ಕೊರೊನಾ ವೈರಾಣು ತರುವ ಕಾಯಿಲೆ ಕೋವಿಡ್ ೧೯ ಜ್ವರವು ಸಾಂಕ್ರಾಮಿಕವಾಗಿ ಹರಡುತ್ತಿದ್ದು ನಮ್ಮ ಜೀವನದ ಕ್ರಮವನ್ನೇ ಬದಲಿಸಿದೆ. ಅದರ ಹಿನ್ನೆಲೆಯಲ್ಲಿ ನಮ್ಮ ಸುತ್ತಲಿನ ಜಗತ್ತು ಸಕಲ ಆಯಾಮಗಳಲ್ಲೂ ಕುಸಿಯತೊಡಗಿದೆ.
ಸರ್ಕಾರಗಳ ಚುಕ್ಕಾಣಿ ಹಿಡಿದವರಿಗೆ ನಿರಂಕುಷ ಅಧಿಕಾರ ನಡೆಸುತ್ತಾ ಅಧಿಕಾರದ ಗದ್ದುಗೆಗಳ ಮೇಲೆ ನಿರಂತರವಾಗಿ ಕೂರುವ ಕೆಟ್ಟ ಕನಸು ಕಾಡತೊಡಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಬೇಕಾಗಿದ್ದ ನ್ಯಾಯಾಲಯಗಳು ಅಂಥ ಮೌಲ್ಯಗಳನ್ನು ಪ್ರತಿಪಾದಿಸುವವರ ಬಾಯಿ ಮುಚ್ಚಿಸಲು ಮುಂದಾಗುತ್ತಿವೆ. ನಮ್ಮ ನಾಡಿನ ಆರ್ಥಿಕ ಸ್ಥಿತಿ ಮತ್ತಷ್ಟು ಅಧೋಗತಿಯತ್ತ ಸಾಗತೊಡಗಿದೆ. ಸಾಮಾಜಿಕ ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ.
ಆತ್ಮಹತ್ಯೆಗೆ ಕಾರಣ ಮತ್ತು ತಡೆಗಟ್ಟುವ ವಿಧಾನಗಳ ಅರಿವು ಮೂಡಿಸುವ ಉದ್ದೇಶದಿಂದ, ಸೆಪ್ಟೆಂಬರ ೧೦ರಂದು ಜಗತ್ತಿನಾದ್ಯಂತ `ವಿಶ್ವ ಆತ್ಮಹತ್ಯೆ ವಿರೋಧಿ ದಿನ ಆಚರಿಸಲಾಗುತ್ತಿದೆ. ಆತ್ಮಹತ್ಯೆ ಆರೋಗ್ಯಕ್ಕೆ ಸಂಬಂಧಿಸಿದ್ದು, ಅದಕ್ಕೆ ಶಿಕ್ಷೆಯಲ್ಲ, ಚಿಕಿತ್ಸೆ ಎಂಬುದನ್ನು ಕಂಡುಕೊಂಡ ಭಾರತದ ಪ್ರಜ್ಞಾವಂತ ಸಮಾಜದ ಒತ್ತಾಸೆಗೆ ಅನುಗುಣವಾಗಿ, ನಮ್ಮ ಸರ್ಕಾರ ೨೦೧೭ರಲ್ಲಿ ಈ ಸಂಬಂಧದ ಕಾನೂನಿಗೆ ಹಲವು ತಿದ್ದುಪಡಿಗಳನ್ನು ತಂದಿದೆ. ಆತ್ಮಹತ್ಯೆಯಿಂದ ಸತ್ತವರಿಗೆ ಅಂತ್ಯಕ್ರಿಯೆಯನ್ನು ನಿರ್ಬಂಧಿಸುತ್ತಿದ್ದ ಕಥೋಲಿಕ ಧರ್ಮಸಭೆ ೧೯೮೩ರಲ್ಲೇ ಆ ನಿಷೇಧವನ್ನು ರದ್ದು ಪಡಿಸಿದ್ದನ್ನು ಕಂಡಿದ್ದೇವೆ.
ಆದರೆ, ನೂರು ಇಲ್ಲವೇ ಸಾವಿರದಳಗೊಂದು ಎನ್ನಬಹುದಾದ ಏಕಃಶ್ಚಿತ ಅತ್ಮಹತ್ಯೆಯಂಥ ಪ್ರಕರಣವೊಂದು ಭಯಂಕರ ಚರ್ಚಾವಸ್ತುವಾಗಿದ್ದುದು ನಮ್ಮ ಸಮಾಜ ಸಾಗುತ್ತಿರುವ ದಿಕ್ಕಿನ ದಿಕ್ಸೂಚಿಯಂತಿದೆ. ಪ್ರಕರಣ ರಾಜ್ಯ ರಾಜ್ಯಗಳ ನಡುವಿನ ಪೊಲೀಸ ಘರ್ಷಣೆಯ ರೂಪತಾಳಿದ್ದುದು ನಮ್ಮ ಸಾಮಾಜಿಕ, ಆಡಳಿತ ವ್ಯವಸ್ಥೆಯ ಕುಸಿತದ ಲಕ್ಷಣವಾಗಿ ಕಾಣತೊಡಗಿರುವುದು ನಮ್ಮ ಕಾಲದ ದುರಂತ.
