Sunday, 8 November 2020

ಕೊರೊನಾ ಕಲಿಸಿದ ಪಾಠಗಳು - ಫಾ. ಶಾಂತ್ ಕುಮಾರ್, ಬೆಂಗಳೂರು ಮಹಾಧರ್ಮಕ್ಷೇತ್ರ




ಜಗತ್ತಿನ ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಇಡೀ ಜಗತ್ತು ಬಗೆಬಗೆಯ ಸಾಂಕ್ರಮಿಕ ರೋಗಗಳನ್ನು, ಭಯಾನಕ ಚಂಡಮಾರುತಗಳನ್ನು, ವಾತಾವರಣದ ವೈಪರೀತ್ಯಗಳನ್ನು, ನೈಸರ್ಗಿಕ ವಿಪ್ಪತ್ತುಗಳನ್ನು ಕಂಡಿರುವುದು ತಿಳಿಯುತ್ತದೆ. ಆದರೆ ಎಂದೂ ಕೇಳಿ ಕಂಡರಿಯದಂತೆ ಇಡೀ ವಿಶ್ವವನ್ನು ಏಕಕಾಲದಲ್ಲಿ ನಡುಗಿಸುತ್ತಿದೆ ಎಂದರೆ ಅದು ಕೋವಿಡ್-೧೯. ಅದರ ಜಾಡನ್ನು ಹಿಡಿಯುತ್ತಾ ಹೋದಾಗ ನನಗೆ ಸಿಕ್ಕಿದ್ದು ಇದು. ಕೊರೊನಾ ವೈರಸ್ ಎಂದರೆ ಸಾಮಾನ್ಯ ವೈರಸ್ಗಳ ಒಂದು ಗುಂಪು. ವೈರಸ್ಗಳ ಮೇಲ್ಮೈಯಲ್ಲಿ ಕಿರೀಟದಂತ (ಅಡಿoತಿಟಿ) ವಿನ್ಯಾಸವಿರುವ ಕಾರಣದಿಂದಾಗಿ ಕೊರೊನಾ ಎಂಬ ಹೆಸರಿಡಲಾಗಿದೆ. ಕೊರಾನಾ ಅಥವಾ ಕರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟು ಮಾಡುವಂತಹ ವೈರಸ್ ಆಗಿದ್ದು, ಇದು ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಈ ವೈರಸ್ ನಿಂದಾಗಿ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಮತ್ತು ಇದು ಹೊಟ್ಟೆಯ ಮೇಲೂ ಪರಿಣಾಮ ಬೀರಬಹುದು. ಕೊರೊನಾ ವೈರಸ್ ನಲ್ಲಿ ಹಲವು ವಿಧಗಳಿವೆ. ತಜ್ಞರ ಪ್ರಕಾರ ಕೋವಿಡ್-೧೯ನಲ್ಲಿ ಮೆರ್ಸ್ ಮತ್ತು ಸಾರ್ಸ್ ವೈರಸ್ ಸ್ವಲ್ಪ ಪ್ರಮಾಣದಲ್ಲಿ ಸೇರಿವೆಯಾದರೂ ತನ್ನ ರಚನೆಯಲ್ಲಿ ಕೋವಿಡ್-೧೯ ಅವುಗಳಿಗಿಂತ ಹಲವು ರೀತಿಯಲ್ಲಿ ವಿಭಿನ್ನವಾಗಿರುವುದರ ಜೊತೆಗೆ ಸಂಕೀರ್ಣತೆಯನ್ನು ಹೊಂದಿದೆ. ಆದುದರಿಂದಲೇ ಚೀನಾದ ವುಹಾನ್ ನಿಂದ ಜಗತ್ತಿನಾದ್ಯಂತ ಹರಡಿರುವ ಈ ಕೊರೋನಾವನ್ನು ವಿಶ್ವ ಆರೋಗ್ಯ ಸಂಸ್ಥೆ ನಾವೆಲ್ ಕೊರೊನಾ ವೈರಸ್ ಎಂದು ಮೊದಮೊದಲು ಹೆಸರಿಸಿತ್ತು. ಮುಂದೆ ಇದನ್ನು ಕೋವಿಡ್-೧೯ ಎಂದು ಕರೆಯಲಾಯಿತು. ಕೋ-ಕೊರೊನಾ, ವಿ-ವೈರಸ್ ಮತ್ತು ಡ್-ಡಿಸೀಸ್ ಎಂದರ್ಥ. ಚೀನಾದ ವುಹಾನ್‌ನ ಮೂಲಕ ಹರಡಿರುವ ಈ ವೈರಸನ್ನು ಡಿಸೆಂಬರ್ ೩೧, ೨೦೧೯ರಲ್ಲಿ ಪತ್ತೆ ಹಚ್ಚಿ ಖಚಿತ ಪಡಿಸಿಕೊಂಡ ನಿಮಿತ್ತ ಇದನ್ನು ಕೋವಿಡ್-೧೯ ಎಂದು ಕರೆಯಲಾಗುತ್ತಿದೆ. ಸಾಮಾನ್ಯವಾಗಿ ಕೊರೊನಾ ವೈರಸ್ ಒಬ್ಬ ಮನುಷ್ಯನಿಂದ ಮತ್ತೊಬ್ಬನಿಗೆ ಹಲವು ರೀತಿಗಳಲ್ಲಿ ಹರಡುವುದರ ನಿಮಿತ್ತ ಇದು ಸಾಂಕ್ರಮಿಕ ರೋಗವೂ ಹೌದು. ನಮ್ಮ ಶೀನು ಮತ್ತು ಕೆಮ್ಮಿನ ಗಾಳಿಯಿಂದ, ತುಂಬಾ ಹತ್ತಿರ ದೈಹಿಕ ಸಂಪರ್ಕದಿಂದ (ಉದಾಹರಣೆಗೆ ಸ್ಪರ್ಶ ಮತ್ತು ಹಸ್ತಲಾಘವ), ವೈರಸ್ ಇರುವ ವಸ್ತುವನ್ನು ಮುಟ್ಟಿ ಬಳಿಕ ಬಾಯಿ, ಮೂಗು ಅಥವಾ ಕಣ್ಣುಗಳನ್ನು ಕೈ ತೊಳೆಯದೆ ಮುಟ್ಟುವುದು ಹಾಗೂ ಅಪರೂಪದಲ್ಲಿ ಮಲದ ಮೂಲಕವೂ ಸಹ ಹರಡುತ್ತದೆ. ಇವಿಷ್ಟೂ ಕೋವಿಡ್-೧೯ ಬಗೆಗಿನ ಮಾಹಿತಿ. 

