Friday, 6 September 2019

ದನಿ ರೂಪಕ

ಪೂರ್ವಗ್ರಹ ಪೀಡಿತರಾದವರಿಗೆ ಸತ್ಯದ ದರ್ಶನ ಎಂದಿಗೂ ಸಾಧ್ಯವಿಲ್ಲ 

ಅವರ ಮನಸ್ಸು ಏಕಮುಖವಾಗಿ ಸಂಚರಿಸುತ್ತಲೇ ಇರುತ್ತದೆ. ಅವರಿಗೆ ಸಿಗುವುದು ಅರ್ಧಸತ್ಯ ಮಾತ್ರ ಎಂಬುದನ್ನು ನಿರೂಪಿಸಲು ಓಶೋ ತನ್ನ ಶಿಷ್ಯರಿಗೆ ಮುಲ್ಲಾ ನಸ್ರುದ್ದೀನನ ಪ್ರಸಂಗವನ್ನು ವಿವರಿಸಿದ್ದಾರೆ. 

ಒಮ್ಮೆ ಗೌರವಾನ್ವಿತ ನ್ಯಾಯಾಧೀಶನಾದ ಮುಲ್ಲಾ ನಸ್ರುದ್ದೀನ್ ತನ್ನ ಮೊದಲ ಮೊಕದ್ದಮೆಯ ತೀರ್ಪು ನೀಡಲು ಸಜ್ಜಾಗಿ ನ್ಯಾಯಪೀಠವನ್ನು ಅಲಂಕರಿಸಿ ಕೂತಿದ್ದ. ಒಂದು ಕಡೆ ಫಿರ್ಯಾದುಗಳ ವಾದವನ್ನು ಆಸಕ್ತಿಯಿಂದ ತುಂಬಾ ಏಕಾಗ್ರತೆಯಿಂದ ಆಲಿಸಿದ ನಸ್ರುದ್ದೀನ್, ಕೋರ್ಟಿನಲ್ಲಿ ನೆರದಿದ್ದವರನ್ನು ಉದ್ದೇಶಿಸಿ ಇಂತೆಂದನು: "ಇನ್ನು ಐದು ನಿಮಿಷಗಳಲ್ಲಿ ನಾನು ಈ ಕೇಸಿಗೆ ಸಮರ್ಪಕವಾದ ತೀರ್ಪನ್ನು ನೀಡುತ್ತೇನೆ" 

ಆದರೆ, ಮುಲ್ಲಾನ ಈ ಮಾತುಗಳನ್ನು ಕೇಳಿ ಕೋರ್ಟ್ ಆವರಣದಲ್ಲಿ ಗುಸುಗುಸು ಶುರುವಾಯಿತು. ಕೊಂಚ ಧೈರ್ಯ ಮಾಡಿದ ಕ್ಲರ್ಕ್ ಒಬ್ಬ ಮುಲ್ಲಾನಿಗೆ ಕಿವಿಯಲ್ಲಿ ಈ ರೀತಿ ಪಿಸುಗುಟ್ಟಿದ "ಇದೇನು ಮಾಡುತ್ತಿದ್ದೀರಿ ಮಹಾಸ್ವಾಮಿ? ಇನ್ನೊಂದು ಪಕ್ಷದವರ ವಾದವನ್ನು ಕೇಳದೆ ತೀರ್ಪು ನೀಡಲು ಹೇಗೆ ಸಾಧ್ಯ?" 

