¨ ಸಿ ಮರಿಜೋಸೆಫ್
ಕಳೆದ ಇನ್ನೂರು ವರ್ಷಗಳಲ್ಲಿ ನಮ್ಮ ಇಂಡಿಯಾ ದೇಶವು ಪಶ್ಚಿಮ ದೇಶಗಳ ವಸಾಹತು ದೇಶವಾಗಿ ಮಾರ್ಪಟ್ಟಿದ್ದರಿಂದ ನಮ್ಮಲ್ಲಿನ ಕ್ರೈಸ್ತರನೇಕರು ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗಿರುವುದು ನಿಜ. ನಮ್ಮ ಮದುವೆಗಳಲ್ಲಿ ದೇಸೀ ಆಚರಣೆಯ ಅಂಗವಾಗಿ ಧಾರೆ ಎರೆಯುವುದು ಮತ್ತು ತಾಳಿ ಕಟ್ಟುವುದು ಇದೆಯಾದರೂ ಸೂಟು ಬೂಟು ಗೌನುಗಳ ಢಾಳಾದ ಪ್ರದರ್ಶನಗಳು ಇದ್ದೇ ಇವೆ. ಇದೇ ನೇರದಲ್ಲಿ ನೋಡಿದಾಗ ಕ್ರಿಸ್ತಜಯಂತಿಯ ಸಂದರ್ಭದಲ್ಲಿ ನಮ್ಮ ತಿನಿಸುಗಳಾದ ಕಜ್ಜಾಯ ಕರ್ಚಿಕಾಯಿ ಚಕ್ಕುಲಿಗಳ ಜೊತೆಗೆ ಕಲಕಲ ಇಲ್ಲದೇ ಹೋದಲ್ಲಿ ನಾವು ಏನನ್ನೋ ಕಳೆದುಕೊಂಡ ಭಾವ ಅನುಭವಿಸುತ್ತೇವೆ. ಈ ಕಾರಣದಿಂದ ನಾವು ಜನ್ಮತಃ ಭಾರತೀಯರಾಗಿದ್ದರೂ ಇತರ ಧರ್ಮೀಯರು ನಮ್ಮನ್ನು ಪರಕೀಯರೆಂಬಂತೆಯೇ ಭಾವಿಸುವುದು ಸರ್ವೇಸಾಮಾನ್ಯವಾಗಿದೆ.
ವಿಪರ್ಯಾಸವೆಂದರೆ ಓಣಮ್ ಹಬ್ಬವನ್ನು ನಮ್ಮ ದೇವಾಲಯದೊಳಕ್ಕೂ ತಂದು ಸಂಭ್ರಮಿಸುವ ಮಲಯಾಳಿ ಸೋದರರನ್ನು ಕಂಡು ನಾವು ಹಪಾಹಪಿಸುತ್ತೇವೆ. ವಿಶ್ವಧರ್ಮಸಭೆಯ ಆರಾಧನಾ ವಿಧಿಯಲ್ಲೇ ಇಲ್ಲದ ಬಾಲಯೇಸುವಿನ ಹಬ್ಬವನ್ನು ತಮಿಳು ಸೋದರರು ಪೊಂಗಲ್ ಹಬ್ಬದೊಂದಿಗೆ ಸಮೀಕರಿಸಿ ಆಚರಿಸುವಾಗ ನಾವೂ ಹುಂಬರಂತೆ ಹರಕೆ ಹೊತ್ತು ಬಾಲಯೇಸುವಿಗೆ ಭಕ್ತಿಯಿಂದ ನಡೆದುಕೊಳ್ಳುತ್ತೇವೆ. ಅದೇ ನಮ್ಮ ತಾತ ಮುತ್ತಾತಂದಿರು ಅನೂಚಾನವಾಗಿ ನಡೆಸಿಕೊಂಡು ಬಂದ ಮೂರುರಾಯರ ಹಬ್ಬ, ವನಚಿನ್ನಪ್ಪರ ಬೇಡುದಲೆಗಳನ್ನು ದೇವಾಲಯದ ಬಾಗಿಲೊಳಕ್ಕಿರಲಿ ಆವರಣದೊಳಕ್ಕೂ ಬಿಟ್ಟುಕೊಳ್ಳದವರನ್ನು ಒಪ್ಪಿಕೊಂಡು ಬಯಲಲ್ಲಿ ತೋಪುಗಳಲ್ಲಿ ಆಚರಿಸಿ ಪಾಲಿಗೆ ಬಂದದ್ದೇ ಪಂಚಾಮೃತ ಎಂದು ಸಂತೃಪ್ತರಾಗುತ್ತೇವೆ.
ಇವೆಲ್ಲದರ ನಡುವೆ ಮರಿಯಾ ಮಾತೆಯ ಹಬ್ಬದಂದು ಕಾವಿ ಬಟ್ಟೆ ಧರಿಸಿ ಅನನ್ಯತೆ ಮೆರೆಯುತ್ತೇವೆ, ’ಸಾಕ್ಕಳರೊಡಗೂಡಿ ಮಾತೆಗೆ ವಂದಿಸಿ...’ ಎಂದು ಹಾಡುತ್ತಾ ಹೂ ಎರಚುತ್ತೇವೆ, ಮರಿಯಮ್ಮನವರಿಗೆ ಸೀರೆ ಉಡಿಸಿ ಕಣ್ದುಂಬಿಕೊಳ್ಳುತ್ತೇವೆ, ನಮ್ಮದಲ್ಲದ ಹಾಯಿದೋಣಿಯ ಕೂವೆಮರವನ್ನು ಹಿತ್ತಾಳೆಯಲ್ಲಿ ಮಾಡಿಸಿ ದೇವಾಲಯದ ಆವರಣದಲ್ಲಿ ಸ್ಥಾಪಿಸಿ ಬಾವುಟದ ಕಂಬ ಎಂದು ಬೀಗುತ್ತೇವೆ.
ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಕ್ರೈಸ್ತಧರ್ಮವು ತನ್ನ ಇರುವಿಕೆಗಾಗಿ ತವಕಿಸುತ್ತಿದ್ದರೆ ಇತ್ತ ಆಫ್ರಿಕಾ ಮತ್ತು ಏಶಿಯಾದ ದೇಶಗಳಲ್ಲಿ ಹಳೆಯ ಸಂಸ್ಕೃತಿ ಮತ್ತು ಪದ್ಧತಿಗಳನ್ನು ಧರ್ಮದೊಂದಿಗೆ ಮೇಳವಿಸುವ ಪ್ರಯೋಗಗಳು ನಡೆಯುತ್ತಿವೆ. ಇದನ್ನೆಲ್ಲ ಗಮನಿಸಿದಾಗ ನಮ್ಮ ಧರ್ಮಾಚರಣೆಯಲ್ಲಿ “ದೇಸೀಕರಣ”ದ ಪಾತ್ರ ಎಂಥದು ಎಂಬುದು ಅರಿವಾಗುತ್ತದೆ.
ಯೇಸುವು ತಮ್ಮ ಗೆಳೆಯರಿಗೆ “ಹೋಗಿ, ಜಗದೆಲ್ಲೆಡೆಯಲ್ಲಿ ಶುಭಸಂದೇಶವನ್ನು ಸಾರಿರಿ” (ಮತ್ತಾಯ 28:18) ಎಂದು ಹೇಳಿದರೇ ಹೊರತು ಅದನ್ನು ಹೇಗೆಲ್ಲಾ ಸಾರಬಹುದು ಎಂದು ತಿಳಿಯಪಡಿಸಲಿಲ್ಲ. ಹಾಗೆ ನೋಡಿದರೆ ಕ್ರಿಸ್ತಸಂದೇಶವನ್ನು ಯೆಹೂದಿ ಗೂಡಿನಿಂದ ಹೊರದೆಗೆದು ಅನ್ಯದೇಶಗಳಿಗೆ ಸಾರುವ ಯತ್ನದಲ್ಲಿ ಪೌಲನು ಅಥೆನ್ಸಿನ ಮಹಾಜನಗಳಿಗೆ ಮಾಡಿದ ದೀರ್ಘಭಾಷಣ (ಪ್ರೇಷಿತರ ಕಾರ್ಯಕಲಾಪಗಳು 17:22-31) ವನ್ನೇ ದೇಸೀಕರಣದ ಮೊತ್ತಮೊದಲ ಪ್ರಯೋಗ ಎನ್ನಬಹುದು.
ಕ್ರೈಸ್ತರಲ್ಲದವರಿಗೆ ಕ್ರಿಸ್ತ ಬೋಧನೆಗಳನ್ನು ವಿವರಿಸುವಾಗ ಅದನ್ನು ಪರಿಣಾಮಕಾರಿಯಾಗಿಸಲು ದೇಸೀಕರಣದ ತತ್ವಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಅಂದರೆ ಆ ಹೊರಗಿನವನ ಆಚಾರ ವಿಚಾರಗಳಿಗೆ ಅನುಗುಣವಾಗಿ ಕ್ರಿಸ್ತೀಯ ಬೋಧನೆಗಳನ್ನು ಸಮೀಕರಿಸಿ ಹೀಗಲ್ಲ ಹೀಗೆ ಎಂದು ವಿವರಿಸುವ ಹಾಗೂ ಅವನದೇ ಸಂಸ್ಕೃತಿಗನುಗುಣವಾಗಿ ಕ್ರಿಸ್ತೀಯ ಆಚರಣೆಗಳನ್ನು ಮಾರ್ಪಾಡು ಮಾಡಿಕೊಳ್ಳುವ ಪ್ರಕ್ರಿಯೆಯನ್ನು ದೇಸೀಕರಣ (Inculturation)ಎನ್ನಲಾಗುತ್ತದೆ.
ಎಂಬತ್ತರ ದಶಕದಲ್ಲಿ ನಾನು ಫಾದರ್ ಐ ಅಂತಪ್ಪನವರ ಒಡನಾಟದಲ್ಲಿ ಅನುವಾದದ ಪದಮೀಮಾಂಸೆ ನಡೆಸಿದ್ದಾಗ ಇನ್ ಕಲ್ಚರೇಶನ್ ಪದಕ್ಕೆ ಸುಸಂಸ್ಕೃತೀಕರಣ ಎಂಬ ಪದ ಬಳಸಿದ್ದೆ. ಅದನ್ನೊಪ್ಪದ ಫಾದರ್ನವರು ಭಾರತೀಕರಣ ಇರಲೆಂದು ಸೂಚಿಸಿದ್ದರು. ಆದರೆ ಇಂದು ಇನ್ಕಲ್ಚರೇಶನ್ ಪದವನ್ನು ವಿಶ್ವವ್ಯಾಪ್ತ ಬಳಕೆಯ ಮೂಸೆಯಲ್ಲಿ ನೋಡಿದಾಗ ನಾವು ಅಂದು ಬಳಸಿದ್ದ ಮೇಲಿನ ಎರಡೂ ಪದಗಳು ಅಪಭ್ರಂಶವೆಂಬುದಾಗಿ ತೋರುತ್ತಿವೆ. ಆದ್ದರಿಂದ ಈ ಲೇಖನದಲ್ಲಿ ನಾನು ಇನ್ಕಲ್ಚರೇಶನ್ ಗೆ ಪರ್ಯಾಯವಾಗಿ “ದೇಸೀಕರಣ” ಎಂಬ ಪದವನ್ನು ಬಳಸುತ್ತಿದ್ದೇನೆ.
ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಮಾರ್ಗ ಸಾಹಿತ್ಯ ದೇಸೀ ಸಾಹಿತ್ಯ ಎಂಬೀ ಎರಡು ಪ್ರಕಾರಗಳನ್ನು ಕಾಣುತ್ತೇವೆ. ಸಂಸ್ಕೃತ ಕಾವ್ಯಗಳಾದ ರಾಮಾಯಣ, ಮಹಾಭಾರತ, ಶಾಕುಂತಲಗಳು ಕನ್ನಡದಲ್ಲಿ ಬಂದಾಗ ಮಾರ್ಗಸಾಹಿತ್ಯ ಎನಿಸಿಕೊಳ್ಳುತ್ತವೆ. ವಚನಸಾಹಿತ್ಯ, ಗಾದೆ ಮುಂತಾದವೆಲ್ಲ ದೇಸೀ ಸಾಹಿತ್ಯವೆನಿಸುತ್ತವೆ. ಅದೇ ರೀತಿ ಕನ್ನಡದಲ್ಲಿ ರಗಳೆ, ಸಾಂಗತ್ಯ ಮತ್ತು ದೇಸೀ ಎಂಬ ಛಂದಸ್ಸಿನ ಪ್ರಯೋಗಗಳನ್ನು ನೋಡುತ್ತಿದ್ದೇವೆ. ರಗಳೆ ಮತ್ತು ಸಾಂಗತ್ಯಗಳು ಕನ್ನಡದ ಪ್ರಕಾರವೇ ಆದರೂ ದೇಸೀ ಎಂಬುದು ಬಹುಶಃ ಆಡುಭಾಷೆಯ ಪ್ರಯೋಗಗಳನ್ನು ಗುರುತಿಸಿದಂತೆ ತೋರುತ್ತದೆ. ಈ ನೇರದಲ್ಲಿ ನಾನು ದೇಸೀ ಎಂಬುದನ್ನು indigenous ಎಂಬರ್ಥದಲ್ಲಿ ಪ್ರಯೋಗಿಸಿದ್ದೇನೆ.
ಮೊದಲ ನಿರ್ಣಯ
ಧರ್ಮಸಭೆಯ ದೇಸೀಕರಣದ ಅಳವಡಿಕೆಯಲ್ಲಿ ಪೌಲನಿಂದ ಹಿಡಿದು ಇಲ್ಲಿಯವರೆಗೆ ಬಹುದೊಡ್ಡ ಇತಿಹಾಸದ ಸರಮಾಲೆಯೇ ಇದೆ. ಸುಮಾರು ಕ್ರಿಸ್ತಶಕ 50ರಲ್ಲಿ ಐತಿಹಾಸಿಕ 'ಕೌನ್ಸಿಲ್ ಆಫ್ ಜೆರುಸಲೇಮ್' ಎಂಬ ಸಮಾವೇಶದಲ್ಲಿ ಒಟ್ಟುಗೂಡಿದ ಪ್ರೇಷಿತರು ಒಂದು ಮುಖ್ಯವಾದ ಠರಾವನ್ನು ಅಂಗೀಕರಿಸಿದರು.ಅದು ಕ್ರೈಸ್ತರಾಗ ಬಯಸುವ ಅನ್ಯರನ್ನು ಮೊದಲು ಯೆಹೂದ್ಯ ಸಂಸ್ಕೃತಿಗೆ ಒಳಗು ಮಾಡಿ ಆ ನಂತರ ಅವರಿಗೆ ದೀಕ್ಷಾಸ್ನಾನ ಕೊಡುವ ಪರಂಪರೆಯನ್ನು ಕಿತ್ತೊಗೆವ ನಿರ್ಣಯವಾಗಿತ್ತು. ಕ್ರೈಸ್ತಧರ್ಮವನ್ನು ವಿಶ್ವಧರ್ಮವಾಗಿಸುವ ನಿಟ್ಟಿನಲ್ಲಿ ಅದೊಂದು ಅಪೂರ್ವ ಹೆಜ್ಜೆಯಾಗಿತ್ತು.