ಹಿಂದಿ ಚಿತ್ರರಂಗದ ಉದಯೋನ್ಮುಖ ನಟ ಸುಶಾಂತ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆಯುತ್ತ ಸದ್ಯದ ಬಿಹಾರ ಚುನಾವಣೆಯೊಂದಿಗೆ ತಳುಕುಹಾಕಿಕೊಂಡಿತ್ತು. ಮೃತನೊಂದಿಗೆ ಪ್ರೀತಿಯ ಒಡನಾಟ ಹೊಂದಿದ್ದ ಮಗದೊಬ್ಬ ನಟಿಯನ್ನು, ನಮ್ಮ ನಿಮ್ಮಂತೆ ಒಬ್ಬ ಮನುಷ್ಯಳಲ್ಲ ಮಾಟಗಾತಿಯಂತೆ ಕಾಣಲಾಗುತ್ತಿದೆ! ಅದು ಆತ್ಮಹತ್ಯೆಯಲ್ಲ ಕೊಲೆ ಎಂದು ದೂರುವ ಕೆಲವರು, ತನಿಖಾ ಸಂಸ್ಥೆಗಳು ತನಿಖೆಯಿಂದ ಸತ್ಯವನ್ನು ಕಂಡುಕೊಳ್ಳುವ ಮೊದಲೇ, ಅವಳಿಗೆ ಕೊಲೆಗಾತಿ ಎಂಬ ಪಟ್ಟಕಟ್ಟಲು ಹಿಂದೇಟು ಹಾಕಲಿಲ್ಲ.
ಪುರುಷ ಸಮಾಜ ತನ್ನೆಲ್ಲ ಅವಲಕ್ಷಣಗಳನ್ನು ಎಗ್ಗಿಲ್ಲದೇ ಪ್ರದರ್ಶನ ಮಾಡುವುದಕ್ಕೆ ಮುಂದಾಗುತ್ತಿದೆ. ನಟನ ತಂದೆ ಮಗನನ್ನು ಕಳೆದುಕೊಂಡ ಕಿಚ್ಚಿಗೆ ಹೊಡೆದಾಡುತ್ತಿದ್ದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎರಡೂ ದುಃಖತಪ್ತ ಕುಟುಂಬಗಳಿಗೆ ಸಾಂತ್ವನ ಹೇಳಬೇಕಾಗಿತ್ತು, ಆದರೆ ಅವು ಸುಟ್ಟ ಮನೆಯಲ್ಲಿ ಗಳ ಎಳೆಯುವವರಂತೆ, ಬಿಹಾರ ಚುನಾವಣೆಯ ಮೇಲೆ ಕಣ್ಣಿಟ್ಟು ಪ್ರಕರಣವನ್ನು ತಮಗೇ ಬೇಕಾದಂತೆ ಬಳಸಿಕೊಳ್ಳಲು ಮುಂದಾಗಿದ್ದು ನಮ್ಮ ಕಣ್ಣೆದುರಿಗೆ ಇದೆ.
ಅವುಗಳ ನಡೆ, ಸಂವಿಧಾನಕ್ಕೆ ಅವಮಾನಕರವಾದ ಸಂಗತಿ ಎಂಬುದು ಅವುಗಳಿಗೆ ಅರ್ಥವಾಗುತ್ತಿಲ್ಲ. ಇದರೊಂದಿಗೆ ಪುರುಷ ಪ್ರೇಮಿ ಜಾಲತಾಣಿಗರು, ಸಾಮಾಜಿಕ ಜಾಲತಾಣಗಳಲ್ಲಿ ಆ ಯುವತಿಯ ತೇಜೊವಧೆಗೆ ಮುಂದಾಗಿದ್ದಾರೆ. ದೂರದರ್ಶನದ ಮಾಧ್ಯಮಗಳು ತಮ್ಮ ಮೂಗಿನ ನೇರಕ್ಕೆ ಪ್ರಕರಣದ ನ್ಯಾಯ ವಿಚಾರಣೆ ನಡೆಸಿದ್ದವು, ನಡೆಸುತ್ತಿವೆ.
ಸುಶಾಂತ ಸಿಂಗ್ ರಾಜಪುತ್ ಸಾವಿನ ಪ್ರಕರಣ ವರದಿಯಾಗುತ್ತಿದ್ದಂತೆಯೇ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಮಹಾರಾಷ್ಟ್ರ ಸರ್ಕಾರ, ಮುಂಬೈ ಪೋಲಿಸರ ವಿರುದ್ಧ ಅವಹೇಳನಕಾರಿ ಲೇಖನಗಳು, ಅಪಪ್ರಚಾರದ ಚರ್ಚೆಗಳು ಆರಂಭವಾಗಿದ್ದವು, ಮೊದಮೊದಲು ಸಾವಿರಗಟ್ಟಲೇ ಇದ್ದ ಈ ಜಾಲತಾಣ ಖಾತೆಗಳ ಸಂಖ್ಯೆ ಈಗ ಲಕ್ಷಲಕ್ಷಗಳ ಗಡಿ ದಾಟಿವೆ ಎಂದು ಮುಂಬೈ ಪೋಲಿಸರು ತಿಳಿಸಿದ್ದಾರೆ.
