ನೂರು ಗೌಜು - ಗದ್ದಲಗಳ
ಸಾವಿರ ವಾದ - ವಾಗ್ವಾದಗಳ
ನಡುವೆಯೂ
ನಿನ್ನ ಮೆದುನಡಿಗೆಯ ನೆರಳು
ಹೊರಟಿದೆ ಮೂಕಮೆರವಣಿಗೆ
ಶಬುದ ನಾದದ ಹೆಸರ ತೊರೆದು
ನುಡಿದ ನಿನ್ನುಡಿಗೆ
ಮಿಡಿದ ನಿನ್ನುಸಿರಿಗೆ
ಅಪಾರ್ಥದ ವಿಪರೀತ ಅರ್ಥಗಳು
ಬಸುರ ತುಂಬ ವಿಷವ ಹೊತ್ತು
ಹೊಂಕರಿಸುವ ನೆಲದ ರಣಹದ್ದುಗಳು
ನಿನ್ನ ಧರ್ಮದ ಬಲವು ಅಧ್ಯಾತ್ಮದ ಒಲವು
ಕಳಚಿಬಿದ್ದ ಗಳಿಗೆ ಬಯಲ ತುಂಬಾ
ಕಂಪಿಸುವ ಶೋಕತಪ್ತ ಮಳೆದುಂಬಿಗಳು
ನೀ ಕಲಿಸಿದ ಜೀವನದ ಶುಚಿಯು
ಬದುಕಿನ ರುಚಿಯು
ಗುಡಿಸಿ ಹಾಕಿದೆ
ಬೀದಿ ಕೇರಿಯ ಕೊಚ್ಚೆ ಕೊಳೆಯನು
ನೀ ನಿವೃತ್ತನಾದರೂ
ಶತಮಾನದ ಅನುಮಾನಕ್ಕೆ
ತುತ್ತಾದರೂ
ನಿಜಪ್ರೇಮದ ಹಾಡಿಯಲಿ
ನಡೆಯುತ್ತಲೇ ಇರುವೆ
ಕೋಲು ಹಿಡಿದು ಬಾಗಿದ ಬೆನ್ನು
ಇನ್ನೆಂದೂ ಮುಖ ತೋರಿಸಲಾರೆ
ಎಷ್ಟೇ ಅಂದರೂ
ಬೆನ್ನು ಬಿಡರು ದುಂದುಮಾರರು
ಏನಾದರೂ
ನೀನೇ ಮೌನಜಂಗಮನು
ನೊಂದವರಿಗೂ
ನಿನ್ನ ಕೊಂದವರಿಗೂ
ಡಾ. ದಿನೇಶ್ ನಾಯಕ್
No comments:
Post a Comment