Friday, 6 September 2019

ನ್ಯೂಜಿಲೆಂಡಿನ ರೋಟೊರುವ (Rotorua)

 - ಪ್ರಶಾಂತ್ ಇಗ್ನೇಶಿಯಸ್
ಪ್ರವಾಸಗಳಿಗೆ ಹೋದಾಗ ಸ್ಥಳದ ಬಗ್ಗೆ ತಿಳಿದುಕೊಳ್ಳಲು ಅನೇಕ ಕಾರಣಗಳಿರುತ್ತವೆ. ಐತಿಹಾಸಿಕ ಸ್ಥಳವಾದರೆ ಸ್ಥಳವನ್ನು ಆಳಿದ ರಾಜರು, ರಾಣಿಯರ ಕಣ್ಣೀರು, ಅರಮನೆ, ಕೋಟೆ-ಕೊತ್ತಲು, ಐತಿಹಾಸಿಕ ಪಾರಂಪರಿಕ ಕಟ್ಟಡಗಳ ಆಯಸ್ಸು, ಅದಕ್ಕಂಟಿದ ರಕ್ತ ಎಲ್ಲದರ ಮಾಹಿತಿಗಳಿರುತ್ತವೆ, ಇಲ್ಲವೇ ಭೂಗರ್ಭದಲ್ಲಿ ಕಳೆದು ಹೋಗಿರುತ್ತವೆ. ತಿಳಿದುಕೊಳ್ಳಲು ಮನಸ್ಸು ಹಾತೊರೆದರೂ ಈ ಐತಿಹಾಸಿಕ ಸ್ಥಳಗಳಲ್ಲಿ ಕಡೆಲೇಕಾಯಿ, ಸೌತೆಕಾಯಿ ಮಾರುವವರ ದರ್ಬಾರು ಆ ಹಿಂದಿನ ರಾಜರುಗಳಿಗಿಂತ ಜೋರು. ಹುಸಿ ಗೈಡ್^ಗಳ ಬಳಿ ಸಿಕ್ಕಿಕೊಂಡರಂತೂ, ಅವರದೇ ಆದ ಹೊಸ ಚರಿತ್ರೆ ಸೃಷ್ಟಿಯಾಗುತ್ತದೆ. ಈ ಎಲ್ಲ ಕಾಟ ತಪ್ಪಿಸಿಕೊಳ್ಳಲು ಬೇಸಿಗೆಯಲ್ಲಿ ಐಸ್‍ಕ್ರೀಮ್, ಚಳಿಗಾಲದಲ್ಲಿ ಹುರಿದ ಜೋಳಕ್ಕೆ ಪ್ರವಾಸಿಗರು ಮಾರು ಹೋಗಿ, ತಿಂದು, ಪೇಪರ್ ಕಸವನ್ನು ಇತಿಹಾಸದಲ್ಲಿ ಒಂದಾಗಿಸಿ ಪರಮ ಪಾವನರಾಗುತ್ತಾರೆ.

ಪ್ರಕೃತಿ ಸೌಂದರ್ಯದ ಸ್ಥಳಗಳಿಗೆ ಹೋದಾಗ ಮಾಹಿತಿಗಳಿಗಿಂತ ಸೌಂದರ್ಯವನ್ನು ಕಣ್ಣಿನಲ್ಲಿ ತುಂಬಿಕೊಳ್ಳುವುದೇ ಕೆಲಸವಾಗುತ್ತದೆ. ವರ್ಷಗಳ ಹಿಂದೆ ರೋಲ್ ಕ್ಯಾಮರಾಗಳು ಇದ್ದಾಗ ಒಂದು ಸ್ಥಳದಲ್ಲಿ ಒಂದಷ್ಟು ಫೋಟೋ ತೆಗೆದು, ಕ್ಯಾಮರಾ ಮುಚ್ಚಿ ಪ್ರಕೃತಿಯನ್ನು ಆನಂದಿಸುವುದು ಸಾಮಾನ್ಯವಾಗಿತ್ತು. ಡಿಜಿಟಲ್ ಕ್ಯಾಮೆರಾ ಹಾಗೂ ಮೊಬೈಲ್ ಕ್ಯಾಮರಾ ಬಂದ ಮೇಲೆ ಪ್ರಕೃತಿಗೆ ಅಡ್ಡ ನಿಂತು ಸೆಲ್ಫಿ ತೆಗೆದುಕೊಂಡು, ಎಲ್ಲವನ್ನೂ ಮೆಮರಿ ಕಾರ್ಡಿನಲ್ಲಿ ತುರುಕಿಕೊಳ್ಳುವುದರಲ್ಲೇ ಸಮಯವಾಗಿ, ಗೇಟುಗಳು ಮುಚ್ಚಿ ಸೌಂದರ್ಯಾಸ್ವಾದಕ್ಕೆ ಭಂಗ ಬರುತ್ತದೆ. 

