Sunday, 8 November 2020

ಸೃಷ್ಟಿಯ ಕತೆ - ೧೧ - ಓಡಿನ್ ಮತ್ತು ಯಮಿರ್ - ಎಫ್ ಎಂ ಎನ್


      ಉತ್ತರಗೋಳಾರ್ಧದ ಧ್ರುವ ಪ್ರದೇಶದಲ್ಲಿರುವ ಐಸಲೆಂಡಿನ ನೋರ್ಸ ಬುಡಕಟ್ಟಿನ ಸೃಷ್ಟಿಯಕತೆ.   

     ಈ ಜಗತ್ತಿನಲ್ಲಿ ಮೊದಲು ಏನೂ ಇರಲಿಲ್ಲ. ಮರಳಾಗಲಿ, ಸಾಗರವಾಗಲಿ, ತೆರೆಗಳಾಗಲಿ ಚಳಿ ಮೂಡಿಸುವ ಮಾರುತಗಳಾಗಲಿ ಏನೂ ಇರಲಿಲ್ಲ. ಅತ್ತ ಸ್ವರ್ಗವೂ ಇರಲಿಲ್ಲ, ಇತ್ತ ಭೂಲೋಕವೂ ಇರಲಿಲ್ಲ. ಭೂಮಿಯು ಇನ್ನೂ ಅಸ್ತಿತ್ವದಲ್ಲಿ ಬರುವ ಮೊದಲು `ನಿಫೆಲೆಮ್ ಇತು.

  ನಿಫೆಲೆಮ್ ಅಂದರೆ ಮಂಜಿನ ಲೋಕ. ಅದು ಕಾರಿರುಳ ಕಗ್ಗತ್ತಲು, ಮೈ ಕೊರೆಯುವ ಚಳಿ, ಏನೂ ಕಾಣಿಸದ ಕಾವಳದ ಮಂಜು ಮತ್ತು ಎಲ್ಲವನ್ನೂ ಆವರಿಸಿಕೊಂಡು ಮಡುಗಟ್ಟಿದ ಹಿಮವು ಸೇರಿದ ಲೋಕ. ಅಲ್ಲಿನ ನೀರ ಬುಗ್ಗೆಯೊಂದು ಒಟ್ಟು ಹನ್ನೆರಡು ನದಿಗಳ ಉಗಮಕ್ಕೆ ಕಾರಣವಾಗಿತ್ತು.

  ಈ ನಿಫೆಲೆಮ್ ಲೋಕದ ದಕ್ಷಿಣಕ್ಕೆ `ಮುಸ್ಪೆಲ್ ಅಂದರೆ ವಿಶ್ವ ವಿನಾಶಕ ಬೆಂಕಿಯ ಲೋಕವಿತ್ತು. ಅದು ವಿಪರೀತ ಕೆನ್ನಾಲಿ-ಗೆಗಳ ಬೆಂಕಿಯ ಮತ್ತು ಪ್ರಖರ ಬೆಳಕಿನ ಪ್ರದೇಶವಾಗಿತ್ತು. 

  ಆ ಪ್ರದೇಶವನ್ನುದೈತ್ಯದೇಹ ಹೊಂದಿದ್ದ `ಸುರ್ತ ಎಂಬಾತಅದರ ಕಾವಲಿಗೆ ನಿಂತಿದ್ದ. ಆತ ಸದಾಕಾಲ ತನ್ನೊಂದಿಗೆ ಕೆನ್ನಾಲಿಗೆಗಳ ಬೆಂಕಿಯಜ್ವಾಲೆಯಖಡ್ಗವನ್ನು ಹಿಡಿದುಕೊಂಡಿರುತ್ತಿದ್ದ. ಉತ್ತರ ದಿಕ್ಕಿನಲ್ಲಿ ಆದಿ ಕಾಲದ ತಳವಿಲ್ಲದ ಅಂದರೆ ಅಡಿಯಿಲ್ಲದ ಗುಂಡಿ `ಜಿನುಂಗಗ್ಯಾಪ್ ಇತ್ತು . ಅಲ್ಲಿ ಸಕಲ ನದಿಗಳು ಹಿಮಗಟ್ಟುತ್ತಿದ್ದವು, ಅಲ್ಲಿ ಎಲ್ಲವೂ ಹಿಮಮಯವಾಗಿರುತ್ತಿತ್ತು.

