ಡಿಸೆಂಬರ್ 3 ಎಂದಾಗ ಸಂತ ಫ್ರಾನ್ಸಿಸ್ ಕ್ಷೇವಿಯರ್ ಅವರು ನೆನಪಾಗುತ್ತಾರೆ. ಡಿಸೆಂಬರ್ 3 ಸಂತ ಫ್ರಾನ್ಸಿಸ್ ಕ್ಷೇವಿಯರ್ ಅವರ ಪುಣ್ಯತಿಥಿಯ ದಿನ. ಅಂದು ದೇಶದಲ್ಲಿರುವ ಅವರ ಹೆಸರಿನ
ಗುಡಿ(ಚರ್ಚು)ಗಳಲ್ಲಿ ಗುಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಒಂಬತ್ತು ದಿನಗಳ
ಹಿಂದಿನಿಂದಲೇ ಹಬ್ಬದ ಸಡಗರಕ್ಕೆ ನಾಂದಿ ಹಾಡಲಾಗುತ್ತದೆ.
ಅವರನ್ನು ಪೂರ್ವದ ನಾಡಿನ ಅಪೋಸ್ತಲರು ಎಂದು
ಗುರುತಿಸಲಾಗುತ್ತದೆ. ಜೊತೆಗೆ ಅವರ ಪಾರ್ಥಿವ ಶರೀರವನ್ನು ಶತಮಾನಗಳು ಉರುಳಿದರೂ ಗೋವಾದ `ಬಸೀಲಿಕ ದೊ ಬೋಮ್ ಜೇಸುಸ್’ದಲ್ಲಿ ಇನ್ನೂ ನೋಡಲು ಸಾಧ್ಯವಿದೆ ಎನ್ನುವುದೇ ಒಂದು
ನಂಬಲಸಾಧ್ಯವಾದ ಅಚ್ಚರಿಯ ಸಂಗತಿ.
ನಿಸರ್ಗದ ನಿಯಮಗಳನ್ನು ಮೀರಿರುವ ಅವರ ಶವದ ದೆಸೆಯಿಂದ
ಗೋವಾ ರಾಜ್ಯವು `ಬಸೀಲಿಕ ದೊ ಬೋಮ್ ಜೇಸುಸ್’
ವಿಶ್ವದಾದ್ಯಂತ ಹರಡಿರುವ ಕ್ರೈಸ್ತ ಬಾಂಧವರನ್ನು ತನ್ನತ್ತ ಸೆಳೆಯುತ್ತಾ ಬಂದಿದೆ.
ಪಾರಂಪರಿಕ ಕಟ್ಟಡ ಈ ಬಸೀಲಿಕ:
ಸುಮಾರು 400ಕ್ಕೂ ಅಧಿಕ ವರ್ಷಗಳ ಕಾಲ
ಗೋವಾದ ಮೇಲೆ ಆಧಿಕಾರ ಸ್ಥಾಪಿಸಿದ್ದ ಪೋರ್ಚುಗೀಜರು,
ತಮ್ಮ
ಪ್ರಭುತ್ವದ ವೈಭವವನ್ನು ಜಗತ್ತಿಗೆ ಸಾರಲು,
ತಮ್ಮ ಮೊದಲ
ಆಡಳಿತ ಕೇಂದ್ರವಾಗಿದ್ದ ಹಳೆಯ ಗೋವಾದಲ್ಲಿ,
ಹಲವಾರು ಭಾರಿ
ಗಾತ್ರದ ಮಿಶಾಲವಾದ ಇಮಾರತುಗಳನ್ನು ನಿರ್ಮಿಸಿದ್ದರು. ಅವುಗಳಲ್ಲಿ ಆಡಳಿತ ಸೌಧಗಳು, ಚರ್ಚುಗಳೂ ಸೇರಿವೆ. `ಬಸೀಲಿಕ ದೊ ಬೋಮ್ ಜೇಸುಸ್’
ಕಟ್ಟಡವು ಅವರ ಕಾಲದ ನಿರ್ಮಾಣ. ಬಸೀಲಿಕದ ಕನ್ನಡ ಅನುವಾದ `ಮಹಾದೇವಾಲಯ’ ಎಂದಾಗುತ್ತದೆ.
ಸಂತ ಫ್ರಾನ್ಸಿಸ್ ಕ್ಷೇವಿಯರ್ ಅವರ ಶವ ಸಂಪುಟವಿರುವ `ಬಸೀಲಿಕ ದೊ ಬೋಮ್ ಜೇಸುಸ್’- ಮಹಾದೇವಾಲಯವಾಗಿರುವ ಈ ಪುಣ್ಯಕ್ಷೇತ್ರದ ಕಟ್ಟಡಕ್ಕೆ ಈಗ ಸರಿ
ಸುಮಾರು 400 ವರ್ಷಗಳ ಇತಿಹಾಸವಿದೆ. `ಬಸೀಲಿಕ ದೊ ಬೋಮ್ ಜೇಸುಸ್’ ಕಟ್ಟಡವನ್ನು 1594-1602ರ ನಡುವೆ ನಿರ್ಮಿಸಲಾಗಿದೆ.
ದಾಖಲೆಗಳ ಪ್ರಕಾರ, ಅಂದಿನ ಮೇತ್ರಾಣಿಗಳು (ಬಿಷಪ್ಪರು) 1605ರ ಮೇ ತಿಂಗಳಲ್ಲಿ ಈ ಚರ್ಚ
ಕಟ್ಟಡವನ್ನು ಆಶೀರ್ವದಿಸಿ, ಅಲ್ಲಿ ವಿಧ್ಯುಕ್ತವಾಗಿ
ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲು ಅನುವಾಗುವಂತೆ ಅಭಿಷೇಕಿಸುತ್ತಾರೆ. ಜಂಬಿಟ್ಟಿಗೆಯಿಂದ ಪ್ರತ್ಯೇಕವಾಗಿ ನಿಲ್ಲುವ ಈ ಬಸಿಲಿಕ
ಕಟ್ಟಡದ ಲಕ್ಷಣಗಳನ್ನು ಗಮನಿಸಿ, ವಿಶ್ವಸಂಸ್ಥೆಯ ಯುನೆಸ್ಕೋ
ಸಂಘಟನೆಯು, ಅದನ್ನು ವಿಶ್ವ ಪಾರಂಪರಿಕ
ತಾಣಗಳ ಪಟ್ಟಿಗೆ ಸೇರಿಸಿದೆ.
ಸಿಂಗಾರಗೊಳ್ಳುವ ಹಳೆಯ ಗೋವಾ:
ಪೂರ್ಚುಗೀಜರು ಹಳೆಯ ಗೋವಾದಲ್ಲಿ ನಿರ್ಮಿಸಿರುವ
ಚರ್ಚುಗಳ ಸಮೂಹ ಮತ್ತು ಸಂತ ಫ್ರಾನ್ಸಿಸ್ ಕ್ಷೇವಿಯರ್ ಅವರ ಪುಣ್ಯಕ್ಷೇತ್ರದ ಹಿನ್ನೆಲೆಯಲ್ಲಿ
ಗೋವಾವನ್ನು ಪೂರ್ವದ ರೋಮ್ ಎಂದೂ ಕರೆಯಲಾಗುತ್ತದೆ. ರೋಮ ಪಟ್ಟಣವು ಕಥೋಲಿಕರ ಜಗದ್ಗುರು ಪಾಪು
ಸ್ವಾಮಿಗಳು ವಾಸಿಸುವ ಊರು.
ಡಿಸೆಂಬರ್ ಬರುತ್ತಿದ್ದಂತೆಯೇ ಸಂತ ಫ್ರಾನ್ಸಿಸ್
ಕ್ಷೇವಿಯರ್ ಅವರ ಸ್ಮರಣೆಯ ವಾರ್ಷಿಕ ಹಬ್ಬ ಮತ್ತು ಅದೇ ಮಾಸದ ಕೊನೆಯಲ್ಲಿ ಬರುವ ಯೇಸುಸ್ವಾಮಿಯ ಹುಟ್ಟುಹಬ್ಬವನ್ನು
ಸಂಭ್ರಮಿಸುವ ಕ್ರಿಸ್ಮಸ್ ಬರುವುದರಿಂದ ಗೋವಾವು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುವುದನ್ನು
ನೋಡಿಯೇ ಕಣ್ತುಂಬಿಕೊಳ್ಳಬೇಕು.
