Tuesday, 10 November 2020

ಶಿಕ್ಷಣ - ಶಿವಮೂರ್ತಿ

 ಪ್ರಾಚೀನ ಕಾಲದ ಇತಿಹಾಸದಿಂದಲೂ ಇಂದಿನ ಸಮಕಾಲೀನ ಇತಿಹಾಸದವರೆಗೂ ಶಿಕ್ಷಣ ಅನ್ನೋದು ಒಂದು ಅತ್ಯಂತ ವಿಶಿಷ್ಟವಾದ ಸಂಗತಿ. ಅಂದಿನಿಂದ ಇಂದಿನವರೆಗೂ ಶಿಕ್ಷಣ ಸಾಕಷ್ಟು ಜನರಿಗೆ ಬದುಕನ್ನ ರೂಪಿಸಿಕೊಟ್ಟಿದೆ. ಅನಾಗರಿಕರನ್ನು ನಾಗರಿಕರನ್ನಾಗಿ ಮಾಡುವ ವಿಶೇಷ ಶಕ್ತಿ ಶಿಕ್ಷಣಕ್ಕಿದೆ ಅನ್ನೋದು ಹೆಮ್ಮೆಯ ವಿಚಾರವೇ ಸರಿ. ಅಂದಿನ ಸಮಾಜದಲ್ಲಿ ಗುರುಕುಲ ಪದ್ಧತಿ ಇತ್ತು. ಜರು ಗುರುವಿನ ಗುಲಾಮರಾಗಿ ಶಿಕ್ಷಣವನ್ನ ದಕ್ಕಿಸಿಕೊಳ್ಳುತ್ತಿದ್ದರು. ಆದರೆ ಇಂದಿನ ಆಧುನಿಕ ಯುಗದಲ್ಲಿ ಅದು ಮಾತಿಗೆ ನಿಲುಕದ್ದಾಗಿದೆ. ಆದರೂ ಇಂದಿಗೂ "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂದೂ ಸಾರಿಕೊಂಡು ಬರುತ್ತಿದ್ದೇವೆ. ಅದು ಈಗಲೂ ಸತ್ಯವೇ ಆಗಿದೆ. ಅಂದು ಶಿಕ್ಷಣ ಪಡೆಯಬೇಕಾದರೆ ಇಂತಹದ್ದೇ ವಿಷಯವನ್ನು ಆಯ್ದು ಕೊಳ್ಳಬೇಕೆಂಬ ಯಾವುದೇ ಕಟ್ಟುಪಾಡುಗಳಿರಲಿಲ್ಲ. ಅದು ಅವರವರ  ಆಸಕ್ತಿಗೆ ಬಿಟ್ಟದ್ದಾಗಿತ್ತು. ಆದರೆ ಪ್ರಸ್ತುತ ನಮ್ಮ ದೇಶದಲ್ಲಿ ಪದವಿಗೂ ಮುನ್ನ ಆಯ್ದ ವಿಷಯಗಳನ್ನೇ  ಮುಂದೆ ಉನ್ನತ ವ್ಯಾಸಂಗದಲ್ಲಿ ಆಯ್ದು ಕೊಳ್ಳಬೇಕು ಎನ್ನುವಂತಹ ನಿಯಮಗಳು ನಮ್ಮ ಶಿಕ್ಷಣ ಪದ್ಧತಿಯಲ್ಲಿದೆ. 

