Wednesday, 9 October 2019

ಏಳು ಸಲವಲ್ಲ ಏಳೆಪ್ಪತ್ತು ಸಲ ಕ್ಷಮಿಸಬೇಕು”


· ಅನು



ಸಂವಾದ ಶುರುವಾಗುವುದೇ ಒಂದು ಪ್ರಶ್ನೆಯಿಂದ. ಅದು ಶಿಷ್ಯರಲೇ ಪ್ರಮುಖನಾಗಿದ್ದ ಪೇತ್ರನ ಕ್ಷಮಾಪಣೆಯ ಲೆಕ್ಕಚಾರದ ಗೊಂದಲದಲ್ಲಿ ಮೂರ್ತಗೊಂಡ ಪ್ರಶ್ನೆಯಿಂದ. ಅ ಪ್ರಶ್ನೆಗೆ ಉತ್ತರವಾಗಿ ಬಂದಿದ್ದು “ಏಳು ಸಲವಲ್ಲ ಏಳೆಪ್ಪತ್ತು ಸಲ ಕ್ಷಮಿಸಬೇಕು” ಎಂಬ ಕ್ರಿಸ್ತನ ಮಾತು. ಅದನ್ನು ಸ್ಪಷ್ಟಪಡಿಸಲು ಹೇಳಿದ ಒಂದು ಸ್ವಾರಸ್ಯಕರ ಸಾಮತಿ. ಈ ಪ್ರಶ್ನೆಗಳ ಕೆಲಸವೇ ಅದು. ಹೊಸ ಹೊಸ ಅವಿಷ್ಕಾರಗಳಿಗೆ, ಅರ್ಥಗಳ ಹೆರಿಗೆಗಳಿಗೆ ಭೂಮಿಕೆಯಾಗುವಂತೆ ಇಲ್ಲೂ ಶಿಷ್ಯನ ಪ್ರಶ್ನೆಯು ಕ್ಷಮಾಪಣೆಯ ಒಂದು ಗಂಭೀರ ವ್ಯಾಖ್ಯಾನಕ್ಕೆ ಮುನ್ನುಡಿಯಾಗುತ್ತದೆ. “ಸ್ವಾಮಿ ನನ್ನ ವಿರುದ್ಧ ದ್ರೋಹ ಮಾಡುತ್ತಿರುವ ನನ್ನ ಸಹೋದರರನ್ನು ಎಷ್ಟು ಸಲ ಕ್ಷಮಿಸಬೇಕು? ಏಳು ಸಲವೇ?” ಈ ಪ್ರಶ್ನೆಗೆ ಉತ್ತರವಾಗಿ ಕ್ಷಮಾಪಣೆ ಎಂಬ ಒಂದು ಸಾಮತಿ ಕ್ರಿಸ್ತನ ಬತ್ತಳಿಕೆಯಿಂದ ಅನಾವರಣಗೊಳ್ಳುತ್ತಾ ಕ್ಷಮಾಪಣೆಯ ಹತ್ತಾರು ಸ್ತರಗಳನ್ನು ಬಿಚ್ಚುತ್ತಾ ಹೋಗುತ್ತದೆ. 