ಯುರೋಪ ಖಂಡದ ಸ್ಪೇನ್ ದೇಶದಲ್ಲಿ 1506ರಲ್ಲಿ ಹುಟ್ಟಿದ ಫ್ರಾನ್ಸಿಸ್ ಕ್ಷೇವಿಯರ್ ಅವರು, ಕಥೋಲಿಕ ಕ್ರೈಸ್ತ ಪಂಥದ ಧರ್ಮಪ್ರಚಾರಕ ಗುರುಗಳ ಸಭೆಯಾದ ಯೇಸುಸಭೆಯ (ಜೆಸ್ವಿಟ್) ಸಂಸ್ಥಾಪಕ ಗುರುಗಳಲ್ಲಿ
ಒಬ್ಬರಾಗಿದ್ದಾರೆ. ಅವರು ತಮ್ಮ 35ರ ಹರೆಯದಲ್ಲಿ ಕಥೋಲಿಕರ
ಜಗದ್ಗುರು ರೋಮಿನಲ್ಲಿರುವ ಪಾಪು ಸ್ವಾಮಿಗಳಿಂದ ಅವರ ಪ್ರತಿನಿಧಿಯಾಗಿ ನಿಯುಕ್ತಿಗೊಂಡು 1542ರ ಮೇ ತಿಂಗಳಲ್ಲಿ ಗೋವೆಯನ್ನು ತಲುಪುತ್ತಾರೆ.
ಕುಲೀನ ಕುಟುಂಬದ ಸದಸ್ಯ:
ಫ್ರಾನ್ಸಿಸ್ ಕ್ಷೇವಿಯರ್ ಅವರು ಸ್ಪೇನ್ ದೇಶದ ಬಾಸ್ಕ
ಪ್ರದೇಶದ ನವರ್ರೆ ಸಂಸ್ಥಾನಕ್ಕೆ ಸೇರಿದ ಒಂದು ಕುಲೀನ ಮನೆತನದ ಕುಡಿ. ಐವರ ಮಕ್ಕಳ ಕುಟುಂಬದಲ್ಲಿ
ಕೊನೆಯವರಾದ ಇವರ ಮೇಲೆ ಕುಟುಂಬದಲ್ಲಿನ ಎಲ್ಲರಿಗೂ ಪ್ರೀತಿ. ಸಾಂಪ್ರದಾಯಿಕ ಕಥೋಲಿಕ ಪಂಥದ
ಕುಟುಂಬವು ತನ್ನ ದೇಸಗತಿಯ ವಾಡೆಯಲ್ಲಿಯೇ ಒಂದು ಕಿರಿಗುಡಿಯನ್ನು ಹೊಂದಿತ್ತು. ಚಾಪೆಲ್ ಎಂದು
ಕರೆಯಲಾಗುವ ಇದು, ಒಂದು ಬಗೆಯಲ್ಲಿ ಖಾಸಗಿ
ದೇವಾಲಯ/ಆರಾಧನಾ ಮಂದಿರ ಮತ್ತು ಅದರ ಗಾತ್ರವು
ಚಿಕ್ಕದಿರುತ್ತದೆ.
ತಮ್ಮ ಕುಟುಂಬದ ಕಿರಿಗುಡಿಯಲ್ಲಿನ (ಚಾಪೆಲ್) ಪೀಠದಲ್ಲಿರುವ ಶಿಲುಬೆ ಮರದ ಮೇಲೆ
ನೇತಾಡುತ್ತಿದ್ದ, ಮುಳ್ಳಿನ ಕಿರೀಟ ಹೊತ್ತ
ರಕ್ತಸಿಕ್ತ ದೇಹದ ಯೇಸುಸ್ವಾಮಿಯ ಪ್ರತಿಮೆಯಿಂದ ಬಾಲಕ ಪ್ರಾನ್ಸಿಸ್ ಅವರು ಸಮ್ಮೋಹನಗೊಂಡಿದ್ದರು.
ಅವರು ನವರ್ರೆ ಅರಸೊತ್ತಿಗೆಯ ಅರಸರ ಕತೆಗಳು, ಕ್ಷೇವಿಯರ್ ಜಹಗೀರುದಾರರ ಮನೆತನದವರ ಕೃಪಾಶ್ರಯದಲ್ಲಿರುವ ಲೈರೆಯ ಕ್ರೈಸ್ತ ಸನ್ಯಾಸಿಗಳ
ಕುರಿತ ರೋಚಕ ಕಥನಗಳನ್ನು ಕೇಳುತ್ತಾ ಬೆಳೆಯುತ್ತಿದ್ದರು. ಅವರು ಆರು ವರ್ಷದವರಿದ್ದಾಗ ಪುಟ್ಟ
ನವರ್ರೆ ಅರಸೊತ್ತಿಗೆಯ ಮೇಲೆ ದಂಡತ್ತಿ ಬರುವ ನೆರೆಯ ಸ್ಪೇನ್ ದೇಶದ ಅರಸರು ನವರ್ರೆ
ಸಂಸ್ಥಾನವನ್ನು ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ.
ಯೇಸುಸಭೆಯ ಸ್ಥಾಪಕ ಸದಸ್ಯ:
ಅವರು ವಾಸಿಸುತ್ತಿರುವ ಕೋಟೆಯನ್ನು ಹೊರತುಪಡಿಸಿ ಎಲ್ಲ
ಜಹಗೀರುಗಳನ್ನು ರದ್ದುಪಡಿಸಲಾಗುತ್ತದೆ. ಅವಮಾನಿತರಾಗುವ ಅವರ ತಂದೆ ಅಸ್ವಸ್ಥಗೊಂಡು 1515ರಲ್ಲಿ ಮೃತರಾಗುತ್ತಾರೆ. ಇಪ್ಪತ್ತು ವರ್ಷದ
ಫ್ರಾನ್ಸಿಸ್ ಅವರ ಅವರ ಹಿರಿಯ ಸಹೋದರ ಕ್ಷೇವಿಯರ್ ಕೋಟೆಯ ಅಧಿಪತಿಯಾಗುತ್ತಾರೆ. ಸ್ಪೇನ್ ಅರಸರ ವಿರುದ್ಧ
ಫ್ರೆಂಚರನ್ನು ಸೇರುವ ಸೋದರರು ಹಲವಾರು ಸಂಘರ್ಷಗಳ ನಂತರ ಶರಣಾಗಿ 1524ರಲ್ಲಿ ತಮ್ಮ ಮನೆಯನ್ನು ಉಳಿಸಿಕೊಳ್ಳುತ್ತಾರೆ. ಆಗ
ಫ್ರಾನ್ಸಿಸ್ ಅವರಿಗೆ ಕೇವಲ 18 ವರ್ಷಗಳು.
ತೀವ್ರವಾಗಿ ಮಾನಸಿಕವಾಗಿ ನೊಂದ ಫ್ರಾನ್ಸಿಸ್ ಪಂಪ್ಲೊನಾ
ಧರ್ಮಕ್ಷೇತ್ರದಲ್ಲಿ ಪಾದ್ರಿಯಾಗ ಬಯಸುತ್ತಾರೆ. ಹೆಚ್ಚಿನ ಓದಿಗೆ ಪ್ಯಾರಿಸ್ ನ ಸಂತ ಬರ್ಬರಾ
ಕಾಲೇಜು ಸೇರುತ್ತಾರೆ. ಅಲ್ಲಿ ತಮ್ಮ 24ರ ವಯಸ್ಸಿನಲ್ಲಿ ಎಂ. ಎ
ಪದವಿಯವರೆಗೂ ಓದು ಮುಂದುವರೆಸುತ್ತಾರೆ. ಅಧ್ಯಾಪಕ ವೃದ್ಧಿಯಲ್ಲಿ ಯಶಸ್ಸು ಕಾಣುವ ಫ್ರಾನ್ಸಿಸ್, ಆಧ್ಯಾತ್ಮದತ್ತ ಮುಖ ಮಾಡಿದ್ದ ಇಗ್ನೇಷಿಯಸ್ ಲೊಯೋಲ ಅವರ ಸಂಪರ್ಕದಲ್ಲಿ ಬರುತ್ತಾರೆ.
ಪಾಫ್ಲೊನಾ ಯುದ್ಧದಲ್ಲಿ ಭಾಗವಹಿಸಿ ಗಾಯಗೊಂಡಿದ್ದ
ಲಯೋಲಾ ಪ್ರಾಟೆಸ್ಟಂಟ್ ಸುಧಾರಣಾ ಚಳುವಳಿಯಿಂದ ಬಸವಳಿದಿದ್ದ ಕಥೋಲಿಕ ಸಭೆಯನ್ನು ಬಲಪಡಿಸುವ
ಉದ್ದೇಶದಿಂದ, ಒಂದು ಕ್ರೈಸ್ತ ಮಿಷನರಿಗಳ
ಸಭೆಯನ್ನು ಸ್ಥಾಪಿಸಲು ಮುಂದಾದಾಗ, ಫ್ರಾನ್ಸಿಸ್ ಕ್ಷೇವಿಯರ್
ಅವರು ಅವರೊಂದಿಗೆ ಸೇರಿಕೊಂಡು ಅದರ ಸ್ಥಾಪಕ ಸದಸ್ಯರಾಗುತ್ತಾರೆ.
