Wednesday, 4 September 2019

ಹೊಣೆಗಾರಿಕೆ ಜಾರಿಸುವ ಪ್ರವೃತ್ತಿ ಕೊನೆಯಾಗಲಿ. . .


- ಜೋವಿ
vpaulsj@gmail.com

ನಮ್ಮ ಸಂಸ್ಥೆಗೆ ಒಂದು ದ್ವಿಚಕ್ರದ ಅವಶ್ಯಕತೆ ಇದ್ದುದರಿಂದ ಅದರ ಖರೀದಿಗಾಗಿ ಮಳಿಗೆಗೆ ಹೋಗಿದ್ವಿ. ಮಳಿಗೆಯ ಒಳಾಂಗಣ ವಿನ್ಯಾಸ ಆಕರ್ಷಕವಾಗಿತ್ತು. ವಿವಿಧ ಮಾಡೆಲ್ಲುಗಳ ದ್ವಿಚಕ್ರ ವಾಹನಗಳನ್ನು ಆಕರ್ಷಕವಾಗಿ ಸಾಲಾಗಿ ನಿಲ್ಲಿಸಿದ್ದರು. ಮಳಿಗೆಯ ಮ್ಯಾನೇಜರ್ ಅಲ್ಲಿದ್ದ ಸಹಾಯಕಿ ಮತ್ತು ಸಹಾಯಕನ ಜತೆ ಮುಗುಳುನಗುತ್ತಾ ನಮ್ಮನ್ನು ಸ್ವಾಗತಿಸಿದ. ಅತ್ಯಾಕರ್ಷಕ ಕುರ್ಚಿಗಳ ಮೇಲೆ ನಮ್ಮನ್ನು ಕೂರಿಸಿ, ಬೈಕುಗಳ ಬಗ್ಗೆ ಸವಿಸ್ತಾರವಾಗಿ ವಿವರಣೆ ಕೊಡತೊಡಗಿದ. ಅದೇಕೋ ಸಹಾಯಕನಲ್ಲಿದ್ದ ಮಾರಾಟಕೌಶಲ್ಯವು, ಮ್ಯಾನೇಜರನಲ್ಲಿ ಇಲ್ಲ ಎಂದು ಅನ್ನಿಸ ತೊಡಗಿತ್ತು. ಅವನ ಮುಖದಲ್ಲಿ ಉತ್ಸಾಹ ಇರಲಿಲ್ಲ; ಮಾರ್ಕೆಟ್ಟಿನನ ಜಂಜಾಟದಲ್ಲಿ ಕಳೆದು ಹೋದ ಫಕೀರನಂತೆ ಕಂಡು ಬಂದ. ಇನ್ನೊಂದು ಕಡೆ, ಸಹಾಯಕಿ ಸ್ವಲ್ಪ ಹೆಚ್ಚು ಎನ್ನುವಷ್ಟು ಮೇಕಪ್ ಮಾಡಿಕೊಂಡು ಕೃತಕನಗೆ ಬೀರುತ್ತಿದ್ದಳು. ಮ್ಯಾನೇಜರ್ ಕೇಳಿದನ್ನು ತಂದು ಕೊಡುವ ಕೆಲಸವಷ್ಟೇ ಮಾಡುತ್ತಿದ್ದಳು.
ಬೇರೆ ಬೇರೆ ಮಾಡೆಲ್ ಬೈಕುಗಳ ಬಗೆಗಿನ ಮಾಹಿತಿ ಸಹಾಯಕನಿಂದ ಪಡೆದ ನಂತರ, ಮಳಿಗೆಯಲ್ಲಿ ಆಗುವ ಮಾರಾಟ ಮತ್ತು ವಹಿವಾಟಿನ ಬಗ್ಗೆ ಮ್ಯಾನೇಜರನನ್ನು ವಿಚಾರಿಸಿದೆ. "ವ್ಯಾಪಾರ ತುಂಬಾ ಕಡಿಮ ಆಗಿದೆ, ತಿಂಗಳಿಗೆ ಸುಮಾರು 800- 1000 ವಾಹನಗಳು ಸೇಲ್ ಆಗುತ್ತಿದ್ದವು. . . ಆದರೆ ಈ ದಿನಗಳಲ್ಲಿ ತಿಂಗಳಿಗೆ ಕೇವಲ 400-500 ಬೈಕ್‌ಗಳು ಸೇಲ್ ಆಗುತ್ತಿದೆ ಎಂದು ವಿಷಾದದ ದನಿಯಲ್ಲೇ ಉತ್ತರಿಸಿದ. ಇಳಿಕೆಯ ಕಾರಣಗಳನ್ನು ಕೇಳಿದಾಗ, ಮ್ಯಾನೇಜರ್ ವಾಹನಗಳ ಉತ್ಪಾದನೆಯಲ್ಲಿ ಏರಿಕೆ ಆಗಿರುವುದರಿಂದ ಉತ್ಪಾದನೆಯಾದಷ್ಟು ವಾಹನಗಳು ಮಾರಾಟವಾಗುತ್ತಿಲ್ಲ ಎಂದ. ಬೇಡಿಕೆಗಿಂತ ಉತ್ಪಾದನೆ ಜಾಸ್ತಿಯಾದ್ದರಿಂದ, ಮಾರಾಟದಲ್ಲಿ ಇಳಿಕೆಯಾಗಿದೆ ಎಂಬ ಆರ್ಥಿಕಶಾಸ್ತ್ರದ ಸರಳ ಸೂತ್ರವನ್ನು ಅವನು ಬಲು ಸುಲಭವಾಗಿ ಹೇಳುತ್ತಿದ್ದ. ಆದರೂ ನನಗವನು ಸರ್ಕಾರದ ವೈಫಲ್ಯಗಳ ಬಗ್ಗೆ ಗೊತ್ತಿದ್ದೂ ಮರೆ ಮಾಚುವಂತಹ ಸಾಹಸವನ್ನು ಕೈಗೊಂಡವನಂತೆ ಕಂಡು ಬಂದ.
