Wednesday, 4 September 2019

ಓದಿದ ಪುಸ್ತಕಗಳಿಂದ. . .

 . . ಈ ಜಡಸ್ಥಿತಿ ಸಾಹಿತ್ಯ ವಿಮರ್ಶೆಗಷ್ಟೇ ಸಂಬಂಧಿಸಿದ ಸಮಸ್ಯೆ ಎಂದು ಭಾವಿಸಲಾಗದು. ಕಾರಣ, ವಿಮರ್ಶೆ ಎನ್ನುವುದು ಸಮಾಜದ ಎಲ್ಲ ವಲಯಗಳನ್ನೂ ಒಳಗೊಳ್ಳುವ ವಿಸ್ತೃತ ಚಟುವಟಿಕೆ. ಪುಸ್ತಕಗಳನ್ನು ಸಮರ್ಥವಾಗಿ ವಿಶ್ಲೇಷಿಸಬಲ್ಲವರು ಸಂಸ್ಕೃತಿ, ರಾಜಕಾರಣಗಳನ್ನು ಆಳವಾಗಿ ವಿಮರ್ಶಿಸುವ ನೋಟಗಳನ್ನೂ ಹೊಂದಿರಬಲ್ಲರು. ವಿಮರ್ಶಕ ಎಫ್. ಆರ್. ಲೀವಿಸ್ 'ಸಮಾಜ ವಿಜ್ಞಾನಿಗಳು ಹಾಗೂ ರಾಜಕೀಯ ವಿಜ್ಞಾನಿಗಳಿಗಿಂತ ಸಾಹಿತ್ಯ ವಿಮರ್ಶಕರು ಮುಂದಿರುತ್ತಾರೆ; ಯಾಕೆಂದರೆ ಭಾಷೆಯ ಸೂಕ್ಷ್ಮ ಬಳಕೆಯ ಬಗ್ಗೆ ಅವರು ಹೆಚ್ಚು ಎಚ್ಚರ ವಹಿಸುತ್ತಿರಬೇಕಾಗುತ್ತದೆ' ಎಂದಿದ್ದು ಈ ಹಿನ್ನೆಲೆಯಲ್ಲಿಯೇ. ಆದ್ದರಿಂದಲೇ ಕವಿ ಆಕ್ಟೋವಿಯಾ ಪಾಜ್‌ನ 'ವಿಮರ್ಶೆ ಸೋತರೆ ಪ್ರಜಾಪ್ರಭುತ್ವವೂ ಸೋಲುವುದು' ಎಂಬ ಮಾತಿನ ಅರ್ಥವನ್ನು ವಿಸ್ತರಿಸುತ್ತಲೇ ಇರಬೇಕು. ನಮ್ಮ ರಾಜಕೀಯ ಪಕ್ಷಗಳಿಗೆ ಸೇರಿಕೊಳ್ಳುವಾಗ ನಿಜಕ್ಕೂ ಆದರ್ಶಗಳನ್ನು ಹೊತ್ತು ಬರುವ ತರುಣ, ತರುಣಿಯರಿಗೆ ರಾಜಕೀಯ ಬೆಳವಣಿಗೆಗಳನ್ನು ವಿಮರ್ಶಿಸುವುದನ್ನಾಗಲೀ, ಸಮಾಜದ ಸ್ಥಿತಿಗತಿಗಳನ್ನಾಗಲೀ ಹೇಳಿಕೊಡುವ ನಾಯಕರೇ ಇದ್ದಂತಿಲ್ಲ; ಬದಲಿಗೆ, ಅವರನ್ನು ತಮ್ಮ ಪಕ್ಷದ ಪರ ಕಿರುಚುವ ವಾಚಾಳಿಗಳನ್ನಾಗಿ ಮಾಡುವುದರಲ್ಲೇ ಬಹುತೇಕರು ತೊಡಗಿದಂತಿದೆ. ಜೊತೆಗೆ, ಹಿರಿಯ ನಾಯಕರು ಕೂಡ "ಏನು ಹೇಳಿದರೆ ಏನು ಪ್ರಯೋಜನ?" ಎಂದು ಸಿನಿಕರಾಗಿರುವಂತಿದೆ. ಈ ಸಿನಿಕತೆ ಕಾಲೇಜು, ವಿಶ್ವವಿದ್ಯಾಲಯಗಳ ಬೋಧಕ, ಬೋಧಕಿಯರನ್ನೂ ಆವರಿಸಿದ್ದರೆ ಅದು ಒಂದು ಸಮಾಜದ ಬೌದ್ಧಿಕ ದುರಂತದ ಮುನ್ಸೂಚನೆಯಷ್ಟೇ. ನಮ್ಮ ಶಿಕ್ಷಣ ವಲಯಗಳಲ್ಲಿ ಸ್ವತಂತ್ರ ಚಿಂತನೆಯ ಸಾಧ್ಯತೆಗಳು ಮಾಯವಾದರೆ ಹೊಸ ತಲೆಮಾರುಗಳು