ಸಹೋ. ವಿನಯ್ ಕುಮಾರ್
ಇಲ್ಲಿ ನಾವು ಮುಖ್ಯವಾಗಿ ಐದು ಮೂಲ ಉದ್ದೇಶಗಳನ್ನು ಕಾಣಲಿದ್ದೇವೆ. ಈ ವಾದಕ್ಕೆ ಪೂರಕವಾಗಿ ಪುರಾವೆಗಳನ್ನು ಒದಗಿಸಲು ಸಾಧ್ಯವಿಲ್ಲ, ಆದ್ದರಿಂದ ಇವುಗಳನ್ನು ಅಧ್ಯಯನದ ದೃಷ್ಟಿಯಿಂದ ನೋಡುವುದು ಸೂಕ್ತವಾಗಿದೆ.
1) ಐಚ್ಛಿಕ ಉದ್ದೇಶ - ಈ ಶುಭಸಂದೇಶವನ್ನು ಬೇರೆ ಮೂರು ಶುಭಸಂದೇಶಕ್ಕೆ ಐಚ್ಛಿಕವಾಗಿ ಅಥವಾ ಪರ್ಯಾಯವಾಗಿ ಬರೆಯಲಾಗಿದೆ ಎಂದು ಹೇಳಲಾಗುತ್ತದೆ. ಈ ಶುಭ ಸಂದೇಶವನ್ನು ಬರೆಯುವ ಒತ್ತಿಗಾಗಲೇ ಮೂರು ಸಮನ್ವಯ ಶುಭಸಂದೇಶಗಳು ಬಳಕೆಯಲ್ಲಿದ್ದವು, ಅವುಗಳನ್ನ ರದ್ದುಗೊಳಿಸಿ ಈ ಶುಭ ಸಂದೇಶವನ್ನು ಐಚ್ಛಿಕವಾಗಿ ಬರೆಯಲಾಗಿದೆ ಎನ್ನಲಾಗುತ್ತದೆ. ಈ ವಾದವನ್ನು ಮಂಡಿಸಿದವರು ಅಲೆಗ್ಸಾಂಡ್ರಿಯಾದ ಸಂತ ಕ್ಲೇಮೆಂಟ್‍ರವರು. ಅವರು ಈ ಶುಭಸಂದೇಶವನ್ನು ಆಧ್ಯಾತ್ಮಿಕ ಶುಭಸಂದೇಶವೆಂದು ಕರೆದರು. ಒಂದು ವೇಳೆ ಈ ಶುಭ ಸಂದೇಶವನ್ನು ಬೇರೆ ಶುಭಸಂದೇಶಕ್ಕೆ ಪರ್ಯಾಯವಾಗಿ ಬರದಿದ್ದರೆ ಇಲ್ಲಿ ಬೇರೆ ಶುಭಸಂದೇಶಕ್ಕೆ ಭಿನ್ನ ವಾದಂತಹ ಯಾವುದೇ ವಿಷಯಗಳು ಇರುತ್ತಿರಲಿಲ್ಲ ಅಂದರೆ ಎರಡು ಸರಿಯಾಗಿ ಇರುತ್ತಿತ್ತು, ಇಲ್ಲಿ ನಾವು ಈ ಶುಭಸಂದೇಶದಲ್ಲಿ ವಿಭಿನ್ನತೆಯನ್ನು ಕಾಣಬಹುದಾಗಿದೆ ಅಥವಾ ವಿರುದ್ಧವಾದಂತಹ ವಿಷಯಗಳನ್ನ ನೋಡಬಹುದಾಗಿದೆ. ಪರ್ಯಾಯವಾಗಿ ಅಥವಾ ಐಚ್ಛಿಕವಾಗಿ ಬಳಸಿದ್ದರೆ ಎರಡು ಶುಭಸಂದೇಶವೂ ಒಂದೇ ರೀತಿ ಇರಬೇಕಾಗಿತ್ತು ಆದರೆ ವಿಭಿನ್ನತೆ ಇದೆ. ಇಲ್ಲಿ ಒಂದು ಉದಾಹರಣೆಯನ್ನು ನೋಡಬಹುದಾಗಿದೆ - ಸಮನ್ವಯ ಶುಭಸಂದೇಶಗಳು ಅಂದರೆ ಮೂರು ಶುಭಸಂದೇಶಗಳು ಸ್ನಾನಿಕ ಯೋವಾನ್ನನ ಮೆಸ್ಸಾಯಗಿಂತ ಮುಂಚಿತವಾಗಿ ಬರುವ ವ್ಯಕ್ತಿಯೆಂದು ವೈಭವೀಕರಿಸಿತು. ಆದರೆ ಈ ಶುಭಸಂದೇಶದಲ್ಲಿ ನಾವು ಕಾಣುತ್ತೇವೆ ಯೋವಾನ್ನ 1:21ರಲ್ಲಿ ಇತರರು ಕೇಳುವ ಪ್ರಶ್ನೆಗಳಿಗೆ ಸ್ನಾನಿಕ ಯೋವಾನ್ನ "ನಾನಲ್ಲ" ಎಂದು ಉತ್ತರ ಕೊಡುತ್ತಾನೆ. ಇಲ್ಲಿ ನಾನಲ್ಲ ಎನ್ನುವುದು ಧಿಕ್ಕರಿಸುವ ಸೂಚನೆ ಅಂದರೆ ನಾನು ಮೆಸ್ಸಾಯ ಆಗಲಿ ಪ್ರವಾದಿಯಾಗಲಿ ಅಲ್ಲ ಆತನಿಗಿಂತ ಮುಂಚಿತವಾಗಿ ಬರುವ ವ್ಯಕ್ತಿಯಲ್ಲ ವೆಂದು ನಿರಾಕರಿಸುತ್ತಾನೆ. ಯೇಸುಕ್ರಿಸ್ತರ ಶಿಲುಬೆ ಮರಣದಲ್ಲೂ ಅನೇಕ ಬದಲಾವಣೆಗಳನ್ನು ಶುಭಸಂದೇಶದಲ್ಲಿ ನಾವು ಕಾಣಬಹುದಾಗಿದೆ ಇವು ಸಮನ್ವಯ ಶುಭಸಂದೇಶಕ್ಕಿಂತ ವಿಭಿನ್ನವಾಗಿದೆ. ಆದ್ದರಿಂದ ಇದನ್ನು ಐಚ್ಛಿಕ ಅಥವಾ ಪರ್ಯಾಯ ಶುಭಸಂದೇಶ ಎಂದು ಕರೆಯಲು ಸಮಂಜಸವಲ್ಲ ಎನ್ನುವುದು ಕೆಲವರ ಅಭಿಪ್ರಾಯ.
2) ಬದಲಿ ಪಡಿಸುವ ಉದ್ದೇಶ - (Replacement purpose) ಸಂತ ಯೋವಾನ್ನರ ಶುಭ ಸಂದೇಶವನ್ನು ಬೇರೆ ಮೂರು ಶುಭ ಸಂದೇಶಗಳನ್ನು ಬದಲಾಯಿಸುವ ಅಥವಾ ಅವುಗಳನ್ನು ತೆಗೆದು ಹಾಕುವ ಉದ್ದೇಶದಿಂದ ಬರೆಯಲಾಗಿದೆ ಎನ್ನಲಾಗುತ್ತದೆ. ಮೂರು ಶುಭಸಂದೇಶಗಳು ಉಪಯೋಗಕ್ಕೆ ಬಾರದ ಶುಭಸಂದೇಶಗಳು ಎನ್ನಲಾಗಿದೆ. ಸಂತ ಯೊವಾನ್ನರ ಶುಭಸಂದೇಶದಲ್ಲಿ ಎಲ್ಲವೂ ಇದೆ. ಎಲ್ಲವನ್ನೂ ಬರೆಯಲಾಗಿದೆ, ಹಾಗಾಗಿ ಬೇರೆ ಶುಭಸಂದೇಶಗಳು ಅಗತ್ಯವಿಲ್ಲ ಎನ್ನುವುದು ಕೆಲವರ ವಾದ. ಈ ಅಭಿಪ್ರಾಯವು ಮೂರಟೋರಿಯನ್ ( Muratorian Canon) ಕ್ಯಾನನ್ನಿಂದ ಬಂದಿದೆ. ಈ ವಾದಕ್ಕೆ ಉದಾಹರಣೆಯೆಂಬಂತೆ ಯೋವಾನ್ನ 10: 8 ರಲ್ಲಿ ಬರೆಯಲಾಗಿರುವ ವಾಕ್ಯವನ್ನು ತೆಗೆದುಕೊಳ್ಳಲಾಗಿದೆ. " ನನಗಿಂತ ಮುಂಚೆ ಬಂದವರೆಲ್ಲ ಕಳ್ಳರು ಸುಳ್ಳು ಕೋರರು ಆಗಿದ್ದಾರೆ" ಇಲ್ಲಿ ಶುಭ ಸಂದೇಶವು ಮುಂಚೆ ಬಂದವರೆಲ್ಲ ಅಂದರೆ ಮುಂಚೆ ಇದ್ದಂತಹ ಮೂರು ಶುಭಸಂದೇಶವನ್ನು ಕಳ್ಳತನ ಅಥವಾ ಸುಳ್ಳುತನದಿಂದ ಕೂಡಿದೆ ಎಂದು ಹೇಳುತ್ತದೆ ಎಂಬುದು ಈ ವಾದದ ಅಭಿಪ್ರಾಯ. ಈ ಶುಭಸಂದೇಶವು ತುಂಬಾ ಶ್ರೇಷ್ಠವಾದದ್ದು ಎಂದು ಬಿಂಬಿಸಲಾಗಿದೆ ಹಾಗಾದರೆ ಈ ಶುಭಸಂದೇಶದಲ್ಲಿ ಯೇಸು ಸ್ವಾಮಿಯ ಇನ್ನೂ ಅನೇಕ ಮುಖ್ಯ ಘಟನೆಗಳನ್ನು ಮತ್ತು ವಿಷಯಗಳನ್ನು ಯಾಕೆ ದಾಖಲಿಸಿಲ್ಲ? ಎಂಬುದು ಯಕ್ಷಪ್ರಶ್ನೆಯಾಗಿದೆ.
3) ಪ್ರತಿವಾದಿಸುವ ಉದ್ದೇಶ (polemic purpose) : ಈ ಶುಭಸಂದೇಶವೂ ಅಲ್ಲಿ ಪ್ರಸ್ತುತ ವಿದ್ದಂತಹ ಪಾಷಾಂಡವಾದಗಳನ್ನು ಹಾಗೂ ತಪ್ಪು ಸಿದ್ಧಾಂತಗಳನ್ನು ನಿಯಂತ್ರಿಸುವ ಸಲುವಾಗಿ ಅದನ್ನು ಖಂಡಿಸುವ ಸಲುವಾಗಿ ಬರೆಯಲಾಗಿದೆ. ಈ ವಾದವು ಸಂತ ಐರೇನಿಯಸ್ ರವರಿಂದ ಬಂದಿದೆ. ಈ ಶುಭ ಸಂದೇಶವು ಕೇವಲ ಪ್ರತಿಪಾದಿಸುವ ಉದ್ದೇಶದಿಂದ ಬರೆದಿಲ್ಲ ಬದಲಾಗಿ ಅದಕ್ಕಿಂತ ತುಂಬಾ ಅರ್ಥವನ್ನು ಮತ್ತು ಇನ್ನು ಅನೇಕ ಉದ್ದೇಶಗಳನ್ನು ಒಳಗೊಂಡಿದೆ ಎನ್ನುವುದು ಅವರ ವಾದವಾಗಿದೆ.
4) ತಾರ್ಕಿಕ ವಾದದ ಉದ್ದೇಶ (Dialectic purpose) : ಸಂತ ಯೊವಾನ್ನರ ಶುಭ ಸಂದೇಶವು ನಮಗೆ ಕೆಲವು ಮುಖ್ಯ ಕ್ರೈಸ್ತ ಸಿದ್ಧಾಂತಗಳ ಬಗ್ಗೆ ತಿಳಿಸುತ್ತದೆ. ಅವುಗಳನ್ನು ಇಲ್ಲಿ ನಾವು ನೋಡಬಹುದಾಗಿದೆ.
