¨ ಫಾದರ್ ವಿಜಯ್ ಕುಮಾರ್, ಬಳ್ಳಾರಿ
ನೈಜಭಕ್ತಿ! ಎಂದರೆ ಅಪ್ಪಟ ಪ್ರೀತಿಯಿಂದಲೂ, ಶ್ರದ್ಧೆಯಿಂದಲೂ, ಪ್ರಾಮಾಣಿಕತೆಯಿಂದಲೂ, ನಿಷ್ಠೆಯಿಂದಲೂ, ಬದ್ಧತೆಯಿಂದಲೂ ಮಾನವ ತನ್ನ ತನು ಮನವನ್ನು ಸಂಪೂರ್ಣವಾಗಿ ಸೃಷ್ಟಿಕರ್ತನಿಗೆ (ಒಡೆಯನಿಗೆ)ಸಮರ್ಪಿಸುವುದು. ಇವುಗಳಲ್ಲಿ ಯಾವುದನ್ನೂ ತನಗೆಂದು ಹಿಡಿದಿಟ್ಟುಕೊಳ್ಳುವ ಹಾಗಿಲ್ಲ. ಈ ಕಾರಣ ಒಬ್ಬ ಮಾನವ ತನ್ನ ಸೃಷ್ಟಿಕರ್ತನಿಗೆ (ಒಡೆಯನಿಗೆ) ತೋರುವ ನಿಷ್ಕಲ್ಮಶ ಹಾಗೂ ಅನನ್ಯ ಪ್ರೀತಿಯನ್ನು ನೈಜಭಕ್ತಿ ಎನ್ನಬಹುದು.
ಅದರಲ್ಲಿ ಸ್ವಾಮಿನಿಷ್ಠೆ, ಅಪ್ಪಟ ಪ್ರಾಮಾಣಿಕತೆ ಹಾಗೂ ಬದ್ಧತೆ ತುಂಬಿ ಹೊರ ಸೂಸುತ್ತದೆ. ನೈಜಭಕ್ತಿಯಲ್ಲಿ ಯಾವ ದ್ವಂದ್ವವಾಗಲೀ, ಗೊಂದಲವಾಗಲೀ, ಮುಚ್ಚುಮರೆಯಾಗಲೀ ಇರುವುದಿಲ್ಲ. ಅದು ಪಾರದರ್ಶಕವಾಗಿರುತ್ತದೆ. ನೈಜಭಕ್ತಿಯಿಂದ ತುಂಬಿದ ಭಕ್ತನ ಮನದಾಳದಲ್ಲಿ ಹಾಗೂ ಎಲ್ಲೆಲ್ಲೂ ಸದಾ ಸೃಷ್ಟಿಕರ್ತನೇ ತುಂಬಿ ತುಳುಕುತ್ತಾನೆ. ಇದನ್ನೇ ಕೀರ್ತನೆಕಾರ "ನಾನೆಲ್ಲಿಗೆ ಓಡಲು ಸಾಧ್ಯ, ನಿನ್ನ ಸನ್ನಿಧಿಯಿಂದ ಮರೆಯಾಗಲು? ಆಕಾಶಕೆ ನಾನೇರಿದರೂ ನೀನಿರುವೆ ಅಲ್ಲಿ. ಪಾತಾಳದಲಿ ನಾ ನಿದ್ರಿಸಿದರೂ ನೀನಿರುವೆ ಅಲ್ಲಿ. ನಾನರುಣ ರೆಕ್ಕೆಗಳನೇರಿ ಹಾರಿದರೂ, ಸಮುದ್ರದ ಕಟ್ಟಕಡೆಗಳಲಿ ನಾ ಸೇರಿದರೂ ಅಲ್ಲೂ, ನನ್ನ ನಡೆಸುವುದು ನಿನ್ನ ಕೈ, ನನ್ನ ಹಿಡಿದಿರುವುದು ನಿನ್ನ ಬಲಗೈ" ಎನ್ನುತ್ತಾನೆ (ಕೀರ್ತನೆ 139:8-10).