ಈ ಖಾತೆಗಳು ಅನಾಮಿಕವಾಗಿದ್ದು, ಅದಕ್ಕೆ ಪೂರಕವಾಗಿ ಬಳಸಲಾಗುವ ಹೆಸರಾಂತ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆಗಳನ್ನು ತೆರೆದು ಮಸಿಬಳಿಯುವ ಕೆಲಸ ಮಾಡಲಾಗುತ್ತಿದೆ. ಅವಹೇಳನಕಾರಿ ಹೇಳಿಕೆಗಳನ್ನು ಅಧಿಕ ಸಂಖ್ಯೆಗಳಲ್ಲಿ ಪುನಃ ಪುನಃ ರವಾನಿಸಲಾಗಿದ್ದು ಸಂಶಯಾಸ್ಪದವಾಗಿ ಕಾಣುತ್ತಿದೆ. ಅವುಗಳ ಸತ್ಯಾಸತ್ಯತೆಯ ಬಗೆಗೆ ಸೈಬರ್ ತನಿಖೆ ಆರಂಭವಾಗುತ್ತಿದ್ದಂತೆ ಹಲವಾರು ಖಾತೆಗಳು ಮಾಯವಾಗುತ್ತಿವೆ ಇಲ್ಲವೇ ನಿಷ್ಕ್ರಿಯಗೊಳ್ಳುತ್ತಿವೆ. ಬಹುತೇಕ ಖಾತೆಗಳು ಚೈನಾ, ಪನಾಮಾ, ನೇಪಾಳ ಮೊದಲಾದ ದೇಶಗಳಲ್ಲಿ ಕುಳಿತವರಿಂದ ಕಾರ್ಯಾಚರಣೆಗೊಳ್ಳುತ್ತಿವೆ ಎನ್ನಲಾಗುತ್ತದೆ.
ಕೆಲವರಂತೂ ತಮ್ಮ ಜಾಲತಾಣಗಳ ಖಾತೆಗಳಲ್ಲಿ ಅವಳಿಗೆ ಅತ್ಯಾಚಾರದ ಬೆದರಿಕೆಯನ್ನೂ ಒಡ್ಡಿದ್ದಾರೆ! ಅವರು ರಿಹಾ ಚಕ್ರವರ್ತಿಗೆ ಬಂಗಾಳದ ಮಾಟಗಾತಿ ಎಂಬ ಪಟ್ಟವನ್ನು ಕಟ್ಟಿಬಿಟ್ಟಿದ್ದಾರೆ. ಆತ್ಮಹತ್ಯೆ ಪ್ರಕರಣ ಮಹಾರಾಷ್ಟ್ರದ ಮುಂಬೈ ನಗರದಲ್ಲಿ ನಡೆದಿದ್ದರೆ, ಬಿಹಾರ ರಾಜ್ಯದ ಮೂಲದ ಸುಶಾಂತನ ತಂದೆ ಅಲ್ಲಿನ ಪಟ್ನಾದಲ್ಲಿ ರಿಹಾ ಚಕ್ರವರ್ತಿಯ ವಿರುದ್ಧ ಅಲ್ಲಿನ ಪೋಲಿಸರಲ್ಲಿ ದೂರು ದಾಖಲಿಸಿದ್ದಾರೆ. ರಿಹಾ ಚಕ್ರವರ್ತಿ, ಸುಶಾಂತನಿಂದ ೧೫ ಕೋಟಿ ಪಡೆದು ವಂಚಿಸಿದ್ದಾಳೆ. ಅದರಿಂದಲೇ ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಅವರ ಆರೋಪ.
