· ದೀಪ್ತಿ ಫ್ರಾನ್ಸಿಸ್ಕಾ, ಯಡವನಹಳ್ಳಿ
ಅರವತ್ತೈದು... ನಮ್ಮಲ್ಲಿ ಅನೇಕರು ಉದ್ಯೋಗದಿಂದ ನಿವೃತ್ತರಾಗುವ ವಯಸ್ಸು. ಈ ವಯಸ್ಸಿನಲ್ಲಿ ಸಾರಾಳ ಬದುಕಿಗೆ ಪ್ರಬಲವಾದ ತಿರುವು ಸಿಗುತ್ತದೆ. ಸಾರಾ ಮತ್ತು ಅಬ್ರಹಾಮ ದೇವರ ಕರೆಗೆ ಓಗೊಟ್ಟು ಊರ್ ಎಂಬ ಗ್ರಾಮದಿಂದ ಎಲ್ಲವನ್ನೂ ಬಿಟ್ಟು ಕಾನಾನ್ ನಾಡಿಗೆ ಹೊರಟರು. ಅಪರಿಚಿತ ನಾಡಲ್ಲಿ ಯಾವುದೋ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳಿಗೆ ಹೊಂದಿಕೊಳ್ಳುವುದು ಹೇಗೆಂದು ಅವರಿಬ್ಬರೂ ಚಿಂತಿತರಾಗಿದ್ದರು. ಇಂತಹ ಒಂದು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ದೇವರ ಚಿತ್ತಕ್ಕೆ ತಲೆಬಾಗಿ ಬದುಕಿದ ಸಾರಾ ಎಂಬ ವಯೋವೃದ್ಧ ಮಹಿಳೆಯ ವ್ಯಕ್ತಿತ್ವ ನಿಜಕ್ಕೂ ಪ್ರಶಂಸನೀಯವಾದದ್ದು.
ಸಾರಾಳು ಅನುಪಮ ಸೌಂದರ್ಯವತಿಯಾಗಿದ್ದರಿಂದ ಫರೋಹನ ಹಾಗೂ ಅಬಿಮೆಲೆಕನ ಕಣ್ಣುಗಳು ಅವಳ ಮೇಲಿದ್ದವು. ಹೀಗಾಗಿ ಸಾರಾ ಮತ್ತು ಅಬ್ರಹಾಮ ಊರ್ ನಿಂದ ಕಾನಾನಿಗೆ ಹೋಗುವಾಗ ದಾರಿಯ ಮಧ್ಯದಲ್ಲಿ ಅನೇಕ ಗಂಡಾಂತರಗಳನ್ನು ಎದುರಿಸಬೇಕಾಯಿತು. ಅಬ್ರಹಾಮ ಮತ್ತು ಸಾರಾ ಗಂಡ-ಹೆಂಡತಿ ಎಂದು ಹೇಳಿಕೊಂಡರೆ ಅಬ್ರಹಾಮನನ್ನು ಕೊಂದು ಸಾರಾಳನ್ನು ಫರೋಹನ ಅಂತಃಪುರಕ್ಕೆ ಸೇರಿಸುವ ಸಂಭವವಿದ್ದುದ್ದರಿಂದ ಅವರಿಬ್ಬರೂ ಅಣ್ಣತಂಗಿಯರು ಎಂದು ಹೇಳಿಕೊಳ್ಳುವ ಮಾತಾಗಿತ್ತು.