“ಸ್ವಾಮಿ ನನ್ನ ವಿರುದ್ಧ ದ್ರೋಹ ಮಾಡುತ್ತಿರುವ ನನ್ನ ಸಹೋದರರನ್ನು ಎಷ್ಟು ಸಲ ಕ್ಷಮಿಸಬೇಕು? ಏಳು ಸಲವೇ?” ಪೇತ್ರನ ಪ್ರಶ್ನೆಯನ್ನು ಮತ್ತೊಮ್ಮೆ ಓದಿ ನೋಡಿ! ಯೇಸುವಿನ ಉದಾರತೆ ಮತ್ತು ಉನ್ನತ ಮಟ್ಟದ ಮೌಲ್ಯಗಳ ಬಗ್ಗೆ ಅರಿವಿದ್ದ ಪೇತ್ರ ಯೆಹೊದ್ಯ ಗುರುಗಳು ಪ್ರತಿಪಾದಿಸಿದ ’ಮೂರು ಭಾರಿಯ ಕ್ಷಮಾಪಣೆ”ಯನ್ನು ಎರಡರಿಂದ ಗುಣಿಸಿ. ಉತ್ತರಕ್ಕೆ ಮತ್ತೊಂದು ಸೇರಿಸಿ ಏಳು ಸಲವೆಂದು ಉತ್ತರದಲ್ಲೇ ಲೆಕ್ಕದ ಪ್ರಶ್ನೆಯನ್ನು ಕ್ರಿಸ್ತನ ಮುಂದಿಡುತ್ತಾನೆ, ಇಲ್ಲಿ ಪೇತ್ರನಿಗೆ ತಪ್ಪು ಮಾಡಿದವರನ್ನು ಕ್ಷಮಿಸಬೇಕೆಂಬ ಅರಿವಿನ ಬಗ್ಗೆ ಎಳ್ಳಷ್ಟೂ ಸಂಶಯವಿರಲಿಲ್ಲ, ಅವನಿಗೆ ಸಮಸ್ಯೆಯಾಗಿ ಕಾಡಿದ್ದು ಕ್ಷಮಿಸುವುದು ಎಷ್ಟು ಸಲ ಎಂಬ ಲೆಕ್ಕಚಾರ. ಪ್ರೇತ್ರನ ಈ ಗೊಂದಲಕ್ಕೆ ಕಾರಣಗಳೇನಿರಬಹುದು? 

ಲೆಕ್ಕಚಾರವೆಂಬುದು ಯೆಹೊದ್ಯರ ಬದುಕಿನಲ್ಲಿ ಅದರಲ್ಲೂ ಅವರ ಧಾರ್ಮಿಕತೆಯಲ್ಲಿ ಹಾಸುಹೊಕ್ಕಾಗಿತ್ತು. ದಿನಕ್ಕೆ ಎಷ್ಟುಸಲ ಪ್ರಾರ್ಥಿಸಬೇಕು? ಊಟದ ಮುಂಚೆ ಎಷ್ಟು ಸಲ ಕೈತೊಳೆದುಕೊಳ್ಳಬೇಕು? ಹೀಗೆ ಅವರಲ್ಲಿ ಪ್ರತಿಯೊಂದಕ್ಕೂ ಲೆಕ್ಕಚಾರವಿರುತಿತ್ತು. ಅವರ ಬದುಕೇ ಲೆಕ್ಕಚಾರವಾಗಿತ್ತು ಎಂದರೆ ಅತಿಶೋಕ್ತಿಯಾಗಲಾರದು. ಇಂತಹ ಅವರ ಒಂದು ಮನೋವ್ಯಾಧಿ ಕ್ಷಮಾಪಣೆ ಎಂಬ ಉದಾತ್ತ ಗುಣವನ್ನು ಸಹ ಬೆಂಬಿಡದೆ ಕಾಡುವುದನ್ನು ನಾವು ಇಲ್ಲಿ ಕಾಣುತ್ತೇವೆ. ಹೌದು, ಯೆಹೂದ್ಯರಿಗೆ ಕ್ಷಮಾಪಣೆ ಎಂಬುದು ಮೂರು ಸಲ ಮಾತ್ರ ನೀಡಬಹುದಾಗಿದ್ದ ಒಂದು ವಿಧಿವಿಧಾನವಾಗಿತ್ತು. ಇದು ಧಾರ್ಮಿಕ ಮುಖಂಡರು ಬೋಧಿಸುತ್ತಿದ್ದ: ಒಬ್ಬನು ಇನ್ನೊಬ್ಬನನ್ನು ಮೂರು ಬಾರಿಗಿಂತ ಹೆಚ್ಚು ಸಲ ಕ್ಷಮಿಸಬಾರದು” ಎಂಬ ತತ್ವದ ಬೇರಿನ ಗಿಡವಾಗಿತ್ತು. ಇದೇ ಒಂದು ಸಂಕುಚಿತತೆಯ ತಕ್ಕಡಿಯಲ್ಲಿ ಯೆಹೂದ್ಯರು ಭಗವಂತನ ಕ್ಷಮಾಗುಣವನ್ನು ಅಳೆಯುತ್ತಿದ್ದರು. ಈ ಕಾರಣದಿಂದ ಭಗವಂತ ಕೇವಲ ಮೂರು ಸಲ ಕ್ಷಮಿಸಿ ನಾಲ್ಕನೇಯ ಭಾರಿಗೆ ತಪ್ಪಿಸ್ಥನನ್ನು ಶಿಕ್ಷಿಸುವ ನಿಷ್ಠುರ ನ್ಯಾಯಾಧೀಶ ಎಂಬ ಅಲ್ಪ ಅಭಿಪ್ರಾಯ ಜನರಲ್ಲಿ ಗಾಢವಾಗಿತ್ತು. 