ಒಂದು ಸಮಸ್ಯೆಯನ್ನು ಸಮಸ್ಯೆಯಾಗಿ ನೋಡಿದರೆ ಅದು ಸಮಸ್ಯೆಯಾಗಿಯೇ ಉಳಿಯುತ್ತದೆ ಅಥವಾ ಅದು ಇನ್ನೂ ಉಲ್ಬಣಗೊಳ್ಳಬಹುದೇ ಹೊರತು ಅದನ್ನು ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕೋವಿಡ್-೧೯ನಿಂದ ಉಂಟಾದ ಕಷ್ಟ,ದುಃಖ, ನೋವು, ತೊಂದರೆ, ಸಮಸ್ಯೆಗಳ ಬಗ್ಗೆ ಇಲ್ಲಿ ಚರ್ಚಿಸದೆ ಅದರಿಂದ ಕಲಿತ ಪಾಠಗಳನ್ನು ನಿಮಗೂ ತಿಳಿಸಲು ಇಚ್ಚಿಸುತ್ತೇನೆ. ಅದೆಷ್ಟೋ ಪಾಠಗಳನ್ನು ಈ ಮಹಾಮಾರಿ ನಮಗೆ ಕಲಿಸಿದೆ ಹಾಗೂ ಕಲಿಸುತ್ತಲೇ ಇದೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಪಟ್ಟಿಮಾಡಿದ್ದೇನೆ. ಈ ಸಾಂಕ್ರಮಿಕ ರೋಗ ಹರಡುತ್ತಿರುವಂತೆಯೇ ನಾವು ಕಲಿಯುತ್ತಿರುವ ಪಾಠಗಳ ಪಟ್ಟಿಯೂ ದೊಡ್ಡದಾಗುವುದರಲ್ಲಿ ಸಂದೇಹವೇ ಇಲ್ಲ. 


ಸಹಬಾಳ್ವೆಯ ಜೀವನಕ್ಕೆ ಕರೆಯೇ ಇದರ ಮೊದಲ ಪಾಠ

ಆದಿಕಾಂಡ ೨: ೧೫ ದೇವರಾದ ಸರ್ವೇಶ್ವರ ಆ ಮನುಷ್ಯನನ್ನು ಕರೆದುಕೊಂಡು ಹೋಗಿ ಏದೆನ್ ವನವನ್ನು ಕೃಷಿ ಮಾಡುವುದಕ್ಕೂ ಕಾಯುವುದಕ್ಕೂ ಅದರಲ್ಲಿ ಬಿಟ್ಟರು. ಅಂದರೆ ಭೂಮಿಯನ್ನು ಕೃಷಿಮಾಡುವುದರ ಜೊತೆಗೆ ಆ ವನವನ್ನು ಸಂಪೂರ್ಣವಾಗಿ ಕಾಯುವ, ರಕ್ಷಿಸುವ ಜವಾಬ್ದಾರಿ ಮನುಷ್ಯನದಾಗಿತ್ತು ಎಂದಲ್ಲವೇ? ಈ ದೃಷ್ಟಿಯಲ್ಲಿ ನೋಡಿದರೆ, ಮನುಷ್ಯನು ದೇವರ ಸೃಷ್ಟಿಯನ್ನು ತನ್ನ ಉಪಯೋಗಕ್ಕೆ ಬಳಸಿಕೊಳ್ಳುವುದಷ್ಟೇ ಅಲ್ಲದೆ ಅದನ್ನು ಸಂಪೂರ್ಣವಾಗಿ ಕಾಯುವ, ವಿನಾಶವಾಗದಂತೆ ಸಂರಕ್ಷಿಸುವ ಜವಾಬ್ದಾರಿ ಆತನದಾಗಿದೆ ಎಂಬುದೇ ಆದಿಕಾಂಡ ೨: ೧೫ರ ತಾತ್ಪರ್ಯವೆನಿಸುತ್ತಿದೆ. ಈ ಲಾಕ್‌ಡೌನ್ ಸಮಯದಲ್ಲಿ ಮನುಷ್ಯನ ಅಸಹನೀಯ ಪರಿಸ್ಥಿತಿ ಮತ್ತು ಅವನ ಸುತ್ತಮುತ್ತಲಿನ ಪರಿಸರದಲ್ಲಾದ ಬದಲಾವಣೆಗಳನ್ನು ಕಂಡ ಬರಹಗಾರರೊಬ್ಬರು ಈ ರೀತಿಯಾಗಿ ಹೇಳುತ್ತಾರೆ, Whಚಿಣ iಜಿ ಊumಚಿಟಿs ಚಿಡಿe ಗಿiಡಿus ಣo ಣhe eಚಿಡಿಣh, ಚಿಟಿಜ ಅoಡಿoಟಿಚಿ is ಣhe ಗಿಚಿಛಿಛಿiಟಿe? ಅಂದರೆ ಈ ಭೂಮಿಗೆ ಮನುಷ್ಯರಾದ ನಾವೇ ವೈರಸ್ ಆಗಿದ್ದು, ಕೊರೊನಾ ಅದನ್ನು ಪರಿಹರಿಸುವ ಮದ್ದು ಯಾಕಾಗಿರಬಾರದು? ಎಂದು. ಹಾಗದರೆ ಇಲ್ಲಿ ಮನುಷ್ಯನ ಸಾವು ಮುಖ್ಯ ಉದ್ದೇಶವಲ್ಲ. ಬದಲಿಗೆ ಈ ಸರ್ವಸೃಷ್ಟಿಗೆ ನಾವೇ ಒಡೆಯರು, ಅದರಲ್ಲಿರುವುದೆಲ್ಲವೂ ನಮ್ಮದೇ-ನಮಗಾಗಿಯೇ, ಮನುಷ್ಯರಾದ ನಮಗೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂಬ ಭ್ರಮೆಯಲ್ಲಿ ಬದುಕುವಂತೆ ಮಾಡಿರುವ ನಮ್ಮ ಅಹಂಕಾರವನ್ನು ಕಿತ್ತೊಗೆದು ನಾವು ಏನೇನೂ ಅಲ್ಲ ಎನ್ನುವ ಅರಿವಿನಿಂದ ಜೀವಿಸಬೇಕಾದ ವಿಶಾಲ ಮನೋಭಾವ ಇಲ್ಲಿ ಪ್ರಮುಖವಾಗಿದೆ. ಆಗ ಮಾತ್ರ ಸುತ್ತಲಿನ ಪರಿಸರದೊಂದಿಗೆ ಘರ್ಷಣೆ ಇಲ್ಲದೆ ನಾವು ಬದುಕಬಹುದು. ಅದೇ ನಮಗೆ ಒಳಿತು ಹಾಗೆಯೇ ಕ್ಷೇಮವೂ ಹೌದು. ಅನಗತ್ಯವಾಗಿ ಅದರ ವಿರುದ್ಧ ತಿಕ್ಕಾಟಕ್ಕೆ ಇಳಿದರೆ ನಮಗೆ ಗೋಚರಿಸದ ನಮ್ಮ ಸುತ್ತಲಿನ ಪರಿಸರದಲ್ಲೇ ಜೀವಿಸುತ್ತಿರುವ ಇತರ ಬಲಾಢ್ಯರು ಮುಂದೊಂದು ದಿನ ನಮ್ಮನ್ನು ಹತ್ತಿಕ್ಕುವುದು ಖಚಿತ. 

