· ಜೋವಿ
vpaulsj@gmail.com
ನನ್ನ ಸ್ನೇಹಿತರಾದ ಡಾ. ದಿನೇಶ್‌ರವರ ಆತ್ಮೀಯ ಆಮಂತ್ರಣದ ಮೇರೆಗೆ ಶಿವಮೊಗ್ಗ ರಂಗಾಯಣ ನಡೆಸಿಕೊಟ್ಟ ರಂಗತೇರಿನ ಹಬ್ಬಕ್ಕೆ ಹೋಗಿದ್ದೆ. ಈ ಒಂದು ಆಮಂತ್ರಣದಿಂದ ಸುಮಾರು ನಾಲ್ಕು ನಾಟಕಗಳನ್ನು ನೋಡುವ ಪುಣ್ಯ ನನಗೆ ಸಿಕ್ಕಿತ್ತು. ನಾಟಕದ ಕಥಾವಸ್ತು, ಸೃಜನಶೀಲ ನಿರ್ದೇಶನ, ಪಾತ್ರವರ್ಗದವರ ಮನಮುಟ್ಟುವಂತಹ ಅಭಿನಯ ನಿಜವಾಗಲೂ ನನ್ನನ್ನು ಮಂತ್ರಮುಗ್ಧನಾಗಿಸಿತು. ಒಂದು “ಹೌಡಿ ಮೋದಿ” ಎಂಬ ಪ್ರಾಯೋಜಿತ ನಾಟಕವು ಅಮೇರಿಕ ಎಂಬ ದೂರದ ಊರಿನಲ್ಲಿ ನಡೆಯುತ್ತಿದ್ದರೆ, ಯಾವುದೇ ಸದ್ದು ಗದ್ದಲಗಳಿಲ್ಲದೆ ಕೆಲ ಹಿತೈಷಿಗಳ ಅಭಿಮಾನ ಮತ್ತು ರಂಗಪ್ರೇಮದಿಂದ ಈ ನಾಟಕಗಳು ನಮ್ಮ ಕಾಲೇಜು ಕ್ಯಾಂಪಸ್‌ನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡವು. ಎಲ್ಲವೂ ಚೆನ್ನಾಗಿದೆ ಎಂದು ಹೇಳಿ ಸೇರಿದ ಜನಸ್ತೋಮದಿಂದ ಬಿಟ್ಟಿ ಚಪ್ಪಾಳೆ ಗಿಟ್ಟಿಸಿಕೊಂಡರೆ, ಇನ್ನೊಂದು ಕಡೆ ಎಲ್ಲವೂ ಸರಿಯಿಲ್ಲ ಎಂದು ಹೇಳುವ ಮನೋಜ್ಞ ನಾಟಕಗಳು ನನ್ನ ಮತ್ತು ಇತರ ಸಹೃದಯಿ ರಂಗಪ್ರೇಮಿಗಳ ಸಾಮಾಜಿಕ ಅರಿವನ್ನು ಅಥವಾ ಪ್ರಜ್ಞೆಯನ್ನು ವಿಸ್ತರಿಸಿದವು. ಕೆಳಸ್ತರದ ಜನರ ನೋವು ಸಂಕಟಗಳನ್ನು ನಮ್ಮ ಎದೆಗಳಿಗೆ ದಾಟಿಸುವಲ್ಲಿ ಈ ನಾಟಕಗಳು ಸಫಲವಾದವು. ಈ ನಾಟಕಗಳಲ್ಲಿ ಕಂಡು ಬಂದ ವೃತ್ತಿಪರತೆ, ಸೃಜನಶೀಲತೆ, ಅದ್ಭುತ ಕಥಾವಸ್ತು ಮತ್ತು ನಟನೆ ಒಂದೊಂದು ನಾಟಕಕ್ಕೂ ನೂರಕ್ಕೆ ನೂರು ಅಂಕಗಳನ್ನು ನೀಡುವಂತೆ ಮಾಡಿದವು.
