Tuesday, 10 November 2020

ಚಿರಕಾಲ ಬೆಳಗಲಿ ಕನ್ನಡದ ದೀಪ - ದೀವಿತ್ ಎಸ್.ಕೋಟ್ಯಾನ್ ಪೆರಾಡಿ

 


ಹೊತ್ತಿತೋ ಹೊತ್ತಿತು ಕನ್ನಡದ ದೀಪ

ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ..

ಹೊತ್ತಿತೋ ಹೊತ್ತಿತು ಕನ್ನಡದ ದೀಪ

ಹೊತ್ತಿತೋ.. ಹೊತ್ತಿತು ಕನ್ನಡದ ದೀಪ.....

ಕವಿ ಸಿದ್ಧಯ್ಯ ಪುರಾಣಿಕರ ಈ ಸಾಲು ಕನ್ನಡ ನಾಡಿನ ಅಭ್ಯುದಯದ ಕುರಿತು, ರಾಜ್ಯೋತ್ಸವದ ನೆಲೆಯ - ಕನ್ನಡಿಗರ ಬೆಲೆಯ ಕುರಿತು ಆಶಾವಾದದ ಚಿಲುಮೆಯಂತೆ ಗೋಚರಿಸಿದೆ. ಕನ್ನಡವೆನ್ನುವುದು ಕೇವಲ ಒಂದು ಭಾಷೆಯಾಗಿರದೆ ಕನ್ನಡಿಗರ ತೋಷದ ಆಗರವಾಗಿರುವುದು ಅನಾದಿಕಾಲದಿಂದಲೂ ನಮಗೆ ವೇದ್ಯವಾದ ವಸ್ತುಸ್ಥಿತಿ. ಕಾಲ, ಸಂದರ್ಭ, ಪಾತ್ರಗಳಿಗನುಸಾರವಾಗಿ ಕನ್ನಡದ ಬಗೆಗಿನ ಜಾಣ್ಮೆ- ಹೆಮ್ಮೆ ಬದಲಾದರೂ ಅದರ ಏಕಮಾತ್ರ ಉದ್ದೇಶ ಆರೋಗ್ಯಯುತ ಅಭಿವೃದ್ಧಿಯಾಗಿದೆ. ಪ್ರಗತಿಯ ನೆಪದಲ್ಲಿ ಪರಿಣಾಮದ ವರ್ತುಲದೊಳಗೆ ವಿಷದ ಬೀಜ ಬಿತ್ತುವ ಭಾಷಿಕ ಬೆಳವಣಿಗೆಗಳು ಎಷ್ಟು ಸ್ವೀಕಾರಾರ್ಹ? ಎಂಬುದರ ಬಗ್ಗೆ ನಾವು ಚಿಂತಿಸಬೇಕಾದ ಅನಿವಾರ್ಯತೆ ಮೂಡಿರುವುದು ನಮ್ಮ ಮುಂದಿರುವ ವಾಸ್ತವ.

"ಉರಿವವರು ಬೇಕಿನ್ನು ಇದರೆಣ್ಣೆಯಾಗಿ

ಸುಡುವವರು ಬೇಕಿನ್ನು ನಿಡುಬತ್ತಿಯಾಗಿ..

ಧರಿಸುವವರು ಬೇಕಿನ್ನು ಸಿರಿಹಣತೆಯಾಗಿ

ನಮ್ಮೀ ಉಸಿರಾಗಿ ಧರ್ಮಕ್ಕೆ ಬಾಗಿ..

ಹೊತ್ತಿತೋ ಹೊತ್ತಿತು ಕನ್ನಡದ ದೀಪ " ಎಂದು ನಮ್ಮ ಪೂರ್ವಿಕರು ಹಾಡಿದರೂ ಅದರ ಬಗ್ಗೆ ನಾವು ಎಷ್ಟು ಆರೋಗ್ಯಯುತವಾಗಿ ಯೋಚಿಸಿದ್ದೇವೆ ಎಂಬುದನ್ನು ನಾವು ಅಂತರ್ಮುಖಿಯಾಗಿ ಚಿಂತಿಸಬೇಕಾಗಿದೆ. ಕೇವಲ ಹೆಸರಿನ ಮತ್ತಡರಿದ ಕೂಡಲೇ ಕಾರ್ಯಪ್ರವೃತ್ತರಾಗುವ ಬದಲು ನಿಜವಾಗಿಯೂ ವಾಸ್ತವದ ಅರಿವನ್ನು ಇರಿಸಿಕೊಂಡು ಭಾಷೆಯ ಬಗೆಗಿನ ಬೆಳವಣಿಗೆಗೆ ನಾವು ಕಟಿಬದ್ಧರಾಗಬೇಕಾಗಿದೆ. ಅನ್ಯ ಭಾಷೆಯನ್ನು ಗೌರವಿಸುವುದರ ಜೊತೆಗೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ನಮ್ಮ ಮುಂದೆ ಇದೆ. ಈ ಅನಿವಾರ್ಯತೆಗೆ ಕಾರಣೀಭೂತರು ಯಾರು? ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು.

ಹಚ್ಚೇವು ಕನ್ನಡದ ದೀಪ ಎಂದ ಮಾತ್ರಕ್ಕೆ ಕನ್ನಡ ಉಳಿಯಲಾರದು, ಜೈ ಭಾರತ ಜನನಿಯ ತನುಜಾತೆ ಎಂದು ಉದ್ಘೋಷಿಸಿದ ಮಾತ್ರಕ್ಕೆ ಕನ್ನಡ ಬೆಳೆಯಲಾರದು. ನಮ್ಮ ಜೀವನವೇ ಕನ್ನಡವಾಗಬೇಕು, ಕನ್ನಡದಲ್ಲಿಯೇ        ಯೋಚಿಸಬೇಕು, ಕನ್ನಡದಲ್ಲಿಯೇ ಸರ್ವ ಸಾಧ್ಯತೆಯನ್ನು ಯೋಜಿಸಬೇಕು. ಕನ್ನಡ ಸಾಹಿತ್ಯದ ಕಂಪು, ಸಾಹಿತ್ಯದ ಆದಾನ- ಪ್ರದಾನ, ಭಾಷಾ ವೈವಿಧ್ಯತೆಯ ಸೊಗಡು, ಶಾಸ್ತ್ರೀಯ ಕಲೆಗಳ ನೆಲೆ, ಜಾನಪದಕಲೆಗಳ ಬೆಲೆ, ಪತ್ರಿಕೆ- ಚಲನಚಿತ್ರದ ತೋರಣ, ಶಾಸನಗಳು, ಪುರಾತತ್ವ ಅನ್ವೇಷಣೆಗಳು, ಕನ್ನಡ ಮಾಧ್ಯಮದ ಒಳಹರಿವು, ಮತೀಯ ಸಮನ್ವಯತೆ, ವಿಶ್ವದೊಳಗೆ ಕನ್ನಡದ ವಿಶ್ವ, ಕನ್ನಡದ ರಾಷ್ಟ್ರೀಯತೆಯ ಸ್ವರೂಪ, ಕನ್ನಡ ಕಟ್ಟುವ ಕಾಯಕ, ರಾಜಕೀಯ ಸ್ಥಿತ್ಯಂತರ, ಶಿಕ್ಷಣದಲ್ಲಿ ಕನ್ನಡ, ಹಸಿರು ಕನ್ನಡ, ಉಸಿರು ಕನ್ನಡ, ಚಳುವಳಿಯ ಚಿತ್ತ, ಏಕೀಕರಣದ ಮನೋಭೂಮಿಕೆ, ಸ್ವಾತಂತ್ರ್ಯ ಜ್ಯೋತಿ, ವ್ಯಾಕರಣದ ಕಾಂತಿ ಎಲ್ಲವೂ ಜೊತೆಸೇರಿರುವ ಸೋಜಿಗದ ಸಾಗರವಾದ ಕರುನಾಡಿನ ಕಾಂತಿಯ ಉದ್ದೀಪನಕ್ಕೆ ತಕ್ಕುದಾದ ಕಾರ್ಯವೈಖರಿ ಹೇಗಿರಬೇಕೆಂಬುದು ಒಂದು ದಿನದಲ್ಲಿ ನಿರ್ಧರಿಸಬಹುದಾದ ವಸ್ತುಸ್ಥಿತಿಯಲ್ಲ.

