Friday, 18 December 2020

ಕ್ರೈಸ್ತರ ಕೆಂಪು ಬುಧವಾರ - ಫ್ರಾನ್ಸಿಸ್. ಎಂ. ಎನ್.

 


ಕೆಂಪು ಬಣ್ಣ, ಕೆಂಪು ಹೃದಯ ಪ್ರೀತಿಯ ಸಂಕೇತ. ಜೊತೆಗೆ ಹಿಂಸೆ, ಅಪಾಯ, ಸಿಟ್ಟು ಸೆಡುವುಗಳಿಗೂ ಕೂಡ ಅದೇ ಬಣ್ಣ ಬೇಕು. ನಮ್ಮ ಪುರಾತನರು ಬೆಂಕಿ ಮತ್ತು ರಕ್ತಗಳನ್ನು ಶಕ್ತಿ ಮತ್ತು ಜೀವಜಲ ಎಂದು ಕೊಂಡಿದ್ದರು. ಧಾರ್ಮಿಕ ಮತ್ತು ಮಾಂತ್ರಿಕ ಶಕ್ತಿಗಳ ಗುರುತಾಗಿಯೂ ಈ ಬಣ್ಣವನ್ನು ಬಳಸಲಾಗುತ್ತದೆ. ವಿರೋಧಾಭಾಸ ಎಂದರೆ, ಬಟ್ಟೆಗೆ ಹಾಕುವ ಕಡು ಕೆಂಪು ಬಣ್ಣವನ್ನು ಕೆಲವು ಬಗೆಯ ಜೀರುಂಡೆ ಜಾತಿಯ ಕೀಟಗಳನ್ನು ಕುಟ್ಟಿ ಪಡೆಯಲಾಗುತ್ತಿದೆ.

ನಿಸರ್ಗ ವ್ಯಾಪಾರಗಳಾದ ಸೂರ್ಯೋದಯ ಮತ್ತು ಸೂರ್ಯಾಸ್ತಗಳ ಕೆಂಪು ರಂಗು ಹಲವಾರು ಬಗೆಯ ವರ್ಣನೆಗಳಗೆ, ವ್ಯಾಖ್ಯಾನಗಳಿಗೆ ಕಾರಣವಾಗಿದೆ.

  ಆಯಾದೇಶದಲ್ಲಿ, ನಾಲ್ಕಾರು ದೇಶಗಳಿಗೆ ಕಥೋಲಿಕ ಕ್ರೈಸ್ತರ ಜಗದ್ಗುರು ಪಾಪುಸ್ವಾಮಿಗಳ ಪ್ರತಿನಿಧಿಗಳಾಗಿರುವ ಪ್ರಧಾನ(ಕಾರ್ಡಿನಲ್)ರು ತೊಡುವ ಮೇಲಂಗಿ ಮತ್ತು ತಲೆ ಬುರುಡೆ ಮುಚ್ಚುವ ಕಿರಿದಾದ ಟೋಪಿಯ ಬಣ್ಣ ಕೆಂಪು.   ಯೇಸುಸ್ವಾಮಿಯನ್ನು ಶಿಲುಬೆಗೆ ಏರಿಸಿದಾಗ ಕೈ ಮತ್ತು ಪಾದಗಳಿಂದ ರಕ್ತ ಸುರಿದಿತ್ತು. ಕ್ರೈಸ್ತ ವಿಶ್ವಾಸಕ್ಕಾಗಿ ಪ್ರಾಣತ್ಯಾಗ ಮಾಡಲೂ ಸಿದ್ಧ ಎಂಬುದನ್ನು ಇದು ಸೂಚಿಸುತ್ತದೆ. 2020ರ ಸಾಲಿನ ನವೆಂಬರ 29ರಂದು ನಡೆದ 13 ಜನ ನೂತನ ಪ್ರಧಾನರ ಅಭಿಷೇಕದ ಸಂದರ್ಭದಲ್ಲಿ ಪಾಪು ಸ್ವಾಮಿಗಳು, `ಹೃದಯದಾಳದಿಂದ    ಯೇಸುಸ್ವಾಮಿಯನ್ನು ಹಿಂಬಾಲಿಸುವುದನ್ನು ನೀವು ಧರಿಸುವ ಕೆಂಪು ಬಣ್ಣದ ಧಿರಿಸು ಸಂಕೇತಿಸುತ್ತದೆ’ ಎಂದು ಹೇಳಿದ್ದರು.