“ಗೌರ್ಮೆಂಟ್ ಬ್ರಾಹ್ಮಣ”
ಈ ರಂಗತೇರಿನ ಹಬ್ಬ ಉದ್ಘಾಟನೆಗೊಂಡಿದ್ದು ‘ಗೌರ್ಮೆಂಟ್ ಬ್ರಾಹ್ಮಣ’ ಎಂಬ ನಾಟಕದಿಂದ. ಪ್ರೊ ಅರವಿಂದ ಮಾಲಗತ್ತಿರವರ ಆತ್ಮಕಥೆಯ ಕೆಲವು ಘಟನೆಗಳನ್ನು ಪೋಣಿಸಿ ನಾಟಕ ಹೆಣೆಯಲಾಗಿದೆ. ಈ ನಾಟಕದ ನಿರ್ದೇಶನ ಹಾಗೂ ಪರಿಕಲ್ಪನೆ ಡಾ.ಎಂ.ಗಣೇಶ ಅವರದ್ದು. ಓದುವ ಮುನ್ನ ಓದುಗರೊಂದಿಗೆ, ಹೆಣದ ಮೇಲಿನ ದುಡ್ಡು ಮತ್ತು ಮದುವೆ ಊಟ, ನಾಳಿನ ಕಸದ ಪಾಳಿ ಮಾಲಕತ್ತಿ, ಬೆದೆಗೆ ಬಿದ್ದ ಎಮ್ಮೆ ಓಡಿ ಬಂದ ಕೋಣ, ನನ್ನ ಕೇರಿ ನನ್ನ ಓದು, ಗೌರ್ಮೆಂಟ್ ಬ್ರಾಹ್ಮಣನ ರಾಘವೇಂದ್ರ ಭಕ್ತಿ, ನನ್ನ ಮಾಜಿ ಪ್ರೇಯಸಿ, ಓಕುಳಿ ಎಂಬ ಈಸ್ಟ್‌ಮನ್ ಕಲರ್ ಚಿತ್ರ ಇವು ನಾಟಕದಲ್ಲಿ ಸಂಕಲನಗೊಂಡ ಘಟನೆಗಳು. ಮಾಲಗತ್ತಿಯವರು ತಮ್ಮ ಬಾಲ್ಯದಿಂದ ಇತ್ತೀಚೀನವರೆಗೂ ಅನುಭವಿಸಿದ ಜಾತಿ ಆಧಾರಿತ ನೋವುಗಳನ್ನು ಅಭಿನಯ ರೂಪದಲ್ಲಿ ಕಟ್ಟಿಕೊಟ್ಟ ಗಣೇಶರವರ ಕೈಚಳಕ ನಾಟಕದ ಪತಿಯೊಂದು ದೃಶ್ಯದಲ್ಲಿ ಕಾಣಬಹುದಾಗಿದೆ. ನಿರ್ದೇಶಕರು ತನ್ನಗಿಷ್ಟದ ಈ ಕೃತಿಯನ್ನು, ಕೃತಿಯ ಹಲವು ಮಗ್ಗಲುಗಳನ್ನು, ರಂಗದ ಮೇಲೆ ಅದನ್ನು ಕಥನ ಮಾದರಿಯಲ್ಲಿ ಪ್ರಯೋಗಿಸಬೇಕೆನ್ನುವ ಹಲವು ದಿನಗಳ ಬಯಕೆಯನ್ನು ಈಡೇರಿಸಿಕೊಂಡಿದ್ದು ಮಾತ್ರವಲ್ಲ ಕೃತಿಗೆ ಸೃಜನಾತ್ಮಕತೆಯಿಂದ ಜೀವಕೊಟ್ಟಿದ್ದಾರೆ. ಇಡೀ ರಾತ್ರಿ ನೋಡುವ ಬಹೃತ್ ನಾಟಕದ ಸೃಷ್ಟಿಗೆ ಸಿಗುವಷ್ಟು ಸರಕು ಈ ಕೃತಿಯಲ್ಲಿದ್ದರೂ, ಪ್ರೇಕ್ಷಕರ ಅನುಕೂಲಕ್ಕಾಗಿ ನಾಟಕವನ್ನು ಎರಡು ಗಂಟೆಗಳಿಗೆ ಸೀಮಿತಗೊಳಿಸಿದ್ದಾರೆ. ಅವರು ಹೇಳುವಂತೆ “ಆತ್ಮಕಥೆಗಳಲ್ಲಿ ಒಬ್ಬನೇ ಲೇಖಕ ತನ್ನ ಅನುಭವಗಳನ್ನು ಮಾತ್ರ ಬರೆಯುತ್ತಾನೆ ಎನ್ನುವುದು ಸರಿಯೇ ಆದರೂ ಅದು ಅರ್ಧ ಸತ್ಯ ಮಾತ್ರ. ನನಗೆ ತಿಳಿದಂತೆ ಆತ್ಮಕಥೆಗಳು ಸಮುದಾಯದ ಕಥೆಗಳು. ಈ ಹಿನ್ನೆಲೆಯಲ್ಲಿ ಗೌರ್ಮೆಂಟ್ ಬ್ರಾಹ್ಮಣ ಅರವಿಂದ ಮಾಲಗತ್ತಿಯವರ ಮೂಲಕ ರೂಪುಗೊಂಡಿರುವ ದೇಶಕಾಲ - ಪ್ರಜ್ಞೆ ಪರಿಸರಗಳಾಚೆಗೂ ವಿಸ್ತರಿಸಿಕೊಂಡಿರುವ ಸಮುದಾಯವೊಂದರ ಕಥೆ. ಆದ್ದರಿಂದಲೇ ‘ಗೌರ್ಮೆಂಟ್ ಬ್ರಾಹ್ಮಣ’ ಕೃತಿಯ ಪುಟಗಳಲ್ಲಿ ಸಮುದಾಯದ ಅನಿಸಿಕೆಗಳು ದಾಖಲಾಗಿದೆ."
