತ್ತಿ, ಕೊನೆಗೆ ತಾನು ಪ್ರಯಾಣ ಆರಂಭಿಸಿದ ತಾಣಕ್ಕೆ ಹಿಂದಿರುಗಿತು. ದಣಿದು ಬಸವಳಿದಿದ್ದ ಆ ಕಾಮನಬಿಲ್ಲಿನ ಮೈಬಣ್ಣದ ಹೆಣ್ಣು ಹೆಬ್ಬಾವು ತನ್ನ ಮೈಯನ್ನು ಸುತ್ತಿಕೊಂಡು ಗಾಢ ನಿದ್ರೆಗೆ ಜಾರಿತು.
ಸಾಕಷ್ಟು ಸಮಯ ನಿದ್ದೆ ಮಾಡಿದ ಆ ಹೆಬ್ಬಾವು ಎಚ್ಚತ್ತಾಗ, ಇನ್ನೂ ಏಕೆ ಎಲ್ಲಾ ಪ್ರಾಣಿಗಳು ಭೂಮಿಯ ಮೇಲ್ಪದರದ ಕೆಳಗೇ ಗಾಢ ನಿದ್ರೆಯಲ್ಲಿವೆ? ಎಂಬ ಪ್ರಶ್ನೆ ಕಾಡತೊಡಗಿತು. ಎಲ್ಲ ಪ್ರಾಣಿಗಳನ್ನು ನಿದ್ರೆಯಿಂದ ಎಬ್ಬಿಸಬೇಕೆಂದು ದೃಢನಿಶ್ಚಯ ಕೈಗೊಂಡ ಆ ಹೆಬ್ಬಾವು, ಜೋರಾಗಿ ಕೂಗಿ ಕೂಗಿ ಎಬ್ಬಿಸತೊಡಗಿತು. ಅದರ ಧ್ವನಿ ಭೂಮಿಯ ಪದರಿನಲ್ಲಿ ಸಾಗಿ ಎಲ್ಲಾ ಪ್ರಾಣಿಗಳ ಕಿವಿಯ ತಮಟೆಗೆ ಮುಟ್ಟತೊಡಗಿತ್ತು. ಎಲ್ಲಾ ಪ್ರಾಣಿಗಳು ನಿಧಾನವಾಗಿ ನಿದ್ರೆಯಿಂದ ಎಚ್ಚರಗೊಳ್ಳತೊಡಗಿದವು,
ಎಲ್ಲಾ ಪ್ರಾಣಿಗಳಿಗಿಂತ ದೊಡ್ಡದಾದ ರಾಕ್ಷಸಗಾತ್ರದ ಮೈಯೆಲ್ಲಾ ನೀರೇ ತುಂಬಿಕೊಂಡ ವಟಗುಟ್ಟುವ ಕಪ್ಪೆಗಳಿಗೆ ಮೊದಲು ಎಚ್ಚರವಾಯಿತು. ಅವು ನಿಧಾನವಾಗಿ ಭೂಮಿಯ ಮೇಲ್ಪದರವನ್ನು ಸೀಳಿಕೊಂಡು ಮೇಲೆ ಹೊರ ಬರತೊಡಗಿದವು.