ಈ ಕಾರಣ ಭಕ್ತನು ನಿರಂತರವೂ ತನ್ನಲ್ಲಿಯೂ, ಪರರಲ್ಲಿಯೂ ಭಗವಂತನ ಪ್ರಸನ್ನತೆಯನ್ನು ಕಾಣುತ್ತಾನೆ ಹಾಗೂ ನಿತ್ಯದ ಬದುಕಿನಲ್ಲಿ ತನ್ನ ಎಲ್ಲಾ ಕಾಯಕವನ್ನು ಆರಾಧನೆಯಾಗಿ ಪರಿವರ್ತಿಸುತ್ತಾನೆ. ಸೃಷ್ಟಿಕರ್ತನನ್ನು ಸಂತೃಪ್ತಿಪಡಿಸುವುದು ಮಾತ್ರವಲ್ಲದೆ ಸಕಲರೊಡನೆಯೂ ಅನ್ಯೋನ್ಯವಾಗಿರುವುದೇ ಭಕ್ತನ ಪರಮ ಗುರಿಯಾಗಿರುತ್ತದೆ. ಹಾಗೆಯೇ ಭಕ್ತನ ಬಾಳಿನಲ್ಲಿ ದೇವಮಾನವರ ಹಿತವೇ ಪರಮ ಉದ್ದೇಶವಾಗುತ್ತದೆ. ಸತ್ಯದ ಬೆಳಕು ಅವನಿಗೆ ನಿತ್ಯದ ಪ್ರೇರಣೆಯಾಗಿ ಅವನಂತರಂಗದಲ್ಲಿ ಮನೆಮಾಡುತ್ತದೆ.
ನೈಜ ಭಕ್ತಿ ತೋರಿಕೆಯದಲ್ಲ. ಅದು ಪರಿಪೂರ್ಣ ತ್ಯಾಗದಿಂದ ತುಂಬಿರುತ್ತದೆ. ಅಲ್ಲಿ ತನ್ಮಯತೆ ಹಾಗೂ ತಲ್ಲೀನತೆ ತುಂಬಿರುತ್ತದೆ. ಭಕ್ತನು ತನ್ನ ಸೃಷ್ಟಿಕರ್ತನಿಗೋಸ್ಕರ ತನ್ನನ್ನು ಸಂಪೂರ್ಣವಾಗಿ ಕರಗಿಸಿಕೊಳ್ಳಲು ಸದಾ ಸಿದ್ದನಿರುತ್ತಾನೆ. ಇದನ್ನೇ ಸಂತ ಸ್ನಾನಿಕ ಯೊವಾನ್ನನು "ಆತ ಬೆಳೆಯುತ್ತಿರಬೇಕು, ನಾನು ಅಳಿಯುತ್ತಿರಬೇಕು" (ಯೊವಾನ್ನ 3:30) ಎನ್ನುತ್ತಾನೆ. ಇಲ್ಲಿ ಶೂನ್ಯವೇ ಭಕ್ತನ ಆಸ್ತಿ. ಸೃಷ್ಟಿಕರ್ತನೇ ಭಕ್ತನ ಪರಮಸಂಪತ್ತು. ನೈಜ ಭಕ್ತಿಯಲ್ಲಿ ಮಿಂದು ಸಂತೃಪ್ತನಾದ ಭಕ್ತನಿಗೆ ವಿಶ್ವವೆಲ್ಲವೂ ಮಿತ್ಯ ಸೃಷ್ಟಿಕರ್ತನೇ ಸತ್ಯ. ಈ ಕಾರಣ ಆತನ ದುರ್ಗುಣಗಳು, ನಶ್ವರ ಆಸೆ ಆಕಾಂಕ್ಷೆಗಳು ಹಂತಹಂತವಾಗಿ ದಮನವಾಗಿ ಸದ್ಗುಣಗಳು ರೂಪುಗೊಳ್ಳುತ್ತವೆ. ಪರೋಪಕಾರ, ಕ್ಷಮಾಗುಣ, ಔದಾರ್ಯ ಹಾಗೂ ಸೇವಾ ಗುಣಗಳು ಆತನಲ್ಲಿ ನಿತ್ಯವೂ ಹಾಸುಹೊಕ್ಕಾಗುತ್ತವೆ.
