ಕರುಣಾಳು ಬಾ ಬೆಳಕೆ
ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸನ್ನನು,
ಇರುಳು ಕತ್ತಲೆಯ ಗವಿಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು.
ಹೇಳಿ ನನ್ನಡಿಯಿಡಿಸು ಬಲುದೂರ ನೋಟವನು
ಕೇಳಿದೊಡನೆಯೇ ಸಾಕು ನನಗೊಂದು ಹೆಜ್ಜೆ,
ಮುನ್ನಇಂತಿರದಾದೆ ನಿನ್ನ ಬೇಡದೇ ಹೋದೆ
ಕೈ ಹಿಡಿದು ನಡೆಸು ಎನುತ
ನನ್ನದಾರಿಯ ನಾನೇ ನೋಡಿ ಹಿಡಿದೆನು, ಇನ್ನು
ಕೈ ಹಿಡಿದು ನಡೆಸು ನೀನು,
ಮಿರುಗು ಬಣ್ಣಕೆ ಬೆರೆತು ಭಯ ಮರೆತು ಕೊಬ್ಬಿದೆನು
ಮೆರೆದಾಯ್ತು ನೆನೆಯದಿರು ಹಿಂದಿನದೆಲ್ಲ.
ಇಷ್ಟು ದಿನ ಸಲಹಿರುವೆ ಮೂರ್ಖನನು ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ?
ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು
ಇರುಳನ್ನು ನೂಕದಿಹೆಯಾ?
ಬೆಳಗಾಗ ಹೊಳೆಯದಡ ಒಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡ ದಿವ್ಯಮುಖ ನಗುತ.
ಇದು ಗಾಂಧೀಜಿ ಅವರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬುತ್ತಿದ್ದ ಕವನ. ಈ ಕವನ ಮೂಲದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಇದ್ದ ಕವನ. ಅದನ್ನು ಪಾದ್ರಿ ಜಾನ್ ಹೆನ್ರಿ ನ್ಯೂಮನ್ (1801-1890) ಅವರು ರಚಿಸಿದ್ದಾರೆ. ಅವರು `ಲೀಡ್ ಕೈಂಡ್ಲಿ ಲೈಟ್' ಹೆಸರಿನಲ್ಲಿ ರಚಿಸಿದ್ದ ಈ ಕವನವನ್ನು ಕನ್ನಡದ ಖ್ಯಾತ ಸಾಹಿತಿ ಬಿ.ಎಂ.ಶ್ರೀಕಂಠಯ್ಯ (1884-1946) ಅವರು `ಕರುಣಾಳು ಬಾ ಬೆಳಕೆ' ಹೆಸರಲ್ಲಿ ಕನ್ನಡಕ್ಕೆ ಅನುವಾದಿಸಿರುವರು.
ಬಿ.ಎಂ.ಶ್ರೀ. ಅವರು, ಕಳೆದ ಶತಮಾನದ ಮೊದಲ ಭಾಗದ ಉತ್ತರಾರ್ಧದಲ್ಲಿ, ಹೊಸಗನ್ನಡದ ಅರುಣೋದಯದ ಕಾಲದಲ್ಲಿ ಕನ್ನಡದ ತೇರನ್ನು ಎಳೆಯುತ್ತಿದ್ದ, ಕನ್ನಡ ಸಾಹಿತ್ಯದ ಆದ್ಯ ಪ್ರವರ್ತಕರಲ್ಲೊಬ್ಬರು.
ಕನ್ನಡದ ಪ್ರಸಿದ್ಧ ಸಾಹಿತಿಗಳಾದ ಕುವೆಂಪು, ಜಿ.ಪಿ.ರಾಜರತ್ನಂ, ತೀ.ನಂ.ಶ್ರೀ ಮತ್ತು ಡಿ.ಎಲ್.ನರಸಿಂಹಾಚಾರ್ಯ ಮೊದಲಾದ ದಿಗ್ಗಜರು ಬಿ.ಎಂ.ಶ್ರೀ ಅವರ ಶಿಷ್ಯ ಬಳಗದ ಸದಸ್ಯರು. ಬಿ.ಎಂ.ಶ್ರೀ ಅವರನ್ನು ಕನ್ನಡದ ಸಾಹಿತ್ಯ ವಲಯದಲ್ಲಿ `ಕನ್ನಡದಕಣ್ವ' ಎಂದೇ ಗುರುತಿಸಲಾಗುತ್ತದೆ. ಬಿ.ಎಂ.ಶ್ರೀ ಅವರು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿದ `ಕರುಣಾಳು ಬಾ ಬೆಳಕೆ' ಕವನ ಕನ್ನಡದ ಸಾಹಿತ್ಯದಲ್ಲಿನ ಒಂದು ಕಾಲಘಟ್ಟದ ಪ್ರಮುಖ ಕವನ ಎಂದೇ ಗುರುತಿಸಲಾಗುತ್ತಿದೆ.