ಗಿರಿಧಾಮಗಳಿಗೆ ಹೋದಾಗ ಮೋಡಗಳು ರಸ್ತೆಯ ಮೇಲೆ ಓಡಾಡುತ್ತಿರುವಂತಿರುತ್ತದೆ. ಗೋವದಂತ ಸ್ಥಳಗಳಿಗೆ ಹೋದಾಗ ತೆರೆ 'ನೊರೆ'ಗಳು ನಮ್ಮನ್ನು ಆಕರ್ಷಿಸುತ್ತದೆ. ಮಂಜು ಭೂಮಿಗಿಳಿದು ಸ್ವರ್ಗದ ಅನುಭವ ನೀಡುವ ಸ್ಥಳಗಳು ಮಡಿಕೇರಿಯಿಂದ ಸ್ವಿಜರ್ಲೆಂಡ್ ತನಕ ಸಾವಿರಾರಿವೆ. ಆದರೆ ಭೂಮಿಯೊಳಗಿನಿಂದ ಹೊರಡುವ ಹೊಗೆ ಹಾಗೂ ಒಂದು ಅಸಾಧ್ಯ ವಾಸನೆಯಿಂದ ಸೆಳೆಯುವ ಊರೊಂದಿದೆ ಎಂದರೆ ಆಶ್ಚರ್ಯವಾಗಬಹುದು. ನ್ಯೂಜಿಲೆಂಡಿನ ರೋಟೊರುವ (Rotorua) ಅಂತಹ ಒಂದು ಊರು.

ಪ್ರಕೃತಿ ಸೌಂದರ್ಯ ಹಾಗೂ ಮೌನದಲ್ಲಿ ಅದ್ದಿದಂತ ಪ್ರಶಾಂತತೆಗೆ ನ್ಯೂಜಿಲೆಂಡ್ ಒಂದು ಅಪೂರ್ವ ಸಾಕ್ಷಿಯಾದರೆ, ಅಂತಹ ದೇಶದಲ್ಲಿನ ಅಪರೂಪದ ಅನುಭವವನ್ನು ರೋಟೊರುವ ನೀಡುತ್ತದೆ. ರೋಟೊರುವ ನಗರವನ್ನು ಪ್ರವೇಶಿಸುತ್ತಿದ್ದಂತೆ ವಾಕರಿಕೆ ತರುವಂತ ವಾಸನೆ ನಮ್ಮನ್ನು, ನಮ್ಮ ಮೂಗನ್ನು ಸ್ವಾಗತಿಸುತ್ತದೆ. ಅದಕ್ಕೆ ಹೊಂದಿಕೊಳ್ಳುವ ತನಕ ಸ್ವಲ್ಪ ಕಷ್ಟವೇ. ಆದರೆ ನಿಧಾನವಾಗಿ ಆ ವಾಸನೆಗೆ ನಮ್ಮ ದೇಹ ಒಗ್ಗಿಕೊಳ್ಳುತ್ತದೆ, ಒಗ್ಗಿಕೊಳ್ಳಲೇಬೇಕಾಗುತ್ತದೆ. 