ಈಗೀಗ ಜನರ ಕೈಯಲ್ಲಿ ದುಡ್ಡು ಓಡಾಡದೆ, ಖರೀದಿಸುವ ಶಕ್ತಿ ಕಡಿಮೆಯಾಗಿದೆ. ಇದ್ದರಿಂದ ಉತ್ಪನಗಳ ಬೇಡಿಕೆ ತಗ್ಗುತ್ತಿದೆ. ಬಂಡವಾಳ ಹೂಡಿಕೆಯಲ್ಲಿ ಸರ್ಕಾರದ ಗೋಜಲಿನ ನೀತಿ ನಿಯಮಾವಳಿಗಳು, ಜಿಎಸ್‌ಟಿಯ ಅಡ್ಡ ಪರಿಣಾಮಗಳು ಖರೀದಿ - ಮಾರಾಟದ ಚಟುವಟಿಕೆಗೆ ಪೆಟ್ಟುಕೊಟ್ಟಿವೆ ಎಂಬ ತಜ್ಞರ ವಾದಗಳನ್ನು ಒಪ್ಪಲು ನಿರಾಕರಿಸುವಂತಿದ್ದವು ಅವನ ಮಾತುಗಳು. ಒಟ್ಟಿನಲ್ಲಿ ದುರದೃಷ್ಟಕ್ಕೆಲ್ಲ ಸರಕಾರವನ್ನೇಕೆ ಹೊಣೆ ಮಾಡಬೇಕು ಎಂಬಂತಹ ಸಿನಿಕ ಮನೋಭಾವದ ಸಾಧಾರಣ ಶ್ರೀಸಾಮಾನ್ಯನಂತಿತ್ತು ಅವನ ವರ್ತನೆ.
ನಮ್ಮನ್ನು ಸಹಾಯಕನ ಕೈಗೊಪ್ಪಿಸಿ, ಮ್ಯಾನೇಜರ್ ಮತ್ಯಾವುದೋ ಕೆಲಸದ ನಿಮಿತ್ತ ಒಳಕೋಣೆಗೆ ಹೋದ. ನಾನು ಸಹಾಯಕನ ಜತೆ ಮಾತು ಪ್ರಾರಂಭಿಸಿ ಆಪ್ತತೆ ಗಳಿಸಿ ಅವನ ಬಯೋಡೇಟಾ ಬಗ್ಗೆ ವಿಚಾರಿಸಿದೆ. ಅವನು ಐಟಿಐ ಮತ್ತು ಇತರ ಸರ್ಟಿಫಿಕೇಟ್ ಕೋರ್ಸ್ ಮಾಡಿ, ಬೆಂಗಳೂರಿನ ಜಯನಗರದಲ್ಲಿದ್ದ ಒಂದು ಕಂಪನಿಯಲ್ಲಿ ಸುಮಾರು ಎಂಟು ವರ್ಷ ಕೆಲಸ ಮಾಡುತ್ತಿದ್ದನಂತೆ. ಅವನ ದುರಾದೃಷ್ಟಕ್ಕೆ ಆ ಕಂಪನಿ ಕೆಲತಿಂಗಳ ಹಿಂದೆ ಮುಚ್ಚಿಹೋದ್ದರಿಂದ ಬೆಂಗಳೂರು ಬಿಟ್ಟು ಮಂಗಳೂರಿಗೆ ಬಂದು ಈ ದ್ವಿಚಕ್ರ ಮಳಿಗೆಯಲ್ಲಿ ಮಾರಾಟ ನೌಕರನಾಗಿದ್ದ. ಕೊನೆಗೆ, ನಾವು ಖರೀದಿಸಿದ್ದ ವಾಹನವನ್ನು ಡೆಲಿವರಿ ಮಾಡಿ, ಕಾಲೇಜಿನಲ್ಲಿ ಯಾವುದಾದರೂ ಕೆಲಸ ಇದ್ದರೆ ಹೇಳಿ ಸಾರ್ ಎಂದು ಹೇಳಿ ನನ್ನ ಕೈಕುಲುಕಿ ಹೋದ.