ತೃಪ್ತಿಗೊಂಡ ಕಾಮನಬಿಲ್ಲಿನ ಹೆಣ್ಣು ಹೆಬ್ಬಾವಿಗೆ ಕಪ್ಪೆಗಳೊಂದಿಗೆ ಸರಸವಾಡುವ ಮನಸ್ಸುಂಟಾಯಿತು. ತನ್ನ ಬಾಲವನ್ನೆತ್ತಿ ನಿದ್ರೆಯಿಂದ ಎಚ್ಚತ್ತು ಭೂಮಿಯ ಮೇಲ್ಮೈಗೆ ಬಂದಿದ್ದ ರಾಕ್ಷಸಗಾತ್ರದ ಕಪ್ಪೆಗಳ ಮೈಗೆ ಕಚಗುಳಿ ಇಡತೊಡಗಿತು. ಕಚಗುಳಿಯ ಕಾರಣ ನಗತೊಡಗಿದ ಕಪ್ಪೆಗಳು ತಮ್ಮರಾಕ್ಷಸದೇಹದಲ್ಲಿ ಸಂಗ್ರಹಿಸಿ ಇಟ್ಟುಕೊಂಡಿದ್ದ ನೀರನ್ನೆಲ್ಲಾ ಭೂಮಿಯ ಮೇಲೆ ಚೆಲ್ಲತೊಡಗಿದವು. ಹೆಬ್ಬಾವಿನ ದೆಸೆಯಿಂದ ಭೂಮಿಯಲ್ಲಿ ಏರುತಗ್ಗುಗಳಾಗಿದ್ದರಿಂದ ಎತ್ತರದ ಜಾಗದಲ್ಲಿ ಬಿದ್ದ ನೀರು ನದಿ, ತೊರೆಗಳಾಗಿ ಕೊಳ್ಳಗಳಲ್ಲಿ ಧುಮ್ಮಿಕ್ಕ ತೊಡಗಿದವು. ಜಲಪಾತಗಳು ಉಂಟಾದವು. ಮುಂದೆ ಅವು ಹರಿವು ಹೆಚ್ಚಿಸಿಕೊಂಡು ಹರಿಯತೊಡಗಿದವು, ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಕೆರೆ, ಸರೋವರಗಳಾದವು.
ನೆಲಕ್ಕೆ ನೀರು ಇಂಗಿದ್ದರಿಂದ, ಎಳೆ ಹಸಿರು ಹುಲ್ಲು ಮೊಳಕೆಯೊಡೆಯಿತು. ಸ್ವಲ್ಪ ಸಮಯ ಕಳೆಯುವಷ್ಟರಲ್ಲಿ ಭೂಮಿಯ ನೆಲಕಾಣುವ ದಶದಿಕ್ಕುಗಳಲ್ಲಿ, ಹುಲ್ಲುಗಾವಲುಗಳು, ಬಗೆಬಗೆಯ ಹೂವು ಹಣ್ಣುಗಳ ಗಿಡಗಂಟಿಗಳು, ಮುಗಿಲೆತ್ತರದ, ವಿಶಾಲ ಛಾವಣಿಯ ಮರಗಳು, ಅವನ್ನು ಸುತ್ತಿದ್ದ ಬಳ್ಳಿಗಳು ಭೂಮಿಗೆ ಹಸಿರುಡುಗೆ ತೊಡಗಿಸಿದವು.
