ಸಹೋ. ಜಾರ್ಜ್ ಫೆರ್ನಾಂಡಿಸ್ (ಜಾಜಿ)
ಎಂ. ದಾಸಾಪುರ
ದೇವರು ನಮ್ಮೆಲ್ಲರನ್ನು ತಮ್ಮ ಹೋಲಿಕೆಯಲ್ಲಿ ಸೃಷ್ಠಿಮಾಡುವುದರ ಮೂಲಕ ಅವರ ಪ್ರೀತಿಯನ್ನು ನಮ್ಮಲ್ಲಿ ಹಂಚಿ ಅದೇ ಪ್ರೀತಿಯನ್ನು ಜಗದ ಎಲ್ಲೆಡೆ ಸಾರಿರಿ ಎಂದು ಹೇಳಿದರು. ಅಂದು ಅಂಜುಬುರುಕರಾಗಿದ್ದ ಶಿಷ್ಯರು ಮತ್ತು ಮಾತೆ ಮರಿಯಳು ಒಂದು ಕೊಠಡಿಯಲ್ಲಿ ಪ್ರಾರ್ಥನೆ ಮಾಡುತ್ತಾ ಇರುವಾಗ ಪವಿತ್ರಾತ್ಮರು ಅವರ ಮೇಲೆ ಇಳಿದು ಬಂದು ಅವರನ್ನು ತಮ್ಮ ಶಕ್ತಿಯಿಂದ ತುಂಬಿದರು. ಅಂದಿನಿಂದ ಅವರೆಲ್ಲರೂ ಸುವಾರ್ತಾ ಪ್ರಸಾರದ ಅವಶ್ಯಕತೆಯನ್ನು ಮನಗಂಡು ಅಂದಿನಿಂದ ಸುವಾರ್ತಾ ಪ್ರಸಾರದ ಸೇವಾಕಾರ್ಯವನ್ನು ವಿಶ್ವದ ಉದ್ದಗಲಕ್ಕೂ ಕೈಗೊಂಡರು.
ಮುಖ್ಯವಾಗಿ ಸಂತರಾದ ಪೇತ್ರ ಮತ್ತು ಪೌಲರು ಈ ಸುವಾರ್ತಾ ಪ್ರಸಾರದ ಪ್ರಮುಖ ಮೂಲೆಗಲ್ಲುಗಳಾಗಿ, ಅನ್ಯವಿಶ್ವಾಸಿಗಳಿಗೆಲ್ಲಾ ಪ್ರಭುವಿನ ಬಗ್ಗೆ ಬೋಧಿಸಿ, ಧರ್ಮಸಭೆಯನ್ನು ಸ್ಥಾಪಿಸಿದರು. ಸುವಾರ್ತಾ ಕಾರ್ಯವನ್ನೇ ತಮ್ಮ ಬದುಕಿನ ಮುಖ್ಯ ಧ್ಯೇಯವನ್ನಾಗಿಸಿಕೊಂಡು, ತಮ್ಮ ಉಸಿರನ್ನಾಗಿಸಿಕೊಂಡು ಆ ಪುಣ್ಯದ ಕಾರ್ಯಕ್ಕೆ ಸಾಕ್ಷಿಗಳಾಗಿ ಅಂತೆಯೇ ಅದು ಎಂದಿಗೂ ನಿಂತ ನೀರಾಗಬಾರದೆಂದು ಎನಿಸಿ, ಅದನ್ನು ಪೋಷಿಸಿ ಜಗದ ಎಲ್ಲೆಡೆ ಅದು ಸಾಗರವಾಗಿ ಹರಿಯುವಂತೆ ಮಾಡಿದರು. ಹೀಗೆ ಅಂದು ಸ್ಥಾಪಿಸಲ್ಪಟ್ಟ ಆ ಕ್ರಿಸ್ತರ ಧರ್ಮಸಭೆಯು ಇಂದು ಜಗತ್ತಿನಲೆಲ್ಲಾ ಹಬ್ಬಿ ಹರಡಿದೆ, ಇಂದಿಗೂ ಆ ಸೇವಾಕಾರ್ಯ ಹರಡಿಕೊಳ್ಳುತ್ತಿದೆ. ಕ್ರಿಸ್ತರು ತೋರಿದ ಸ್ವರ್ಗದ ಹಾದಿಯನ್ನು ಈ ಜಗತ್ತಿಗೆಲ್ಲಾ ಮನದಟ್ಟು ಮಾಡಿ ಅದೇ ನಮ್ಮ ಬಾಳಿನ ಮೂಲವಾಗಬೇಕೆಂದು ಪ್ರಸ್ತುತ ಧರ್ಮಸಭೆಯ ಆಶಯ.
