ಪ್ರೀತಿಯ ಅನು…
ಕತೆಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ನೈತಿಕತೆಯ ಬಗ್ಗೆ ತಿಳಿಸಲು ಬದುಕಿನ ಅಮೂಲ್ಯ ಪಾಠಗಳ ಬಗ್ಗೆ ತಿಳಿ ಹೇಳಲು, ತಪ್ಪುದಾರಿ ಹಿಡಿದ ನಮ್ಮನ್ನು ತಿದ್ದಲು ಘನವಾದ ಸತ್ಯವನ್ನು, ತಲೆಬುಡ ಅರ್ಥವಾಗದೆ ತಲೆ ತಿನ್ನುವ ಪಾಠಗಳನ್ನು ಸಲೀಸಾಗಿಸಲು, ನಮ್ಮ ಹಿರಿಯರು, ಕಿರಿಯರು, ಉಪನ್ಯಾಸಕರು, ಪ್ರವಾಚಕರು ಧಾರಾಳವಾಗಿ ಉಪಯೋಗಿಸುತ್ತಿದ್ದ ಮಾಧ್ಯಮವೆಂದರೆ ಕತೆಗಳು. ತಮಗೆ ಲಭಿಸಿದ ಲೋಕಜ್ಞಾನ, ವ್ಯಾವಹಾರಿಕ ಜಾಣ್ಮೆ ಬದುಕಿನ ಅನುಭವಗಳು, ಗ್ರಹಿಕೆಗೆ ನಿಲುಕದ ಸತ್ಯಗಳು ಹೀಗೆ ಅನೇಕವುಗಳನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ರವಾನಿಸಲು ಕಥೆಗಳು ಒಂದು ಉತ್ತಮ ಮಾಧ್ಯಮವಾಯಿತೆಂಬುದು ಎಲ್ಲರ ಸರ್ವಾನುಮತದ ಅಭಿಪ್ರಾಯ.
ಶತಮಾನಗಳ ಇತಿಹಾಸ ಹೊಂದಿರುವ ಹರಿಕಥೆ ಎಂಬ ಪ್ರಕಾರವು ಇಂದಿಗೂ ಜನಪ್ರಿಯತೆಯ ಮಾಧ್ಯಮವಾಗಿ ಉಳಿದುಕೊಂಡಿರುವುದು ಈ ಕಾರಣದಿಂದಲೇ. ನಾವು ನಮ್ಮ ತಂದೆ ತಾಯಿ, ಅಜ್ಜ ಅಜ್ಜಿಯವರ ಬಳಿ ಕಾಡಿ ಬೇಡುತ್ತಿದ್ದು ಕತೆಗಳಿಗಾಗಿಯೇ. ಊಟವನ್ನು ಮಾಡಲು ಚಂಡಿ ಹಿಡಿಯುತ್ತಿದ್ದ ನಮಗೆ ಊಟ ಉಣಿಸಲು, ಅಥವಾ ಮಲಗದೆ ಹಟ ಮಾಡುತ್ತಿದ್ದ ನಮ್ಮನ್ನು ನಿದ್ರಾದೇವಿಗೆ ಶರಣಾಗಿಸಲು ತಾಯಂದಿರು ಕಂಡುಕೊಂಡಿದ್ದ ಅನೇಕ ಉಪಾಯಗಳಲ್ಲಿ ಕತೆ ಹೇಳುವುದು ಒಂದು. ಇಂದು ನಮಗೆ ಗೊತ್ತು, ನಮ್ಮ ಕಲ್ಪನಾಶಕ್ತಿ, ಸೃಜನಶೀಲತೆಯನ್ನು ಜಾಗೃತಗೊಳಿಸಿ ಭಾವ ಪ್ರಪಂಚವನ್ನು ಅರಳಿಸಿ, ನಮ್ಮ ಗ್ರಹಣಶಕ್ತಿಯನ್ನು ಹೆಚ್ಚಿಸಿದ್ದು ಈ ಕತೆಗಳೇ. ನನ್ನ ಬಾಲ್ಯದಲ್ಲಿ ಕೇಳಿದ ಹತ್ತಾರು ಕತೆಗಳಲ್ಲಿ ಕ್ರಿಸ್ತನ ಸಾಮತಿಗಳದೇ ಸಿಂಹಪಾಲು. ದುಂದುಗಾರಮಗ, ಸದಯಸಮಾರಿತ ... ಹೀಗೆ ಅನೇಕ ಸಾಮತಿಗಳನ್ನು ನನ್ನ ಉಪಾಧ್ಯಾಯರು, ಊರಿನ ಕನ್ಯಾಸ್ತ್ರೀಯರು ಮತ್ತು ಧರ್ಮಗುರುಗಳಿಂದ ಕೇಳಿದ ನೆನಪು. ಆ ಸಾಮತಿಗಳ ಗುಂಗೇ ಇಂದು ಈ ಕಾಗದ ಬರೆಸಿದ್ದು.