ಭೂಮಿ ಜೀವಚೈತನ್ಯದಿಂದ ನಳನಳಿಸತೊಡಗಿದ ನಂತರ, ಭೂಮಿಯ ಮೇಲ್ಪದರದ ಕೆಳಗಿದ್ದ ಪ್ರಾಣಿಸಂಕುಲದ ಸರಿಸೃಪಗಳು, ಪಕ್ಷಿಗಳು, ಪ್ರಾಣಿಗಳು ಭೂಮಿಯ ಮೇಲ್ಪದರವನ್ನು ಸೀಳಿಕೊಂಡು ಮೇಲೆ ಬಂದವು. ಕಾಮನಬಿಲ್ಲಿನ ಮೈಬಣ್ಣದ ಹೆಣ್ಣು ಹೆಬ್ಬಾವು, ಆ ಎಲ್ಲಾ ಪ್ರಾಣಿಗಳನ್ನು ಕರೆದುಕೊಂಡು ಭೂಮಿಯ ಮೇಲೆ ಓಡಾಡಿಸತೊಡಗಿತು. ಆ ಎಲ್ಲಾ ಪ್ರಾಣಿಪಕ್ಷಿಗಳು ತಮತಮಗೆ ಅನುಕೂಲಕರವಾದ ಮನೆಗಳನ್ನು ಹೊಂದಲು ಆ ಹೆಬ್ಬಾವು ಸಹಾಯ ಸಹಕಾರ ನೀಡಿತು. ಆಗಸದಲ್ಲಿ ಹಾರಾಡುತ್ತಾ ಆಟವಾಡತೊಡಗಿದ ಪಕ್ಷಿಗಳು, ಗಿಡಮರಗಳ ತುದಿಗಳಲ್ಲಿ, ಪೊಟರೆಗಳಲ್ಲಿ ತಮ್ಮತಮ್ಮ ಗೂಡುಗಳನ್ನು ಕಟ್ಟಿಕೊಂಡವು. ಸರಿಸೃಪಗಳು, ಇಲಿ ಹೆಗ್ಗಣಗಳು ಬಿಲಗಳನ್ನು ಕಂಡುಕೊಂಡವು. ಚಿರತೆ, ಹುಲಿ ಮೊದಲಾದವು ಗುಹೆಗಳನ್ನು ಹುಡುಕಿಕೊಂಡವು. ಉಳಿದ ಪ್ರಾಣಿಗಳು ತಮಗೆ ಅನುಕೂಲ ಆಗುವಂತಹ ನಿವಾಸಗಳನ್ನು ಮಾಡಿಕೊಂಡವು.
ಕಾಮನಬಿಲ್ಲಿನ ಮೈಬಣ್ಣದ ಆ ಹೆಣ್ಣು ಹೆಬ್ಬಾವನ್ನು ಜೀವಪ್ರದಾಯಿನಿ, ಮಹಾತಾಯಿ ಎಂದು ಗಿಡಗಂಟಿಗಳು, ಮರಗಳು, ಪಕ್ಷಿಗಳು, ಪ್ರಾಣಿಗಳು ಆದರಿಸ ತೊಡಗಿದವು. ಆ ಮಹಾತಾಯಿ, ಭೂಮಿ ಸದಾಕಾಲವು ನಳನಳಿಸುತ್ತಾ ಆರೋಗ್ಯದಿಂದ ಇರುವಂತೆ ಮಾಡಲು, ಸಕಲ ಜೀವ ಸಂಕುಲ ಪರಸ್ಪರ ಹೊಂದಿಕೊಂಡು ಬಾಳಲು ಅನುಕೂಲವಾಗುವಂತೆ ಕೆಲವಷ್ಟು ನಿಯಮಗಳನ್ನು ಮಾಡಿತು. ಕಾಲಕಳೆದಂತೆ, ಆ ಮಹಾತಾಯಿ ಕೆಲವು ಪ್ರಾಣಿಗಳು ತನ್ನ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿರುವುದನ್ನು ಗಮನಿಸಿತು. ಆ ಪ್ರಾಣಿಗಳಿಗೆ ಮನುಷ್ಯರೂಪವನ್ನು ಕೊಟ್ಟ ಆ ತಾಯಿ, ಈ ಭೂಮಿಗೆ, ಭೂಮಿಯಜೀವ ಸಂಕುಲಕ್ಕೆ ನೀವೇ ವಾರಸುದಾರರು ಎಂದು ಹೇಳಿತು.
