Sunday, 8 November 2020

ಭಾರತದ ಕ್ರೈಸ್ತ ಸ್ವಾತಂತ್ರ್ಯ ಹೋರಾಟಗಾರರು - ಫ್ರಾನ್ಸಿಸ್ ನಂದಗಾವ ಹಿರಿಯ ಪತ್ರಕರ್ತ, ಸಾಹಿತಿ, ಬೆಂಗಳೂರು

 


ಪ್ರತಿವರ್ಷದ ಆಗಸ್ಟ ತಿಂಗಳು ಹದಿನೈದನೇ ತಾರೀಖಿಗೆ   ಬರುವ ಸಂಭ್ರಮದ ಹಬ್ಬ ಮಾತೆ ಮರಿಯಳ ಸ್ವರ್ಗ ಸ್ವೀಕಾರ ಹಬ್ಬ. ಇಸ್ರಯೇಲರು ಇಜಿಪ್ಪಿನ ದಾಸ್ಯದಿಂದ ಮುಕ್ತರಾದಂತೆ, ನಾವು ಈ ನೆಲದವರು-ಭಾರತೀಯರು, ಬ್ರಿಟೀಷರ ದಾಸ್ಯದ ಸಂಕೋಲೆಯಿಂದ ೧೯೪೭ರ ಸಾಲಿನಲ್ಲಿ ಬಿಡುಗಡೆ ಹೊಂದಿದೆವು. ಆಗಸ್ಟ್ ಹದಿನೈದು ಸ್ವಾತಂತ್ರ್ಯವನ್ನು ಪಡೆದ ಹಬ್ಬದ ದಿನ. ಆ  ದಿನವನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. 

 ಅಂದಿನ ಕಾಲದಲ್ಲಿ ನಡೆದ ಗಾಂಧಿ ನೇತೃತ್ವದ ಅಹಿಂಸೆಯ ಮೂಲಮಂತ್ರವನ್ನು ಹೊಂದಿದ್ದ ಅಹಿಂಸಾ ಚಳುವಳಿಯ ಸ್ವಾತಂತ್ರ್ಯದ ಹೋರಾಟದಲ್ಲಿ ಭಾರತದ ನೆಲಮೂಲದ ಕ್ರೈಸ್ತರೂ ಭಾಗವಹಿಸಿದ್ದನ್ನು ಕಡೆಗಣಿಸುವ ಹೊಸ ಪರಿಪಾಠ ಆರಂಭವಾಗಿದೆ. ಅದಕ್ಕೆ ತಡೆಯೊಡ್ಡುವ ಅಂದಿನ ಸ್ವಾತಂತ್ರ್ಯದ ಹೋರಾಟದಲ್ಲಿ ಭಾಗವಹಿಸಿದ್ದ ಕ್ರೈಸ್ತ ಹೋರಾಟಗಾರರನ್ನು ಇತಿಹಾಸದ ಮುನ್ನೆಲೆಗೆ ತಂದು ಪರಿಚಯಿಸುವ ಅಗತ್ಯ ಇಂದು ಆಗಬೇಕಿದೆ.

 ಕ್ರೈಸ್ತರು ದೇಶದ ಉದ್ಧಾರಕ್ಕಾಗಿ ಅವರು ಏನು ಮಾಡಿದ್ದಾರೆ? ಸ್ವಾತಂತ್ರ್ಯದ ಹೋರಾಟದಲ್ಲಿ ಅವರು ಎಲ್ಲಿ ದ್ದರು? ಎಂದು ಇಂದು ಪ್ರಶ್ನೆ ಮಾಡುವವರಿಗೆ, ಮಹಾತ್ಮಾ ಗಾಂಧಿಯಿಂದಲೇ `ಟೈಟುಸಿ ಎಂದು ಮರುನಾಮಕರಣಗೊಂಡ ಮತ್ತು ಅಂಥ ತಮ್ಮ ಅಂದಿನ ತ್ಯಾಗಗಳನ್ನು ಟಾಂ ಟಾಂ ಸಾರಿಕೊಳ್ಳದೇ, ಎಲೆಯ ಮರೆಯ ಕಾಯಂತೆ ಉಳಿದು ಜೀವ ತೇಯ್ದ ಕ್ರೈಸ್ತರನ್ನು ಹುಡುಕಿ ತೆಗೆದು ಜನತೆಯ ಮುಂದೆ, ಸಮಾಜದ ಮುಂದೆ ನಿಲ್ಲಿಸುವ ಅಗತ್ಯ ಇಂದು ನಡೆಯಬೇಕಾಗಿದೆ.