ಬದುಕಿನ ಸತ್ಯವನ್ನು ತಿಳಿಸಲು ಕ್ರಿಸ್ತ ಸಾಮತಿಗಳನ್ನು ಹೇಳಿದ. ಸಾಮಾನ್ಯ ಜನರಿಗೆ ಪರಿಚಯವಿದ್ದ ರೂಪಕಗಳನ್ನು ಬಳಸಿಕೊಂಡು ಹೇಳಿದ ಅವನ ಕತೆಗಳಲ್ಲಿ ಸೃಜನಾತ್ಮಕತೆ ಇತ್ತು, ಜನಸಾಮಾನ್ಯರಿಗೆ ಬಹುಬೇಗ ತಲುಪುವ ಸರಳತೆ ಅವುಗಳಿಗಿತ್ತು. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಹೇಳಿದ ಸಾಮತಿಗಳು ಎಲ್ಲ ಕಾಲಕ್ಕೂ ಅನ್ವಯವಾಗುವಂತಹ, ಹಳಸದ ಕಾಲಾತೀತ ಸತ್ಯವನ್ನು ಹೇಳುವುದರಿಂದ ಅವುಗಳ ಪ್ರಸ್ತುತತೆ ಪ್ರಶ್ನಾತೀತ. ಇತ್ತೀಚಿನ ದಿನಗಳಲ್ಲಂತೂ, ಕ್ರಿಸ್ತನ ಸಾಮತಿಗಳು ನಾಟಕ, ಗೀತ ರೂಪಗಳನ್ನು ಪಡೆದುಕೊಂಡು ಜನಜನಿತವಾಗಿದೆ. ಇಂತಹ ಸಾಮತಿಗಳ ಒಳ ಹೊಕ್ಕು ಅದರ ಅಂತಃಸತ್ವವನ್ನು ಕಂಡುಕೊಂಡಾಗ ಮಾತ್ರ ಕ್ರಿಸ್ತನು ಈ ಸಾಮತಿಗಳನ್ನು ಯಾತಕ್ಕಾಗಿ, ಯಾವ ಸಂದರ್ಭದಲ್ಲಿ ಹೇಳಿದ ಎಂಬ ಅರಿವು ನಮ್ಮದಾಗುವುದರ ಜತೆಗೆ ನಮ್ಮ ಪ್ರಸ್ತುತ ಬದುಕಿಗೆ ಪಾಠಗಳಾಗುತ್ತವೆ.