ರಿಹಾ ಚಕ್ರವರ್ತಿ ಮತ್ತು ಸುಶಾಂತ ಸಿಂಗ್ ರಜಪೂತ್ ಪ್ರಣಯದ ಪಕ್ಷಿಗಳು. ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಈ ಪ್ರೇಮಿಗಳ ಜೋಡಿಗೆ ಏನಾಯಿತೋ ಗೊತ್ತಿಲ್ಲ. ಪ್ರಿಯತಮ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಿಯತಮೆ ಉಳಿದುಕೊಂಡಿದ್ದಾಳೆ. ಪ್ರಿಯತಮೆಗೆ ಮಾನಸಿಕ ಬೆಂಬಲ ಅಗತ್ಯ. ವಿಚಾರಣೆ ನ್ಯಾಯಾಲಯದಲ್ಲಿ ಇದ್ದೇ ಇರುತ್ತದೆ. ತನಿಖೆಗೆ ಪೊಲೀಸರಿದ್ದಾರೆ. ಆದರೆ ಯಾರಿಗೂ ತಾಳ್ಮೆ ಎಂಬುದಿಲ್ಲ. ರಾಜ್ಯ ರಾಜ್ಯಗಳ ನಡುವಿನ ಪೊಲೀಸರ ತನಿಖೆಯ ಬಗೆಗೆ ಅನುಮಾನದ ಹುತ್ತಗಳನ್ನು ಎಬ್ಬಿಸಲಾಗುತ್ತಿದೆ. ಈ ಪ್ರಕರಣಕ್ಕೆ ಹಲವಾರು ಆಯಾಮಗಳು ಸೇರಿಕೊಂಡಿವೆ. ಈಗ ಈ ಪ್ರಕರಣವನ್ನು ಕುರಿತು ಸಿಬಿಐ (ಕೇಂದ್ರೀಯ ತನಿಖಾ ದಳ), ಎನ್ ಸಿ ಬಿ (ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯುರೊ- ಮಾದಕ ವಸ್ತು ನಿಯಂತ್ರಣ ಸಂಸ್ಥೆ) ಮತ್ತು ಎನ್ಫೋರ್ಸಮೆಂಟ್ ಡೈರೆಕ್ಟರೇಟ್ (ಆರ್ಥಿಕ ಅಪರಾಧಗಳ ತನಿಖೆಯ)- ಜಾರಿ ನಿರ್ದೇಶನಾಲಯ- ಮೊದಲಾದ ತನಿಖಾ ಸಂಸ್ಥೆಗಳು ತನಿಖೆಯನ್ನು ಕೈಗೊಂಡಿವೆ. ಒಟ್ಟಾರೆಯಾಗಿ ಚಿತ್ರರಂಗದ ಮೇಲೆ ತನಿಖಾ ಸಂಸ್ಥೆಗಳು ಮುಗಿಬಿದ್ದಂತಾಗಿದೆ.
ಆತ್ಮಹತ್ಯೆಗೆ ಹಲವಾರು ಆಯಾಮಗಳಿರುತ್ತವೆ. ಪ್ರೇಮಿಗಳಿಬ್ಬರಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಉಳಿದವರೇ ಆ ಆತ್ಮಹತ್ಯೆಗೆ ಕಾರಣವೆನ್ನುವುದು ಅವಸರದ ತೀರ್ಮಾನ. ಪ್ರಿಯತಮನ ಸಾವಿಗೆ ಪ್ರಿಯತಮೆ ಕಾರಣವಾಗಿರಬಹುದು, ಕಾರಣವಾಗಿರಲಿಕ್ಕೂ ಇಲ್ಲ. ಕಾರಣ ಪತ್ತೆ ಮಾಡಬೇಕಾದುದು ತನಿಖಾ ಸಂಸ್ಥೆಗಳ ಕೆಲಸ. ಅವಕ್ಕೂ ಅಡ್ಡಗಾಲು ಹಾಕಲಾಗುತ್ತಿದೆ.
ನೂರಾರು ಕೋಟಿ ವ್ಯವಹಾರದ ಮುಂಬೈಯಲ್ಲಿ ನೆಲೆಸಿರುವ ಹಿಂದಿ ಸಿನಿಮಾ ರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವುದು ಸುಲಭದ ಕೆಲಸವಲ್ಲ. ಅನಧಿಕೃತವಾಗಿ ಹಿಂದಿ ಚಿತ್ರರಂಗವನ್ನು ಆಳುತ್ತಿರುವ ಪಟ್ಟಭದ್ರ ಹಿತಾಸಕ್ತಿಯ ಘಟಾನುಘಟಿ ನಟನಟಿಯರ, ನಿರ್ಮಾಪಕರ ನಡುವೆ ಪ್ರತಿಭೆಯೊಂದನ್ನೆ ನಚ್ಚಿಕೊಂಡು ಮೇಲೇರುವವರ ಕಾಲೆಳೆಯುವವರ ಸಂಖ್ಯೆ ಕಡಿಮೆ ಇರುವುದಿಲ್ಲ, ಅಲ್ಲಿನ ಮಾನಸಿಕ ಒತ್ತಡದಲ್ಲಿ ಬದುಕುವುದೇ ಹೆಚ್ಚಾಗಿರುತ್ತದೆ ಎಂಬುದು ಅಲ್ಲಿನ ಸ್ಥಿತಿಯನ್ನು ಹತ್ತಿರದಿಂದ ಕಂಡವರ ಬಿಚ್ಚುನುಡಿ.
ಬಿಹಾರ ರಾಜ್ಯದಲ್ಲಿನ ಪರಿಸ್ಥಿತಿ ತೀರಾ ಗಂಭೀರವಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದ ಹಾವಳಿಯಿಂದ ಆರ್ಥಿಕ ಸ್ಥಿತಿ ಹದಗೆಟ್ಟಿದೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಅವ್ಯವಸ್ಥೆ ಕಣ್ಣಿಗೆ ರಾಚುವಂತೆ ಕಾಣತೊಡಗಿದೆ. ಚಿಕಿತ್ಸೆ ಸಿಗದೇ ಜನ ಸಾವಿನ ಬಾಗಿಲು ತಟ್ಟುತ್ತಿದ್ದಾರೆ. ಇದರೊಂದಿಗೆ ಮುಂಗಾರು ಹಿಂಗಾರಿನ ಮಳೆ ಆರ್ಭಟದಲ್ಲಿ ಬಿಹಾರ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ.