ನೈಜ ಭಕ್ತಿಯಲ್ಲಿ ವಿಧೇಯತೆ ತುಂಬಿರುತ್ತದೆ. ಭಕ್ತನು ತನ್ನ ಸೃಷ್ಟಿಕರ್ತನಿಗೆ ಸಂಪೂರ್ಣವಾಗಿ ಶರಣಾಗುತ್ತಾನೆ. ನೀರಿನಲ್ಲಿ ಉಪ್ಪು ಕರಗಿಹೋಗುವಂತೆ ಭಕ್ತನು ದೇವನಲ್ಲಿ ಕರಗಿಹೋಗುತ್ತಾನೆ. ಆದರೆ ನೀರಿನಲ್ಲಿ ಉಪ್ಪು ಕರಗಿದರೂ ಅದು ತನ್ನ ರುಚಿಯನ್ನು ಕಳೆದುಕೊಳ್ಳುವುದಿಲ್ಲ ಹಾಗೆಯೇ ಭಕ್ತನು ಭಕ್ತನಾಗಿಯೇ ಉಳಿದುಕೊಳ್ಳುತ್ತಾನೆ. ಹೀಗೆ ಸೃಷ್ಟಿಕರ್ತ ಮಾನವನನ್ನು ಶುದ್ಧೀಕರಿಸಿ ಮಾನವನನ್ನಾಗಿಯೇ ಉಳಿಸುತ್ತಾರೆ. ಆದರೆ ಆತನು ತನ್ನ ಸನ್ನಿಧಿಯಲ್ಲಿ ನಿರಂತರವಾಗಿ ವಾಸಿಸಲು ಬೇಕಾದ ಸುಜ್ಞಾನದ ಬೆಳಕನ್ನು ನೀಡುತ್ತಾನೆ. ಆ ಸುಜ್ಞಾನ ಅವರಿಬ್ಬರಲ್ಲಿನ ಅನನ್ಯ ಸತ್ಸಂಬಂಧವನ್ನು ವೃದ್ಧಿಸಿ ನಿತ್ಯಾನಂದದ ಚಿಲುಮೆಯಾಗಿ ಪರಿವರ್ತನೆಯಾಗುತ್ತದೆ.
ನೈಜ ಭಕ್ತಿಯಲ್ಲಿ ಸದ್ಭಕ್ತನು ಸೃಷ್ಟಿಕರ್ತನಲ್ಲಿ ನೆಲೆಗೊಳ್ಳುತ್ತಾನೆ. ಆಗ ಅವನಿಗೆ ಯಾವ ಕೊರತೆಯೂ ಕಾಣುವುದಿಲ್ಲ. ಒಂದು ವೇಳೆ ಕೊರತೆ ಇದ್ದರೂ ಅದು ಕೊರತೆ ಎಂದು ಕೊರಗದೆ ಸಂತೋಷ ತುಂದಿಲನಾಗುತ್ತಾನೆ. ಇದನ್ನು ಪ್ರವಾದಿ ಹಬಕ್ಕೂಕನು "ಅಂಜೂರದ ಮರ ಚಿಗುರದೆ ಹೋದರೂ, ದ್ರಾಕ್ಷಾಲತೆಗಳಲ್ಲಿ ಹಣ್ಣು ಕಾಣದೆ ಹೋದರೂ, ಎಣ್ಣೆ ಮರಗಳ ಉತ್ಪತ್ತಿಯು ಶೂನ್ಯವಾದರೂ, ಹೊಲಗದ್ದೆಗಳು ಆಹಾರ ಕೊಡದೆಹೋದರೂ, ಕುರಿಹಟ್ಟಿಗಳು ಬರಿದಾಗಿ ಹೋದರೂ, ಕೊಟ್ಟಿಗೆಗಳಲ್ಲಿ ದನಕರುಗಳು ಇಲ್ಲವಾದರೂ ಸಂತೋಷಿಸುವೆ ನಾನು ಸರ್ವೇಶ್ವರನಲಿ ಆನಂದಿಸುವೆ ನನ್ನ ಉದ್ಧಾರಕ ದೇವನಲಿ. ಸ್ವಾಮಿಸರ್ವೇಶ್ವರ ನೀಡುವನೆನಗೆ ಧೀರತೆ, ಚುರುಕುಗೊಳಿಸುವನಾತ ನನ್ನ ಕಾಲುಗಳನು ಜಿಂಕೆಯಂತೆ, ಮಾಡುವನು ಬೆಟ್ಟಗುಡ್ಡಗಳಲಿ ನಾನು ಓಡಾಡುವಂತೆ" (3:17-19) ಎನ್ನುತ್ತಾನೆ. ಅಂದರೆ ನೈಜಭಕ್ತಿಯಲ್ಲಿ ಮಿಂದ ಭಕ್ತನಿಗೆ ತನ್ನ ದೇವನೇ ಎಲ್ಲವೂ ಎಂಬ ಆಂತರಿಕ ಅರಿವು ತೆರೆದುಕೊಳ್ಳುತ್ತದೆ. ಆಗ ಆತ ದೇವನೇ ಎಲ್ಲಾ ಮಿಕ್ಕೆಲ್ಲವೂ ಏನೂ ಅಲ್ಲ ಎಂದು ತಿಳಿದುಕೊಳ್ಳುತ್ತಾನೆ.