ದುರದೃಷ್ಟವೆಂದರೆ ಸಾರಾ ಕೊನೆಗೂ ಫರೋಹನ ಅಂತಃಪುರಕ್ಕೆ ಹೋಗಲೇಬೇಕಾಯಿತು. ಆ ರಾತ್ರಿ ದೇವರು ಫರೋಹನಿಗೆ ಅನೇಕ ದುಃಸ್ವಪ್ನಗಳನ್ನು ಬರಮಾಡಿ ಅವನನ್ನು ಎಚ್ಚರಿಸುತ್ತಾರೆ. ಇದನ್ನೆಲ್ಲ ಕಂಡು ವಿಹ್ವಲಗೊಳ್ಳುವ ಫರೋಹನು ಅಬ್ರಹಾಮನನ್ನು ಕರೆಸಿ ಸಾರಾಳನ್ನು ಕರೆದುಕೊಂಡು ಹೋಗಲು ವಿನಂತಿಸುತ್ತಾನೆ. ಅಷ್ಟೇ ಅಲ್ಲದೆ ಕುರಿಮೇಕೆಗಳು, ಒಂಟೆಗಳು, ದಾಸದಾಸಿಯರಂತಹ ಕೊಡುಗೆಗಳನ್ನೂ ಸಹ ಕೊಟ್ಟು ಕಳುಹಿಸುತ್ತಾನೆ. ಇದರಿಂದ ಅಬ್ರಹಾಮನ ಆಸ್ತಿ ಹೆಚ್ಚಾಯಿತು. ಗೆರಾರಿನ ಅಬಿಮೆಲೆಕನ ಆಸ್ಥಾನದಲ್ಲಿ ಸಹ ಇಂಥದ್ದೇ ಸಂಗತಿಗೆ ದೇವರು ಮಧ್ಯ ಪ್ರವೇಶಿಸಿ ಅವನನ್ನು ಎಚ್ಚರಿಸಿ ಸಾರಾಳನ್ನು ಅಬ್ರಹಾಮನಿಗೆ ಒಪ್ಪಿಸುವಂತೆ ಮಾಡುತ್ತಾರೆ. ಅಲ್ಲಿ ಸಹ ಅವರಿಗೆ ಇನ್ನೂ ಹೆಚ್ಚಿನ ಪಶು ಪ್ರಾಣಿಗಳು ದೊರೆಯುತ್ತವೆ. ಆಗ ಅವರ ಆಸ್ತಿ ಇನ್ನೂ ಅಧಿಕವಾಗಿ ಬೆಳೆಯುತ್ತದೆ.
ಅನೇಕ ವರ್ಷಗಳಿಂದ ಮಕ್ಕಳಿಲ್ಲದೆ ಕಂಗಾಲಾಗಿದ್ದ ಆ ದಂಪತಿಗೆ, ಊರ್ ಗ್ರಾಮವನ್ನು ಬಿಟ್ಟು ತೆರಳುವಾಗ ಆಕಾಶದ ನಕ್ಷತ್ರಗಳಂತೆ ಅವರ ಸಂತತಿ ಬೆಳೆಯುವುದು ಎಂದು ದೇವರು ವಾಗ್ದಾನ ಮಾಡಿದ್ದರು. ವರ್ಷಗಳು ಕಳೆದವು ಆದರೂ ಮಕ್ಕಳಿಲ್ಲ. ದೇವರಿತ್ತ ಆ ವಾಗ್ದಾನ ಕನಸಿನ ಗೋಪುರವಾಗಿ ಉಳಿಯಿತು. ಅಂದಿನ ಕಾಲದ ರೂಢಿಯಂತೆ ಸಾರಾಳು ಅಬ್ರಹಾಮನಿಗೆ ತಮ್ಮ ದಾಸಿಯಾದ ಹಾಗರಳೊಂದಿಗೆ ಮಲಗಲು ಅನುಮತಿ ನೀಡುತ್ತಾಳೆ. ಹಾಗರಳಿಂದ ಮಗುವಾಗುವ ಭರವಸೆ ಇಟ್ಟುಕೊಳ್ಳುತ್ತಾಳೆ. ತಡವಾಗುವ ಮುನ್ನ ಇಬ್ಬರು ದೂತರು ಬಂದು ಅಬ್ರಹಾಮನಿಗೆ ನಿನ್ನ ಮಡದಿ ಸಾರಾಳೆಲ್ಲಿ ಎಂದು ಕೇಳಲು ಶಿಬಿರದಲ್ಲಿ ಇರುವಳು ಎಂದು ಉತ್ತರಕೊಟ್ಟನು. ಅದಕ್ಕೆ ಆ ದೂತರು, ನಾವು ಬರುವ ವರ್ಷ ಇದೇ ಸಮಯಕ್ಕೆ ಇಲ್ಲಿ ಬರುತ್ತೇವೆ. ಅಷ್ಟರಲ್ಲಿ ನಿನ್ನ ಮಡದಿ ಸಾರಾಳಿಗೆ ಒಂದು ಗಂಡು ಮಗು ಹುಟ್ಟಿರುತ್ತದೆ ಎಂದರು. ಒಳಗಿದ್ದ ಸಾರಾಳು ನಕ್ಕು ಈ ಮುದಿಪ್ರಾಯದಲ್ಲಿ ನಮಗೆ ಮಕ್ಕಳಾಗುವುದೇ ಎಂದುಕೊಂಡಳು ಆದರೂ ಆಕೆ ಗಂಡು ಮಗುವಿಗೆ ಜನ್ಮವಿತ್ತಳು. ಆ ಮಗುವಿಗೆ ಇಸಾಕ್ ಎಂದು ನಾಮಕಾರಣ ಮಾಡಿದರು. ದೇವರಿತ್ತ ವಾಗ್ದಾನ ಅಲ್ಲಿಗೆ ಈಡೇರಿತು.