ಹೌದು, ನಮ್ಮ ದೇಶದ ಆರ್ಥಿಕಸ್ಥಿತಿ ಹದಗೆಟ್ಟಿದೆ. ಎಷ್ಟೂ ಉದ್ಯಮಗಳು ಮುಚ್ಚಿವೆ. ವಾಹನ ಮತ್ತು ಜವಳಿ ಉದ್ಯಮಗಳು ನಷ್ಟದಲ್ಲಿವೆ. ಎಷ್ಟೋ ಸಣ್ಣಪುಟ್ಟ ಉದ್ಯಮಗಳು ಮುಚ್ಚಿಹೋಗಿವೆ. ಏಷ್ಯಾದಲ್ಲೇ ಅತಿ ವಿಸ್ತಾರವಾದ ಪೀಣ್ಯ ಕೈಗಾರಿಕಾ ವಲಯದ ಲಕ್ಷಾಂತರ ಮಂದಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆಂದು ಒಂದು ವರದಿ ಹೇಳಿದೆ. ಕೆಲವೊಂದು ಅಂಕಿ ಅಂಶಗಳ ಪ್ರಕಾರ ಜವಳಿ ಮತ್ತು ಗಾರ್ಮೆಂಟ್ಸ್ ಉದ್ಯಮದಲ್ಲೇ ರಪ್ತು ವಹಿವಾಟು ಶೇಕಡಾ ಮೂವತ್ತರಷ್ಟುಇಳಿಕೆ ಕಂಡಿಯಂತೆ; ದೇಶೀಮಾರುಕಟ್ಟೆಯಲ್ಲಿ ಗಾರ್ಮೆಂಟ್ಸ್ ಉತ್ಪಾದನೆಗಳ ಮಾರಾಟ ಸುಮಾರು 35- 38% ಕಡಿಮೆ ಆಗಿ 4- 10 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆಟೋಮೊಬೈಲ್ ಕ್ಷೇತ್ರದಲ್ಲೂ ಇದೇ ಪರಿಸ್ಥಿತಿ. ವಾಹನಗಳ ಮಾರಾಟವು 2018ಕ್ಕೆ ಹೋಲಿಸಿ ನೋಡಿದರೆ ಜುಲೈ 2019ರ ಹೊತ್ತಿಗೆ ಶೇ. 18. 7 ರಷ್ಟು ಕಡಿಮೆಯಾಗಿದೆ. ಕಳೆದ ಒಂದು ವರ್ಷದಲ್ಲಿ ವಾಹನೋದ್ಯಮ ಕ್ಷೇತ್ರವೊಂದರಲ್ಲೇ ಎರಡು ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಇಲ್ಲವಾಗಿದೆ. ಅಲ್ಲದೆ ಇನ್ನೂ 10 ಲಕ್ಷ ಉದ್ಯೋಗಗಳ ಕಡಿತವಾಗಬಹುದು ಎಂದು ತಜ್ಞರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ವಾಹನಗಳ ಮಾರಾಟದಲ್ಲಿ ಹಿನ್ನಡೆಯನ್ನು ಎದುರಿಸುತ್ತಿರುವ ಮಾರುತಿ ಕಂಪನಿ ಮೂರುಸಾವಿರ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕಲು ಸಜ್ಜಾಗಿದೆ. ಏಷಿಯಾದ ಡೆಟ್ರಾಯ್ಡ್ ಎಂದು ಕರೆಯಲಾಗುತ್ತಿದ್ದ ತಮಿಳುನಾಡಿನ ಆಟೋಮೊಬೈಲ್ ಕ್ಷೇತ್ರದಲ್ಲಿ ಐದು ಸಾವಿರಕ್ಕೂ ಹೆಚ್ಚು ಜನರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಮತ್ತು ಟಿವಿಎಸ್ ಕಂಪನಿಯು ಸೆಪ್ಟೆಂಬರ್16 