ನಾನು ನಿಸ್ವಾರ್ಥಿ, ಇತರರ ಬಗ್ಗೆ ಆಲೋಚಿಸುವವನು
ಪ್ರಖ್ಯಾತ ವಿದ್ವಾಂಸನೊಬ್ಬ ನಸ್ರುದ್ದೀನನ ಹಳ್ಳಿಯಲ್ಲಿ ಹಾದು ಹೋಗುತ್ತಿದ್ದ. ಆತನಿಗೆ ಹಸಿವಾಗಿತ್ತು. ಎದುರಿಗೆ ಸಿಕ್ಕ ನಸ್ರುದ್ದೀನನನ್ನು ಆ ಊರಿನಲ್ಲಿ ಒಳ್ಳೆಯ ಊಟ ಸಿಗುವ ಸ್ಥಳ ಯಾವುದು ಎಂದು ಕೇಳಿದ. ನಸ್ರುದ್ದೀನ್ ತನಗೆ ತಿಳಿದಿದ್ದ ಉಪಾಹಾರ ಮಂದಿರದ ವಿಳಾಸ ತಿಳಿಸಿದ. ಆ ವಿದ್ವಾಂಸನಿಗೆ ನಸ್ರುದ್ದೀನ್ ಸಹ ಒಬ್ಬ ವಿದ್ವಾಂಸನ ಹಾಗೆ ಕಂಡು ಆತನೊಂದಿಗೆ ಬಹಳಷ್ಟು ವಿಷಯ ಚರ್ಚೆ ಮಾಡಬಹುದೆಂದು ಆತನನ್ನು ಸಹ ತನ್ನ ಜೊತೆ ಊಟಕ್ಕೆ ಬರುವಂತೆ ಆಹ್ವಾನಿಸಿದ. ಬಹಳ ಸಂತೋಷದಿಂದ ಒಪ್ಪಿದ ನಸ್ರುದ್ದೀನ್ ಆತನನ್ನು ಉಪಾಹಾರ ಮಂದಿರಕ್ಕೆ ಕರೆದೊಯ್ದ. ಅಲ್ಲಿ ಊಟಕ್ಕೆ ತಾಜಾ ಮೀನು ಸಿಗುತ್ತದೆ ಎಂದು ತಿಳಿದು ವಿದ್ವಾಂಸ ಎರಡು ಮೀನು ಬಡಿಸಲು ಹೇಳಿದ. ಬಡಿಸುವವ ತಟ್ಟೆಯಲ್ಲಿ ಎರಡು ಮೀನು ತಂದಾಗ ಅದರಲ್ಲಿ ಒಂದು ಸ್ವಲ್ಪ ದೊಡ್ಡದು ಮತ್ತೊಂದು ಸಣ್ಣದಿತ್ತು. ನಸ್ರುದ್ದೀನ್ ಗಬಕ್ಕನೆ ದೊಡ್ಡ ಮೀನನ್ನು ಎತ್ತಿ ತನ್ನ ತಟ್ಟೆಗೆ ಹಾಕಿಕೊಂಡ. ಅದನ್ನು ನೋಡಿದ ವಿದ್ವಾಂಸ ಮುಲ್ಲಾ ನಸ್ರುದ್ದೀನನಿಗೆ ಆತನ ನಡತೆಯ ಬಗ್ಗೆ ದೊಡ್ಡ ಭಾಷಣವನ್ನೇ ಮಾಡಿದ. ಆ ರೀತಿ ಯಾವುದೇ ವ್ಯಕ್ತಿ ಸ್ವಾರ್ಥಿಯಾಗಿರಬಾರದೆಂದೂ, ಆ ರೀತಿಯ ನಡತೆಯು ಎಲ್ಲ ನೈತಿಕ ಮೌಲ್ಯಗಳನ್ನು ಧಿಕ್ಕರಿಸುವುದೆಂದೂ ಹೇಳಿದ. ಆ ವಿದ್ವಾಂಸ ಬಹಳಷ್ಟು ಹೇಳಿ ತನ್ನ ಭಾಷಣ ನಿಲ್ಲಿಸಿದ. ಅದನ್ನೇ ಕಾಯುತ್ತಿದ್ದ ನಸ್ರುದ್ದೀನ್, ‘ನನ್ನ ಸ್ಥಾನದಲ್ಲಿ ನೀವಿದ್ದಿದ್ದರೆ ಏನು ಮಾಡುತ್ತಿದ್ದಿರಿ?’ಎಂದು ಕೇಳಿದ.