ಒಂದು ಕಾಲದಲಿ, ಅದು ಕನ್ನಡ ಮೂಲದ ಕವನ ಎಂಬಷ್ಟು ಬಗೆಯಲ್ಲಿ ಜನಮಾನಸದಲ್ಲಿ ನೆಲೆಯೂರಿ ಬಿಟ್ಟಿತ್ತು. ಅಧ್ಯಾಪಕ ಡಾ.ಗುರುರಾಜಕರಜಗಿ ಅವರು, ಪತ್ರಿಕೆಯೊಂದರಲ್ಲಿ ಪ್ರಕಟವಾಗುತ್ತಿದ್ದ ನೀತಿ ಬೋಧಕ ಬರಹಗಳ ಅಂಕಣಮಾಲೆಗೆ `ಕರುಣಾಳು ಬಾ ಬೆಳಕೆ' ಎಂದು ಹೆಸರಿಸಿದ್ದರು. ಅದೇ ಹೆಸರಿನ ಆ ಲೇಖನಗಳ ಸರಣಿ ಸಂಗ್ರಹದ ಗುಚ್ಛಗಳ ಪುಸ್ತಕಗಳು, ಅದೇ ಶೀರ್ಷಿಕೆಯಲ್ಲಿ ಹಲವಾರು ಮುದ್ರಣಗಳನ್ನು ಕಂಡಿವೆ. ಈ ಬಗೆಯ ಅಂಕಣ ಪುಸ್ತಕದ ಪ್ರಸಿದ್ಧಿಯ ದೆಸೆಯಿಂದ ಸಾಮಾನ್ಯ ಜನರಿಗೆ, `ಕರುಣಾಳು ಬಾ ಬೆಳಕೆ' ಎಂಬುದು ಅನುವಾದವಾದ ಇಂಗ್ಲಿಷ್ ಕವನದ ಶೀರ್ಷಿಕೆ. ಅದನ್ನು ಅನುವಾದಿಸಿದವರು ಬಿ.ಎಂ.ಶ್ರೀ ಅವರು ಎಂಬ ಮಾಹಿತಿ ಗಮನಕ್ಕೆ ಬಾರದ ಸ್ಥಿತಿ ಉಂಟಾಗಿದೆ.
ಯಾರು ಈ ಹೆನ್ರಿ ನ್ಯೂಮನ್?
ಪಾದ್ರಿ ಜಾನ್ ಹೆನ್ರಿ ನ್ಯೂಮನ್ ಅವರನ್ನು ಕಾರ್ಡಿನಲ್ ನ್ಯೂಮನ್ ಮತ್ತು ಆಶೀರ್ವದಿತ ಜಾನ್ ಹೆನ್ರಿ ನ್ಯೂಮನ್ ಎಂದೂ ಕರೆಯಲಾಗುತ್ತದೆ. ಹತ್ತೊಂಬತ್ತನೇ ಶತಮಾನದ ಒಬ್ಬ ಮೇಧಾವಿ ವ್ಯಕ್ತಿಯಾಗಿದ್ದ ಅವರು, ಮೂಲತಃ ಕ್ರೈಸ್ತರ ಪಂಗಡವಾದ ಪ್ರೊಟೆಸ್ಟಂಟ್ ಪಂಥದ ಇಂಗ್ಲೆಂಡಿನ ಆಂಗ್ಲಿಕನ್ ಸಭೆಗೆ ಸೇರಿದವರು. ಅವರು ನಂತರ ವಿಶ್ವವ್ಯಾಪಿ ಮೂಲ ಕ್ರೈಸ್ತ ಸಭೆ `ಕಥೋಲಿಕ ಧರ್ಮಸಭೆ'ಗೆ ಸೇರ್ಪಡೆಗೊಳ್ಳುತ್ತಾರೆ.
ಅಪಾರ ದೈವಶಾಸ್ತ್ರೀಯ ವಿದ್ವತ್ತು ಹೊಂದಿದ್ದ ಅವರು ಬರಹಗಾರ, ಸಾಹಿತಿ ಮತ್ತು ಶ್ರೇಷ್ಠ ಪ್ರಭೋಧಕ ವಾಗ್ಮಿಯೂ ಆಗಿದ್ದರು.
