Sunday, 8 November 2020

ಲೇಯ - ದೀಪ್ತಿ ಫ್ರಾನ್ಸಿಸ್ಕಾ, ಯಡವನಹಳ್ಳಿ


 ಇಂದು ರಾಖೇಲಳು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದರೂ, ಅವಳ ನೆನಪುಗಳು ಮಾತ್ರ ನಮ್ಮ ಮಧ್ಯೆ ಹಾಗೆಯೇ ಇವೆ, ಎಂದುಕೊಂಡು ನೋವಲ್ಲಿ ಮೆಲುಕು ಹಾಕುತ್ತಿದ್ದ ಲೇಯಳು ತನ್ನ ಮಾತುಗಳನ್ನು ಮುಂದುವರಿಸುತ್ತಾ ಹೀಗೆನ್ನುತ್ತಾಳೆ: 'ಯಕೋಬನ ಭಗ್ನ ಹೃದಯದಲ್ಲಿ, ಕಪ್ಪು ಕಣ್ಣಿನ ಜೋಸೆಫನಲ್ಲಿ, ಪುಟ್ಟ ಬೆಂಜಮಿನಿನ ಆಟದಲ್ಲಿ ರಾಖೇಲಳ ನೆನಪುಗಳು ಅಚ್ಚಳಿಯದೆ ಉಳಿದಿವೆ. ಅನುಪಮ ಸೌಂದರ್ಯವತಿಯಾದ ಆ ನನ್ನ ಸಹೋದರಿ ತನ್ನ ತಾಯ್ತನಕ್ಕಾಗಿ ಮೊಂಡು ಬಿದ್ದು ಬೋರಿಡುತ್ತಿರುವುದು ಇನ್ನೂ ಕಿವಿಯಲ್ಲಿ ಕೇಳಿಸುತ್ತಿದೆ. ಆದರೂ, ನನ್ನ ಕಣ್ಣೀರು ಯಾರ ಗಮನಕ್ಕೂ ಬರಲಿಲ್ಲವಲ್ಲ. ಮರುಭೂಮಿಯಲ್ಲಿ ನೀರು ಹರಿದರೆ ಯಾರ ಗಮನಕ್ಕೆ ಬಂದೀತು. ರೂಬೆನ್, ಸಿಮೆಯೋನ್, ಲೇವಿ, ಜೂದಾ, ಇಸ್ಸಾಕಾರ್, ಜೆಬುಲೂನ್, ದೀನಾ ಹಾಗೂ ನನ್ನ ದಾಸಿಯಿಂದ ಹುಟ್ಟಿದ ಗಾದ್ ಮತ್ತು ಆಶೇರ್ ಎಂಬ ಮಕ್ಕಳನ್ನು ನನ್ನ ಮೂಲಕ ನನ್ನ ಪ್ರೀತಿಯ ಯಕೋಬನಿಗೆ ದೇವರು ಪ್ರಸಾದಿಸಿದರು. ಆದರೂ ಯಕೋಬನಿಗೆ ನನ್ನ ಸಹೋದರಿ ರಾಖೇಲಳ ಮೇಲೆ ಹೆಚ್ಚು ಪ್ರೀತಿ. ನಾನು ಮತ್ತು  ಗಂಡ ಯಕೋಬ ಇನ್ನೂ ನೂರು ವರ್ಷ ಜೀವಿಸಿದರೂ ನಾನು ಅವನ ಏಕೈಕ ಪ್ರೀತಿಯ ಮಡದಿಯಾಗಲಾರೆ.

ಲೇಯಳ ಈ ಭಾವನೆಗಳ ಬಿಂಬವಾದ ಅವಳ ದುಃಖವನ್ನು ದೇವರು ಗಮನಿಸಿದ್ದಾರೆ. ರಾಖೇಲ ಮತ್ತು ಲೇಯ ಇಬ್ಬರನ್ನೂ ಓಲೈಸಲು ಅವನ ಹೃದಯದ ಇಕ್ಕಟ್ಟಿನ ಪರಿಸ್ಥಿತಿಯನ್ನು ಅರಿತ ದೇವರು, ಲೇಯಳನ್ನು ಒಮ್ಮೆಯಲ್ಲ ಏಳು ಬಾರಿ ತಾಯಿಯನ್ನಾಗಿಸಿ, ಯಕೋಬನ ಮನೆಯಲ್ಲಿ ಅವಳ ನಿಲುವನ್ನು ಹೆಚ್ಚಿಸಿದರು.