  ಸಾಮಾಜಿಕ ವಲಯದಲ್ಲಿ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತದೆ. ಸಮಾಜದಲ್ಲಿ ಈ ಪಿಡುಗಿನ ಬಗ್ಗೆ ಜಾಗೃತಿ ಮೂಡಿಸಲು ಕೆಲವು ಸಂಘಟನೆಗಳು, 2020ರ ಸಾಲಿನಲ್ಲಿ ಮುಂಗೈಗೆ ಕೆಂಪು ಬಣ್ಣ ಬಳಿದುಕೊಳ್ಳುವ `ಕೆಂಪು ಕೈ‘ (ರೆಡ್ ಹ್ಯಾಂಡ್) ಅಭಿಯಾನ ನಡೆಸಿದವು. ಈ ಅಭಿಯಾನಕ್ಕೆ, ವಾಟ್ಸ್ ಆಪ್, ಫೇಸ್ ಬುಕ್, ಟ್ವಿಟರ್ ಮೊದಲಾದ ಸಾಮಾಜಿಕ ಜಾಲತಾಣಗಳನ್ನು ಬಳಸಲಾಯಿತು. ಕೆಂಪು ಬಣ್ಣದ ರಿಬ್ಬನ್ ಸಹ ಏಡ್ಸ್ ರೋಗದ ಸಂಕೇತವಾಗಿ ಬಳಸಲಾಗುತ್ತಿದೆ.

ಭಾರತೀಯರಾದ ನಾವು ಕೆಂಪು ಬಣ್ಣದ ಕುಂಕುಮವನ್ನು ಮಂಗಳಕಾರಿ ಎಂದು ಪರಿಗಣಿಸುತ್ತೇವೆ. ಮಹಿಳೆಯರ ಹಣೆಯ ಸಿಂಧೂರವೂ ಕೆಂಪು ಬಣ್ಣದಲ್ಲೇ ಇರುತ್ತದೆ. ಮದುವೆಗೆ, ಸಂತೋಷ ಮತ್ತು ಶುಭಶಕುನದ ಕೆಂಪು ಬಣ್ಣದ ಸೀರೆಯೇ ಬೇಕು, ಯಾವುದೇ ವಾಹನ ಅಥವಾ ಕೆಲಸವನ್ನು `ನಿಲ್ಲಿಸು’ ಎನ್ನುವುದಕ್ಕೆ ಕೆಂಪು ಬಣ್ಣದ ಗುರುತನ್ನೇ ಬಳಸುತ್ತೇವೆ.

ಕ್ರೈಸ್ತರ ಮೇಲಿನ ದೌರ್ಜನ್ಯ ತಡೆಗೆ ಕೆಂಪು:

ಈಗ ಕ್ರೈಸ್ತರು ಸಹೋದರ ಸಹೋದರಿಯರು, ಜಗತ್ತಿನ ವಿವಿಧೆಡೆ ತಮ್ಮ ಸಹೋದರ ಸಹೋದರಿಯರ ಮೇಲೆ, ಧಾರ್ಮಿಕ ಕಾರಣವಾಗಿ ನಡೆಯುತ್ತಿರುವ ಕಿರುಕುಳ, ಅನ್ಯಾಯ, ಅನಾಚಾರಗಳ ಬಗ್ಗೆ ಗಮನ ಸೆಳೆಯಲು, ಅಂಥ ಸಂತ್ರಸ್ತರಿಗೆ ನೈತಿಕ ಬೆಂಬಲದ ಜೊತೆಗೆ ಎಲ್ಲಾ ಬಗೆಯ ಸಹಾಯ ನೀಡುವ ಉದ್ದೇಶಕ್ಕಾಗಿ ಒಂದು ದಿನವನ್ನು ಮೀಸಲಿಡಲಾಗಿದೆ.

