ಭಾಗ - 3
ಅಭಿಗೆ ಉತ್ತರಿಸುವ ಯಾವ ಗೋಜಿಗೂ ಹೋಗದೆ ಮುಂದೆ ಕಾಣುತ್ತಿರುವ ವನದುರ್ಗೆಯ ಮೂರ್ತಿಯನ್ನೇ ದಿಟ್ಟಿಸುತ್ತಾ ತನ್ನ ಗತವನ್ನು ಹೀಗೆ ಮೆಲುಕು ಹಾಕುತ್ತಿರುವ ಚಾರ್ವಾಕ, ಈಗ, ದಿನ–ತಿಂಗಳುಗಳ ಲೆಕ್ಕ ಹಾಕುತ್ತಿದ್ದಾನೆ – ತನ್ನ ಭಾವಪ್ರಪಂಚವನ್ನು ಪ್ರವೇಶ ಮಾಡಿ ಧೀಂಗಿಣವಿಡುತ್ತಿರುವ ಹೆಜ್ಜೆಯ ಪರಿಚಯವಾಗಿ ಸಮಯವೆμÁ್ಟಯಿತೆಂದು. ಪಾಂಡವಪುರ ನಗರದ ಪ್ರತಿಷ್ಠಿತ ಕಾಲೇಜಲ್ಲಿ ಓದಿ, ವಿಶ್ವವಿದ್ಯಾಲಯದ ಮೆಟ್ಟಿಲನ್ನು ತುಳಿದು ಸಮಾಜ, ಕಲೆ, ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ ಚಾರ್ವಾಕನಿಗೆ ಬಾಪು ಗಾಂಧಿ ಅಂದರೆ ಪುಳಕ. ಹಾಗಾಗಿ ಅವನದ್ದು ಮೊಬೈಲಲ್ಲಿ ಸದಾ ಗಾಂಧಿ ಕುರಿತ ವೀಡಿಯೋದ ಹುಡುಕಾಟ. ಇದು ಅವನಿಗೆ ದಣಿವಿರದ ಸಂಭ್ರಮದ ಕೆಲಸ. ಹೀಗೆ ಐದಾರು ತಿಂಗಳುಗಳ ಹಿಂದೆ ಯು-ಟ್ಯೂಬ್‍ನಲ್ಲಿ ಗಾಂಧಿಯ ಕುರಿತ ವೀಡಿಯೋವೊಂದನ್ನು ಹುಡುಕುತ್ತಿರಬೇಕಾದರೆ ಆಕಸ್ಮಿಕವಾಗಿ ಸಿಕ್ಕ ವ್ಯಕ್ತಿ ಮೇಳದ ಆಟದ ಶಂಕರನಾರಾಯಣ ಆಚಾರ್ಯರು. ಆದ್ರೆ ಈ ಆಚಾರ್ಯರು ಇಂದು ತನ್ನೊಳಗೆ ಇμÉ್ಟೂಂದು ಆವರಿಸಿಕೊಂಡಿರುವುದನ್ನು ಅವನಿಗೇ ನಂಬಲು ಸಾಧ್ಯವಾಗುತ್ತಿಲ್ಲ. ಆ ಒಂದು ರಾತ್ರಿ ಯು-ಟ್ಯೂಬಲ್ಲಿ ಈ ಆಚಾರ್ಯರ ಸಂದರ್ಶನವೊಂದರ ವೀಡಿಯೋ ತುಣುಕೊಂದನ್ನು ಅಚಾನಕ್ಕಾಗಿ ಕಂಡ. ಕಲೆ, ಸಾಹಿತ್ಯದ ಕುರಿತು ಹುಚ್ಚನ್ನು ಬೆಳೆಸಿಕೊಂಡಿದ್ದ ಚಾರ್ವಾಕನಿಗೆ ಹಿರಿ ಕಲಾವಿದರ ಮಾತುಗಳನ್ನು ಕೇಳುವುದೆಂದರೆ ಎಲ್ಲಿಲ್ಲದ ಖುಷಿ. ಹಾಗಾಗಿ ಏನು ಹೇಳುತ್ತಾರೆ ನೋಡೋಣ ಎಂದು ಆಚಾರ್ಯರ ಮಾತುಗಳನ್ನು ಸಂಪೂರ್ಣ ಆಲಿಸಿದ. ಕಲೆಯ ಕುರಿತಂತೆ ಚಾರ್ವಾಕನಿಗೆ ರುಚಿಸುವ ಅನೇಕ ಮಾತುಗಳನ್ನು ಅಲ್ಲಿ ಆಚಾರ್ಯರು ಆಡಿದ್ದರು. ಯಕ್ಷಗಾನದ ಬಗ್ಗೆ ತನ್ನದೇ ಸರಿ ಎಂಬ ಹಠವಿಲ್ಲದ ಅವರ ನಿಲುವು, ಹೊಸ ವಿಚಾರಗಳಿಗೆ ಮತ್ತು ಪ್ರಯೋಗಗಳಿಗೆ ತೆರೆದುಕೊಳ್ಳುವ ಅವರ ಒಲವು- ಇವೆಲ್ಲವೂ ಚಾರ್ವಾಕನನ್ನು ಸೆಳೆದಿದ್ದವು.