 ಏಕೆಂದರೆ, ಉತ್ತರ ಮುಂಬೈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಭಾರತೀಯ ಜನತಾ ಪಕ್ಷದ ಸಂಸತ್ ಸದಸ್ಯರೊಬ್ಬರು ೨೦೧೮ರ ಸಾಲಿನಲ್ಲಿ ಹರಿಬಿಟ್ಟ ವಿಡಿಯೋ ಒಂದರಲ್ಲಿ ಕ್ರೈಸ್ತರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲೇ ಇಲ್ಲ ಎಂದು ದೂರಿದ್ದರು. ಆ ನಡವಳಿಕೆಗೆ ಇಂದಿಗೂ ಕಡಿವಾಣ  ಬಿದ್ದಿಲ್ಲ. 

ಸುಮಾರು ೬೪ ವರ್ಷದ ಈ ಹಿರಿಯ ರಾಜಕಾರಣಿ, ಕ್ರೈಸ್ತರು ಎಂದರೆ ಬ್ರಿಟೀಷರು ಎಂದು ಅಂದುಕೊಂಡಂತಿದೆ. ಧರ್ಮ ಒಂದೆ ಇದ್ದಿರಬಹುದು. ಭಾರತೀಯರು ಭಾರತೀಯರೇ, ಬ್ರಿಟೀಷರು ಬ್ರಿಟೀಷರೇ. ಭಾರತಿಯ ಕ್ರೈಸ್ತರು ಈ ನೆಲದವರು, ಅವರು ಬ್ರಿಟಿಷರು ಹೇಗಾಗುತ್ತಾರೆ? ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಟಿಪ್ಪು ಸುಲ್ತಾನನು ಪಠ್ಯದಲ್ಲಿ ಬೇಡವೆನ್ನುವ ಮನಃಸ್ಥಿತಿಯವರು, ಬ್ರಿಟೀಷರ ಧಾಟಿಯಲ್ಲಿಯೇ ಚಿಂತನೆ ನಡೆಸುತ್ತಿರುವುದು ನಮ್ಮ ಕಾಲದ ದೊಡ್ಡ ದುರಂತ. ಬ್ರಿಟೀಷರ ವಿರುದ್ಧ ಹೋರಾಡಿದ್ದ ಈ ಟಿಪ್ಪು ಸುಲ್ತಾನ  ಭಾರತದ ಅರಬ್ಬಿ ಸಮುದ್ರದ ಕರಾವಳಿಯ ಕ್ರೈಸ್ತ ಸಮುದಾಯದವರು ಮತ್ತು ಬ್ರಿಟೀಷರೂ, ಒಂದೇ ಧರ್ಮಕ್ಕೆ ಸೇರಿದವರು, ಒಂದೇ ಮತಾವಲಂಬಿಗಳು ಎಂದು ಬಗೆದಿದ್ದ ಎಂದು ಹೇಳಲಾಗುತ್ತದೆ. ಆದರೆ ಅಂದಿನ ಕಾಲಘಟ್ಟದ ಸ್ಥಿತಿಯಿಂದ ನೋಡಿದಾಗ ಕರಾವಳಿಯ ಕೆಲವು ಕೊಂಕಣಿ ಕ್ರೈಸ್ತ ವ್ಯಾಪರಿಗಳು ತಮ್ಮ ವ್ಯಯಕ್ತಿಕ ಲಾಭಕ್ಕೆ ಬ್ರಿಟಿಷರಿಗೆ ದವಸಧಾನ್ಯ ಪೂರೈಸಿದ್ದರು. ಅದನ್ನೇ ಅಪರಾಧವೆಂದು ಬಗೆದು ಟಿಪ್ಪು ಸುಲ್ತಾನ ಅವರೆಲ್ಲರಿಗೂ ಕಿರುಕುಳ ನೀಡಿದ್ದನ್ನು ನಾವು ಇತಿಹಾಸದ ಪುಟಗಳಲ್ಲಿ ಕಂಡಿದ್ದೇವೆ. 