ಪತ್ರಿವರ್ಷ ನವೆಂಬರ ತಿಂಗಳ ಮೂರನೇ ವಾರದ ಬುಧವಾರದಂದು ಕಥೋಲಿಕ ಕ್ರೈಸ್ತರು `ಕೆಂಪು ಬುಧವಾರ’ವನ್ನು ಆಚರಿಸುತ್ತಿದ್ದಾರೆ. ಇಂಗ್ಲಂಡಿನಲ್ಲಿ ಮೊದಲ ಬಾರಿ 2016ರಲ್ಲಿ `ಕೆಂಪು ಬುಧವಾರ’ವನ್ನು ಆಚರಿಸಲಾಯಿತು.  ಈಗ ಜಗತ್ತಿನ ಬಹುತೇಕ ದೇಶಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ. ಅಂದು ಸಾಮಾನ್ಯವಾಗಿ ಚರ್ಚುಗಳನ್ನು ಮತ್ತು ಸಾರ್ವಜನಿಕ ಕಟ್ಟಡಗಳನ್ನು ಕೆಂಪು ಬಣ್ಣದ ದೀಪಗಳಿಂದ ಅಲಂಕರಿಸಲಾಗುತ್ತದೆ. ಕೆಂಪು ಬುಧವಾರ ಆಚರಣೆಯನ್ನು ಬೆಂಬಲಿಸುವವರು ಜನರು ಕೆಂಪು ಬಟ್ಟೆ ಧರಿಸುತ್ತಾರೆ.

ಹೆಚ್ಚುತ್ತಿರುವ ಕ್ರೈಸ್ತರ ಮೇಲಿನ ಕಿರುಕುಳ:

ಹಿಂದೆ, ಆದಿ ಕಾಲದಲ್ಲಿ ರೋಮನ್ ಚಕ್ರವರ್ತಿಗಳು ನೀಡುತ್ತಿದ್ದ ಕಿರುಕುಳ ಹೊರತುಪಡಿಸಿದರೆ, ಕ್ರೈಸ್ತರು ಇಂದು ಜಗತ್ತಿನಾದ್ಯಂತ ಕಿರುಕುಳಕ್ಕೆ ಒಳಗಾಗುತ್ತಿರುವ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ.

ಕ್ರೈಸ್ತ ವಿಶ್ವಾಸಿಗಳ ಮೇಲಾಗುತ್ತಿರುವ ಕಿರುಕುಳದ ಪ್ರಮಾಣ, ಕಿರುಳುಳಕ್ಕೆ ಈಡಾಗುವವರ ಸಂಖ್ಯೆ ಮತ್ತು ಅದರ ಪರಿಣಾಮ ಈಗಿನ ದಿನಮಾನಗಳಲ್ಲಿ ಗಣನೀಯವಾಗಿ ಹೆಚ್ಚುತ್ತಿರುವುದು ಆತಂಕದ ಸಂಗತಿಯಾಗಿದೆ.

ಕಿರುಕುಳದ ದೆಸೆಯಿಂದ ಯಾರ ಬಾಯಿ ಕಟ್ಟಿದಂತಾಗಿದೆಯೋ, ಅವರ ಪರವಾಗಿ ದನಿ ಎತ್ತಬೇಕಾಗಿದೆ. ಅವರ ಕಿರುಕುಳದ ವಿರುದ್ಧ ಗಟ್ಟಿ ದನಿಯಲ್ಲಿ ಅವರಿಗೆ ಬೆಂಬಲ ಸೂಚಿಸಬೇಕಾಗಿದೆ. ಇದನ್ನು ಮನಗಂಡ ಎ.ಸಿ.ಎನ್ ಸಂಘಟನೆ ಈ ನಿಟ್ಟಿನಲ್ಲಿ ಕಾರ್ಯತತ್ಪರವಾಯಿತು.

  ಏನಿದು ಎ ಸಿ ಎನ್?:

ಎ ಸಿ ಎನ್ ಎಂದರೆ, ಏಡ್ ಟು ದಿ ಚರ್ಚ ಇನ ನೀಡ್’. ಕನ್ನಡದಲ್ಲಿ ಇದನ್ನು `ಅಗತ್ಯವಿರುವ ಧರ್ಮಸಭೆಗೆ ಸಹಾಯ’ (ನೀಡುವುದು) ಎಂದು ತರ್ಜುಮೆ ಮಾಡಬಹುದು. ಇದೊಂದು ಧಾರ್ಮಿಕ ಸಂಘಟನೆ. ಇದರ ಮೂಲ ಬೇರುಗಳನ್ನು ಹುಡುಕುತ್ತ ಸಾಗಿದರೆ, ನಾವು ಯುರೋಪಿನಲ್ಲಿ ನಡೆದಿದ್ದ ಎರಡನೇ ಮಹಾಯುದ್ಧದ ದಿನಗಳಿಗೆ ಹೋಗಬೇಕಾಗುತ್ತದೆ.