ಗೋವಾಕ್ಕೆ ಬಂದದ್ದು ಆಕಸ್ಮಿಕ:
ಗೋವೆಯ ಆಡಳಿತಾಧಿಕಾರಿ ಕೋರಿಕೆಯಂತೆ ಪೋಪರು
ಮಿಷನರಿಗಳನ್ನು ಕಳುಹಿಸಲು ಕ್ರಮ ಕೈಗೊಂಡಾಗ,
ಅದಕ್ಕೆ
ಆಯ್ಕೆಯಾದ ಗುರುಗಳು ಅಸ್ವಸ್ಥರಾಗುತ್ತಾರೆ. ಅವರ ಬದಲಿಗೆ ಫ್ರಾನ್ಸಿಸ್ ಕ್ಷೇವಿಯರ್ ಅವರು ಗೋವೆಗೆ
ಹೊರಡುತ್ತಾರೆ.
ಕ್ರಿಸ್ತ ಶಕ 1542ರಲ್ಲಿ ಗೋವಾಕ್ಕೆ ಬಂದಿಳಿದ ಮೇಲೆ ಫ್ರಾನ್ಸಿಸ್ ಕ್ಷೇವಿಯರ್ ಅವರು, ಬಡವರು, ದೀನ ದಲಿತರು ಮತ್ತು ರೋಗಿಗಳ
ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಗೋವೆಯಲ್ಲಿನ ಪೋರ್ಚುಗೀಜ ಸರ್ಕಾರದ ಅಧಿಕಾರಿಗಳು
ನಡೆಸುತ್ತಿರುವ ಮೋಜಿನ ಜೀವನ ಕಂಡು ಮಜಗುರಗೊಳ್ಳುವ ಅವರು, ಅವರಲ್ಲಿ ಮಾನವ ಕಳಕಳಿ ಮೂಡಿಸಲು ಪ್ರಯತ್ನಿಸುತ್ತಾರೆ.
ಜೈಲಿನಲ್ಲಿ ವಿಚಾರಣೆಗಳಿಲ್ಲದೇ ಕೊಳೆಯುತ್ತಿರುವವರ
ಬಗ್ಗೆ ಗೋವಾದ ಆಡಳಿತಾಧಿಕಾರಿಗಳನ್ನು ಭೇಟಿ ಮಾಡಿ,
ಅವರು ಆಗಾಗ
ಜೈಲಿಗೆ ಭೇಟಿಕೊಡುವಂತೆ ಮಾಡುತ್ತಾರೆ. ಅದರ ಪರಿಣಾಮವಾಗಿ ನೂರಾರು ಕೈದಿಗಳು ಬೇಗ ಜೈಲಿನಿಂದ
ಹೊರಗೆ ಬಂದು ಒಳ್ಳೆಯ ಜೀವನ ಸಾಗಿಸಲು ಅನುಕೂಲವಾಗುತ್ತದೆ.
ಹಾದಿ ಬೀದಿಯಲ್ಲಿ ಸಾಗುವಾಗ ಗಂಟೆಯನ್ನು ಬಾರಿಸುತ್ತಾ
ಮಕ್ಕಳನ್ನು ಮತ್ತು ಅಲ್ಲಿ ಸೇವೆಯಲ್ಲಿದ್ದ ಗುಲಾಮರನ್ನು ಕೂಡಿಸಿಕೊಂಡು, ಅವರಿಗೆ ಕಥೋಲಿಕ ಧರ್ಮೋಪದೇಶದ ಪಾಠ ಮಾಡುತ್ತಿರುತ್ತಾರೆ. ಅನಾಥರಿಗೆ ಕುಷ್ಠ ರೋಗಿಗಳ ಆರೈಕೆ
ಮಾಡುತ್ತಿರುತ್ತಾರೆ. ವೈಯಕ್ತಿಕವಾಗಿ ನೋಡುವುದಾದರೆ ಸದಾ ಪ್ರಾರ್ಥನೆ, ಧ್ಯಾನದಲ್ಲಿ ತೊಡಗುತ್ತಿದ್ದರಂತೆ. ತಮ್ಮ ಸಭೆ ದುಂದುವೆಚ್ಚದ ಧಿರಿಸನ್ನು ತ್ಯಜಿಸಿ, ಹತ್ತಿ ಬಟ್ಟೆಯ ಬಟ್ಟೆಯ ಧಿರಿಸು ತೊಟ್ಟು ಸಾಮಾನ್ಯರಲ್ಲಿ ಬೆರೆಯುತ್ತಾ ಅಪಾರ ಜನಪ್ರಿಯತೆ
ಪಡೆದಿರುತ್ತಾರೆ.
ಗೋವಾದಿಂದ ಪೂರ್ವದತ್ತ ಪಯಣ:
ಧರ್ಮಪ್ರಚಾರಕ್ಕಾಗಿ 1452ರ ಏಪ್ರಿಲ್ 17ರಂದು ಗೋವಾದಿಂದ ಪೂರ್ವ ದಿಕ್ಕಿಗೆ ನೌಕಾಯಾನ ಆರಂಭಿಸಿದ ಫ್ರಾನ್ಸಿಸ್ ಕ್ಷೇವಿಯರ್ ಅವರು, ಮಲಕ್ಕಾ ತಲುಪಿ, ಜಪಾನಿನಲ್ಲಿದ್ದು, ಅದೇ ವರ್ಷ ನವೆಂಬರ್ ಹೊತ್ತಿಗೆ ಚೀನಾಕ್ಕೆ ಸೇರಿದ ಕಾಂಟೋನ್ ಪ್ರದೇಶದಲ್ಲಿದ್ದ ಸ್ಯಾನ್‍ಚಿನ್
ನಡುಗಡ್ಡೆ ತಲುಪುತ್ತಾರೆ. ಅಸ್ವಸ್ಥರಾಗಿದ್ದ ಅವರ ಆರೋಗ್ಯ ಕ್ಷೀಣಿಸಿದಾಗ, ಡಿಸೆಂಬರ್ ತಿಂಗಳ 3ರ ಬೆಳಗಿನ ಜಾವ
ಅಸುನೀಗುತ್ತಾರೆ.
ಅಲ್ಲಿಯೇ ಒಂದು ಗುಡ್ಡದಲ್ಲಿ 4 ಮೂಟೆ ಸುಣ್ಣದೊಂದಿಗೆ ಅವರ ಶವ ಸಂಸ್ಕಾರ ನಡೆಯುತ್ತದೆ. ಸಾಂತಾ ಕ್ರೂಜ್ ನೌಕೆಯಲ್ಲಿ
ಅವರನ್ನು ಅಲ್ಲಿಯವರೆಗೆ ಕರೆದುಕೊಂಡು ಬಂದಿದ್ದ ಜೊತೆಗಾರ ಆಂಟೋನಿ, ಅವರ ಶವ ಬೇಗ ಕೊಳೆಯಲು ಅನುವಾಗಲಿ ಎಂದುಕೊಂಡು ಸುಣ್ಣ ಸುರಿದಿರುತ್ತಾರೆ. ಕಟ್ಟಿಗೆ
ಶವಪೆಟ್ಟಿಗೆಯಲ್ಲಿದ್ದ ಶವ ಬೇಗ ಕೊಳೆತರೆ,
ಫ್ರಾನ್ಸಿಸ್
ಕ್ಷೇವಿಯರ್ ಅವರ ದೇಹದ ಮೂಳೆಗಳನ್ನು ಗೋವಾಕ್ಕೆ ಕೊಂಡೊಯ್ಯಬಹುದು ಎಂದು ಅವರು ಲೆಕ್ಕ ಹಾಕಿದ್ದರು.
ಜೊತೆಗೆ ಅದು ಫ್ರಾನ್ಸಿಸ್ ಅವರ ಕೋರಿಕೆಯೂ ಆಗಿತ್ತು.
ಜೀವಂತಿಕೆಯ ಲಕ್ಷಣದ ಶವ:
ಎರಡು ತಿಂಗಳ ನಂತರ ಸಮಾಧಿ ಮಾಡಿದವರು ಬಂದು ಸಮಾಧಿಯ
ಮಣ್ಣನ್ನು ಸರಿಸಿ ಶವ ಪೆಟ್ಟಿಗೆಯನ್ನು ನೋಡಿದರೆ,
ಅವರಿಗೆ
ಅಚ್ಚರಿ ಕಾದಿತ್ತು. ಶವವು ಒಂದಿನಿತೂ ಕೊಳೆತಿರಲಿಲ್ಲ. ಸಮಾಧಿ ಮಾಡಿದಾಗ ಹೇಗಿತ್ತೋ ಅದೆ
ರೀತಿಯಲ್ಲಿದ್ದ ಶವವನ್ನು ಕಂಡು ಅಚ್ಚರಿಪಟ್ಟರು.