ಗೌರ್ಮೆಂಟ್ ಬ್ರಾಹ್ಮಣ ನಾಟಕ ತೆರೆದುಕೊಳ್ಳುವುದು ಓದುವ ಮುನ್ನ ಓದುಗರೊಂದಿಗೆ ಎಂಬ ದೃಶ್ಯದಿಂದ. “ನಾನು ಮೊದಲೇ ಸ್ಪಷ್ಟ ಮಾಡಬಯಸುವ ವಿಷಯವೆಂದರೆ ನನ್ನ ಆತ್ಮಕಥೆಯ ಕೆಲವು ಪುಟಗಳನ್ನು ನಿಮ್ಮ ಮುಂದಿಟ್ಟು, ನಾನೊಬ್ಬ ಮಹಾತ್ಮ ಎಂದು ಕರೆಸಿಕೊಳ್ಳುವ ಭ್ರಮೆ ನನಗಿಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ. ಹೀಗೆಂದ ಮಾತ್ರಕ್ಕೆ ಇಲ್ಲಿ ಅನುಭವಗಳೂ ಒಬ್ಬ ಸಾಮಾನ್ಯ ಮನುಷ್ಯನ ಅನುಭವಗಳೇ ಆಗಿವೆ ಎನ್ನುವ ಮಾತನ್ನು ಹೇಳಲಾರೆ. ಆದರೆ ಸಾಮಾನ್ಯ ದಲಿತನೊಬ್ಬನ ಅನುಭವಗಳಾಗಿವೆ ಎನ್ನುವುದನ್ನು ಹೇಳದಿರಲಾರೆ. ಒಬ್ಬ ದಲಿತನಿಗೆ ಇರಬಹುದಾದ ಎಲ್ಲ ಆಸೆ-ಆಕಾಂಕ್ಷೆಗಳು, ಅರೆ ಕೊರೆಗಳು ನನ್ನಲ್ಲಿವೆ. ಹಾಗೆಯೇ ಒಬ್ಬ ಸಾಮಾನ್ಯ ಮನುಷ್ಯನಿಗೆ ಇರಬಹುದಾದವು ಕೂಡಾ ನನ್ನಲ್ಲಿವೆ. ಆದರೆ ಅಳೆದು ಹೇಳಲು ಯಾವ ಮಾನದಂಡವೂ ಸಾಲದೂ. ಹೀಗೆಂದು ಕೈಚೆಲ್ಲಿ ಕೂಡುವುದು ನನ್ನ ಉದ್ದೇಶವಲ್ಲ. ಆದ್ದರಿಂದ ನನ್ನ ಬದುಕನ್ನು ನಾನೇ ಓದ ಬಯಸುತ್ತೇನೆ ಮತ್ತು ಮೊದಲ ಓದುಗನೂ ನಾನೇ ಆಗ ಬಯಸುತ್ತೇನೆ.” ಈ ಮಾತುಗಳು ಲೇಖಕರ ಆಶಯವನ್ನು ಸ್ಪಷ್ಟಪಡಿಸುತ್ತಾ ನಾಟಕಕ್ಕೆ ಚಾಲನೆ ಕೊಡುತ್ತದೆ.