ಇಂತಹ ಹಿನ್ನೆಲೆಯಿಂದ ಬಂದಿದ್ದ ಯೆಹೂದಿ ಪೇತ್ರನಿಗೆ ಕಾಡಿದ್ದು ಈ ಲೆಕ್ಕದ ವಿಚಾರವೇ. ಆದರೆ ಯೇಸು ಅವನ ಲೆಕ್ಕಾಚಾರವನ್ನೆಲ್ಲ ತಲೆಕೆಳಗಾಗಿಸಿ, ಏಳು ಸಲವಲ್ಲ ಏಳೆಪ್ಪತ್ತುಸಲ ಕ್ಷಮಿಸಬೇಕೆಂದು ಹೇಳುತ್ತಾರೆ. ಅದರರ್ಥ ಕ್ಷಮೆಯೆಂಬುದು ಗಣಿತದ ಲೆಕ್ಕವಲ್ಲ, ಅದು ಲೆಕ್ಕ ಇಟ್ಟಷ್ಟೂ ಲೆಕ್ಕಕ್ಕೆ ಸಿಗದ ಅಂತಃಕರಣದ ನಡೆ ಎಂದು. ಆದುದರಿಂದ ಕ್ಷಮಾಪಣೆ ಎಂಬುದು ಲೆಕ್ಕಗಳಿಂದ ಬಂಧಿಸಲ್ಪಡುವಂತದಲ್ಲ. ಅದು ಪ್ರತಿಯೊಬ್ಬ ಆತ್ಮದ ಅಪರಿಮಿತ ಚೈತನ್ಯವಾಗಿರಬೇಕೆಂಬುದೇ ಕ್ರಿಸ್ತನ ಆಶಯ. 

ಇವಿಷ್ಟು ಕ್ಷಮಿಸುವ ಲೆಕ್ಕಚಾರವಾದರ, ಇನ್ನೊಂದು ಕಡೆ, ನಮ್ಮ ಕ್ಷಮೆ ಯಾವ ರೀತಿದಾಗಿರಬೇಕು ಎಂಬುವುದನ್ನು ಸಹ ಕ್ರಿಸ್ತನ ಮಾತುಗಳು ಬಹಿರಂಗಪಡಿಸುತ್ತವೆ. ಬೈಬಲ್‍ನಲ್ಲಿ ಏಳು ಎಂಬುದು, ಸಂಪೂರ್ಣತೆಯನ್ನು ಸಂಕೇತಿಸುವ ಒಂದು ಸಂಖ್ಯೆ. ಆದ್ದರಿಂದ ಯೇಸುವಿನ ಉದಾರತೆಯ ಉತ್ತರದಲ್ಲಿ ಕಾಣಸಿಗುವ ಏಳು, ನಾವು ಸಹ ದೇವರಂತೆ ನಮ್ಮವರನ್ನು ಸಂಪೂರ್ಣವಾಗಿ, ಮನಃಪೂರ್ವಕವಾಗಿ ಯಾವುದೇ ಶರತ್ತುಗಳಿಲ್ಲದೆ ಕ್ಷಮಿಸಬೇಕೆಂಬ ಪೂರ್ಣತೆಯ ರೂಪಕವಾಗಿದೆ. ಇಲ್ಲಿ ಎಷ್ಟು ಬಾರಿ ಕ್ಷಮಿಸಿದ್ದೇನೆ ಎಂಬುವುದರ ಜತೆಗೆ ನಿರಂತರವಾಗಿ, ನಿಯಮಗಳನ್ನು ಮೆಟ್ಟಿ, ಶರತ್ತುಗಳಿಲ್ಲದೆ ಸಂಪೂರ್ಣವಾಗಿ ಕ್ಷಮಿಸಬೇಕೆಂಬುವುದೇ ಕ್ರಿಸ್ತನ ಉತ್ತರದ ಒಳಾರ್ಥ. 

