- ಫಾ. ಪಿ ವಿಜಯ ಕುಮಾರ್, ಬಳ್ಳಾರಿ
ಆದಿಯಲ್ಲಿ ತ್ರೈಏಕ ದೇವರು ಸಕಲ ಜೀವರಾಶಿಗಳನ್ನು ಸೃಷ್ಟಿಸಿ (ಆದಿ 1:1) ಅವುಗಳು ಸ್ವತಂತ್ರವಾಗಿ, ಆನಂದವಾಗಿ, ಸಂತೃಪ್ತಿಯ ಹಾಗೂ ಸಹಕಾರದ ಜೀವನ ನಡೆಸುವಂತೆ ಎಲ್ಲವನ್ನೂ ಹರಸಿ ಆರ್ಶೀವದಿಸಿದರು. ಆದರೆ ಸೃಷ್ಟಿಯ ಮುಕುಟವಾದ ಮಾನವ ಇಂದು ಸೃಷ್ಟಿಕರ್ತರಾದ ತ್ರೈಏಕ ದೇವರನ್ನು ದಿನದಿಂದ ದಿನಕ್ಕೆ ಮರೆಯುತ್ತಿದ್ದಾನೆ. ಆದರೆ ಲೌಕಿಕವಾಗಿ ಮಾತ್ರ ನಾಗರೀಕನಾಗುತ್ತಿದ್ದಾನೆ, ಅಭಿವೃದ್ಧಿಯಾಗುತ್ತಿದ್ದಾನೆ, ಸುಸಂಸ್ಕೃತನಾಗುತ್ತಿದ್ದಾನೆ. ಗಣಕಯಂತ್ರಕ್ಕೂ, ಜಂಗಮವಾಣಿಗೂ ಗಟ್ಟಿಯಾಗಿ ಅಂಟಿಕೊಂಡಿದ್ದಾನೆ. ಸೌಹಾರ್ದಯುತ ಬದುಕನ್ನು ಮರೆತಿದ್ದಾನೆ. ನಾವು ನಮ್ಮದು ಎನ್ನುವ ಮಮಕಾರವನ್ನು ಮರೆತು, ನಾನು ಎಂಬ ದುರಹಂಕಾರ ಹಾಗೂ ನನ್ನದು ಎನ್ನುವ ಸ್ವಾರ್ಥದಿಂದ ತುಂಬಿದ್ದಾನೆ. ಮಾತ್ರವಲ್ಲದೆ ಇಂದು ಮಾನವನಲ್ಲಿ ಆಧ್ಯಾತ್ಮಿಕ ದಿವಾಳಿತನ ತಾಂಡವವಾಡುತ್ತಿದೆ ಎನ್ನುವುದಕ್ಕಿಂತ ಆಧ್ಯಾತ್ಮಿಕವಾಗಿ ಸತ್ತೇ ಹೋಗಿದ್ದಾನೆ ಎಂದರೆ ಅತಶಯೋಕ್ತಿಯಾಗಲಾರದು. ಇದಕ್ಕೆ ಮೂಲ ಕಾರಣ ಮಾನವ ತ್ರೈಏಕದೇವರನ್ನು ಮರೆತು ಲೌಕಿಕ ಸಂಪತ್ತಿಗೆ ಗುಲಾಮನಾಗಿ, ಆಳವಾದ ಪ್ರಪಾತದಲ್ಲಿ ಮುಳುಗಿ, ಪ್ರಪಂಚದ ಅಳಿದು ಹೋಗುವ ಆಸ್ತಿ, ಅಧಿಕಾರ, ಧನಕನಕಗಳೆಂಬ ಮಹಾ ಮಾಯೆಯಲ್ಲಿ ಸಿಲುಕಿ, ತಳಮಳಗೊಂಡಿದ್ದಾನೆ. ಕತ್ತಲೆ ಅವನನ್ನು ಗಾಢವಾಗಿ ಆವರಿಸಿದೆ. ಆತನಿಗೀಗ ಈ ಗುಲಾಮಗಿರಿಯಿಂದ ಬಿಡುಗಡೆ ಬೇಕಾಗಿದೆ. ಬಿಡುಗಡೆಯ ಬೆಳಕಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾನೆ. ಮಾನವ ಮಾತ್ರವಲ್ಲ ಸಕಲಜೀವರಾಶಿಗಳೂ ಸಹ ಬಿಡುಗಡೆಯನ್ನು ಬಯಸುತ್ತಿವೆ (ರೋಮನರಿಗೆ 8).
