Wednesday, 9 October 2019

ಗಾಂಧಿಯನ್ನು ಮೊದಲು ತಿಳಿಯಬೇಕು.......



ಡಾ. ದಿನೇಶ್ ನಾಯಕ್

ಕನ್ನಡ ವಿಭಾಗ, ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) 
ಮಂಗಳೂರು 
jeevadani2016@gmail.com

ಪ್ರತೀ ಬಾರಿಯೂ ಗಾಂಧಿ ನನ್ನ ಮುಂದೆ ಬಂದು ಕುಳಿತಾಗ ನನಗೆ ಯೇಸುಕ್ರಿಸ್ತ ನೆನಪಾಗುತ್ತಾರೆ. 
ಲಾರ್ಡ್ ಮೌಂಟ್ ಬ್ಯಾಟನ್, ಬ್ರಿಟಿಷ್ ಭಾರತದ ಕೊನೆಯ ವೈಸ್‌ರಾಯ್ 
ನನಗೆ ಇಬ್ಬರು ದೇವರು. ಒಬ್ಬರು ಜೀಸಸ್ - ಅವರು ನನಗೆ ಬದುಕನ್ನು ಕೊಟ್ಟವರು. ಇನ್ನೊಬ್ಬರು ಗಾಂಧಿ - ಅವರು ನನಗೆ ಬದುಕಿನ ದಾರಿಯನ್ನು ತೋರಿಸಿದವರು. 

ಮಾರ್ಟಿನ್ ಲೂಥರ್ ಕಿಂಗ್ 

ಮಹಾತ್ಮ ಗಾಂಧೀಜೀಯವರ ಸಮಕಾಲೀನರಾದ ಇವರಿಬ್ಬರೂ ಗಾಂಧಿಯನ್ನು ಕಣ್ಣಾರೆ ಕಂಡು, ಅವರ ಬದುಕನ್ನು ಸರಿಯಾಗಿ ಅರ್ಥ ಮಾಡಿಕೊಂಡವರು. ಹಾಗಾಗಿ ಇವರ ಮಾತುಗಳಲ್ಲಿ ಅಂಥಾ ಉತ್ಪ್ರೇಕ್ಷೆ ಏನೂ ಇಲ್ಲ ಅಂತನಿಸುತ್ತದೆ. ಗಾಂಧೀಜಿಯವರ ಬದುಕೇ ಹಾಗೆ ಇತ್ತು. ಅದೊಂದು ಹೋರಾಟದ ಮತ್ತು ಸತ್ಯದ ಹುಡುಕಾಟದ ಬದುಕಾಗಿತ್ತು. ಅವರು ಯಾವತ್ತೂ ನಡೆ-ನುಡಿ ಒಂದಾಗಿ ಬದುಕಿದವರು. ಹಾಗಾಗಿ ಅವರ ಬದುಕೇ ಒಂದು ಸಂದೇಶವಾಗಿದೆ. 

ಗಾಂಧೀಜಿಯವರು ತಮ್ಮ ಆತ್ಮಕಥೆ `ನನ್ನ ಸತ್ಯಾನ್ವೇಷಣೆ' ಯಲ್ಲಿ ತಮ್ಮ ಬಾಲ್ಯದ ಒಂದು ಘಟನೆಯನ್ನು ಬರೆಯುತ್ತಾರೆ: 