ಮತ್ತು 17ರಂದು ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದೂ ವರದಿಯಾಗಿದೆ. ದಕ್ಷಿಣ ಏಷ್ಯಾದಲ್ಲೇ ಅತ್ಯಂತ ದೊಡ್ಡ ಕೈಗಾಗಿಕಾ ಪ್ರದೇಶವಾಗಿರುವ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ 10 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳು ಮುಚ್ಚುವ ಅಂಚಿನಲ್ಲಿದೆ. ಆಟೋಮೊಬೈಲ್ ಕ್ಷೇತ್ರ ಕುಸಿಯುತ್ತಿರುವ ಪರಿಣಾಮ ಎದುರಿಸುತ್ತಿರುವ ಈ ಸಣ್ಣ ಕೈಗಾರಿಕೆಗಳ ವಹಿವಾಟು ಶೇ. 70ರ ಭಾರೀ ಕುಸಿತ ಕಂಡಿದೆ. ದೇಶದಲ್ಲಿ ಆಟೋಮೊಬೈಲ್ ಘಟಕಗಳಿಗೆ ಸಣ್ಣ ಉಪಕರಣಗಳನ್ನು ಪೂರೈಸುತ್ತಿದ್ದ 280ಕ್ಕೂ ಹೆಚ್ಚು ಸಣ್ಣ ಕೈಗಾಗಿಕೆಗಳು ಈಗಾಗಲೇ ದೇಶದ ಉದ್ದಗಲಕ್ಕೂ ಮುಚ್ಚಿವೆ. ಇದರ ಬೆನ್ನಲ್ಲೇ ಈಗ ಹತ್ತು ಸಾವಿರ ಕೈಗಾರಿಕೆಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಎರಡು ವರ್ಷದ ಹಿಂದೆ ಆರ್ಥಿಕ ತಜ್ಞರೊಬ್ಬರು ನಮ್ಮ ದೇಶವು ನಿರುದ್ಯೋಗದ ಟೈಮ್ ಬಾಂಬ್ ಮೇಲೆ ಕೂತಿದೆ ಎಂದು ಎಚ್ಚರಿಕೆ ನೀಡಿದ್ದರು. ಹೌದು ನಮ್ಮ ಆರ್ಥಿಕ ಹಿಂಜರಿತವನ್ನು ಗಮನಿಸಿದರೆ ನಿರುದ್ಯೋಗದ ಆ ಟೈಮ್ ಬಾಂಬಿನ ಕ್ಷಣಗಣನೆ ಈಗ ಶುರುವಾಗಿದೆ ಎಂದೇ ಹೇಳಬಹುದು ಎಂದು ಸರೋವರ್ ಬೆಂಕೀಕೆರೆ ಹೇಳುತ್ತಾರೆ.
ಇಂತಹ ವಿಷಮ ಪರಿಸ್ಥಿತಿಯಲ್ಲಿ ನಮ್ಮನ್ನು ಆಳುವರು ತಮ್ಮ ವೈಫಲ್ಯಗಳನ್ನು ಮರೆಮಾಚಲು ಆಡಬಾರದ ನಾಟಕಗಳನ್ನು ಆಡುತ್ತಿದ್ದಾರೆ. ಜನರ ಗಮನದ ದಿಕ್ಕು ಬದಲಾಯಿಸಲು ನಾನಾ ರೀತಿಯ ಸರ್ಕಸ್ಸುಗಳನ್ನು ಕೈಗೊಂಡಿದ್ದಾರೆ. ಇಂತಹ ಹೀನ ಕೃತ್ಯಕ್ಕೆ ಮಾಧ್ಯಮಗಳು ಸಹ ಕೈಜೋಡಿಸಿವೆ. ಈ ತಲೆಹಿಡುಕ ಮಾಧ್ಯಮಗಳು ಎಂಜಲು ಕಾಸಿನಾಸೆಗೆ ಸತ್ಯವನ್ನು ಮುಚ್ಚಿ ಹಾಕುತ್ತಿವೆ. ಬೆರಳೆಣಿಕೆಯಷ್ಟು ಮಾಧ್ಯಮಗಳು ಮಾತ್ರ ಸತ್ಯವನ್ನು ಹೇಳಿ ಭಕ್ತರ ಕಂಗೆಣ್ಣಿಗೆ ಗುರಿಯಾಗಿವೆ.