ಇದಾದ ಕೆಲವೇ ದಿನಗಳಲ್ಲಿ ದೇವರು ಅವರ ಆ ಒಂದೇ ಮಗುವನ್ನು ತನಗೆ ಬಲಿಯಾಗಿ ಅರ್ಪಿಸಬೇಕೆಂದು ಆಜ್ಞಾಪಿಸುತ್ತಾರೆ. ಈ ಸಂದರ್ಭದಲ್ಲಿ ಸಾರಾಳ ಕರುಳು ಕಿತ್ತು ಬಂದಂತಾಗುತ್ತದೆ. ಬಹುಕಾಲ ಬಂಜೆಯಾಗಿದ್ದು ದೇವರ ವಿಶೇಷ ಕೃಪೆಯಿಂದ ಪಡೆದ ಸಂತಸದ ಮಗುವನ್ನು ಈಗ ದೇವರಿಗೇ ಬಲಿಯಾಗಿ ಅರ್ಪಿಸಬೇಕಲ್ಲಾ ಎಂಬುದು ಅವಳ ಗೋಳಾಟ. ಆದರೆ ಅದು ದೇವರು ಒಡ್ಡಿದ ಪರೀಕ್ಷೆಯಾಗಿತ್ತು. ಎಲ್ಲವೂ ಸಾಂಗವಾಗಿ ನಡೆದು ಇನ್ನೇನು ಇಸಾಕನ ಪ್ರಾಣವನ್ನು ತೆಗೆಯಬೇಕೆನ್ನುವಾಗ ದೇವರು ಪ್ರತ್ಯಕ್ಷರಾಗಿ ಮಗುವಿನ ಜೀವ ಉಳಿಸುತ್ತಾರೆ.
ಹೀಗೆ ಕಷ್ಟದುಃಖಗಳನ್ನೂ ಸುಖಸಂತೋಷವನ್ನೂ ಅನುಭವಿಸುವ ಸಾರಾ 127 ವರ್ಷಗಳ ಕಾಲ ಅಬ್ರಹಾಮನೊಂದಿಗೆ ಸುಖಸಂಸಾರ ನಡೆಸಿ ಸತ್ತ ನಂತರ ಆಕೆಯ ಶರೀರವನ್ನು ಹೆಬ್ರೋನಿನ ಬಳಿ ಇರುವ ಮಚ್ಪೆಲಾ ಎಂಬ ಗುಹೆಯಲ್ಲಿ ಸಮಾಧಿ ಮಾಡುತ್ತಾರೆ. ಸಾರಾಳು ಸತ್ತಾಗ ಇಸಾಕನಿಗೆ 37 ವರ್ಷ. ತನ್ನದೇ ಸಂತಾನದ ಕುರಿತು ಆಕೆಗೆ ಆತಂಕ, ಸಂದೇಹಗಳು ಎಲ್ಲಾ ಇದ್ದರೂ ಸಹ ದೇವರು ಮಧ್ಯೆ ಪ್ರವೇಶಿಸಿ ತಾವಿತ್ತ ವಾಗ್ದಾನವನ್ನು ಈಡೇರಿಸಿದರು. ಹೀಗೆ ಸಾರಾ ಯಾವುದೇ ಕಾಲ್ಪನಿಕ ಕಥೆಯ ನಾಯಕಿಗಿಂತ ಹೆಚ್ಚು ಶ್ರಮದಾಯಕ ಸಾಹಸ ಮಾಡಿದ ಮಹಿಳೆಯಾದಳು. ಆ ಸಾಹಸವು ಭರವಸೆಯೊಂದಿಗೆ ಪ್ರಾರಂಭವಾಗಿ ಖುಷಿಯ ಅಂತ್ಯ ಕಾಣುತ್ತದೆ. ಮರಿಯಳಂತೆ ಸಾರಾಳು ಸಹ ಸಕಲ ಜನಾಂಗಗಳಿಗೆ ಆದರ್ಶ ಮಹಿಳೆಯಾಗುತ್ತಾಳೆ.
*******************
No comments:
Post a Comment