ಆದರೂ ಧರ್ಮಸಭೆಯಲ್ಲಿ ಅನೇಕ ವರ್ಷಗಳ ಕಾಲ ಗ್ರೀಕ್ ಮತ್ತು ರೋಮನ್ ಸಂಸ್ಕೃತಿಗಳ ತಾಕಲಾಟ ನಡೆದೇ ಇತ್ತು. ಶತಮಾನಗಳು ಕಳೆದು ರೋಮನ್ ಸಾಮ್ರಾಜ್ಯವು ಅಳಿದ ಮೇಲೆ ಜರ‍್ಮನ್ ಮತ್ತು ಮಧ್ಯಕಾಲೀನ ಸಂಸ್ಕೃತಿಗಳು ತಮ್ಮ ಪ್ರಭಾವ ಬೀರಿದವು. ಕಾನ್ಸ್ಟಾಂಟಿನೋಪಲ್ ಚಕ್ರವರ್ತಿಯ ನಿಧನಾನಂತರ ಧರ್ಮಸಭೆಯು ಪಾಶ್ಚಾತ್ಯ ಮತ್ತು ಪೌರ್ವಾತ್ಯ ಚರ್ಚುಗಳಾಗಿ ಒಡೆದು ಪಶ್ಚಿಮದಲ್ಲಿ ರೋಮ್ ಆಧಿಪತ್ಯದಲ್ಲಿ ಲತೀನ್ ಧರ್ಮಸಭೆಯೂ, ಪೂರ್ವದೆಡೆ ಕಾನ್ಸ್ಟಾಂಟಿನೋಪಲ್ ಅಧೀನದಲ್ಲಿ ಸಂಪ್ರದಾಯವಾದಿಗಳ ಏಶಿಯನ್ ಧರ್ಮಸಭೆಯೂ ರೂಪುಗೊಂಡವು.
ಕ್ರಮೇಣ ಐರೋಪ್ಯ ಸಂಸ್ಕೃತಿಗಳನ್ನು ಅಳವಡಿಸಿಕೊಂಡ ರೋಮನ್ ಧರ್ಮಪೀಠವು ತನ್ನ ಪದ್ಧತಿಯನ್ನು ಓರಿಯೆಂಟಲ್ ಧರ್ಮಸಭೆಯ ಮೇಲೆ ಹೇರಲೆತ್ನಿಸಿ ಸೋತಿತು. ಈ ನಡುವೆ ಪ್ರೊಟೆಸ್ಟೆಂಟ್ ಎಂಬ ಪ್ರತಿಭಟನಾಕಾರರು ರೋಮನ್ ಧರ್ಮಸಭೆಯ ವಿರುದ್ಧ ಸಿಡಿದೆದ್ದು ಬೇರಾದರು. ಅದೇ ವೇಳೆಯಲ್ಲಿ ಸ್ಪೇನ್ ಮತ್ತು ಪೋರ್ಚುಗೀಸ್ ನಾವಿಕರು ಅಮೆರಿಕಾ, ಆಫ್ರಿಕಾ ಮತ್ತು ಏಶಿಯಾ ಎಂಬ ಹೊಸ ಖಂಡಗಳನ್ನು ತಬ್ಬಿಹಿಡಿದ ಪರಿಣಾವಾಗಿ ಧರ್ಮಸಭೆಗೆ ವಿಭಿನ್ನ ಸಂಸ್ಕೃತಿಗಳ ವಿಭಿನ್ನ ನಾಗರಿಕ ಸಮುದಾಯಗಳ ಪರಿಚಯವಾಗತೊಡಗಿತು. ಕ್ರಿಸ್ತಶಕ 1545-63ರ 'ಕೌನ್ಸಿಲ್ ಆಫ್ ಟ್ರೆಂಟ್' ಸಮಾವೇಶದಲ್ಲಿ ದೇಸೀಕರಣದ ಚರ್ಚೆಗಳನ್ನೆಲ್ಲ ಒಂದು ಶಿಸ್ತಿಗೆ ಒಳಪಡಿಸಿದ ಕಥೋಲಿಕ ಧರ್ಮಸಭೆಯು ಕ್ರೈಸ್ತೇತರ ಸಂಸ್ಕೃತಿಗಳ ಹಾಗೂ ರೀತಿರಿವಾಜುಗಳ ಮೌಲ್ಯಮಾಪನಕ್ಕೆ ತೊಡಗಿತು.
ಹೊಸದಾಗಿ ಅನ್ವೇಷಣೆಗೊಂಡ ಅಪರಿಚಿತ ನಾಡುಗಳಲ್ಲಿ ಅಲ್ಲಿನ ಮೂಲ ಸಂಸ್ಕೃತಿಯನ್ನು ಹಾಳುಗೆಡವಿ ದೌರ್ಜನ್ಯ ನಡೆಸಿದ ಅಪವಾದವು ಧರ್ಮಸಭೆಯ ಮೇಲಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಪೆರು ನಾಡಿನಲ್ಲಿ ಇಂಕಾ ಜನಾಂಗವನ್ನು ಹೇಳಹೆಸರಿಲ್ಲದಂತೆ ಮಾಡಿದ ಅಪಕೀರ್ತಿಯನ್ನು ಇತಿಹಾಸ ಮರೆತಿಲ್ಲ. ಅಂತೆಯೇ ನಮ್ಮ ದೇಶದಲ್ಲಿ ವಸಾಹತು ಹೊಂದಿದ್ದ ಪೋರ್ಚುಗೀಸರು ಇನ್ಕ್ವಿಸಿಶನ್ ಕಾಯಿದೆಯಡಿ ಅಸಂಖ್ಯಾತ ಕ್ರೈಸ್ತರನ್ನು ಹಿಂಸಿಸಿ ಗಡೀಪಾರು ಮಾಡಿದ ಬಗ್ಗೆಯೂ ಇತಿಹಾಸವಿದೆ. ಇದೇ ಪೋರ್ಚುಗೀಸ್ ಪಳೆಯುಳಿಕೆಗಳು ನಮ್ಮ ಬೆಂಗಳೂರು ಮೈಸೂರು ಹಾಸನಗಳ ಜಾನಪದ ಶ್ರೀಮಂತಿಕೆಯನ್ನು ತುಚ್ಛವಾಗಿ ಕಂಡಿದ್ದೂ ಹಲವರ ನೆನಪಿನಲ್ಲಿದೆ.
ಧರ್ಮಸಭೆಯ ಇಂತಹ ಹೊಲಬುಗೆಟ್ಟ ನಡವಳಿಕೆಗಳ ನಡುವೆಯೂ ಶತಮಾನಗಳ ಹಿಂದೆಯೇ ಕೆಲ ಮಹನೀಯರು ದೇಸೀ ಸಂಸ್ಕೃತಿಗಳನ್ನು ಅಳವಡಿಸಿಕೊಂಡು ಬೆಳ್ಳಿಗೆರೆ ಮೂಡಿಸಿದ್ದಾರೆ. ಅಂಥವರಲ್ಲಿ ಮುಖ್ಯವಾದವರು ಬ್ರೆಜಿಲ್ ಮಿಶನರಿಯಾದ ಜೊಸೆ ದೆ ಅಂಚಿಎತಾ, ಗೋವಾ ಮಿಶನರಿಯಾದ ತೋಮಾಸ್ ಸ್ಟೀವನ್ಸ್, ದಕ್ಷಿಣ ಇಂಡಿಯಾ ಮಿಶನರಿಗಳಾದ ರೊಬೆರ್ತೊ ದೆ ನೊಬಿಲಿ, ಲಿಯೊನಾರ್ಡೊ ಚಿನ್ನಮಿ ಹಾಗೂ ವಿಯೆಟ್ನಾಮ್ ಮಿಶನರಿಯಾದ ಅಲೆಕ್ಸಾಂದ್ರೆ ದೆ ರೋದೇ ನವರು.