ಹಾಗೆ ನೋಡಿದ್ರೆ ಶಂಕರನಾರಾಯಣ ಆಚಾರ್ಯರದ್ದು
ಚಾರ್ವಾಕನಿಗೆ ಎಂದೂ ಕೇಳಿರದ ಹೊಸ ಹೆಸರೇನೂ ಅಲ್ಲ. ಕರಾವಳಿಯ ಎಲ್ಲ ಹುಡುಗರಂತೆ ಚಾರ್ವಾಕನೂ
ಬಾಲ್ಯದಲ್ಲಿ ಆಟದ ಹುಚ್ಚನ್ನು ಬೆಳೆಸಿಕೊಂಡಿದ್ದವನು. ಅನೇಕ ವರ್ಷಗಳ ಹಿಂದೆ ಶಂಕರ ನಾರಾಯಣ
ಆಚಾರ್ಯರ ತಿರುಗಾಟದ ಮೇಳ ದೇವಪುರ, ಹೊಸನಗರ ಮತ್ತು
ಸುತ್ತಮುತ್ತಲ ಊರಲ್ಲಿ ಪ್ರದರ್ಶನಕ್ಕೆಂದು ಬಂದಾಗ ಆಟ ನೋಡಿದ್ದುಂಟು. ಮಳೆಗಾಲದಲ್ಲಿ ಆμÁಢಮಾಸದಲ್ಲಿ ಸಂಪಿಗೆಪುರದ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿದ್ದ ತಾಳಮದ್ದಲೆ ಸಪ್ತಾಹ
ಕೂಟಕ್ಕೆ ಪ್ರತೀವರ್ಷವೂ ಆಚಾರ್ಯರು ತಪ್ಪದೆ ಬರುತ್ತಿದ್ದರು. ಆಗೆಲ್ಲ ಚಾರ್ವಾಕ ಅಲ್ಲಿಗೆ ಹೋಗಿ ಆಚಾರ್ಯರ
ಅರ್ಥಗಾರಿಕೆ ಕೇಳಿದ್ದುಂಟು. ಅದು ಬಿಟ್ಟರೆ ಆಚಾರ್ಯರನ್ನು ತೀರಾ ಹತ್ತಿರದಲ್ಲಿ ನೋಡಿದ್ದು, ಮಾತಾಡಿಸಿದ್ದು ಚಾರ್ವಾಕನಿಗೆ ನೆನಪಿಲ್ಲ. ಅದರಲ್ಲೂ ಆ ಕಾಲಕ್ಕೆ ಯಕ್ಷಗಾನ ಕಲಾವಿದರಿಗೆಲ್ಲ
ಅಹಂ ಜಾಸ್ತಿ ಎಂಬ ಪುಕಾರು ಊರಲ್ಲೆಲ್ಲ ಹರಡಿದ್ದ ಕಾರಣಕ್ಕಾಗಿ ಚಾರ್ವಾಕನಿಗೆ ಚೌಕಿಗೆ ಹೋಗೋದು, ಕಲಾವಿದರಲ್ಲಿ ಮಾತಾಡಿಸುವುದರ ಬಗ್ಗೆ ಅಂಜಿಕೆ ಇತ್ತು. ಮುಂದೆ ಅನೇಕ ವರ್ಷಗಳ ಕಾಲ ಚಾರ್ವಾಕ
ಬೆಂಗಳೂರಲ್ಲಿ ಖಾಸಗಿ ಕಾಲೇಜೊಂದರಲ್ಲಿ ಕೆಲಸದಲ್ಲಿದ್ದ. ಇದರಿಂದಾಗಿ ಆಟದ ಸಂಪರ್ಕ ಸಂಪೂರ್ಣ
ತಪ್ಪಿಹೋಯಿತು, ಬರ ಬರುತ್ತಾ ಆಸಕ್ತಿಯೂ
ಕಡಿಮೆಯಾಗಿತ್ತು. ಅಲ್ಲಿಂದ ದೇವಪುರಕ್ಕೆ ವಾಪಾಸ್ ಬಂದು ಪಾಂಡವಪುರದಲ್ಲಿ ಕೆಲಸ ಸಿಕ್ಕು ಅನೇಕ
ವರ್ಷಗಳಾದರೂ ತೀರಾ ಇತ್ತೀಚಿನವರೆಗೂ ಆಟದ ಬಗ್ಗೆ ಅವನಲ್ಲಿ ಅಂಥಾ ಉತ್ಸಾಹ ಏನೂ ಇರಲಿಲ್ಲ.