ಎರಡನೆಯದಾಗಿ ದೇವರ, ಪ್ರಕೃತಿಯ ಎದುರು ನಾವು ತೃಣಮಾತ್ರರು ಎಂಬುವುದನ್ನು ಕಲಿಸಿಕೊಟ್ಟಿದೆ. 

ಇದು ಸಹಬಾಳ್ವೆಗೆ ಸಂಬಂಧಿಸಿದ ಅಂಶವೇ ಆದರೂ, ಅದಕ್ಕಿಂತ ಮಿಗಿಲಾದ ಪಾಠವನ್ನು ನಮಗೆ ನೀಡಿದೆ. ಆದಿಕಾಂಡ ೩: ೧೯ರ ವಾಕ್ಯ ಇದಾಗಿದೆ ಮಣ್ಣಿನಿಂದ ಬಂದವನು ನೀನು, ಮರಳಿ ಮಣ್ಣಿಗೆ ಸೇರತಕ್ಕವನು. ಉಪದೇಶಕನ ಗ್ರಂಥ ೧೨: ೭ ಕೂಡ ಇದನ್ನೇ ನುಡಿಯುತ್ತದೆ. ಕೊರೊನಾ ಹರಡುತ್ತಿರುವ ಈ ಸಂದರ್ಭದಲ್ಲಿ ಮೇಲಿನ ವಾಕ್ಯಗಳು ಸತ್ಯವಾದುದೆಂಬುದು ನಮ್ಮೆಲ್ಲರ ಅನುಭವವಾಗಿದೆ. ಈ ಕೊರೊನಾ ತನ್ನ ಗಾತ್ರದಲ್ಲಿ ನಮ್ಮ ಬರೀಗಣ್ಣಿಗೆ ಕಾಣದಷ್ಟು ಕ್ಷುದ್ರಜೀವಿಯಾದರೂ ಅದು ನಮಗಿಂತಲೂ ಶಕ್ತಿಯುತವಾದುದು. ಈ ಸೂಕ್ಷ್ಮ ಅಣು ಇಡೀ ಜಗತ್ತನ್ನು ತನ್ನ ಬಿಗಿಮುಷ್ಟಿಯಲ್ಲಿ ಹಿಡಿದುಕೊಂಡಿದೆ ಎಂದರೆ ನಾವು ಈ ಅಂದ, ಅಗಾಧ, ವಿಶಾಲ, ವಿಸ್ಮಯ ವಿಶ್ವದಲ್ಲಿ ತೃಣಮಾತ್ರರಲ್ಲವೇ? ಇಂತಹ ಬಹು ಸಣ್ಣ ಕೊರೊನಾವೇ ನಮಗಿಂತ ಇಷ್ಟೊಂದು ಬಲಶಾಲಿಯೆಂದರೆ ಅದಕ್ಕಿಂತಲೂ ಷ್ಠವಾದುದು ಇನ್ಯಾವುದೋ, ಇನ್ನೆಷ್ಟೋ ಈ ದೇವರ ಸೃಷ್ಟಿಯಲ್ಲಿ ಅಡಗಿಲ್ಲವೇ? 

ಸಮಾನತೆಯ ಬದುಕು ಇದು ಕಲಿಸುವ ಮೂರನೆಯ ಪಾಠವಾಗಿದೆ.

