Monday, 9 November 2020

ಕ್ರಿಸ್ತದನಿ ಯೊಂದಿಗಿನ ನನ್ನ ನಂಟು... - ಸಿಸ್ಟರ್ ಸೆಬಾಸ್ಟಿನ್ SMMI




ಅರುಳೋ ಮರುಳೋ ೬೦ರ ನಂತರದ ಮಾತು ... ಆದರೆ ನನಗದು ಮರಳಿ ಅರಳಿ ಬದುಕುವ ಜೀವನದುತ್ಸುಕತೆಗೆ ಸ್ವಾಗತ ಕೊಟ್ಟ ಅನುಭವ.

ಒಮ್ಮೆ ನನಗೊಂದು ಫೋನ್ ಕರೆ ಬಂತು. ನಿಮ್ಮಿಂದ ಒಂದು ಕೆಲಸ ಆಗಬೇಕುಎಂದಿತು, ಆ ಕಡೆಯಿಂದ ಬಂದ ವಾಣಿ. ...ಪೂಜಾ, ಆರಾಧನಾ ವಿಧಿಗಳಿಗೆ ಒಂದು ಹೊಸತನ ನೀಡಿ ಸಕ್ರಿಯವಾಗಿ ಭಾಗವಹಿಸಿ ಅರ್ಥ್ಯೆಸಿಕೊಳ್ಳಲು ಸಹಕಾರಿಯಾಗುವಂತೆ ಪ್ರಯತ್ನಿಸುತ್ತಿದ್ದೇವೆ. ಪ್ರತಿದಿನದ ಸಂತರ ಬಗ್ಗೆ ಕೆಲವು ಮುಖ್ಯಾಂಶಗಳನ್ನು  ಬರೆಯುವ ಕೆಲಸ ನಿಮ್ಮಿಂದಾಗಬೇಕು... ಎಂಬಿತ್ಯಾದಿ.   

ನಾನಂತೂ ಮೊದಲು ನಿರಾಕರಿಸಿಯೇ ಬಿಟ್ಟೆ...! ಅಯ್ಯೋ ವಯಸ್ಸಾಯಿತು, ಕಣ್ಣು ಮಬ್ಬಾಗಿವೆ, ದೇಹದಲ್ಲಿ ನಿಶ್ಶಕ್ತಿ, ಇತರ ಕೆಲಸಗಳಿವೆ... ಎಂದೆಲ್ಲಾ ಸಬೂಬುಗಳನ್ನು ನೀಡಲು ಶುರುಮಾಡಿದೆ. ಯಾಕೋ ಆ ಕಡೆಯ ದನಿ ಬೆಂಬಿಡದೆ ಮಾಡಿಸಿಯೇ ತೀರುವೆನೆಂಬ ಹಠವನ್ನು ಹೊತ್ತಂತಿತ್ತು. ನನಗಂತೂ ತ್ರಿಶಂಕು ಲೋಕದಲ್ಲಿದ್ದ ಹಾಗೆ. ಹ್ಞೂ.. ಎಂದರೆ ಕೆಲಸದ ಹೊರೆ, ಇಲ್ಲ ಎಂದರೆ ಆಧ್ಯಾತ್ಮಿಕ ಸಹಾಯಕ್ಕೆ ನಿರಾಕರಿಸಿದ ಪರಿತಾಪ. ಮೇಲಾಗಿ ಕೇಳಿದ್ದು ಮಾಡೋಕ್ಕಾಗುತ್ತಾ ಎಂಬ ಭಾವನೆ ಬೇರೆ. ಶಿಕ್ಷಕ ವೃತ್ತಿಯ ಹಿನ್ನೆಲೆಯಿತ್ತಾದರೂ, ಬರವಣಿಗೆ ಎಲ್ಲರಿಗೂ ಒಲಿದು ಬರುವಂತಹದ್ದಲ್ಲ. ಆದರೆ ಅಭಿರುಚಿಗಳನ್ನು ಪ್ರವೃತ್ತಿಯಾಗಿಸಲು ವಯೋಮಿತಿಯಿಲ್ಲವಲ್ಲಾ... ಹಾಗೆಂದೆಣಿಸಿಯೋ ಏನೋ ಆ ಕಡೆಯಿಂದ ಕರೆ ಮಾಡಿದವರು ನನ್ನನ್ನು  ಪ್ರೋತ್ಸಾಹಿಸಿ ಬರೆಯಲಾಗುವುದೆಂದು ಬೆಂಬಲಿಸಿದರು, ಬರೆಯಲು ಒತ್ತಾಯಿಸಿದರು. ಕೊನೆಗೂ ಒಪ್ಪಿಬಿಟ್ಟೆ; ಆಧ್ಯಾತ್ಮಿಕ ಕಾರ್ಯಕ್ಕೆ ಒಲ್ಲೆ ಎನ್ನಬಾರದೆಂಬ ಗೊಂದಲಕ್ಕೆ ಬಿದ್ದು.

