Tuesday, 10 November 2020

ಬಿಲ್ಹಾ ಮತ್ತು ಜಿಲ್ಫಾ - ದೀಪ್ತಿ ಫ್ರಾನ್ಸಿಸ್ಕಾ, ಯಡವನಹಳ್ಳಿ

ಯಾಕೋಬನನ್ನು ಮದುವೆಯಾದ ಸಮಯದಲ್ಲಿ ರಖೇಲ ಮತ್ತು ಲೇಯಳಿಗೆ ತಮ್ಮ ತಂದೆಯಾದ ಲಬಾನನಿಂದ ಕೊಡಲ್ಪಟ್ಟಿದ್ದ ದಾಸಿಯರು ಬಿಲ್ಹಾ ಮತ್ತು ಜಿಲ್ಫಾ. ಬಿಲ್ಹಾ ರಖೇಲಳ ದಾಸಿಯಾಗಿದ್ದಳು. ಜಿಲ್ಫಾ ಲೇಯಳ ದಾಸಿಯಾಗಿದ್ದಳು.


ಯಾಕೋಬನು ಲೇಯಳನ್ನೋ ಇನ್ಯಾವುದೋ ಹೆಣ್ಣನ್ನೊ ಪ್ರೀತಿಸುವುದಕ್ಕಿಂತ ಹೆಚ್ಚಾಗಿ ರಖೇಲಳನ್ನು ಪ್ರೀತಿಸಿದ್ದು ನಮಗೆಲ್ಲ ಗೊತ್ತೇ ಇದೆ. ಆದರೆ ಆರಂಭದಲ್ಲಿ ಅನೇಕ ವರ್ಷಗಳು ರಖೇಲಳಿಗೆ ಮಕ್ಕಳಾಗದಿದ್ದಾಗ ತನ್ನ ದಾಸಿ ಬಿಲ್ಹಾಳನ್ನು ಯಾಕೋಬನಿಗೆ ಮೂರನೇ ಮಡದಿಯಾಗಿ ಒಪ್ಪಿಸಿ ಅವಳೊಂದಿಗೆ ಮಲಗಲು ಹೇಳಿದಳು. ಹಾಗೆ ಮಾಡುವುದರಿಂದ ಅವಳು ಮಕ್ಕಳನ್ನು ಪಡೆಯಬಹುದೆಂಬುದು ಅವಳ ಉದ್ದೇಶವಾಗಿತ್ತು. ಬಿಲ್ಹಾಳ ಕುರಿತು ಆದಿಕಾಂಡದಲ್ಲಿ ಹಲವು ಬಾರಿ ಉಲ್ಲೇಖವಿದೆ (ಆದಿ ೨೯:೨೯; ೩೦:೩,೪,೫,೭; ೩೫:೨೨,೨೫; ೩೭:೨;೪೬:೨೫). ಅದೇರೀತಿ ೧ಪೂರ್ವಕಾಲದ ಇತಿಹಾಸದಲ್ಲೂ ಉಲ್ಲೇಖವಿದೆ (೧ಪೂರ್ವ ೪:೨೯; ೭:೧೩). ಈ ಉಲ್ಲೇಖಗಳ ಪ್ರಕಾರ ಬಿಲ್ಹಾಳು ದಾನ್ ಮತ್ತು ನೆಫ್ತಾಲಿ ಎಂಬ ಇಬ್ಬರು ಗಂಡು ಮಕ್ಕಳಿಗೆ ಜನ್ಮವಿತ್ತಳು. ಅವರಿಬ್ಬರು ಎರಡು ದೊಡ್ಡ ಇಸ್ರಾಯೇಲಿನ ಗೋತ್ರಗಳನ್ನು ಬೆಳೆಸಿದರು. ಲೇಯಳ ಹಿರಿಯ ಮಗನಾದ ರೂಬೇನನು ಬಿಲ್ಹಾಳೊಂದಿಗೆ ಅನುಚಿತ ಸಂಬಂಧವನ್ನು ಹೊಂದಿದ್ದನೆಂದು ಸಹ ಬೈಬಲ್ ಹೇಳುತ್ತದೆ(ಆದಿ ೩೫:೨೨). ಆದ್ದರಿಂದಲೇ ಸಾಯುವ ಸಂದರ್ಭದಲ್ಲಿ ಯಾಕೋಬನು ಮಕ್ಕಳೆಲ್ಲರನ್ನೂ ಕರೆದು ಆಶೀರ್ವಾದ ನೀಡುವಾಗ ರೂಬೇನನಿಗೆ ಹೀಗೆನ್ನುತ್ತಾನೆ ಹತ್ತಿದೆ, ಹೊಲೆ ಮಾಡಿದೆ ತಂದೆಯ ಹಾಸಿಗೆಯನು ಪ್ರಮುಖ ಸ್ಥಾನದಲ್ಲಿರೆ ನನ್ನ ಮಂಚವನ್ನೇರಿದೆ ನೀನು' ಇದರಿಂದ ಅವನು ಹಿರಿಯ ಮಗನೆಂಬ ಪ್ರಮುಖ ಸ್ಥಾನವನ್ನು ಕಳೆದುಕೊಳ್ಳುತ್ತಾನೆ.