ಇಂದು "ಕನ್ನಡ" ಕನ್ನಡವಾಗಿ ಉಳಿಯದೆ ತನ್ನ ಮೂಲಬಲವನ್ನೇ ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ಭಾಷೆಯನ್ನು ಉಳಿಸಬೇಕಾದವರು ತಮ್ಮ ಆಸೆಯ ಸೌಧದೊಳಗೆ ನಾಡು, ನುಡಿ, ಸಂಸ್ಕೃತಿಗೆ ತರ್ಪಣ ಬಿಡುವ ಕೆಲಸ ನಡೆಸುತ್ತಿರುವ ಬಗೆ ಉಂಡ ಮನೆಗೆ ವಿಷವೀಯುವ ಪ್ರವೃತ್ತಿಯ ಮೂಲ ರೂಪವೇ ಸರಿ. ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಕನ್ನಡ ಭಾಷೆಗೆ ನಾವು ನೀಡಿರುವ ಸ್ಥಾನಮಾನ ನಮ್ಮ ಪ್ರಬುದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರೆ ಉತ್ಪ್ರೇಕ್ಷೆಯೆನಿಸದು.

ಕನ್ನಡದ ಕುರಿತಾಗಿರುವ ಪರಿಕಲ್ಪನೆ- ಪ್ರಕ್ರಿಯೆಗಳು ಪರಿವರ್ತನೆಯ ವರ್ತುಲದೊಳಗೆ ಸುತ್ತುತ್ತಿರುವುದು ಬಗೆ ಸ್ವಾಗತಾರ್ಹವೋ     ಯೋಚಿಸಬೇಕಾಗಿದೆ. ರಾಜ್ಯೋತ್ಸವ ಪ್ರತಿ ವರುಷವೂ ಬರುತ್ತದೆ. ಆದರೆ ಕಳೆದು ಹೋದ ಕನ್ನಡತನ ಮರಳಿ ಬರಲು ಸಾಧ್ಯವೇ? ತುಸು ನಾವೆಲ್ಲರೂ ಚಿಂತಿಸಬೇಕು. ಪರಿವರ್ತನೆ ಜಗದ ನಿಯಮವೇನೋ ಸತ್ಯ. ಆದರೆ ಹೆತ್ತ-ಹೊತ್ತ ತಾಯಿಯನ್ನು ತೊರೆಯುವ ಪರಿವರ್ತನೆ ಸ್ವೀಕಾರಾರ್ಹವೇ? ನಮ್ಮನ್ನು ನಾವು ಪ್ರಶ್ನಿಸೋಣ. ಈ ಪ್ರಶ್ನೆಗಳ ಸಾಗರದಿಂದೊಗೆದ ಜ್ಞಾನದೀವಿಗೆ ಈ ರಾಜ್ಯೋತ್ಸವದ ಸಂಭ್ರಮಕೆ ಹಣತೆ ಹಚ್ಚಲಿ, ಆ ಹಣತೆ ಅರಿವಿನ ಬೆಳಕನ್ನು ನೀಡಲಿ......

ಚಿರಕಾಲ ಬೆಳಗಲಿ ಕನ್ನಡದ ದೀಪ

ಜನಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ..

ಭಾರತಕೆ ಬಲವಾಗಿ ಭವ್ಯ ಪ್ರದೀಪ

ಕಳೆಯುತ್ತ ತಾಪ , ಬೆಳೆಸುತ್ತ ಸೈಪ..

ಹೊತ್ತಿತೋ ಹೊತ್ತಿತು ಕನ್ನಡದ ದೀಪ......

------------------------------------

ದೀವಿತ್ ಎಸ್.ಕೋಟ್ಯಾನ್ ಪೆರಾಡಿ

ಉಪನ್ಯಾಸಕರು

ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜು, ಮಂಗಳೂರು.

------------------------------------


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...