ನೈಜ ಭಕ್ತಿಯಲ್ಲಿ ಭಕ್ತನು ದೈವ ಪ್ರೀತಿಯಲ್ಲಿ ತುಂಬಿಹೋಗುತ್ತಾನೆ ಆಗ ಆತನು ನಿತ್ಯವೂ ಆನಂದದಲ್ಲಿ ತುಂಬಿರುತ್ತಾನೆ. ಆತನ ತನು-ಮನ ಶುದ್ಧೀಕರಣಗೊಂಡು ನವೀಕರಣಗೊಳ್ಳುತ್ತದೆ. ವಿಶೇಷವಾಗಿ ಆತನ ಜ್ಞಾನ ವೃದ್ಧಿಯಾಗುತ್ತದೆ ಬುದ್ದಿಶಕ್ತಿ ವಿಕಾಸಗೊಂಡು ಚುರುಕುಗೊಳ್ಳುತ್ತದೆ. ಲೌಕಿಕ ಹಾಗೂ ಆಧ್ಯಾತ್ಮಿಕ ವಿಷಯಗಳನ್ನು ನಿಚ್ಚಳವಾಗಿ ಅರ್ಥೈಸಿಕೊಳ್ಳುವ ಸುಜ್ಞಾನ ಉದಯವಾಗಿ ಪರರ ಬಾಳಿಗೆ ಬೆಳಕನ್ನು ನೀಡುವ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ. ಅಂಥವನಿಗೆ ಕ್ಷಣಿಕ ಆಸೆಗಳಾಗಲೀ, ಲೌಕಿಕ ಆಸ್ತಿಪಾಸ್ತಿಯ ವ್ಯಾಮೋಹವಾಗಲೀ ಇರುವುದಿಲ್ಲ.
ಬದಲಾಗಿ ಸಮತೋಲನವಾದ ಬದುಕಿನ ಪರಿಯನ್ನು ಕರಗತಮಾಡಿಕೊಂಡು, ಸಂತೃಪ್ತಿಯ ಜೀವನವನ್ನು ರೂಢಿಸಿಕೊಂಡು ಇತರರ ಬಾಳಿಗೆ ಆಸರೆಯಾಗಲು ಹಾತೊರೆಯುತ್ತಾನೆ. ಈ ಬದುಕು ಒಂದು ಪಯಣ. ಪಯಣದ ಅಂತ್ಯದಲ್ಲಿ ಸಾಫಲ್ಯವನ್ನು ಕಾಣಲು ಜೀವನವಿಡೀ ಸಾಫಲ್ಯದ ಹಾದಿಯಲ್ಲಿ ಸಾಗಬೇಕು ಎಂಬ ಸತ್ಯ ಅವನಿಗೆ ಮನದಟ್ಟಾಗಿರುತ್ತದೆ. ಈ ಕಾರಣ ಅವನು ತನ್ನ ಬಾಳಿನ ಏಳು ಬೀಳುಗಳಲ್ಲಿ ವಿಚಲಿತನಾಗದೆ ಭಕ್ತಿಯಲ್ಲಿಯೇ ತಲ್ಲೀನನಾಗಿರುತ್ತಾನೆ.