  ಕ್ರೈಸ್ತರು, ಪ್ರಭು ಯೇಸುಸ್ವಾಮಿಯ ಹೆಸರಿನಲ್ಲಿ ಪ್ರತಿದಿನವೂ, ರೊಟ್ಟಿಯನ್ನು ಮುರಿದು ಪರಸ್ಪರ ತಿನ್ನುವ, ಸಂತೋಷದ ಬುಗ್ಗೆಯ ಜೀವ ಜಲವನ್ನು ಪರಸ್ಪರ ಹಂಚಿ ಕುಡಿಯುವ ಕ್ರೈಸ್ತರು, ತಮ್ಮ ಸುತ್ತಮುತ್ತಲಿನ ಜನ ಯಾವುದೇ ಜಾತಿ, ಪಂಥಕ್ಕೆ ಸೇರಿದವರಿರಲಿ, ಭಾಷಿಕರಿರಲಿ, ನಾಡಿನವರಿರಲಿ, ಬಣ್ಣದವರಿರಲಿ, ಅವರು ಆರ್ಥಿಕವಾಗಿ ಎಂಥದೇ    ಸ್ಥಾನದಲ್ಲಿರಲಿ- ಬಡವರಾಗಿರಲಿ, ಆಗರ್ಭ ಶ್ರೀಮಂತರಾಗಿರಲಿ - ಎಲ್ಲರಿಗೂ ಪ್ರೀತಿ ಹಂಚುವುದರಲ್ಲಿ, ಅವರಲ್ಲಿ ಶಾಂತಿ ಹರಡುವುದರಲ್ಲಿ, ಬಡವರ, ದೀನದಲಿತರ ನಿರ್ಲಕ್ಷಿತರ ಏಳಿಗೆಗೆ ಶ್ರಮಿಸುವುದರಲ್ಲಿ ಹಿಂದೇಟು ಹಾಕುವವರಲ್ಲ. ಇದು ದಿಟವಾದ ಮಾತು ಅಲ್ಲವೇ?  

ಟೈಟುಸ್ಜಿ - ದಂಡಿ ಯಾತ್ರೆಯ ಗಾಂಧಿ ಒಡನಾಡಿ/ ನಮ್ಮ ದಿನಬಳಕೆಯ 

ನೋಟೊಂದರಲ್ಲಿದ್ದ ಟೈಟುಸಿ 


 ಬೆಂಗಳೂರಿನ ಗೋಲ್ಫ್ಸ ಕ್ಲಬ್ ಸನಿಹದಲ್ಲಿರುವ ಚಿತ್ರಕಲಾ ಪರಿಷತ್ತು ಮತ್ತು ಅಶೋಕ್ ಹೊಟೇಲ್, ಕೃಷ್ಣಾ ಮುಖ್ಯ ಮಂತ್ರಿಗಳ ಅಧಿಕೃತ ನಿವಾಸದ ಕಚೇರಿಯಿಂದ ಕೂಗಳತೆಯಲ್ಲಿ ಶಿವಾನಂದ ವೃತ್ತದ ಹತ್ತಿರದಲ್ಲಿರುವ ಗಾಂಧಿ ಭವನದಲ್ಲೊಂದು ಶಿಲ್ಪವಿದೆ. ಅದು ಉಪ್ಪಿನ ಸತ್ಯಾಗ್ರಹದ ದಂಡಿ ಯಾತ್ರೆಯ ಶಿಲ್ಪ. 

 ಆದರೆ, ಅದರ ಮೂಲ ಶಿಲ್ಪವೆನ್ನಬಹುದಾದ ಶಿಲ್ಪ ದೆಹಲಿಯ ಸರ್ದಾರ್ ಪಟೇಲ್ ಮಾರ್ಗದ ಹತ್ತಿರದಲ್ಲಿರುವ ವಿಲಿಂಗ್ಡನ್ ಕ್ರೆಸೆಂಟ್ ನಲ್ಲಿ ಗ್ಯಾರಹ ಮೂರ್ತಿ- ಹನ್ನೊಂದು ಮೂರ್ತಿಗಳ ಶಿಲ್ಪವಿದೆ. ಅಪ್ರತಿಮ ಎನ್ನಬಹುದಾದ ಈ ಶಿಲ್ಪ ಭಾರತದ ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟದಲ್ಲಿನ ನಾಗರಿಕ ಅಸಹಕಾರ ಚಳುವಳಿಯ ಒಂದು ಐತಿಹಾಸಿಕ ಘಟನೆಯಾದ ದಂಡಿ ಉಪ್ಪಿನ ಸತ್ಯಾಗ್ರಹವನ್ನು ಅದು ನಮ್ಮ ಕಣ್ಣೆದುರಿಗೆ ತಂದು ನಿಲ್ಲಿಸುತ್ತದೆ.

