ಫ್ರಾನ್ಸಿಸ್. ಎಂ. ಎನ್
ತಾವೇ ಆಯಾ ಸಮುದಾಯಗಳ ಅಧಿಕೃತ ನೇತಾರರೆಂದು ಬಿಂಬಿಸಿಕೊಳ್ಳುವ ಕೆಲವರು ತಾವು ನಡೆದದ್ದೇ ಹಾದಿ ಎಂಬಂತೆ, ಪೈಪೋಟಿಯಲ್ಲಿ ಕಿವಿಗಡಚಿಕ್ಕುವ ಧ್ವನಿವರ್ಧಕಗಳ ಹಾಡುಗಳೊಂದಿಗೆ, ಕಿವಿಯ ಪರದೆ ಹರಿಯುವಷ್ಟು ಪ್ರಬಲವಾದ ನಾದ ಹೊಮ್ಮಿಸುವ ವಾದ್ಯಮೇಳಗಳೊಂದಿಗೆ ಬೀದಿ ಬೀದಿಗಳಲ್ಲಿ ಸಾಗುವ ಮೆರವಣಿಗೆಗಳನ್ನು, ಜಾಥಾಗಳನ್ನು, ಯಾತ್ರೆಗಳನ್ನು ಆಯೋಜಿಸುವುದು, ಹಬ್ಬ ಹರಿದಿನಗಳಲ್ಲಿ ರಸ್ತೆಗಳನ್ನು ಆಪೋಷಣೆ ಮಾಡುವ ಮಂಟಪಗಳನ್ನು ನಿರ್ಮಿಸುವುದು, ಯಾವುದೋ ದಿನವೊಂದಕ್ಕೆ ನಿಗದಿಯಾಗುವ ಹಬ್ಬದ ದಿನಗಳಂದು ರಸ್ತೆಗಳಲ್ಲೇ ಧಾರ್ಮಿಕ ಆಚರಣೆಯ ಪ್ರಾರ್ಥನಾ ವಿಧಿಗಳನ್ನು ನಡೆಸುವುದು - ಮುಂತಾದವು ದಿನೆದಿನೇ ಸಾರ್ವಜನಿಕರ ನೆಮ್ಮದಿಯನ್ನು ಹಾಳು ಮಾಡುವುದನ್ನು ತಪ್ಪಿಸಲು ಸಾಧ್ಯವಿಲ್ಲವೆ?
ನಿತ್ಯದ ಪ್ರಾರ್ಥನೆಗೆ ಕರೆ ನೀಡುವ ಮಸೀದಿಗಳ ಅಝಾ (ಆದಾನ್)ದ ಧ್ವನಿವರ್ಧಕದ ಆರ್ಭಟಗಳಿಗೆ, ನೆರೆಹೊರೆಯವರಿಗೆ ಕಿರಿಕಿರಿ ಮಾಡುವ ಜೋರುದನಿಯಲ್ಲಿ ಸದ್ದು ಮಾಡುವ ಸುಪ್ರಭಾತಗಳಿಗೆ, ಭಜನೆಗಳಿಗೆ, ಪ್ರಾರ್ಥನಾ ಕೂಟಗಳ ಹೆಸರಲ್ಲಿ ಜನ ನೆರೆದ ಸಂದರ್ಭಗಳಲ್ಲಿ ಏರುದನಿಯ ಸಾಮೂಹಿಕ ಹಾಡುಗಳು, ಭಾರಿ ಪ್ರಮಾಣದಲ್ಲಿ ಧ್ವನಿ ಹೊರಡಿಸುವ ವಾದ್ಯಗಳು ಉಂಟುಮಾಡುವ ಶಬ್ದ ಮಾಲಿನ್ಯಕ್ಕೆ, ಅವುಗಳಿಂದ ಉಂಟಾಗುವ ಶಾಂತಿಭಂಗ ಪ್ರಕರಣಗಳಿಗೆ ಕಡಿವಾಣ ಹಾಕುವುದಕ್ಕೆ ಆಗುವುದಿಲ್ಲವೆ? ಕೆಲವು ರಾಜಕೀಯ ಪಕ್ಷಗಳು ಇವುಗಳ ಬಗೆಗೆ ಜಾಣ ಕಿವುಡುತನ ಮತ್ತು ಜಾಣ ಕುರುಡುತನ ತೋರುತ್ತಿರುವುದು ತರವೆ?