ಹುಟ್ಟಿದ ಪ್ರತಿಯೊಬ್ಬನೂ ಒಂದಲ್ಲಾ ಒಂದು ದಿನ ಸಾಯಲೇ ಬೇಕು. ಈ ನಿಟ್ಟಿನಲ್ಲಿ ಸಾವಿನಲ್ಲಿ ಯಾವುದೇ ತಾರತಮ್ಯವಿಲ್ಲ. ಸಾಮಾನ್ಯವಾಗಿ ಉಳ್ಳವರು, ಬಲಾಢ್ಯರು ಮತ್ತು ಶ್ರೀಮಂತರು ಹರಡುವ ಕಾಯಿಲೆಗಳನ್ನು ದೂರ ಇಡುವ ಸಾಮರ್ಥ್ಯ ಉಳ್ಳವರಾಗಿರುತ್ತಾರೆ. ಹಣದ ಬಲದಿಂದ ಆರೋಗ್ಯಕ್ಕೆ ಬೇಕಾದ ಮುನ್ನೆಚ್ಚರಿಕೆಯನ್ನು ಕೊಂಡುಕೊಳ್ಳುವ ಹಣಬಲ ಇವರಿಗಿರುತ್ತದೆ. ಆದರೆ, ಕೊರೊನಾ ವಿಷಯದಲ್ಲಿ ಪಾತ್ರಗಳು ಬದಲಾಗಿವೆ. ಇದು ಉಳ್ಳವರಿಂದ (ವಿದೇಶ ಪ್ರವಾಸ ಮಾಡಬಹುದಾದಷ್ಟು ಶಕ್ತಿ) ಆರಂಭಗೊಂಡು ಇಲ್ಲದವರಿಗೂ ಬರುತ್ತಿರುವ ಉಲ್ಟಾ ಹರಿವಿನ ಕಾಯಿಲೆ. ಬಲಾಢ್ಯರು- ದುರ್ಬಲರೆಂಬ ಭೇದವಿಲ್ಲದೆ, ಶ್ರೀಮಂತ- ಬಡವನೆಂಬ ವ್ಯತ್ಯಾಸವಿಲ್ಲದೆ, ಶ್ರೇಷ್ಠ-ಸಾಮಾನ್ಯನೆಂಬ ತಾರತಮ್ಯವಿಲ್ಲದೆ ವರ್ಗಾತೀತವಾಗಿ ಎಲ್ಲರನ್ನೂ ಕಾಡುತ್ತಿದೆ. ಈ ದೃಷ್ಟಿಯಲ್ಲಿ ನೋಡಿದರೆ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿಯಾದರೂ ಸಮಾನತೆಯ ಸಂದೇಶವನ್ನು ಈ ಕೊರೊನಾ ಹೆಮ್ಮಾರಿಯು ನಮಗೆ ನೀಡುತ್ತಿಲ್ಲವೇ? ಅಥವಾ ಆ ಸತ್ಯವನ್ನು ಒಪ್ಪಿಕೊಳ್ಳುವ ವೈಶಾಲ್ಯ ನಮ್ಮಲ್ಲಿಲ್ಲವೇ?

ನಾಲ್ಕನೆಯದಾಗಿ ಬಾಂಧವ್ಯದ ಜೀವನವನ್ನು ಕಲಿಸಿಕೊಟ್ಟಿತು.
ಈ ಕೋವಿಡ್-೧೯ ಕುಟುಂಬ, ಸಮಾಜ, ರಾಜ್ಯ, ದೇಶ ಮತ್ತು ರಾಷ್ಟ್ರ- ರಾಷ್ಟ್ರಗಳನ್ನು ಒಂದುಗೂಡಿಸಿದೆ ಎಂಬುವುದರಲ್ಲಿ ಸಂದೇಹವಿಲ್ಲ. ಇಡೀ ಮನುಕುಲದ ದೃಷ್ಟಿಯನ್ನು ಒಂದೇ ದಿಕ್ಕಿನತ್ತ ಹರಿಯುವಂತೆ ಮಾಡಿತು ಈ ಕೊರೋನಾ. ಎಲ್ಲಾ ಜನರ, ಸರ್ಕಾರ-ಸಂಸ್ಥೆಗಳ, ರಾಜ್ಯ-ರಾಷ್ಟ್ರಗಳ, ದೇಶಗಳ ಭಯ, ಭೀತಿ, ಆತಂಕ, ಯೋಚನೆ, ಸಮಸ್ಯೆ ಮತ್ತು ಶತ್ರು ಒಂದೇ ಅದುವೇ ಈ ಕೊರೊನಾ. ಕೊರೊನಾ ವೈರಸ್‌ನ ಬಿಗಿಮುಷ್ಟಿಯಲ್ಲಿ ಸಿಲುಕಿ ಎದೆಯುಸಿರು ಬಿಡುತ್ತಿರುವ ಇಡೀ ಜಗತ್ತು ಅದರ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಹೈರಾಣಾಗಿರುವ ಸಮಯ ಇದು. ಖಂಡ ಖಂಡಗಳನ್ನು ದಾಟಿ ಸಾಗಿದ ಕೊರೊನಾ ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡಿದೆ. ಇದರ ಅಟ್ಟಹಾಸವನ್ನು ಹತ್ತಿಕ್ಕಲು ಲಸಿಕೆಯೊಂದೇ ಮಾರ್ಗ ಎಂಬ ಸತ್ಯ ಎಲ್ಲಾ ದೇಶಗಳಿಗೂ ಅರಿವಾಗಿ ಭಾಷೆ, ಬಣ್ಣ, ಜಾತಿ, ಮತ, ಮತ್ತು ಎಲ್ಲಾ ಭೇದ-ಭಾವಗಳ ಗಡಿಯನ್ನು ದಾಟಿ ಸೂಕ್ತ ಮತ್ತು ಸಮರ್ಪಕ ಲಸಿಕೆಯನ್ನು ಕಂಡುಹಿಡಿಯಲು ಜಗತ್ತಿನ ಎಲ್ಲಾ ರಾಷ್ಟ್ರಗಳು ಮುಂಚೂಣಿಯಲ್ಲಿವೆ ಮಾತ್ರವಲ್ಲ ಒಂದುಗೂಡಿವೆ.