ಯುರೋಪು ಖಂಡದಲ್ಲಿ ಸಾಕಷ್ಟು ಆಸ್ತಿಪಾಸ್ತಿ ನಾಶವಾಗಿತ್ತು, ನೂರಾರು ಜನರು ಯುದ್ಧಭೂಮಿಯಲ್ಲಿ ಅಸುನೀಗಿದ್ದರೆ, ಸಹಸ್ರಾರು ಜನ ಅನಾಥರಾಗಿದ್ದರು, ನಿರ್ವಸಿತಗೊಂಡಿದ್ದರು. ಕಿರುಕುಳದಿಂದ ಬೇಸತ್ತ ಜನ ಪೂರ್ವ ಜರ್ಮನಿಯಿಂದ ಸುರಕ್ಷಿತ ನೆಲೆ ಮತ್ತು ಆಹಾರ ಅರಸಿಕೊಂಡು ಗುಳೆ ಬರುತ್ತಿದ್ದರು.

ಅಂಥ ದುರ್ಭರ ಸಂದರ್ಭದಲ್ಲಿ ವಂದನೀಯ ಫಾದರ್ ವೆರೆನ್‍ಫ್ರೈಡ್ ವ್ಯಾನ್ ಸ್ಟ್ರಟನ್ ಎಂಬುವವರು, ಯುದ್ಧದ ಸಂತ್ರಸ್ತರಿಗಾಗಿ `ಕಲ್ಯಾಣ ಸಂಸ್ಥೆ’ಯೊಂದನ್ನು ಹುಟ್ಟುಹಾಕಿದ್ದರು. ಈ ಸಂಸ್ಥೆಯು ಪೂರ್ವ ಜರ್ಮನಿಯ ಸಂತ್ರಸ್ತರಿಗೆ ಆಹಾರ ಮತ್ತು ಬಟ್ಟೆಗಳನ್ನು ಒದಗಿಸಿ ಅವರ ಆಧ್ಯಾತಿಕ ಅಗತ್ಯಗಳನ್ನು ಪೂರೈಸುತ್ತಿತ್ತು.

ಒಣ ಹಂದಿ ಮಾಂಸದ ಪಾದ್ರಿ:

ಯುದ್ಧದಿಂದ ಬಸವಳಿದಿದ್ದ ದಾನಿಗಳು ಏನು ಕೊಟ್ಟರೂ ಅದನ್ನು ಸ್ವೀಕರಿಸಿ, ಬೇಕಿದ್ದವರಿಗೆ ಮುಟ್ಟಿಸುತ್ತಿದ್ದರು. ಹಣವಿಲ್ಲದವರು ಆಹಾರ ಸಾಮಗ್ರಿಗಳನ್ನು ಕೊಡುತ್ತಿದ್ದರು. ಬಹುತೇಕರು ಉಪ್ಪನ್ನು ಉದುರಿಸಿ ಒಣಗಿಸಿದ ಹಂದಿ ಮಾಂಸವನ್ನು ಕೊಡುತ್ತಿದ್ದರು. ಅದನ್ನು `ಬೇಕನ್’ ಎನ್ನುತ್ತಾರೆ. ಫಾದರ್ ಸ್ಟ್ರಟನ್ ಅವರನ್ನು ಜನ ಪ್ರೀತಿಯಿಂದ `ಬೇಕನ್ ಪ್ರೀಸ್ಟ್’ ಎಂದು ಕರೆಯುತ್ತಿದ್ದರಂತೆ.