ಈಗ ಮತ್ತೆ ಆಚಾರ್ಯರ ಕಾರಣಕ್ಕಾಗಿ ಯಕ್ಷಲೋಕದ ಬಗ್ಗೆ
ಸ್ವಲ್ಪ ಮಟ್ಟಿನ ಆಸಕ್ತಿ ಚಿಗುರಿದೆ. ಯು-ಟ್ಯೂಬಲ್ಲಿ ಒಮ್ಮೆ ನೋಡಿದ ವೀಡಿಯೋಗಳನ್ನೇ ಮತ್ತೆ
ಮತ್ತೆ ನೋಡುವ ಚಟವನ್ನು ಬೆಳೆಸಿಕೊಂಡಿದ್ದಾನೆ. ಯು-ಟ್ಯೂಬಲ್ಲಿ ಲಭ್ಯವಿರುವ ಆಚಾರ್ಯರ ಎಲ್ಲ
ಪಾತ್ರಗಳನ್ನು ನೋಡಿದ ಚಾರ್ವಾಕನಿಗೆ ಆಚಾರ್ಯರನ್ನು ಎಷ್ಟು ನೋಡಿದರೂ ದಣಿವಿಲ್ಲ. ಮೊನ್ನೆ
ಮೊನ್ನೆಯವರೆಗೂ ಆಟ ಅಂದ್ರೆ ಬೋರ್ ಎಂದು ವಟಗುಟ್ಟುತ್ತಿದ್ದ ಈತ, ಈಗ ಆಚಾರ್ಯರ ಪಾತ್ರಗಳಲ್ಲಿ ತನ್ಮಯನಾಗಿದ್ದಾನೆ. ಮಧ್ಯರಾತ್ರಿಯವರೆಗೆ ಕೂತು ವೀಡಿಯೋ ನೋಡುವ
ಈತ ನಿಂತಲ್ಲಿ ಕೂತಲ್ಲಿ ಪ್ರಯಾಣದಲ್ಲೂ ನಿದ್ರಿಸುವ ಸ್ಥಿತಿಗೆ ತಲುಪಿದ್ದಾನೆ. ಅಚಾರ್ಯರು
ನಿರ್ವಹಿಸುವ ಪಾತ್ರಗಳು ತನಗೆ ಯಾಕೆ ಇಷ್ಟ
ಎಂಬುದನ್ನು ಒಮ್ಮೊಮ್ಮೆ ತನ್ನ ಮನಸ್ಸಿಗೆ ಕೇಳಿಕೊಳ್ಳುತ್ತಾನೆ, ಹಾಗೆಲ್ಲ ಯೋಚನೆ ಬಂದಾಗ – ಆಚಾರ್ಯರ ಸ್ಫುರದ್ರೂಪೀ ಸಮಸುಂದರ ಆಕಾರ, ಆಕರ್ಷಕ ನೀಲಿ ಕಣ್ಣು, ಹದವಾದ ಎತ್ತರ, ಈಡು-ಜೋಡಿಲ್ಲದ ಸವಾರ್ಂಗ ಸುಂದರ ವೇಷ ಅವನ ಕಣ್ಣ ಮುಂದೆ ನಾಟ್ಯವಾಡುತ್ತದೆ. ಕೈಯ ಚುರುಕಿನ
ಚಲನೆ, ಕಣ್ಣು-ಹುಬ್ಬುಗಳ ನಲಿದಾಟ, ರಾಜ ಅಂದ್ರೆ ಥೇಟ್ ರಾಜನೇ. ದೇಹವನ್ನು ಹಿಗ್ಗಿಸಿ-ಕುಗ್ಗಿಸಿ ಮುಂತಿಲ್ಲ-ಪಿಂತಿಲ್ಲವೆಂಬ
ರೀತಿಯ ಮನಮೋಹಕ ನಾಟ್ಯ, ಗತ್ತಿನ-ಶಿಸ್ತಿನ ರಂಗ ನಡೆ, ಸೂಕ್ಷ್ಮ ರಂಗಪ್ರಜ್ಞೆ, ಎಲ್ಲವೂ ಬಿಡಿ ಬಿಡಿಯಾಗಿ
ಆತನ ಕಣ್ಣ ಮುಂದೆ ಬಂದು ನಿಲ್ಲುತ್ತವೆ. ಗದಾಯುದ್ಧದ ಸುಯೋಧನನಾಗಿ, ಕರ್ಣಪರ್ವದ ಕರ್ಣನಾಗಿ, ಕೃμÁ್ಣರ್ಜುನದ ಅರ್ಜುನನಾಗಿ, ಪಾದುಕಾ ಪ್ರದಾನದ ಭರತನಾಗಿ
ಆಚಾರ್ಯರ ಭಾವತುಂಬಿದ ನೈಜಾಭಿನಯ ಚಾರ್ವಾಕನ ಮನಸೂರೆಗೊಂಡಿತ್ತು. ಬೆಳಗ್ಗಿನ ಜಾವದ ರಕ್ತಬೀಜಾಸುರನ
ಪ್ರವೇಶ, ಮಧ್ಯರಾತ್ರಿ ಮೂರು ಗಂಟೆಯ
ವೇಳೆಗೆ ಪ್ರವೇಶವಾಗುವ ಋತುಪರ್ಣ, ಇಂದ್ರಜಿತುವಿನಂಥಾ
ಪಾತ್ರಗಳಿಗೆ ಆಚಾರ್ಯರು ಜೀವ ತುಂಬುತ್ತಾ ರಂಗಸ್ಥಳದಲ್ಲಿ ಪೌರಾಣಿಕ ಮಾಯಾಲೋಕವನ್ನು ಸೃಷ್ಟಿಸುವ
ಬಗೆಯನ್ನು ಚಾರ್ವಾಕ ಕಣ್ಮನ ತುಂಬಿಕೊಳ್ಳುತ್ತಾನೆ,
ಸಂಪೂರ್ಣ
ರಸಾನಂದದಲ್ಲಿ ತೇಲಿ ಹೋಗುತ್ತಾನೆ. ಆಚಾರ್ಯರ ಈ ಎಲ್ಲ ವೇಷಗಳನ್ನು ನೋಡಿದ ಚಾರ್ವಾಕ ಆಚಾರ್ಯರಿಗೆ
ರಂಗಸ್ಥಳದಲ್ಲಿ ನಿಜಕ್ಕೂ ಸರಿಸಾಟಿ ಯಾರೂ ಇಲ್ಲ ಅಂತ ಯೋಚಿಸುತ್ತಿದ್ದ.