ಪ್ರಾಕೃತಿಕ ಸೌಂದರ್ಯದಿಂದ ಸೆಳೆಯುವ ಈ ಊರು, ಮುಂದೆ ನಮ್ಮ ಕಣ್ಣ ಮುಂದೆ ಇನ್ನಷ್ಟು ಅಚ್ಚರಿಗಳನ್ನು ಮೂಡಿಸುತ್ತಾ ಸಾಗುತ್ತದೆ. ನ್ಯೂಜಿಲೆಂಡಿನ ಇತರ ಸ್ಥಳಗಳಂತೆ ಸುಂದರವಾಗಿದ್ದರೂ, ಇತರ ಮಹಿಮೆಗಳನ್ನು ಈ ಊರು ತೋರಿಸುತ್ತದೆ. ಸಾಗುತ್ತಿದ್ದಂತೆ ಅಲ್ಲಲ್ಲಿ ಹೊಗೆ ಏಳುವುದನ್ನು, ಹೊಗೆ ಗಾಳಿಯಲ್ಲಿ ಒಂದಾಗುವುದನ್ನು ನಾವು ಕಾಣಬಹುದು. ಯಾವ ಮನೆಯಲ್ಲಿ ಏನು ಬೇಯಿಸುತ್ತಿದ್ದಾರೆ? ಇಷ್ಟು ಹೊಗೆ ಬೇಯಿಸುವಂತ ಮಾಂಸವಾದರೂ ಯಾವುದು? ಅಥವಾ ಯಾರ ಬುಡಕ್ಕೆ ಎಷ್ಟು ಬೆಂಕಿ ಬಿತ್ತು? ಎಂದುಕೊಳ್ಳುವಷ್ಟರಲ್ಲಿ ಮತ್ತಷ್ಟು ಹೊಗೆ ಬುಗ್ಗೆಗಳು ಗಾಳಿಯಲ್ಲಿ ಲೀನವಾಗಲು ಮೇಲೆ ಏಳುತ್ತಿರುತ್ತವೆ. 

'ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ' ಎಂಬ ಗಾದೆ ಮಾತು ಈ ಊರಲ್ಲಿ ಸುಳ್ಳಾಗುತ್ತದೆ. ಇಲ್ಲಿ ಹೊಗೆಗೆ ಬೆಂಕಿ ಕಾರಣವಲ್ಲ, ಸಿಗರೇಟೂ ಅಲ್ಲ. ಊರನ್ನು ಆಗಲೇ ಕಂಡವರು ಜೊತೆಯಲ್ಲಿದ್ದು ಅದರ ಬಗ್ಗೆ ತಿಳಿಸಿದರೆ ಮಾತ್ರ ನಿಮಗೆ ಅದರ ರಹಸ್ಯ ಗೊತ್ತಗುವುದು. ಇಲ್ಲವಾದರೆ ತೆರೆದ ಬಾಯಿ, ಮುಚ್ಚಿದ ಮೂಗು, ಕಟ್ಟಿಕೊಂಡ ಕಿವಿಯಲ್ಲಿ ಇದನ್ನೆಲ್ಲಾ ನೋಡಬೇಕಾಗುತ್ತದೆ. ನಮ್ಮ ರಸ್ತೆಗಳಲ್ಲಿ ನೆಲದೊಳಗಿನ ನೀರಿನ ಪೈಪು ಒಡೆದು ಹೋಗಿ, ನೀರಿನ ಬುಗ್ಗೆಗಳು ಒಮ್ಮೊಮ್ಮೆ ಸಣ್ಣದಾಗಿ ಮತ್ತೊಮ್ಮೆ, ಸಿಡಿಯುವಂತೆ ಇಲ್ಲಿ ಗ್ಯಾಸಿನ ಪೈಪೇನಾದರೂ ಒಡೆದು ಹೋಗಿದೆಯೇ ಎಂಬ ಕೀಟಲೆಯ ಪ್ರಶ್ನೆ ಮನಸಿನಲ್ಲಿ ಬಂದರೆ ನಿಮ್ಮ ತಪ್ಪಲ್ಲ. 