ಈ ವಿಸ್ಮಯವನ್ನು ಸಂಶಯದಿಂದ ಕಂಡ ಒಬ್ಬ, ಶವದ ಎಡ ತೊಡೆಯಲ್ಲಿ ಒಂದು ಬೆರಳಿನಷ್ಟು ಮಾಂಸ ಕಿತ್ತು ನೋಡಿದ. ಆ ಗಾಯದ ಜಾಗದಲ್ಲಿ ರಕ್ತ
ತುಂಬಿಕೊಂಡಿತು. ಇದು ಅಲೌಕಿಕ ಘಟನೆ ಎಂದು ಅವನಿಗೆ ತೋರಿತು. ಈ ಪವಾಡದ ಸುದ್ದಿ ಕಾಳ್ಗಿಚ್ಚಿನಂತೆ
ಹರಡಿತು.
ಅಲ್ಲಿಂದ ಶವವನ್ನು ಎತ್ತಿಕೊಂಡು ಗೋವೆಯತ್ತ ಹೊರಡಲು
ಚಿಂತಿಸಲಾಯಿತು. ಶವವನ್ನು ಉಪ್ಪಿನ ಪೆಟ್ಟಿಗೆಯಲ್ಲಿ ಇರಿಸಿಕೊಂಡು ಗೋವಾದತ್ತ ನೌಕಾ ಪ್ರಯಾಣ
ಆರಂಭಿಸಲಾಗಿತ್ತು.
ಎರಡನೇ ಬಾರಿ ಸಮಾಧಿ ಭಾಗ್ಯ:
ಮಲಕ್ಕಾದ ಹತ್ತಿರ ಬಂದಾಗ, ಅಲ್ಲಿನ ಪೋರ್ಚುಗೀಜ್ ಅಧಿಕಾರಿ ಅಳ್ವಾರೊ ಅವರಿಗೆ ವಿಷಯ ಗೊತ್ತಾಗುತ್ತದೆ. ಫ್ರಾನ್ಸಿಸ್
ಕ್ಷೇವಿಯರ್ ಅವರನ್ನು ಕಂಡರೆ ಉರಿದು ಬೀಳುತ್ತಿದ್ದ ಈ
ಅಧಿಕಾರಿಯ ನಿರ್ದೇಶನದಂತೆ, ಮಲಕ್ಕಾದ ಬೆಟ್ಟದ ರಾಣಿ
(ಅವರ್ ಲೇಡಿ ಆಫ್ ಮೌಂಟ್ ಚರ್ಚ) ಗುಡಿಯಲ್ಲಿ 1553ರ ಫೆಬ್ರುವರಿ ತಿಂಗಳಲ್ಲಿ
ಸಮಾಧಿ ಮಾಡಲಾಗುತ್ತದೆ. ಕಿರಿದಾದ ಸಮಾಧಿ ಕುಣಿಯಲ್ಲಿ ಶವವನ್ನು ತುರುಕಿದಾಗ ಕತ್ತು ಬಾಗಿ
ಮುರಿಯುತ್ತದೆ. ಆ ಸಮಯದಲ್ಲಿ ಮಲಕ್ಕಾದಲ್ಲಿ ಪ್ಲೇಗ ರೋಗದ ಹಾವಳಿ ಇತ್ತು. ಶವ ಹೊತ್ತ ನೌಕೆ
ಹತ್ತಿರ ಬಂದಾಗ ಅಲ್ಲಿ ಆಗ ಪ್ಲೇಗ ರೋಗದ ಹಾವಳಿ ಕಡಿಮೆ ಆಗತೊಡಗಿತಂತೆ. ಮುಂದೆ, 1553ರ ಆಗಸ್ಟ್ 15ರಂದು ಅವರ ಶವವನ್ನು ಮತ್ತೊಮ್ಮೆ ಸಮಾಧಿಯಿಂದ ಎತ್ತಿ ನೋಡಿದಾಗಲೂ, ಶವ ತಾಜಾತನವನ್ನು ಉಳಿಸಿಕೊಂಡಿತ್ತು. ನಂತರ ನೌಕೆಯಲ್ಲಿ ಅದನ್ನು ಗೋವೆಗೆ ಸಾಗಿಸಲಾಗುತ್ತದೆ.
ಅಂತು ಇಂತು ಗೋವೆಯನ್ನು ಮುಟ್ಟಿದ ಶವ:
ಮುಂದೆ,
ಪಾದ್ರಿ
ಫ್ರಾನ್ಸಿಸ್ ಅವರ ಶಿಷ್ಯರೊಬ್ಬರು, ಶವವನ್ನು ಗೋವಾಕ್ಕೆ
ಸಾಗಿಸಲೇಬೇಕೆಂಬ ಉದ್ದೇಶದಿಂದ ಶವವನ್ನು ಸಮಾಧಿಯಿಂದ ಹೊರಗೆ ತೆಗೆಯುತ್ತಾರೆ. ಆಗಲೂ ಶವಕ್ಕೆ
ಒಂದಿಷ್ಟು ಕೊಂಕಾಗಿರುವುದಿಲ್ಲ. ವಿಸ್ಮಯಗೊಂಡ ಆತ,
ಡಿಸೆಂಬರ್
ತಿಂಗಳಲ್ಲಿ ಅಲ್ಲಿಂದ ಗೋವಾದತ್ತ ಹೊರಟಿದ್ದ ನೌಕೆಯಲ್ಲಿ ಶವವನ್ನು ಉಪ್ಪಿನ ಪೆಟ್ಟಿಗೆಯಲ್ಲಿರಿಸಿ
ಸಾಗಿಸುತ್ತಾನೆ.
ತುಂಬಾ ಹಳೆಯದಾಗಿದ್ದ ಆ ನೌಕೆಯಲ್ಲಿ ಶವ
ಸಾಗಿಸುವುದಕ್ಕೆ ಅದರ ನಾವಿಕ ಒಪ್ಪಿಕೊಂಡಿರುತ್ತಾನೆ. ಒಂದೆರಡು ಬಾರಿ ಚಂಡಮಾರುತಕ್ಕೆ ಸಿಲುಕಿದ
ನೌಕೆ ಗೋವೆಯನ್ನು ತಲುಪುವುದೇ ದುಸ್ತರವಾಗಿತ್ತು. ಅಂತೂ ಇಂತೂ 1554ರ ಮಾರ್ಚ ತಿಂಗಳ 14ರಂದು ಪಾದ್ರಿ ಫ್ರಾನ್ಸಿಸ್ ಕ್ಷೇವಿಯರ್ ಅವರು ಇದ್ದ ಶವದ ಪೆಟ್ಟಿಗೆ ಗೋವಾದ ರಾಯ್ಬಂದರನ್ನು
ತಲುಪುತ್ತದೆ. ಅಜುಡಾ ಗುಡಿಯಲ್ಲಿ ಶವವನ್ನು ಇರಿಸಲಾಗುತ್ತದೆ.
ಗೋವಾಕ್ಕೆ ಬಂದಿಳಿದ ಮೇಲೆಯೇ, ಆ ಹಳೆಯ ನೌಕೆಯಲ್ಲಿದ್ದ ಇತರ ಪ್ರಯಾಣಿಕರಿಗೆ
ಅವರೊಂದಿಗೆ, ಒಂದಿಷ್ಟೂ ಮುಕ್ಕಾಗದ
ಪಾದ್ರಿಗಳ ಶವವೂ ಗೋವಾಕ್ಕೆ ಬಂದಿತೆಂಬುದು ಗೊತ್ತಾಗುತ್ತದೆ. ಮತ್ತು ಪಾದ್ರಿ ಫ್ರಾನ್ಸಿಸ್
ಕ್ಷೇವಿಯರ್ ಪಾರ್ಥಿವ ಶರೀರದ ಉಪಸ್ಥಿತಿಯ ಕಾರಣವೇ ಹಳೆಯ ನೌಕೆಯು ಎರಡು ಬಾರಿ ಅಪಾಯದ
ಅಂಚಿನಲ್ಲಿದ್ದರೂ ಸುರಕ್ಷಿತವಾಗಿ ಗೋವೆಯನ್ನು ತಲುಪುವುದು ಸಾಧ್ಯವಾಯಿತು ಎಂದುಕೊಳ್ಳುತ್ತಾರೆ.