ಸಾಮತಿ, ಇದೊಂದು ವಿಶಿಷ್ಠ ಸಾಹಿತ್ಯ ಪ್ರಕಾರ. ಇದು ಆಧ್ಯಾತ್ಮಿಕ ಸಂಕೇತಗಳನ್ನೊಳಗೊಂಡ ಒಂದು ಲೌಕಿಕ ಕತೆ. ಇವು ಧಾರ್ಮಿಕ ಸತ್ಯಗಳನ್ನು ವರ್ಣಿಸುವ ನೀತಿಕತೆಗಳು. ಇದರಲ್ಲಿ ಬರುವ ಒಂದೊಂದು ಅಂಶಕ್ಕೂ ಒಂದೊಂದು ಅರ್ಥವಿರದೆ, ಇಡೀ ಕತೆಗೆ ಒಂದೇ ಅರ್ಥವಿರುತ್ತದೆ. ಅಂದರೆ ಸಾಮತಿಗಳು ಒಂದೇ ಒಂದು ವಿಷಯವನ್ನು ಅಥವಾ ಪಾಠವನ್ನು ಬಲವಾಗಿ ಸ್ಪಷ್ಟಪಡಿಸುತ್ತವೆ. ಉದಾ: ಸದಯ ಸಮಾರಿತ ಎಂಬ ಸಾಮತಿ. ವಾಸ್ತವಿಕವಾಗಿ ಸದಯ ಸಮಾರಿತ ಎಂಬುದು ಅನುಕರಣೀಯ ಸಾಮತಿ. ನಿಜವಾದ ’ನೆರೆಯವ’ನನ್ನು ಸ್ಪಷ್ಟಪಡಿಸಿ, ಹೋಗು, ನೀನೂ ಹಾಗೆಯೇ ಮಾಡು ಎಂದು ಅಮರ ಜೀವವನ್ನು ಪಡೆಯಲು ದಾರಿ ತೋರಿಸುವ ಸಾಮತಿ. ಕಷ್ಟದಲ್ಲಿರುವವರೆಲ್ಲಾ ನಮ್ಮ ನೆರೆಯವರು, ಅಂತವರಿಗೆ ನಾವು ಸಹಾಯ ಹಸ್ತವನ್ನು ಚಾಚುವುದರ ಮೂಲಕ ನಾವು ಕೂಡ ಒಳ್ಳೆಯ ನೆರೆಯವರಾಗುತ್ತೇವೆ ಎಂಬುದು ಸಾಮತಿ ಸ್ಪಷ್ಟಪಡಿಸುವ ಸತ್ಯ.
ಸಾರ್ವತ್ರಿಕ ಮೌಲ್ಯ: ಸಾಮತಿಗಳು ಸಾಂಸ್ಕೃತಿಕ ಎಲ್ಲೆಗಳನ್ನು ಮೀರುವ ಒಂದು ಪ್ರಕಾರ. ಸಾಮತಿಯ ಮೂಲ ಭಾಷೆ, ಕೇಳುಗರು, ಹೇಳಿದ ಸಮಯ ಸಂದರ್ಭ ಬದಲಾದರೂ ಅವುಗಳ ಸಂದೇಶ ಸಾರ್ವತ್ರಿಕ ಏಕೆಂದರೆ ಸಾರ್ವತ್ರಿಕ ಮೌಲ್ಯ ಅವುಗಳಲ್ಲಿವೆ. ಆ ಮೌಲ್ಯಗಳು ಕಾಲ, ಭಾಷೆ, ಜಾತಿ, ವರ್ಗ, ಕುಲಗೋತ್ರಗಳೆನ್ನದೆ ಎಲ್ಲರಿಗೂ ಅನ್ವಯಿಸುವಂತವು. ಈ ಸಾಮತಿಯಲ್ಲಿ ಬರುವ ವ್ಯಕ್ತಿಗಳು ಸಾಂಸ್ಕೃತಿಕ ಅಥವಾ ಇತಿಹಾಸ ಪುರುಷರಲ್ಲ, ಅವರು ಮಾನವನ ಇತಿಹಾಸದ ಪ್ರತಿರೂಪಗಳು. ಆದ್ದರಿಂದ ದುಂದುಗಾರ ಮಗ, ಸಮಾರಿತ ಎಂಬ ವ್ಯಕ್ತಿಗಳು ಇಂದಿಗೂ ನಮ್ಮಲ್ಲಿ ಕಾಣಸಿಗುವ ಪಾತ್ರಗಳೇ. ಕ್ಷಮೆ, ದಯೆ, ಇಂದಿಗೂ ಮನುಷ್ಯನಿಗೆ ಬೇಕಾಗಿರುವಂತಹ ಮೌಲ್ಯಗಳೇ.