ಈ ಆಶಯದೊಂದಿಗೆ ನಾವೆಲ್ಲಾ ಜೀವಿಸುತ್ತಿರುವಾಗ ನಮ್ಮ ಕ್ರಿಸ್ತ ಪ್ರೇರಿತ ಬದುಕು ಸುವಾರ್ತೆಗೆ ಸಾಧನವಾಗುತ್ತಿದೆಯೇ? ಎಂಬ ಪ್ರಶ್ನೆ ಮೂಡುವುದು ಸಹಜ. ನಮ್ಮ ವಿಶ್ವುರು ಫ್ರಾನ್ಸಿಸ್‍ರವರು ಸುವಾರ್ತಾ ಪ್ರಸಾರದ ಭಾನುವಾರದ ಪ್ರಯುಕ್ತ ನೀಡಿದ ಸಂದೇಶದ ಮೂಲ ತಿರುಳೇನೆಂದರೆ, ನಾವೆಲ್ಲರೂ ಸ್ನಾನದೀಕ್ಷೆಯನ್ನು ಪಡೆದವರು ಮತ್ತು ಕಳುಹಿಸಲ್ಪಟ್ಟವರು. ಇದರ ಒಳಾರ್ಥವನ್ನೊಮ್ಮೆ ಇಣುಕಿನೋಡಿದಾಗ, ನಮ್ಮ ವಿಶ್ವಗುರು ಹೇಳುವಂತೆ ಸ್ನಾನದೀಕ್ಷೆಯ ಮೂಲಕ ನಮ್ಮೆಲ್ಲರನ್ನು ಕ್ರಿಸ್ತರ ಸಾಮ್ರಾಜ್ಯಕ್ಕೆ ಆಹ್ವಾನಿಸಲಾಗಿದೆ. ಅದರ ಮೂಲಕ ನಾವು ಸುವಾರ್ತೆಯ ರಾಯಾಭಾರಿಗಳಾಗಿ ಆ ಸುವಾರ್ತೆಯನ್ನು ಜಗದ ಎಲ್ಲೆಡೆ ಬೋಧಿಸಲು ನಾವು ಕಳುಹಿಸಲ್ಪಟ್ಟಿದ್ದೇವೆ. ಹೀಗೆ ನಾವು ಸುವಾರ್ತೆಯ ರಾಯಭಾರಿಗಳಾಗಲು ಕರೆಹೊಂದಿದವರು ಎಂಬ ನಿಜಾಂಶವನ್ನು ವಿಶ್ವಗುರು ನಮಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.
ಪ್ರಸ್ತುತ ಯುಗದಲ್ಲಿ ಎಲ್ಲವೂ ತಂತ್ರಜ್ಞಾನಮಯವಾಗುತ್ತಿರುವ ಈ ಸಮಾಜದಲ್ಲಿ ಸುವಾರ್ತಾ ಬೋಧನೆಯ ಅವಶ್ಯಕತೆ ಎಷ್ಟಿದೆ ಎಂಬುದು ನಮಗೆಲ್ಲಾ ತಿಳಿದಿರುವ ವಿಚಾರವೇ. ಅಂದು ಯೇಸುವು ತಮ್ಮ ಪ್ರೇಷಿತರಿಗೆ, ಹೋಗಿ ಜಗತ್ತಿನ ಎಲ್ಲೆಡೆಗೂ ಶುಭಸಂದೇಶವನ್ನು ಸಾರಿರಿ ಎಂದು ಹೇಳುವುದರ ಮೂಲಕ ಸುವಾರ್ತಾ ಪ್ರಸಾರದ ಸೇವಾ ಕಾರ್ಯಕ್ಕೆ ಮುನ್ನುಡಿ ಬರೆದರು. ಬಹುಶಃ ಅಂದು ಯೇಸುವು ಬರೆದ ಮುನ್ನುಡಿ ಇಂದಿಗೂ ಪ್ರಸ್ತುತವಲ್ಲವೇ? ಏಕೆಂದರೆ ಇಂದು ನಾವೆಲ್ಲರೂ ಸುವಾರ್ತಾ ಬೋಧಕರಾಗಬೇಕೆಂಬುದು ಕ್ರಿಸ್ತರ ಬಯಕೆ.