ದಕ್ಷಿಣ ದಿಕ್ಕಿನಿಂದ ವಿನಾಶಕ ಬೆಂಕಿಯ ಲೋಕ ಮುಸ್ಪೆಲ್‌ನಿಂದ ಬೆಂಕಿಯ ಕಿಡಿಗಳು, ಬಿಸಿಗಾಳಿಗಳು ಜಿನುಂಗಗ್ಯಾಪ್‌ನ ಅಂಚನ್ನು ತಟ್ಟತೊಡಗಿದಾಗ, ಅವುಗಳ ಬಿಸಿಯ ದೆಸೆಯಿಂದ ನಿಧಾನವಾಗಿ ಹಿಮ ಕರಗಿ ಹನಿಹನಿಯಾಗಿ ಜಿನುಗತೊಡಗಿತ್ತು. ಆ ಹನಿಹನಿಗಳು ದಪ್ಪಗಾಗುತ್ತಾ ಘನೀಭವಗೊಂಡು ಮಾನವರೂಪ ತಳೆಯಿತು. ಅವನ ಹೆಸರು `ಯಮಿರ್. ಇವನೇ ಮೊದಲ ದೈತ್ಯ ವ್ಯಕ್ತಿ. ಆತನೆ ದೈತ್ಯದೇಹಿ ಮಂಜುಗಡ್ಡೆ ಮಾನವರ ಆದಿಪುರುಷ.

  ಮತ್ತಷ್ಟು ಹಿಮ ಹನಿಗಳು ಬಿದ್ದಾಗ, ಒಂದು ಹಸು ಹುಟ್ಟಿಕೊಂಡಿತು. ಅದು ಬೆಳೆದು ದೊಡ್ಡದಾಗುತ್ತಿದ್ದಂತೆಯೇ ಅದರ ನಾಲ್ಕು ಕೆಚ್ಚಲಿನಿಂದ ನಾಲ್ಕು ಹಾಲಿನ ನದಿಗಳು ಹರಿಯತೊಡಗಿದವು. ದೈತ್ಯದೇಹಿ ಯಮಿರ್ ಆ ನದಿಗಳ ಹಾಲನ್ನೇ ಕುಡಿದು ಜೀವಿಸತೊಡಗಿದ. ಆ ಆದಿ ಹಸು, ಹೆಪ್ಪುಗಟ್ಟಿದ ಹಿಮದ ಉಪ್ಪನ್ನು ನೆಕ್ಕುತ್ತಾ ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಿತ್ತು. ಆದು ಹಾಗೆಯೇ ನೆಕ್ಕುತ್ತಿದ್ದಾಗ, ಕೆಳಗಿನಿಂದ ಮಾನವನ ತಲೆ ಕಾಣಿಸತೊಡಗಿತು.

   ಮೂರು ದಿನಗಳ ಕಾಲ ಆ ಆದಿ ಹಸು ಆ ಸ್ಥಳದಲ್ಲಿ ನೆಕ್ಕುತ್ತಾ ಹೋದಾಗ, ಮೂರನೆಯ ದಿನದ ಕೊನೆಯಲ್ಲಿ ಪೂರ್ತಿ ಮಾನವನ ಆಕೃತಿಯು ಹೊರಗೆ ಕಾಣಿಸತೊಡಗಿತ್ತು. ಆ ಮಾನವ ಆಕಾರ ಜೀವಂತಿಕೆಯನ್ನು ಪಡೆಯಿತು. ಅದರ ಹೆಸರು `ಬುರಿ ಆಗಿತ್ತು. ಅದಕ್ಕೆ ಒಂದು ಮಗು ಆದಾಗ ಆ ಮಗುವಿಗೆ `ಬೋರ್ ಎಂದು ಹೆಸರು ಇಡಲಾಯಿತು.

  ಆ ಬೋರ್ ದೈತ್ಯದೇಹಿ ಮಂಜುಗಡ್ಡೆ ಮಾನವರಲ್ಲೊಬ್ಬರ ಮಗಳಾದ `ಬೆಸ್ತಲಾಳನ್ನು ಮದುವೆಯಾಗುತ್ತಾನೆ. ಈ ಬೋರ್ ಮತ್ತು ಬೆಸ್ತಲಾ ದಂಪತಿಗೆ ಮೂವರು ಮಕ್ಕಳು ಹುಟ್ಟುತ್ತಾರೆ. ಆ ಮೂವರು ಮಕ್ಕಳಲ್ಲಿ ಒಂದು ಮಗುವಿನ ಹೆಸರು `ಓಡಿನ್. ಈ ಓಡಿನ್ ಎಲ್ಲಾ ದೇವರುಗಳಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಶಕ್ತಿವಂತದೇವರು.