 ಈ ಅಪ್ರತಿಮ ಶಿಲ್ಪವನ್ನು ಕಡೆದು ಸಿದ್ಧಪಡಿಸಿದ ಶಿಲ್ಪಿಯ ಹೆಸರು ದೇವಿ ಪ್ರಸಾದ್ ರಾಯ್ ಚೌಧರಿ. ಶಿಲ್ಪಿ ಚೌಧರಿ ಅವರು, ಈ ದಂಡಿಯಾತ್ರೆಯಲ್ಲಿ ಗಾಂಧಿಯೊಂದಿಗೆ ಭಾಗವಹಿಸಿದ್ದ ೭೮ ಜನ ಸ್ವಯಂಸೇವಕರ ಪೈಕಿ, ಬೇರೆ ಬೇರೆ ಪ್ರದೇಶದವರನ್ನು, ಭಾಷೆಗಳನ್ನು ಆಡುವವರನ್ನು, ವಿವಿಧ ಧರ್ಮಗಳನ್ನು ಪಾಲಿಸುತ್ತಿದ್ದವರನ್ನು, ಬಗೆಬಗೆಯ ಉದ್ಯೋಗದಲ್ಲಿ ತೊಡಗಿದ್ದವರನ್ನು ಹತ್ತು ಜನ ಸಾಮಾನ್ಯರಲ್ಲಿ ಅವರನ್ನು ಪ್ರಾತಿನಿಧಿಕವಾಗಿ ಗುರುತಿಸಿ ಶಿಲ್ಪವನ್ನು ಕಡೆದಿದ್ದಾರೆ. 

  ಈ ಪ್ರಾತಿನಿಧಿಕ ದಂಡಿಯಾತ್ರೆಯ ಶಿಲ್ಪದ ಚಿತ್ರಣವನ್ನು ಹಳೆಯ ೫೦೦ ರೂಪಾಯಿ ನೋಟಿನಲ್ಲಿ ಇದ್ದುದನ್ನು ಎಲ್ಲರೂ ನೋಡಿದ್ದಿರಬಹುದು. ಆ `ದಂಡಿ ಉಪ್ಪಿನ ಸತ್ಯಾಗ್ರಹ ಯಾತ್ರೆಯ ಪ್ರಾತಿನಿಧಿಕ ಚಿತ್ರಣದ ಶಿಲ್ಪದಲಿ, ಕ್ರೈಸ್ತರ ಹೆಮ್ಮೆಗೆ ಕಾರಣವಾಗುವ ಕೇರಳ ಮೂಲದ ತೆವರತುಂಡಿಲ್ ಟೈಟುಸ್ ಅವರೂ ಇದ್ದಾರೆ. 

  ಉಪ್ಪಿನ ಸತ್ಯಾಗ್ರಹವೆಂದು ಗುರುತಿಸಲಾಗುವ ಈ ದಂಡಿ ಯಾತ್ರೆಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ   ಅವರೊಂದಿಗೆ ಒಟ್ಟು ೭೮ ಜನ ಸ್ವಯಂಸೇವಕರು ಪಾಲುಗೊಂಡಿದ್ದರು. ಅಂದಿನ ಬ್ರಿಟಿಷ್ ಸರ್ಕಾರ ಉಪ್ಪಿನ ಮೇಲೆ ಕರ ವಿಧಿಸಿರುವುದನ್ನು ಪ್ರತಿಭಟಿಸಿ, ೧೯೩೦ರ ಸಾಲಿನ ಮಾರ್ಚ ೧೨ ರಂದು ಸಾಬರಮತಿ ಆಶ್ರಮದಿಂದ ಆರಂಭವಾದ ಈ ಯಾತ್ರೆಯಲ್ಲಿ, ಗಾಂಧಿ ಮತ್ತು ಅವರೊಂದಿಗೆ ಸ್ವಯಂ ಸೇವಕರು ೨೪ ದಿನಗಳಲ್ಲಿ ನಡೆದು ದಂಡಿಯನ್ನು ತಲುಪಿದ್ದರು. ಅಷ್ಟು    ದಿನಗಳಲ್ಲಿ ಅವರು ಒಟ್ಟು ೩೮೫ ಕಿ. ಮೀ ದೂರ ನಡೆದಿದ್ದರು. ಈ ದಂಡಿ ಯಾತ್ರೆಯಲ್ಲಿ ಭಾಗವಹಿಸಿದ್ದ ೭೮ ಜನ ಸ್ವಯಂಸೇವಕರಲ್ಲಿ, ಒಬ್ಬರು ಕ್ರೈಸ್ತ ಸಮುದಾಯಕ್ಕೆ ಸೇರಿದವರಿದ್ದರು. ಅವರ ಹೆಸರು ತೆವರತುಂಡಿಲ್ ಟೈಟುಸ್.