ನೈಜ ಭಕ್ತಿಯಲ್ಲಿ ಬದ್ಧತೆ ಪ್ರಮುಖವಾದುದು. ಬದ್ಧತೆ ಪ್ರತಿಜ್ಞೆ ಇದ್ದ ಹಾಗೆ. ಒಂದು ಬಾರಿ ಪ್ರತಿಜ್ಞೆ ಮಾಡಿದರೆ ಅದನ್ನು ಚಾಚೂ ತಪ್ಪದೆ ಪಾಲಿಸಬೇಕು. ಇಲ್ಲದಿದ್ದಲ್ಲಿ ಅದು ವ್ಯಕ್ತಿಯ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತದೆ, ಕುಂದನ್ನುಂಟು ಮಾಡುತ್ತದೆ. ಮಾಡಿದ ಪ್ರತಿಜ್ಞೆಯನ್ನು ಕಾಯಾ, ವಾಚಾ, ಮನಸಾ ಪಾಲಿಸುವುದೇ ಬದ್ಧತೆ. ಯಾವುದೇ ಒಬ್ಬ ವ್ಯಕ್ತಿ ತನ್ನ ಕಾಯಕದಲ್ಲಿ ಸಾಫಲ್ಯವನ್ನು ಕಾಣಬೇಕಾದರೆ ಬದ್ಧತೆ ಇರಲೇಬೇಕು. ಬದ್ಧತೆ ಇಲ್ಲದ ಕೆಲಸ ಸಾಫಲ್ಯವನ್ನು ಕಾಣಲಾರದು. ಬದ್ಧತೆಯಲ್ಲಿ ಪೊಳ್ಳು ಆಶ್ವಾಸನೆಗಳಿಗೆ ಹಾಗೂ ಕುಂಟುನೆಪಗಳಿಗೆ ಆಸ್ಪದವಿರುವುದಿಲ್ಲ. ಅಲ್ಲಿ ಸತ್ಯ ಪಥವೇ ಪರಮ ಪಥವಾಗುತ್ತದೆ. "ನಾನು ಕ್ರಿಸ್ತ ಯೇಸುವನ್ನು ಅನುಸರಿಸುವಂತೆ, ನೀವೂ ನನ್ನನ್ನು ಅನುಸರಿಸಿರಿ" (ಕೊರಿಂಥಿ 11:1) ಎಂದು ಸಂತ ಪೌಲ ಕೊರಿಂಥಿಯರಿಗೆ ಕರೆ ನೀಡುವ ಮೂಲಕ ತನಗೆ ಕ್ರಿಸ್ತನಲ್ಲಿದ್ದ ಅಪಾರ ಭಕ್ತಿಯನ್ನು, ಬದ್ಧತೆಯನ್ನು ವ್ಯಕ್ತಪಡಿಸುತ್ತಾನೆ. ಹಾಗೆಯೇ ಪೌಲ ತನ್ನ ಮತ್ತು ಪ್ರಭುವಿನ ಸತ್ಸಂಬಂಧವನ್ನು "ಕ್ರಿಸ್ತಯೇಸುವಿನೊಂದಿಗೆ ನಾನೂ ಶಿಲುಬೆಗೇರಿಸಲಾದವನು. ಈಗ ಜೀವಿಸುವವನು ನಾನಲ್ಲ. ಕ್ತಿಸ್ತಯೇಸು ನನ್ನಲ್ಲಿ ಜೀವಿಸುತ್ತಾರೆ. ನನ್ನನ್ನು ಪ್ರೀತಿಸಿ ನನಗಾಗಿ ಪ್ರಾಣಾರ್ಪಣೆ ಮಾಡಿದ ದೇವರ ಪುತ್ರನಲ್ಲಿ ನಾನು ಇರಿಸಿರುವ ವಿಶ್ವಾಸದಿಂದಲೇ ನಾನೀಗ ಈ ದೇಹದಲ್ಲಿ ಜೀವಿಸುತ್ತಿದೇನೆ" (ಗಲಾತ್ಯ 2:20) ಎಂದು ವಿವರಿಸುತ್ತಾನೆ.
ಬದ್ಧತೆಗೆ ಬದ್ಧನಾದವನು ನೈಜ ಭಕ್ತಿಯಲ್ಲಿ ಪ್ರವರ್ಧಿಸಿ, ಸಿದ್ಧಿಯನ್ನು ಕಂಡುಕೊಳ್ಳುತ್ತಾನೆ. ಭಕ್ತಿ ಎಂದರೆ ತೋರಿಕೆಯ ಪೂಜೆಯಲ್ಲ ಬಾಹ್ಯ ಆಚರಣೆಗಳಲ್ಲ. ಭಕ್ತಿ ಎಂದರೆ ಅಪ್ಪಟ ಪ್ರೀತಿ, ಭಕ್ತಿ ಎಂದರೆ ಪ್ರಾಮಾಣಿಕತೆ, ಭಕ್ತಿ ಎಂದರೆ ಶ್ರದ್ಧೆ ಮತ್ತು ಭಕ್ತಿ ಎಂದರೆ ಬದ್ಧತೆ ಇವುಗಳಿಲ್ಲದಿದ್ದಲ್ಲಿ ಅದು ನೈಜ ಭಕ್ತಿಯಾಗಲಾರದು. ಇದನ್ನು ವಚನಕಾರ ಜೇಡರ ದಾಸಿಮಯ್ಯ "ಬರುಸಟಗನ ಭಕ್ತಿ ದಿಟವೆಂದು ನಚ್ಚಲು ಬೇಡ. ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತ್ತು ಕಾಣಾ!”ಎನ್ನುತ್ತಾನೆ.