ದೈತ್ಯದೇಹಿ ಯಮೀರ್ ಮಂಜುಗಡ್ಡೆ ಮಾನವರ ಆದಿ ಪುರುಷ. ಆದರೆ ಅವನು ದೇವರಲ್ಲ. ಹೀಗಾಗಿ ಆತ ನಿಧಾನವಾಗಿ ಕೆಡುಕಿನ ದೈವವಾದ. ಮೇಲುಗೈ ಸಾಧಿಸುವ ಮೇಲಾಟದಲ್ಲಿ, ಕೆಡುಕಿನ ದೈತ್ಯದೇಹಿ ಮಂಜುಗಡ್ಡೆ ದೈವಗಳು ಮತ್ತು ಒಳ್ಳೆಯದರ ಪ್ರತೀಕಗಳಾದ ಯೌವ್ವನಸ್ಥ ದೇವರುಗಳ ನಡುವೆ ಯುದ್ಧವೇ ನಡೆದುಹೋಯಿತು. 

   ದೇವರುಗಳ ಮತ್ತು ದೈತ್ಯದೇಹಿ ದಾನವರ ನಡುವಿನ ಯುದ್ಧದಲ್ಲಿ ಬೋರನ ಮೂರು ಮಕ್ಕಳು ಯಮೀರ್‌ನನ್ನು ಕೊಂದುಬಿಟ್ಟರು. ಅವನ ಗಾಯಗಳಿಂದ ಅಪಾರವಾದ ನೆತ್ತರು ಹರಿಯಿತು. ಆ ನೆತ್ತರಿನ ಪ್ರಮಾಣ ಎಷ್ಟಿತ್ತೆಂದರೆ, ಅವನ ಸಂತತಿಯಾದ ದೈತ್ಯದೇಹದ ಮಂಜುಗಡ್ಡೆ ಮಾನವರು   ಅಂದರೆ ದೈತ್ಯದೇಹಿ ಕೆಡುಕಿನ ದಾನವರು, ಆ ನೆತ್ತರಿನ ಪ್ರವಾಹದಲ್ಲಿ ಮುಳುಗಿ ಹೋದರು. 

ಅವರಲ್ಲೊಬ್ಬ ಉಳಿದುಕೊಂಡು ತನ್ನ ಕುಟುಂಬದವರನ್ನು ರಕ್ಷಿಸಿಕೊಂಡಿದ್ದ. ಅವನು ತನಗಾಗಿ ಮತ್ತು ತನ್ನ ಕುಟುಂಬಕ್ಕಾಗಿ ಒಂದು ದೊಡ್ಡ ಕಮಾನಿನ ಏಣಿಯನ್ನು ನಿರ್ಮಿಸಿ ಅದರ ಮೇಲೆ ಅವನು ಮತ್ತು ಅವನ ಕುಟುಂಬದವರು ನಿಂತು ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದರು.

   ಒಳಿತನ ಪರ ನಿಲ್ಲುವ ದೇವರ ಸಂತತಿಯಾದ ಬೋರನ ಮಕ್ಕಳು, ಯುದ್ಧ ಭೂಮಿಯಲ್ಲಿ ಬಿದ್ದಿದ್ದ ಕೆಡುಕಿನ ದೈತ್ಯದೇಹಿ ಮಂಜುಗಡ್ಡೆ ಮಾನವರ ಆದಿ ಪುರುಷ ಯಮೀರ್‌ನ ದೈತ್ಯದೇಹವನ್ನು ಎಳೆದುಕೊಂಡು ಬಂದು ಅಡಿಯಿಲ್ಲದ ಗುಂಡಿ `ಜಿನುಂಗಗ್ಯಾಪ್ ಸ್ಥಳದ ಮಧ್ಯ ಭಾಗಕ್ಕೆ ತಂದು ನಿಲ್ಲಿಸುತ್ತಾರೆ. ಯಮೀರ್‌ನ ಆ ಮೃತದೇಹದಿಂದ ಪೃಥ್ವಿಯನ್ನು ಸೃಷ್ಟಿಸುತ್ತಾರೆ. ಯಮೀರ್ ನರಕ್ತವು ಸಾಗರದ ಸ್ವರೂಪ ಪಡೆಯುತ್ತದೆ. ಅವನ ದೈತ್ಯದೇಹದ ಮೂಳೆಗಳು, ಶಿಲೆಗಳು ಮತ್ತು ಬೋರ್ಗಲ್ಲುಗಳು ಆಗುತ್ತವೆ. ಅವನ ತಲೆಗೂದಲು ಗಿಡಗಂಟಿಗಳು ಮತ್ತು ಮರಗಳು ಆಗುತ್ತವೆ. 