ಒಮ್ಮೆ 1833ರಲ್ಲಿ ನ್ಯೂಮನ್ ಅವರು ತೀವ್ರ ಅಸ್ವಸ್ಥರಾಗಿ ಹಾಸಿಗೆ ಹಿಡಿದಿದ್ದರು. ಆಗ, ಅವರಿಂದ ಯಾವ ಕೆಲಸವೂ ಸಾಗುತ್ತಿರಲಿಲ್ಲ. ಅಧೈರ್ಯಗೊಂಡಿದ್ದ ಅವರು, ಆಗ ದೈನ್ಯ ಭಾವದಲ್ಲಿ ದೇವರಲ್ಲಿ ಮೊರೆಯಿಡುತ್ತಾರೆ. `ಕರುಣಾಳು ದೇವರೆ, ಕೈ ಹಿಡಿದು ಮುನ್ನೆಡೆಸು' ಎಂದು ಕೋರಿಕೊಳ್ಳುತ್ತಾರೆ.
`ಕರುಣಾಳು ಬಾ ಬೆಳಕೆ' (ಲೀಡ್ ಕೈಂಡ್ಲಿ ಲೈಟ್) ಹೆಸರಲ್ಲಿ ಕವನದ ಚರಣಗಳನ್ನು ಬರೆಯುತ್ತಾ ಹೋದಂತೆ ಅವರಲ್ಲಿ ಕುಂದಿದ್ದ ವಿಶ್ವಾಸ ಮತ್ತೆ ಗಟ್ಟಿಗೊಳ್ಳುತ್ತಾ ಸಾಗುತ್ತದೆ. ಇದರಲ್ಲಿ ಬೆಳಕು ಎಂದರೆ ಭೌತಿಕ ವಸ್ತುವಲ್ಲ. ಅದು ಸರ್ವಶಕ್ತ ಸರ್ವೇಶ್ವರ - ಭಗವಂತ. ತಮ್ಮನ್ನು ಇಡಿಯಾಗಿ ಭಗವಂತ (ದೇವರು) ನಿಗೆ ಸಮರ್ಪಿಸಿಕೊಂಡು, ತುಂಬು ಹೃದಯದಿಂದ ಬೇಡಿಕೊಳ್ಳುವ ಕೋರಿಕೆ ಈ ಕವನ. ಈ ಪ್ರಕ್ರಿಯೆಯಲ್ಲಿ ಮನಸ್ಸು ನಿರಾಳತೆಯನ್ನು ಅನುಭವಿಸುತ್ತದೆ. ಪ್ರತಿಯೊಬ್ಬರಿಗೂ ತಾವು ಮುಂದೆ ಕ್ರಮಿಸಬೇಕಾದ ಹಾದಿ ನಿಚ್ಚಳವಾಗಿ ಗೋಚರಿಸುತ್ತದೆ.
ಅವರು `ಲೀಡ್ ಕೈಂಡ್ಲಿ ಲೈಟ್' ಶೀರ್ಷಿಕೆಯ ಈ ಕವನದ ಮೊದಲಿನ ಶೀರ್ಷಿಕೆ `ದಿ ಪಿಲ್ಲರ್ ಆಫ್ ಕ್ಲೌಡ್' (ಮೋಡಕಂಬ). ಈ `ಲೀಡ್ ಕೈಂಡ್ಲಿ ಲೈಟ್' ಕವನ ತೀವ್ರಗತಿಯಲ್ಲಿ ಜನಮನ್ನಣೆ ಗಳಿಸುತ್ತದೆ. ಅಂತಿಮವಾಗಿ ಅದನ್ನು ಜನ ಪ್ರಾರ್ಥನಾಗೀತೆಯಾಗಿ ಒಪ್ಪಿಕೊಳ್ಳುತ್ತಾರೆ.
ಗಾಂಧಿ ಮತ್ತು ಕರುಣಾಳು ಬಾ ಬೆಳಕೆ
ಗಾಂಧೀಜಿ ಅವರು ಲಂಡನ್ ನಲ್ಲಿ ಬ್ಯಾರಿಸ್ಟರ್ ಪದವಿಗಾಗಿ ಓದುತ್ತಿರುವಾಗ ಪರಿಚಯವಾದ ಪಾದ್ರಿ ಹೆನ್ರಿ ನ್ಯೂಮನ್ ಅವರ `ಲೀಡ್ ಕೈಂಡ್ಲಿ ಲೈಟ್' (ಕರುಣಾಳು ಬಾ ಬೆಳಕೆ) ಪ್ರಾರ್ಥನಾ ಪದ್ಯ, ಅವರ ಜೀವನದ ಹಲವಾರು ದುರ್ಭರ ಪ್ರಸಂಗಗಳಲ್ಲಿ ಧೈರ್ಯ ನೀಡಿ ಅವರನ್ನು ಕೈ ಹಿಡಿದು ಮುಂದೆ ನಡೆಸಿದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ನ್ಯೂಮನ್ನರ ಈ ಪ್ರಾರ್ಥನಾಗೀತೆ, ಅವರು ಮಾನಸಿಕವಾಗಿ ಜರ್ಜರಿತಗೊಂಡಾಗ, ನೋವು, ಸಂಕಟ ಮತ್ತು ಸಂದಿಗ್ಧತೆಗಳ ಸಂದರ್ಭಗಳಲಿ, ಅವರಲ್ಲಿ ಧೈರ್ಯ ತುಂಬಿ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸುತ್ತಿತ್ತು ಎಂದು ಗಾಂಧೀಜಿ ಅವರ ಜೀವನಚರಿತೆಯಲ್ಲಿ ದಾಖಲೆಗೊಂಡಿದೆ.