‘ನಾನು ನಿಸ್ವಾರ್ಥಿ, ಇತರರ ಬಗ್ಗೆ ಆಲೋಚಿಸುವವನು. ಹಾಗಾಗಿ ನಾನು ಮೊದಲು ಚಿಕ್ಕ ಮೀನೇ ತೆಗೆದುಕೊಳ್ಳುತ್ತಿದ್ದೆ’ ಎಂದ ವಿದ್ವಾಂಸ. ಅದಕ್ಕೆ ನಸ್ರುದ್ದೀನ್, ‘ಹೌದೇ! ತೆಗೆದುಕೊಳ್ಳಿ, ನಿಮ್ಮ ಚಿಕ್ಕಮೀನು ಇನ್ನೂ ಇಲ್ಲೇ ಇದೆ’ ಎನ್ನುತ್ತಾ ಅದನ್ನು ತೆಗೆದು ವಿದ್ವಾಂಸನ ತಟ್ಟೆಗೆ ಹಾಕಿದ.
ಕತ್ತೆ ಮತ್ತು ಮುಠ್ಠಾಳರು
ಮುಲ್ಲಾನಸ್ರುದ್ದೀನ್ ಮತ್ತು ಆತನ ಮಗ ತಮ್ಮ ಕತ್ತೆಯ ಮೇಲೆ ಕೂತು ಮಾರುಕಟ್ಟೆಗೆ ಹೋಗುತ್ತಿದ್ದರು. ಅದನ್ನು ನೋಡಿದ ಕೆಲವರು, "ಎಂಥಾ ಕಾಲ ಬಂತು ನೋಡಿ! ಈ ಇಬ್ಬರು ಮೂಕ ಪ್ರಾಣಿಯ ಮೇಲೆ ಹೇಗೆ ಕೂತು ಹೋಗುತ್ತಿದ್ದಾರೆ. ಬಡಪಾಯಿ ಪ್ರಾಣಿ ಅವರ ತೂಕಕ್ಕೆ ಬಾಗಿಹೋಗಿದೆ!" ಎಂದರು.
ಆ ಮಾತನ್ನು ಕೇಳಿದ ನಸ್ರುದ್ದೀನ್ ತನ್ನ ಮಗನಿಗೆ ಕತ್ತೆಯಿಂದ ಕೆಳಗಿಳಿದು ನಡೆದು ಕೊಂಡು ಬರಲು ತಿಳಿಸಿದ. ಸ್ವಲ್ಪ ಮುಂದೆ ಹೋದಂತೆ ರಸ್ತೆಯ ಬದಿಯಲ್ಲಿ ನಿಂತಿದ್ದ ಕೆಲವರು, "ಎಂಥಾ ಕಾಲ ಬಂತು ನೋಡಿ! ಈ ಧಡಿಯ ತನ್ನ ಬಡಪಾಯಿ ಮಗನನ್ನು ನಡೆಸಿಕೊಂಡು ತಾನು ಕತ್ತೆಯ ಮೇಲೆ ಕೂತು ಹೋಗುತ್ತಿದ್ದಾನೆ!" ಎಂದರು.
ಅದನ್ನು ಕೇಳಿಸಿಕೊಂಡ ನಸ್ರುದ್ದೀನ್ತ ತಾನು ಕತ್ತೆಯಿಂದ ಕೆಳಗಿಳಿದು ತನ್ನ ಮಗನನ್ನು ಕತ್ತೆಯ ಮೇಲೆ ಕೂರಿಸಿ, ತಾನು ಅದರ ಪಕ್ಕದಲ್ಲಿ ನಡೆಯುತ್ತಾ ಹೋದ. ಒಂದಷ್ಟು ದೂರ ಹೋದ ಮೇಲೆ ಒಂದು ಜನರ ಗುಂಪು ಇವರನ್ನು ಹಾದು ಹೋಯಿತು. ಅವರಲ್ಲೊಬ್ಬ, "ಎಂಥಾ ಕಾಲ ಬಂತು ನೋಡಿ! ವಯಸ್ಸಿನ ಹುಡುಗ ಕತ್ತೆಯ ಮೇಲೆ ಕೂತು ಹೋಗುತ್ತಿದ್ದಾನೆ, ವಯಸ್ಸಾದ ಆತನ ತಂದೆ ನಡೆದು ಹೋಗುತ್ತಿದ್ದಾನೆ!" ಎಂದ.