ಅರ್ಥಿಕ ಹಿಂಜರಿತದ ಕಾರಣಗಳನ್ನು ಹುಡುಕಬೇಕು, ಅವುಗಳನ್ನು ಸರಿಪಡಿಸುವ ಕಡೆ ಗಮನ ಹರಿಸಬೇಕು. ಅದರಲ್ಲೂ ಅರ್ಥಿಕ ವ್ಯವಸ್ಥೆಯ ನಿರ್ಣಾಯಕ ಅಂಶಗಳ ಮೇಲೆ ಹೆಚ್ಚು ಗಮನಹರಿಸಿ ತಪ್ಪುಗಳನ್ನು ಸರಿಪಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಇವೆಲ್ಲಕ್ಕಿಂತ ಮುಂಚೆ, ತಮ್ಮಿಂದ ತಪ್ಪುಗಳು ಆಗಿವೆ ಎಂದು ಒಪ್ಪಿಕೊಂಡು, ಸರಿಪಡಿಸುವ ಕಾರ್ಯಕ್ಕೆ ವಿಶಾಲ ಮನೋಭಾವದಿಂದ ಕೈಹಾಕಬೇಕು. ಪ್ರತಿಯೊಂದು ಸಮಸ್ಯೆಗೂ ವಿರೋಧಪಕ್ಷದವರನ್ನು, ಹಿಂದೆ ಆಳಿದವರನ್ನು ದೂಷಿಸುವ, ವಿನಾಕಾರಣಕ್ಕೆ ಜಾತಿ ಧರ್ಮಗಳನ್ನು ಎಳೆದು ತಂದು, ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವವರಿಂದ ಇದು ಸಾಧ್ಯವೇ ಎಂಬುದೇ ನಮ್ಮ ಮುಂದಿರುವ ಪ್ರಶ್ನೆ!!
ಹೊಣೆಗಾರಿಕೆ ಜಾರಿಸುವ ಪ್ರವೃತ್ತಿ ಕೊನೆಯಾಗಲಿ?
ಜಾನ್ ಎಫ್ ಕೆನಡಿ ಅವರು ಅಮೆರಿಕದ ಅಧ್ಯಕ್ಷರಾಗುತ್ತಿದ್ದಂತೆ ತಮ್ಮ ಮೇಜಿನ ಮೇಲೆ, `ಇಲ್ಲಿಂದಾಚೆಗೆ ಹೊಣೆಗಾರಿಕೆಯನ್ನು ಇನ್ನೊಬ್ಬರಿಗೆ ವರ್ಗಾಯಿಸುವಂತಿಲ್ಲ' ಎನ್ನುವ ಫಲಕ ಇರಿಸಿದ್ದರು. `ಸರ್ಕಾರ ಮುನ್ನಡೆಸುವ ಹೊಣೆಗಾರಿಕೆಯನ್ನು ವೈಯಕ್ತಿಕವಾಗಿ ಹೊತ್ತುಕೊಳ್ಳುವೆ. ಅದನ್ನು ಯಾರ ಹೆಗಲ ಮೇಲೂ ಹೊರಿಸುವುದಿಲ್ಲ' ಎನ್ನುವ ಕೆನಡಿ ಅವರ ಧೋರಣೆ ಇತರರಿಗೆ ಮಾದರಿಯಾಗಿರಬೇಕು. ಸರ್ಕಾರದ ಮುಖ್ಯಸ್ಥರಾದವರು, ಯಾವುದೇ ಹಿಂಜರಿಕೆ ಇಲ್ಲದೇ ಆಡಳಿತದ ಸಾಧನೆ-ವೈಫಲ್ಯಗಳ ಹೊಣೆಗಾರಿಕೆ ಒಪ್ಪಿಕೊಳ್ಳುವ ಧೈರ್ಯ ಹೊಂದಿರಬೇಕು.

ಮರಿಯ ಜಯಂತಿಯ ಸಂದರ್ಭದಲ್ಲಿ ಬಿಷಪ್ ಫ್ರಾನ್ಸಿಸ್ ಸೆರವೋ ಅವರ ಸಂದೇಶ
ನಮ್ಮ ಬದುಕಿನಲ್ಲಿ ಅಮ್ಮ ನಿರ್ವಹಿಸುವ ಅದೆಷ್ಟೋ ಪಾತ್ರಗಳನ್ನು ಅಕ್ಷರ ರೂಪಕ್ಕಿಳಿಸಲು ಹೋದರೆ ಭಾಷೆಯೇ ಬಡವಾದೀತು. ಯಾವುದೇ ಪದದ ಮೂಲಕ ಆಕೆಯನ್ನು ವರ್ಣಿಸಲು ಹೋದರೂ ಆಕೆಯ ಅದಮ್ಯ ಶಕ್ತಿಯ ಎದುರು ಆ ಪದವೇ ಪೇಲವವಾಗಿಬಿಡುವ ಸಾಧ್ಯತೆಯೇ ಹೆಚ್ಚು. ಹೌದು, ಪದದಲ್ಲಾಗಲ್ಲಿ, ಒಂದು ವಾಕ್ಯದಲ್ಲಾಗಲಿ ಹಿಡಿದಿಡಲಾಗದ ಮಹೋನ್ನತ ವ್ಯಕ್ತಿತ್ವ ಅಮ್ಮನದ್ದು.