ಆಚಾರ್ಯರ ಇಂಥಾ ಅದ್ಭುತ ಪಾತ್ರ ಪ್ರಸ್ತುತಿಯನ್ನು ಕಂಡು ರಾತ್ರಿ ಬೆಳಗಾಗುವುದರೊಳಗಾಗಿ
ಅವರ ದೊಡ್ಡ ಅಭಿಮಾನಿಯಾದ ಚಾರ್ವಾಕನಿಗೆ ಅವರ ಪ್ರಭಾವಲಯದಿಂದ ಹೊರಬರಲು ಸಾಧ್ಯವಾಗಲೇ ಇಲ್ಲ. `ಅಯ್ಯೋ ಇಂಥಾ ಅದ್ಭುತ ಕಲಾವಿದರ ಬಗ್ಗೆ ನಾನು ಮೊದಲೇ ತಿಳಿದುಕೊಳ್ಳಲೇ ಇಲ್ವಲ್ಲ, ನಾನೆಂಥ ಮುಠ್ಠಾಳ, ನನ್ನ ವಿಸ್ಮೃಗೆ
ಏನೆನ್ನಲ್ಲಿ’ ಎಂದು ತನ್ನನ್ನು ಹಳಿಯುತ್ತ ಹೇಗಾದರೂ ಮಾಡಿ ಇವರಲ್ಲಿ ಮಾತಾಡಲೇ ಬೇಕು’ ಎಂದು
ನಿರ್ಧರಿಸಿ ಗೆಳೆಯರೊಬ್ಬರಿಗೆ ಫೆÇೀನಾಯಿಸಿ ನಂಬರ್ ಪಡೆದೇ
ಬಿಟ್ಟ. ಆದರೆ ಎಷ್ಟು ವೇಗವಾಗಿ ನಂಬರ್ ಪಡೆದುಕೊಂಡನೋ ಅಷ್ಟೇ ವೇಗವಾಗಿ ತನ್ನ ಭಾವನೆಯನ್ನು
ಹಿಡಿದಿಟ್ಟು ಫೆÇೀನ್ ಮಾಡಲು ಹಿಂದೇಟು
ಹಾಕಿದ. ಆ ಹೊತ್ತು ಅಂಜಿದ. `ಅವರಲ್ಲಿ ಏನೆಂದು ಮಾತಾಡಲಿ, ಇತ್ತೀಚೆಗೆ ನಾನು ಆಟವನ್ನೂ ಬೇರೆ ನೋಡುತ್ತಿಲ್ಲ, ಯಕ್ಷಗಾನದ ಅಪ್‍ಡೇಟ್ಸ್ ನನಗೇನೂ ತಿಳಿದಿಲ್ಲ,
ಅಲ್ಲದೆ ಆ
ಅಜ್ಜ ನೋಡುವಾಗಲೂ ಅಷ್ಟೊಂದು ಜೋವಿಯಲ್ ಆಗಿ ಇರುವ ಹಾಗೆ ಕಾಣಲ್ಲ, ಅವರ ಮುಖದಲ್ಲಿ ನಗುವೆಂಬುದೇ ಇಲ್ಲ’ ಎಂದು ಮಾತಾಡುವುದನ್ನು ಮುಂದಕ್ಕೆ ಹಾಕಿದ. ಹೀಗೆ ವಾರ
ಮುಂದೆ ಹೋಯಿತು, ಎರಡು ವಾರ ಕಳೆಯಿತು. ಈ
ನಡುವೆ ತನ್ನ ಕೆಲಸದ ನಡುವೆಯೂ ಚಾರ್ವಾಕನಿಗೆ ಆಚಾರ್ಯರು ಆಗಾಗ ನೆನಪಾಗುತ್ತಿದ್ದರು. ಕೊನೆಗೆ
ಒಂದು ಸಂಜೆ ಗಟ್ಟಿ ಮನಸ್ಸು ಮಾಡಿ ಕರೆ ಮಾಡಿಯೇ ಬಿಟ್ಟ. ಫೆÇೀನ್ ರಿಂಗಾಗುತ್ತಿತ್ತು. ಇತ್ತ ಇವನ ಎದೆಯ ಢವಢವ ಬಡಿತ ಜೋರಾಗಿ ತನಗೆ ಮಾತ್ರವಲ್ಲ
ಪಕ್ಕದಲ್ಲಿ ಇದ್ದವರಿಗೂ ಕೇಳಿಸುವ ಸಾಧ್ಯತೆ ಇತ್ತು. ಅಷ್ಟು ಹೆದರಿದ್ದ. ಯಾಕೆ ಈ ಹೆದರಿಕೆ
ಎಂಬುದು ಅವನಿಗೆ ಈ ಹೊತ್ತಿನವರೆಗೂ ತಿಳಿದಿಲ್ಲ. ಆಚಾರ್ಯರು ತಾನು ಮಾತಾಡುತ್ತಿರುವುದು ಹೊಸ
ವ್ಯಕ್ತಿಯಲ್ಲಿ ಎಂಬ ಯಾವ ಭಾವನೆಯನ್ನು ತೋರಿಸದೆ ಪರಿಚಿತರಲ್ಲಿ ಮಾತಾಡುವಂತೆಯೇ ಮಾತಾಡಿದ್ದರು.