ಈ ದಿನಗಳಲ್ಲಿ ಬೆಂಗಳೂರಿನಂತಹ ಪಟ್ಟಣಗಳು ದಿನೇದಿನೇ ವೇಗವಾಗಿ ಬೆಳೆದಂತೆ ಇಲ್ಲಿ ವಾಸಿಸುವ ಜನರ ಜೀವನದ ವೇಗವೂ ಪ್ರತಿದಿನ ಹೆಚ್ಚುತ್ತಲೇ ಇದೆ. ಸಾಮಾನ್ಯವಾಗಿ ಈ ಯಾಂತ್ರಿಕ ಬದುಕಿನ ದೊಡ್ಡ ಸಮಸ್ಯೆ ಎಂದರೆ ಸಮಯದ ಅಭಾವ. ಕೆಲವು ಕುಟುಂಬಗಳಲ್ಲಿ ಸದಸ್ಯರೆಲ್ಲನ್ನೂ ಒಂದುಗೂಡಿಸುವುದು ಅಸಾಧ್ಯದ ಮಾತಾಗಿದ್ದರೆ ಇನ್ನೂ ಕೆಲವು ಕುಟುಂಬಗಳಲ್ಲಿ ಎಲ್ಲರೂ ಒಂದುಗೂಡಿ ಎಷ್ಟೋ ವರ್ಷಗಳಾಗಿದ್ದವೋ ಏನೋ? ಒಟ್ಟಿನಲ್ಲಿ ಹೇಳುವುದಾದರೆ ಬಹಳಷ್ಟು ಜನರು ಒಂದೇ ಸೂರಿನಡಿ ಬದುಕು ಕಟ್ಟಿಕೊಂಡಿದ್ದರೂ ಅಪರಿಚಿತರಂತೆ ಜೀವಿಸುತ್ತಿರುವುದು ಬಹಳ ದುಃಖಕರ ಸಂಗತಿ. ಒಂದು ವೇಳೆ ಒಬ್ಬ ವ್ಯಕ್ತಿ ತನ್ನವರೊಂದಿಗೆ ಕಾಲ ಕಳೆದಿದ್ದರೂ ಅದು ಸಣ್ಣ ಪ್ರಮಾಣದಲ್ಲೇ ಮತ್ತು ಕಡಿಮೆ ಕಾಲಾವಧಿಯಲ್ಲಿಯೇ. ಈ ನಿಟ್ಟಿನಲ್ಲಿ ಕೋವಿಡ್ ಲಾಕ್‌ಡೌನ್ ಪ್ರತಿಯೊಬ್ಬರಿಗೂ ತನ್ನ ಕುಟುಂಬದೊಂದಿಗೆ ಸಂತಸ, ಸಂಭ್ರಮ ಹಾಗೂ ಹರುಷದಿಂದ ಕಾಲಕಳೆಯಲು ಸಾಕಷ್ಟು ಅವಕಾಶಗಳನ್ನು, ಸಮಯವನ್ನೂ ಸಹ ನೀಡಿದೆ ಎಂದರೆ ತಪ್ಪಾಗಲಾರದು

ಐದನೆಯದಾಗಿ ಸ್ಥಳ-ಸ್ಥಾನಗಳ (ಪಲ್ಲಟ) ಅದಲುಬದಲುಗೊಳಿಸಿದ ಕೊರೊನಾ.

ಇಂದು ನಮ್ಮ ಮನೆಗಳು ತಾತ್ಕಾಲಿಕ ಅಧ್ಯಾಯನದ ಮತ್ತು ಕೆಲಸದ ಕೇಂದ್ರಗಳಾಗಿರುವುದರ ಜೊತೆಗೆ ಚಿಕ್ಕಚಿಕ್ಕ ದೇವಾಲಯಗಳಾಗಿ ಪರಿವರ್ತನೆಗೊಂಡಿರುವುದು ಎಲ್ಲರಿಗೂ ತಿಳಿದ ವಿಷಯವೇ. ಆದರೆ ನಮ್ಮ ಓದು, ಕೆಲಸ ಮತ್ತು ಪ್ರಾರ್ಥನೆಗಳ ಸಾರ ಅಡಗಿರುವುದು ಅವುಗಳ ಸ್ಥಳಗಳಲ್ಲಲ್ಲ, ಬದಲಿಗೆ, ಕಲಿಯುವ ವಿಷಯಗಳಲ್ಲಿ, ನಾವು ಮಾಡುವ ನಿಷ್ಕಲ್ಮಷ ಪ್ರಾರ್ಥನೆಯಲ್ಲಿ ಮತ್ತು ಮಾಡಬೇಕಾದ ಕಾರ್ಯದಲ್ಲಿ ಎನ್ನುವಂತೆ ಸಾಬೀತು ಪಡಿಸಿತು ಈ ಕೊರೊನಾ. ವೃತ್ತಿಪರ ಕೆಲಸಗಳ ವಿಷಯದಲ್ಲಿ ಈ ಮಾತು ಎಲ್ಲರಿಗೂ ಅನ್ವಯಿಸುವುದಿಲ್ಲವಾದರೂ ಕನಿಷ್ಠ ಪಕ್ಷ ಕೆಲವರ ಪಾಲಿಗಾದರೂ ಇದು ಸತ್ಯ ಸಂಗತಿ. Woಡಿಞ-ಜಿಡಿom-home, ಔಟಿಟiಟಿe ಅಟಚಿsses, ಔಟಿಟiಟಿe ಒಚಿsses ಹೊಸದಲ್ಲದಿದ್ದರೂ ಅದು ಅomಠಿuಟsoಡಿಥಿ ಆದದ್ದು ಬಹುಶಃ ಇದೇ ಮೊದಲ ಬಾರಿಗೆ ಅಲವೆ? ಇದು ಒಂದೆಡೆಯಾದರೆ ಇನ್ನೊಂದೆಡೆ ಲಾಕ್‌ಡೌನ್ ಶುರುವಾದಾಗಿನಿಂದ ನಗರಗಳ ಬಹುತೇಕ ಕುಟುಂಬಗಳಲ್ಲಿ ಮನೆಗೆಲಸವನ್ನು ಹಂಚಿಕೊಂಡು ಮಾಡುವ ಪ್ರವೃತ್ತಿ ಕಂಡುಬಂದಿದೆ. ಗಂಡ ಹೆಂಡತಿ ಇಬ್ಬರೂ ಉದ್ಯೋಗಸ್ಥರಾಗಿರುವ ವಿಭಕ್ತ ಕುಟುಂಬಗಳಲ್ಲಿ ಮೆನೆಗೆಲಸ, ಕಛೇರಿ ಕೆಲಸ ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕಾದರೆ ಇದು ಅನಿವಾರ್ಯವೂ ಹೌದು. 