ಮುಂದೆ 1950ರಲ್ಲಿ ಶೀತಲ ಸಮರ ಆರಂಭವಾದಾಗ, ವಿವಿಧ ದೇಶಗಳಲ್ಲಿ ಧರ್ಮದ ಹಿನ್ನೆಲೆಯಿಂದ         ಬಂಧಿತರಾಗುತ್ತಿದ್ದವರ ಬೆಂಬಲಕ್ಕೆ ಈ ಸಂಘಟನೆ ಮುಂದೆ ಬಂದಿತು. ಅದರ ಸೇವಾ ಕ್ಷೇತ್ರದ ವ್ಯಾಪ್ತಿ ಆಫ್ರಿಕಾ, ಏಷ್ಯ ಮತ್ತು ಲ್ಯಾಟಿನ ಅಮೇರಿಕ ಪ್ರದೇಶದ ದೇಶಗಳಿಗೂ ಹಬ್ಬಿದೆ. ಇಂದು ಸಂಘಟನೆಗೆ ವಿವಿಧೆಡೆಯಿಂದ ವರ್ಷಕ್ಕೆ 106 ದಶಕೋಟಿ ಯುರೋ ಡಾಲರ್ ಹಣ ಹರಿದು ಬರುತ್ತಿದೆ. ಈಗ ಈ ಸಂಘಟನೆ ವಿಶ್ವದೆಲ್ಲೆಡೆ ಕಿರುಕುಳದ ಸಂತ್ರಸ್ತರ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.

ಕಳೆದ ಶತಮಾನದ 1947ರಲ್ಲಿ ಆರಂಭವಾದ ಈ ಸಂಘಟನೆಗೆ, ಈ ಶತಮಾನದ 2011ರಲ್ಲಿ ಕಥೋಲಿಕ ಧರ್ಮಸಭೆ ತನ್ನ ಅಧಿಕೃತ ಮುದ್ರೆಯನ್ನು ಒತ್ತಿದೆ. ಇಡೀ ಜಗತ್ತಿನಲ್ಲಿ ಕ್ರೈಸ್ತ ಧರ್ಮದ ದೆಸೆಯಿಂದ, ಕಿರುಕುಳ ಅನುಭವಿಸುತ್ತಿರುವರ, ಸಂತ್ರಸ್ತರಾದವರ ನೆರವಿಗೆ ಈ ಸಂಘಟನೆ ಧಾವಿಸುತ್ತದೆ. ಅವರೊಂದಿಗೆ ಮಾಹಿತಿ ವಿನಿಮಯ ಮಾಡುತ್ತಾ, ಅವರಿಗಾಗಿ ಪ್ರಾರ್ಥಿಸುತ್ತಾ, ಅಗತ್ಯ ನೆರವನ್ನು ನೀಡಲು ಶ್ರಮಿಸುತ್ತಿದೆ.

 `ಕೆಂಪು ಬುಧವಾರ’ಕ್ಕೆ ಸಿಎಸ್ ಡ್ಲೂ ಬೆಂಬಲ:

`ಕೆಂಪು ಬುಧವಾರ’ದ ಆಚರಣೆಯಲ್ಲಿ ಇತ್ತೀಚೆಗೆ, ಕ್ರೈಸ್ತ ವಿಶ್ವವ್ಯಾಪಿ ಐಕಮತ್ಯ  (ಕ್ರಿಶ್ಚಿಯನ್ ಸಾಲಿಡ್ಯಾರಿಟಿ ವಲ್ರ್ಡವೈಡ್ -ಸಿಎಸ್ ಡ್ಲೂ) ಸಂಘಟನೆಯು `ಕೆಂಪು ಬುಧವಾರ’ದ ಆಚರಣೆಗೆ ಬೆಂಬಲ ನೀಡತೊಡಗಿದೆ.

ಮೆರ್ವಿನ್ ಥಾಮಸ್ ಅವರು ಈ ಸಂಘಟನೆಯ ಸ್ಥಾಪಕ ಅಧ್ಯಕ್ಷರು. ಈ ಸಂಘಟನೆಯು ಧಾರ್ಮಿಕ ಸ್ವಾತಂತ್ರ್ಯ ಹಾಗೂ ಮಾನವಹಕ್ಕು ರಕ್ಷಣೆಗೆ ಶ್ರಮಿಸುತ್ತಿದೆ. ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ವ್ಯವಹರಿಸುತ್ತದೆ.