ಚೀನಾ ಉದಾಹರಣೆ
ಈ ನಡುವೆ ಚೀನಾ ದೇಶದಲ್ಲಿ ಒಂದು ಘೋರ ಅಪರಾಧವು ನಡೆದುಹೋಯಿತು.ಯೇಸುಸಭೆಯ ಮತ್ತೇಯೊ ರಿಚ್ಚಿ, ಆದಮ್ ಶಾಲ್ ವೋಂ ಬೆಲ್ ಮತ್ತು ಸಂಗಡಿಗರು ಚೀನಾ ದೇಶದಲ್ಲಿ ಸತ್ತೇ ಹೋಗಿದ್ದ ಕ್ರೈಸ್ತ ಧರ್ಮಕ್ಕೆ ಮರುಜೀವ ನೀಡಿದರು. ಚೀನಾ ಚಕ್ರವರ್ತಿಯು ಪೀಕಿಂಗಿನ ತನ್ನ ಆಸ್ಥಾನದಲ್ಲಿ ಈ ವಿಬುಧರನ್ನು ಆಸ್ಥಾನ ಗಣಿತಜ್ಞರೂ, ಖಗೋಳಜ್ಞರೂ ಮತ್ತು ಆಡಳಿತ ಭಾಷಾ ದುರಂಧರರೂ ಆಗಿ ನೇಮಿಸಿ ವಿಶೇಷ ರೀತಿಯಲ್ಲಿ ಗೌರವಿಸಿದ. ಕ್ರಿಸ್ತಶಕ 1650ರಲ್ಲಿ ಚೀನಾ ದೇಶದಲ್ಲಿ ಮೊತ್ತಮೊದಲ ಚರ್ಚು ನಿರ್ಮಾಣವಾಗಿ ಕ್ರೈಸ್ತರು ಧಾರ್ಮಿಕ ಸ್ವಾತಂತ್ರ್ಯದ ರುಚಿಯುಂಡರು.
ದುರದೃಷ್ಟವೆಂದರೆ, ಚೀನೀ ದೇಶಿಕರ ಸಂಪ್ರದಾಯಗಳಾದ ಪಿತೃಪೂಜೆ, ಮತ್ತು ಇತರ ಧಾರ್ಮಿಕ ನಂಬುಗೆಗಳನ್ನು ಸಂಸ್ಕೃತಿಯ ಅಂಗವೆಂದು ಪ್ರತಿಪಾದಿಸಿದ ರಿಚ್ಚಿಯ ಸುಧಾರಣಾ ಕ್ರಮಗಳನ್ನು ರೋಮ್ ಸರ್ವೋಚ್ಚಪೀಠವು ಅಂಗೀಕರಿಸದೇ ಚೀನೀ ನಂಬುಗೆಗಳನ್ನು ಧರ್ಮಸಭೆಯಲ್ಲಿ ಅಳವಡಿಸಿಕೊಳ್ಳಲು ನಿಷೇಧ ಹೇರಿತು.ಇದರಿಂದ ಕುಪಿತನಾದ ಚೀನೀ ಚಕ್ರವರ್ತಿಯು ತಮ್ಮ ದೇಸೀ ಸಂಪ್ರದಾಯಗಳನ್ನು ಬಿಟ್ಟುಕೊಡಲು ಸುತಾರಾಂ ಒಪ್ಪಲಿಲ್ಲವಾಗಿ ಅಲ್ಲಿನ ಮಿಶನರಿ ಕೆಲಸಕ್ಕೆ ಹಿನ್ನಡೆಯುಂಟಾಯಿತು. ಹೀಗೆ ವ್ಯಾಟಿಕನ್ನಿನ ಜಿಗುಟುತನವು ಚೀನಾ ದೇಶದ ಕ್ರೈಸ್ತ ಸಮುದಾಯಕ್ಕೆ ಭಾರೀ ಕೊಡಲಿ ಪೆಟ್ಟು ನೀಡಿತು.
ಇಷ್ಟೆಲ್ಲ ನಡೆದ ಮೇಲೆ ರೋಮಿನ ಸಂಪ್ರದಾಯಶರಣ ಧಾರ್ಮಿಕ ವಲಯದ ವಿರೋಧದ ನಡುವೆಯೂ ವ್ಯಾಟಿಕನ್ ಸರ್ವೋಚ್ಚ ಪೀಠವು 18ನೇ ಶತಮಾನದೀಚೆಗೆ ದೇಸೀಕರಣದ ಪ್ರಕ್ರಿಯೆಗಳನ್ನು ತೀವ್ರವಾಗಿ ಚರ್ಚೆಗೊಳಪಡಿಸಿತು.
13ನೇ ಸಿಂಹನಾಥರು (Leo XIII)
ಜಗದ್ಗುರು 13ನೇ ಸಿಂಹನಾಥರು ಸಂಸ್ಕೃತಿಗಳ ವಿನಿಮಯಕ್ಕೆ ಪ್ರೋತ್ಸಾಹ ನೀಡಿದ್ದರು. ತಮ್ಮ 1894ರ ಸುತ್ತೋಲೆಯಲ್ಲಿ ಅವರು ಧರ್ಮಸಭೆಯಲ್ಲಿ ಧಾರ್ಮಿಕ ನಂಬುಗೆಯನ್ನು ತೋರ್ಪಡಿಸುವ ಸಂಸ್ಕೃತಿಗಳ ಮತ್ತು ಆಚರಣೆಗಳ ಅನನ್ಯತೆಯನ್ನು ಶ್ಲಾಘಿಸಿದರು. ತಮ್ಮ’ಓರಿಯೆಂತಲುಮ್ ದಿಗ್ನಿತಾತುಸ್’ (Orientalum Dignitatus) ಎಂಬ ಪ್ರಬಂಧದಲ್ಲಿ ವಿವಿಧ ಸಂಸ್ಕೃತಿಗಳು ನಿಧಿಯಿದ್ದಂತೆ ಎಂದು ಬಣ್ಣಿಸಿದ ಅವರು ಅವುಗಳ ವೈವಿಧ್ಯತೆಯನ್ನು ಕಾಪಾಡುವ ಹಾಗೂ ಅಳವಡಿಕೊಳ್ಳುವ ಕುರಿತು ಒತ್ತಿ ಹೇಳಿದರು. ಎಲ್ಲವನ್ನೂ ಲತೀನುಮಯಗೊಳಿಸುವ ವ್ಯಾಟಿಕನ್ನಿನ ಯಾಜಮಾನ್ಯವನ್ನು ಖಂಡಿಸಿ ಹೊರಡಿಸಿದ ಪರಿಪತ್ರದ ಫಲವಾಗಿ ವಿಭಿನ್ನ ಸಂಸ್ಕೃತಿಗಳ ಮುಖೇನ ಧಾರ್ಮಿಕ ನಂಬುಗೆಗಳು ಉಳಿದು ಬೆಳೆದು ಧರ್ಮದೆಡೆಗೆ ತಮ್ಮ ನಿಷ್ಠೆಯನ್ನು ಗಟ್ಟಿಗೊಳಿಸಿಕೊಂಡವು.