ಕಾಲಾತೀತ: ಸಾಮತಿಗಳ ಪ್ರಸ್ತುತತೆಯ ಬಗ್ಗೆ ಎರಡು ಮಾತಿಲ್ಲ. ಅವುಗಳ ವಸ್ತುವಿಷಯಗಳು ಮಾನವನ ಮೂಲಭೂತ ಮತ್ತು ಆಧ್ಯಾತ್ಮಿಕ ಪ್ರಶ್ನೆಗಳಿಗೆ ಸಂಬಂಧಿಸಿದ್ದರಿಂದ, ಅವು ಕಾಲಾತೀತ. ನಾವು ಯಾರು? ಸಾವೆಂದರೇನು? ಸಾವು ಏಕೆ? ಶತಮಾನಗಳಿಂದ ಕಾಡಿಕೊಂಡು ಬಂದ ಪ್ರಶ್ನೆಗಳು ಇಂದು ನಮ್ಮನ್ನು ಕಾಡುತ್ತಿವೆ ಮತ್ತು ನಮ್ಮ ಮುಂದಿನವರನ್ನು ಕಾಡುತ್ತವೆ. ಸಾಮತಿಗಳು ಇಂತಹ ಮೂಲಭೂತ ಪ್ರಶ್ನೆಗಳ ಬಗ್ಗೆ ಬೆಳಕು ಚೆಲ್ಲುವುದರಿಂದ ಅವು ಕಾಲಾತೀತ.
ಸಾಂಕೇತಿಕ: ಸಾಮತಿಗಳು ಸಾಂಕೇತಿಕ. ಅವು ಮೌಖಿಕ ಸಂಭಾಷಣೆಗಳಿಂದ ಬಂಧಿತವಾಗಿಲ್ಲ. ಇವು ಒಂದು ರೀತಿಯ ಪದರಹಿತ ಸಂವಹನ. ಶಬ್ಧಗಳಿಲ್ಲದೆ ಸಾಮತಿಗಳನ್ನು ಜನರಿಗೆ ತಿಳಿಸಬಹುದು. ಅದ್ದರಿಂದಲೇ ಸಾಮತಿಗಳು ಮೂಕಾಭಿನಯ, ನಟನೆ, ಚಿತ್ರಕಲೆ, ಹಾಡು ಮತ್ತು ನೃತ್ಯಗಳಿಗೆ ಒಗ್ಗಿ ಹೋಗಿವೆ. ಇನ್ನೊಂದು ಕಡೆ, ಅವು ಸಾಂಕೇತಿಕವಾದ್ದರಿಂದ ಅವುಗಳನ್ನು ನಾನಾ ರೀತಿಯಲ್ಲಿ ವ್ಯಾಖ್ಯಾನಿಸಿಕೊಳ್ಳಬಹುದು. ಆದರೆ ಈ ವ್ಯಾಖ್ಯಾನಗಳು ಸಾಮತಿಯ ಮೂಲ ಉದ್ದೇಶದ ಗೆರೆ ದಾಟಬಾರದಷ್ಟೆ.
ಬದಲಾವಣೆಯ ಕಿಡಿ: ಸಾಮತಿಗಳು ಅಸ್ತಿತ್ವದಲ್ಲಿರುವ ವರ್ಗ, ಸಾಮಾಜಿಕ ವ್ಯವಸ್ಥೆ, ಮೌಲ್ಯ ವ್ಯವಸ್ಥೆಗಳನ್ನು ಬುಡಮೇಲು ಮಾಡುತ್ತವೆ. ಅನ್ಯಾಯದ ವ್ಯವಸ್ಥೆಯ ಪಾಲುದಾರರಾದ ನಮ್ಮನ್ನು ಗಲಿಬಿಲಿಗೊಳಿಸುತ್ತವೆ. ಸಮಾಜದಲ್ಲಿ ಆಗುವ ಅನ್ಯಾಯ, ದಬ್ಬಾಳಿಕೆ, ಶೋಷಣೆಗಳನ್ನು ಎತ್ತಿ ತೋರಿಸುತ್ತಾ ಅವುಗಳ ವಿನಾಶಕ್ಕೆ ಕರೆ ನೀಡುತ್ತಾ, ಮನುಷ್ಯನಲ್ಲಿ ಸಾಮಾಜಿಕ ಕಳಕಳಿ ಚಿಗುರಿಸುವ ಬೀಜಗಳಾಗುತ್ತವೆ. ಮೊದಲಿಗರನ್ನು ಕೊನೆಯವರಾಗಿಸುತ್ತದೆ, ಕೊನೆಯವರನ್ನು ಮೊದಲಿಗರಾಗಿಸುತ್ತದೆ. ತನ್ನನ್ನು ತಾನೇ ಏರಿಸಿಕೊಳ್ಳುವನನ್ನು ಕೆಳಗಿಳಿಸುತ್ತದೆ, ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ಮೇಲಕ್ಕೇರಿಸುತ್ತದೆ.