ಕ್ರಿಸ್ತ, ತನ್ನ ಮಾತನು ಸ್ಪಷ್ಟಪಡಿಸಲು ಅಥವಾ ಗಟ್ಟಿಗೊಳಿಸಲು ಒಂದು ಕಥೆಯ ಮರೆಹೊಗುತ್ತಾನೆ. ಈ ಸಾಮತಿಯು ಸ್ವರ್ಗರಾಜ್ಯದಲ್ಲಿ ಕ್ಷಮೆಯೆಂಬ ಅದಮ್ಯ ಚೇತನದ ಪೂರ್ಣ ಸ್ವರೂಪವನ್ನು ಅಭಿವ್ಯಕ್ತಿಗೊಳಿಸುತ್ತದೆ. 

ಕ್ರಿಸ್ತ ಹೇಳಿದ ಸಾಮತಿಯಲ್ಲಿ ಕಾಣುವ ಇನ್ನೊಂದು ಪ್ರಮುಖ ಅಂಶ, ಸೇವಕರ ಸಾಲಗಳ ನಡುವೆಯಿದ್ದ ವ್ಯತಿರಿಕ್ತವಾದ ಅಂತರ. ಈ ಅಂತರವನ್ನು ಸಾಲಗಾರರ ಸಾಲದ ಒಟ್ಟು ಮೊತ್ತಗಳು ನಮಗೆ ಸ್ಪಷ್ಟವಾಗಿ ಬಹಿರಂಗ ಪಡಿಸುತ್ತವೆ. ಸೇವಕ ರಾಜನಿಂದ 10,000 ತಲೆಂತುಗಳನ್ನು ಸಾಲವಾಗಿ ಪಡೆದಿದ್ದರೆ, ಅವನ ಜೊತೆಗಾರ ಆಳು, ಕೇವಲ 100 ದಿನಾರಿ ನಾಣ್ಯಗಳನ್ನು ಆ ಸೇವಕನಿಂದ ಸಾಲ ಪಡೆದಿರುತ್ತಾನೆ. ಈಗಿನ ವಿನಿಮಯದ ಲೆಕ್ಕದಲ್ಲಿ 10,000 ತಲೆಂತುಗಳು 9 ಮಿಲಿಯನ್ ಡಾಲರಗಳಿಗೆ ಸಮಾನವಾದರೆ, 100 ದಿನಾರಿ ಕೇವಲ 15 ಡಾಲರ್ಗಳಿಗೆ ಸರಿಸಮನಾಗಿವೆ. 10000*600=60000000 ದಿನಾರಿಗಳಷ್ಟು ತೀರಿಸಲಾಗದಂತಹ ಬಹೃತ್ ಮೊತ್ತದ ಸಾಲ ಮಾಡಿದ್ದ ಆ ಸೇವಕ. ಯೆಹೂದ್ಯ ಇತಿಹಾಸ ಬರಹಗಾರನಾದ ಯೋಸೆಫಸ್ಸನ ಪ್ರಕಾರ ಯೆಹೂದ್ಯರು ಸಲ್ಲಿಸುತ್ತಿದ್ದ ವಿವಿಧ ತೆರಿಗೆಗಳ ಮುಖಾಂತರ ಒಂದು ಇಡೀ ವರ್ಷಕ್ಕೆ ರಾಜನ ಖಜಾನೆಗೆ ಅಥವಾ ಬೊಕ್ಕಸಕ್ಕೆ ಬರುತ್ತಿದ್ದ ಆದಾಯ 600 ತಲೆಂತುಗಳು ಮಾತ್ರ. ರಾಜನ ಬೊಕ್ಕಸಕೆ ಬರುತ್ತಿದ್ದ ಆದಾಯ ಮತ್ತು ಸೇವಕನ ಸಾಲವನ್ನು ಒಮ್ಮೆ ತಾಳೆ ಮಾಡಿ ನೋಡಿ. ಆ ಸೇವಕ ತನ್ನ ಜೀವಮಾನಾವಧಿಯಲ್ಲಿ ಹಿಂತಿರುಗಿಸಲಾಗದಂತಹ ಸಾಲವನ್ನು ಮಾಡಿದ್ದ ಎಂದು. ರಾಜನು ಸೇವಕನ 9 ಮಿಲಿಯನ್ ಡಾಲರುಗಳಿಗೆ ಸಮಾನವಾದ, ಊಹಿಸದಷ್ಟು ನಂಬಲಾಗದಷ್ಟು ಬೆಟ್ಟದಾಕಾರದ ಸಾಲವನ್ನು ಮನ್ನಿಸಿದರೂ ಆ ಸೇವಕ ಜೊತೆ ಸೇವಕನ 100 ದಿನಾರಿ ನಾಣ್ಯಗಳು- ಮೊದಲನೆಯ ಸೇವಕನ ಬೆಟ್ಟದಂತಹ ಸಾಲಕ್ಕೆ ಒಂದು ಚಿಕ್ಕ ಕಣದಂತಹ ಸಾಲ- ಆನೆ ಗಾತ್ರದ ಸಾಲದ ಮುಂದೆ ಸಣ್ಣ ಇರುವೆಷ್ಟು ಸಾಲವನ್ನು ಮನ್ನಿಸುವುದಿಲ್ಲ. ದೇವರು ನಮ್ಮ ಅಸಂಖ್ಯ ಪಾಪಗಳನ್ನು ಮನ್ನಿಸಿದರೂ ನಮ್ಮ ಸಹೋದರರ ಕೆಲವೊಂದು ಪಾಪಗಳನ್ನು ಕ್ಷಮಿಸಲು ನಾವು ಹಿಂದು ಮುಂದು ನೋಡುತ್ತೇವೆ. 