ಅದಕ್ಕೆ ಉತ್ತರಿಸಿದ ಮುಲ್ಲಾ "ಈಗ ನನ್ನನ್ನು ಗೊಂದಲಕ್ಕೆ ದೂಡಬೇಡ. ನನ್ನ ಮನಸ್ಸು ತೀರ್ಪನ್ನು ಯೋಚಿಸಿ ಆಗಿದೆ. ಘೋಷಿಸುವುದೊಂದೇ ಬಾಕಿ. ನಾನು ಇನ್ನೊಂದು ಪಾರ್ಟಿಯ ವಾದ ಕೇಳಿದರೆ, ಮತ್ತೆ ಮನಸ್ಸಿನಲ್ಲಿ ಗೊಂದಲವುಂಟಾಗುತ್ತದೆ!" ಗೊಂದಲದಲ್ಲಿ ಇರುವ ಮನಸ್ಸು ಸರಿಯಾದ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ಎಂದುಬಿಟ್ಟನು. 


ಶಾಂತಿಯೋಧ 

ಡಾನ್ ಮಿಲ್ ಮನ್ ಒಬ್ಬ ಕಾಲೇಜು ವಿದ್ಯಾರ್ಥಿ. ಅವನು ಸ್ಥಳೀಯವಾಗಿ ಪ್ರಸಿದ್ಧನಾಗಿರುವ ಜಿಮ್ನಾಸ್ಟ್ ಕೂಡ ಆಗಿರುತ್ತಾನೆ. ಅವನಿಗೆ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂಬ ಕನಸಿರುತ್ತದೆ. ಆದರೆ ಅವನನ್ನು ಅವಿಶ್ರಾಂತ ಸ್ಥಿತಿ (restlessness)ಕಾಡುತ್ತಿರುತ್ತದೆ. ಅದರಿಂದ ಹೊರಬರಲು ಅವನು ಸೂರ್ಯೋದಯಕ್ಕೆ ಮೊದಲು ಓಡುವ ಅಭ್ಯಾಸ ಇಟ್ಟುಕೊಂಡಿರುತ್ತಾನೆ. ಹಾಗೆ ಓಡುತ್ತಿರುವಾಗ ಒಂದು ದಿನ ಒಬ್ಬ ವೃದ್ಧ (ಸಾಕ್ರಟೀಸ್) ಅವನಿಗೆ ಎದುರಾಗುತ್ತಾನೆ. ಡಾನನ ಸಮಸ್ಯೆಯ ಬಗ್ಗೆ ಸ್ವತಃ ಡಾನನಿಗೆ ತಿಳಿದಿರುವುದಕ್ಕಿಂತಲೂ ಹೆಚ್ಚಾಗಿ ಅವನಿಗೆ ತಿಳಿದಿರುವಂತೆ ತೋರುತ್ತದೆ! ಸಾಕ್ರಟೀಸ್ ಒಬ್ಬ ಮಾರ್ಗದರ್ಶಿಯಾಗಿ,ಡಾನನಿಗೆ ಅನೇಕ ಕೆಲಸ (task)ಗಳನ್ನು ಕೊಟ್ಟು,ತಿಳಿಹೇಳುತ್ತಾ ಅವನಲ್ಲಿದ್ದ ದೌರ್ಬಲ್ಯಗಳನ್ನು ನಿವಾರಿಸಲು ಪ್ರಯತ್ನಿಸುತ್ತಾನೆ. . . ಅವನಿಗೆ ಪ್ರತಿ ಕ್ಷಣದ ಮಹತ್ವವನ್ನು ಅರಿಯುವುದನ್ನು ಕಲಿಸುತ್ತಾನೆ. ಗುರಿಗಿಂತಲೂ ಕ್ರಮಿಸುವ ಮಾರ್ಗ ಪ್ರಮುಖವಾದುದು ಎನ್ನುವ ಮಹತ್ವವನ್ನು ಡಾನ್ ಅನ್ನು ಒಂದು ಬೆಟ್ಟದ ಮೇಲಕ್ಕೆ ಕರೆದುಕೊಂಡು ಹೋಗುತ್ತಾ ಮನವರಿಕೆ ಮಾಡುತ್ತಾನೆ. . . . ಈ ನಡುವೆ ಒಂದು ಅಪಘಾತದಲ್ಲಿ ಡಾನನ ಬಲಗಾಲಿನ ಮೂಳೆ ಮುರಿದು ಅವನು ಜಿಮ್ನಾಸ್ಟಿಕ್ ಅಭ್ಯಾಸದಿಂದ ಹೊರಬರಬೇಕಾದ ಸನ್ನಿವೇಶ ಎದುರಾಗುತ್ತದೆ. ಆದರೂ ಸಾಕ್ರಟೀಸನ ಮಾರ್ಗದರ್ಶನದಲ್ಲಿ ಸತತ ಪ್ರಯತ್ನದಿಂದ ಅರ್ಹತೆಯನ್ನು ಪಡೆದು ಒಲಂಪಿಕ್ ಟ್ರಯಲ್‍ನಲ್ಲಿ ಆಯ್ಕೆಯಾಗುತ್ತಾನೆ. ಅಂತಿಮ ಸ್ಪರ್ಧೆಯ ಮೊದಲು ಸಾಕ್ರಟೀಸ್ ಡಾನನಿಗೆ ಎಲ್ಲಿಯೂ ಸಿಗುವುದಿಲ್ಲ. ಸ್ಪರ್ಧೆಯ ಕಡೆಯ ಸುತ್ತಿನಲ್ಲಿ ಸಾಕ್ರಟೀಸ್ ಅವನ ಮನಸ್ಸಿನಲ್ಲಿ ಮೂರು ಪ್ರಶ್ನೆಗಳನ್ನು ಕೇಳುತ್ತಾನೆ: 