15ನೇ ಆಶೀರ್ವಾದಪ್ಪರು ಮತ್ತು 11ನೇ ಭಕ್ತಿನಾಥರು (Benedict XV, Pius XI)
ಜಗದ್ಗುರುಗಳಾದ 15ನೇ ಆಶೀರ್ವಾದಪ್ಪರು ಆಗಷ್ಟೇ ಮೊದಲ ಮಹಾಯುದ್ಧದಿಂದ ಕಂಗೆಟ್ಟಿದ್ದ ಧರ್ಮಪ್ರಚಾರ ಕಾರ್ಯಗಳ ಬಗ್ಗೆ ಚಿಂತಿತರಾಗಿದ್ದರು. ಧರ್ಮದ ದೇಸೀಕರಣ ಎಂದರೆ ಸ್ಥಳೀಯವಾಗಿ ಧರ್ಮಪಾಲಕರನ್ನು ಅಂದರೆ ಪಾದ್ರಿಗಳನ್ನು ಉಂಟುಮಾಡುವುದು ಎಂಬ ಸತ್ಯವನ್ನು ಅವರು ಮನಗಂಡಿದ್ದರು. ಸ್ಥಳೀಯರು ಗುರುಪಟ್ಟ ಹೊಂದುವುದನ್ನು ಪ್ರೋತ್ಸಾಹಿಸುವಂತೆ 1919 ನವೆಂಬರ್ 19ರಂದು ಅವರು ವಿಶ್ವ ಕಥೋಲಿಕ ಸಮುದಾಯಕ್ಕೆ ಕರೆನೀಡಿದರು.ಅದೇ ಹಾದಿಯಲ್ಲಿ ನಡೆದ ಜಗದ್ಗುರು 11ನೇ ಭಕ್ತಿನಾಥರು 1922ರಲ್ಲಿ ರೋಮ್ ನಗರದಲ್ಲಿ ಮಿಷನ್ ಕಾಂಗ್ರೆಸ್ಅನ್ನು ಆಯೋಜಿಸಿ ವರ್ಷವರ್ಷವೂ ಏಶಿಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾಗಳ ಧರ್ಮಾಧ್ಯಕ್ಷರುಗಳನ್ನು ತಾವೇ ಸ್ವತಃ ಅಭಿಷೇಕಿಸಿದರು. ಅವರು ಸಾಯುವ ವೇಳೆಗೆ ಸುಮಾರು 240 ಧರ್ಮಕ್ಷೇತ್ರಗಳಲ್ಲಿ ಸ್ಥಳೀಯರು ಬಿಷಪರಾಗಿದ್ದರು.
12ನೇ ಭಕ್ತಿನಾಥರು (Pius XII)
1939ರಲ್ಲಿ 12ನೇ ಭಕ್ತಿನಾಥರು ತಾವು ಜಗದ್ಗುರುಪೀಠ ಅಲಂಕರಿಸಿದ ಕೆಲವೇ ದಿನಗಳಲ್ಲಿ 250ವರ್ಷಗಳ ಹಿಂದಿನ ವ್ಯಾಟಿಕನ್ ನಿಯಮಾವಳಿಯನ್ನು ರದ್ದುಗೊಳಿಸುವ ಮೂಲಕ ಚೀನಾ ದೇಶೀಯರು ಆಚರಿಸುವ ಮೃತರಸ್ಮರಣೆ ಸಂಸ್ಕೃತಿಯನ್ನು ಎತ್ತಿಹಿಡಿದರು. ವಿಶ್ವಾಸ ಪ್ರಚಾರದ ಪವಿತ್ರ ತಂಡವು (Sacred Congregation for the Propagation of the Faith) 1939 ಡಿಸೆಂಬರ್ 8ರ ತನ್ನ ಸುತ್ತೋಲೆಯಲ್ಲಿ ಮೃತರನ್ನು ಗೌರವದಿಂದ ಕಾಣುವುದು ಮೂಢನಂಬಿಕೆಯಲ್ಲ ಎಂದು ಘೋಷಿಸಿತು. ಪರಿಣಾಮವಾಗಿ ಚೀನೀ ಧರ್ಮಸಭೆಯು ಮತ್ತೆ ಅರಳತೊಡಗಿ 79 ಧರ್ಮಕ್ಷೇತ್ರಗಳು, 20 ಹೊಸ ಧರ್ಮಕ್ಷೇತ್ರಗಳು ಹಾಗೂ 38 ಪ್ರೇಷಿತ ಮುಖ್ಯರ ಮೂಲಕ ಸರ್ವಾಂಗ ಭೂಷಿತವಾಯಿತು.
ಪೋಪ್ 12ನೇ ಭಕ್ತಿನಾಥರ ನಡೆ ಕೆಲ ಸಂಪ್ರದಾಯಸ್ಥರನ್ನು ಹುಬ್ಬೇರಿಸುವಂತೆ ಮಾಡಿತು. ಅವರಿಗೆ ತಿಳಿಹೇಳಿದ ಭಕ್ತಿನಾಥರು ಸ್ಥಳೀಯ ಆಚರಣೆಗಳನ್ನು ಅಲ್ಲಗಳೆಯುವುದು ಶುಭಸಂದೇಶವಾಗದು, ಶುಭಸಂದೇಶವನ್ನು ಪರಿಚಯಿಸುವುದೇ ದೇಸೀಕರಣ ಮಾಡಿದಂತೆ ಎಂದು ಅವರ ಮನವೊಲಿಸಿದರು. ಅದೇ ರೀತಿ ಇತರ ಜಗದ್ಗುರುಗಳಾದ ಆರನೇ ಚಿನ್ನಪ್ಪರು, 2ನೇ ಜಾನ್ ಪೌಲರು ಹಾಗೂ 16ನೆ ಆಶೀರ್ವಾದಪ್ಪರು ತಮ್ಮ ಪರಿಪತ್ರಗಳ ಮೂಲಕ ದೇಸೀಕರಣದ ಔನ್ನತ್ಯವನ್ನು ಎತ್ತಿಹಿಡಿದಿದ್ದಾರೆ.
ಪೋಪ್ ದ್ವಿತೀಯ ಜಾನ್ ಪೌಲರು ಧರ್ಮಸಭೆಯ ಮತ್ತು ಜಗದ ಭವಿಷ್ಯತ್ತನ್ನು ನಿರ್ಧರಿಸುವಲ್ಲಿ ಧರ್ಮಸಭೆ ಮತ್ತು ಸಂಸ್ಕೃತಿಗಳ ಮಾತುಕತೆಯೇ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಭಾವಿಸಿದ್ದರು. ಅದಕ್ಕಾಗಿಯೇ ಅವರು ’ಸಂಸ್ಕೃತಿಗಾಗಿ ಜಗದ್ಗುರುಪೀಠದ ಮಂಡಲಿ’ (Pontifical Council for Culture)ಯನ್ನು ರೂಪಿಸಿದ್ದರು. ಈ ಒಂದು ಕಾರಣದಿಂದಾಗಿ ಅಂತರಾಷ್ಟ್ರೀಯ ದೈವಶಾಸ್ತ್ರ ಆಯೋಗವು ಇಂದು ದೇಸೀಕರಣವನ್ನು ಬಲು ಸತ್ವಪೂರ್ಣವಾಗಿ ಧ್ವನಿಸುತ್ತದೆ.