ದೇಶದಲ್ಲೇ ಅತ್ಯಂತ ಅಧಿಕ ಜನಸಂಖ್ಯೆಯನ್ನು ಹೊಂದಿರುವ ರಾಜ್ಯದ ಮುಖ್ಯಮಂತ್ರಿಯೊಬ್ಬರು, ಈ ಹಿಂದೆ `ಈದ್ (ಮುಸ್ಲಿಂರ ಹಬ್ಬ)ಗಳ ಸಂದರ್ಭದಲ್ಲಿ ರಸ್ತೆಯಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಲಾಗುವುದಿಲ್ಲ. ಅದರಂತೆಯೇ, ಜನ್ಮಾಷ್ಠಮಿ ಮುಂತಾದವುಗಳನ್ನು ಪೋಲಿಸ್ ಠಾಣೆಗಳಲ್ಲಿ ಆಚರಿಸಬಾರದೆಂದು ಹೇಳುವ ಹಕ್ಕು ನನಗಿಲ್ಲ' ಎಂದು ಆಡಿದ ಮಾತುಗಳು ತಿಪ್ಪೆ ಸಾರಿಸಿದಂತಿತ್ತು. ಸಂವಿಧಾನದ ಆಶಯದಂತೆ ಸೌಹಾರ್ದವನ್ನು ರೂಢಿಸಬೇಕಾದವರೇ, ಪ್ರಾಮಾಣಿಕ ಪ್ರಯತ್ನ ಮಾಡದೇ ಕೈತೊಳೆದುಕೊಳ್ಳುತಿದ್ದಾರೆ ಎಂಬ ಭಾವ ಮೂಡಿಸುವಂತಿತ್ತು.
ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುವ ಇಂಥ, ಶಾಂತಿಗೆ ಭಂಗ ತರುವ, ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವ ವಿದ್ಯಮಾನಗಳಿಗೆ ಇತಿಶ್ರೀ ಹಾಡುವುದೆಂದರೆ, ಬೆಕ್ಕಿಗೆ ಗಂಟೆ ಕಟ್ಟಿದಂತೆ ಎಂಬುದು ಹಲವರ ಅನಿಸಿಕೆ ಇದ್ದಿರಬಹುದು. ಬಹುತ್ವದಲ್ಲಿ ಏಕತೆಯನ್ನು ಅಪ್ಪಿಕೊಂಡಿರುವ ನಮ್ಮ ದೇಶದಲ್ಲಿ ಯಾರಾದರೊಬ್ಬರು ಒಂದು ಹೆಜ್ಜೆ ಮುಂದೆ ಇಡಬೇಕು, ಇಲ್ಲವೆ ಒಂದು ಹೆಜ್ಜೆ ಹಿಂದೆ ಹೆಜ್ಜೆ ಇಡಬೇಕು.
ಅದೇ ಅಧಿಕ ಸಂಖ್ಯಾ ಬಾಹುಳ್ಯದ ಉತ್ತರಪ್ರದೇಶದಲ್ಲಿಯೇ, ಈಗ ಈ ನಿಟ್ಟಿನಲ್ಲಿ (ಅಂದರೆ ರಸ್ತೆಗಿಳಿಯುವುದರ ಬಗ್ಗೆ ಜಿಲ್ಲಾಡಳಿತದ ನಿರ್ದೆಶನದಂತೆ ಸ್ವಯಂ ನಿಯಂತ್ರಣ ಹೇರಿಕೊಳ್ಳುವ) ಆಶಾಕಿರಣದ ಬೆಳ್ಳಿಗೆರೆಯೊಂದು ಕಾಣಿಸಿಕೊಂಡಂತಿದೆ. ಒಂದು ಕಾಲದಲ್ಲಿ ಬೀಗದ ತಯಾರಿಕೆಗೆ ಹೆಸರು ಮಾಡಿದ್ದ ಅಲಿಗಡ ಜಿಲ್ಲೆಯ, ಇಂದಿನ ಜಿಲ್ಲಾ ಮ್ಯಾಜಿಸ್ಟ್ರೇಟ್‍ರು ಕೈಗೊಂಡ ನಿಷ್ಠುರ ನಿರ್ಧಾರ, ಇಂಥ ಒಂದು ಬೆಳವಣಿಗೆಗೆ ಕಾರಣವಾಗಿದೆ.