ಪ್ರಚೋದಕ: ಸಾಮತಿಗಳಿಗೆ ಪ್ರೇರೇಪಿಸಿ ಪ್ರಚೋದಿಸುವ ಶಕ್ತಿಯಿದೆ. ನಮಗೆ ಸವಾಲು ಹಾಕಿ ನಮ್ಮನ್ನು ತಿದ್ದುವುದಲ್ಲದೆ ಜಾಗೃತಗೊಳಿಸಿ ಕ್ರೀಯಾಶೀಲರನ್ನಾಗಿಸುತ್ತವೆ. ಅವು ನಮ್ಮ ನಡತೆ ವಿಚಾರಗಳ ಮಾಪನಗಳಾಗುತ್ತಾ ಅವುಗಳ ಬದಲಾವಣೆಗೆ ಮುಹೂರ್ತ ಹಾಕಿಕೊಡುತ್ತವೆ. ವಿಕೃತ ಸಮಾಜದ ಸುಧಾರಣೆಗೆ ಮತ್ತು ನವೀಕಕರಣಕ್ಕೆ ಕರೆ ನೀಡುತ್ತವೆ.
ಅದ್ದರಿಂದ ಸಾಮತಿಗಳಿಗೆ ನಮ್ಮ ದೃಷ್ಟಿಕೋನವನ್ನು ಬದಲಾಯಿಸುವ ಶಕ್ತಿಯಿದೆ. ನಾವು ಕಟ್ಟಿಕೊಂಡಿರುವ ಚಿಂತನಾಕ್ರಮವನ್ನು ಅದರ ಸಂಕುಚಿತೆಯನ್ನು ಪ್ರಶ್ನಿಸುವ ತಾಕತ್ತಿದೆ. ನಮ್ಮ ಮೂಲ ನಂಬಿಕೆಗಳನ್ನೇ ಬುಡಮೇಲು ಮಾಡುವ ಧೈರ್ಯವಿದೆ. ಜೊತೆಗೆ ಪರಿವರ್ತನೆಯನ್ನು ಚಿಗುರಿಸುವ ಸತ್ವವಿದೆ. ಹೊಸಜಗತ್ತು, ಹೊಸ ಬದುಕಿಗೆ ಕರೆದೊಯ್ಯುವ ಬೆಳಕಿದೆ. ಕೆಲವು ಸಾಮತಿಗಳು ಕತೆಯಲ್ಲಿ ಬರುವ ವ್ಯಕ್ತಿಗಳನ್ನು ಮೌಲ್ಯಮಾಪನ ಮಾಡಲು ಕರೆ ನೀಡುತ್ತಲೇ, ನಮ್ಮ ಬದುಕಿನ ಮಾಪಕವಾಗಿಬಿಡುತ್ತವೆ. ನಮ್ಮ ವಾಸ್ತವಿಕ ಬದುಕಿಗೆ ಕನ್ನಡಿ ಹಿಡಿಯುತ್ತಾ, ಹೃದಯದ ಬದಲಾವಣೆಗೆ ನಾಂದಿ ಹಾಡುತ್ತವೆ. ಅವು ಕೇವಲ ಕತೆಗಳಾಗದೆ, ಬದುಕಿನ ಜೀವಂತ ದೃಶ್ಯಗಳಾಗುತ್ತಾ ನಮ್ಮ ಅನುಭವಗಳ ನೆರಳಾಗುತ್ತವೆ. ಮಡುಗಟ್ಟಿದ ನಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತವೆ. ಸಾಮತಿಗಳ ಇಂತಹ ಶಕ್ತಿ, ಧೈರ್ಯ, ಸತ್ವ ಮತ್ತು ಬೆಳಕನ್ನು ಕಾಣಬೇಕಾದರೆ, ತೆರೆದ ನಿಷ್ಪಕ್ಷಪಾತ ಮನಸ್ಸಿನಿಂದ ನಾವು ಸಾಮತಿಗಳನ್ನು ಓದಿದರೆ ಆ ಓದು ಪರಿಪಾಠವಾಗದೆ ಸಾತ್ವಿಕ ಅನುಭವಾಗುವುದರ ಬಗ್ಗೆ ಎರಡು ಮಾತಿಲ್ಲ.