ಗಾಂಧೀಜಿಯವರು ರಾಜ್‌‍ಕೋಟದಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಸಂದರ್ಭ. ಪರೀಕ್ಷೆ ನಡೆಯುತ್ತಿರುತ್ತದೆ. ಇನ್ಸ್‌ಪೆಕ್ಟರ್ ಮಿಸ್ಟರ್ ಗೈಲ್ಸ್ ಪರಿಶೀಲನೆಗಾಗಿ ಶಾಲೆಗೆ ಬಂದ, ವಿದ್ಯಾರ್ಥಿಗಳಿಗೆ ಐದು ಇಂಗ್ಲಿಶ್ ಪದಗಳನ್ನು ಬರೆಯಲು ಹೇಳಿದ್ದರು. ಅವುಗಳ ಪೈಕಿ `Kettle’ ಎಂಬ ಪದವೂ ಒಂದು. ಗಾಂಧಿ ಆ ಪದವನ್ನು ತಪ್ಪಾಗಿ ಬರೆದಿದ್ದರಂತೆ. ಆಗ ಗಾಂಧಿಗೆ ಕಲಿಸಿದ ಮೇಷ್ಟ್ರು ಅದನ್ನು ಗಮನಿಸಿ, ತಮ್ಮ ಕಾಲಿನ ಚಪ್ಪಲಿಯ ತುದಿಯಿಂದ ಗಾಂಧಿ ಕಾಲಿಗೆ ಚುಚ್ಚಿ `ನೀನು ತಪ್ಪು ಬರೆದಿದ್ದೀಯ ಅಂತ ಅವರನ್ನು ಎಚ್ಚರಿಸಲು ಪ್ರಯತ್ನಿಸಿದರು. ಮುಂದಿನ ಹುಡುಗನ ಸ್ಲೇಟನ್ನು ನೋಡಿಕೊಂಡು ಗಾಂಧಿ ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕೆಂದು ಅವರ ಮೇಷ್ಟ್ರ ಉದ್ದೇಶವಾಗಿತ್ತು. ಆದರೆ ಗಾಂಧಿ ಮಾತ್ರ ಮೇಷ್ಟ್ರ ಸೂಚನೆಯಂತೆ ನಡೆಯಲಿಲ್ಲ. ಎಲ್ಲ ಹುಡುಗರು ಎಲ್ಲ ಐದೂ ಪದಗಳನ್ನು ಸರಿಯಾಗಿ ಬರೆದಿದ್ದರು. ಆದರೆ ಗಾಂಧಿ ಮಾತ್ರ ಅಲ್ಲಿ ದಡ್ಡರಾಗಿದ್ದರು. ಗಾಂಧಿಗೆ ಮೇಷ್ಟ್ರ ಸೂಚನೆ ಒಪ್ಪಿಗೆಯಾಗಿರಲಿಲ್ಲ. ಯಾಕೆಂದರೆ ವಿದ್ಯಾರ್ಥಿಗಳು ನಕಲು ಮಾಡದಂತೆ ನೋಡಿಕೊಳ್ಳುವುದೇ ಮೇಷ್ಟ್ರುಗಳ ಕೆಲಸ ಎಂದು ಅವರು ಬಲವಾಗಿ ನಂಬಿದ್ದರು. ಇದಾದ ಮೇಲೆ ಅವರು ಉಪಾಧ್ಯಾಯರು ಅವರನ್ನು ಕರೆಸಿ ಅವರ ಮೂರ್ಖತನಕ್ಕೆ ಸರಿಯಾಗಿ ಬಯ್ದರು. 

ಗಾಂಧಿ ಬರೆಯುತ್ತಾರೆ: ಅದರಿಂದ ಅವರಿಗೆ ವೃಥಾ ಶ್ರಮವಾಯಿತೇ ಹೊರತು ನಕಲು ಮಾಡುವ ಕಲೆ ನನಗೆ ಕೊನೆಗೂ ಬರಲೇ ಇಲ್ಲ. ಗಾಂಧಿ ಆ ವಯಸ್ಸಿನಲ್ಲೇ ಹೀಗಿದ್ದರು. ಸನ್ನಡತೆಯ ಪ್ರಶ್ನೆ ಆಗಲೇ ಅವರಿಗೆ ಬಹಳ ಮುಖ್ಯ ಆಗಿತ್ತು. ಸರಿ-ತಪ್ಪಿನ ಅರಿವು ಆಗಲೇ ಅವರಲ್ಲಿ ಮಡುಗಟ್ಟಿತ್ತು. 