  ತೆವರತುಂಡಿಲ್ ಟೈಟುಸ್ ಅವರನ್ನು ಆಪ್ತವಾಗಿ ಟೈಟುಸ್ಜಿ ಎಂದು ಜನ ಕರೆಯುತ್ತಿದ್ದರು. ಈ ಟೈಟುಸ್ಜಿ, ೧೯೦೫ರಲ್ಲಿ ಫೆ.೧೮ ರಂದು ಕೇರಳದ ಮರಮೊನ್ ಎಂಬಲ್ಲಿ ಕೃಷಿಕ ಕುಟುಂಬವೊಂದರಲ್ಲಿ ಜನಿಸಿದ್ದರು. ಅವರ ಕುಟುಂಬವು  ಮರಮೋನ್‌ನ ಮರಥೋಮಾ ಚರ್ಚಿನ ಸದಸ್ಯರಾಗಿದ್ದರು. ಹೈಸ್ಕೂಲ್ ಓದಿನ ನಂತರ ಅವರು ಅಲ್ಲಿಂದ ೨೦ ಕಿ.ಮೀ ದೂರದ ವಡಸೆರ್ರಿಕ್ಕರ ಗ್ರಾಮದಲ್ಲಿ ಕೆಲವು ವರ್ಷ ಶಿಕ್ಷಕರಾಗಿ ಕೆಲಸ ನಿರ್ವಹಿಸಿದರು. ನಂತರ, ಇಂದು ಸ್ಯಾಂ ಹಿಗಿನ್ ಬಾತಮ್ ಯನಿವರ್ಸಿಟಿ ಆಫ್ ಅಗ್ರಿಕಲ್ಚರ, ಟೆಕ್ನಾಲಜಿ ಮತ್ತು ಸೈನ್ಸೆಸ್ (ಎಸ್ ಎಚ್ಯುಎಟಿಎಸ್) ಎಂದು ಕರೆಯುಲಾಗುವ ಉತ್ತರಪ್ರದೇಶದ ಅಲಹಾಬಾದ್ ನಲ್ಲಿರುವ ಅಲಹಾಬಾದ್ ಅಗ್ರಿಕಲ್ಚರಲ್ ಇನ್ಸಿಟಿಟ್ಯೂಟ್‌ನಲ್ಲಿ ಟೈಟುಸ್ ಅವರು ಡೈರಿ ಮ್ಯಾನೇಜ್ಮೆಂಟ್‌ನಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದರು.

 ಒಳ್ಳೆಯ ಉದ್ಯೋಗ ಹುಡುಕಿಕೊಂಡು ನೆಮ್ಮದಿಯ ಜೀವನ ಸಾಗಿಸಿಬಹುದಾಗಿದ್ದ ಟೈಟುಸ್, ಸಾಬರಮತಿ ಆಶ್ರಮದಲ್ಲಿ ಕೆಲಸ ಮಾಡಲು ಮುಂದಾದರು. ಗಾಂಧಿ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದ ಅವರಿಗೆ ಸಾಬರಮತಿ ಆಶ್ರಮದಲ್ಲಿನ ಕೆಲಸ ಅವರನ್ನು ಗಾಂಧಿ ಅವರ ಹತ್ತಿರ     ತಂದಿರಿಸಿತು. ಅಹಮದಾಬಾದ್ ಸಮೀಪದ ಸಾಬರಮತಿ ಆಶ್ರಮವನ್ನು ಸೇರಿದ ಟೈಟುಸ್ ಅವರು, ಆಶ್ರಮದಲ್ಲಿನ ದನಗಳ ಕೊಟ್ಟಿಗೆ-ಗೋಶಾಲೆಯ ಜವಾಬ್ದಾರಿ ಹೊತ್ತುಕೊಂಡರು. ಅವರನ್ನು ಗೋಶಾಲಾ ವಿಭಾಗದ ಕಾರ್‍ಯದರ್ಶಿ ಎಂದು ಕರೆಯಲಾಗುತ್ತಿತ್ತು. ಅದೇ ಸಮಯದಲ್ಲಿ ಅಲ್ಲಿನ ಇನ್ನೊಂದು ವಿಭಾಗದಲ್ಲಿ ಗುಲ್ಜಾರಿಲಾಲ್ ನಂದಾ ಎನ್ನುವವರು ಕಾರ್‍ಯದರ್ಶಿಗಳಾಗಿದ್ದರು. ಇವರಿಬ್ಬರೂ ಗಾಂಧೀಜಿ ಅವರ ಆಪ್ತವಲಯಕ್ಕೆ ಸೇರಿದವರಾಗಿದ್ದರು. 