ಮಾನವೀಯತೆಯ ಪ್ರತೀಕವಾಗಲು ಅವಕಾಶ ನೀಡಿದ ಕೊರೊನಾ.

ಮಾನವೀಯತೆ ಅಡಗಿರುವುದು ನಮ್ಮ ಮೆದುಳಿನಲ್ಲಲ್ಲ, ನಮ್ಮ ಸ್ಪಂದಿಸುವ ಹೃದಯಗಳಲ್ಲಿ. ಅದು ನಮ್ಮೊಳಗಿನ ಭಾವನೆಯ ರೂಪವಷ್ಟೇ ಅಲ್ಲ ಆ ರೂಪಗಳಿಗೆ ಜೀವ ನೀಡುವ ನಮ್ಮ ಕೃತಿಗಳೇ ಅದರ ನೈಜ ಪುರಾವೆ. ಪ್ರಾರಂಭದಲ್ಲಿ ಕೋವಿಡ್ನ ಕೆಲವು ವೀಡಿಯೊಗಳನ್ನು ನೋಡಿದಾಗ ಯಾರೂ ಯಾರ ಸಹಾಯಕ್ಕೂ ಮುಂದಾಗುವುದಿಲ್ಲವೆಂದುಕೊಂಡುಬಿಟ್ಟಿದ್ದೆ. ನನ್ನ ಈ ಭಾವನೆ ಸುಳ್ಳಾದುದು ಹಲವಾರು ಜನರು ಈ ಪಿಡುಗನ್ನು ಅಡಗಿಸಲು ಮುಂದಾದಾಗ. ನೊಂದ ಸಂತ್ರಸ್ತರಿಗೆ ನೆರವು ನೀಡಲು ಮತ್ತು ಕೋವಿಡನ್ನು ಹತ್ತಿಕ್ಕಲು ತಮ್ಮ ಪ್ರಾಣವನ್ನು ಸಹ ಲೆಕ್ಕಿಸದೆ ಹಗಲಿರುಗಳೆನ್ನದೆ ಶ್ರಮವಹಿಸಿ ಎಷ್ಟೋ ವೈದ್ಯರು, ದಾದಿಗಳು, ಪೊಲೀಸರು, ಆಶಾಕಾರ್ಯಕರ್ತರು, ಸಮಾಜ ಸೇವಾ ಸಂಸ್ಥೆಗಳು, ಸ್ವಯಂ ಸೇವಕರು, ವೈದ್ಯಕೀಯ ಮತ್ತು ಅರಕ್ಷಕ ಕ್ಷೇತ್ರದ ಎಲ್ಲಾ ಸಿಬ್ಬಂದಿ ವರ್ಗದವರು ದುಡಿಯುತ್ತಿದ್ದಾರೆ. ಅವರ ಈ ಪ್ರಶಂಸನೀಯ ಧೈರ್ಯ-ಸ್ಥೈರ್ಯ ಮತ್ತು ನಿಸ್ವಾರ್ಥ ಸೇವೆಯವನ್ನು ನಾವು ಮೆಚ್ಚಲೇಬೇಕು. ಇವರಲ್ಲಿ ತಮ್ಮ ಸಹಾಯ ಹಸ್ತವನ್ನು ನೀಡಲು ಹೋಗಿ ಕೋವಿಡ್ ಸೋಂಕನ್ನು ತಮ್ಮ ಬದುಕಿಗೆ ಬರಮಾಡಿಕೊಂಡವರು, ಪ್ರಾಣವನ್ನು ಸಹ ಕಳೆದುಕೊಂಡವರು ಎಷ್ಟು ಜನರೋ. ನಮ್ಮ ನೆಮ್ಮದಿ ಅವರ ಬೆವರ ಹನಿಗಳ ಫಲವಲ್ಲವೇ? ನಮ್ಮ ಸಂರಕ್ಷಣೆ ಅವರ ರಕ್ಷೆಯಲ್ಲವೇ? 