ದಿವ್ಯ ಬಲಿಪೂಜೆಯಲ್ಲಿ ಭಾಗವಹಿಸಿ ಅವರ ವಾಕ್ಯವನ್ನು ಆಲಿಸಿ, ಶರೀರವನ್ನು ಭುಜಿಸುವುದರ ಮೂಲಕ ಅಲ್ಲಿ ಕಂಡುಕೊಂಡ ಕ್ರಿಸ್ತೇಸುವನ್ನು ನಮ್ಮ ಸುತ್ತಮುತ್ತಲ ಸಮಾಜದಲ್ಲಿ ಕರ ಕೃತಿಗಳ ಮೂಲಕ ತೋರ್ಪಡಿಸಬೇಕಾದುದು ನಮ್ಮೆಲ್ಲ ಕರ್ತವ್ಯ. ಅಷ್ಟೇ ಅಲ್ಲದೆ ನಮ್ಮ ದಿನನಿತ್ಯದ ಜೀವನದಲ್ಲಿ ನೊಂದವರ ಸಾಂತ್ವನವಾಗಿ, ದಮನಿತರ ದನಿಯಾಗಿ, ನಿರ್ಗತಿಕರಿಗೆ ಆಶ್ರಯವಾಗಿ, ಪ್ರೀತಿ ಅರಸುವವರಿಗೆ ಪ್ರೀತಿಯ ಚಿಲುಮೆಯಾಗಿ ಮತ್ತು ಬದುಕಿನಲ್ಲಿ ಭರವಸೆಯನ್ನು ಕಳೆದುಕೊಂಡವರಿಗೆ ಭರವಸೆಯ ಕಿರಣವಾಗಿ ನಿಲ್ಲೋಣ. ಅವರೂ ಕೂಡ ಕ್ರಿಸರ ಸೃಷ್ಠಿಗಳು ಎಂಬುದನ್ನು ಅರಿತು ಕ್ರಿಸ್ತರ ಸ್ಪರ್ಶವು ಅವರಿಗೆ ತಾಗುವಂತೆ ನೋಡಿಕೊಳ್ಳೋಣ.
ನಾವು ಈ ಸುವಾರ್ತಾ ಪ್ರಸಾರದ ಭಾನುವಾರದಂದು ಮಾಡುವ ತ್ಯಾಗದ ಕಾಣಿಕೆ ಈ ಜಗತ್ತಿನ ಯಾವುದೋ ಮೂಲೆಯಲ್ಲಿರುವ ಬಡವರ, ನಿರ್ಗತಿಕರ ಮತ್ತು ನೊಂದವರ ಹಸಿವನ್ನು ನೀಗಿಸುತ್ತದೆ ಎಂದಾದರೆ, ನಾವು ಆಚರಿಸುವ ಈ ನಮ್ಮ ಸುವಾರ್ತಾ ಪ್ರಸಾರ ಭಾನುವಾರವು ನಾವೆಲ್ಲರೂ ಕ್ರಿಸ್ತರ ಸುವಾರ್ತೆಯ ರಾಯಭಾರಿಗಳು ಎಂಬ ಸತ್ಯವನ್ನು ಜಗತ್ತಿಗೆ ತೋರಿಸುತ್ತದೆ. ನಾವು ಕ್ರೈಸ್ತರೆಂದು ಹೇಳಿಕೊಂಡು ಜೀವಿಸುವುದಕ್ಕಿಂತ, ನಮ್ಮ ಕರ ಕೃತಿಗಳು ಈ ಸಮಾಜದ ಶೋಷಿತ ವರ್ಗದ ಕಣ್ಣೀರನ್ನು ಒರೆಸಲು ಮುಂದಾದರೆ ಅದೇ ಅತೀ ಶ್ರೇಷ್ಠವಾದ ಸುವಾರ್ತಾ ಸೇವೆ. ಕ್ರಿಸ್ತರು ಅಂದು ಮಾಡಿದ್ದು ಅದನ್ನೇ. ಇಂದು ನಮ್ಮಿಂದ ಅವರು ಬಯಸುತ್ತಿರುವುದು ಅದನ್ನೇ.
ನಮ್ಮ ಮುಖದ ಸೌಂದರ್ಯಕ್ಕಿಂತ ಹೃದಯದ ಸೌಂದರ್ಯವು ಈ ಸುವಾರ್ತಾ ಪ್ರಸಾರಕ್ಕೆ ಅತೀ ಅವಶ್ಯಕ ಎಂಬುದನ್ನು ಅರಿತು, ಸುವಾರ್ತಾ ಪ್ರಸಾರವು ತುಟಿ ಬೋಧನೆಗಳಿಗಿಂತ ಹೆಚ್ಚಾಗಿ ಕರ ಬೋಧನೆಗಳಲ್ಲಿ ಕಾರ್ಯರೂಪಕ್ಕೆ ಬಂದರೆ ಸುವಾರ್ತಾ ಪ್ರಸಾರವು ತನ್ನಿಂದ ತಾನೇ ಹರಡಿಕೊಳ್ಳುತ್ತದೆ ಎಂಬುದನ್ನು ಮರೆಯದಿರೋಣ. ಹೀಗೆ ನಮ್ಮ ಕರ ಕೃತಿಯ ಬೋಧನೆ ತರುತ್ತದೆ ನಮಗೆ ಸ್ವರ್ಗೀಯ ಸಂಭಾವನೆ ಎಂಬುದನ್ನು ತಿಳಿದು ಬಾಳೋಣ.
*******************
No comments:
Post a Comment