ಕ್ಷಮೆ ಎಂಬ ಮೌಲ್ಯ ನಮ್ಮಲ್ಲಿ ಗರ್ಭಕಟ್ಟಿಕೊಳ್ಳಲಿ. ಆ ಕ್ಷಮೆ ಎಂಬ ಮೌಲ್ಯವನ್ನು ನಾವು ಲೆಕ್ಕಗಳಲ್ಲಿ ಬಂಧಿಸದೆ ಲೆಕ್ಕವಿಲ್ಲದಷ್ಟು ಸಲ ಕ್ಷಮಿಸುವ ಮನೋಭಾವ ನಮ್ಮಲ್ಲಿ ಹುಟ್ಟಿಕೊಳ್ಳಲಿ. ಇತರರಿಗೆ ದಯೆ, ಕ್ಷಮೆ, ಕರುಣೆ ತೋರಿಸುವವರಿಗೆ ದೇವರು ದಯೆ ಕ್ಷಮೆ ಕರುಣೆಯನ್ನು ತೋರಿಸುತ್ತಾರೆ ಎಂಬುದು ಈ ಸಾಮತಿಯ ಸಂದೇಶ. ದೇವರ ಕ್ಷಮಾಗುಣವನ್ನು ಧರ್ಮಸಭೆಯ ಪ್ರತಿಯೊಬ್ಬ ವಿಶ್ವಾಸಿಗಳು ಕಲಿಯಬೇಕು. ನಮಗೆ ಉತ್ತಮ ಉದಾಹರಣೆ ಶಿಲುಬೆ ಮೇಲೆ ನೇತಾಡುತ್ತಿರುವಾಗ ಕ್ರಿಸ್ತ ತೋರಿದ ಅನುಪಮ ಕ್ಷಮೆ. 


******************* 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...