ಹೌದು ಅನು, ನಮ್ಮ ಮಕ್ಕಳನ್ನು ಕಂಪ್ಯೂಟರು, ಟಿ.ವಿ ಅಂತ ನಿರ್ಜೀವ ವಸ್ತುಗಳೊಡನೆ ಕಟ್ಟಿ ಹಾಕಿ ಬಿಟ್ರೆ, ಅವರ ಬಾಲ್ಯವೇ ನಿರ್ಜೀವವಾಗುವ ಗಂಡಾತರವಿದೆ. ತಂದೆತಾಯಿಗಳು ಮಕ್ಕಳಿಗೆ ಕಥೆಗಳನ್ನು ಹೇಳುವುದರ ಮೂಲಕ ಅವರಲ್ಲಿ ಸೃಜನಶೀಲತೆ ತುಂಬಲಿ ಎಂಬ ಕಳಕಳಿಯ ಮನವಿಯೊಂದಿಗೆ, ಧಾರ್ಮಿಕ ಪ್ರವಚನಗಳಲ್ಲಿ ಕಂಡು ಬರುವ ಕತೆಗಳನ್ನು ಯಾವ ರೀತಿ ಅರ್ಥೈಸಿಕೊಳ್ಳಬೇಕೆಂಬ ಆಶಯವನ್ನು ವ್ಯಕ್ತಪಡಿಸುವ ಕತೆಯೊಂದಿಗೆ, ನಿನಗೆ ವಿದಾಯ ಹೇಳುತ್ತೇನೆ.
ಒಬ್ಬ ರೈತನು ಚಿನ್ನದ ಮೊಟ್ಟೆಯನ್ನಿಡುವ ಒಂದು ಬಾತುಕೋಳಿಯನ್ನು ಸಾಕಿದ್ದ. ಅದು ಪ್ರತಿದಿನ ಒಂದೊಂದು ಚಿನ್ನದ ಮೊಟ್ಟೆಯನ್ನು ಇಡುತ್ತಿತ್ತು. ರೈತನ ಹೆಂಡತಿ ಪ್ರತಿದಿನ ಒಂದೊಂದು ಮೊಟ್ಟೆಯಿಡುತ್ತಿದ್ದ ಬಾತುಕೋಳಿಯಿಂದ ಎಲ್ಲಾ ಮೊಟ್ಟೆಗಳನ್ನು ಒಮ್ಮೆಲೇ ಪಡೆಯುವ ದುರಾಸೆಯಿಂದ ಬಾತುಕೋಳಿಯನ್ನು ಕೊಯ್ದು ಬಿಡುತ್ತಾಳೆ.
ಈ ವಾಕ್ಯವನ್ನು ಕೇಳಿದ ಒಬ್ಬ ನಾಸ್ತಿಕ ಲೇವಡಿ ಮಾಡುತ್ತಾ, ಬಾತುಕೋಳಿ ಚಿನ್ನದ ಮೊಟ್ಟೆಯಿಡುವುದೆಂದಾದರೂ ಸಾಧ್ಯವೇ, ಇದು ವೇದಗಳ ಅಸಂಬದ್ಧತೆಯನ್ನು ಮತ್ತು ಅರ್ಥಹೀನತೆಯನ್ನು ಎತ್ತಿ ತೋರಿಸುತ್ತದೆ” ಎಂದು ಮೂದಲಿಸಿದ.