ಕೊನೆಗೂ ಮನಸ್ಸಿನ ದನಿಗೆ ಒಪ್ಪಿ ಕ್ರಿಸ್ತದನಿಗೆ ಅಕ್ಷರ ಪೋಣಿಸಲು ಸಮ್ಮತಿಸಿದ ನನಗೆ ಕೆಲಸದಲ್ಲಿ ಕಾರ್ಯೋನ್ಮುಖಳಾಗಲು ಈಗ ಬೇಕಾದದ್ದು ಸಂತರ ಪುಸ್ತಕ; ಆ ಪುಸ್ತಕಗಳಿಗಾಗಿ ಹುಡುಕಾಡಿದೆ, ಬೇಡಿದೆ... ಕೊನೆಗೂ ಸಂಗ್ರಹಿಸಿದೆ. ಇನ್ನು ಉಳಿದಿರುವುದು ಕನ್ನಡಕ್ಕೆ ತರ್ಜುಮೆ ಮಾಡುವ ದೊಡ್ಡ ಕಾರ್ಯ. ಆಂಗ್ಲ ಭಾಷೆಯಿಂದ ಭಾಷಾಂತರಿಸಲು ಸ್ವಲ್ಪ ಕಷ್ಟವೆನಿಸಿತು. ಸಂತರ ಜೀವನ ಉದ್ದವಾಗಿ ಓದಿ ಸಂಕ್ಷಿಪ್ತವಾಗಿ ಬರೆಯಬೇಕಾಗಿತ್ತಲ್ಲ.!

ಮುಖ್ಯಾಂಶಗಳ ಕ್ರೋಢೀಕರಣವೇನೋ ಆಯಿತು. ಕಲೆಹಾಕಿದ್ದನ್ನು ೩-೪ ಬಾರಿ ಬರೆದು, ತಿದ್ದಿ-ತೀಡಿ ಕೊನೆಗೆ ೫ನೇ ಸಾರಿ ಅಂತಿಮವಾಗಿ ಪೂರ್‍ಯೆಸಿದೆ. ಬರೆದು ಬರೆದು ಕೈ ನೋವು ಬಂದಿತ್ತು. ಈ ನೋವಿಗೆ ಪರಿಹಾರ ಬೇಕೆನಿಸಿತು. ಹೊಳೆದದ್ದು ... ಟೈಪಿಂಗ್ ಬಂದರೆ ಸುಲಭ! ಕೈಯಲ್ಲಿ ಬರೆಯುವುದಕ್ಕೆ ಪರ್ಯಾಯವಾಗಿ ಟೈಪ್ ಮಾಡಬಹುದಲ್ಲಾ.  ಹೌದು. ಅಯ್ಯೋ! ಆದರೆ ಕನ್ನಡ ಟೈಪ್ ಮಾಡಲು    ಬಾರದೆ !.