ತಮ್ಮ ಬದುಕಿನ ದೀರ್ಘ ಪಯಣದಲ್ಲಿ ಅಪಾರ ಅನುಭವವನ್ನು ಹೊಂದಿರುವ, ಸಾವಿರಾರು ಅಭಿಮಾನಿಗಳನ್ನು ಪಡೆದಿರುವ ಅವರಿಗೆ ಇವನು ಇನ್ನೊಬ್ಬ ಅನ್ನಿಸಿರಲೂಬಹುದು. ತಾನೊಬ್ಬ
ದೊಡ್ಡ ಕಲಾವಿದ ಎಂಬ ಯಾವ ಅಹಂ ಇಲ್ಲದೆ ಮನುಷ್ಯನಿಗೆ ನೀಡಬೇಕಾದ ಎಲ್ಲ ಗೌರವವನ್ನು ಕೊಟ್ಟು
ಪ್ರೀತಿಯಿಂದಲೇ ಆ ದಿನ ಅವರು ಮಾತಾಡಿದ್ದರು. ಅಂಥಾ ಆಚಾರ್ಯರನ್ನು ಮೊದಲೇ ಭಾವಜೀವಿಯಾದ ಚಾರ್ವಾಕ
ಅಲ್ಲಿಂದ ನಂತರ ಬಿಟ್ಟು ಬಿಡಲು ಕಾರಣಗಳೇ ಇರಲಿಲ್ಲ. ತಾನೂ ಕಲೆಯಲ್ಲಿ ಸೇರಬೇಕು, ಏನಾದರೂ ಆಗಬೇಕು, ಕೊನೆಯ ಪಕ್ಷ ನಾಲ್ಕು
ಹೆಜ್ಜೆಯನ್ನಾದರೂ ಕಲೀಬೇಕು ಎಂಬ ಆಸೆ ಹುಟ್ಟಿದ್ದೇ ಇಲ್ಲಿಂದ, ಇದೇ ಆಚಾರ್ಯರಿಂದ.
ಅಷ್ಟೂ ಹೊತ್ತು ತಾಳ್ಮೆವಹಿಸಿ ಮೌನವಾಗಿಯೇ ಇದ್ದ ಅಭಿ
ಈಗ ತುಸು ವ್ಯಗ್ರನಾಗಿದ್ದಾನೆ. ಕಣ್ಣು ಕೆಂಪಾಗಿದೆ. ಚಾರ್ವಾಕನ ಅನ್ಯಮನಸ್ಕತೆಯನ್ನು ಭೇದಿಸುವ
ರೀತಿಯಲ್ಲಿ `ಲೋ ಯಾಕೆ ಹಿಂಗೆ ತಲೆಗೆ
ಏಟಾದವರ ಹಾಗೆ ವರ್ತಿಸುತ್ತಿದ್ದೀಯಾ? ನಾನು ಕೇಳಿದ್ದೇನು? ನೀನಿಲ್ಲಿ ಮಾಡ್ತಿರೋದೇನು?” ಎಂದು ಸ್ವಲ್ಪ ಗಟ್ಟಿಯಾಗಿಯೇ
ಕೇಳಿದ. ಚಾರ್ವಾಕನಿಗೆ ಈಗ ಮಾತು ತಪ್ಪಿಸಲು ನೆವನವಿಲ್ಲ. ಈ ಕ್ಷಣಕ್ಕೆ ಇವನ
ಬಾಯಿಮುಚ್ಚಿಸಬೇಕೆಂದು ನಿರ್ಧರಿಸಿ ಎಲ್ಲ ಅಲ್ಲದಿದ್ದರೂ ಅಧರ್ಂಬರ್ಧ ಹೇಳಿ ಇಲ್ಲಿಂದ ತಾನು ಜಾಗ
ಖಾಲಿ ಮಾಡಬೇಕು ಎಂದು ಯೋಚಿಸುತ್ತಾ, “ನನಗೆ ಬೇರೆ ಏನಾದರೂ ಮಾಡಬೇಕು
ಎಂದು ಅನ್ನಿಸಲು ಶುರುವಾಗಿದೆ. ಈಗ ನನ್ನಿಂದ ಏನೂ ಆಗ್ತಿಲ್ಲ. ನಾನು ಏನನ್ನೂ ಮಾಡ್ತಾ ಇಲ್ಲ.