ತನ್ನ ಮೈ ಮೇಲಿನ ತುರಿಕೆಗಳನ್ನು ಸರಿಯಾಗಿ ತುರಿಸಿಕೊಳ್ಳಲಾಗದ ಬಿಹಾರ ಸರ್ಕಾರ, ತನ್ನ ಕರ್ತವ್ಯಗಳನ್ನು ಮರೆತು, ಈ ಪ್ರಕರಣದಲ್ಲಿ ತಲೆ ತೂರಿಸಿತ್ತು. ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಅಲ್ಲಿನ ಹಾಲಿ ಸರ್ಕಾರ, ಕೋವಿಡ್ ೧೯ ರೋಗ ನಿಯಂತ್ರಣದಲ್ಲಿನ ತನ್ನ ಸೋಲನ್ನು, ಪ್ರವಾಹದ ಪರಿಸ್ಥಿತಿಯನ್ನು ಸುಧಾರಿಸಲಾಗದ ತನ್ನ ವೈಫಲ್ಯವನ್ನು ಮುಚ್ಚಿಡಲು ಜನರ ಗಮನವನ್ನು ಭಾವನಾತ್ಮವಾಗಿ ಈ ಪ್ರಕರಣದತ್ತ ತಿರುಗಿಸಲು ಮುಂದಾಗಿದ್ದು ಒಂದು ದೊಡ್ಡ ದುರಂತವೇ ಸರಿ.
ನಮ್ಮ ಕಾಲದ ಕೋವಿಡ್ ೧೯ ಜ್ವರ ಎಲ್ಲರನ್ನೂ ಮನೆಯೊಳಗೆ ಬಂದಿಯನ್ನಾಗಿ ಮಾಡಿದೆ. ಇಂಥ ಸಮಯದಲ್ಲಿ ಸಾಮಾಜಿಕ ಸಂಪರ್ಕದ ಜಾಲತಾಣಗಳು ಜನರ ಭಾವನೆಗಳ ಅಭಿವ್ಯಕ್ತಿಗೆ ವೇದಿಕೆ ಒದಗಿಸಿಕೊಡುತ್ತಿರುವುದು ನಮ್ಮ ಕಾಲದ ಒಂದು ದೊಡ್ಡ ಅವಕಾಶ. ಪರಸ್ಪರರನ್ನು ಒಂದಡೆ ಸೇರಲು ಅನುವು ಮಾಡಿಕೊಡುವ ಈ ವಿದ್ಯಮಾನ, ನಮ್ಮ ಸುಖ ದುಃಖಗಳನ್ನು ಹಂಚಿಕೊಳ್ಳುವ ವೇದಿಕೆಯೂ ಹೌದು.
ಕಳೆದ ಏಪ್ರಿಲ್ ತಿಂಗಳಲ್ಲಿ ಅದೇ ಮುಂಬೈಯಲ್ಲಿ ಇರುವ ಬಾಲಿವುಡ್ ನ ಪ್ರಖ್ಯಾತ ಹಾಗೂ ಪ್ರತಿಭಾವಂತ ನಟ ಇರ್ಫಾನ್ ಖಾನ್ ಕ್ಯಾನ್ಸರ್ ಕಾಯಿಲೆ ಉಲ್ಬಣಿಸಿ ತೀರಿಕೊಂಡಾಗ, ಅವನ ಅಭಿಮಾನಿಗಳು ಜಾಲತಾಣಗಳಲ್ಲಿ ತಮ್ಮ ಪ್ರೀತಿ, ಅಭಿಮಾನ ನೋವುಗಳನ್ನು ಹಂಚಿಕೊಂಡಿದ್ದರು. ಸುಶಾಂತ ಆತ್ಮಹತ್ಯೆಯ ಸಂದರ್ಭದಲ್ಲೂ ಹೀಗೆಯೇ ನಡೆಯಬೇಕಿತ್ತು. ಆದರೆ ಹಾಗೆ ನಡೆಯಲಿಲ್ಲ.