ಆದರೆ ಸಮಯ, ಶ್ರಮ, ಉಳಿಸಲೇಬೇಕಿತ್ತು. ಮನಸ್ಸಿದ್ದರೆ ಮಾರ್ಗ! ಕನ್ನಡ ಬೆರಳಚ್ಚು ಕಲಿಯಲೇಬೇಕೆಂದು ನಿರ್ಧರಿಸಿ ಕಲಿತೇಬಿಟ್ಟೆ. ಸ್ವ-ಕಲಿಕೆಯಿಂದ ಕಲಿತ ಟೈಪಿಂಗ್ ಕ್ಷಣದಿಂದ ಕ್ಷಣಕ್ಕೆ ಉತ್ತಮವೆನಿಸಿ ಬರವಣಿಗೆಯ ಕೆಲಸವನ್ನು ಶೀಘ್ರಗೊಳಿಸಿತು. ಮಂದಗತಿಯಲ್ಲಿ ಆರಂಭವಾದ ಕೆಲಸ... ಸಂಪೂರ್ಣವಾದದ್ದನ್ನು ನೋಡಿ ಬಹಳ ಖುಷಿಯಾಯಿತು. ಜವಾಬ್ದಾರಿ ಮುಗಿಯಿತೆಂದು ಕೊಟ್ಟ ಕೆಲಸವನ್ನು ಕಳುಹಿಸಿದೆ. ನಂತರ ನನ್ನನ್ನು ಆವರಿಸಿದ್ದು ಒಂದು ಬಗೆಯ ಕೃತಜ್ಞತಾಭಾವ. ಬರವಣಿಗೆಯ ನಡುವೆ ಹೆಚ್ಚು ಓದಬೇಕಾಗಿದ್ದರಿಂದ ಹೆಚ್ಚೇನೋ ತಿಳಿದುಕೊಂಡ ಅನುಭವ. ಹೆಚ್ಚು ಸಂತರ ಪರಿಚಯ, ಜೀವನದ ದರ್ಶನ, ಅವರ ತ್ಯಾಗ ಪ್ರೀತಿಗಳ ಅನಾವರಣ, ತಮ್ಮ ನಂಬಿಕೆಗೆ, ವಿಶ್ವಾಸಕ್ಕೆ ಪ್ರಾಣನೀಡಿ ಸಾಕ್ಷಿಯಾದ ಬಗೆ, ಇವೆಲ್ಲವೂ ಧರ್ಮಸಭೆಯನ್ನು, ಕ್ರಿಸ್ತನನ್ನು ಮತ್ತಷ್ಟೂ ಅರಿಯಲು ಆದ ದಿವ್ಯಾನುಭ. ಈ ಕಾರ್ಯದಲ್ಲಿ ವ್ಯಯಿಸಿದ ಶ್ರಮ, ಸಮಯವೆಲ್ಲವೂ, ಈ ವರ್ಣನಾತೀತ ಅನುಭವದ ಮುಂದೆ ಗೌಣವೆನಿಸಿತು. ಒಂದು ಬಗೆಯ ಆತ್ಮತೃಪ್ತಿಯಿತ್ತು. ಇದು ನನ್ನ ಮತ್ತು ಕ್ರಿಸ್ತದನಿಯ ನಡುವಿನ ಸ್ನೇಹದ ನಂಟು.

ಈ ಅನುಭವಗಳ ನಡುವೆ ಬೌಧ್ಧಿಕವಾಗಿಯೂ ಒಂದಷ್ಟು ಕಲಿಯುವಂತಾದದ್ದು ನನಗೆ ದೊರೆತ ಸದವಕಾಶ.  ನಂತರ ಬಂದಂತಹ ತಿದ್ದುಪಡಿಯ ಕಾರ್ಯ ನನ್ನ ಕನ್ನಡದ ಪದಸಂಪತ್ತನ್ನು ವಿಸ್ತರಿಸಲು ಸಹಾಯವಾಯಿತು. ಕನ್ನಡ ಭಾಷೆಯ ಹೊಸ ಪದಗಳನ್ನು ನನಗೆ ಪರಿಚಿತವಾಗುವಂತೆ ಮಾಡಿತು. ಕೊರೋನ ಸಾಂಕ್ರಮಿಕ ರೋಗದ ಪರಿಣಾಮವಾಗಿ ಆಗಿದ್ದ ಲಾಕ್‌ಡೌನ್ ಬಳುವಳಿಯಾಗಿಯೂ ಬಂದಿತ್ತು. ದೇವಸ್ಥಾನಗಳಲ್ಲಿ ಪೂಜೆ-ಪರಸ್ಕಾರಗಳಿಲ್ಲದೆ, ಜನರ ಜೊತೆ ನೇರ ಸಂಪರ್ಕವಿಲ್ಲದೆ, ಸಾಮಾಜಿಕ ಬದುಕೇ ಮರೆತು ಹೋದಂತಿದ್ದು ನಾಲ್ಕು ಗೋಡೆಗಳೊಳಗೆ ಸೀಮಿತವಾಗಿರಿಸಬೇಕಾಗಿದ್ದ ಕಸಿವಿಸಿಯ ಜೀವನಕ್ರಮವನ್ನು ಬೇಸರಿಸಿ ಅನುಸರಿಸುವ ವೇಳೆ, ಏಕಾಂತವನ್ನೂ ಸಂಭ್ರಮಿಸುವಂತೆ ಮಾಡಿದ್ದು ಈ ಬರಹ ಮತ್ತು ತಿದ್ದುಪಡಿಯ ಕೆಲಸ. 