ಪ್ರತಿಯೊಬ್ಬ ಮಾನವರೂ ತಾವು ಹುಟ್ಟಿಬಂದ ಕುಲವನ್ನು ಪ್ರತಿನಿಧಿಸುವ ಕುಲದೇವತಾ ಕಂಭಗಳನ್ನು ಹೊಂದಿದ್ದರು. ಏಕೆಂದರೆ, ಆ ಮಾನವ ಕುಲಗಳು ಪ್ರಾಣಿ ಮೂಲದವು, ಪಕ್ಷಿ ಮೂಲದವು ಹಾಗೂ ಸರಿಸೃಪಗಳ ಮೂಲದವು ಆಗಿದ್ದವು. ಆಯಾ ಕುಲಗಳ ಮಾನವರು ತಮ್ಮ ಕುಲದೇವತೆಗಳನ್ನು ಹೊರತುಪಡಿಸಿ ಸಕಲ ಪ್ರಾಣಿಪಕ್ಷಿಗಳನ್ನು ತಿನ್ನಬಹುದು ಎಂದು ಆ ಮಹಾತಾಯಿ ನಿರ್ದೇಶನ ನೀಡಿತ್ತು. ಹಾಗಾಗಿ, ಮುಂದೆ ಸಕಲ ಕುಲದವರಿಗೂ ಸಾಕಷ್ಟು ಆಹಾರವು ಸುಲಭವಾಗಿ ಸಾಕಾಗುವಷ್ಟು ಲಭ್ಯವಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಉಳಿದ ಕೆಲವು ಜೀವಿಗಳ ಆರಿಸಿಕೊಂಡ ಆ ಮಹಾತಾಯಿ, ಅವುಗಳನ್ನು ಮೆಚ್ಚಿಕೊಂಡು ಅವಕ್ಕೆ ಶಿಲೆಯ ರೂಪವನ್ನು ಕೊಟ್ಟಿತು. ಅವು ಬೆಟ್ಟಗುಡ್ಡಗಳಾಗಿ ನಿಲ್ಲುವಂತೆ ಮಾಡಿತು. ಆಯಾ ಭೂ ಪರಿಸರದಲ್ಲಿ ನೆಲೆಗೊಳ್ಳುವ ಮಾನವ ಕುಲಗಳ ರಕ್ಷಣೆ ಅವುಗಳ ಹೆಗಲಿಗೇ ಏರಿತು.
ನಂತರ ವಿವಿಧ ಕುಲಗಳಿಗೆ ಸೇರಿದ ಮಾನವರು ತಾವು ನೆಲೆನಿಂತ ಭೂ ಪರಿಸರದೊಂದಿಗೆ ಹೊಂದಿಕೊಂಡು ಪ್ರವರ್ಧಮಾನಕ್ಕೆ ಬರುತ್ತಿರುವುದನ್ನು ಕಂಡ ಆ ಮಹಾತಾಯಿ ಸಂತಸಪಟ್ಟಿತು. ‘ಬಿಯಾಮಿ ಎಂಬ ಹೆಸರಿನ ಮಾನವ ಒಬ್ಬ ಜಾಣ ವ್ಯಕ್ತಿಯಾಗಿ ಬೆಳೆದು ನಿಂತ. ಜ್ಞಾನವಂತ, ಪ್ರಾಮಾಣಿಕ ಹಾಗೂ ದಯಾಳುವೂ ಆಗಿದ್ದ ಆತ ಭೂ ಪರಿಸರವನ್ನು- ಭೂ ಮಾತೆಯನ್ನು ಆದರದಿಂದ ನೋಡಿಕೊಂಡ. ಅವನಿಗೂ ವಯಸ್ಸಾಯಿತು. ಸಾವು ಸನ್ನಿಹಿತವಾಗಿತ್ತು. ಆದರೆ, ಆ ಮಹಾತಾಯಿಗೆ ಸುಜ್ಞಾನಿ ‘ಬಿಯಾಮಿ ಸಾಯಬಾರದೆಂದು ಅನ್ನಿಸಿತು. ಆತನಿಗೆ ಆತ್ಮಸ್ವರೂಪ ಅಂದರೆ ಚೈತನ್ಯ ಸ್ವರೂಪವನ್ನು ಪ್ರಸಾದಿಸಿತು. ‘ಸುಜ್ಞಾನಿ ಬಿಯಾಮಿ, ತನ್ನ ಚೈತನ್ಯ ಸ್ವರೂಪದಲ್ಲಿ ಮಾನವ ಕುಲಗಳನ್ನು ರಕ್ಷಿಸುತ್ತಾ ಬರಲಿ ಎಂಬುದು ಅದರ ಹಾರೈಕೆಯಾಗಿತ್ತು.