ವಿಸ್ಮಯಗೊಂಡ ಮುಖ್ಯ ವೈದ್ಯರು:
ಎರಡು ದಿನಗಳ ನಂತರ ಮಾರ್ಚ 16ರಂದು ಫ್ರಾನ್ಸಿಸ್ ಕ್ಷೇವಿಯರ್ ಅವರ ಶವವಿದ್ದ ಶವಪೆಟ್ಟಿಗೆಯನ್ನು ಹಳೆಯ ಗೋವಾಗೆ
ತರಲಾಗುತ್ತದೆ. ಆಗ ಅಲ್ಲಿದ್ದ 40 ಚರ್ಚುಗಳಲ್ಲೂ ಗಂಟೆಗಳು
ನಿನಾದಿಸುತ್ತವೆ.
ಹಳೆಯ
ಗೋವಾದಲ್ಲಿ ಸಂಭ್ರಮದ ವಾತಾವರಣ ಮೂಡಿರುತ್ತದೆ. ಅಪಾರ ಸಂಖ್ಯೆಯಲ್ಲಿ ಜನ ನರೆದಿರುತ್ತಾರೆ.
ಶವವನ್ನು ಸಾರ್ವಜನಿಕರ ದರ್ಶನಕ್ಕೆ ಇಡುವ ಮೊದಲು ಶವಪರೀಕ್ಷೆ ನಡೆಸಲಾಗುತ್ತದೆ.
ಆಗ ಸಂತ ಫ್ರಾನ್ಸಿಸ್ ಅವರ ಪಾರ್ಥಿವ ಶರೀದ ಶವ ಪರೀಕ್ಷೆ
ನಡೆಸಿದ, ಅಂದಿನ ಪೋರ್ಚುಗಲ್ ಸರ್ಕಾರದ
ಗೋವಾದ ಪ್ರಧಾನ ವೈದ್ಯರಾಗಿದ್ದ ಡಾ. ರುಬೆರಿಯೊ ಅವರು ಸಂತರ ಶವ ಕೊಳೆಯುತ್ತಿಲ್ಲವೆಂದು ವಿಸ್ಮಯ
ವ್ಯಕ್ತಪಡಿಸುತ್ತಾರೆ. ಇದು ಅಂದಿನ ಅಧಿಕೃತ ವೈದ್ಯಕೀಯ ದೃಢೀಕರಣದ ಪ್ರಮಾಣ ಪತ್ರ.
ಮೊದಲ ಸಾರ್ವಜನಿಕ ಪ್ರದರ್ಶನ:
ಒಂದೆರಡು ದಿನ ಕಳೆಯುತ್ತಿದ್ದಂತೆಯೇ, ಸಾರ್ವಜನಿಕರ ಒತ್ತಾಸೆಯ ಮೇರೆಗೆ, ಸಂತ ಪಾಲರ ಹೆಸರಿನ
ವಿದ್ಯಾಪೀಠದ ಆವರಣದ ಕಿರಿಗುಡಿಯಲ್ಲಿ (ಚಾಪೆಲ್) ಪಾದ್ರಿ ಫ್ರಾನ್ಸಿಸ್ ಕ್ಷೇವಿಯರ್ ಅವರ ಕೊಳೆಯದ
ಶವವನ್ನು ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗುತ್ತದೆ. ಇದು, ಸಂತ ಫ್ರಾನ್ಸಿಸ್ ಕ್ಷೇವಿಯರ್ ಅವರ ಪಾರ್ಥಿವ ಶರೀರದ ಮೊದಲ ಸಾರ್ವಜನಿಕರ ಪ್ರದರ್ಶನ.
ನಳನಳಿಸುತ್ತಿದ್ದ ಸಂತರ ಪಾರ್ಥಿವ ಶರೀರದ ವೀಕ್ಷಣೆಗೆ
ಬಂದ ಸಾರ್ವಜನಿಕರು ಅದನ್ನು ಕೈಯಾರೆ ಮುಟ್ಟಿ,
ಅದಕ್ಕೆ
ಮುತುಕೊಟ್ಟು ಧನ್ಯತೆ ಅನುಭವಿಸುತ್ತಾರೆ.
ಮೊದಲ ದಿನದಂದು ನಡೆದ ಸಂತ ಫ್ರಾನ್ಸಿಸ್ ಕ್ಷೇವಿಯರ್
ಅವರ ಪಾರ್ಥಿವ ಶರೀರದ ಪ್ರದರ್ಶನಕ್ಕೆ ಬಂದು ಗೌರವ ಸಲ್ಲಿಸಿದ ಗೌರವಾನ್ವಿತ ಇಸಾಬೆಲಾ ಹೆಸರಿನ
ಪೋರ್ಚುಗೀಜ್ ಮಹಿಳೆಯೊಬ್ಬಳು, ಸಂತರ ಮೃತ ಶರೀರವನ್ನು
ಮುಟ್ಟಿ, ಮುತುಕೊಟ್ಟು ಧನ್ಯತೆ
ಅನುಭವಿಸುವುದರೊಂದಿಗೆ, ಅವರ ಬಲಗಾಲಿನ
ಹೆಬ್ಬೆರಳನ್ನು ಕಚ್ಚಿಕೊಂಡುಹೋದ ಪ್ರಸಂಗ ಜರುಗಿದೆ.
ಆ
ಬೆರಳಿನಿಂದ ರಕ್ತ ಒಸರಿತ್ತು. ನೆಲದ ಮೇಲಿದ್ದ ರಕ್ತದ ಕಲೆಗಳನ್ನು ಹಿಂಬಾಲಿಸಿದ ಜನ, ಬೆರಳನ್ನು ಬಾಯಲ್ಲಿ ಕಚ್ಚಿ ಒಯ್ದಿದ್ದ ಪೋರ್ಚುಗೀಜ್‍ರ ಕುಲೀನ ಮನೆತನಕ್ಕೆ ಸೇರಿದ್ದ
ಇಸಾಬೆಲಾಳ ಮನೆ ಮುಟ್ಟಿದರಂತೆ. ಈಗ ಆ ಬೆರಳನ್ನು ಗೋವಾದ ಪ್ರಧಾನಾಲಯದಲ್ಲಿ ಬೆಳ್ಳಿಯ ಸಂಪುಟದಲ್ಲಿ
ಸಂರಕ್ಷಿಸಿ ಇಡಲಾಗಿದೆ.
ಮೂರನೆ ಬಾರಿ ಭೂಸ್ಥಾಪನೆಯಾದ ಸಂತರು:
ಈ ಸಾರ್ವಜನಿಕ ಪ್ರದರ್ಶನದ ನಂತರ ಫ್ರಾನ್ಸಿಸ್
ಕ್ಷೇವಿಯರ ಅವರ ಶವವನ್ನು ಸಂತ ಪಾಲರ ಹೆಸರಿನ ವಿದ್ಯಾಪೀಠದ ಆವರಣದಲ್ಲಿನ ಕಿರಿಗುಡಿಯ
ಪೂಜಾವೇದಿಕೆಯ (ಆಲ್ಟರ್) ಬಳಿ ಮತ್ತೆ ಸಮಾಧಿ ಮಾಡಲಾಗುತ್ತದೆ. ಮುಂದೆ 1560ರಲ್ಲಿ ಕಿರಿಗುಡಿಯನ್ನು ಕೆಡವಿದಾಗ, ಸಮಾಧಿಯನ್ನು ತೆಗೆದು ಶವಪೆಟ್ಟಿಗೆಯನ್ನು ಗುರುಮಠದಲ್ಲಿ ಇರಿಸಲಾಗುತ್ತದೆ. ನಂತರ ಅಲ್ಲೇ
ಪಕ್ಕದ `ದೊ ಬೋಮ್ ಜೇಸುಸ್’ ಚರ್ಚಿಗೆ
ಸಾಗಿಸಲಾಗುತ್ತದೆ. ಆಗಲೂ ಶವ ಕೊಳೆತಿರುವುದಿಲ್ಲ. ಅದನ್ನು ಸಂತರ ಪವಿತ್ರ ಅವಶೇಷವೆಂದು ಆದರಿಸಿ
ಅದನ್ನು ಮತ್ತೆ ಸಮಾಧಿ ಮಾಡಲು ಹೋಗುವುದಿಲ್ಲ.