ಈಚೆಗೆ, ಉತ್ತರಪ್ರದೇಶದಲ್ಲಿ `ನೀವು ರಸ್ತೆಗಿಳಿಯುವುದು ಸರಿ ಎನ್ನುವುದಾದರೆ ನಾವೂ ರಸ್ತೆಗಿಳಿಯುತ್ತೇವೆ' ಎಂಬ ಅನಾರೋಗ್ಯಕರ ದಾಯಾದಿ ಪೈಪೋಟಿ ಆರಂಭವಾಗಿತ್ತು. `ಮುಸ್ಲಿಂರು ನಡುರಸ್ತೆಗಳಲ್ಲಿ ನಮಾಜು ಮಾಡುವ ಕ್ರಮದಿಂದ ಆಗುವ ಕಿರಿಕಿರಿ ಸಹಿಸಿಕೊಳ್ಳುವಿರಾದರೆ, ನಮ್ಮ ಕಿರಿಕಿರಿಯನ್ನೂ ಸಹಿಸಿಕೊಳ್ಳಿ' ಎಂದು ಕೆಲವು ಹಿಂದೂ ಸಂಘಟನೆಗಳು, ಪ್ರತಿ ಮಂಗಳವಾರ ಮತ್ತು ಶನಿವಾರ ಅಲಿಗಡದ ರಸ್ತೆಗಳಲ್ಲಿ ಇಳಿದು ಹನುಮಾನ ಚಾಲಿಸ್ ಭಜನೆ ಹಾಗೂ ಮಹಾ ಆರತಿಗಳನ್ನು ನೆರವೇರಿಸುವ ಹೊಸ ಪರಿಪಾಠವೊಂದನ್ನು ರೂಢಿಗೆ ತಂದವು. ಇದೆಲ್ಲಾ ಮೊದಲು ಆರಂಭವಾದದ್ದು ಹಾಪುರ ಜಿಲ್ಲೆಯಲ್ಲಿ. ನಂತರ ಈ ಆಚರಣೆಗಳು ಸುಮಾರು ಹನ್ನೆರಡು ಜಿಲ್ಲೆಗಳಲ್ಲಿ ಅನುರಣಿಸ ತೊಡಗಿದವು. ಈ ಹಿಂದೆ ಇಂಥದೇ ವಿದ್ಯಮಾನ ಕರ್ನಾಟಕದ ಹಾವೇರಿಯಲ್ಲಿ ನಡೆದಿತ್ತು. ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಹಾಕಿಕೊಂಡು ಬರುವುದಕ್ಕೆ ಪ್ರತಿಯಾಗಿ ಕೆಂಪು, ಕೇಸರಿ ಶಾಲು ಹೊತ್ತುಕೊಂಡು ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲು ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಲಿಗಡದ ಮಾಜಿ ಮೇಯರ್ ಶಕುಂತಲಾ ಭಾರತಿ, ನಗರ ಘಟಕದ ಬಿಜೆಪಿ ಪದಾಧಿಕಾರಿ ಮಾನವ್ ಮಹಾಜನ್ ಮೊದಲಾದವರು, ಹನುಮಾನ್ ಚಾಲೀಸ್ ಮತ್ತು ಮಹಾ ಆರತಿಗಳಲ್ಲಿ ಭಾಗವಹಿಸಿ ಅದಕ್ಕೊಂದು ಮಾನ್ಯತೆ ಕೊಡತೊಡಗಿದರು, ಒಂದು ಹೆಜ್ಜೆ ಮುಂದೆ ಹೋದ ಮಹಾಜನ್, ಈ ಕ್ರಮ ಆರಂಭಿಸಿದವರನ್ನು ಅಭಿನಂದಿಸಿ, `ಈ ನಿಟ್ಟಿನಲ್ಲಿ ಚರ್ಚೆ ಆರಂಭವಾಗಲಿ' ಎಂದು ಹಾರೈಸಿದರು. ಅಷ್ಟೇ ಅಲ್ಲ, ಅವರು, `ಒಂದು ಸಮುದಾಯ ನಮಾಜಿನ ಹೆಸರಲ್ಲಿ ರಸ್ತೆಗಿಳಿದರೆ, ಹನುಮಾನ್ ಚಾಲೀಸ್, ಮಹಾ ಆರತಿಗಳನ್ನು ರಸ್ತೆಗಳಲ್ಲಿ ನೆರವೇರಿಸುವುದರಲ್ಲಿ ತಪ್ಪೇನು?' ಎಂದು ಪ್ರಶ್ನಿಸತೊಡಗಿದಾಗ, ಶಾಂತಿ ಕದಡುವ ಸಂಚಾರ ವ್ಯವಸ್ಥೆ ಹದಗೆಡುವ ಆತಂಕ ಕಾಣಿಸಿಕೊಂಡಿತ್ತು.