ಕೆಲವು ವರ್ಷಗಳ ನಂತರ ರಖೇಲಳು ತಾಯಿಯಾಗಿ ಮಕ್ಕಳನ್ನು ಹೆರುವ ವೇಳೆ, ಲೇಯಳಿಗೆ ಮಕ್ಕಳಾಗುವುದು ನಿಂತು ಹೋದಾಗ ಅವಳು ತನ್ನ ದಾಸಿಯಾದ ಜಿಲ್ಫಾಳನ್ನು ಯಾಕೋಬನಿಗೆ ನಾಲ್ಕನೇ ಮಡದಿಯಾಗಿ ಒಪ್ಪಿಸಿ ಅವಳೊಂದಿಗೆ ಮಲಗಲು ಹೇಳಿದಳು. ಬಿಲ್ಹಾಳಂತೆ ಜಿಲ್ಫಾಳು ಸಹ ಗಾದ್ ಮತ್ತು ಆಶೇರ್ ಎಂಬ ಎರಡು ಗಂಡು ಮಕ್ಕಳನ್ನು ಹೆತ್ತಳು. ಅವರೂ ಇಸ್ರಾಯೇಲಿನ ಎರಡು ಗೋತ್ರಗಳನ್ನು ದೊಡ್ಡದಾಗಿ ಬೆಳೆಸಿದರು. ಬಿಲ್ಹಾಳ ಕುರಿತು ಉಲ್ಲೇಖ ಆದಿಕಾಂಡದಲ್ಲಿದೆ (ಆದಿ ೨೯:೨೪; ೩೦:೯,೧೦; ೩೫:೨೬; ೩೭:೨; ೪೬:೧೮).

ಈ ಇಬ್ಬರು ದಾಸಿಯರು ಬೈಬಲಿನಲ್ಲಿ ಪ್ರಮುಖಪಾತ್ರವೇನು ವಹಿಸಿಲ್ಲವಾದರೂ ದೇವ ಜನರ ರಾಷ್ಟ್ರವನ್ನು ಅಸ್ತಿತ್ವಕ್ಕೆ ತರುವಲ್ಲಿ ಖಂಡಿತವಾಗಿಯೂ ಪ್ರಮುಖ ಪಾತ್ರವಹಿಸಿದ್ದಾರೆ. ಯಾಕೋಬನು ತನ್ನ ಸಂತತಿಯವರನೆಲ್ಲಾ ಕರೆದುಕೊಂಡು ತಾಯಿನಾಡಿಗೆ ಮರಳುವಾಗ, ಏಸಾವನು ಏನಾದರೂ ಮಾಡಿಬಿಡಬಹುದೆಂಬ ಭಯದಿಂದ ಈ ದಾಸಿಯರು ಹಾಗೂ ಅವರ ಮಕ್ಕಳನ್ನು ಮುಂದೆ ಬಿಡಲಾಗಿತ್ತು. ಕಾರಣ ಅವರ ಗಣನೆ ಅಷ್ಟೇನೂ ಪ್ರಮುಖವಾಗಿರಲಿಲ್ಲ. ತಮ್ಮ ತ್ಯಾಗದ   ಪಾತ್ರದಿಂದ ಬಿಲ್ಹಾ ಮತ್ತು ಜಿಲ್ಫಾ ಇಬ್ಬರೂ ಇಸ್ರಾಯೇಲಿನ ಹನ್ನೆರಡು ಕುಲಗಳ ಗೋತ್ರಗಳಲ್ಲಿ ಮೂರನೇ ಒಂದು ಭಾಗಕ್ಕೆ ತಾಯಂದಿರಾಗಿದ್ದಾರೆ.