ಆದರೆ, ಕೆಲವು ದಿನಗಳು ಕಳೆಯುವಷ್ಟರಲ್ಲೇ ಒಬ್ಬಕೆಟ್ಟ ಮನುಷ್ಯ, ‘ಸುಜ್ಞಾನಿ ಬಿಯಾಮಿಯ ಚೈತನ್ಯ ಸ್ವರೂಪಕ್ಕೆ ಮುಖಾಮುಖಿಯಾದ. ಶಾಂತ ಚಿತ್ತದಿಂದ ಆತನನ್ನು ಎದುರಿಸಿದ ಚೈತನ್ಯ ಸ್ವರೂಪಿ ‘ಸುಜ್ಞಾನಿ ಬಿಯಾಮಿ, ಕುಟಿಲನಾಗಿದ್ದ ಸ್ವಾರ್ಥ ಮನೋಭಾವದ ಮನುಷ್ಯನನ್ನು ಹೆಡಮುರಿಗೆಕಟ್ಟಿ ತನ್ನ ಕುಲದಿಂದ ಹೊರಹಾಕಿದ. ಆದರೆ, ಕುಲದಿಂದ ಹೊರಹಾಕಲ್ಪಟ್ಟ ಆ ಕೆಟ್ಟ ಮನುಷ್ಯ ವಿಪರೀತವಾಗಿ ಕೋಪಗೊಂಡ, ತನ್ನ ಕುಟಿಲ ಕಾರಸ್ಥಾನದಿಂದ ಚೈತನ್ಯ ಸ್ವರೂಪ ಹೊಂದುವುದನ್ನು ಪತ್ತೆಮಾಡಿ ತಾನೂ ಚೈತನ್ಯ ಸ್ವರೂಪವನ್ನು ಪಡೆದ. ‘ಸುಜ್ಞಾನಿ ಬಿಯಾಮಿಯ ಚೈತನ್ಯ ಸ್ವರೂಪ ಮಾನವ ಕುಲಗಳ ಉದ್ಧಾರಕ್ಕೆ ಶ್ರಮಿಸುತ್ತಿತ್ತು, ಕೆಟ್ಟ ಯೋಚನೆಗಳಿಂದ ತುಂಬಿ ಕುಟಿಲ ಕಾರಸ್ಥಾನದಿಂದ ಚೈತನ್ಯ ಸ್ವರೂಪ ಪಡೆದ ಆ ಕುವಿಚಾರಿ ಮನುಷ್ಯನನ್ನು ‘ಬುನಿಯಿಪ್ ಎಂದೆ ಕರೆಯಲಾಗುತ್ತದೆ.
ಕೆಟ್ಟ ವಿಚಾರಗಳ ಮೂಟೆಯಾದ ‘ಬುನಿಯಿಪ್ ನಿಂದ ದೂರವಿರಬೇಕು ಎಂದು ‘ಸುಜ್ಞಾನಿ ಬಿಯಾಮಿಯ ಚೈತನ್ಯ ಸ್ವರೂಪ ಸಕಲ ಕುಲಗಳಿಗೆ ಎಚ್ಚರಿಕೆ ನೀಡುತ್ತಾ ಬಂದಿತು. ಅದರಿಂದ ಮತ್ತಷ್ಟು ಕೆರಳಿದ ‘ಬುನಿಯಿಪ್, ಸೇಡು ತೀರಿಸಿಕೊಳ್ಳಲು ಮುಂದಾಯಿತು. ತನ್ನ ಕೆಟ್ಟ ಯೋಚನೆಗಳಿಂದ ಸಕಲ ಮಾನವ ಕುಲಗಳಲ್ಲಿ ಅರಾಜಕತೆ ಮೂಡಿಸಬೇಕು, ಪ್ರತಿಯೊಬ್ಬ ಮಾನವನೂ ತೊಂದರೆಗಳಲ್ಲಿ ಸಿಲುಕಿ ನೋವು ಅನುಭವಿಸಬೇಕು, ದುಃಖಿತನಾಗಬೇಕುಎಂದು ಅದು ಗಟ್ಟಿ ನಿರ್ಧಾರಕೈಗೊಂಡಿತು.