ಆಗ ರಂಗಕ್ಕಿಳಿದ ಅಲಿಗಢ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್‍ರು, `ಎಲ್ಲರಿಗೂ ತಮ್ಮ ತಮ್ಮ ಧರ್ಮದ ಆಚರಣೆಗೆ ಸ್ವಾತಂತ್ರ್ಯ ಉಂಟು. ಆದರೆ, ಅದು ಸಾರ್ವಜನಿಕ ಬೀದಿಗಳನ್ನು ಆಕ್ರಮಿಸದೇ ಅವರವರ ಪೂಜಾ ಸ್ಥಳಗಳಿಗೆ ಸೀಮಿತವಾಗಿರಬೇಕು. ಮನಸ್ಸಿಗೆ ಬಂದಂತೆ ರಸ್ತೆಗಳನ್ನು ಬಳಸುವಂತಿಲ್ಲ' ಎಂದು ನಿಷೇಧದ ಫರ್ಮಾನು ಹೊರಡಿಸಿದ್ದರು. `ಬಹಳಷ್ಟು ಜನರು ಸೇರುವ ಹಬ್ಬಗಳ ಸಂದರ್ಭಗಳಲ್ಲಿ ವಿನಾಯಿತಿ ಕೊಡಬಹುದು. ಆದರೆ ಅದಕ್ಕಾಗಿ ಮೊದಲೇ ಅನುಮತಿ ಪಡೆಯಬೇಕು' ಎಂಬ ಷರತ್ತನ್ನೂ ಅವರು ವಿಧಿಸಿದ್ದರು.
ಜಿಲ್ಲಾ ಮ್ಯಾಜಿಸ್ಟ್ರೇಟ್‍ರ ಆದೇಶದ ಹಿನ್ನೆಲೆಯಲ್ಲಿ, ರಸ್ತೆ ಬಳಕೆ `ನಮಗೂ ಬೇಡ ನಿಮಗೂ ಬೇಡ' ತತ್ವ ಮುನ್ನೆಲೆಗೆ ಬಂದಿದೆ. ಈ ನಿಷೇಧದ ಕಾರಣದಿಂದ ಅಲಿಗಡದ ಮುಸ್ಲಿಂ ಧರ್ಮಗುರು (ಮುಫ್ತಿ) ಮೊಹಮ್ಮದ ಖಾಲೀದ್ ಹಮೀದ್ ಅವರು, `ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮುಸಿಂ ಮತಬಾಂಧವರು ರಸ್ತೆಗಳಲ್ಲಲ್ಲ, ಮನೆ, ಕಟ್ಟಡಗಳ ಮೇಲ್ಛಾವಣಿಗಳಲ್ಲಿ ನಮಾಜ್ ಸಲ್ಲಿಸಲು ಕ್ರಮ ಜರುಗಿಸಬೇಕು' ಎಂದು ಅಲಿಗಡ ಶಹರಿನ ಮಸೀದಿಗಳ ಆಡಳಿತಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಆಗ, `ಅವರು ರಸ್ತೆಗಿಳಿಯದಿದ್ದರೆ, ನಾವೂ ರಸ್ತೆಗಿಳಿಯವುದಿಲ್ಲ' ಎಂದು ಭಜರಂಗದಳ ಜಿಲ್ಲಾಡಳಿತಕ್ಕೆ ಭರವಸೆ ನೀಡಿತ್ತು.
ವಿವಿಧ ಸಮುದಾಯಗಳು, ಒಣ ಪ್ರತಿಷ್ಠೆಗಾಗಿ ಒಬ್ಬರನ್ನೊಬ್ಬರು ಎದುರಾಳಿಗಳನ್ನಾಗಿ ಮಾಡಿಕೊಂಡು ದಾಯಾದಿ ಕಲಹ ಮಾಡುವುದನ್ನು ಬಿಟ್ಟು, ಕೋಮು ಸಂಘರ್ಷಕ್ಕೆ ಕಾರಣವಾಗುವ ತಮ್ಮ ನಡವಳಿಕೆಗಳನ್ನು ಬದಿಗೆ ಸರಿಸಿ, ಸ್ವಯಂ ನಿಯಂತ್ರಣ ಹೇರಿಕೊಂಡು ತಮ್ಮ ತಮ್ಮ ಪೂಜಾ ಮಂದಿರಗಳಿಗೆ ತಮ್ಮ ತಮ್ಮ ಧಾರ್ಮಿಕ ಆಚರಣೆಗಳನ್ನು ಸೀಮಿತಗೊಳಿಸಿಕೊಂಡರೆ, ಕೋಮು ಸೌಹಾರ್ದತೆ ಕದಡುವ, ಅವಕಾಶವಾದಿ ಸಮಾಜವಿರೋಧಿ ಶಕ್ತಿಗಳನ್ನು ಮಟ್ಟಹಾಕುವುದು ಸುಲಭವಾಗುತ್ತದೆ.
***************
No comments:
Post a Comment