`ಪ್ರತಿಯೊಬ್ಬರೂ ತಮ್ಮ ವಿಶ್ವಾಸಹೊಂದಲು ಸ್ವತಂತ್ರರು. ತಾವು ನಂಬಿದ ವಿಶ್ವಾಸ, ಧರ್ಮದ ಕಾರಣ ಅನ್ಯಾಯಕ್ಕೀಡಾಗುವವರ ಪರ ನಾವು ಕ್ರೈಸ್ತರು ನಿಲ್ಲುತ್ತೇವೆ’ ಎಂಬುದು ಇದರ ಧ್ಯೇಯವಾಕ್ಯ.

`ಕೆಂಪು ಬುಧವಾರ’ದ ಆಚರಣೆ ಹೇಗೆ?:

ಕೆಲವು ಸಲಹೆಗಳು ಇಂತಿವೆ. ತಲೆಯಿಂದ ಕಾಲಿನವರೆಗೂ ಕೆಂಪು ಬಣ್ಣದ ಬಟ್ಟೆ ತೊಡಲು ಸಾಧ್ಯವಾಗದಿದ್ದರೆ, ಹೆಣ್ಣುಮಕ್ಕಳು ತುರುಬಿಗೆ ಕೆಂಪು ಬಣ್ಣದ ರಿಬ್ಬನ್ ಅಥವಾ ಕ್ಲಿಪ್ ಗಳನ್ನು ಹಾಕಿಕೊಳ್ಳಬಹುದು. ಗಂಡಸರು ಮತ್ತು ಹೆಣ್ಣುಮಕ್ಕಳು ತೋಳುಗಳಿಗೆ ಕೆಂಪು ಬಣ್ಣದ ಪಟ್ಟಿ ಕಟ್ಟಿಕೊಳ್ಳಬಹುದು. ಕತ್ತಿಗೆ ಕೆಂಪು ಸ್ಕಾರ್ಫ ಹಾಕಿಕೊಳ್ಳಬಹುದು. ತಲೆಗೆ ಕೆಂಪು ಟೋಪಿ ಹಕಿಕೊಳ್ಳಬಹುದು. ತಮ್ಮ ಕೆಂಪುಡುಗೆಯ ಸೆಲ್ಫಿ ತೆಗೆದು ಸಾಮಾಜಿಕ ತಾಣಗಳಲ್ಲಿ ತೂರಬಹುದು. ಜೊತೆಗೆ ಕೆಂಪು ಬುಧವಾರ ಎಂಬ ಹ್ಯಾಷ್ ಟ್ಯಾಗ್ - ಬಾಲಂಗೊಚಿ ಇರಲೇಬೇಕು.

 ಕ್ರೈಸ್ತ ಪ್ರೀತಿಗಾಗಿ ತೊಂದರೆ ಅನುಭವಿಸುತ್ತಿರುವವರಲ್ಲಿ ನಮ್ಮ ಪ್ರೀತಿ ಸಹೋದರತೆ ಮತ್ತು ಒಗ್ಗಟ್ಟನ್ನು ಸೂಚಿಸಲು, ಕ್ರೈಸ್ತರಿಗೆ ಪ್ರಾರ್ಥನೆ ಎಂಬುದು ಒಂದು ದೊಡ್ಡ ಸಾಧನ ಎಂಬುದನ್ನು ಮರೆಯಲಾಗದು. ಕಿರುಕುಳ ಅನುಭವಿಸುವವರ ಕಲ್ಯಾಣಕ್ಕಾಗಿ ಪೂಜೆಗಳನ್ನು ಹೇಳಬೇಕು, ಜಪಮಾಲೆ ಹೇಳಬಹುದು, ರಾತ್ರಿ ಪೂಜಾ ಜಾಗರಣೆ ಮಾಡಬಹುದು.