ಅ) ಯೇಸು ಸ್ವಾಮಿಯ ಪೂರ್ವ ಅಸ್ತಿತ್ವದ ಬಗ್ಗೆ
ಆ) ಯೇಸು ಸ್ವಾಮಿ ಒಬ್ಬ ನಿಜವಾದ ದೇವರು ಎಂದು ಬಹಿರಂಗ ಪಡಿಸುವುದರ ಬಗ್ಗೆ.
ಇ) ಯೇಸುಸ್ವಾಮಿಯು ಮನುಷ್ಯತ್ವ ಮತ್ತು ದೈವತ್ವ ಎಂಬ ಎರಡು ಸಂಪೂರ್ಣವಾದ ಸತ್ವವನ್ನು ಇರುವವರ ಗಿದ್ದಾರೆ ಎಂದು ತೋರಿಸುವುದರ ಬಗ್ಗೆ.
ಈ) ವಿಶ್ವಾಸಿಯು ತನ್ನ ಪೂರ್ಣ ಫಲಗಳಿಂದ ದೇವರಿಗೆ ಮಹಿಮೆ ಪಡಿಸುವುದರ ಬಗ್ಗೆ.
ಉ) ಪರಸ್ಪರ ಪ್ರೀತಿಯಿಂದ ಯೇಸು ಸ್ವಾಮಿಗೆ ಸಾಕ್ಷಿ ನೀಡುವವರಾಗಿರುವಂತೆ.
ಊ) ನಾವು ಸದಾ ಯೇಸುಸ್ವಾಮಿಯಲ್ಲಿ ನೆಲೆಸಿರುವಂತೆ.
ಋ) ಪವಿತ್ರಾತ್ಮನಿಂದ ಧರ್ಮಸಭೆಯ ಕಾರ್ಯವೂ ಶಕ್ತವಾಗಿರುವಂತೆ.
ಈಗೇ ಶುಭ ಸಂದೇಶವು ಅನೇಕ ಸಿದ್ಧಾಂತಗಳ ಬಗ್ಗೆ ತಿಳಿಸಿಕೊಡುತ್ತದೆ.
5) ಶುಭಸಂದೇಶ ಸಾರುವ ಉದ್ದೇಶ : ಸಂತ ಯೊವಾನ್ನರ ಸಂದೇಶವು ಮೂಲತಹ ಯೇಸು ಸ್ವಾಮಿಯ ಶುಭ ಸಂದೇಶ ಸಾರುವ ಉದ್ದೇಶವನ್ನು ಇಟ್ಟುಕೊಂಡಿದೆ. ಯೋವಾನ್ನ 20:30-31ರಲ್ಲಿ ಒಂದು ವಿಶೇಷವಾದ ಉದ್ದೇಶವನ್ನು ನಾವು ಕಾಣಬಹುದಾಗಿದೆ. " ಯೇಸು ತನ್ನ ಶಿಷ್ಯರ ಸಮ್ಮುಖದಲ್ಲಿ ಇನ್ನೂ ಅನೇಕ ಚಿಹ್ನೆಗಳನ್ನು ಮಾಡಿದರು ಅದನ್ನು ಈ ಪುಸ್ತಕದಲ್ಲಿ ದಾಖಲಿಸಲಾಗಿಲ್ಲ ಆದರೆ ಇವುಗಳನ್ನು ಬರೆದಿರುವುದು ಯೇಸು ದೇವರ ಮಗನಾದ ಮೆಸ್ಸಾಯ ಎಂದು ನೀವು ನಂಬುವುದಕ್ಕಾಗಿ. . . ಇಲ್ಲಿ ನಾವು ಶುಭಸಂದೇಶದ ಉದ್ದೇಶವನ್ನು ಕಾಣಬಹುದಾಗಿದೆ.