ಯಾವುದೇ ದೇಶವಾಗಲಿ, ಪ್ರದೇಶವಾಗಲಿ ಅಲ್ಲಿನ ಭೌಗೋಳಿಕ ವಿಚಾರಗಳು ಬದಲಾದಂತೆ ಅಲ್ಲಿನ ಸಾಮಾಜಿಕ ಸ್ಥಿತಿ ಆರ್ಥಿಕ ಸ್ಥಿತಿ ಅಂತೆಯೇ ಶೈಕ್ಷಣಿಕ ಸ್ಥಿತಿಯೂ ಕೂಡ ಬದಲಾಗುವುದರಲ್ಲಿ ಯಾರ ಅನುಮತಿಯ ಅವಶ್ಯಕತೆ ಇರುವುದಿಲ್ಲ ಅದು ತನ್ನಿಂತಾನೇ ಬೆಳೆದು ಹಬ್ಬಿ ಬಿಟ್ಟಿರುತ್ತೆ. ನಮ್ಮ ದೇಶ ಇವತ್ತು  ಜನಸಂಖ್ಯೆಯಲ್ಲಿ ಜಾಗತಿಕವಾಗಿ ೨ನೇ ಸ್ಥಾನವನ್ನ ಗಳಿಸಿಕೊಂಡಿದೆ. ನಾವು ಜನಸಂಖ್ಯೆಯು ಒಂದು ಸಂಪನ್ಮೂಲ ಎಂದು ಹೇಳಿಕೊಳ್ಳುತ್ತೇವೆ, ಅದು ನಿಜವೂ ಹೌದು. ನಮ್ಮ ದೇಶದಲ್ಲಿ ಎಲ್ಲಾ ಜಾತಿಯ ಜನರಿಗೂ ಎಲ್ಲಾ ಧರ್ಮದ ಜನರಿಗೂ ಅವರ ಬದುಕನ್ನು ಸುಸಜ್ಜಿತವಾಗಿ ರೂಪಿಸಿಕೊಳ್ಳಲು ಭಾರತದ ಸಂವಿಧಾನ ಅವಕಾಶ            ಕಲ್ಪಿಸಿಕೊಟ್ಟಿದೆ. ಅದೇ ರೀತಿ ಸರ್ವರಿಗೂ ಶಿಕ್ಷಣವನ್ನು ಪಡೆಯಲು ಸಂವಿಧಾನ ಹಕ್ಕು, ಅವಕಾಶ ನೀಡಿದೆ. ಇಷ್ಟಾದರೂ ನಮ್ಮಲ್ಲಿ ವಿಪರೀತ ಬಡತನ ವಿಪರೀತ ನಿರುದ್ಯೋಗದ ಸಮಸ್ಯೆ ಮಾತ್ರ ಅರಗಿಸಿಕೊಳ್ಳಲಾರದ ಸಂಗತಿಯಾಗಿದೆ.

ಬಡತನ ನಿರುದ್ಯೋಗದಂತಹ ರಾಷ್ಟ್ರಮಟ್ಟದ ಸಮಸ್ಯೆಗಳು ರಾಜಕೀಯವೆಂಬ ಭ್ರಷ್ಟಾಚಾರದಲ್ಲಿ ನುಲುಗಿ ಹೋಗಿವೆ. ಯಾವುದೇ ಒಂದು ದೇಶ ಅದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಯಾಗಲು ಮುಖ್ಯ ಮತ್ತು ಮೂಲಭೂತ ಕಾರಣವೆಂದರೆ ಅಲ್ಲಿನ ಗುಣಮಟ್ಟ ಶಿಕ್ಷಣದ ವ್ಯವಸ್ಥೆ. ನಮ್ಮಲ್ಲಿ ಸಾಕಷ್ಟು ಶಾಲಾ ಕಾಲೇಜುಗಳಿವೇ ಆದರೆ ಅಲ್ಲಿ ನುರಿತ ಮತ್ತು ಅನುಭವಿ ಶಿಕ್ಷಕರ ಕೊರತೆ ಹೆಚ್ಚಾಗಿದೆ. ಪ್ರಸ್ತುತ ಶಿಕ್ಷಣವು ಕೇವಲ ಅಂಕಗಳಿಗಷ್ಟೇ ಸೀಮಿತವಾಗಿದೆ. ಜ್ಞಾನದ ಹಸಿವನ್ನು ಬೆಳೆಸಬೇಕಾದ ಶಿಕ್ಷಣ ಸಂಸ್ಥೆಗಳು ಇಂದು ಕೇವಲ ಅಂಕಗಳ ಪೈಪೋಟಿಗಾಗಿ ಸೆಣಸಾಡುತ್ತಿವೆ. ಇಂತಿಷ್ಟು ಅಂಕಗಳನ್ನ ಪಡೆಯಲೇಬೇಕೆಂಬ ಭಯದ ನೆರಳಲ್ಲಿ ಬೆಳೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಪುಸ್ತಕದಲ್ಲಿರುವ ವಿಷಯಗಳು ಕೇವಲ ಕಂಠಪಾಠವಾಗಿವೆ ವಿನಃ ಅವರ ಬದುಕಿಗೆ ಆಸರೆಯಾಗುವಲ್ಲಿ ವಿಫಲವಾಗಿವೆ. ಶಿಕ್ಷಣ(ಜ್ಞಾನ) ಎಂಬುವುದು ಮನುಷ್ಯನಿಗೆ ಜೊತೆಯಾಗಬೇಕು, ಆತಂಕಕ್ಕೆ ಆಸರೆಯಾಗಬೇಕು, ಮಾನಸಿಕ ಭಯವನ್ನೂ ಹೋಗಲಾಡಿಸಬೇಕು ಅಂದಾಗ ಶಿಕ್ಷಣಕ್ಕೊಂದು ಅರ್ಥ ಸಿಕ್ಕಂತಾಗುತ್ತದೆ. ಈಗಿನ ಶಿಕ್ಷಣ ಮಾತ್ರ ಕೇವಲ ಅಂಕ ಮತ್ತು ಉದ್ಯೋಗ ಪಡೆಯಲಿಕ್ಕೆ ಮಾತ್ರ ಸೀಮಿತವಾಗಿರುವುದು ಖಂಡನೀಯ. 

ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಏಳು ಬೀಳು ಇದ್ದೆ ಇರುತ್ತವೆ. ಅಂತಹ ಪರಿಸ್ಥಿತಿಯಲ್ಲೂ ಆತ ಎದೆಗುಂದದೆ  ತನ್ನ ಜೀವನವ ಪ್ರಾಯೋಗಿಕವಾಗಿ ಕಟ್ಟಿಕೊಳ್ಳಲು ಶಿಕ್ಷಣ ವ್ಯವಸ್ಥೆ ಮತ್ತು ಸರ್ಕಾರದ ಯೋಜನೆಗಳು ಹೊಸ ರೂಪು-ರೇಷೆಗಳನ್ನ ಜಾರಿಗೆ ತರಬೇಕಾಗಿದೆ.


ಫಿನ್ ಲ್ಯಾಂಡ್, ಜಪಾನ್, ಉತ್ತರ ಕೋರಿಯಾ, ಇಸ್ರೇಲ್, ಚೀನಾ, ಅಮೇರಿಕಾದಂತಹ ಹತ್ತು ಹಲವು ರಾಷ್ಟ್ರಗಳು ಜಗತ್ತಿನಲ್ಲಿಯೇ ಯಾವ ದೇಶಗಳು ಬಿಡುಗಡೆಗೊಳಿಸದಷ್ಟು ಹಣವನ್ನ ಶಿಕ್ಷಣಕ್ಕಾಗಿ ಮತ್ತು ಅದರ ಲಾಲನೆ ಪಾಲನೆಗಾಗಿ ದೊಡ್ಡ ಮೊತ್ತದ ಅನುದಾನವನ್ನ ಬಿಡುಗಡೆ ಗೊಳಿಸುತ್ತಾ ಅದರ ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ. ಈ ದೇಶಗಳೆಲ್ಲ ಸರಿಸುಮಾರು ತಮ್ಮ ದೇಶದ ಒಟ್ಟು GDP ಯಲ್ಲಿ ಶೇಕಡ ೫% ಕ್ಕಿಂತ ಹೆಚ್ಚಿನ ಅನುದಾನವನ್ನು ಶಿಕ್ಷಣಕ್ಕಾಗಿ ಪ್ರತ್ಯೇಕವಾಗಿ ಮೀಸಲಿಡುತ್ತಿದ್ದಾರೆ. ಆದರೆ ನಮ್ಮ ದೇಶವು  ಇಲ್ಲಿಯವರೆಗೂ ಶಿಕ್ಷಣಕ್ಕಾಗಿ ಖರ್ಚುಮಾಡಿದ ಅನುದಾನ ಕೇವಲ GDP  ಶೇಕಡ ೩% ಕ್ಕಿಂತ ಕಡಿಮೆ ಹಣವನ್ನ ಎನ್ನುವುದು ಮಾತ್ರ ಸಹಿಸಲಾರದ ವಿಚಾರ. ೧೯೬೮ ಮತ್ತು ೧೯೮೬ರ ಕಾಲದಲ್ಲಿ ಈಗಾಗಲೇ ಶಿಕ್ಷಣದ ಬದಲಾವಣೆಗಳು ನಮ್ಮಲ್ಲಿ ನಡೆದಿವೆ. ಆದರೆ ಈಗಲೂ ಕೂಡ ಅವುಗಳ ಬದಲಾವಣೆಯೂ ನಮಗೆ ಯಾವ ರೀತಿಯಲ್ಲೂ  ಸಹಕಾರಿಯಾಗಿಲ್ಲ. ಇನ್ನೇನೂ ಭಾರತವು ಶಿಕ್ಷಣದ ಹಿತಕ್ಕಾಗಿ ೨೦೩೦ನ್ನು ಗುರಿಯನ್ನಿಟ್ಟುಕೊಂಡು 2020 New Education policyಎಂದು ಹೊಸ ಯೋಜನೆಯನ್ನು ಹಾಕಿಕೊಂಡಿದೆ. ಕೌಶಲ್ಯ ಮತ್ತು ವೃತ್ತಿ ಶಿಕ್ಷಣಕ್ಕಾಗಿ ವಿಭಿನ್ನವಾದ ವಿಚಾರಗಳನ್ನು ಕೈಗೆತ್ತಿಕೊಂಡಿರುವುದು ಖುಷಿಯ ವಿಚಾರವೇ ಸರಿ. ಆದರೆ ಅದಕ್ಕಿಂತ ಮೊದಲು ನಾವು ಗ್ರಾಮೀಣ ಮಟ್ಟದ ಶಿಕ್ಷಣದ ಕುರಿತು ಒಂದಷ್ಟು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ.