ಹಿಂದಿ ಚಿತ್ರರಂಗ ಕಂಡ ಒಬ್ಬ ಪ್ರತಿಭವಂತ ನಟ ಇರ್ಫಾನ್ ಖಾನ್ ನಂತೆಯೇ, ಉದಯೋನ್ಮುಖ ನಟನಾಗಿದ್ದ ಸುಶಾಂತ ಸಿಂಗ್ ರಜಪೂತ್ ಹಿಂದಿ ಚಿತ್ರರಂಗಕ್ಕೆ ಬಂದಿದ್ದ ಹೊರಗಿನವ. ಅವರಿಬ್ಬರಿಗೂ ಯಾವ ಜಾತಿ, ಧರ್ಮ, ಶ್ರೀಮಂತಿಕೆಯ ಬೆಂಬಲವಿರಲಿಲ್ಲ. ಖ್ಯಾತ ನಟರ ಕುಟುಂಬದ ನೆಂಟಸ್ತಿಕೆಯೂ ಇರಲಿಲ್ಲ. ಅವರ ಕೈ ಹಿಡಿದು ನಡೆಸುತ್ತಿದ್ದುದು ಅವರಲ್ಲಿನ ನಟನಾ ಕೌಶಲ್ಯ.
ಪುರುಷ ಪ್ರಧಾನ ಚಿಂತನೆಯ ಮೂಸೆಯಲ್ಲಿ ಮುಳಿಗೇಳುವ ನಮ್ಮ ಭಾರತೀಯ ಸಮಾಜದಿಂದ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ? ಹಿಂದೆಯೂ, ಭಾರತದ ಖ್ಯಾತ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ, ಆಟದಲ್ಲಿ ಏನಾದರೂ ಎಡವಟ್ಟು ಮಾಡಿಕೊಂಡರೆ, ಅದಕ್ಕೆ ಕಾರಣ ಅವನ ಹೆಂಡತಿ ನಟಿ ಅನುಷ್ಕಾ ಶರ್ಮಾ ಎಂದು ಅಭಿಮಾನಿ ದೇವರುಗಳು ದೂರುತ್ತಿದ್ದರು.
ಅದೇ ಬಗೆಯಲ್ಲಿ ಪಾಕಿಸ್ತಾನದ ಕ್ರಿಕೆಟ್ ಆಟಗಾರ ಸೋಹಿಬ್ ಮಲ್ಲಿಕ್ ಕ್ರಿಕೆಟ್ ಪಂದ್ಯದಲ್ಲಿ ಎಡವಟ್ಟು ಮಾಡಿಕೊಂಡಾಗಲೂ ನಮ್ಮ ನಾಡಿನ ಹೈದರಾಬಾದ ಮೂಲದ ಮಲ್ಲಿಕ್ ಹೆಂಡತಿ ಅಂತರ್ರಾಷ್ಡ್ರೀಯ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಆ ಎಡವಟ್ಟುಗಳಿಗೆ ಕಾರಣ ಎಂಬ ಆರೋಪ ಹೊರಬೇಕಾಗಿ ಬರುತ್ತಿತ್ತು.
ಆರ್ಥಿಕ ಹಿಂಜರಿತದಿಂದ ದೇಶ ಜರ್ಜಿಜರಿತಗೊಂಡಿದೆ. ಕೋವಿಡ್ -೧೯ ಕಾಯಿಲೆ ಹರಡುವ ಭಯದಲ್ಲಿ ಆರ್ಥಿಕ ಚಟುವಟಿಕೆಗಳು ಕುಂಠಿತಗೊಂಡಿವೆ. ಮಾರುಕಟ್ಟೆಗಳನ್ನು ಮುಚ್ಚಲಾಗಿದೆ. ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿಲ್ಲ. ಯುವಜನತೆಯಲ್ಲಿ ಅನಿಶ್ಚಿತತೆ ಮನೆ ಮಾಡಿದೆ. ಕೋವಿಡ್ ಕಾಯಿಲೆಯಿಂದ ಆಸ್ಪತ್ರೆ ಸೇರಿವವರಲ್ಲಿ ಭಯ ಬಿತ್ತುವ ಮಾಧ್ಯಮಗಳಿಂದ ಅವರನ್ನು ಕಾಪಾಡಬೇಕಿದೆ. ಇಂದು ಕೈಯಲ್ಲಿರುವ ಉದ್ಯೋಗ ನಾಳೆ ಇರುವುದೋ ಇಲ್ಲವೋ ಎಂಬ ಆತಂಕ ಖಾಸಗಿ ನೌಕರದಾರರಿಗೆ ಕಾಡುತ್ತಿದೆ. ಅವರ ನೆರವಿಗೆ ಧಾವಿಸಬೇಕಾಗಿದ್ದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು, ಕಾರ್ಮಿಕರ ಹಿತ ರಕ್ಷಿಸದೇ ಉದ್ಯಮಪತಿಗಳ ರಕ್ಷಣೆಗೆ ನಿಂತು ಹಲವಾರು ಕಾರ್ಮಿಕ ವಿರೋಧಿ ಕಾನೂನುಗಳನ್ನು ರಾಜಾರೋಷವಾಗಿ ಜಾರಿ ಮಾಡುತ್ತಿದೆ.