ಸಮಾಜದಲ್ಲಿ ಅದರಲ್ಲೂ ತಮ್ಮ ಕುಟುಂಬಗಳಲ್ಲಿ ತಾಯಿ ನಿರ್ವಹಿಸುವ ಪಾತ್ರಗಳಿಂದಲೇ ಅವಳ ಈ ಮಹೋನ್ನತ ವ್ಯಕ್ತಿತ್ವ ಸಾಕಾರಗೊಳ್ಳುತ್ತದೆ. ಹೆಂಡತಿಯಾಗಿ, ಮಕ್ಕಳಿಗೆ ಪ್ರೀತಿಯ ತಾಯಿಯಾಗಿ, ಶಿಕ್ಷಕಿಯಾಗಿ ಸಾಕ್ಷಾತ್ಕರಿಸುವ ಅವಳ ತಾಯ್ತನ ಎಂಥವರನ್ನು ಆವರಿಸಿಕೊಳ್ಳುವ ಅಗಾಧ ಶಕ್ತಿಯೂ ಹೌದು. ಈ ಕಾರಣದಿಂದಲೇ ಜಿ. ಎಸ್ ಶಿವರುದ್ರಪ್ಪನವರು ತಮ್ಮದೊಂದು ಕವಿತೆಯಲ್ಲಿ "ಆಕಾಶದ ನೀಲಿಯಲ್ಲಿ ಚಂದ್ರತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೇಸ್ತ್ರೀ ಎಂದರೆ ಅಷ್ಟೇ ಸಾಕೇ?... ಮನೆ ಮನೆಯಲ್ಲಿ ದೀಪ ಮುಡಿಸಿ ಹೊತ್ತು ಹೊತ್ತಿಗೆ ಅನ್ನ ಉಣಿಸಿ ತಂದೆ ಮಗುವ ತಬ್ಬಿದಾಕೆ ನಿನಗೆ ಬೇರೆ ಹೆಸರು ಬೇಕೇ ಸ್ತ್ರೀ ಎಂದರೆ ಅಷ್ಟೇ ಸಾಕೆ?" ಎಂದು ತಾಯಿಯನ್ನು ವ್ಯಾಖ್ಯಾನಿಸಲು ಸ್ತ್ರೀ ಪದದ ಮಿತಿಯ ಬಗ್ಗೆ ಪ್ರಶ್ನಿಸುತ್ತಾರೆ.
ತಾಯಿ ಎಂಬುದು ಪ್ರೀತಿ ಮತ್ತು ಹಿರಿತನದ ಸಂಕೇತ; ತನ್ನ ಪ್ರೀತಿಯನ್ನು ನರನಾಡಿಗಳಂತೆ ಬದುಕಿನುದ್ದಕ್ಕೂ ಪ್ರತಿಯೊಂದು ಕ್ಷಣದಲ್ಲಿ ವಿಸ್ತರಿಸಿಕೊಳ್ಳುವ, ಮಾನವೀಯತೆಯನ್ನು ಸೂಸುವ ಜೀವಂತಿಕೆ, ಅಧ್ಯಾತ್ಮಿಕತೆ ಮತ್ತು ಅಂತಃಕರಣದ ಪ್ರತೀಕ. ಕುವೆಂಪುನವರು ಸ್ರೀ ಕುರಿತು ತಿಳಿಸುವಾಗ ಈ ರೀತಿ ಹೇಳುತ್ತಾರೆ: ನಿನ್ನಿಂದಲೇ ಈ ಇಳೆ ತಾಳುತ್ತದೆ, ಬಾಳುತ್ತದೆ ಹಾಗಾಗಿ ನೀ ನಮ್ಮನ್ನು ನಿಜಮತದಲ್ಲಿ ಋಜುಪಥದಲ್ಲಿ ನಡೆಸುವ ಋತುದರ್ಶಿನಿ ಎಂದು. ನಮ್ಮನ್ನು ಹೆತ್ತು ಹೊತ್ತು ಸಲಹುವ ತಾಯಿ ಹಾಲುಣಿಸಿ ಕೈತುತ್ತು ನೀಡಿ, ಅಂಬೆಗಾಲಿಡಿಸಿ, ಕೈಹಿಡಿದು ನಡೆಸಿ ಬದುಕಿನುದ್ದಕ್ಕೂ ಮಗುವಿನ ಏಳಿಗೆಗಾಗಿ ಅವಿರತ ಹಾಗೂ ಅನವರತ ಶ್ರಮಿಸುವ, ಮಕ್ಕಳನ್ನು ದಾರಿ ತಪ್ಪಿದಾಗ ತಿದ್ದಿತೀಡಿ ಸರಿದಾರಿಗೆ ತರುವ ತಾಯಿ ನೂರಾರು ಕವಿತೆಗಳಲ್ಲಿ ಬಾಳಿದವಳು. ಅವಳ ನಿಸ್ವಾರ್ಥ ಸೇವೆ ರಾಷ್ಟ್ರದ ಜಿಡಿಪಿ ಲೆಕ್ಕಕ್ಕೆ ಸೇರಿಕೊಳ್ಳದಿರಬಹುದು ಆದರೆ ತಾಯಿ ಇಲ್ಲದ ಜಗತ್ತನ್ನು ಉಹಿಸಿಕೊಳ್ಳುವುದಕ್ಕೂ ಅಸಾಧ್ಯ.