ಅವಶೇಷಗಳ ಸಾಗಾಣಿಕೆ, ರೋಮಿಗೆ ಬಲಗೈ:
ಜನಮಾನಸದಲ್ಲಿ ಆದಾಗಲೇ ಸಂತರಾಗಿದ್ದ ಫ್ರಾನ್ಸಿಸ್
ಕ್ಷೇವಿಯರ ಅವರ ಕೊಳೆಯದ ಶವದ ಪವಾಡ ಸುದ್ದಿಯನ್ನು ತಿಳಿದು ವಿಸ್ಮಯಗೊಂಡ ರೋಮಿನಲ್ಲಿದ್ದ
ಅಂದಿನ ಯೇಸುಸಭೆಯ ಪ್ರಧಾನರು, ಸಂತರ ಅವಶೇಷಗಳು ಬೇಕೆಂದು ಕೋರಿಕೆ ಸಲ್ಲಿಸುತ್ತಾರೆ. ಅವರ ಆಶಯದಂತೆ 1614ರ ನವೆಂಬರ್ 3ರ ರಾತ್ರಿ ಯೇಸುಸಭೆಯ ಗೋವೆಯ ಪ್ರಾದೇಶಿಕ ಮುಖ್ಯಸ್ಥರು, ಪ್ರಮುಖರ ಎದುರು ಸಂತರ ಮುಂಗೈ ಸೇರಿಸಿ ಬಲಗೈ ತೋಳಿನ ಅರ್ಧ ಭಾಗವನ್ನು ಕತ್ತರಿಸಿ ರೋಮಿಗೆ
ಕಳುಹಿಸುತ್ತಾರೆ. ಅದನ್ನು 1619ರ ಸಾಲಿನ ಏಪ್ರಿಲ್ 27ರಂದು ರೋಮಿನ ಯೇಸುಸ್ವಾಮಿಯ ಗುಡಿಯಲ್ಲಿ (ಚರ್ಚ ಆಫ್ ಜೇಸು)ನ ಪವಿತ್ರ ಅವಶೇಷ ಸಂಪುಟದಲ್ಲಿ
ಇಡಲಾಗಿದೆ. ಅದನ್ನು ಈಚೆಗೆ 2018ರಲ್ಲಿ ಕೆನಡಾವೂ ಸೇರಿದಂತೆ
ವಿಶ್ವದ ವಿವಿಧೆಡೆ ಪ್ರದರ್ಶನಕ್ಕೂ ಇಡಲಾಗಿತ್ತು.
ಅದೇ ಬಗೆಯಲ್ಲಿ ಬಲಗೈ ತೊಳಿನ (ಹಿಂಗೈಯನ್ನು) ಉಳಿದ
ಭಾಗವನ್ನು ಮೂರು ತುಂಡುಗಳಲ್ಲಿ ಕತ್ತರಿಸಿ ಅವನ್ನು ಮಲಕ್ಕಾ, ಕೊಚ್ಚೀನ ಮತ್ತು ಮಕ್ಕಾವು ಗಳಲ್ಲಿರುವ
ಯೇಸುಸಭೆಯ ಗುರುಮಠಗಳಿಗೆ ಕಳುಹಿಸಿಕೊಡಲಾಗಿದೆ. ಚೀನದಲ್ಲಿನ ಮಕ್ಕಾವು 1999ರವರೆಗೂ ಪೋರ್ಚುಗೀಜರ ವಸಾಹತು ಆಗಿತ್ತು. ಸಂತರ
ಅವಶೇಷವನ್ನು ಇಂದು ಮಕ್ಕಾವುನಲ್ಲಿನ ಪವಿತ್ರ ಕಲಾ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿದೆಯಂತೆ. ಈ
ಯಾವ ಸಂದರ್ಭಗಳಲ್ಲೂ ಕತ್ತರಿಸಿದ ಭಾಗಗಲ್ಲಿ ರಕ್ತ ಒಸರಿಲ್ಲ.
ಮುಂದೆ 1620ರಲ್ಲಿ ಸಂತರ ದೇಹದಲ್ಲಿನ
ಕರಳೂ ಸೇರಿದಂತೆ, ಒಳಗಿನ ವಿವಿಧ
ಅಂಗಾಂಗಗಳನ್ನು ಕತ್ತರಿಸಿ ತೆಗೆದು, ಜಪಾನ್ ದೇಶವೂ ಸೇರಿದಂತೆ
ವಿಶ್ವದ ಎಲ್ಲೆಡೆಯೂ ಹಂಚಲಾಗಿದೆ.
ಶವ ಸಂಪುಟ ತೆರೆಯಬಾರದೆಂಬ ಸ್ವನಿಯಂತ್ರಣ:
ಮುಂದೆ 1630 ರಲ್ಲಿ ಶವಪೆಟ್ಟಿಗೆಯನ್ನು
ತೆಗೆದು ಲಿಸ್ಬನ್ ಪಟ್ಟಣದಿಂದ ಬಂದಿದ್ದ ಇಬ್ಬರು ಗುರುಗಳಿಗೆ ಸಂತರ ಪಾರ್ಥಿವ ಶರೀರವನ್ನು
ತೋರಿಸಲಾಯಿತು. ಅವರು ಸಂತರ ಪಾರ್ಥಿವ ಶರೀರಕ್ಕೆ ಮುದ್ದಿಟ್ಟು, ತಾವು ತಂದಿದ್ದ ಗುರುಗಳ ವಸ್ತ್ರವನ್ನು ಹೊದಿಸಿ ತಮ್ಮ ಗೌರವ ಸಲ್ಲಿಸಿದ್ದಾರೆ.
ನಂತರ 1681ರಲ್ಲಿ ಪಾರ್ಥಿವ ಶರೀರದ
ಚರ್ಮ ಒಣಗುತ್ತಿರುವುದು ಗಮನಕ್ಕೆ ಬಂದಾಗ,
ಆತಂಕಗೊಂಡ ಯೇಸುಸಭೆಯ ಸ್ಥಳೀಯ ಮುಖ್ಯಸ್ಥರು ಇನ್ನು ಮುಂದೆ ಮೇಲಿಂದ
ಮೇಲೆ ಶವ ಸಂಪುಟವನ್ನು ತೆರೆಯಬಾರದು ಎಂದು ನಿರ್ಧರಿಸುತ್ತಾರೆ.
ಆ ನಂತರ 1686ರಲ್ಲಿ ಹಳೆಯ ಶವ ಸಂಪುಟದಿಂದ
ಹೊಸ ಶವ ಸಂಪುಟದಲ್ಲಿ ಶವವನ್ನು ಎತ್ತಿ ಇಡಲಾಗುತ್ತದೆ. ಸಂತರ ಆ ಹೊಸ ಶವ ಸಂಪುಟವನ್ನು ತೆರೆಯಬಾರದು
ಎಂದಕೊಂಡರೂ, 1692ರಲ್ಲಿ ಫ್ರಾನ್ಸ ದೇಶದ
ಗುರುಗಳು ಬಂದಾಗ, ಅವರಿಗೆ ಸಂತರ ಶವದ ದರ್ಶನ
ಮಾಡಿಸಲಾಗುತ್ತದೆ.
ಕಲ್ಲಿನ ಭವ್ಯ ಸಮಾಧಿ ಕಟ್ಟಡ:
`ಬಸೀಲಿಕ ದೊ ಬೋಮ್
ಜೇಸುಸ್’ದಲ್ಲಿ, ಸುಮಾರು 1698ರ ಕೊನೆಯಲ್ಲಿ ಟುಸ್ಕನಿಯ (ಟಿಯುಎಸ್ ಸಿಎ ಎನ್ ವೈ) ಮಹಾ
ದಳಪತಿ (ಗ್ರ್ಯಾಂಡ್ ಡೂಕ್) ಮುಮ್ಮಡಿ ಕೊಸಿಮೊ (ಸಿಒಎಸ್ ಐಎಂಒ) ಎಂಬಾತ, ಅಮೃತ ಶಿಲೆ ಮತ್ತು ಸ್ಪಟಿಕ ರೂಪದ ಬೆಣಚು ಕಲ್ಲುಗಳಿಂದ ಕಲ್ಲಿನ ಭವ್ಯ ಸಮಾಧಿ
ಕಟ್ಟಿಸಿಕೊಡುತ್ತಾನೆ.
ಆ ಸಮಾಧಿ ಕಟ್ಟೋಣದಲ್ಲಿ ಬೆಳ್ಳಿಯ ಸಂಪುಟದಲ್ಲಿ ಶವ
ಪೆಟ್ಟಿಗೆಯನ್ನು ಇರಿಸಲಾಗುತ್ತದೆ. ಈ ಸುಂದರ ಸಮಾಧಿ ಕಟ್ಟೋಣದ ನೀಲನಕ್ಷೆಯನ್ನು ಸಿದ್ಧಪಡಿಸಿದ
ಅಂದಿನ ಫ್ಲೊರೆಂಟೈನಿನ ಖ್ಯಾತ ಶಿಲ್ಪಿ ಜಿ.ಬಿ ಫಗ್ಗೊನಿ, ಅದನ್ನು ಕಟ್ಟಲು ಹತ್ತು ವರ್ಷ ಮಾಡಿದನಂತೆ.