ಪ್ರತಿಯೊಂದು ಮಗುವಿನ ಜನನದಿಂದಲೂ ಅತೃಪ್ತ ಲೇಯಳು ತನ್ನ ಗಂಡನ ಪ್ರೀತಿಯನ್ನು ಭದ್ರಪಡಿಸಿಕೊಳ್ಳಲು ಆಶಿಸಿದಳು. ಆದರೆ ಪ್ರತಿಬಾರಿಯೂ ಅವಳಿಗೆ ಸಿಕ್ಕಿದ್ದು ನಿರಾಶೆ. "ಹೆಚ್ಚಿಸುವೆನು ಪ್ರಸವ ಕಾಲದ ನಿನ್ನ ವೇದನೆಯನ್ನು; ಹೆರುವೆ ನೀನು   ಸಂಕಷ್ಟದಿಂದಲೇ ಮಕ್ಕಳನ್ನು. ಆದರೂ ನಿನಗಿರುವುದು ಗಂಡನ ಬಯಕೆ, ಒಳಗಾಗುವ ನೀನು ಆತನ ಒಡೆತನಕ್ಕೆ" (ಆದಿ ೩:೧೬) ಎಂಬ ಹಳೆಯ ಶಾಪವು ಪ್ರತಿಧ್ವನಿಸುತ್ತಿರುವುದನ್ನು ಕಂಡಳು.

ಬಹುಶಃ ಮದುವೆಯ ರಾತ್ರಿಯಲ್ಲಿ ರಾಖೇಲಳ ವೇಷಧರಿಸಿ ಯಕೋಬನನ್ನು ಮೋಸಗೊಳಿಸಿದ ಅಸಮಾಧಾನ ಅವನಲ್ಲಿ ಇನ್ನೂ ಇದ್ದಿರಬಹುದು. ನಿಜಕ್ಕೂ ಬೆಳಗಿನತನಕ ಅವಳು ಯಕೋಬನನ್ನು ಮೋಸಗೊಳಿಸುವ ಚಲದಲ್ಲಿದ್ದಳು. ಆ ನಡುವಳಿಕೆಗೆ ಖುಷಿಯನ್ನೂ, ಅಪರಾಧಿ ಮನೋಭಾವವನ್ನೂ ಹೊಂದಿದ್ದ ಅವಳಿಗಿದ್ದದ್ದು ಒಂದೇ ಸಮಾಧಾನ; ಅದು ತನ್ನ ತಂದೆ ಲಾಬಾನನ ಮಾತನ್ನು ಚಾಚೂ ತಪ್ಪದೆ ಪಾಲಿಸುವುದು. ಅಲ್ಲದೆ, ಯಕೋಬನ ಮಕ್ಕಳನ್ನು ಹೆರಲು ಅನುವು ಮಾಡಿಕೊಟ್ಟ ದೇವರಿಗೆ ಅವಳು ಪ್ರತಿದಿನ ಧನ್ಯವಾದಗಳನ್ನು ಅರ್ಪಿಸುತ್ತಿದ್ದಳು. ಆದರೆ ಆ ಮಕ್ಕಳು ಮಾತ್ರ ತಮ್ಮ ತಾಯಿಗೆ ಸಹಿಸಲಾರದ ನೋವನ್ನು ತಂದುಕೊಟ್ಟರು.

ಯಕೋಬನ ತಾಯ್ನಾಡಿಗೆ ಮರಳುವ ವೇಳೆ, ಸ್ಥಳೀಯ ರಾಜಕುಮಾರ ಲೇಯಳ ಏಕೈಕ ಪುತ್ರಿ ದೀನಾಳ ಮೇಲೆ ಅತ್ಯಾಚಾರವೆಸಗಿದ್ದ. ಅವಳಿಗೆ ಸಮಾಧಾನ ಮಾಡುವುದು ಹೇಗೆ ಎಂದು ತಲೆಕೆಡಿಸಿಕೊಂಡಿದ್ದಳು ಲೇಯಳು.  ಆಕೆಯ ಪುತ್ರರಾದ ಲೇವಿ ಮತ್ತು ಸಿಮೆಯೋನ್ ಒಂದು ಪ್ರದೇಶದ ಜನರನ್ನು ಬರ್ಬರವಾಗಿ ಕೊಂದು ಹಾಕುವ ಮೂಲಕ ತಮ್ಮ ಸಹೋದರಿಯನ್ನು ಅಪಮಾನಿಸಿದವರ ಮೇಲೆ ಸೇಡು ತೀರಿಸಿಕೊಳ್ಳುವ ಮೂಲಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದರು. ರೂಬೇನನು ದಾಸಿ ಬಿಲ್ಹಾಳೊಂದಿಗೆ ಮಲಗಿದ್ದರಿಂದ ಅವಮಾನಕ್ಕೆ ಗುರಿಯಾದನು.

ತಾಯ್ನಾಡಿಗೆ ಮರಳಿದರೆ ತಮ್ಮನ್ನು ಸಂರಕ್ಷಿಸುವುದಾಗಿ ದೇವರು ಭರವಸೆ ನೀಡಿದ್ದರಲ್ಲವೆ? ಹಾಗಾದರೆ ಇದೆಲ್ಲಾ ಏಕೆ ಪರಿಣಮಿಸುತ್ತಿದೆ ಎಂದು ಲೇಯಳು ನಿಬ್ಬೆರಗಾದಳು. ಅವರು ಮತ್ತು ಅವನ ನಾನೂರು ಜನರು ಏಸಾವನನ್ನು ಎದುರಾದಾಗ ಅವರ ಮೇಲೆ ದೇವರು ಕಣ್ಣಿಟ್ಟಿದ್ದರು ನಿಜ. ಆದರೆ ಸಹೋದರರ ಸ್ನೇಹಪರ ಪುನರ್ಮಿಲನದಿಂದ, ತಾನು ಕಡೆಗಣಿಸಲ್ಪಟ್ಟಂತೆ ಭಾವುಕಳಾದಳು. ಏಸಾವನು ಹಿಂಸೆಕೊಡಲಾರಂಭಿಸಿದರೆ, ತಪ್ಪಿಸಿಕೊಳ್ಳುವ ದೃಷ್ಟಿಯಿಂದ ರಾಖೇಲ ಮತ್ತು ಅವಳ ಮಕ್ಕಳನ್ನು ಯಾತ್ರಾ ತಂಡದ ಕೊನೆಯಲ್ಲಿ ಇರಿಸಲಾಗಿತ್ತು. 