ದೇಸೀಕರಣದ ಬಗೆಗಿನ ಕ್ರೈಸ್ತ ನಡೆಯು ಯಾವಾಗಲೂ ಒಳ್ಳೆಯದಾಗಿಯೇ ಪ್ರಯೋಗವಾಗಿದೆ ಎಂದು ಹೇಳಲಾಗದು. ಫ್ರಾನ್ಸಿಸ್ ಝೇವಿಯರ್ನವರು ಜಪಾನಿನಲ್ಲಿ ಕ್ಷೇತ್ರಕಾರ್ಯ ಮಾಡುವಾಗ ಅಲ್ಲಿ ಕ್ರೈಸ್ತಧರ್ಮ ಸ್ವೀಕರಿಸಿದ ಅಂಜಿರೊ ಎಂಬಾತನೊಂದಿಗೆ ಮಾತನಾಡುತ್ತಾ ದೇಯುಸ್ (Deus = ದೇವರು)ಎಂಬುದಕ್ಕೆ ಜಪಾನೀ ಭಾಷೆಯಲ್ಲಿ ಪರ್ಯಾಯ ಪದವೇನೆಂದು ಕೇಳಿದರು. ಅದಕ್ಕಾತ ಸೂಚಿಸಿದ ಹೆಸರು ದೇಯಿನಿಚಿ. ಮುಂದೊಂದು ದಿನ ಝೇವಿಯರ್‍ನವರಿಗೆ ಆ ಪದವು ಷಿಂಗೊನ್ ಬೌದ್ಧ ಪಂಥದ ಕೇಂದ್ರವ್ಯಕ್ತಿಯ ಹೆಸರೆಂದು ತಿಳಿದುಬಂತು. ಒಂದು ಹೆಸರಿನ ಬಳಕೆಯಿಂದ ಮತ್ತೊಂದು ಧರ್ಮದ ಜನರನ್ನು ಉದ್ರೇಕಿಸುವುದು ಸರಿಯಲ್ಲವೆಂದು ಭಾವಿಸಿದ ಅವರು ದೇಯುಸ್ ಪದಕ್ಕೆ ಧ್ವನ್ಯಾತ್ಮಕವಾಗಿ ಹತ್ತಿರವೆನಿಸಿದ ದೇಯೂಸು ಎಂಬ ಪದವನ್ನು ಟಂಕಿಸಿದರು. ಆದರೆ ಜಪಾನೀ ಭಾಷೆಯಲ್ಲಿ ದೇಯಿ ಉಸೊ ಎಂದರೆ ಮಹಾಸುಳ್ಳು ಎಂಬ ಅರ್ಥವಿದೆಯೆಂದು ಆಮೇಲೆ ಅರಿವಾಯಿತು. ಈ ಎಲ್ಲ ಅಪಪ್ರಯೋಗಗಳ ನಡುವೆಯೂ ನಮ್ಮ ದಕ್ಷಿಣ ಇಂಡಿಯಾದ ದೇಸೀಕರಣದ ಹಾದಿಯಲ್ಲಿ ಚೌರಪ್ಪ (Xavier), ಇನ್ನಾಸಪ್ಪ (Ignatius) ಮುಂತಾದ ಧ್ವನ್ಯಾತ್ಮಕ ಅನುಕರಣೆಯ ಪದಗಳು ಬಳಕೆಗೆ ಬಂದವೆಂಬುದು ವೇದ್ಯ.
ಹದಿನೇಳನೇ ಶತಮಾನದಲ್ಲಿ ನಮ್ಮ ದೇಶದಲ್ಲಿ ನಡೆದ 'ದೇಸೀಕರಣ'ದ ಪ್ರಯೋಗಗಳಲ್ಲಿ ಜೆಸ್ವಿತ್ ಮಿಷನರಿಗಳಾದ ರೊಬೆರ್ತೊ ದೆ ನೊಬಿಲಿ ಸ್ವಾಮಿಗಳು, ಜಾನ್ ದೆ ಬ್ರಿಟ್ಟೊ ಸ್ವಾಮಿಗಳು, ಲಿಯೊನಾರ್ಡೊ ಚಿನ್ನಮಿ ಸ್ವಾಮಿಯವರು, ರಾಜೇಂದ್ರ ಸ್ವಾಮಿಗಳು ಅಲ್ಲದೆ ಮೈಸೂರು ಮಹಾರಾಜರಿಂದ ದೊಡ್ಡ ಸ್ವಾಮಿಯವರು ಎಂದು ಕರೆಸಿಕೊಂಡ ಫ್ರೆಂಚ್ ಮಿಶನರಿ ಅಬ್ಬೆ ದ್ಯುಬುವಾ ಸ್ವಾಮಿಗಳು ಮುಂತಾದವರೆಲ್ಲ ನಮ್ಮ ನಾಡಿನ ಸಾಧುಸಂನ್ಯಾಸಿಗಳ ಹಾಗೆ ಕಾವಿದುಕೂಲ ಹೊದ್ದು, ಹಣೆಯ ಮೇಲೆ ವಿಭೂತಿ ಹಚ್ಚಿಕೊಂಡು ಸಸ್ಯಾಹಾರಿಗಳಾಗಿ, ಹಲಗೆಯ ಚಪ್ಪಲಿ ಧರಿಸಿ, ಧರ್ಮಕಾರ್ಯ ನಡೆಸಿದ ಉದಾಹರಣೆಗಳಿವೆ.
ಅವರು ನಮ್ಮ ನಾಡಿನ ಸಂಸ್ಕೃತಿಗನುಗುಣವಾಗಿ ಧರ್ಮಕೃಷಿ ನಡೆಸಿದ ಫಲವಾಗಿ ನಮ್ಮ ಪೂರ್ವಜರು ಚೌರಪ್ಪ, ರಾಯಪ್ಪ, ಚಿನ್ನಪ್ಪ, ಇನ್ನಾಸಪ್ಪ, ರೂಬೇನಪ್ಪ, ದಾವಿದಪ್ಪ, ರೀತಮ್ಮ, ಬಿರ್ಜಿತಮ್ಮ, ಆಗತ್ತಮ್ಮ, ತೆರೇಸಮ್ಮಗಳಾಗಿ ಧರ್ಮದ ವಾರಸುದಾರರಾದರು ಎಂಬುದನ್ನು ಕಂಡರಿತಿದ್ದೇವೆ. ಆದರೂ ಚರ್ಚಿನ ಕೆಲ ಸಂಪ್ರದಾಯವಾದಿ ಜಿಗುಟು ಮನೋಭಾವದ ಜನ ದೇಸೀಕರಣವನ್ನು ವಿರೋಧಿಸುತ್ತಲೇ ಬಂದಿದ್ದಾರೆಂಬುದು ಮಾತ್ರ ಸತ್ಯ. ಮಿಶನರಿ ಯುಗವು ಮುಗಿದು ನಮ್ಮ ದೇಶಸ್ಥರೇ ಆಗಿಯೂ ಮಣ್ಣಿನ ಸೊಗಡು ತಿಳಿಯದ ಪಾದ್ರಿ ಮಾದ್ರಿಗಳ ಸಾಹಚರ್ಯದಿಂದ ನಮ್ಮ ಹೆಸರುಗಳು ಜೋಸೆಫ್, ಝೇವಿಯರ್, ಪೀಟರ್, ಡೇವಿಡ್, ಇಗ್ನೇಷಿಯಸ್, ರೀಟಾ, ಬ್ರಿಜಿಟಾ, ಆಗಥಾಗಳಾಗಿ ಶಿಷ್ಟರೂಪಕ್ಕೆ ಬದಲಾದದ್ದನ್ನೂ ಅರಿತಿದ್ದೇವೆ.
ವಿಪರ್ಯಾಸವೆಂದರೆ ಇದೇ ಪಾದ್ರಿ ಮಾದ್ರಿಗಳು ನಮ್ಮ ಮಕ್ಕಳನ್ನು ರಮ್ಯ, ರಶ್ಮಿ, ರಂಜಿತ್, ಶ್ರೇಯಸ್, ದೀಪ್ತಿ, ಸ್ನೇಹಾ, ಸಹನಾ ಮುಂತಾದ ಹೆಸರುಗಳಲ್ಲಿ ಸಂಬೋಧಿಸುವಾಗ ಮೆಣಸಿನಕಾಯಿ ಕಚ್ಚಿದಂತೆ ಬೆದರುವುದನ್ನೂ ನೋಡುತ್ತಿದ್ದೇವೆ. ನಮ್ಮ ಮನೆಗೆ ಭೇಟಿಕೊಟ್ಟ ಧರ್ಮಕೇಂದ್ರದ ವಯೋವೃದ್ಧ ಗುರುಗಳು ನಮ್ಮ ಮಗಳನ್ನು ಪರಿಚಯಿಸಿಕೊಳ್ಳುವಾಗ ಅವಳ ಹೆಸರು ’ಸ್ನೇಹಾ’ ಎಂದುದನ್ನು ಕೇಳಿ ಹೌಹಾರಿಬಿದ್ದರಲ್ಲದೆ ಕ್ರೈಸ್ತ ಹೆಸರಿಲ್ಲವೇ ಎಂದು ಕೇಳಿದರು. ಅವಳ ಪೂರ್ಣ ಹೆಸರು ಸ್ನೇಹಾ ಜೂಡಿತ್ ಎಂದಾಗ ಅವರಿಗೆ ಸ್ವಲ್ಪ ಸಮಾಧಾನವಾಯಿತು. ಯೇಸುಕ್ರಿಸ್ತನ ಪರಿಭಾಷೆಯಲ್ಲಿ ಸ್ನೇಹಕ್ಕೆ ಎಂತಹ ಉದಾತ್ತವೂ ಉನ್ನತವೂ ಆದ ಮೌಲ್ಯವಿತ್ತು ಎಂಬುದನ್ನು ಆ ಪಾದ್ರಿ ಅರಿಯದೇ ಹೋದರಲ್ಲ ಎಂಬುದರ ಬಗ್ಗೆ ನನಗೆ ವಿಷಾದವೆನಿತ್ತದೆ.