ಹೀಗೆ ಕಲಿಕೆಗೆ, ಉತ್ಸುಕತೆಗೆ ವಯಸ್ಸಿನ ಮಿತಿಯಿಲ್ಲ ಎಂದು ತೋರಿಸಿಕೊಟ್ಟಿತ್ತು ನನ್ನನ್ನು ಬಲವಂತವಾಗಿ ಒಪ್ಪುವಂತೆ ಮಾಡಿದ್ದ ಈ ಬರವಣಿಗೆಯ ಜವಾಬ್ದಾರಿ. ಇದರಿಂದ, ನಾ ಕೊಟ್ಟಿದ್ದಕ್ಕಿಂತ ಕಲಿತದ್ದೇ ಹೆಚ್ಚು ಎನ್ನುವುದು ನನ್ನ ಅರಿವು. ಅಸಹಾಯಕತೆಯ ಕಾರಣಗಳನ್ನು ನೀಡಿ ಮಾತಿನಿಂದ ಜಾರಿಕೊಳ್ಳಲೆತ್ನಿಸಿದ್ದ ನನಗೆ ನನ್ನಿಂದ ನಂಬಲಾರದಷ್ಟು ಶಕ್ತಿಯನ್ನು ಹೊರತೆಗೆಯುವಂತಾದದ್ದು, ಕ್ರಿಸ್ತದನಿಗೆ ಸಂತರ ಬದುಕನ್ನು ಅಕ್ಷರದಲ್ಲಿ ಜೋಡಿಸುವ ಕಾರ್ಯಗಳಿಂದ. 

ಕ್ರಿಸ್ತದನಿಯ ಆಪ್‌ನ ಅನಾವರಣ  ಕಂಡಾಗ, ಒತ್ತಾಯದಿಂದೊಪ್ಪಿದ್ದರೂ ಈ ಕೆಲಸಕ್ಕೆ ಒತ್ತಾಸೆಯಾಗುವ ಭಾಗ್ಯ ನನ್ನದಾಯಿತಲ್ಲ ಎಂದು ಹೆಮ್ಮೆಪಟ್ಟೆ. ದನಿ ಮಾಧ್ಯಮ ಮನೆಯವರು ಕನ್ನಡ ಕಥೋಲಿಕ ಧರ್ಮಸಭೆಯ ಭಕ್ತಾದಿಗಳ ಆಧ್ಯಾತ್ಮಿಕ ಕಾರ್ಯಗಳಿಗೆ ಪೂರಕವಾಗಲು ಬೇಕಾದ ಪ್ರಾರ್ಥನಾ ಸಾಹಿತ್ಯಗಳನ್ನು ಸಂಗ್ರಹಿಸಿ ಕ್ರೋಢೀಕರಿಸಿರುವ ಸೇವೆ, ನಿಜಕ್ಕೂ ಶ್ಲಾಘನೀಯ ಮತ್ತು ದೊಡ್ಡ ಕಾರ್ಯವೂ ಹೌದು. ಆಧ್ಯಾತ್ಮಿಕತೆಗೆ ಬೇಕಾದಂತಹ ಸಾiಗ್ರಿಗಳನ್ನು ಪುಸ್ತಕಗಳಿಗೆ ತಡಕಾಡಬೇಕಾದ ಅನಿವಾರ್ಯವಿಲ್ಲದೆ, ತುದಿಬೆರಳುಗಳಿಗೆ ಎಟುಕುವಂತೆ ಮಾಡುವುದೆಂದರೆ ಸಾಮಾನ್ಯ ಕಾರ್ಯವಲ್ಲ, ಇದಕ್ಕೆ ಸಮಯ, ಶ್ರಮ, ಹಣ, ಸಹಕಾರದ ಬೆಂಬಲ ಬೇಕಾಗುತ್ತದೆ. ಇಂತಹ ದುಬಾರಿ ಕನಸಿಗೆ ಕೈ ಹಾಕಿ ಸಾಕಾರಗೊಳಿಸಿರುವುದು ಕನ್ನಡ ಕಥೋಲಿಕ ಧರ್ಮಸಭೆಯಲ್ಲೇ ಒಂದು ಹೊಚ್ಚಹೊಸ ಮತ್ತು ಚೊಚ್ಚಲ ಪ್ರಯತ್ನ. ಇದು ಮುದ್ರಣ ಸಾಹಿತ್ಯಕ್ಕೆ ಬದಲಿ ಅಲ್ಲ, ಆದರೆ ಪ್ರಾರ್ಥನೆಗಳಿಗೆ ಸಂಬಂಧಿಸಿದಂತೆ ಎಲ್ಲಿ ಹೋದರೂ, ಎಲ್ಲಿಯಾದರೂ, ಎಲ್ಲವನ್ನೂ ಒಂದೇ ಸೂರಿನಡಿ ಪಡೆಯಬಹುದಾದ ಆಧ್ಯಾತ್ಮಿಕ ಭಾವಗಳ ಗುಚ್ಛ. 