ಹೀಗೆ ನಾಟಕದ ಪ್ರತಿಯೊಂದು ದೃಶ್ಯವೂ ದಲಿತರು ಅನುಭವಿಸುವ ಅವಮಾನ, ಅಪಮಾನ, ಹಿಂಸೆ, ನೋವು, ದೌರ್ಜನ್ಯಗಳನ್ನು ಎಳೆ ಎಳೆಯಾಗಿ ಮಾಲಗತ್ತಿ ಜೀವನ ಕಥೆಯನ್ನು ಹೇಳುತ್ತಲೇ ತೆರೆದಿಡುತ್ತದೆ. ಆದ್ದರಿಂದಲೇ ಇದನ್ನು ಒಂದು ಸಮುದಾಯದ ಕಥೆಯೆಂದೇ ಧೈರ್ಯವಾಗಿ ಹೇಳಬಹುದು. “ಹೌದು, ಇದೆಲ್ಲ ಐವತ್ತು ವರ್ಷದ ಕತೆಯಾಯಿತು ಆಗ ಆ ಸಮುದಾಯದವರು ಶೋಷಣೆಗೆ ಒಳಗಾಗಿದ್ದು ನಿಜ. ಆದರೀಗ ಸ್ಥಿತಿ ಬದಲಾಗಿದೆ, ಅವರೇ ನಮ್ಮನ್ನು ಶೋಷಿಸುತ್ತಿದ್ದಾರೆ” ಎಂಬಂಥ ಈರ್ಷ್ಯೆಯ ಮಾತುಗಳನ್ನು ನಾವು ಆಡಬಾರದು. ಕೆಲವು ದಿನಗಳ ಹಿಂದೆಯಷ್ಟೆ ಮಧ್ಯಪ್ರದೇಶದಲ್ಲಿ ಇಬ್ಬರು ದಲಿತ ಮಕ್ಕಳನ್ನು ಥಳಿಸಿ ಕೊಲ್ಲಲಾಯಿತು. ಬಯಲಲ್ಲಿ ಶೌಚ ಮಾಡಿದ್ದನ್ನು ನೆಪವಾಗಿಸಿಕೊಂಡು ಈ ಮಕ್ಕಳನ್ನು ಹತ್ಯೆ ಮಾಡಲಾಗಿದೆ. ಹೀಗೆ ಎಷ್ಟೋ ದಲಿತರ ಮೇಲಿನ ದೌರ್ಜನ್ಯಗಳು ರಾಜಾರೋಷವಾಗಿ ನಡೆಯುತ್ತಿದೆ. ಈ ಒಂದು ಹಿನ್ನೆಲೆಯಲ್ಲಿ ಗೌರ್ಮೆಂಟ್ ಬ್ರಾಹ್ಮಣ ಎಂಬ ನಾಟಕವು ತುಂಬಾ ಪ್ರಸ್ತುತವೆನ್ನಿಸುತ್ತದೆ.
ಇದಕ್ಕೆ ಕೊನೆ ಎಂದು?
ನಾಟಕೋತ್ಸವದ ಎರಡನೇ ದಿನದಂದು ರೈತರ ಸರಣಿ ಆತ್ಮಹತ್ಯೆಗಳ ಕಥನ; ಇದಕ್ಕೆ ಕೊನೆ ಎಂದು? ಎಂಬ ನಾಟಕದ ಪ್ರದರ್ಶನ ನಡೆಯಿತು. ಜಾರ್ಯ ಮೈಸ್ನಾಂ ಮಣಿಪುರ ಪರಿಕಲ್ಪನೆ ಹಾಗೂ ನಿರ್ದೇಶನದ ಈ ನಾಟಕ ಮಾತಿಲ್ಲದ ನಾಟಕ. ಸಾಲದಲ್ಲಿ ಹುಟ್ಟಿ ಸಾಲದಲ್ಲೇ ಸಾಯುತ್ತಾನೆ ಎಂಬ ಮಾತು ಈ ಭೂಮಿಯ ಮೇಲೆ ಬದುಕುತ್ತಿರುವ ಭಾರತೀಯ ರೈತನಿಗಲ್ಲದೇ ಇನ್ಯಾರಿಗೆ ಅನ್ವಯಿಸೀತು ? ನಮ್ಮ ರೈತರನ್ನು ಆಡಳಿತ ವ್ಯವಸ್ಥೆ ವ್ಯವಸ್ಥಿತವಾಗಿ ಇನ್ನಿಲ್ಲದಂತೆ ಕಾಡುತ್ತ ಬಂದಿದೆ. ಅವನ ಅರಿವಿಗೆ ಬರದೆಯೇ ಅವನನ್ನು ಸುತ್ತುವರಿಯುವ ಸಾಲದ ಸುಳಿ, ಅದರಿಂದ ಅವನು ಹೊರಬರಲಾಗದೇ ಒದ್ದಾಡುವ ಪರಿ, ಅವನೊಡನೆ ಕಣ್ಣಾಮುಚ್ಚಾಲೆಯಾಡುವ ಮಳೆ, ಮುನಿಸಿಕೊಳ್ಳುವ ಇಳೆ, ಮುರುಟಿ ಹೋಗುವ ಬೆಳೆ, ಒಂದೇ ಎರಡೇ? ಕೊನೆಗೆ ಉಣ್ಣಲೂ ಗತಿ ಇಲ್ಲದೇ ಹತಾಶೆ ಮತ್ತು ಅಸಹಾಯಕತೆಯಿಂದ ಸುಂದರ ಬದುಕನ್ನು ಕೊನೆಯಾಗಿಸಿಕೊಳ್ಳುತ್ತಾನೆ ನಮ್ಮ ರೈತ ಎಂಬುದೇ ಈ ನಾಟಕದ ಸಾರಾಂಶ.
ಹೌದು ಭಾರತದಲ್ಲಿ ರೈತರ ಆತ್ಮಹತ್ಯೆಗಳ ಸಂಖ್ಯೆ ಒಂದು ಲಕ್ಷಕ್ಕೂ ಅಧಿಕ ದಾಟಿದೆ. ಈ ರೈತರ ಆತ್ಮಹತ್ಯೆಯಂತಹ ಕಟು ಸತ್ಯದ ಭೀಕರತೆಯನ್ನು ಅಸಂಗತ ಘಟನಾವಳಿಗಳ ಮೂಲಕ ಉತ್ಕಟ ಭಾವಾಭಿನಯದೊಂದಿಗೆ ಅಭಿನಯಿಸಿದ ಶಿವಮೊಗ್ಗ ರಂಗಾಯಣದ ರಂಗತೇರು ಕಲಾವಿದರು ನಿಜವಾಗಲೂ ಅಭಿನಂದಾರ್ಹರು. ನಿರ್ದೇಶಕ ಜಾಯ್ ಮೈಸ್ನಾಂ ಈ ನಾಟಕದಲ್ಲಿ ಮಾತುಗಳನ್ನೇ ಮುಖ್ಯವಾಗಿಸದೇ ಆಂಗಿಕ ಮತ್ತು ದಟ್ಟ ಭಾವಪೂರ್ಣ ಅಭಿನಯದಿಂದ ವೈಚಾರಿಕ ಚಿಂತನೆಯನ್ನು ಪ್ರಚೋದಿಸುವ ಮೂಲಕ ನಾಟಕಾನುಭವ ದಕ್ಕುವಂತೆ ಮಾಡಿದ್ದಾರೆ.