ಒಂದು ಬಗೆಯ ಖಾಲಿತನ ನನ್ನನ್ನು ಕಾಡ್ತಾ ಇದೆ,
ನಾನೂ ಒಂದು
ಪಾತ್ರವಾಗಬೇಕು…” ಎಂದ.
“ಹೊಸತು ಏನು ಮಾಡೋದು? ಎಲ್ಲವೂ ಸರಿಯಾಗಿಯೇ ಇದೆ ಅಲ್ವ… ಪಾತ್ರನಾ..?
ಏನು ಪಾತ್ರ?” ಎಂದ ಅಭಿ ಏನೂ ಅರ್ಥವಾಗದೆ ಮುಗ್ಧನಾಗಿ.
“ಅಲ್ಲ, ಅದು ಹಾಗಲ್ಲ…”
“ಸದ್ದುಗದ್ದಲದ ದನಿಗಳಾಚೆಗೆ
ನಿಂತು ನಿಶ್ಯಬ್ದದಲ್ಲಿ ನನ್ನ ನಾನು ಕಾಣಬೇಕೆಂಬ ನನ್ನ ಬಯಕೆಯನ್ನು ಇವನಿಗೆ ಹೇಗೆ ಹೇಳಲಿ? ತಾರೆಗಳಿಂದ ತುಂಬಿದ ನಭವಾಗಿ ವಿಸ್ತಾರ ಚಾಚಿಕೊಳ್ಳಬೇಕೆಂಬ ನನ್ನ ಕನಸು ಇವನಿಗೆ ಅರ್ಥವಾದೀತೆ? ನನ್ನೊಳಗೆ ಇಷ್ಟೆಲ್ಲ ತುಂಬಿದೆ ಎಂದು ಇವನಿಗೆ ಅಥವಾ ಯಾರಿಗಾದರೂ ತಿಳಿಯಲು ಸಾಧ್ಯವೇ? ಇಲ್ಲ, ಸಾಧ್ಯವೇ ಇಲ್ಲ.” ಮತ್ತೆ
ಮೌನಕ್ಕೆ ಶರಣಾದ ಚಾರ್ವಾಕನನ್ನು ಕಂಡು ಅಭಿಗೆ ಏನನ್ನಿಸಿತೋ ಗೊತ್ತಿಲ್ಲ. ನೇರವಾಗಿ ತನ್ನ ಗಾಡಿಯ
ಹತ್ತಿರ ಬಂದು ಸ್ಟಾರ್ಟ್ ಮಾಡಿ ಹೊರಡುವ ಮೊದಲು ಹೇಳಿದ “ನಾನು ಹೊರಟೆ. ಮನೆಗೆ ತರಕಾರಿ ಕೊಂಡು
ಹೋಗ್ಬೇಕು. ಹಾಜಿಯಬ್ಬರ ಅಂಗಡಿಯ ಹತ್ತಿರ ಬರುವುದಾದರೆ ಬಾ. ಇಲ್ಲವಾದರೆ ನಾಳೆ ಸಿಗೋಣ…” ಸ್ವಲ್ಪ
ಹೊತ್ತು ತಡೆದು, ಮತ್ತೆ ಗಾಡಿ ತಿರುಗಿಸಿ
ದೇವಪುರದ ಮಾರ್ಗವನ್ನು ಹಿಡಿದ. ಗೆಳೆಯನಿಗೆ ಬೇಸರವಾದುದನ್ನು ಅರ್ಥೈಸಿಕೊಳ್ಳಲಾಗದಷ್ಟು ಮೂಢನಲ್ಲದ
ಚಾರ್ವಾಕ, ಕೊನೆಯಪಕ್ಷ ಇವನಲ್ಲಾದರೂ
ನನ್ನ ಮನಸ್ಸಿನ ಹೊಯ್ದಾಟವನ್ನು ಹೇಳಬಹುದಿತ್ತಲ್ಲ ಅಂತ ಒಂದು ಕ್ಷಣ ಅಂದುಕೊಂಡು, ಏನೂ ಹೇಳಲಾಗದ್ದಕ್ಕೆ ಬೇಸರಗೊಂಡು ತಾನೂ ಅಲ್ಲಿಂದ ಹೊರಟ.
No comments:
Post a Comment