ಇನ್ನೊಬ್ಬ ಧಾರ್ಮಿಕ ಪಂಡಿತ ಮೇಲಿನ ಪಠ್ಯವನ್ನು ಓದಿ ಈ ರೀತಿ ಪ್ರತಿಕ್ರಿಯಿಸಿದ “ದೇವರು ಚಿನ್ನದ ಮೊಟ್ಟೆಯಿಡುವ ಬಾತುಕೋಳಿಯ ಬಗ್ಗೆ ತಿಳಿಸುತ್ತಾರೆ .. ವಾಸ್ತವಿಕವಾಗಿ ನಮಗೆ ಇದು ಅಸ್ವಾಭಾವಿಕವಾಗಿ ಕಂಡು ಬರಬಹುದು. ಆದರೆ ಇದು ನಮ್ಮ ಗ್ರಹಿಕೆಗೆ ನಿಲುಕದ ಸತ್ಯ.
ಒಂದು ಮೊಟ್ಟೆ ಚಿನ್ನದ ಲಕ್ಷಣಗಳನ್ನು ಪಡೆದುಕೊಂಡು ಹೇಗೆ ಅದು ಮೊಟ್ಟೆಯಾಗಿರಲು ಸಾಧ್ಯ? ಎಂದು ಕೆಲವರು ವಾದಿಸಬಹುದು. ನಾನಾ ಪಂಥಗಳು ಈ ರೀತಿಯ ಘಟನೆಗೆ ನಾನಾ ರೀತಿಯ ಅರ್ಥವಿವರಣೆಗಳನ್ನು ಟೀಕೆಯನ್ನು ನೀಡಬಹುದು. ಆದರೆ ಇಲ್ಲಿ ಮುಖ್ಯವೆನ್ನಿಸುವುದು ನಮ್ಮ ವಿಶ್ವಾಸ. ನಮ್ಮ ಜ್ಞಾನಕ್ಕೆ ನಿಲುಕದ ಈ ರೀತಿಯ ರಹಸ್ಯವನ್ನು ಅರ್ಥಮಾಡಿಕೊಳ್ಳಬೇಕಾದರೆ ನಮ್ಮಲ್ಲಿ ವಿಶ್ವಾಸವಿರಬೇಕು.
ಮತ್ತೊಬ್ಬ ಪ್ರಬೋಧಕ ಪಠ್ಯದಿಂದ ಪ್ರೇರಿತನಾಗಿ, ನಗರ ಮತ್ತು ಹಳ್ಳಿಗಳಲ್ಲಿ ಸುತ್ತಾಡಿ ಒಂದಾನೊಂದು ಕಾಲದಲ್ಲಿ ಚಿನ್ನದ ಮೊಟ್ಟೆಯಿಡುವ ಬಾತುಕೋಳಿಗಳನ್ನು ದೇವರು ಸೃಷ್ಟಿಸಿದ್ದಿರಬಹುದು. ಅಂತಹ ಕೋಳಿಗಳು ಚಿನ್ನದ ಮೊಟ್ಟೆಗಳನ್ನು ಇಡುತ್ತಿದ್ದಿರಬಹುದು ಎಂದು ಹೇಳಿ ಜನರನ್ನು ನಂಬಿಸಿದನು.
ಹಾಗಿದ್ದರೆ ಈ ಕತೆಯ ಮೂಲ ಉದ್ದೇಶವಾದರೂ ಏನು? ಚಿನ್ನದ ಮೊಟ್ಟೆಯನ್ನಿಡುವ ಬಾತುಕೋಳಿಯಲ್ಲಿ ವಿಶ್ವಾಸವನ್ನು ವೃದ್ಧಿಸುವುದೋ ಅಥವಾ ನಮ್ಮ ದುರಾಸೆಯಿಂದ ಆಗುವ ಹಾನಿಯ ಬಗ್ಗೆ ಹೇಳುವುದೋ?
ಇಂತಿ ನಿನ್ನ
ಆನಂದ್
No comments:
Post a Comment