 ಗುಲ್ಜಾರಿ ಲಾಲ್ ನಂದಾ ( ಹುಟ್ಟು- ೪- ೭- ೧೮೯೮, ಸಾವು- ೧೫-೧-೧೯೬೨) ಅವರು ೧೯೬೨ರಲ್ಲಿ ಲಾಲ್ ಬಹಾದ್ದೂರ ಶಾಸ್ತ್ರಿ ಅವರು ಪ್ರಧಾನಿಗಳಾಗುವ ಮುಂಚೆ ನಂತರ ಶಾಸ್ತ್ರಿ ಅವರು ತಾಷ್ಕೆಂಟ್‌ನಲ್ಲಿ ತೀರಿಕೊಂಡಾಗಲೊಮ್ಮೆ - ಒಟ್ಟು ಎರಡು ಬಾರಿ ಮಧ್ಯಂತರ ಅವಧಿಯ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದನ್ನು ಇನ್ನು ನೆನಪಿಸಿಕೊಳ್ಳಬಹುದಾಗಿದೆ. ಈ ಎರಡು ಬಾರಿಯೂ ನಂದಾ ಅವರು ಕೇವಲ ೧೩ ದಿನಗಳ ಕಾಲ ಪ್ರಧಾನ ಮಂತ್ರಿಯ ಹುದ್ದೆಯಲ್ಲಿದ್ದರು.

ಸರಳ ಮತ್ತು ತಪಸ್ಸಿನಂಥ ನಡವಳಿಕೆಯನ್ನು ಬಯಸುತ್ತಿದ್ದ ಆಶ್ರಮದ ಬದುಕು, ಹದಿಹರೆಯದ ಟೈಟುಸ್ ಅವರಲ್ಲಿ ಅಪಾರ ಬದಲಾವಣೆಗೆ ಕಾರಣವಾಯಿತು. ಆಶ್ರಮದಲ್ಲಿ ರುವವರಿಗೆ ಎರಡು ಜೊತೆ ಬಟ್ಟೆ ಒದಗಿಸಲಾಗುತ್ತಿತ್ತು, ಮತ್ತು ಅವರು ತಮ್ಮ ತಮ್ಮ ಕೆಲಸಗಳನ್ನು ತಾವೇ ನಿಭಾಯಿಸಿಕೊಳ್ಳಬೇಕಾಗುತ್ತಿತ್ತು. ಪ್ರತಿದಿನ ಒಂದು ಗಂಟೆ ಚರಕ ಸುತ್ತಿ ನೂಲ ತೆಗೆಯಬೇಕಾಗಿತ್ತು. ಟೈಟುಸ್ ನಿಧಾನವಾಗಿ ಆಶ್ರಮದ ಶಿಸ್ತಿನ ಬದುಕಿಗೆ ಒಗ್ಗಿಕೊಂಡರು.

ಗಾಂಧಿ ಅವರು ಭರತ ಖಂಡದ ಸುತ್ತಾಟದಲ್ಲಿದ್ದಾಗ, ೧೯೨೫ರಲ್ಲಿ, ಕೇರಳದ ಪ್ರಸಿದ್ಧ ದೇವಸ್ಥಾನ ಅರನ್ಮುಲ ಪಾರ್ಥಸಾರಥಿ ದೇವಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಅದೇ ಊರಿನ ತಮ್ಮ ಆಶ್ರಮವಾಸಿ ಟೈಟುಸ್‌ನ ಮನೆಗೂ ಬೇಟಿಕೊಟ್ಟಿದ್ದರು. ಆಗ, ತಮ್ಮ ಆಶ್ರಮದ ನಿವಾಸಿ ಟೈಟುಸ್ ಅವರನ್ನು ಟೈಟುಸ್ಜಿ ಎಂದು ಸಂಬೋಧಿಸಿದ್ದರು. ಕೊನೆಗೇ ಗಾಂಧಿ ಅವರು ಹೆಸರಿಟ್ಟ ಆ ಹೆಸರು ಅವರಿಗೆ ಕಾಯಂ ಆಗಿ ಅಂಟಿಕೊಂಡುಬಿಟ್ಟಿತು.