ಇಷ್ಟಾದ ಮೇಲೆ ಬೋರನ ಮಕ್ಕಳು, ಯಮಿರ್‌ನ ತಲೆಬುರುಡೆಯನ್ನು ಎತ್ತಿಕೊಂಡು, ಅದನ್ನು ಪೃಥ್ವಿಯ ಮೇಲಿರಿಸಿ ಆಗಸದ ಹುಟ್ಡಿಗೆ ಕಾರಣರಾಗುತ್ತಾರೆ. ವಿನಾಶಕ ಬೆಂಕಿಯ ಲೋಕ ಮುಸ್ಪೆಲ್‌ನಿಂದ ಹಾರುವ ಕಿಡಿಗಳನ್ನು ಮತ್ತು ಅಲ್ಲಿದ್ದ ಕರಗಿದ ಕಿಟ್ಟದ ತುಣುಕುಗಳನ್ನು ಆಗಸದಲ್ಲಿ ಕೂರಿಸಿ ತಾರೆಗಳನ್ನು ಸೃಷ್ಟಿಸುತ್ತಾರೆ. ಮತ್ತೊಂದಿಷ್ಟು ಕಿಡಿಗಳನ್ನು ಆಗಸದ ಕೆಳಗೆ ಒಂದು ಪಥದಲ್ಲಿ ಸಾಗುವಂತೆ ಇರಿಸುತ್ತಾರೆ.

ಅವರು, ಯಮೀರ್ ತಲೆಯಲ್ಲಿನ ಮಿದುಳನ್ನು ಆಗಸಕ್ಕೆ ತೂರಿ ಮೋಡಗಳನ್ನು ಮಾಡುತ್ತಾರೆ. ಪೃಥ್ವಿಯೊಂದು ತಟ್ಟೆ.  ದೈತ್ಯದೇಹಿ ದಾನವರನ್ನು ಪೃಥ್ವಿ ತಟ್ಟೆಯಿಂದ ದೂರವಿರುವಂತೆ ಮಾಡಲು ಯಮೀರ್‌ನ ಕಣ್ಣರೆಪ್ಪೆಗಳನ್ನು ಭೂಮಿ ತಟ್ಟೆಯ ಅಂಚಿನಲ್ಲಿ ಕೂಡಿಸುತ್ತಾರೆ.

ಓಡಿನ್ ಮತ್ತು ಅವನ ಸೋದರರಿಗೆ ಸಾಗರದ ತೀರದಲ್ಲಿ ಮರದ ಎರಡು ದಿಮ್ಮಿಗಳು ಕಾಣಿಸುತ್ತವೆ. ಆ ದಿಮ್ಮಿಗಳಿಂದ ಅವರು ಇಬ್ಬರು ಮಾನವರನ್ನು ಸೃಷ್ಟಿ ಮಾಡುತ್ತಾರೆ. ಒಬ್ಬ ಮಗ ಅವರಿಬ್ಬರಿಗೆ ಉಸಿರು ನೀಡಿ ಬದಕುವಂತೆ ಮಾಡುತ್ತಾನೆ. ಎರಡನೆಯ ಮಗ ಅವರಿಗೆ ತಿಳಿವಳಿಕೆ ಮತ್ತು ಚಲನೆಯನ್ನು ಒದಗಿಸುತ್ತಾನೆ. ಮೂರನೆಯವ ಅವರಿಗೆ ನೋಡಲು ಕಣ್ಣು, ಕೇಳಲು ಕಿವಿ ಮತ್ತು ಮಾತನಾಡಲು ಬಾಯಿಯನ್ನು ದಯಪಾಲಿಸುತ್ತಾನೆ. ಆ ಇಬ್ಬರು ಆದಿ ಮಹಿಳೆ ಮತ್ತು ಆದಿ ಪುರುಷರು. ಬೋರನ ಮಕ್ಕಳು ದೇವರ ಸಂತತಿಗೆ ಕಾರಣವಾಗಿದ್ದಂತೆಯೇ, ಅವರಿಬ್ಬರಿಂದಲೇ ಮಾನವರ ಸಂತತಿಯ ಸಮುದಾಯಗಳು ಹುಟ್ಟಿಕೊಳ್ಳುತ್ತವೆ.

ಓಡಿನ್ ಮತ್ತು ಅವನ ಸೋದರರು ಫೃಥ್ವಿಗಾಗಿ ಆಗಸ ಮತ್ತು ನಕ್ಷತ್ರ (ತಾರೆ)ಗಳನ್ನು ಕೊಡಮಾಡಿರುತ್ತಾರೆ. ಆದರೆ ಸ್ವರ್ಗವು ಬೆಳಕು ಕಾಣದೇ ಇರುತ್ತದೆ. ಸಾಕಷ್ಟು ಸಮಯ ಕಳೆದ ನಂತರ, ಈ ದೇವ ಸೋದರರು ಸೃಷ್ಟಿಸಿದ ಆ ಇಬ್ಬರಿಗೆ ಎರಡು ಮಕ್ಕಳಾಗುತ್ತವೆ.