ನೀರಿನ ಬುಗ್ಗೆಗಳು ರಸ್ತೆಗಳಲ್ಲಿ ಕೊತಕೊತನೆ ಕುದಿಯುತ್ತಾ, ನೆಲದಿಂದ ಹೊಗೆ ಬರುವುದನ್ನು ಕಂಡಾಗ ಒಂದಷ್ಟು ಭಯವಾಗಬಹುದು, ಆಶ್ಚರ್ಯವಾಗಬಹುದು. ಮುಂದೆ ಆಶ್ಚರ್ಯ, ಭಯ ಒಂದು ರೀತಿಯ ಅಪೂರ್ವ ಅನುಭವಕ್ಕೆ ಎಡೆ ಮಾಡಿಕೊಡುತ್ತದೆ. ಈ ಪ್ರದೇಶದಲ್ಲಿನ ನೆಲವು 'ಜಿಯೋಥರ್ಮಲ್' ಕ್ರಿಯೆಗೆ ವೇದಿಕೆಯಾಗಿದೆ. ಹಾಗೆಂದರೆ ಏನು ಎಂಬ ಪ್ರಶ್ನೆಯನ್ನು ಉತ್ತರಿಸುವಷ್ಟು ವೈಜ್ಞಾನಿಕ ಬುದ್ದಿವಂತಿಕೆ ನನ್ನಲ್ಲಿ ಇಲ್ಲ. ಭೂಮಿಗೆ ಬಿದ್ದ ಬೀಜ ಚಿಗುರೊಡೆದು ಸಸಿಯಾಗಿ ಬೆಳೆಯುವಷ್ಟು ಸಹಜವಾದ ಭೂಮಿಯಾಳದ ಒಂದು ಪ್ರಕ್ರಿಯೆ ಇದು.



ಗೀಸರ್‍ಗಳು ಹಾಗೂ ಬಿಸಿ ನೀರ ಬುಗ್ಗೆಗಳನ್ನು ಈ ಪ್ರದೇಶದಲ್ಲಿ ಬಹಳವಾಗಿ ಕಾಣಬಹುದು. ಆ ವಾಸನೆ ಹಾಗೂ ಹೊಗೆಗೆ ಪ್ರಮುಖ ಕಾರಣ ಭೂಮಿಯೊಳಗಿನ 'ಸಲ್ಫರ್ ಡೆಪಾಸಿಟ್'. ನೆಲದ ಆಳದಲ್ಲಿ ಕೊತಕೊತನೆ ಕುದಿಯುವ ಈ ಸಲ್ಫರ್ ಅಥವಾ ಗಂಧಕವು, ನೆಲದ ತೂತುಗಳಿಂದ ತನ್ನ ಬಿಸಿಯಾಟದ ಕುರುಹುಗಳನ್ನು ಗಾಳಿಯಲ್ಲಿ ತೇಲಿ ಬಿಡುತ್ತದೆ. ಇತ್ತ ಗಂಧಕದ ಈ ವಾಸನೆ, ಅತ್ತ ಹೊಗೆಯಿಂದಾಗಿ ಈ ನಗರವನ್ನು 'ಸಲ್ಫರ್ ಸಿಟಿ' ಎಂದೇ ಕರೆಯಲಾಗುತ್ತದೆ. 

ಈ ಗಂಧಕವು ಉರಿಯುವಾಗ ಕೊಳೆತ ಮೊಟ್ಟೆಯ ವಾಸನೆ ಹೊರಬೀಳುತ್ತದೆ. ಇದರಿಂದಾಗಿಯೇ ಈ ನಗರ ’Rotten Rua’ ರೋಟೊರುವ ಆಗಿದೆ ಎನ್ನುತ್ತಾರೆ. ರುವಾ ಎಂದರೆ ಗೆಡ್ಡೆಗೆಣಸುಗಳನ್ನು ಶೇಖರಿಸಿಡುವ ಕಣಜ. ನೂಲ್ ಕೋಲ್ ಅಥವಾ ಮೂಲಂಗಿಯಂಥ ಗೆಡ್ಡೆಯು ಕಣಜದಲ್ಲಿ ಕೊಳೆತು ಹೋದರೆ ಎಂತಹ ಕೆಟ್ಟ ವಾಸನೆ ಬರಬಹುದೆಂದು ಊಹಿಸಿ. ಹಾಗಾಗಿ ಈ ಊರನ್ನು ಕೊಳೆತ ಕಣಜ ಎಂದು ಕರೆಯುತ್ತಾರೆ ಎಂಬುದು ಒಂದು ವಾದ. ಆದರೆ ನಿಜಕ್ಕೂ ಅದರ ಹೆಸರು ಬಂದಿರುವುದು ಅಲ್ಲಿನ ಮೂಲನಿವಾಸಿಗಳು ಮಾತನಾಡುವ 'ಮಾವೊರಿ' ಎಂಬ ಭಾಷೆಯಿಂದ. 'ರೋಟೋ' ಎಂದರೆ ಸರೋವರ ಹಾಗೂ 'ರುವಾ' ಎಂದರೆ 'ಎರಡನೆಯ'. ಹೀಗೆ ರೋಟೊರುವ ಎಂದರೆ 'ಎರಡನೆಯ ಸರೋವರ' ಎಂಬುದು ನಿಜ ಅರ್ಥ. 