ಸಮಾಧಾನಕರ ಅಂಶವೆಂದರೆ ಇಂದು ಇಂಡಿಯಾದ ಧರ್ಮಸಭೆಯು ಕ್ರಮೇಣ ಜನಪರವಾಗುತ್ತಿದೆ. ಶಿವಾಜಿನಗರ ಮರಿಯಾ ಮಾತೆಗೆ ಸೀರೆಯುಡಿಸಿ ಸಂಭ್ರಮಿಸಲಾಗುತ್ತಿದೆ, ವೇಲಾಂಗಣಿಯಲ್ಲಿ ತೆಂಗಿನಕಾಯಿ ಒಡೆದು ಮಾತೆಗರ್ಪಿಸುವ ರೂಢಿಯನ್ನು ಉಳಿಸಿಕೊಳ್ಳಲಾಗಿದೆ, ಹರಿಹರದಲ್ಲಿ ತುಂಗಭದ್ರೆ ನದಿಯಲ್ಲಿ ಮಿಂದು ಸತ್ಯಮ್ಮ ದೇವಾಲಯದವರೆಗೆ ರಸ್ತೆಯುದ್ದಕ್ಕೂ ಸಾಷ್ಟಾಂಗವಾಗಿ ಬಂದೆರಗುವ ಭಕ್ತರನ್ನು ಗುರುಗಳು ಆಶೀರ್ವದಿಸಿ ಸಾಂತ್ವನ ಹೇಳುವುದು ನಡೆಯುತ್ತಿದೆ, ಉತ್ತರ ಇಂಡಿಯಾದಲ್ಲಿ ಮರಿಯಾ ಮಾತೆಗೆ ಓಡ್ನಿ ಹೊದಿಸುವ ಸಂಪ್ರದಾಯವಿದೆ, ಜಾರ್ಖಂಡ್ ರಾಜ್ಯದ ಸರ್ನಾ ಆದಿವಾಸಿಗಳು ತಾವು ಪಾರಂಪರಿಕವಾಗಿ ತೊಡುತ್ತಾ ಬಂದಿರುವ ಕೆಂಪಂಚಿನ ಬಿಳಿ ವಸ್ತ್ರವನ್ನು ಮರಿಯಾ ಮಾತೆಗೂ ತೊಡಿಸಿ ಭಕ್ತಿಯಿಂದ ನಡೆದುಕೊಳ್ಳುತ್ತಾರೆ.
ಕಲಾವಿದರಾದ ಜ್ಯೋತಿ ಸಾಹಿ, ಸಿಸ್ಟರ್ ಕ್ಲೇರ್ ಮುಂತಾದವರು ಯೇಸುವಿನ ಕಥನಗಳನ್ನು ದೇಸೀ ಉಡುಗೆಯಲ್ಲಿ ಚಿತ್ರಿಸಿ ಜನಮಾನಸಕ್ಕೆ ಹತ್ತಿರವಾಗಿಸಿದ್ದಾರೆ. ಭರತನಾಟ್ಯವನ್ನೂ ಕರ್ನಾಟಕ ಮತ್ತು ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತವನ್ನೂ ಧರ್ಮಾರಾಧನೆಯಲ್ಲಿ ಅಳವಡಿಸಿಕೊಂಡ ಉದಾಹರಣೆಗಳೂ ಇವೆ. ಅದೇ ರೀತಿಯಲ್ಲಿ ಕೆಲ ದೇವಾಲಯಗಳಲ್ಲಿ ಧ್ಯಾನಸ್ಥ ಯೇಸುವಿನ ಚಿತ್ತಾರಗಳನ್ನು ಬಿಡಿಸಿರುವುದನ್ನು ಕಾಣಬಹುದು.
ಬೆಂಗಳೂರಿನ ’ರಾಷ್ಟ್ರೀಯ ಬೈಬಲ್ ಧರ್ಮೋಪದೇಶ ಮತ್ತು ಆರಾಧನಾವಿಧಿಗಳ ಕೇಂದ್ರ’ (NBCLC) ದಲ್ಲಿ 1966ರಲ್ಲಿ ಇಂಡಿಯಾದ ಕಥೋಲಿಕ ಬಿಷಪರುಗಳು ಸ್ಥಾಪಿಸಿದ ಭಾರತೀಯ ಶೈಲಿಯ ಗುಡಿಯಲ್ಲಿ ಆರತಿ ಧೂಪದೀಪಗಳ ಕುಸುಮಾರ್ಚನೆ ಓಂಕಾರಗಳೊಂದಿಗೆ ದೈವಪೂಜೆ ನಡೆಯುತ್ತಿದೆ, ಎಲ್ಲರೂ ಚಕ್ಕಂಬಕ್ಕಳ ಹಾಕಿ ಕುಳಿತು ಪರಮಪ್ರಸಾದ ಸ್ವೀಕರಿಸುತ್ತಾರೆ. ಇಲ್ಲಿ ಸೇವೆ ಸಲ್ಲಿಸಿದ ಡಿಎಸ್ ಅಮಲೋರ್ಪವದಾಸ್ ಸ್ವಾಮಿಯವರು ಮೈಸೂರು ವಿಶ್ವವಿದ್ಯಾಲಯದ ಕ್ರೈಸ್ತಪೀಠದಲ್ಲಿ ಹದಿನೈದು ವರ್ಷಗಳ ಕಾಲ ಕ್ರೈಸ್ತಧರ್ಮದ ದೇಸೀಕರಣ ಬಗ್ಗೆ ಪಾಠ ಮಾಡಿದರೆಂಬುದು ಉಲ್ಲೇಖನೀಯ. ಅಂತೆಯೇ ಪಾಲ್ ಪುತ್ತನಙ್ಗಾಡಿ ಎಂಬ ಸ್ವಾಮಿಯವರೂ ದೇಸೀಕರಣದಲ್ಲಿ ಗಣನೀಯ ಕೆಲಸ ಮಾಡುತ್ತಿದ್ದಾರೆ.