ತಾವು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಬಾರದೇ ರೈತರು ಕಂಗಾಲಾಗಿದ್ದಾರೆ. ಮಳೆಯು ತಂದೊಡ್ಡುತ್ತಿರುವ ಪ್ರವಾಹದಂಥ ಅನಾಹುತಗಳಿಂದ ಜನ ಹೈರಾಣಾಗುತ್ತಿದ್ದಾರೆ. ಸೌಹಾರ್ದತೆಯಿಂದ ಬಾಳುತ್ತಿದ್ದ ಜನಸಮುದಾಯಗಳಲ್ಲಿ ಜಾತಿ, ಧರ್ಮ, ತಿನ್ನೋ ಆಹಾರದ ಆಧಾರದ ಅಡಿಯಲ್ಲಿ ವಿಷದ ಬೀಜ ಬಿತ್ತಲಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಜನತೆಗೆ ಬೇಕಾದುದು ಮುರಿದ ಮನಸ್ಸುಗಳನ್ನು ಕಟ್ಟುವ ಕೆಲಸ, ಜನ ಸಮುದಾಯದ ಮಾನಸಿಕ ಅಸ್ವಸ್ಥತೆಯನ್ನು ಕಾಪಿಡುವ ಕೆಲಸ ಸಾಗಬೇಕಾಗಿದೆ.
ಕೋವಿಡ್ ೧೯ ತಂದ ಅನಿಶ್ಚತತೆಯಲ್ಲಿ ಬಳಲುತ್ತಿರುವ ನಮ್ಮ ನಾಡಿನಲ್ಲಿ ಕಳೆದ ಹತ್ತು ತಿಂಗಳಲ್ಲಿ ಐನೂರಕ್ಕೂ ಅಧಿಕ ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾಕ್ ಡೌನ ನಂಥ ಪರಿಸ್ಥಿತಿ ಮತ್ತು ನಂತರದ ಅನಿಶ್ಚಿತತೆಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಸುಮಾರು ೧೫ರಿಂದ ೩೯ರ ವಯೋಮಾನದವರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವರ ಸಂಖ್ಯೆಯೇ ಹೆಚ್ಚು, ಇದು ಸಹಜ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಕಳೆದ ೨೦೧೬ರಲ್ಲಿ ಒಂದೇ ವರ್ಷದಲ್ಲಿ ೨,೩೦,೩೧೪ ಆತ್ಮಹತ್ಯೆಯ ಪ್ರಕರಣಗಳು ವರದಿಯಾಗಿದ್ದವು.
ಹಿಂದೊಮ್ಮೆ ಬ್ರೆಕ್ಕಿಂಗ್ ಸುದ್ದಿ ಎಂದು ದೂರದರ್ಶನ ಮಾಧ್ಯಮಗಳಲ್ಲಿ ಗಮನ ಸೆಳೆಯುತ್ತಿದ್ದ, ಸುದ್ದಿ ಬಿತ್ತರಿಸುವ ದೈನಂದಿನ ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸುತ್ತಿದ್ದ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಈಗ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ದಿನವೂ ಸಾಯುವವರಿಗೆ ಅಳುವವರಾರು ಎಂಬಂತಾಗಿದೆ, ಇಂದಿನ ಮಾಧ್ಯಮಗಳ ಸ್ಥಿತಿ. ಸರಾಸರಿ ನಾವು ದಿನವೊಂದಕ್ಕೆ ೨೮ ವಿದ್ಯಾರ್ಥಿಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಪೋಷಕರ, ಪ್ರಾಧ್ಯಾಪಕರ, ಸಹಪಾಠಿಗಳ ಕಿರುಕುಳ, ಮನಸ್ಸಿಗೆ ತಾಗದ ಓದು- ಮೊದಲಾದ ಕಾರಣಗಳಿಂದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಮುಂದಾಗುತ್ತಾರೆ.
ವೈದ್ಯಕೀಯ, ಎಂಜಿನಿಯರಿಂಗ ಓದುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಆಗಾಗ ಮಾಧ್ಯಮದ ಗಮನ ಸೆಳೆಯುವುದನ್ನು ಬಿಟ್ಟರೆ, ಉಳಿದ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಯಾರ ಗಮನಕ್ಕೂ ಬರುವುದಿಲ್ಲ. ಆತ್ಮಹತ್ಯೆಗೆ ಈ ಮೊದಲೇ ಪ್ರಸ್ತಾಪಿಸಿದ ಕಾರಣಗಳ ಜೊತೆಗೆ, ಕೋವಿಡ್ ೧೯- ಕಾಯಿಲೆಯ ಹಿನ್ನೆಲೆಯಲ್ಲಿ ಜಾರಿಗೆ ಬಂದಿರುವ ಆನ್ ಲೈನ್ ಮಾಧ್ಯಮದ ಶಿಕ್ಷಣ ಪದ್ಧತಿಯೂ, ಅದಕ್ಕೆ ಪೂರಕವಾಗಿರುವ ಇಂಟರ್ ನೆಟ್ ಸೌಲಭ್ಯ ವಂಚಿತ, ಲ್ಯಾಪಟ್ ಟಾಪ್, ಸ್ಮಾರ್ಟ ಮೊಬೈಲ್ ಫೋನ್ ಗಳ ಅಲಭ್ಯತೆ ವಿದ್ಯಾರ್ಥಿಗಳನ್ನು ಆತ್ಮಹತ್ಯೆಯತ್ತ ದೂಡುತ್ತಿರುವುದನ್ನು ಅಲ್ಲಗಳೆಯಲಾಗದು.