ಮಾನವನ ಸಂಪೂರ್ಣ ಬಿಡುಗಡೆ ತ್ರೈಏಕ ದೇವರಿಂದ ಮಾತ್ರ ಸಾಧ್ಯ. ವಿಜ್ಞಾನದಿಂದಾಗಲೀ, ಸುಜ್ಞಾನದಿಂದಾಗಲೀ, ಅದು ಸಾಧ್ಯವಿಲ್ಲ. ಮಾನವರಿಗೆ ಬಿಡುಗಡೆಯ ಶಾಶ್ವತ ಬೆಳಕನ್ನು ನೀಡಲು ದೇವರು ಸದಾ ಬಯಸುತ್ತಾರೆ. ಆದರೆ ಮಾನವ ಸ್ವಾರ್ಥಕ್ಕೆ ಗುಲಾಮನಾಗಿ ತನ್ನ ನೈಜ, ಅಳಿಯದ ಹಾಗೂ ಸ್ಥಿರವಾದ ಆಸ್ತಿಯಾದ ತ್ರೈಏಕ ದೇವನ ಪ್ರಸನ್ನತೆಯನ್ನು ಹಾಗೂ ಅಮರತ್ವವನ್ನು ಕಳೆದುಕೊಳ್ಳುತ್ತಿದ್ದಾನೆ. ತಾನು ಕಳೆದು ಕೊಳ್ಳುತ್ತಿರುವುದು ಅತ್ಯಮೂಲ್ಯವಾದ ಅಳಿಯದ ಆಸ್ತಿಯಾದ ದೈವೀ ಸಂಬಂಧ ಎನ್ನುವುದನ್ನು ಮರೆತು ಸೈತಾನನ ಕಪಿಮುಷ್ಟಿಯಲ್ಲಿ ಬಂಧಿಯಾಗಿದ್ದಾನೆ. ಒಂದು ಬಾರಿ ಸೈತಾನನ ಕಪಿಮುಷ್ಟಿಗೆ ಸಿಲುಕಿದರೆ ಅದರಿಂದ ಬಿಡಿಸಿಕೊಳ್ಳುವುದು ಬಲು ಕಷ್ಟ. ಆದರೆ ಸತ್ಯವನ್ನರಸಿ ಬೆಳಕಿನೆಡೆಗೆ ಸಾಗಲು ಬಯಸುವ ಪ್ರತಿ ಮಾನವನಿಗೂ ದೇವರ ಅಭಯಹಸ್ತ ಸದಾ ಸಿದ್ದವಾಗಿರುತ್ತದೆ. ಇದನ್ನು ಪ್ರವಾದಿ ಯೆಶಾಯ "ಹೆತ್ತ ತಾಯಿಗೆ ತನ್ನ ಕಂದನ ಪ್ರೀತಿ ಬತ್ತಿಹೋಗುವುದುಂಟೆ? ಆಕೆ ತನ್ನ ಮೊಲೆಗೂಸನ್ನು ಮರೆತುಬಿಡುವುದುಂಟೆ? ಒಂದು ವೇಳೆ ಆಕೆ ಮರೆತರೂ ನಾ ನಿನ್ನ ಮರೆಯೆ. ನೋಡು, ನಿನ್ನ ಚಿತ್ರ ಕೊರೆದಿದೆ ನನ್ನ ಅಂಗೈಗಳಲೆ" (49:15-16) ಎನ್ನುತ್ತಾನೆ. ತ್ರೈಏಕದೇವರು ಮಾನವರ ದುರಾಚಾರವನ್ನು ಹಾಗೂ ಸ್ವಾರ್ಥವನ್ನು ಗಣನೆಗೆ ತೆಗೆದುಕೊಳ್ಳದೆ ಸದಾ ಅವರ ಅಭ್ಯುದಯ ಹಾಗೂ ಶ್ರೇಯಸ್ಸನ್ನು ಬಯಸುವವರಾಗಿದ್ದಾರೆ. ಈ ಕಾರಣದಿಂದಲೆ ದೇವರು ಮಾನವರಾದರು, ಮಾನವರ ಮಧ್ಯದಲ್ಲಿ ಜೀವಿಸಿದರು (ಮತ್ತಾ 1:23)
ಮಾನವ ತನ್ನ ಗುಲಾಮತನದಿಂದ ಬಿಡುಗಡೆ ಹೊಂದಲು ಬಯಸುವುದಾದರೆ ಪ್ರಪ್ರಥಮವಾಗಿ ದೇವರಿಗೆ ಅಭಿಮುಖನಾಗಬೇಕು. ಮಾನವರ ಬಿಡುಗಡೆಗಾಗಿ ಮಾನವರೂಪ ತಾಳಿದ ಪ್ರಭು ಯೇಸು "ಕಾಲವು ಪರಿಪಕ್ವವಾಗಿದೆ, ದೇವರ ಸಾಮ್ರಾಜ್ಯವು ಸಮೀಪಿಸಿದೆ: ಪಶ್ಚಾತ್ತಾಪಟ್ಟು ಪಾಪಜೀವನಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ ಶುಭಸಂದೇಶದಲ್ಲಿ ವಿಶ್ವಾಸವಿಡಿ" (ಮಾರ್ಕ 1:15) ಎಂದು ತಮ್ಮ ಪ್ರಥಮ ಬೋಧನೆಯಲ್ಲಿಯೇ ಕರೆ ನೀಡಿದ್ದಾರೆ. ಯಾರು ಅವರ ಕರೆಯನ್ನು ಆಲಿಸಿ ಅಂಗೀಕರಿಸಿ ದೇವರೆಡೆಗೆ ಅಭಿಮಖರಾಗುತ್ತಾರೊ ಅವರು ತಮ್ಮ ಗುಲಾಮತನಕ್ಕೆ ತಿಲಾಂಜಲಿ ಹಾಡಬಹುದು. ಆದರೆ ಇದು ಒಂದು ಕ್ಷಣದ ಕ್ರಿಯೆಯಲ್ಲ ಬದಲಾಗಿ ಜೀವನ ಪರಿಯಂತರ ನಡೆಯುವ ನಿರಂತರ ಪ್ರಕ್ರಿಯೆ. ಮಾನವನು ಲೋಕದ ಗುಲಾಮತನದಿಂದ ಬಿಡುಗಡೆ ಹೊಂದಿದರೆ ಸಾಲದು. ಆಧ್ಯಾತ್ಮಿಕ ಕೊರತೆಯಿಂದಲೂ ಬಿಡುಗಡೆ ಹೊಂದಬೇಕು. ಆಗ ಸೈತಾನನ ರಾಜ್ಯದಿಂದ ಹೊರಬಂದು ದೈವೀ ರಾಜ್ಯದ ಸಕ್ರಿಯ ಪ್ರಜೆಯಾಗಲು ಸಾಧ್ಯ.
ಇತಿಹಾಸದಲ್ಲಿ ಎಷ್ಟೋ ಜನರು ತಮ್ಮ ಗುಲಾಮತನದಿಂದ ಬಿಡುಗಡೆ ಹೊಂದಿ ದೇವರಿಗೆ ಅಭಿಮುಖರಾಗಿ ಸದ್ಗತಿಗೆ ಭಾಜನರಾಗಿದ್ದಾರೆ. ಪಾಪದ ದಾಸ್ಯದಲ್ಲಿ ಸಿಲುಕಿದ್ದ ಮಗ್ದಲದ ಮರಿಯ ಕ್ರಿಸ್ತನ ಪಾದಸ್ಪರ್ಶದಿಂದ ಪಾವನಳಾದಳು. ಲೌಕಿಕ ಆಸೆಯಲ್ಲಿ ಮುಳುಗಿ ಉಕ್ಕಡದಲ್ಲಿ ಕುಳಿತು ಸುಂಕ ವಸೂಲಿ ಮಾಡುತ್ತಿದ್ದ ಮತ್ತಾಯ ಕ್ರಿಸ್ತನೆಡೆಗೆ ಮುಖಮಾಡಿ ಶುಭಸಂದೇಶದ ಪ್ರವರ್ತಕನಾದ. ಪಾಪದ ಪ್ರಪಾತದಲ್ಲಿ ಬಿದ್ದು ಇದೇ ಅಂತ್ಯ ಹಾಗೂ ಸರ್ವಸ್ವ ಎನ್ನುತ್ತಿದ್ದ ಅಗಸ್ಟಿನ್ ದೇವರಿಗೆ ಅಭಿಮುಖನಾಗಿ ಅತ್ಯುತ್ತಮ ದೈವಶಾಸ್ತ್ರಜ್ಙನಾದ. ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ದೇವರೆಡೆಗೆ ಅಭಿಮುಖರಾಗಿರಿ, ಭಕ್ತಿಯಲ್ಲಿ ಮಿಂದಾಗ ಕೊರಡು ಸಹ ಕೊನರುವುದು. ಸುಜ್ಞಾನದ ದ್ವಾರ ತೆರೆಯವುದು, ಭೇದ ಮರೆಯುವುದು, ಸ್ವಾರ್ಥ ಅಳಿಯುವುದು, ಹಳೆತನ ಅಳಿದು ಹೊಸತನ ಅರಳುವುದು. ಅಂದರೆ ಬಿಡುಗಡೆ ಬಯಸುವವರಿಗೆ ಸಾಮ್ರಾಜ್ಯದ ಬಾಗಿಲು ಸದಾ ತೆರೆದಿರುತ್ತದೆ.
********************
No comments:
Post a Comment