ಟ್ರಾನ್ಸ್ ನೇಷನ್
ನಿತ್ಯದ ಆಗುಹೋಗು, ಘಟನಾವಳಿಗಳು, ಸನ್ನಿವೇಶಗಳನ್ನೊಳಗೊಂಡ ಅನುಕರಣೀಯ ಅನಾವರಣ, ಪಿತೃ ಪ್ರಧಾನ ಸಮಾಜ ಮತ್ತು ರಾಜಕೀಯ ಸನ್ನಿವೇಶಗಳ ಕೊಲಾಜ್‌ನಂತಿದೆ ಟ್ರಾನ್ಸ್‌ನೇಷನ್ ನಾಟಕ. ನಾಟಕದ ಪರಿಕಲ್ಪನೆ, ನಿರ್ದೇಶನ ಸವಿತರಾಣಿಯವರದು. ಡಿವೈಸ್ಡ್ ಪ್ಲೇ ಪ್ರಕಾರಕ್ಕೆ ಸೇರಿಕೊಳ್ಳುವ ಈ ನಾಟಕ, ನಾಟಕದ ಸಾಂಪ್ರದಾಯಿಕ ಚೌಕಟ್ಟನ್ನು ಮೀರುತ್ತದೆ. ನಿರ್ದಿಷ್ಟವಾಗಿ ಯಾವುದೇ ಮಾನದಂಡಗಳಿಲ್ಲದ, ಕೆಲವೊಮ್ಮೆ ನಾಟಕ ಕೃತಿಯ ಹಂಗಿಲ್ಲದೇ ಪ್ರದರ್ಶನಗಳನ್ನು ಮುರಿದು ಕಟ್ಟುವಿಕೆಯ ಸಮೂಹಿಕ ಪ್ರಕ್ರಿಯೆಯೇ ಡಿವೈಸ್ಡ್ ಪ್ಲೇ. ಎಷ್ಟೆಲ್ಲಾ ಜಾಗೃತೆಯ ನಡುವೆಯೂ ಹೆಣ್ಣು ಏಕೆ ಮತ್ತೆ ಮತ್ತೆ ಶೋಷಣೆಗೊಳಗಾಗುತ್ತಾಳೆ ಎಂಬುವುದೇ ನಾಟಕದ ತಿರುಳು. ಒಟ್ಟಾರೆ ಪೇಕ್ಷಕರಿಗೆ ವಿಭಿನ್ನ ಅನುಭವ ನೀಡುವ ನಾಟಕವಿದು.
ನಾಟಕ ಆರಂಭವಾಗುವುದು ವಿಧಾನಮಂಡಲದ ಅಧಿವೇಶನದ ದೃಶ್ಯದಿಂದ. ಜನಪ್ರತಿನಿದಿಗಳು ಹೆಣ್ಣಿನ ಉಡುಗೆ ತೊಡುಗೆ ಬಗ್ಗೆ ಚರ್ಚಿಸುವ ವಾದ ವಿವಾದಗಳು ನಿಜವಾಗಲೂ ನಮ್ಮ ರಾಜಕಾರಣಿಗಳ ಅಸಹ್ಯ ಮನಸ್ಥಿತಿಯನ್ನು ತೋರಿಸುತ್ತದೆ. ಪೇಕ್ಷಕರ ನಡುವೆ ಕುಳಿತುಕೊಂಡು ಅಭಿನಯಿಸುವ ತಂತ್ರ, ನೆರೆದ ಇಡೀ ಪೇಕ್ಷಕ ವರ್ಗವನ್ನೇ ನಾಟಕದ ಪಾತ್ರದಾರಿಗಳಾಗಿ ಮಾಡಿಕೊಳ್ಳುತ್ತದೆ. ಇದರ ನಂತರ ಬರುವ ದೃಶ್ಯವು ಕೂಡ ತುಂಬಾ ಮನೋಜ್ಞವಾದುದ್ದು. ದೌರ್ಜನ್ಯಕ್ಕೆ ಒಳಗಾಗಿ ಸಹಾಯ ಬೇಡಿ ಹತಾಶೆಯಿಂದ ಬಿದ್ದ ಹೆಣ್ಣು ಮಗಳ ಮುಂದೆ ಮಹಿಳೆಯರಿಗಾಗಿ ಇರುವ ಹಲವು ಸಹಾಯವಾಣಿ ಸಂಖ್ಯೆಗಳಿರುವ ಬೋರ್ಡ್‌ಗಳನ್ನು ಹಿಡಿದುಕೊಂಡು ಕ್ಯಾಟ್‌ವಾಕ್ ರೀತಿಯಲ್ಲಿ ಪ್ರದರ್ಶಿಸುವುದು, ಸಂವಿಧಾನ ನಮಗೆ ಕೊಡುವ ಹಕ್ಕುಗಳ ಬಗ್ಗೆ ಒಬ್ಬೊಬ್ಬರಾಗಿ ಕೂಗಿ ಹೇಳುತ್ತಾ, ಸಹಾಯ ಬೇಡಿ ಬಿದ್ದ ಮಹಿಳೆಯನ್ನು ನಿರ್ಲಕ್ಷಿಸುವುದು ಏಕೋ ಈ ಎಲ್ಲಾ ದೃಶ್ಯಗಳು ನಮ್ಮ ವ್ಯವಸ್ಥೆಯ ವೈಫಲ್ಯಗಳನ್ನು ತೆರೆದಿಡುವಂತೆ ಕಂಡುಬಂದವು. ಕೊನೆಗೆ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳ ವಿರುದ್ಧ ಕೋರ್ಟಿನಲ್ಲಿ ಸಿಗುವ ಅನ್ಯಾಯದ ತೀರ್ಪುಗಳನ್ನು ಮತ್ತು ಇತರರ ಅಸಹ್ಯ ಹೇಳಿಕೆಗಳನ್ನು ಪ್ರಸ್ತಾಪಿಸುತ್ತಾ ನಾಟಕ ಕೊನೆಗೊಳ್ಳುತ್ತದೆ.