ಉಪ್ಪಿನ ಸತ್ಯಾಗ್ರಹದ ದಂಡಿ ಯಾತ್ರೆಯ ಸಂದರ್ಭದಲ್ಲೂ, ಯಾತ್ರೆಯಲ್ಲಿ ಭಾಗವಹಿಸಿದ್ದ ಸ್ವಯಂಸೇವಕರು, ದಿನಕ್ಕೆ ೧೬ ಕಿ. ಮೀ ದೂರ ನಡೆದಿದ್ದರೂ, ಪ್ರತಿದಿನವೂ ಚರಕ ಸುತ್ತಿ ನೂಲು ತೆಗೆಯಬೇಕಾಗಿತ್ತು, ಜೊತೆಗೆ ಎಂದಿನ ದಿನ ಪ್ರಾರ್ಥನೆಯಲ್ಲಿ ತಪ್ಪದೇ ಭಾಗವಹಿಸಬೇಕಿತ್ತು. ಇನ್ನೇನು ದಂಡಿ ಯಾತ್ರೆ ಕೊನೆಯ ಹಂತದಲ್ಲಿದೆ ಎನ್ನುವಾಗ, ಪೋಲಿಸರು ಅವರನ್ನು ಥಳಿಸಿದರು. ನಂತರ ಬಂಧಿಸಿ ಜೈಲಿಗೆ ತಳ್ಳಿದ್ದರು. ಜೈಲಿನಿಂದ ಹೊರಗೆ ಬಂದ ಮೇಲೆ ಆಶ್ರಮದಲ್ಲಿ ತಮ್ಮ ಎಂದಿನ ಕೆಲಸವನ್ನು ಕೈಗೊಳ್ಳುತ್ತಿದ್ದ ಟೈಟುಸ್ಜಿ ಅವರು, ೧೯೩೩ರಲ್ಲಿ ಅನ್ನಮ್ಮ ಎಂಬುವವರನ್ನು ಮದುವೆಯಾಗುತ್ತಾರೆ. ಪತ್ನಿ ಅನ್ನಮ್ಮ ಗಂಡನ ನೆರಳಾಗಿ ಆಶ್ರಮವಾಸಕ್ಕೆ ಹೊಂದಿಕೊಳ್ಳುತ್ತಾರೆ. 

 ಗಾಂಧಿ ಅವರ ಆಶಯದಂತೆ ಟೈಟುಸ್ಜಿ ಅವರು, ದೆಹಲಿ, ಜಬಲಪುರ ಮತ್ತು ಭೋಪಾಲಗಳಲ್ಲಿ ನೆಲೆಸಿ ಅಲ್ಲಿನ ಗೋಶಾಲೆಗಳ, ಹಾಲುಮನೆಯ (ಡೈರಿ) ಜವಾಬ್ದಾರಿ ಹೊತ್ತು ಹಾಲು ಉತ್ಪಾದಕರ ರೈತಾಪಿ ಜನರಿಗೆ ಒತ್ತಾಸೆಯಾಗಿ ನಿಂತು ಹೈನುಗಾರಿಕೆಯ ಅಭಿವೃದ್ಧಿಗೆ ಶ್ರಮಿಸಿದ್ದರು. ಭೋಪಾಲನಲ್ಲಿನ ಭೈರಾಗಡದ ಹಾಲುಮನೆ ಮುಚ್ಚಿದಾಗ ಟೈಟುಸ್ಜಿ ಕುಟುಂಬ ತೀವ್ರ ಸಂಕಷ್ಟವನ್ನು ಅನುಭವಿಸಿತು. ಆದರೂ ಅಧೈರ್ಯ ತಾಳದೇ ಜೀವನ ಬಂಡಿಯನ್ನು ಮುಂದೆ ಸಾಗಿಸಿದ ಟೈಟುಸ್ಜಿ ಅವರು, ಭೋಪಾಲ ಕೆರೆಯ ಸಮೀಪ ಮನೆಯೊಂದನ್ನು ಕಟ್ಟಿಕೊಂಡು ಭೋಪಾಲಿನ ಕಾಯಂ ನಿವಾಸಿಗಳಾದರು. ಅವರು ತಮ್ಮ ಮನೆಗೆ ಕರೆಯೆ ನೋಟದ ಗುಡಿಸಲು- ಲೇಕ್ ವಿವ್ ಕಾಟೇಜ್ ಎಂದು ಹೆಸರಿಟ್ಟಿದ್ದರು. ಭಿಲಾಯಿ ಕಬ್ಬಿಣ ಉತ್ಪಾದನೆಯ ಕಾರ್ಖಾನೆಯು (ಭಿಲಾಯಿ ಸ್ಟೀಲ್ ಪ್ಲಾಂಟ್) ತನ್ನದೇ ಆದ ವಸತಿ ಸಮುಚ್ಚಯದ ಬಡಾವಣೆಯಲ್ಲಿ ಹಾಲುಮನೆಯನ್ನು ಆರಂಭಿಸಿದಾಗ ಅವರಿಗೆ ಅಲ್ಲೊಂದು ಕೆಲಸ ಸಿಕ್ಕಿತು.