ಆತನ ಮಾತು ಕೇಳಿಸಿಕೊಂಡ ನಸ್ರುದ್ದೀನ್ ತನ್ನ ಮಗನನ್ನೂ ಕೆಳಕ್ಕಿಳಿಸಿ ಕತ್ತೆಯ ಹಗ್ಗ ಹಿಡಿದುಕೊಂಡು ಅದನ್ನು ಕರೆದೊಯ್ಯುತ್ತಾ ಇಬ್ಬರೂ ನಡೆದುಕೊಂಡು ಹೊರಟರು. ಎದುರಿಗೆ ಮತ್ತೊಂದು ಜನರ ಗುಂಪು ಬಂದಿತು. ಇವರನ್ನು ನೋಡಿದ ಅವರಲ್ಲೊಬ್ಬಾತ, "ಈ ಮುಠ್ಠಾಳರನ್ನು ನೋಡಿ! ಅವರ ಬಳಿ ಕತ್ತೆಯೊಂದಿದೆ, ಆದರೂ ನಡೆದು ಹೋಗುತ್ತಿದ್ದಾರೆ!" ಎಂದ.
ತಜ್ಞರುತಪ್ಪುಮಾಡುವುದುಂಟೆ?
ಮರಣ ಹೊಂದಿದ್ದಾನೆ ಎಂದು ತಜ್ಞರಿಂದ ತೀರ್ಮಾನಿಸಲಾದ ಒಬ್ಬನನ್ನು ಸಮಾಧಿ ಮಾಡಲೆಂದು ಹೊತ್ತುಕೊಂಡು ಹೋಗಲಾಯಿತು. ಶವಪೆಟ್ಟಿಗೆಯನ್ನು ಕೆಳಗಿಳಿಸಬೇಕು ಎನ್ನುವಷ್ಟರಲ್ಲೇ ಒಳಗಿದ್ದವನು ಮುಚ್ಚಳವನ್ನು ಹೊಡೆಯಲಾರಂಭಿಸಿದ, ಒಡನೆಯೇ ಶವ ಪೆಟ್ಟಿಗೆಯನ್ನು ತೆರೆಯಲಾಯಿತು. ಸತ್ತು ಹೋದ ಎಂದೆಣಿಸಿದ ವ್ಯಕ್ತಿ ಎದ್ದು ಕುಳಿತು ನೀವೇನು ಮಾಡ್ತಾ ಇದ್ದೀರಾ? ನಾನಿನ್ನೂ ಜೀವಂತವಾಗಿಯೇ ಇದ್ದೇನೆ. ಸತ್ತು ಹೋಗಿಲ್ಲ ಎಂದವನೇ ಹೊರಬರಲು ಪ್ರಯತ್ನಿಸಿದ. ಸುತ್ತಲಿದ್ದವರು ಭಯಭ್ರಾಂತರಾಗಿ ಗುರುಗಳು ಮತ್ತು ವೈದ್ಯರು ನೀನು ಮರಣ ಹೊಂದಿದ್ದೀಯೆಂದು ಸಾಬೀತು ಪಡಿಸಿದ್ದಾರೆ. ತಜ್ಞರು ತಪ್ಪು ಮಾಡುವುದುಂಟೆ. ಒಳಗೆ ಸೇರು, ನೀನು ಸತ್ತು ಹೋಗಿದ್ದೀಯಾ ಎಂದು ಅವನನ್ನು ಬಲವಂತವಾಗಿ ಶವಪೆಟ್ಟಿಗೆಯಲ್ಲಿ ಮುಚ್ಚಿ, ಶಾಸ್ತ್ರೋಕ್ತವಾಗಿ ಸಮಾಧಿ ಮಾಡಿದರು.
· ಇನ್ನಾ
No comments:
Post a Comment