ಬಾಲ್ಯದಲ್ಲಿ ಅವರು ನೋಡಿದ `ಹರಿಶ್ಚಂದ್ರ ನಾಟಕ ಅವರನ್ನು ತೀವ್ರವಾಗಿ ಪ್ರಭಾವಿಸಿತ್ತು. ಹರಿಶ್ಚಂದ್ರ ಸತ್ಯಕ್ಕಾಗಿ ಪಟ್ಟ ಆಪತ್ತು, ಕಷ್ಟವನ್ನೆಲ್ಲ ತಾನೂ ಪಡಬೇಕು ಎಂದು ಅವರು ಭಾವಿಸಿದ್ದರು. ಹರಿಶ್ಚಂದ್ರ ಅವರ ಮನಸ್ಸಿನಲ್ಲಿ ಸ್ಫೂರ್ತಿ ತುಂಬಿದ ಆದರ್ಶ ವ್ಯಕ್ತಿಯಾಗಿದ್ದ. ಹರಿಶ್ಚಂದ್ರನ ಕತೆಯನ್ನು ಅವರು ವಾಸ್ತವ ಎಂದು ಪರಿಭಾವಿಸಿದ್ದರು. ಹಾಗಾಗಿ ಆ ಕತೆಯನ್ನು ಅವರು ಅಕ್ಷರಶಃ ನಂಬಿದ್ದರು. ಆದುದರಿಂದಲೇ ಅವರು ಸತ್ಯವೇ ಸಾರ್ವಭೌಮ ತತ್ತ್ವ, ಸತ್ಯವೇ ಪರಮಾತ್ಮ ಎಂದು ಭಾವಿಸಿದ್ದರು. 

ಗಾಂಧಿಯ ಬಗ್ಗೆ ಹೆಚ್ಚು ಚರ್ಚೆಯಾಗದ ಇನ್ನೊಂದು ವಿಚಾರದ ಬಗ್ಗೆ ನಾನಿಲ್ಲಿ ಹೇಳಬಯಸುತ್ತೇನೆ: 

ಇಂದು ನಾವು `ಅಭಿವೃದ್ಧಿ ಎಂಬ ಹೆಸರಿನಲ್ಲಿ ಪರಿಸರ ನಾಶ ಮಾಡುತ್ತಿದ್ದೇವೆ. ಅದರ ಪರಿಣಾಮವಾಗಿ ಹವಾಮಾನ ವೈಪರೀತ್ಯಗಳ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಇದನ್ನು ಗಾಂಧಿ ಬಹಳ ಹಿಂದೆಯೇ ಗ್ರಹಿಸಿದ್ದರು. `ಭಾರತ ಕೈಗಾರಿಕೀಕರಣವನ್ನು ಬಾಚಿ ತಬ್ಬಿಕೊಂಡರೆ ಮಿಡತೆಯ ದಾಳಿಗೆ ಸಿಕ್ಕ ಪೈರಿನಂತೆ ಇಡೀ ದೇಶವೇ ಬೋಳಾಗಿಬಿಡುತ್ತದೆ' ಎಂದು ಗಾಂಧಿ ಹೇಳಿದ್ದರು. ಇಂದು ಆಗುತ್ತಿರುವುದು ಅದೇ. ಹೀಗಾಗಿ ಭೂಮಿ ನಾಶವಾಗುವ ಆತಂಕವನ್ನು ಮೊತ್ತ ಮೊದಲು ವ್ಯಕ್ತಪಡಿಸಿದ ಆಧುನಿಕ ಕಾಲದ ಮೊದಲ `ಪರಿಸರವಾದಿ' ಅವರಾಗಿದ್ದಾರೆ. ಆದರೆ ನಾವೆಲ್ಲರೂ ಇದನ್ನು ಮರೆತಿದ್ದೇವೆ. 