 ಭಿಲಾಯಿ ಕಬ್ಬಿಣ ಕಾರ್ಖಾನೆಯ ಕೆಲಸದಿಂದ ನಿವೃತ್ತರಾದ ನಂತರ ಟೈಟುಸ್ಜಿ ಅವರು, ಸಮಾಜ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡರು. ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿನ ಸರ್ಕಾರೇತರ ಸಮಾಜ ಸೇವಾ ಸಂಘಟನೆಯ (ಎನ್ ಜಿ ಒ)ಲ್ಲಿ ಸೇರಿಕೊಂಡು ಸಮಾಜ ಸೇವೆ ಆರಂಭಿಸಿದರು. ಮುಂದೆ ಅದೇ ಪಶ್ಚಿಮ ಬಂಗಾಳದ ೨೪ ಪರಗಣ ಜಿಲ್ಲೆಯ ಸೋದಪುರದಲ್ಲಿ ಸಮಾಜ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡರು, ತದನಂತರ ಕೋಲ್ಕತ್ತದಲ್ಲಿರುವ ವಿಶ್ವ ಕ್ರೈಸ್ತ ಸಭೆಗಳ ಒಕ್ಕೂಟವನ್ನು (ವರ್ಲ್ಡ ಕೌನ್ಸಿಲ್ ಆಫ್ ಚರ್ಚಸ್) ಸೇರಿ ಬಂಗಾಳದಲ್ಲಿರುವ ವಲಸಿಗರ ಸೇವೆ (ಬೆಂಗಾಲ ರೆಫೂಜಿ ಸರ್ವಿಸೆಸ್)ಯಲ್ಲಿ ತೊಡಗಿಸಿಕೊಂಡರು. ಜೀವನ ಪೂರ್ತಿ ಅಲೆದಾಟದ ಬದುಕು ನಡೆಸಿದ ಅವರು, ಕ್ರೈಸ್ತ ನಡೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಜನಸೇವೆಗೆ ತಮ್ಮ ಬದುಕನ್ನು ಮುಡುಪಾಗಿಟ್ಟಿದ್ದರು.

 ಅವರು ೧೯೭೦ರಲ್ಲಿ `ನನ್ನ ಕನಸಿನ ಭಾರತ (ದಿ ಭಾರತ ಆಫ್ ಮೈ ಡ್ರೀಮ್ಸ್) ಹೆಸರಿನ ಪುಸ್ತಕವೊಂದನ್ನು ಪ್ರಕಟಿಸುತ್ತಾರೆ. ಬದುಕಿನ ಎಲ್ಲಾ ಸಂದರ್ಭಗಳಲ್ಲೂ ಜಗತ್ತಿನಲ್ಲಿ ಸಕಲರನ್ನೂ ಸಮಾನವಾಗಿ ಕಾಣಬೇಕೆಂಬುದನ್ನು ಪ್ರತಿಪಾದಿಸುತ್ತಾ, ಬಡವರ, ದೀನ ದಲಿತರ ಏಳಿಗೆಗೆ ತಮ್ಮ ಸಮಯವನ್ನು ಮುಡಿಪಾಗಿಡುತ್ತಾರೆ. ತಮ್ಮ ೭೫ನೇ ವಯಸ್ಸಿನಲ್ಲಿ ೧೯೮೦ ಸಾಲಿನ ಆಗಸ್ಟ್ ೮ ರಂದು ತಮ್ಮ ಕರ್ಮಭೂಮಿ ಭೋಪಾಲ್‌ನಲ್ಲಿ ತೀರಿಕೊಂಡಾಗ, ಅವರು ಮೈಮೇಲೆ ಸ್ವಾತಂತ್ರ್ಯ ಹೋರಾಟದ ಪ್ರತೀಕವಾದ ಖಾದಿ ಬಟ್ಟೆಯನ್ನೇ ತೊಟ್ಟಿದ್ದರು. ದೇಶದ ಸ್ವಾತಂತ್ರ್ಯದ ಹೋರಾಟದಲ್ಲಿ ಪಾಲ್ಗೊಂಡ ಕಾರಣದಿಂದ ಯಾವುದೇ ಬಗೆಯ ಫಲಾಪೇಕ್ಷೆಯನ್ನು ಸರ್ಕಾರದಿಂದ ಅವರು ನಿರೀಕ್ಷಿಸುತ್ತಿರಲಿಲ್ಲ.

 **********



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...