ಊಟ, ಬಟ್ಟೆ, ವಸತಿಗಿಂತ ಪ್ರಾಣ ಮುಖ್ಯವೆಂಬುದು ಕೊರೊನಾ ಕಲಿಸಿದ ಮತ್ತೊಂದು ಮುಖ್ಯ ಪಾಠ

ಮತ್ತಾಯ ೧೬: ೨೬ ಒಬ್ಬನು ಪ್ರಪಂಚವನ್ನೆಲ್ಲಾ ಗೆದ್ದುಕೊಂಡು, ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಅವನಿಗೆ ದೊರಕುವ ಲಾಭವೇನು? ಅಥವಾ ಮನುಷ್ಯನು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು? ನಮಗೆಲ್ಲರಿಗೂ ಇದು ತಿಳಿದ ವಿಷಯವೇ. ಆದರೂ ಹಾಗೆ ಆದಾಗ, ಆ ರೀತಿಯ ಪರಿಸ್ಥಿತಿ-ಸಂದರ್ಭ ಒದಗಿದಾಗ ನೋಡಿಕೊಳ್ಳೋಣ ಎಂದು ಕಡೆಗಣಿಸುವ ಜನರ ಮನೋಭಾವ, ಜೀವನ ಶೈಲಿ ನೋಡುತ್ತಿದ್ದರೆ ಅದು ನಿಜವೇ ಎನಿಸುತ್ತಿತ್ತು. ನಮ್ಮ ಪ್ರತಿದಿನದ ಶ್ರಮ, ದುಡಿಮೆ, ಕಠಿಣ ಪ್ರಯತ್ನಗಳೆಲವೂ ಐಷಾರಮ ಜೀವನದೆಡೆಗೆ ನಾಗ ಲೋಟವಾಗಿತ್ತು. ಇಡೀ ಲೋಕವೇ ಲೌಕಿಕ ಸುಖಭೋಗದಲ್ಲಿ ಮಿಂದುಹೋಗಿತ್ತು. ಬರೀ ಮಾತುಗಳಿಗಿಂತ, ನಮ್ಮ ಅನುಭವಗಳು ನಮ್ಮಲ್ಲಿ ಹೆಚ್ಚಿನ ಪರಿಣಾಮವನ್ನು ಉಂಟುಮಾಡುತ್ತದೆ. ಯೇಸುವಿನ ಮೇಲಿನ ಮಾತುಗಳು ಇಷ್ಟು ವರ್ಷಗಳು ನಮ್ಮ ಕಿವಿಗಳನ್ನು ತಟ್ಟಿದ್ದವೇ ಹೊರತು ಹೃದಯಗಳನ್ನಲ್ಲ. ಅವರ ಸತ್ಯ ವಾಕ್ಯಗಳು ಪರಿಣಾಮಕಾರಿಯಾಗಿ ಕಂಡುಬಂದಿದ್ದು ಈ ಕೊರೊನಾವೆಂಬ ಪಿಡುಗಿನಿಂದಲೇ. ನಮ್ಮಲ್ಲಿರುವ ಜೀವ ಜೀವಂತವಾಗಿದ್ದರೆ ಮಾತ್ರ ಊಟ, ಬಟ್ಟೆ, ವಸತಿ ಎಲ್ಲಾ. ಅದೇ ಇಲ್ಲದಿದ್ದರೆ ಊಟ, ಬಟ್ಟೆ, ವಸತಿಗಳಿದ್ದು ಪ್ರಯೋಜನವಿಲ್ಲ ಅಲ್ಲವೇ? 

ಉದಾರಿಗಳಾಗಲು ಕರೆ ನೀಡಿದ ಕೊರೊನಾ

ಲಾಕ್ಡೌನ್ ನಿಂದ ನಮ್ಮ ದೇಶದಲ್ಲಿ ಮಾತ್ರವಲ್ಲ ಇಡೀ ಪ್ರಪಂಚದಲ್ಲಿರುವ ಎಷ್ಟೋ ಕಂಪೆನಿಗಳು ಆರ್ಥಿಕ ನಷ್ಟವನ್ನು ಅನುಭವಿಸಿವೆ, ಇನ್ನೂ ಕೆಲವು ಮುಚ್ಚಿಹೋಗಿವೆ. ದೇಶದ ಜೊತೆಗೆ ಕಾರ್ಮಿಕರೆಲ್ಲರೂ ಆರ್ಥಿಕತೆಯ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ವಲಸೆ ಕಾರ್ಮಿಕರು ಮಾತ್ರವಲ್ಲ, ನಮ್ಮ ಸುತ್ತಮುತ್ತಲಿನ ಮಂದಿ, ನಮ್ಮ ಮನೆಯ ಮಂದಿಯು ಕೂಡ ಕೆಲಸ ಕಳೆದುಕೊಂಡಿದ್ದಾರೆ. ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. ಆರ್ಥಿಕವಾಗಿ ಕಷ್ಟದಲ್ಲಿದ್ದಾರೆ. ನಾವೆಲ್ಲರೂ ಕರುಣಾಳುಗಳಾಗಿ ವರ್ತಿಸಬೇಕಾಗಿದೆ. ಉದಾರ ಮನೋಭಾವ ಹೊಂದಬೇಕಾಗಿದೆ ಎಂಬ ಕೂಗು ಎಲ್ಲೆಡೆಗಳಿಂದ ಹರಿದುಬರುತ್ತಿದೆ. ಈ ಎರಡು-ಮೂರು ತಿಂಗಳುಳಲ್ಲಿ ಎಷ್ಟೋ ಧಾರ್ಮಿಕ, ಸಾಮಾಜಿಕ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು ಬಡವರಿಗೆ, ದೀನ-ದಲಿತರಿಗೆ, ನಿರಾಶ್ರಿತರಿಗೆ, ಅನಾಥರಿಗೆ ಬೇಕಾದ ಪರಿಹಾರಕ ವಿತರಣೆಗೆ ಮುಂದಾದುದು ಶ್ಲಾಘನೀಯ. ಆದರೆ ಕೆಲವೊಂದು ಕಡೆ ಈ ಪರಿಹಾರಕ ವಿತರಣೆಗಳು ತಮ್ಮ ಸ್ವಾರ್ಥಕ್ಕೆ ದುರ್ಬಳಕೆಯಾಗುತ್ತಿರುವುದು ನೋವಿನ ಸಂಗತಿ. ಪರಿಹಾರಕ ವಿತರಣೆಯಂತಹ ಮಾನವೀಯ ಕಾರ್ಯಗಳಲ್ಲಿ ಸ್ವಾರ್ಥ ನುಸುಳದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದಾಗಿರಲಿ. ಬೇರೆಯವರಿಂದ ಅಪೇಕ್ಷಿಸುವುದರ ಬದಲು ನಾವೇ ಉದಾರಿಗಳಾಲು, ಇತರರ ಕಷ್ಟಗಳಿಗೆ ಸ್ಪಂದಿಸುವ ಹೃದಯಿಗಳಾಗಲು ದೇವರು ಕೊಟ್ಟಿರುವ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳೋಣ.