"ಎಲ್ಲಿದ್ದೀಯಾ ಡಾನ್?" 

"ಈ ಜಾಗದಲ್ಲೇ" 

"ಇದಾವ ಸಮಯ?" 

"ಈ ಸಮಯ" 

"ನೀನಾರು?" 

"ನಾನು ಈ ಕ್ಷಣ" 

ನಂತರ ಡಾನ್ ಜಿಂಕೆಯಂತೆ ನೆಗೆದು ಸತತ ಮೂರು ಹೊರಳುಗಳನ್ನು ಬಲು ಸರಾಗವಾಗಿ ನಿರ್ವಹಿಸಿ ತೀರ್ಪುಗಾರರಿಗೇ ಅಚ್ಚರಿ ಮೂಡಿಸುತ್ತಾನೆ! ಪ್ರೇಕ್ಷಕರೆಲ್ಲ ಹುಚ್ಚೆದ್ದು ಕುಣಿಯುತ್ತಾರೆ. ಡಾನ್ ಇರುವ ತಂಡವು ಮೊದಲ ರಾಷ್ಟ್ರೀಯ ಪದಕವನ್ನು ಪಡೆಯುತ್ತದೆ. 

ಈ ರೂಪಕದಲ್ಲಿ ಬರುವ ಡಾನ್ ಮತ್ತು ಸಾಕ್ರಟೀಸ್ ನಡುವಿನ ಸಂಭಾಷಣೆ ಬಹಳ ಸ್ವಾರಸ್ಯಕರವಾಗಿದೆ. ಎಲ್ಲೆಲ್ಲೋ ಅಲೆಯುವ ನಮ್ಮ ಮನಸ್ಸನ್ನು ಇಲ್ಲಿಗೆ, ಈಗ, ಈ ಕ್ಷಣಕ್ಕೆ ಹಿಡಿದು ನಿಲ್ಲಿಸಿದರೆ ಯಾವುದೇ ಸಾಧನೆಯೂ ಕಷ್ಟಕರವಲ್ಲ. ಅದಕ್ಕಾಗಿ ಒಬ್ಬ ಮಾರ್ಗದರ್ಶಕನ ಅವಶ್ಯಕತೆಯಿದೆ. ಅದು ಸದಾ ನಮ್ಮೊಂದಿಗೇ ಇರುವ ನಮ್ಮ ಅಂತರಂಗವೇ ಆದರೆ ಎಷ್ಟು ಚೆನ್ನ! 


· ಅನು 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...