ಗಾಂಧೀಜಿಯವರ ಮೊಮ್ಮಗ ಪ್ರೊ. ರಾಜ್‌ಮೋಹನ್ ಗಾಂಧಿಯವರು ಗಾಂಧಿಯವರ ಬಗ್ಗೆ ಒಂದು ಅಪರೂಪದ ವಿಷಯ ಹೇಳುತ್ತಾರೆ: 

ಗಾಂಧೀಜಿಯವರು ಪ್ರತಿದಿವಸ ತಮಗೆ ಏಳು ಮಂದಿ ಹೊಸ ಸ್ನೇಹಿತರು ಸಿಗದಿದ್ದರೆ ಊಟವನ್ನೇ ಮಾಡುತ್ತಿರಲಿಲ್ಲವಂತೆ ಮತ್ತು ಈ ವಿಷಯದಲ್ಲಿ ಅವರು ಹಠಮಾರಿಯಾಗಿದ್ದರಂತೆ. ಹಾಗಾಗಿ ಸ್ವಾತಂತ್ರ್ಯ ಹೋರಾಟದ ಕಾರ್ಯಕರ್ತರು ಕೈಗೆ ಸಿಕ್ಕಿದ ಸಿಕ್ಕಿದ ಜನರನ್ನು ಕರೆದುಕೊಂಡು ಬಂದು ಗಾಂಧೀಜಿಯವರ ಮುಂದೆ ಕೂರಿಸುತಿದ್ದರು. ಹಾಗೆ ಬಂದ ಅತಿಥಿಗಳನ್ನು ಗಾಂಧಿ ಮುಂದೆ ಕೂರಿಸಿಕೊಂಡು, ಅವರ ತಲೆ ನೇವರಿಸಿಕೊಂಡು ಅವರ ಬದುಕಿನ ಕಥೆಗಳನ್ನು ಕೇಳಿಸಿಕೊಳ್ಳುತ್ತಿದ್ದರಂತೆ. ಬಳಿಕ ಆ ಜನರಿಗೆ ಬದುಕಿನ ನಾನಾ ದಾರಿಗಳನ್ನು ಗಾಂಧಿ ಹೇಳುತ್ತಿದ್ದರಂತೆ. 

ಬಹುಸಂಸ್ಕೃತಿಯ ನಾಡಾದ ಈ ದೇಶಕ್ಕೆ ಇದು ಬಹಳ ಅಗತ್ಯವಾದುದು. ಆದ್ದರಿಂದ ನನಗೆ ಇದು ಈಗಲೂ ಬಹಳ ಮುಖ್ಯವಾದುದು ಅಂತನ್ನಿಸುತ್ತದೆ. ಅಂದರೆ ನಮ್ಮೊಳಗೆ ಇತರರನ್ನು ತಂದುಕೊಳ್ಳುವುದು ಬಹಳ ಮುಖ್ಯ. ನಮ್ಮೊಳಗೆ ಹೊಸ ಹೊಸ ಮನಸ್ಸುಗಳನ್ನು ತುಂಬಿಕೊಳ್ಳಬೇಕು. ನಮಗೆ ನಮ್ಮವರು ಮಾತ್ರ ಮುಖ್ಯವಾಗಬಾರದು. ಬೇರೆಯವರನ್ನು ಸ್ನೇಹದಿಂದ ನಾವು ನಮ್ಮೊಳಗೆ ತರಬೇಕು. ಆಗ ಇತರರಿಗೆ ನಮ್ಮ ಬಗ್ಗೆ ವಿಶ್ವಾಸ, ಪ್ರೀತಿ ಹುಟ್ಟುತ್ತದೆ. ಇದರಿಂದ ಒಂದು ರಾಷ್ಟ್ರದಲ್ಲಿ ಎಲ್ಲರೂ ಜೊತೆಯಾಗಿ ಅನ್ಯೋನ್ಯವಾಗಿ ಬದುಕಲು ಸಾಧ್ಯವಾಗುತ್ತದೆ. ಇವತ್ತು ನಮ್ಮ ದೇಶದಲ್ಲಿ ಇದು ಸಾಧ್ಯವಾಗುತ್ತಿಲ್ಲ. ಇಲ್ಲಿ ಭಿನ್ನತೆಯನ್ನು ಶತ್ರುವಾಗಿ ಕಾಣಲಾಗುತ್ತಿದೆ. ಜನರ ಮಧ್ಯೆ ಪರಸ್ಪರ ಅವಿಶ್ವಾಸ ತುಂಬಿ ಹೋಗಿದೆ. ಈಗೀಗ ನಮ್ಮ ಜನರಿಗೆ ಬೇರೆಯವರ ಬಗ್ಗೆ ಅಪನಂಬಿಕೆ ಹೆಚ್ಚಾಗಿದೆ. ಎಲ್ಲ ಸಮುದಾಯದವರು ಅವರವರ ಜನರೊಂದಿಗೆ ಸೇರಿಕೊಂಡು ಬೇರೆಯವರ ಬಗ್ಗೆ ಅನುಮಾನ ಪಟ್ಟುಕೊಂಡು, ಮಾತಾಡಿಕೊಂಡು ಬದುಕುತ್ತಿದ್ದಾರೆ. ಇದು ಈ ದೇಶಕ್ಕೆ ಬಹಳ ಅಪಾಯಕಾರಿಯಾದುದು. ಇದನ್ನು ಗಾಂಧೀಜಿಯವರು ಅಂದೇ ಗ್ರಹಿಸಿದ್ದ ಕಾರಣಕ್ಕಾಗಿ ಅವರು ಜನರೊಡನೆ ಬದುಕಿದ್ದರು. 