ದಕ್ಷಿಣ ಆಫ್ರಿಕೆಯಲ್ಲಿನ ಯೌವ್ವನದ ದಿನಗಳಲ್ಲಿನ ಹೋರಾಟಗಳ ಸಂದರ್ಭಗಳಲ್ಲಿ ಅವರಲ್ಲಿ ಧೈರ್ಯ ತುಂಬಿದ್ದ ಈ ಕವನ, ಅವರು ಮುಂದೆ ಆಶ್ರಮಗಳಲ್ಲಿ ಜೀವಿಸತೊಡಗಿದಾಗಲೂ ಅವರೊಂದಿಗೆ ಇತ್ತು. ಆಶ್ರಮಗಳಲ್ಲಿ ಹಲವಾರು ಪ್ರಾರ್ಥನೆಗಳ ಜೊತೆಗೆ ಈ ಕವನವನ್ನೂ ಹಾಡಲಾಗುತ್ತಿತ್ತು.
ಹೆನ್ರಿ ನ್ಯೂಮನ್‌ರಿಗೆ ಸಂತ ಪದವಿ
ಪ್ರಾರ್ಥನಾ ಪದ್ಯ `ಲೀಡ್ ಕೈಂಡ್ಲಿ ಲೈಟ್' ರಚಿಸಿದ ಪಾದ್ರಿ ಹೆನ್ರಿ ನ್ಯೂಮನ್ ಅವರಿಗೆ ಸಂತಪದವಿ ನೀಡಲು ಕಥೋಲಿಕ ಧರ್ಮಸಭೆ, ಅದಕ್ಕೆ ಬೇಕಾದ ಪ್ರಕ್ರಿಯೆಗಳನ್ನು ಆರಂಭಿಸಿ ದಶಕಗಳೇ ಕಳೆದಿವೆ.
ಕಥೋಲಿಕ ಕ್ರೈಸ್ತ ಧರ್ಮದ ಪರಮೋಚ್ಚಗುರು, ನಿಜದ ಅರ್ಥದಲ್ಲಿನ ಜಗದ್ಗುರು, ಆಳುವವರಾದ ಶ್ರೀಮತ್ (ಪೋಪ) ಪಾಪು ಸ್ವಾಮಿ ಫ್ರಾನ್ಸಿಸ್ ಅವರು, ತಮ್ಮ ಅಧಿಕೃತ ನಿವಾಸ ಸ್ಥಳ ರೋಮಾಪುರಿಯಲ್ಲಿನ, ವ್ಯಾಟಿಕನ್ ಪ್ರದೇಶದಲ್ಲಿರುವ ಸಂತ ಪೇತ್ರರ ಪ್ರಧಾನಾಲಯದಲ್ಲಿ ಪ್ರಸಕ್ತ 2019ರ ಸಾಲಿನ ಅಕ್ಟೋಬರ್ 13ರಂದು, ತಿಂಗಳ ಎರಡನೇ ಭಾನುವಾರದಂದು, ಪಾದ್ರಿ ಜಾನ್ ಹೆನ್ರಿ ನ್ಯೂಮನ್ ಜೊತೆಗೆ ಭಾರತದ ಸಿಸ್ಟರ್ ಮರಿಯಂ ಥೆರೆಸಾ, ಇಟಲಿಯ ಸಿಸ್ಟರ್ ಜೋಸ್ಫಿನ್ ವನ್ನಿನಿ, ಬ್ರೆಜಿಲ್ ನ ಸಿಸ್ಟರ್ ಡುಲ್ಸಿ ಲೊಪೆಸ್ ಪೊಂಟೆಸ್ ಮತ್ತು ಸ್ವಿಟ್ಜರಲೆಂಡ್‍ನ ಮಾರ್ಗರಿಟಾ ಬೇಸ್ ಅವರುಗಳಿಗೆ ಸಂತ ಪದವಿಯನ್ನು ಪ್ರಸಾದಿಸಲಿದ್ದಾರೆ.
ಎಫ್. ಎಂ. ಎನ್.
jeevadani2016@gmail.com
No comments:
Post a Comment