ಕೊನೆಯದಾಗಿ ಯಾಂತ್ರಿಕ ಬದುಕಿಗೆ ಕಡಿವಾಣ ಹಾಕಿದ ಕೊರೊನಾ
ನಮ್ಮ ದಿನನಿತ್ಯದ ಜೀವನವನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಂಡರೆ ನಮ್ಮ ಜೀವನಕ್ಕೂ ಯಂತ್ರಕ್ಕೂ ಯಾವುದೇ ವ್ಯತ್ಯಾಸವಿಲ್ಲ ಅಲ್ಲವೇ? ಅದರಲ್ಲೂ ಪಟ್ಟಣಗಳಲ್ಲಿ ವಾಸವಿರುವವರು ಇದನ್ನು ಅಲ್ಲಗಳೆಯುಂತಿಲ್ಲ. ಪ್ರತಿ ದಿನ ಮಾಡಿದ ಕೆಲಸಗಳನ್ನೇ ಮತ್ತೇ ಮತ್ತೇ ಮಾಡಿ ಮಾಡಿ ಬೇಸತ್ತು ಹೋಗಿರುವ ಹೃದಯಗಳು ಅದೆಷ್ಟೋ. ನಮ್ಮ ಜೀವನಕ್ಕೆ ಚಕ್ರವೊಂದು ಅಂಟಿಕೊಂಡಿರುವಂತೆ ಭಾಸವಾಗುತ್ತಿತ್ತು. ಜೀವನವನ್ನು ಒಮ್ಮೆ ನಿಲ್ಲಿಸಿ ಅದರ ರುಚಿಯನ್ನು ಸವಿಯಬೇಕೆಂದರೂ ನಮ್ಮ ಪರಿಸ್ಥಿತಿ, ಸಂದರ್ಭಗಳು ನಮ್ಮನ್ನು ಅಸಹಾಯಕರನ್ನಾಗಿಸಿತ್ತು. ನಮ್ಮ ಬದುಕು ಮನೆ-ಶಾಲೆ-ಕಛೇರಿ ಎಂಬ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಂತಿತ್ತು. ನಮ್ಮಲ್ಲಿ ಹಲವರು ದುಡಿಮೆ-ಸಂಪಾದನೆಯಲ್ಲೇ ಮುಳುಗಿಹೋಗಿದ್ದರು. ಇಂತಹ ಯಾಂತ್ರಿಕ ಬದುಕನ್ನು ತಡೆದು ನಿಲ್ಲಿಸಿ ನಮ್ಮೆಲ್ಲರನ್ನು ನಮ್ಮನಮ್ಮ ಮನೆಗಳಲ್ಲಿ ಹೊರಬರದಂತೆ ಕೂಡಿಹಾಕಿದ್ದೇ ಈ ಕೊರೋನಾ.

ಕೊರೊನಾ ಕಲಿಸಿದ ಪಾಠಗಳು ಪ್ರತಿಯೊಬ್ಬರಿಗೂ ನಾನು ಮೇಲೆ ತಿಳಿಸಿದವುಗಳೇ ಆಗಿರಬೇಕೆಂದಲ್ಲ. ಆದರೆ ಒಂದಂತೂ ಸತ್ಯ! ಎಲ್ಲರಿಗೂ ಅನ್ವಯಿಸುವ ಕೆಲವಷ್ಟು ಪಾಠಗಳ ಜೊತೆಗೆ ಕೊರೊನಾ ಪ್ರತಿಯೊಬ್ಬರಿಗೂ ಅವರವರ ವಯಸ್ಸಿಗೆ, ಬುದ್ಧಿಗೆ, ಪರಿಸ್ಥಿತಿಗೆ, ಸಂದರ್ಭಕ್ಕೆ, ಜೀವನಕ್ಕೆ ತಕ್ಕಂತೆ ಇಂತಿಷ್ಟು ಪಾಠಗಳನ್ನು ಕಲಿಸಿರುವುದನ್ನು ಅಲ್ಲಗಳೆಯುವಂತಿಲ್ಲ. ಅದನ್ನರಿತು ಬಾಳಿದರೆ ನಮಗೆ ಒಳಿತು. 

ಕೊನೆಯಲ್ಲಿ ನಿಮ್ಮೆಲ್ಲರಿಗೂ ನನ್ನದೊಂದು ಕಿವಿ ಮಾತು ಇದಾಗಿದೆ. 

ಬದುಕು ಅನ್ನೋ ಹೊಲದಲ್ಲಿ 

ಸಮಸ್ಯೆ ಅನ್ನೋ ಕಳೆ

ಬೆಳೆಯುತ್ತಲೇ ಇರುತ್ತೆ. 

ಹಾಗಾಂತ ಹೊಲ ಬಿಟ್ಟು ಹೋಗಾಕ್ಕಾಗುತ್ತಾ...

ಕಳೆಕೀಳೋ ಕಲೆ ಕಲಿತು ಬಾಳಾಬೇಕು ಅಷ್ಟೇ

ಅದೇ ಸತ್ತ್ಯ.

**********

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...