6) ಇಲ್ಲಿ ಇನ್ನೊಂದು ಪ್ರಮುಖ ಉದ್ದೇಶವನ್ನು ಬೈಬಲ್ ವಿದ್ವಾಂಸರು ನಮಗೆ ನೀಡುತ್ತಾರೆ. ಈ ಶುಭ ಸಂದೇಶವೂ ಲೋಕದ ಜೊತೆ ಇನ್ನೊಂದು ನಂಟನ್ನು ಬೆಳೆಸುತ್ತದೆ. ದೇವರು ತನ್ನ ಏಕಮಾತ್ರ ಪುತ್ರ ನನ್ನ ಲೋಕಕ್ಕೆ ಕಳಿಸಿದ್ದು ಲೋಕದ ಹಾಗೂ ಜನರ ಜ್ಞಾನೋದಯಕ್ಕೆಂದು ತಿಳಿಸಲಾಗುತ್ತದೆ. ತನ್ನ ಪುತ್ರ ಲೋಕದ ಒಂದು ರೂಪವನ್ನು ಧರಿಸಿದ. ಇದು ದೇವರು ಲೋಕದ ಮೇಲೆ ಇಟ್ಟಿರುವ ಭರವಸೆಯನ್ನು ಸೂಚಿಸುತ್ತದೆ. ಇದು ಈ ರೀತಿಯ ಪ್ರಕ್ರಿಯೆ ಗೊಂದು ಆರಂಭ. ದೇವಪುತ್ರ ಯೇಸು ತನ್ನ ಶಿಷ್ಯರುಗಳನ್ನು ಈ ಲೋಕಕ್ಕೆ ಕಳುಹಿಸುತ್ತಾರೆ ಕಾರಣ ಅವರಿಗೂ ಈ ಲೋಕದ ಮೇಲೆ ಬರವಸೆ ಇದೆ. ಶಿಷ್ಯರು ಈ ಲೋಕದ ರೂಪವನ್ನು ಉಳಿಸಿಕೊಳ್ಳಬೇಕು ಯೇಸುಸ್ವಾಮಿಯ ಶಿಷ್ಯರು ಕೂಡ ಮುಖದಲ್ಲಿ ಅವತರಿಸಿ ಈ ಲೋಕವನ್ನು ಶುದ್ಧೀಕರಿಸಬೇಕಾಗಿದೆ ಆದರೆ ಈ ಲೋಕಕ್ಕೆ ಯೇಸುವಿನಂತೆಯೇ ಸೇರಬಾರದು ಅಷ್ಟೇ. ಇನ್ನೊಂದು ನನ್ನ ವೈಯಕ್ತಿಕ ಚಿಂತನೆಯ ಮೇರೆಗೆ ಈ ಶುಭ ಸಂದೇಶವನ್ನು ಪ್ರೀತಿಯ ಉದ್ದೇಶಕ್ಕಾಗಿ ಬರೆಯಲಾಗಿದೆ.
7) ಪ್ರೀತಿಯ ಉದ್ದೇಶ: ಯೋವಾನ್ನ3:16 ದೇವರು ಈ ಲೋಕವನ್ನು ಅಷ್ಟಾಗಿ ಪ್ರೀತಿಸಿದರೆ ಎಂದರೆ ತಮ್ಮ ಏಕೈಕ ಪುತ್ರನನ್ನೇ ಲೋಕಕ್ಕೆ ದಾರೆ ಎರೆದರು. ಇಲ್ಲಿ ದೇವರ ಅಪರಿಮಿತ ಪ್ರೀತಿಯನ್ನ ಕಾಣುತ್ತೇವೆ. ಈ ಶುಭ ಸಂದೇಶವನ್ನು ದೇವರ ಪ್ರೀತಿ ಹಾಗೂ ಯೇಸುಸ್ವಾಮಿಯ ಪ್ರೀತಿಯನ್ನು ತೋರಿಸಿ ಕೊಡುವುದಕ್ಕಾಗಿ ಬರೆಯಲಾಗಿದೆ ಎನ್ನುವುದು ನನ್ನ ವಾದ. ಇದಕ್ಕೆ ಕಾರಣ ಇಡೀ ಶುಭಸಂದೇಶದಲ್ಲಿ ದೇವರ ಪ್ರೀತಿ ಹರಿಯುವ ನೀರಿನಂತೆ ಕಾಣಬಹುದಾಗಿದೆ
********************
No comments:
Post a Comment