ಕ್ರಿಸ್ತದನಿ ಎಂಬ ಬೈಬಲ್ ಆಪ್ ಮೂಲಕ ದೈನಂದಿನ ಪ್ರಾರ್ಥನೆ, ಪೂಜಾರಾಧನೆ ವಿಧಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ನೆರವಾಗಲೆಂದು ದನಿಮಾಧ್ಯಮ ಮನೆಯವರು ಕೈಗೊಂಡ ಈ ಹೊಸ ಪ್ರಯತ್ನದ ಅಮೋಘ ಸೇವೆಯಲ್ಲಿ  ನನ್ನ ಅಳಿಲು ಸೇವೆಗೆ ದೊರೆತ ಅವಕಾಶಕ್ಕೆ ನಾ ಆಭಾರಿ. ಇದಕ್ಕಾಗಿ ನನ್ನನ್ನು ಉತ್ತೇಜಿಸಿ ಪ್ರೋತ್ಸಾಹಿಸಿದ ಆ ಜಂಗಮವಾಣಿಯ ಕರೆಯ ದನಿ ಮತ್ತಾರೂ ಅಲ್ಲ ಫಾದರ್. ವಿನೋದ್, ಜೀವದನಿ ಮತ್ತು ಕ್ರಿಸ್ತದನಿಯ ವ್ಯವಸ್ಥಾಪಕರು. ಇವರಿಗೆ ನನ್ನ ವಿಶೇಷ ಧನ್ಯವಾದಗಳು. ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ಮೂಲಕ ಜನರಿಗೆ ಕ್ರಿಸ್ತನನ್ನು ಮತ್ತುಷ್ಟೂ ಪರಿಚಯಿಸುವ ಇವರ ಕೈಂಕರ್ಯಕ್ಕೆ ಮಗದಷ್ಟು ಕೈಗಳು ಜತೆಗೂಡಲಿ, ಆಧ್ಯಾತ್ಮಿಕ ಅನುಭವ ಜನರಲ್ಲಿ ಇನ್ನಷ್ಟೂ ವಿಸ್ತರಿಸಲಿ ಎಂದು ಪ್ರಾರ್ಥಿಸುತ್ತಾ ಎಲ್ಲಾ ಕ್ರೈಸ್ತ ಬಾಂಧವರು ಕ್ರಿಸ್ತದನಿ ಆಪ್‌ನ ಸದುಪಯೋಗ ಪಡೆಯಲಿ ಎಂದು ಹಾರೈಸುತ್ತೇನೆ. 

**********



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...