ಇದಾದ ಮೇಲೆ ಮತ್ತೆಂದೂ ಸಂತರ ಪವಿತ್ರ ಅವಶೇಷಗಳ ಶವದ
ಪೆಟ್ಟಿಗೆ ತೆರೆಯದಂತೆ ತೀರ್ಮಾನಿಸಿ 1707 ರಲ್ಲಿ ಅದನ್ನು ಸೀಸದ
ಪೆಟ್ಟಿಗೆಯಲ್ಲಿ ಇರಿಸಲು ಚಿಂತನೆ ನಡೆಸಲಾಗುತ್ತದೆ. ಆದರೂ ಸಂತರ ಅವಶೇಷಗಳು ಮಾಯವಾಗುವುದು
ನಿಲ್ಲುವುದಿಲ್ಲ. ಕೊನೆಗೆ ಆ ಸಮಾಧಿ ಬೀಗದ ಕೈಯನ್ನು ಸಮುದ್ರದಲ್ಲಿ ಎಸೆಯಬೇಕು ಎಂಬ ಸಲಹೆಯೂ
ಬರುತ್ತದೆ.
ತೀರ ಇತ್ತೀಚೆಗೆ, ಆಸ್ತಿಕರು ಪದೇ ಪದೇ ಸಂತರ ಪಾರ್ಥಿವ ಶರೀರವನ್ನು ಮುಟ್ಟುವುದನ್ನು ತಪ್ಪಿಸಲು, 1952ರ ನಂತರದಲ್ಲಿ ಗಾಳಿಯಾಡದಂತೆ ವಾಯುಭದ್ರವಾಗಿ ಬೆಸೆದ
ಗಾಜಿನ ಪೆಟ್ಟಿಗೆಯಲ್ಲಿ ಶವವನ್ನು ಇರಿಸಲಾಗಿದೆ. ನಂತರ ಅದನ್ನು ಬೆಳ್ಳಿಯ ಸಂಪುಟದಲ್ಲಿ
ಭದ್ರವಾಗಿರಿಸಲಾಗಿದೆ. ಈ ಸಮಾಧಿ ಕಲ್ಲಿನ ಕಟ್ಟಡ ಇಟಲಿಯ ಕಲೆಯನ್ನು ಪ್ರತಿನಿಧಿಸಿದರೆ, ಬೆಳ್ಳಿಯ ಶವ ಪೆಟ್ಟಿಗೆ ಭಾರತೀಯ ಕಲೆಯ ಪ್ರತೀಕದಂತಿದೆ.
ಸಾರ್ವಜನಿಕ ಪ್ರದರ್ಶನಕ್ಕೆ ಕಾರಣವಾದ ವದಂತಿ :
ಪ್ರಮುಖರು ಬಂದಾಗಲೆಲ್ಲಾ ಶವಪೆಟ್ಟಿಗೆಯನ್ನು ಆಗಾಗ
ತೆರೆದು ನೋಡುವುದಕ್ಕೆ ಕಡಿವಾಣ ಬೀಳದಿದ್ದಾಗ,
1755ರಲ್ಲಿ
ಪೋರ್ಚುಗಲ್ ದೇಶದ ಅರಸ ತನ್ನ ಅನುಮತಿ ಇಲ್ಲದೇ ಶವಪೆಟ್ಟಿಗೆ ತೆರೆಯಕೂಡದು ಎಂದೂ ಆದೇಶ
ಹೊರಡಿಸುತ್ತಾರೆ.
ಮುಂದೆ 1759ರಲ್ಲಿ ಯೇಸುಸಭೆಯನ್ನು ರದ್ದುಪಡಿಸಿದಾಗ, ಅಂದಿನ ಮೇತ್ರಾಣಿಗಳ ಕೈಗೆ ಆ ಶವ ಪೆಟ್ಟಿಗೆಯ ಉಸ್ತುವಾರಿ ಸಿಗುತ್ತದೆ. ಯೇಸುಸಭೆಯ ಗುರುಗಳು
ಸಂತರ ಶವಪೆಟ್ಟಿಗೆಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ ಎಂಬ ವದಂತಿಗಳು ಹಬ್ಬುತ್ತವೆ.
ವದಂತಿಗಳನ್ನು ಅಲ್ಲಗಳೆಯಲು ಶವ ಸಂಪುಟವನ್ನು ತೆರೆದು
ನೋಡಬೇಕು. ಆದರೆ, ಪೋರ್ಚುಗಲ್ ದೇಶದ ಅರಸರು
ಸಂತರ ಶವ ಸಂಪುಟವನ್ನು ತೆರೆದು ನೋಡುವುದಕ್ಕೆ ನಿರ್ಬಂಧ ಹೇರಿದ್ದರಿಂದ ಗೋವೆಯ ಮೇತ್ರಾಣಿಗಳು, ಆಗ ಏನು ಮಾಡಬೇಕು ಎಂಬುದು ತಿಳಿಯದೇ ಸಂದಿಗ್ಧ ಪರಿಸ್ಥಿತಿಯಲ್ಲಿದ್ದರು.
ಪ್ರತಿವರ್ಷ ಡಿಸೆಂಬರ್ ನಲ್ಲಿ ಸಂತರ ವಾರ್ಷಿಕ ಹಬ್ಬ
ಬರುತ್ತಿದ್ದಂತೆಯೇ ಸಂತರ ಭಕ್ತರು ಒತ್ತಡ ಹೇರತೊಡಗಿದರು. ಅಂತು ಇಂತು ಕೊನೆಗೆ 1782ರಲ್ಲಿ ಸಾರ್ವಜನಿಕರ ವೀಕ್ಷಣೆಗೆ ಶವ ಪೆಟ್ಟಿಗೆಯನ್ನು
ಇರಿಸಲಾಗುತ್ತದೆ.
ದಶಕಗಳಿಗೊಮ್ಮೆ ಪಾರ್ಥಿವ ಶರೀರದ ದರ್ಶನ:
ಅಂತಿಮವಾಗಿ, ಪದೇ ಪದೇ ಸಂತರ ಪವಿತ್ರ ಪಾರ್ಥಿವ ಶರೀರವನ್ನು ತೆಗೆದು ತೋರಿಸುವುದಕ್ಕಿಂತ ಏಳು ಅಥವಾ ಹತ್ತು
ವರ್ಷಗಳಿಗೊಮ್ಮೆ ಸಾರ್ವಜನಿಕ ಪ್ರದರ್ಶನ ನಡೆಸಲು ತೀರ್ಮಾನಿಸಲಾಗುತ್ತದೆ.
ಅದರಂತೆ,
ಆವಾಗಿನಿಂದ
ಅಂದರೆ 1782ರಿಂದ 1952ರವರೆಗೆ ಸಾಮಾನ್ಯವಾಗಿ ಪ್ರತಿ ಏಳು ಅಥವಾ ಹತ್ತು
ವರ್ಷಗಳಿಗೊಮ್ಮೆ ಸಂತ ಫ್ರಾನ್ಸಿಸ್ ಕ್ವೇವಿಯರ್ ಅವರ ಪಾರ್ಥಿವ ಶರೀರದ ಪೆಟ್ಟಿಗೆಯನ್ನು
ಸಾರ್ವಜನಿಕ ವೀಕ್ಷಣೆಗೆ ಇರಿಸುತ್ತಾ ಬರಲಾಗಿದೆ.
ವಿಶೇಷ ಸಂದರ್ಭಗಳಲ್ಲೂ ಅಂಥ ಸಾರ್ವಜನಿಕ ವೀಕ್ಷಣೆಗೆ
ಅವಕಾಶ ಕಲ್ಪಿಸಲಾಗಿದೆ. ಕಳೆದ ಶತಮಾನದ 1964ರಲ್ಲಿ ಮುಂಬೈಯಲ್ಲಿ ಅಂತರ್
ರಾಷ್ಟ್ರೀಯ ಪ್ರಭು ಭೋಜನದ ಸಮಾವೇಶ (ಇಂಟರ್ ನ್ಯಾಷನಲ್ ಯುಕಾರಿಸ್ಟಿಕ್ ಕಾಂಗ್ರೆಸ್) ನಡೆದಾಗ
ಪಾರ್ಥಿವ ಶರೀರದ ಪ್ರದರ್ಶನ ಏರ್ಪಡಿಸಲಾಗಿತ್ತು.
ಈ ಹಿಂದೆ 1984,
1994, 2004, 2014ರಲ್ಲಿ ಸಾರ್ವಜನಿಕ ಪ್ರದರ್ಶನಗಳು ನಡೆದಿದ್ದವು,
ಮುಂದಿನ
ಪ್ರದರ್ಶನ 2024ರಲ್ಲಿ ನಡೆಯಲಿದೆ.