ನೈಜ ಭಕ್ತಿಯಲಿ ಪರೀಕ್ಷೆಗಳು ಸಹಜ. ಅವು ಭಕ್ತನು ದೈವ ಪ್ರೀತಿಯಲ್ಲಿ ಸಂಪೂರ್ಣವಾಗಿ ನೆಲೆ ನಿಲ್ಲುವಂತೆ ಮಾಡುತ್ತವೆ. ಇದನ್ನು ಕೀರ್ತನೆಕಾರ "ಪ್ರಭುವಿಗೆ ಬಿಡು ಜೀವನಯಾತ್ರಾ ಚಿಂತೆಯನು ಭರವಸೆಯಿಂದಿರು, ಆತನದನು ಸಾಗಿಸುವನು" (37:5) ಎನ್ನುತ್ತಾನೆ. ಆದರೆ ಭಕ್ತ ವಿಚಲಿತನಾಗಿ ನಿರಾಶೆಗೊಂಡರೆ ಭಕ್ತಿಯ ನೈಜ ಸತ್ವವನ್ನು ಕಳೆದುಕೊಳ್ಳುತ್ತಾನೆ. ಪರೀಕ್ಷೆಗಳಲ್ಲಿ ವಿಚಲಿತನಾಗದಿರುವವನು ಜಯದ ಜಯಮಾಲೆಯನ್ನು ಹೊಂದುತ್ತಾನೆ. ಇದನ್ನು ಬೈಬಲಿನ ಸುಜ್ಞಾನ ಗ್ರಂಥವು "ಮಾನವನ ದೃಷ್ಟಿಯಲ್ಲಿ ಅವರು ಕಂಡುಬಂದರು ಶಿಕ್ಷಿಸಲ್ಪಟ್ಟವರಂತೆ, ಅವರಲ್ಲಾದರೋ ತುಂಬಿತ್ತು ಅಮರತ್ವದ ನಂಬಿಕೆ ನಿರೀಕ್ಷೆ. ಅವರು ಅನುಭವಿಸಿದ ಶಿಕ್ಷೆ ಅಲ್ಪ, ಹೊಂದುವ ಸೌಭಾಗ್ಯ ಅಪಾರ. ಶೋಧಿಸಿದ ತರುವಾಯ ದೇವರಿಗೆ ಅವರು ಕಂಡುಬಂದರು ಯೋಗ್ಯಾರ್ಹ. ಶೋಧಿಸಿದರವರನು ಪುಟಕ್ಕಿಟ್ಟ ಚಿನ್ನದಂತೆ, ಅಂಗೀಕೃತರಾದರು ಪೂರ್ಣದಹನ ಬಲಿಯಂತೆ. ಪ್ರಕಾಶಿಸುವರು ದೇವರನು ಸಂದರ್ಶಿಸುವ ಕಾಲದಲಿ, ಹೊಳೆಯುವರು ಒಣಹುಲ್ಲಿನೊಳಗಿನ ಕಿಡಿಗಳೋಪಾದಿ. ನ್ಯಾಯ ತೀರಿಸುವರವರು ಜನಾಂಗಗಳಿಗೆ, ದೊರೆತನ ಮಾಡುವರವರು ಜನಗಳ ಮೇಲೆ, ದೇವರ ಪ್ರಜೆಗಳಾಗಿರುವರು ಸದಾಕಾಲಕೆ" (3:3-8). ಎಂದು ವಿವರಿಸುತ್ತದೆ. ಈ ಮೂಲಕ ಸದ್ಭಕ್ತನಿಗೆ ಬರುವ ಕಷ್ಟನಷ್ಟಗಳು ತರಗೆಲೆಗಳಂತೆ ತೂರಿಹೋಗುತ್ತೆ, ಮೋಡಗಳಂತೆ ಕರಗಿಹೋಗುತ್ತವೆ ಹಾಗೂ ದೇವರ ಭಕ್ತಿಯಲ್ಲಿ ಮಿಂದು ಮಾಗಿದ ಅನುಬಂಧ ಮಾತ್ರ ಶಾಶ್ವತ ಎಂಬುವುದಂತೂ ಸತ್ಯವೇ ಸರಿ.
*******************
No comments:
Post a Comment