ಕವಿತೆ
ಮುನಿಸಿಕೊಂಡಿರುವೆ ಏಕೆ?
ಹೇಳಲು ನೂರೆಂಟಿರಲು
ಮುನಿಸು ಏಕೆ?
ಸಾಕಿನ್ನು ಮುನಿಸು
ಹೇಳಬೇಕಾಗಿರುವುದ ಹೇಳದೆ
ಮುನಿಸಿಕೊಂಡರೆ
ದುಷ್ಟನ ಮುಖದಲ್ಲಿ ಗೆದ್ದ ನಗು ಬೀರಿ
ಕೊಲ್ಲುವನ ಕೈಗಳಿಗೆ ಅಧಿಕಾರ ಸೇರಿ
ಸುಳ್ಳು ಬಾಯಲಿ ಮಂತ್ರಗಳು ಮೂಡಿ
ಕತ್ತಲು ಬೆಳಕಾ ನುಂಗಿಬಿಟ್ಟು
ಜಗವೇ ಕತ್ತಾಲಾಗಿಬಿಡುವುದು…
ಮಾತನಾಡು ಕವಿತೆಯೇ. . ಮಾತನಾಡು
ನಿನ್ನದ್ದು ಮಾತಲ್ಲ
ಮಾತಿನಲ್ಲಿರುವ ಜೀವಕಣ
ನಿನ್ನದ್ದು ಪದಗಳಲ್ಲ
ಪದಗಳಲ್ಲಿರುವ ಪ್ರೀತಿಯ ಕಾವು
ನಿನ್ನದ್ದು ಉಪಮೆಗಳಲ್ಲ
ಉಪಮೆಗಳಲ್ಲಿರುವ ಕೂಡುವ ಭಾವ
ನಿನ್ನದ್ದು ದನಿಯಲ್ಲ
ದನಿಯಲ್ಲಿರುವ ಹೋರಾಟದ ಕಿಚ್ಚು
ನಿನ್ನದ್ದು ರೂಪವಲ್ಲ
ರೂಪದಲ್ಲಿರುವ ಕುರೂಪದ ಬಗೆಗಿನ ನಿಟ್ಟುಸಿರು
ನಿನ್ನದ್ದು ಪ್ರಾಸವಲ್ಲ
ಪ್ರಾಸದಲ್ಲಿರುವ ಸತ್ಯದ ಆಳದ ತಳಮಳ
ಮಾತನಾಡು ಕವಿತೆಯೇ ಮಾತನಾಡು
ನೀನು ಮಾತಾಡದಿದ್ದರೆ
…ಜಗವೇ ಕತ್ತಲಾಗಿಬಿಡುವುದು…
ಮಾತನಾಡು ಕವಿತೆಯೇ. . ಮಾತನಾಡು….
No comments:
Post a Comment