ರಾಷ್ಟ್ರೀಯತೆ, ದೇಶಪ್ರೇಮದಂಥ ಪರಿಕಲ್ಪನೆಗಳ ವಿಶಾಲ ಅರ್ಥಗಳನ್ನು ಕುವೆಂಪು, ಟ್ಯಾಗೋರ್, ನೆಹರೂ ಥರದ ಚಿಂತಕರಿಂದ ಕಲಿಯದೆ ಝಂಡಾ ಹಿಡಿದ ಚೀರುಮಾರಿಗಳಿಂದ ಸಂಕುಚಿತ ಅರ್ಥಗಳನ್ನು ಕಲಿಯಬೇಕಾದ ದುಃಸ್ಥಿತಿ ಬರುತ್ತದೆ. ಒಂದು ಬಜೆಟ್ಟಿನ ವಿಶ್ಲೇಷಣೆ ಮಾಡುವ ಕ್ರಮವನ್ನು ಅಮರ್ತ್ಯ ಸೇನ್ ಥರದವರಿಂದ ಕಲಿಯದೆ ಸಂತೆಯ ಹೊತ್ತಿಗೆ ಮೂರು ಮೊಳ ನೇಯುವ ಮಾತುಗಾರರಿಂದಲೋ, ಪಕ್ಷಗಳ ಅಪ್ರಾಮಾಣಿಕ ವಕ್ತಾರರಿಂದಲೋ ಕಲಿಯಬೇಕಾಗುತ್ತದೆ. ವಿಶ್ವವಿದ್ಯಾಲಯಗಳು ಮಾತ್ರ ನಾಯಕರನ್ನು, ಸೂಕ್ಷ್ಮ ವಿಶ್ಲೇಷಕರನ್ನು ಸೃಷ್ಟಿಸುತ್ತವೆ ಎಂದು ನಾನು ವಾದಿಸುತ್ತಿಲ್ಲ. ನಾಯಕತ್ವವನ್ನು ಸೃಷ್ಟಿಸುವ ಅನೇಕ ವಲಯಗಳಿರುತ್ತವೆ, ನಿಜ. ಆದರೆ ಸಮಾಜ, ಸಾಹಿತ್ಯ, ಸಂಸ್ಕೃತಿ, ಮಾನವ ವರ್ತನೆ, ರಾಜಕಾರಣ, ಆರ್ಥಿಕತೆ ಇವೆಲ್ಲದರ ಕ್ರಮಬದ್ಧ ವಿಶ್ಲೇಷಣೆಗಳನ್ನು ಮಾಡಲೆಂದೇ ಪ್ರಬುದ್ಧ ಚಿಂತನಾಕ್ರಮಗಳು ನಮ್ಮ ಉನ್ನತ ಶಿಕ್ಷಣದ ಪಠ್ಯಗಳಲ್ಲಿರುತ್ತವೆ; ಅದಕ್ಕಾಗಿ ಜನರ ತೆರಿಗೆಯ ಹಣದಿಂದ ಕೋಟ್ಯಂತರ ರೂಪಾಯಿಗಳನ್ನು ಸುರಿಯಲಾಗುತ್ತದೆ ಎಂಬುದನ್ನು ಇಲ್ಲಿ ಭಾಗಿಯಾಗಿರುವವರು ಮರೆಯಬಾರದು. ಇಂಥ ಕಡೆ ಉತ್ತಮ ನಾಯಕರು ಹುಟ್ಟದಿದ್ದರೆ, ಎಲ್ಲ ವಲಯಗಳನ್ನು ಉತ್ತಮವಾಗಿ ವಿಶ್ಲೇಷಿಸುವವರಾದರೂ ತಯಾರಾಗಬೇಕು. ಯಾವುದೇ ಜ್ಞಾನವಿಲ್ಲದೆ ಕಿರುಚುವವರನ್ನು ಆಳವಾದ ಜ್ಞಾನವುಳ್ಳ ದಿಟ್ಟದನಿಗಳು ಮಾತ್ರ ಹಿಮ್ಮೆಟ್ಟಿಸಲು ಸಾಧ್ಯ. ಈ ಕೆಲಸವನ್ನು ನವಮಾಧ್ಯಮಗಳ ತಕ್ಷಣದ ಪ್ರತಿಕ್ರಿಯೆಯ ಮೂಲಕ ಮಾಡುತ್ತೇವೆ ಎಂದು ಹೊಸ ಪ್ರಗತಿಪರ ತಲೆಮಾರು ಭ್ರಮಿಸಬಾರದು. . . . 
 ವಿಮರ್ಶೆ ಬಲವಿಲ್ಲದ ರಾಜಕೀಯ ಮತ್ತು ಸಾಹಿತ್ಯ - ನಟರಾಜ್ ಹುಳಿಯಾರ್

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...