ನಮ್ಮದು ಹೆಚ್ಚಾಗಿ ಗ್ರಾಮಗಳಿಂದ ಕೂಡಿದ ದೇಶ. ನಮ್ಮ ಗ್ರಾಮಗಳ ಅಭಿವೃದ್ಧಿಯಾದಾಗಲೇ ದೇಶದ ಅಭಿವೃದ್ಧಿಯಾಗುತ್ತದೆ ಎಂದರ್ಥ. ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳ ಪೌಷ್ಟಿಕತೆ ಮತ್ತು ಆಹಾರಕ್ಕೆ ಸಂಬಂಧಪಟ್ಟಂತೆ  ಶಿಸ್ತಿನ ಯೋಜನೆಗಳನ್ನು ರೂಪಿಸತಕ್ಕದ್ದು. ಇನ್ನು ಅಲ್ಲಿ ಈಗಲೂ ನಡೆಯುತ್ತಿರುವ ಮಕ್ಕಳ ಮೇಲಿನ ಶೋಷಣೆ ದೌರ್ಜನ್ಯಗಳನ್ನು ತಡೆದು, ಬಡತನ    ಹೆಸರಿನಲ್ಲಿಯೇ ಅಲ್ಲಿನ ತಂದೆ ತಾಯಿಗಳು ಇಂದು ಏನೂ ಅರಿಯದ ಮುಗ್ಧ ಕಂದಮ್ಮಗಳನ್ನು ಕೆಲಸಕ್ಕೆ  ದೂಡುತ್ತಿದ್ದಾರೆ. ಅವರನ್ನು ಬಾಲ್ಯದಲ್ಲಿಯೇ ಶಿಕ್ಷಣ ವಂಚಿತರನ್ನಾಗಿ ಮಾಡುವಲ್ಲೂ ಪೋಷಕರು ಪ್ರೇರಣೆ ನೀಡಿದಂತಾಗಿದೆ. ಇದಕ್ಕೆ ತಕ್ಕಂತೆ ಸರಿಯಾದ ಕಾನೂನು ಕ್ರಮಗಳನ್ನು ಜಾರಿ ತಂದು ಬಾಲ್ಯ ಶಿಕ್ಷಣದಿಂದ ಪದವಿ ಶಿಕ್ಷಣದವರೆಗೂ ಶಿಕ್ಷಣವ ಪಡೆಯುವುದನ್ನು ಕಡ್ಡಾಯಗೊಳಿಸಬೇಕಾಗಿದೆ.

----------------

ಶಿವಮೂರ್ತಿ, 

ರಾಯಚೂರು

----------------



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...