ಆಗಾಗ ಪ್ರದರ್ಶನಗಳ ಮೊದಲು ವೈದ್ಯರು ಪವಿತ್ರ
ಅವಶೇಷಗಳನ್ನು ಪರೀಕ್ಷಿಸುವ ಪದ್ಧತಿಯನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಕಳೆದ ಶತಮಾನದಲ್ಲಿ 1932, 1951ರಲ್ಲಿ ವೈದ್ಯರು
ಪರೀಕ್ಷಿಸಿದ್ದರು. ನಂತರ 1955ರಲ್ಲಿ ವೈದ್ಯರು ಜರುಗಿದ
ಮೂಳೆಗಳನ್ನು ಸರಿಯಾಗಿ ಕೂರಿಸಿದ್ದಾರೆ.
ಸದಾ
ವಿವಾದಗ್ರಸ್ತ ಸಂತರು:
ಸಂತ ಫ್ರಾನ್ಸಿಸ್ ಕ್ಷೇವಿಯರ್ ಅವರನ್ನು ವಿವಾದಗ್ರಸ್ತ
ಸಂತ ಎಂದೇ ಗುರುತಿಸಲಾಗುತ್ತದೆ.
ಮೊದಲ ವಿವಾದ ಅವರ ಪವಿತ್ರ ಪಾರ್ಥಿವ ಶರೀರದ
ಕುರಿತಾಗಿದೆ. ಅದು ಅವರ ಶವವಲ್ಲ ಇನ್ನೊಬ್ಬ ಪಾದ್ರಿಯ ಶವ ಎನ್ನಲಾಗುತ್ತದೆ. ಶವದ ದೈಹಿಕ
ಲಕ್ಷಣಗಳನ್ನು ಗಮನಿಸಿದರೇ, ಅದು ಯುರೋಪಿನ ಜನರಿಗಿಂತ
ಏಷ್ಯ ಮೂಲದ ಜನರನ್ನು ಹೋಲುತ್ತದೆ ಎಂಬ ವಾದವೂ ಇದೆ. ಈಚೆಗೆ ಅದು ಶ್ರೀಲಂಕಾ ಮೂಲದ ಬೌದ್ಧ
ಬಿಕ್ಷುವಿನ ಶವ ಎಂಬ ಹೊಸ ವಿವಾದವು ಹುಟ್ಟಿಕೊಂಡಿತ್ತು.
ಸಂತ ಫ್ರಾನ್ಸಿಸ್ ಕ್ಷೇವಿಯರ್ ಅವರ ಶವವನ್ನು ಕಾಪಿಡಲು, ಇಜಿಪ್ತಿನ ಪುರಾತನಲ್ಲಿ ಜಾರಿಯಲ್ಲಿದ್ದ ಅರಸರುಗಳ ಶವಗಳನ್ನು ಕೆಡದಂತೆ (ಮಮ್ಮಿ) ಮಾಡುವ ತಂತ್ರಜ್ಞಾನವನ್ನು
ಬಳಸಲಾಗಿತ್ತೆ? ಎಂಬುದರ ಬಗೆಗೆ ಎಲ್ಲೂ
ವಿವರಣೆ ಸಿಗುವುದಿಲ್ಲ.
ಎರಡನೇಯದ್ದು, ಅವರು ಸೇವೆಯ ಕುರಿತದ್ದು. ಸಂತ ಫ್ರಾನ್ಸಿಸ್ ಕ್ಷೇವಿಯರ್ ಅವರು ಭಾರತದಲ್ಲಿ ಕಾಲಿರಿಸುವ
ಮೊದಲೇ ಈ ನೆಲದಲ್ಲಿ ಕಾಲಿರಿಸಿದ್ದ ಕ್ರೈಸ್ತ ಮಿಷನರಿಗಳು
ಅಧಿಕ ಸಂಖ್ಯೆಯ ಸ್ಥಳಿಯರನ್ನು ಕ್ರೈಸ್ತ ಮತಕ್ಕೆ ಮತಾಂತರಿಸಿದ್ದರು. ಆದರೆ, ಅದನ್ನು ಸಂತ ಫ್ರಾನ್ಸಿಸ್ ಕ್ಷೇವಿಯರ್ ಅವರು ಮಾಡಿದ್ದು ಎಂದು ಹೇಳಲಾಗುತ್ತದೆ.
ಅವರನ್ನು ಗೋವೆಯ ಪಾಲಕರು ಎಂದು ಕರೆಯುವುದೇ ತಪ್ಪು
ಎಂದು ಕೆಲವರು ವಾದಿಸುತ್ತಾರೆ. ಸಂತ ಫ್ರಾನ್ಸಿಸ್ ಕ್ಷೇವಿಯರ್ ಅವರು ತಮ್ಮ ಹತ್ತು ವರ್ಷಗಳ
ಓಡಾಟದಲ್ಲಿ ಗೋವೆಯಲ್ಲಿ ಎರಡೂ ವರ್ಷಗಳ ಕಾಲವೂ ಇರಲಿಲ್ಲ ಎಂಬ ಸಂಗತಿಯನ್ನು ಅವರು ತಮ್ಮ
ಸಮರ್ಥನೆಗೆ ಬಳಸುತ್ತಾರೆ.
ಕಳೆದ 2009 ಸಾಲಿನಲ್ಲಿ, ಪೋರ್ಚುಗಲ್ ಸರ್ಕಾರವು, ಸಂತ ಫ್ರಾನ್ಸಿಸ್
ಕ್ಷೇವಿಯರ್ ಅವರ ಪವಿತ್ರ ಶವಸಂಪುಟವನ್ನು ಇರಿಸಲಾಗಿರುವ `ಬಸೀಲಿಕ ದೊ ಬೋಮ್ ಜೇಸುಸ್’ ಕಟ್ಟಡವನ್ನು,
ತಾನು ಪಟ್ಟಿ
ಮಾಡಿದ, ಪೋರ್ಚುಗೀಜ್ ಮೂಲದ ವಿಶ್ವದ
ಏಳು ಅದ್ಭುತ ಸ್ಮಾರಕಗಳ ಪಟ್ಟಿಯಲ್ಲಿ ಸೇರಿಸಿರುವುದಕ್ಕೆ ಗೋವಾದಲ್ಲಿ ತೀವ್ರ ಪ್ರತಿರೋಧ
ವ್ಯಕ್ತವಾಗಿತ್ತು.
ಅವರ ಜೀವನಾದರ್ಶವೇ ದಾರಿದೀಪ :
ವಾದ ವಿವಾದಗಳು ಏನೇ ಇರಲಿ. ವಿಶ್ವಾಸಿಕರು ನಂಬುವ
ಪ್ರಕಾರ, ಜೀವಿತದ ಅವಧಿಯಲ್ಲಿಯೇ ಸಕಲರ
ಲೇಸನು ಬಯಸಿ, ಸಕಲ ಜನರಿಂದ ಸಂತರು ಎಂದು
ಕರೆಸಿಕೊಂಡವರು ಸಂತ ಫ್ರಾನ್ಸಿಸ್ ಕ್ಷೇವಿಯರ್ ಅವರು.
ಅವರ ಜೀವನ ಮತ್ತು ಧರ್ಮ ಪ್ರಚಾರ ಕಾರ್ಯ ಹಾಗೂ ಭಕ್ತರ ಅಹವಾಲುಗಳನ್ನು
ಪೂರೈಸಿಕೊಟ್ಟ ಪವಾಡಗಳನ್ನು ಗಣನೆಗೆ ತೆಗೆದುಕೊಂಡು ಅವರಿಗೆ ಸಂತ ಪದವಿ ಪ್ರದಾನ ಮಾಡಲಾಗಿದೆ.
ಶತಮಾನಗಳೂ ಗತಿಸಿದರೂ, ಅವರ ಪಾರ್ಥಿವ ಶರೀರವೂ
ಸಂಪೂರ್ಣವಾಗಿ ನಶಿಸದೇ ಪವಾಡದ ರೀತಿಯಲ್ಲಿ ಇನ್ನೂ ನಮ್ಮೆದುರಿಗೆ ಇದೆ.
ಅವರು ಸದಾ ಪ್ರಾರ್ಥನೆಯಲ್ಲಿ ಮುಳುಗುತ್ತಿದ್ದವರು.
ಜೊತೆಗೆ ಬಡವರ, ದೀನರ ದಲಿತರ, ಶೋಷಿತರ ಪಕ್ಷಪಾತಿ. ಅವರಿಂದ ನೆರವು,
ಕೃಪೆಗಳನ್ನು
ಪಡೆಯುವುದರ ಜೊತೆಜೊತೆಗೆ ಅವರ ಪರಸೇವೆಯ ಜೀವನಾದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು
ಅರ್ಥಪೂರ್ಣ ನಡೆ ಎಂಬುದು ಮಾನವ ಪ್ರೀತಿಯಲ್ಲಿ ವಿಶ್ವಾಸವಿಡುವ ಎಲ್ಲರೂ ಒಪ್ಪತಕ್ಕ ಮಾತು.
No comments:
Post a Comment