ಅದರಂತೆ ಕಾರ್ಯೊನ್ಮುಖವಾದ ‘ಬುನಿಯಿಪ್, ‘ಸಕಲ ಕುಲಗಳಲ್ಲಿ ಪರಸ್ಪರ ವೈಮನಸ್ಸು ಮೂಡಿಸಬೇಕು, ಯಾವುದೇ ಕುಲದಯಾರೇ ಸಿಕ್ಕರೂ ಅವರನ್ನು ಅಪಹರಿಸಬೇಕು, ಯಾರೇ ಸಿಕ್ಕರೂ ಅವರ ಮೇಲೆ ಮುಗಿಬಿದ್ದು ಅವರನ್ನು ಮುಗಿಸಿ ನುಂಗಿ ನೀರುಕುಡಿಯಬೇಕು ಎಂದು ಪ್ರತಿಜ್ಞೆ ಮಾಡಿತು.
ಅಂದಿನಿಂದ ಪ್ರತಿಯೊಬ್ಬ ಮನುಷ್ಯನೂ ‘ಬುನಿಯಿಪ್ನ ದಾಳಿಯ ಭಯದಲ್ಲಿ ಬದುಕುವಂತಾಗಿದೆ. ಕಾರ್ಗತ್ತಲು ಕವಿದ ಅಂಧಕಾರದ ಸ್ಥಳಗಳಲ್ಲಿ, ದಟ್ಟವಾದ ಕಾಡುಮೇಡುಗಳಲ್ಲಿ, ಸುಲಭವಾಗಿ ಹೋಗಲಾಗದ ಕಾಡಿನ ಮೂಲೆ ಮೂಲೆಗಳಲ್ಲಿ, ಆಳವಾದ ನೀರಿನ ಗುಂಡಿಗಳಲ್ಲಿ ಅದು ಹೊಂಚು ಹಾಕುತ್ತಿದೆ. ಪ್ರಯಾಣಿಕರ, ಹಾದಿಹೋಕರ ದಾರಿ ತಪ್ಪಿಸಿ ಅವರ ಜೀವ ತೆಗೆಯತೊಡಗಿದೆ. ಮಕ್ಕಳನ್ನು ಕದ್ದುಕೊಂಡು ಹೋಗುವುದರಲ್ಲಿ ನಿಸ್ಸೀಮವಾದ ಅದು ಅವರನ್ನು ಕೊಂದು ತಿನ್ನುವುದರಲ್ಲಿ ಸಂತಸ ಅನುಭವಿಸುತ್ತದೆ.
ಒಟ್ಟಾರೆ, ಎಲ್ಲ ಕುಲಗಳ ಮಾನವರು ನಿರಂತರವಾಗಿ ತನ್ನ ಕೆಟ್ಟ ಗುಲಾಮಿತನವನ್ನು ಒಪ್ಪಿಕೊಳ್ಳಬೇಕೆಂಬ ದುರಾಸೆಯಿಂದ ಅದು ಇಷ್ಟೆಲ್ಲಾ ಕಷ್ಟಗಳನ್ನು ಕೊಡುತ್ತಿದೆ.
-- ಆಸ್ಟ್ರೇಲಿಯದ ಒಂದು ಆದಿವಾಸಿ ಬುಡಕಟ್ಟಿನಲ್ಲಿ ಪ್ರಚಲಿತವಿರುವ ಸೃಷ್ಟಿಯಕತೆ.
*******************
No comments:
Post a Comment