ಇವಿಷ್ಟೂ ನಮ್ಮ ಇಹಲೋಕದ ಅಥವಾ ಭೌತಿಕ ತಾಯಿಯ ಬಗೆಗಾದರೆ, ನಮ್ಮ ಸ್ವರ್ಗೀಯ ತಾಯಿಯ ಬಗ್ಗೆ ಇನ್ನೆಷ್ಟು ಹೇಳಬಹುದೆಂದು ನೀವೇ ಕಲ್ಪಿಸಿಕೊಳ್ಳಿ! ಮಾತೆ ಮರಿಯಮ್ಮನವರು ಮಾನವಕುಲದ ರಕ್ಷಣೆಗೊಸ್ಕರ ದೇವರ ಚಿತ್ತಕ್ಕೆ ಶಿರಬಾಗಿ, ಕ್ರಿಸ್ತನ ಮನುಷ್ಯಾವತಾರಕ್ಕಾಗಿ ತನ್ನ ಒಡಲನ್ನೇ ಅರ್ಪಿಸಿದವರು. ದೇವರು ಅವರ ಬಾಳಿನಲ್ಲಿ ಎಸಗಿದ ಮಹಾತ್ಕಾರ್ಯವನ್ನು ಸ್ಮರಿಸಿ, ಸ್ವತಃ ಕ್ರಾಂತಿಗೀತೆಯನ್ನು ಹಾಡುವುದರ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ಆಧ್ಯಾತ್ಮಿಕ ಪರಿವರ್ತನೆಗೆ ನಾಂದಿ ಹಾಡಿದವರು; ಕ್ರಿಸ್ತನನ್ನು ಬೆಳೆಸುವ ಜವಾಬ್ದಾರಿಯನ್ನು ಹೊತ್ತು ಪ್ರೀತಿಯ ಸಂಸ್ಕಾರದಲ್ಲಿ ಬೆಳೆಸಿದವರು; ಕಾನಾ ಮದುವೆ ಸಮಾರಂಭದಲ್ಲಿ ಕ್ರಿಸ್ತನ ಅದ್ಭುತಕಾರ್ಯಗಳಿಗೆ ನಾಂದಿ ಹಾಡಿದವರು, ಸ್ವರ್ಗರಾಜ್ಯದ ಬೋಧನಾ ಕಾರ್ಯಕ್ಕೆ ನೈತಿಕ ಬೆಂಬಲಕೊಟ್ಟು ಕ್ರಿಸ್ತನ ಸೇವಾಕಾರ್ಯದಲ್ಲಿ ಕ್ರಿಸ್ತನ ಜತೆಗೆ ಹೆಜ್ಜೆ ಹಾಕಿದವರು; ಬಡವರ ಪರ ವಹಿಸಲು, ಅನ್ಯಾಯವನ್ನು ಖಂಡಿಸಲು, ದಬ್ಬಾಳಿಕೆಯನ್ನು ವಿರೋಧಿಸಲು ಕ್ರಿಸ್ತನಿಗೆ ಕಲಿಸಿಕೊಟ್ಟವರು; ಅನ್ಯಾಯದ ಶಿಲುಬೆಯ ಮರಣಕ್ಕೆ ಒಳಪಟ್ಟ ಮಗನ ಶಿಲುಬೆಹಾದಿಯಲ್ಲಿ ದೃಢವಾದ ಶಕ್ತಿಯಾಗಿ ಕ್ರಿಸ್ತನ ಜೊತೆಜೊತೆ ನಡೆದವರು. ಕೊನೆಗೆ ಮಾನವಕುಲಕ್ಕೆ ತಾಯಿಯಾಗುವ ಸೌಭಾಗ್ಯವನ್ನು ಪಡೆದು ಧರ್ಮಸಭೆಯ ಹುಟ್ಟಿಗೆ ಆಧಾರವಾದವರು.