ಭೂಮಿಯ ಒಡಲಾಳದಲ್ಲಿ ನಡೆಯುವ ಈ ತಿಕ್ಕಾಟದಿಂದ ನೆಲದ ಮೇಲೆ ಒಂದು ಅಸಾಧಾರಣವಾದ ನೋಟ ಸೃಷ್ಟಿಯಾಗುತ್ತದೆ ಈ ಊರಿನ ಅನೇಕ ಕಡೆಗಳಲ್ಲಿ, ಪಾರ್ಕುಗಳಲ್ಲಿ, ಕೊನೆಗೆ ಸಾಮಾನ್ಯ ರಸ್ತೆಗಳಲ್ಲಿ ಸಹಾ ಇದನ್ನು ನಾವು ಕಾಣಬಹುದಾಗಿದೆ. 

ಇದೇ ನಗರದಲ್ಲಿರುವ ಲೇಡಿ ನಾಕ್ಸ್ ಎಂಬ ಒಂದು ನೀರಿನ ಬಗ್ಗೆ ಒಂದು ಅಪೂರ್ವವಾದ ಅನುಭವವನ್ನು ನೋಡುಗರಿಗೆ ನೀಡುತ್ತದೆ. ಪ್ರತಿದಿನ ಬೆಳಿಗ್ಗೆ ಸುಮಾರು ಹತ್ತು ಮೂವತ್ತಕ್ಕೆ ಈ ಪ್ರದೇಶದಲ್ಲಿ ನೂರಾರು ಜನ ಬಂದು ಸೇರುತ್ತಾರೆ. ಜನ ಸೇರಿದ ಮೇಲೆ ನೀರಿನ ಬುಗ್ಗೆ ಚಿಮ್ಮುವ ಕಲ್ಲಿನ ರಂಧ್ರಕ್ಕೆ ಅಲ್ಲಿನ ಸ್ವಯಂಸೇವಕರು ಯಾವುದೋ ಒಂದು ರೀತಿಯ ದ್ರವವನ್ನು ಸುರಿಯುತ್ತಾರೆ. ತಕ್ಷಣವೇ ರಂಧ್ರದಿಂದ ಸುಮಾರು 20 ಮೀಟರುಗಳ ಎತ್ತರಕ್ಕೆ ಚಿಮ್ಮುವ ಬಿಸಿ ನೀರಿನ ಬುಗ್ಗೆಯ ಪರಿಯೇ ಅದ್ಭುತ. 

ಭೂಮಿಯೊಳಗೆ ಕೊತ ಕುದಿಯುತ್ತಿರುವ ನೀರಿಗೆ ದ್ರವದ ಸಾಂಗತ್ಯ ಸಿಕ್ಕಿದೊಡನೆ ಹೊರಡುವ ಈ ಬುಗ್ಗೆ ನಿಜಕ್ಕೂ ಪ್ರಕೃತಿಯ ಅದ್ಭುತವೇ ಸರಿ. ಈ ಬುಗ್ಗೆ ಸುಮಾರು ಒಂದು ಗಂಟೆಗಳ ತನಕ ಚಿಮ್ಮುತ್ತಿರುತ್ತದೆ ಎಂದು ಹೇಳಲಾಗುತ್ತದೆ. ಹೆಮ್ಮೆಯ ಭಾರತೀಯರಂತೆ ನಾವು ಸುಮಾರು 15 ನಿಮಿಷಗಳು ತಡವಾಗಿ ಹೋಗಿ, ಬುಗ್ಗೆಯ ಉಚ್ಛ್ರಾಯ ಸ್ಥಿತಿಯ ನೋಟದಿಂದ ವಂಚಿತವಾದೆವು. 