ಕೊನೆಗೆ
ಈ ಮೂರು ನಾಟಕಗಳ ದೃಶ್ಯಗಳು ನನ್ನ ಮನಸ್ಸಿನಲ್ಲಿ ಅಚ್ಚೂತ್ತಿ ಕುಳಿತಿರುವುದು ಮಾತ್ರವಲ್ಲ, ನನ್ನನ್ನು ಗಾಢವಾಗಿ ಘಾಸಿಗೊಳಿಸಿವೆ. ಇವು ಕೇವಲ ನಾಟಕಗಳಾದೆ ಪ್ರಸಕ್ತ ಆಗುಹೋಗುಗಳ ಬಗ್ಗೆ ನನ್ನ ಅರಿವನ್ನು ವಿಸ್ತರಿಸಿದೆ. ಎಲ್ಲವೂ ಚೆನ್ನಾಗಿದೆ ಎಂಬ ಹೇಳಿಕೆಯ ಹಿನ್ನೆಲೆಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಮನಸ್ಸು ಕೂಗಿಕೊಳ್ಳುತ್ತಿದೆ. ನಾವು ವಾಸ್ತವಿಕತೆಯ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿದ್ದೇವೆ, ನಮ್ಮ ಮನಸ್ಸು ಹೃದಯ ಜಡಗಟ್ಟಿವೆ. ನಮ್ಮ ಸಂವೇದನೆಗಳೂ ಮೊಂಡಾಗಿವೆ. ನಮ್ಮ ಆದ್ಯತೆಗಳಲ್ಲಿ ಗೊಂದಲಗಳಿವೆ. ಈ ಕಾರಣದಿಂದಲೇ, ಎಲ್ಲವೂ ಸುಂದರವಾಗಿದೆ ಎಂಬ ಒಣಮಾತಿಗೆ ಚಪ್ಪಾಳೆ ತಟ್ಟುತ್ತೇವೆ, ಒಣ ದೇಶಪ್ರೇಮದ ಬಗ್ಗೆ ಮಾತನಾಡುತ್ತೇವೆ. ದೇಶವೆಂದರೆ ಬಾವುಟವಲ್ಲ, ದೇಶವೆಂದರೆ ಕೇವಲ ಭೂಮಿ ಅಲ್ಲ, ಧರ್ಮವಲ್ಲ, ದೇಶವೆಂದರೆ ಜನರು. ಜನರ ದುಸ್ಥಿತಿಯನ್ನು ನೋಡಿಯೂ ಎಲ್ಲವೂ ಚೆನ್ನಾಗಿದೆ ಎಂದರೆ ಹೇಗೆ ಸಹಿಸಿಕೊಳ್ಳುವುದು? ಹೌದು ರಂಗಭೂಮಿ ಎಂದರೆ ಬಿಡುಗಡೆಯ ಮಾರ್ಗ, ಪ್ರತಿಭಟನೆಯ ಅಸ್ತ್ರ, ಬದುಕಿನ ಪ್ರಯೋಗಾಲಯ ಎಂದು ಹೇಳಲಾಗುತ್ತದೆ. ನನ್ನ ಪ್ರಕಾರ ರಂಗಭೂಮಿಯೆಂದರೆ ಸಾಮಾಜಿಕ ವಿಮರ್ಶೆಯ ವರದಿ. ಮೂರು ನಾಟಕಗಳ ಮೂಲಕ ಸಾಮಾಜಿಕ ವಿಮರ್ಶೆಯ ವರದಿಯನ್ನು ಓದಿದ ಮೇಲೆ ಎಲ್ಲವೂ ಚೆನ್ನಾಗಿದೆ ಎಂದು ಹೇಳಲು ಕಷ್ಟವಾಗುತ್ತಿದೆ. ದಯವಿಟ್ಟು ಕ್ಷಮಿಸಿ.
********************
No comments:
Post a Comment