ಭಾರತ ಅನ್ನುವುದು ಎಲ್ಲರಿಗೆ ಸೇರಿದ್ದು, ಸರ್ವೋದಯ ಎನ್ನುವುದು ಎಲ್ಲರ ಅಭಿವೃದ್ಧಿ, ಅದರಲ್ಲಿ ಯಾರನ್ನೂ ಹೊರಗಿಡುವುದು ತಪ್ಪು ಎಂದು ಬಲವಾಗಿ ಪ್ರತಿಪಾದಿಸಿದ ಗಾಂಧಿಯನ್ನು ಇಂದು ಜನರು ಅವರವರ ಮೂಗಿನ ನೇರಕ್ಕೆ ವ್ಯಾಖ್ಯಾನಿಸುತ್ತಿದ್ದಾರೆ. ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟವನ್ನು ಅಮಾನ್ಯಗೊಳಿಸುವ ಸಂಚು ಈ ದೇಶದಲ್ಲಿ ಇಂದು ನಡೆಯುತ್ತಿದೆ. ಗಾಂಧಿಯನ್ನು ನೀವು ಓದಿದ್ದೀರಾ ಅಂತ ಇವರ ಹತ್ತಿರ ಕೇಳಿದರೆ `ಇಲ್ಲ' ಅಂತ ಹೇಳುತ್ತಾರೆ. ಗಾಂಧಿಯ ಬಗ್ಗೆ ಅಧ್ಯಯನ ಮಾಡಿದ್ದೀರಾ ಅಂತ ಕೇಳಿದರೆ `ಇಲ್ಲ' ಅಂತಾರೆ. ಆದರೂ ಅವರಿಗೆ ಗಾಂಧಿ ಬಗ್ಗೆ ಸಹಮತವಿಲ್ಲ. ಇದೇ ನೋಡಿ ದುರಂತ. 

ಗಾಂಧೀಜಿಯವರ 150 ವರ್ಷಗಳ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವ ಈ ಹೊತ್ತಲ್ಲಿ ಗಾಂಧಿ ತತ್ತ್ವ-ಸಿದ್ಧಾಂತವನ್ನು ಯುವಜನತೆಗೆ ತಿಳಿಸುವ ಕಾರ್ಯಕ್ರಮವನ್ನು ನಾವು ಮಾಡಬೇಕಾಗಿದೆ. ಹಾಗೆ ಮಾಡುವಾಗ ಗಾಂಧೀಜಿಯವರಂಥಾ ನಾಯಕರ ಕುರಿತ ಭಜನೆ ಅಥವಾ ನಿಂದನೆ ಮಾಡುವ ಬದಲಾಗಿ ಚಿಂತನೆ ನಡೆಸುವುದು ಸೂಕ್ತವಾದುದು. 

******************* 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...