ಈ ಸ್ಥಳದ ಈ ಕ್ರಿಯೆ ಹೇಗೆ ಬೆಳಕಿಗೆ ಬಂತು ಎಂಬುದು ಸಹ ಒಂದು ಆಸಕ್ತಿಕರವಾದ ವಿಷಯ. 1901 ರಲ್ಲಿ ಈ ಪ್ರದೇಶದಲ್ಲಿ ಮೊದಲ ಮುಕ್ತ ಸೆರೆಮನೆಯನ್ನು ಸ್ಥಾಪಿಸಲಾಯಿತು. ರೋಟೊರುವ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶದ ಜೈಲುಗಳಲ್ಲಿದ್ದ ಒಳ್ಳೆಯ ನಡತೆಯ ಅಪರಾಧಿಗಳನ್ನು ಈ ಮುಕ್ತ ಸೆರೆವಾಸಕ್ಕೆ ಬಿಡಲಾಗುತ್ತಿತ್ತು. ಅಲ್ಲಿ ಸುತ್ತಾಡುತ್ತಿದ್ದ ಅವರು ತಮ್ಮ ಬಟ್ಟೆಗಳನ್ನು ಒಗೆದುಕೊಳ್ಳಲು ಈ ಬುಗ್ಗೆಯ ಬಳಿ ಬರುತ್ತಾರೆ. ಬಟ್ಟೆ ಒಗೆಯಲು ತಂದಿದ್ದ ಬಟ್ಟೆ ಸೋಪ್ ಆ ನೀರಿನ ಬುಗ್ಗೆಯ ಸಂಪರ್ಕಕ್ಕೆ ಬಂದೊಡನೆ, ಧುತ್ತನೆ ಬಿಸಿ ನೀರಿನ ಬುಗ್ಗೆ ಎತ್ತರಕ್ಕೆ ಚಿಮ್ಮಿತಂತೆ. ಈ ರೀತಿಯಾಗಿ ಇದು ಬೆಳಕಿಗೆ ಬಂತು. 

ಇದನ್ನು ಕಂದು ಹಿಡಿದಿದ್ದು ಆ ಬಡ ಬಂಧಿತರು. ಆದರೆ ಬುಗ್ಗೆಗೆ ಹೆಸರು ಅಂದಿನ ನ್ಯೂಜಿಲೆಂಡಿನ ಗೌವರ್ನರ್ ಆಗಿದ್ದ ಬ್ರಿಟಿಷ್ ರಾಜಕಾರಿಣಿ ಜಾನ್ ಮಾರ್ಕ್ ನಾಕ್ಸ್ ನ ಎರಡನೆಯ ಮಗಳು ಲೇಡಿ ನಾಕ್ಸ್ ಳದು. ಇಂದಿಗೂ ಪ್ರತಿದಿನ ಅವಳ ಹೆಸರಿನಲ್ಲೇ ಬುಗ್ಗೆ ಚಿಮ್ಮುತ್ತಿದೆ. ಆ ಅಪರಾಧಿಗಳ ಹೆಸರು ನೆಲದಾಳದ ಚಿಮ್ಮದ ನೀರಿನಲ್ಲಿ ಎತ್ತ ಸೇರಿಕೊಂಡಿತೋ?. 

ನಮ್ಮ ಸುಪ್ತ ಮನಸ್ಸಿನಲ್ಲಿ ಯಾರಿಗೂ ತಿಳಿಯದಂತೆ ಕೊತಕೊತನೆ ಕುದಿಯುವ ಭಾವನೆಗಳು ಯಾವುದೋ ಒಂದು ಸಣ್ಣ ಪ್ರಚೋದನೆಯಲ್ಲಿ ಸ್ಫೋಟಗೊಳ್ಳುವ, ಚಿಮ್ಮುವ ಪ್ರತೀಕವಾಗಿ ಈ ಬುಗ್ಗೆಯು ಕಾಣುತ್ತದೆ. ಮುಂದೆ ಅದೇ ಪ್ರದೇಶದಲ್ಲಿ ಸಿಗುವ ಶ್ಯಾಂಪೇನ್ ಪೂಲ್, ಆರ್ಟಿಸ್ಟ್ ಪ್ಯಾಲೆಟ್, ಪ್ರಿಮ್ ರೋಸ್ ಟೆರೆಸ್ ಎಲ್ಲದಕ್ಕೂ ಅದರದೇ ಆದ ರೋಚಕ ಕತೆಗಳಿವೆ. 



************* 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...