 ಕ್ರೈಸ್ತರು ತಮ್ಮ ಮೇಲಿನ ದೌರ್ಜನ್ಯಗಳನ್ನು ನಿರ್ಲಕ್ಷಿಸುವುದು ಸಹಜ ಸಂಗತಿಯಾಗಿದೆ. ಆದರೆ, ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಗಮನಕ್ಕೆ ಬಂದ ದೌರ್ಜನ್ಯದ ಕತೆಗಳನ್ನು ಒಬ್ಬರಿಗೊಬ್ಬರು ಹಂಚಿಕೊಂಡು ಒಗ್ಗಟ್ಟನ್ನು ಪ್ರದರ್ಶಿಸಬೇಕು. ಅಂಥವನ್ನು ಜಾಲತಾಣಗಳಲ್ಲಿ ಹಂಚಿಕೊಂಡು, ಅದಕ್ಕೆ ಕೆಂಪು ಬುಧವಾರ ಬಾಲಂಗೋಚಿ ಹಚ್ಚಬೇಕು.

 ಕೊನೆಯದು ಆದರೂ ಮುಖ್ಯವಾದದು. ಏಡ್ ಟು ದಿ ಚರ್ಚ ಇನ್ ನೀಡ್ ಸಂಘಟನೆಗೆ ದೇಣಿಗೆ ಹೊಂದಿಸುವುದು. ಮನಸ್ಸು ಮಾಡಿದರೇ ಅದಕ್ಕೆ ನೂರೆಂಟು ದಾರಿಗಳು ತೆರೆದುಕೊಳ್ಳುತ್ತದೆ ಎಂಬುದನ್ನು ಮರೆಯುವಂತಿಲ್ಲ.

`ಕೆಂಪು ಬುಧವಾರ’ಕ್ಕೆ ಸ್ಪಂದನೆ ಅತ್ಯಲ್ಪ:

ಪ್ರಸಕ್ತ ಸಾಲಿನ ನವೆಂಬರ 28, `ಕೆಂಪು ಬುಧವಾರ’ವಾಗಿತ್ತು. ಜಗತ್ತಿನಾದ್ಯಂತ ವಿವಿಧ ದೇಶಗಳಲ್ಲಿ. ಕ್ರೈಸ್ತ ಧರ್ಮದ ದೆಸೆಯಿಂದ ಕಿರುಕುಳವನ್ನು ಅನುಭವಿಸುತ್ತಿರುವ ಕ್ರೈಸ್ತ ಸಹೋದರ ಸಹೋದರಿಯರೊಂದಿಗೆ ನಾವು ಇದ್ದೇವೆ ಎಂಬುದನ್ನು ದೃಢಪಡಿಸಲು `ಕೆಂಪು ಬುಧವಾರ’ ವನ್ನು ಆಚರಿಸಲಾಯಿತು.

ಧಾರ್ಮಿಕ ಕಿರುಕುಳದೊಂದಿಗೆ ಈ ಬಾರಿ, ಕರೋನ ಕಾಯಿಲೆಗೆ ಬಲಿಯಾದವರಿಗಾಗಿ, ಕಾಯಲೆಯ ಚಿಕಿತ್ಸೆಯಲ್ಲಿ ತೊಡಗಿರುವವರಿಗಾಗಿ, ಚಂಡ ಮಾರುತದಂಥ ನೈಸರ್ಗಿಕ ವಿಪುತ್ತುಗಳಲ್ಲಿ ನೊಂದವರಿಗಾಗಿಯೂ `ಕೆಂಪು ಬುಧವಾರ’ವನ್ನು ಮೀಸಲಿಡಲಾಯಿತು. ಆದರೆ, ನಮ್ಮ ನಾಡಿನಲ್ಲಿ ಅದರ ಸೊಲ್ಲು ಎಲ್ಲೂ ಕೇಳಿಸಲಿಲ್ಲ. ದೂರದ ಜಾರ್ಖಂಡ್, ಉತ್ತರ ಪ್ರದೇಶ ಮೊದಲಾದ ರಾಜ್ಯಗಳಲ್ಲಿನ ಕ್ರೈಸ್ತ ವಿಶ್ವಾಸಿಗಳ ಮೇಲಿನ ದೌರ್ಜನ್ಯಗಳು, ಆಗಾಗ ವರದಿ ಆಗುತ್ತಲೇ ಇರುತ್ತವೆ. ಅವರ ಸಂಕಷ್ಟಗಳಿಗೆ ನಮ್ಮ ಸ್ಪಂದನೆ ಅತ್ಯಲ್ಪ.


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...