ಕರ್ನಾಟಕ ಗೋವಾ ಪ್ರಾಂತ್ಯದ ಜೆಸ್ವಿತ್ ಪಾದ್ರಿಗಳು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ದೇಶನೂರು ಎಂಬಲ್ಲಿ ’ವಿರಕ್ತ ಮಠ’ ಎಂಬ ಹೆಸರಿನಲ್ಲಿ ದೇವಾಲಯ ಕಟ್ಟಿ ಲಿಂಗಾಯತ ಪರಂಪರೆಯ ಹಾದಿಯಲ್ಲಿ ಕ್ರೈಸ್ತಧರ್ಮಾಚರಣೆ ನಡೆಸುತ್ತಿದ್ದಾರೆ.ಲಿಂಗಾಯತರೇ ಹೆಚ್ಚಾಗಿರುವ ದೇಶನೂರಲ್ಲಿ ಕಾವಿ ಹೊದ್ದು, ಲಿಂಗದ ಮೇಲೆ ಶಿಲುಬೆಯಿಟ್ಟು, ಪಾದೋದಕ ಪ್ರಸಾದವೆಂಬ ಶರಣತ್ವದ ಪಂಚವಿಧಿಗಳನ್ನು ಅನುಸರಿಸುತ್ತಾ ಬರುತ್ತಿದ್ದಾರೆ. ವೀರಶೈವರ ಗುರು ಲಿಂಗ ಜಂಗಮ ಎಂಬ ತ್ರಿವಿಧಿಗಳನ್ನು ಕ್ರಿಸ್ತತತ್ವಕ್ಕೆ ಅನುಗುಣವಾಗಿ ಮಾರ್ಪಡಿಸಿಕೊಂಡು ಕ್ರಿಸ್ತಪೂಜೆ ಮಾಡುತ್ತಿದ್ದಾರೆ.
ಇತ್ತೀಚೆಗೆ ಬೆಳಗಾವಿ ಧರ್ಮಪ್ರಾಂತ್ಯಕ್ಕೆ ನೇಮಕವಾದ ಬಿಷಪ್ ಡೆರಿಕ್ ಫೆರ್ನಾಂಡಿಸ್ನವರು ತಮ್ಮ ಧರ್ಮಪಾಲನೆಯ ಅಂಗವಾಗಿ ದೇಶನೂರಿಗೆ ಭೇಟಿ ನೀಡಿದಾಗ ಕಾವಿ ಹೊದ್ದು ಪೂಜೆಯರ್ಪಿಸಿದರು. ಅದನ್ನು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ಕ್ರೈಸ್ತಧರ್ಮದ ಕೇಸರೀಕರಣ ಎಂಬುದಾಗಿ ಬಿಂಬಿಸಿ ರಾಡಿ ಎಬ್ಬಿಸಿತು. ಹಾಗೆ ನೋಡಿದರೆ ಕ್ರೈಸ್ತಧರ್ಮದ ದೇಸೀಕರಣ ಪ್ರಕ್ರಿಯೆಯನ್ನು ಹಿಂದೂ ರಾಷ್ಟ್ರವಾದಿಗಳು ವಿರೋಧಿಸುತ್ತಾರೆ. ಹಿಂದೂಜಾಗೃತಿ ಎಂಬ ಮಿಂದಾಣ (website) ವು ’ಕ್ರೈಸ್ತ ಮಿಶನರಿಗಳು ಹಿಂದೂ ಸಮಾಜದ ಎಲ್ಲ ಮೊಡಕುಗಳನ್ನೂ ಆವರಿಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸುತ್ತಾ ’ಇದೊಂದು ಧಾರ್ಮಿಕ ಸೂಳೆಗಾರಿಕೆ’ ಎಂದು ಕರೆದಿದೆ. ಕಾವಿಧಾರಣೆ, ಆರತಿ ಬೆಳಗುವಿಕೆ ಮುಂತಾದವುಗಳನ್ನು ಮತಾಂತರದ ಹುನ್ನಾರ ಎಂದೇ ಅವರು ಭಾವಿಸುತ್ತಾರೆ.
ಈಗಾಗಲೇ ಮತಾಂತರ ನಿಷೇಧ ಹೇರಬೇಕೆಂಬ ಕೂಗು ಬಲವಾಗುತ್ತಿದೆ. ಈ ಕಾಯಿದೆಯ ಪರಿವೇಷದ ಅಡಿಯಲ್ಲಿ ಮುಂದೆ ಕ್ರೈಸ್ತರ ಎಲ್ಲ ಸಾಂಸ್ಕೃತಿಕ ಆಚರಣೆಗಳ ಮೇಲೆ ಪ್ರತಿಬಂಧನ ಹಾಕಬಹುದಾಗಿದೆ. ಈಗಾಗಲೇ ಉತ್ತರಪ್ರದೇಶದಲ್ಲಿ ಕ್ರಿಸ್ತಜಯಂತಿಯನ್ನು ನಾಲ್ಕು ಗೋಡೆಗಳ ನಡುವೆಯೇ ಆಚರಿಸಬೇಕು, ಅದು ಹೊರಗೆ ಕಾಣಬಾರದು ಎಂಬ ಸಂದೇಶವನ್ನು ಕ್ರೈಸ್ತ ಶಾಲೆಗಳಿಗೆ ಹಾಗೂ ದೇವಾಲಯಗಳಿಗೆ ರವಾನಿಸಲಾಗಿದೆ. ಸಂಘಪರಿವಾರದ ಜನ ಕಾನೂನನ್ನು ಕೈಗೆತ್ತಿಕೊಂಡು ನಮ್ಮ ದೇವಾಲಯಗಳ ಮೇಲೆ ದಾಳಿ ನಡೆಸಿ ಹಲ್ಲೆ, ಅತ್ಯಾಚಾರ, ಧ್ವಂಸಗಳನ್ನು ಎಸಗಿದಾಗ ಬಹುಸಂಖ್ಯಾತ ಇತರ ಧರ್ಮೀಯರು ಸೋದರ ಭಾವನೆ ತೋರದೆ ಸಮ್ಮನಿರುವುದನ್ನು ನೋಡುವಾಗ ಕ್ರೈಸ್ತರು ಪರಕೀಯ ಭಾವನೆಯಿಂದ ನರಳುವುದು ಸತ್ಯಸ್ಯಸತ್ಯ.
ಇಂಥಾ ಒಂದು ಸಂದಿಗ್ದ ಪರಿಸ್ಥಿತಿಯಲ್ಲಿ ಕ್ರೈಸ್ತರು ಮತ್ತೊಂದು ಧರ್ಮದ ಅನುಕರಣೆ ಮಾಡುವ ಮುನ್ನ ನಿಜ ಕ್ರೈಸ್ತ ತತ್ವಗಳಾದ ಸ್ನೇಹ, ಕ್ಷಮೆ, ಪ್ರೀತಿಗಳನ್ನು ಪಾಲಿಸುವತ್ತ ಗಮನ ಹರಿಸಬೇಕಲ್ಲವೇ?
[ಈ ಲೇಖನದ ಕುರಿತಂತೆ ಓದುಗರು ತಮ್ಮ ಅಭಿಪ್ರಾಯಗಳನ್ನು cmariejoseph@gmail.com ಗೆ ಬರೆಯಬಹುದು[
ಹೆಚ್ಚಿನ ಓದಿಗಾಗಿ ಈ ಪುಸ್ತಕಗಳನ್ನು ನೋಡಬಹುದು:
1) ಎಂ ಅಮಲದಾಸ್, ’ಬಿಯಾಂಡ್ ಇನ್ಕಲ್ಚರೇಶನ್: ಕೆನ್ ದ ಮೆನಿ ಬಿ ಒನ್’ (1998) 2) ಡಿ ಎಸ್ ಅಮಲೋರ್ಪವದಾಸ್, ’ಥಿಯೊಲಾಜಿಕಲ್ ರೆಫ್ಲೆಕ್ಶನ್ಸ್ ಆನ್ ಇನ್ಕಲ್ಚರೇಶನ್’ ಸ್ತದಿಯಾ ಲಿತರ್ಜಿಕಾ 20 (1990) 3) ಎಂ ಧವಮಣಿ, ’ಕ್ರಿಶ್ಚಿಯನ್ ಥಿಯೊಲಜಿ ಆಫ್ ಇನ್ಕಲ್ಚರೇಶನ್’(1997)
*******************
No comments:
Post a Comment