ದೇವರು ಅಬ್ರಹಾಮನಿಗೆ ಅವನ ವಂಶವನ್ನು ಆಕಾಶದಲ್ಲಿನ ನಕ್ಷತ್ರಗಳಂತೆಯೂ ಸಮುದ್ರ ದಡದ ಮರಳಿನಂತೆಯೂ ಹೆಚ್ಚಿಸುವನೆಂದು ವಾಗ್ದಾನ ಮಾಡಿದಾಗ, ಕುತಂತ್ರಿ ತಾಯಿಯನ್ನು(ರೆಬೆಕ್ಕಾ),ವಿಷಮ ಸೋದರರನ್ನು(ಯಾಕೋಬ ಮತ್ತು ಏಸಾವ), ಕುಶಲ ಮೋಸಗಾರನನ್ನು(ಲಬಾನ), ಪ್ರತಿಸ್ಪರ್ಧಿ ಸೋದರಿಯರನ್ನು(ಲೇಯ ಮತ್ತು ರಖೇಲ) ಮತ್ತು ಈ ಇಬ್ಬರು ದಾಸಿಯರನ್ನು ಬಳಸಿಕೊಳ್ಳುತ್ತಾರೆ ಎಂದು ಯಾರಿಗೆ ಗೊತ್ತಿತ್ತು?

ಬಿಲ್ಹಾ ಮತ್ತು ಜಿಲ್ಫಾ, ಇಬ್ಬರೂ ತಮ್ಮ ಮಕ್ಕಳಿಗೆ ಜನ್ಮ ನೀಡಿದಾಗ, ಆ ಮಕ್ಕಳ ಮೇಲೆ ಇವರಿಗೆ ಸಂಪೂರ್ಣ ಹಕ್ಕಿರಲಿಲ್ಲ. ಅವರ ಮಕ್ಕಳನ್ನು ಹೆಸರಿಸುವ ಅವಕಾಶವೂ ಸಹ ಇರಲಿಲ್ಲ. ಆ ಮಕ್ಕಳ ಹಕ್ಕುಬಾಧ್ಯತೆ ರಖೇಲ ಮತ್ತು ಲೇಯಳಿಗೆ ಮೀಸಲಾಗಿತ್ತು. ಬಿಲ್ಹಾ ಮತ್ತು ಜಿಲ್ಫಾರಿಗೆ ತಮ್ಮ ಮಕ್ಕಳನ್ನು (ಹಾಗೂ ಗಂಡನನ್ನು) ಹಂಚಿಕೊಳ್ಳುವುದು ಕಷ್ಟವೆನಿಸಿರಬಹುದು. ಆದರೆ ಅವರು ಸ್ವ-ಇಚ್ಛೆಯಿಂದ ತ್ಯಾಗಮಾಡಿದರು. ತಮ್ಮ ಪುತ್ರರ ಮೇಲಿನ ಪ್ರೀತಿಯಿಂದ, ರಖೇಲ ಮತ್ತು ಲೇಯಳ   ಮೇಲಿನ ಪ್ರೀತಿಯಿಂದ, ಒಳ್ಳೆಯ ಕುಟುಂಬದ ಮೇಲಿನ ಪ್ರೀತಿಯಿಂದ ತ್ಯಾಗಮಾಡಿದರು.

ಆ ಸಮಯದಲ್ಲಿ ಬಿಲ್ಹಾ ಮತ್ತು ಜಿಲ್ಫಾರಿಗೆ, ದೇವರ ಮಹಾ ಕಥೆಯಲ್ಲಿ ಅವರು ವಹಿಸುತ್ತಿದ್ದ ಪಾತ್ರದ ಅರಿವೇ ಇರಲಿಲ್ಲ. ಅದೇ ರೀತಿ, ದೇವರು ತಮ್ಮ ಕಥೆಯಲ್ಲಿ ನಮ್ಮ ತ್ಯಾಗ, ಸಮಸ್ಯೆಯ ಸಂದರ್ಭಗಳನ್ನು ಹೇಗೆ ಬಳಸಿಕೊಳ್ಳುತ್ತಾರೆಂಬ ಅರಿವು ನಮಗಿಲ್ಲದಿರಬಹುದು. ಆದರೆ ನಾವು ಪ್ರತಿಯೊಬ್ಬರೂ ವಿಶಿಷ್ಟ ಪಾತ್ರ ವಹಿಸುತ್ತಿದ್ದೇವೆ. ಮುಂದೊಂದು ದಿನ ಅದೆಲ್ಲವನ್ನೂ ನಾವು ಸ್ಪಷ್ಟವಾಗಿ ಕಾಣುತ್ತೇವೆ.

---------------------------

ದೀಪ್ತಿ ಫ್ರಾನ್ಸಿಸ್ಕಾ, ಯಡವನಹಳ್ಳಿ

----------------------



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...