ಆದರೆ ಯಕೋಬನ ಪ್ರೀತಿ, ರಖೇಲಳು ಪ್ರಸವದ ವೇಳೆ ಮರಣ ಹೊಂದುವುದನ್ನು ತಡೆಯಲಾಗಲಿಲ್ಲ. ಲೇಯಳೇ ಯಕೋಬನ ಮೊದಲ ಹಾಗೂ ಕೊನೆಯ ಹೆಂಡತಿಯಾಗಬೇಕೆಂಬುದು ದೈವೇಚ್ಛೆಯಾಗಿತ್ತು. ಯಾಕೋಬನನ್ನು ಇಸ್ರಾಯೆಲ್ ಕುಲದ ತಂದೆ ಎಂದರೆ, ಲೇಯಳನ್ನು ಇಸ್ರಾಯೆಲ್ ಕುಲದ ತಾಯಿ ಎನ್ನಲಾಯಿತು. ವಾಸ್ತವವಾಗಿ, ದೇವರ ಭರವಸೆಯು ರಾಖೇಲಳ ಮಗ ಜೋಸೆಫನ ಮೂಲಕ ಅಲ್ಲದೆ ಲೇಯಳ ಜೂದನ ಮೂಲಕ ಮುನ್ನಡೆಯಿತು. ಇಸ್ರಾಯೇಲಿನ ರಾಜ ದಾವೀದ ಹಾಗೂ ಮೆಸ್ಸಾಯ ಯೇಸುವು ಇದೇ ಜೂದನ ಕುಲಕ್ಕೆ ಸೇರಿದವರು. ಕೊನೆಯಲ್ಲಿ, ಯಕೋಬನನ್ನು ಎಫ್ರಾತ್‌ನಲ್ಲಿ ಮಣ್ಣು ಮಾಡಲಾಗಿದ್ದ ತನ್ನ ನೆಚ್ಚಿನ ಮಡದಿ ರಾಖೇಲಳ ಬಳಿ ಸಮಾಧಿ ಮಾಡದೆ, ಮಚ್ಫೆಲದಲ್ಲಿದ್ದ ಲೇಯಳ ಸಮಾಧಿಯ ಪಕ್ಕದಲ್ಲಿ ಮಣ್ಣು ಮಾಡಲಾಯಿತು.

ಜೀವನವು ನಮ್ಮ ಪಾಪ ಮತ್ತು ಸ್ವಾರ್ಥದಿಂದ ಉಂಟಾದ ದುಃಖದುರಿತಗಳಿಂದ ಕೂಡಿದ್ದಾಗಿದೆ ಎಂಬುದನ್ನು ಈ ಸಹೋದರಿಯರಾದ ರಾಖೇಲ ಮತ್ತು ಲೇಯ ನೆನಪಿಸುತ್ತಾರೆ. ಇಬ್ಬರು ಮಹಿಳೆಯರು ತಮ್ಮದೇ ರೀತಿಯಲ್ಲಿ ನೋವನ್ನು ಅನುಭವಿಸಿದರು. ಈ ನೋವು ಏದೋನ್ ತೋಟದಿಂದ ಹೊರಹಾಕಲ್ಪಟ್ಟ ಏವಳು ಕೊಟ್ಟ ಶಾಪದ ಪರಿಣಾಮವಾಗಿರಬಹುದು. ರಾಖೇಲಳು ಪ್ರಸವದ ನೋವನ್ನು ಅನುಭವಿಸಿದರೆ, ಲೇಯಳು ತನ್ನ ಬಗ್ಗೆ ಅಸಡ್ಡೆ ತೋರುತ್ತಿದ್ದ ವ್ಯಕ್ತಿಯನ್ನು ಪ್ರೀತಿಸಬೇಕಾದ ನೋವನ್ನು ಅನುಭವಿಸಿದಳು. ಆದರೂ ಇವರಿಬ್ಬರೂ ದೇವರ ಯೋಜನೆಯ ಉನ್ನತ ಪಾತ್ರಧಾರಿಗಳಾಗಿ ನಮ್ಮ ತಾಯ್ನಾಡನ್ನು ತೊರೆದು ಬಂದು ಇಸ್ರಾಯೆಲ್ ಕುಲದ ತಾಯಂದಿರಾದರು.

==============

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...