  ಅವು ತುಂಬಾ ಅಂದವಾಗಿ ಕಾಣುತ್ತಿರುತ್ತವೆ. ಅವಕ್ಕೆ ಅವರ ತಂದೆಯೇ ಹೆಸರಿಡುತ್ತಾನೆ. ಮಗನಿಗೆ ಚಂದಿರ ಎಂದು ಮಗಳಿಗೆ ಉಷೆ (ಸೋಲ್) ಎಂದು ಅವರ ತಂದೆ ಹೆಸರಿಸಿರುತ್ತಾನೆ. ದೇವತೆಗಳಿಗೆ, ತಂದೆಯ ನಡೆ ಯಾಕೋ ಅತಿಯಾಯಿತು ಎನ್ನಿಸುತ್ತದೆ. ಅವನ ಆ ಇಬ್ಬರು ಮಕ್ಕಳನ್ನು ಆಗಸದತ್ತ ಎಳೆದುಕೊಳ್ಳುತ್ತಾರೆ. ಅವರನ್ನು ಅಲ್ಲಿ ದೇವತೆಗಳು ದುಡಿಮೆಗೆ ಹಚ್ಚುತ್ತಾರೆ. 

  ಸೋಲ್, ಆಗಸದಲ್ಲಿ ಸೂರ್‍ಯನನ್ನು ಹೊತ್ತು ಸಾಗುವ ರಥವನ್ನು ಓಡಿಸುವ ಸಾರಥಿ ಆಗುತ್ತಾಳೆ. ಭಾರಿ ದೇಹದ ತೋಳವು ಅವಳನ್ನು ದಿನವೂ ಬೆನ್ನಟ್ಟುವುದರಿಂದ, ಅವಳು ಅವಸರದಿಂದಲೇ ಸೂರ್‍ಯನರಥವನ್ನು ಓಡಿಸಬೇಕಾಗಿದೆ. ಚಂದಿರ ಆಗಸದಲ್ಲಿ ನಿಧಾನವಾಗಿಯೇ ಚಲಿಸುತ್ತಿದ್ದಾನೆ. ಏಕೆಂದರೆ, ಅವನನ್ನು ಯಾರೂ ಬೆದರಿಸುತ್ತಿಲ್ಲ.

ದೇವರ ಮಕ್ಕಳು ಏನೆಲ್ಲಾ ಮಾಡಿದರೂ ಪೃಥ್ವಿಯಿಂದ ಸ್ವರ್ಗಕ್ಕೆ ಸಾಗುವ ಪಥವನ್ನು ಮುಟ್ಟಲಿಲ್ಲ. ಸ್ವರ್ಗದ ಸಾಗುವ ಪಥ ಎಂದರೆ ಅದು ಆಗಸದಲ್ಲಿ ಮೂಡುವ ಕಾಮನ ಬಿಲ್ಲು. ದೇವರುಗಳ ಸೃಷ್ಟಿಯ ಕಾಲದಲ್ಲಿಯೇ ಅದು ಅಸ್ತಿತ್ವಕ್ಕೆ ಬಂದಿದೆ ಎನ್ನುವುದಕ್ಕೆ ಅದರ ಏಳು ಬಣ್ಣಗಳೇ ಸಾಬೀತುಪಡಿಸುತ್ತವೆ. 

ಆದರೆ, ಅದು ಸದಾ ಕಾಲ ಅಸ್ತಿತ್ವದಲ್ಲೇ ಇರುವುದಿಲ್ಲ. ಅದಕ್ಕೂ ಒಂದು ಕಾರಣವಿದೆ. ದಕ್ಷಿಣ ದಿಕ್ಕಿನ ವಿಶ್ವ ವಿನಾಶಕ ಬೆಂಕಿಯ ಲೋಕ `ಮುಸ್ಪೆಲ್ ನಲ್ಲಿರುವ ಜನ, ಅದರ ಮೇಲಿಂದ ಸ್ವರ್ಗಕ್ಕೆ ಹೋಗಲು ಯತ್ನಿಸಿದಾಗಲೆಲ್ಲಾ ಅದು ಕುಸಿದು ಬೀಳುತ್ತಿರುತ್ತದೆ.

=====================


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...