ಈ ಮಧ್ಯೆ ಸರ್ಕಾರಗಳು ವಿಜ್ಞಾನದ ಬಗೆಗೆ ಆಸಕ್ತಿ ತೋರದೇ, ಧರ್ಮದ ಕಡೆಗೆ ಹೆಚ್ಚಿನ ಒತ್ತು ನೀಡುತ್ತಿವೆ. ಅವುಗಳ ಆದ್ಯತೆ ಸಾಮಾಜಿಕ ಉನ್ನತಿಗಿಂತ ಧರ್ಮದ ಹೆಚ್ಚುಗಾರಿಕೆ ಮುನ್ನೆಲೆಗೆ ಬರತೊಡಗಿದೆ. ಜನರು ಎದುರಿಸುತ್ತಿರುವ ಹತ್ತುಹಲವು ಸಮಸ್ಯೆಗಳನ್ನು ಪರಿಹರಿಸುವತ್ತ ಗಮನವಹಿಸಬೇಕಾದ ನಮ್ಮ ಕರ್ನಾಟಕ ಸರ್ಕಾರ ಮದುವೆ, ಮತಾಂತರದ ಸುತ್ತ ಚಿಂತಿಸುತ್ತಾ ಉತ್ತರಪ್ರದೇಶ, ಹರಿಯಾಣಾ ಮಾದರಿಯಲ್ಲಿ ಲವ್ ಜಿಹಾದ್ ತಡೆ ಕಾನೂನು ರಚಿಸಲು ಚಿಂತನೆ ನಡೆಸುತ್ತಿದೆಯಂತೆ. ವಾಹಿನಿಯೊಂದರಲ್ಲಿ ಅಮಿತಾಬ್ ಬಚ್ಚನ್ ಸಾಮಾನ್ಯಜ್ಞಾನದ ತಿಳಿವಳಿಕೆಯ ಅರಿವಿಗಾಗಿ ಕೇಳಲಾದ ಪ್ರಶ್ನೆಗೆ ಆಕ್ಷೇಪಿಸಿರುವ ಬಿಜೆಪಿ ಸಂಸದರೊಬ್ಬರು, ಅದು ಐತಿಹಾಸಿಕ ಸತ್ಯ ಎಂಬುದು ಗೊತ್ತಿದ್ದರೂ, `ಅದು ಕೋಮುಗಳ ನಡುವೆ ದ್ವೇಷದ ಭಾವನೆ ಮೂಡಿಸುತ್ತದೆ ಎಂದು ಆಪಾದಿಸಿ ನ್ಯಾಯಾಲಯದ ಬಾಗಿಲು ತಟ್ಟುತ್ತಿದ್ದಾರೆ.
ಸೂಕ್ಷ್ಮತೆಯನ್ನೇ ಕಳೆದುಕೊಂಡ ಸಮಾಜದಲ್ಲಿ, ಸುಶಾಂತ ಸಾವಿನ ಸುದ್ದಿಯ ಹಿಂದೆಯೇ ಅವನ ಶವದ ಚಿತ್ರಗಳು ವಾಟ್ಸ್ ಆಪ್ ಗುಂಪುಗಳಲ್ಲಿ ಹರಿದಾಡತೊಡಗಿದ್ದವು. ಇದು ನಮ್ಮ ಸಾಮಾಜಿಕ ಸ್ವಾಸ್ಥ್ಯದ ದಿವಾಳಿತನವನ್ನು ಜಗಜ್ಜಾಹೀರು ಮಾಡಿಸಿತ್ತು. ಸಮಾಜ ನಿರ್ಲಜ್ಜತನದಿಂದ ಇದು ನನಗೆ ಸಂಬಂಧಿಸಿದ ಸಂಗತಿಯಲ್ಲ ಎಂದುಕೊಂಡು ನಿದ್ರೆಗೆ ಜಾರತೊಡಗಿದೆ.
ನಮ್ಮ ಸಮಾಜಿಕ ಸ್ವಾಸ್ಥ್ಯ ಸುಧಾರಿಸಲಾರದಷ್ಟು ಮತ್ತಷ್ಟು ಹದಗೆಡುವ ಮೊದಲೇ. ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ತಪ್ಪುಗಳನ್ನು, ಸಮಸ್ಯೆಗಳನ್ನು ಮೊದಲು ಗುರುತಿಸಿ ಅವಕ್ಕೆ ತಕ್ಕುದಾದ ಪರಿಹಾರಗಳನ್ನು ಸಾಮುದಾಯಿಕವಾಗಿಯೇ ಕಂಡುಕೊಳ್ಳಬೇಕಾಗಿದೆ.
------------------
ಫ್ರಾನ್ಸಿಸ್. ಎಂ. ಎನ್
ಬೆಂಗಳೂರು
------------------
No comments:
Post a Comment