ಈ ತಾಯಿ ಮರಿಯಮ್ಮನವರ ಜನ್ಮದಾಚರಣೆಯನ್ನು ಕೈಗೊಂಡಿರುವ ನಾವು ತಾಯಿ ಮರಿಯಮ್ಮನವರ ಬದುಕಿನಿಂದ ಸ್ಪೂರ್ತಿಯನ್ನು ಪಡೆಯೋಣ. ಕ್ರಿಸ್ತನ ರಕ್ಷಣೆಯ ಕಾರ್ಯದಲ್ಲಿ ಪಾಲುಗೊಳ್ಳುವ ವರವನ್ನು ದೇವರಿಂದ ನಮಗೆ ಪಡೆದುಕೊಡಲೆಂದು ದೇವರಿಗೆ ವಿಧೇಯರಾಗಿ ನಡೆದು ನಮ್ಮ ರಕ್ಷಣೆಯಲ್ಲಿ ಪಾಲುದಾರರಾದ ತಾಯಿಯನ್ನು ಬೇಡಿಕೊಳ್ಳೋಣ. ಪಾಪರಹಿತ ಜೀವನವನ್ನು ಬಾಳಿದ ತಾಯಿ ಪರಿಶುದ್ಧ ಜೀವನ ನಡೆಸುವತ್ತ ನಮಗೆ ಒತ್ತಾಸೆಯಾಗಲೆಂದು ಪರಿಶುದ್ಧ ಮಾತೆಯನ್ನು ಪ್ರಾರ್ಥಿಸಿಕೊಳ್ಳುತ್ತಾ ವಿಶೇಷವಾಗಿ ಹೆಣ್ಣುಮಕ್ಕಳಿಗಾಗಿ ಪ್ರಾರ್ಥಿಸೋಣ. ಹೆಣ್ಣು ಮಕ್ಕಳು ಸಮಾಜದಲ್ಲಿ ಎಲ್ಲ ರೀತಿಯ ಹಕ್ಕು ಮತ್ತು ಸಮಾನತೆಯನ್ನು ಪಡೆಯುವಂತಾಗಲೆಂದು ಆಶಿಸೋಣ.
ಪ್ರೊಟೆಸ್ಟೆಂಟ್ ಪಂಗಡಕ್ಕೆ ಸೇರಿದ ಒಬ್ಬ ವ್ಯಕ್ತಿ, ತನ್ನ ಪಕ್ಕದಲ್ಲೇ ನಿಂತಿದ್ದ ಹುಡುಗನ ಕೊರಳಿನಲ್ಲಿದ್ದ ಜಪಮಾಲೆಯನ್ನು ಗಮನಿಸಿ ಕೇಳಿದ: ನಿನ್ನ ಅಮ್ಮನಿಗೂ ಹಾಗೂ ನೀನು ಧರಿಸಿರುವ ಮರಿಯಮ್ಮನವರಿಗೂ ಏನು ವ್ಯತ್ಯಾಸ? ಪ್ರಶ್ನೆಗೆ ಉತ್ತರಿಸುತ್ತಾ ಆ ಹುಡುಗ ಹೇಳಿದ ಹೌದು ನನ್ನ ಅಮ್ಮ ಹಾಗೂ ಮರಿಯಮ್ಮನವರ ನಡುವೆ ಯಾವುದೇ ರೀತಿಯ ವ್ಯತ್ಯಾಸವಿಲ್ಲದಿರಬಹುದು. ಆದರೆ ಆಕೆಯ ಮಗ ಕ್ರಿಸ್ತ ಮತ್ತು ನನ್ನ ನಡುವೆ ಅಜಗಜಾಂತರ ವ್ಯತ್ಯಾಸವಿದೆ ಎಂದು ಹೇಳಿದ. ತಾಯಿಯ ಶ್ರೇಷ್ಠತೆ ಎಂಬುದು ಅಕೆಯ ಮಗ ಕ್ರಿಸ್ತನಿಂದ ಮಾತ್ರ ತಿಳಿದುಕೊಳ್ಳುವುದಕ್ಕೆ ಸಾಧ್ಯ. ತಾಯಿ ಮರಿಯಮ್ಮನವರು ನಮ್ಮೆಲ್ಲರನ್ನೂ ಕ್ರಿಸ್ತನಂತಾಗಿಸಲಿ, ನಮ್ಮೆಲ್ಲರನ್ನು ಸನ್ಮಾರ್ಗದಲ್ಲಿ ನಡೆಸಲಿ ಎಂದು ಆಶಿಸುತ್ತೇನೆ. ಪೂಜ್ಯ ಮರಿಯಮ್ಮನವರ ಜಯಂತಿಯ ಶುಭಾಶಯಗಳು.
********************

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...