Friday, 6 September 2019

ಬೈಬಲ್ಲಿನ ಸ್ತ್ರೀಯರು

ಹವ್ವ 
ದೀಪ್ತಿ ಫ್ರಾನ್ಸಿಸ್ಕಾ
ವರು ತಮ್ಮದೇ ರೂಪದಲ್ಲಿ ಮಾನವನನ್ನು ಸೃಷ್ಟಿಸುತ್ತಾರೆ. ದೇವರ ಸೃಷ್ಟಿಕಾರ್ಯದಲ್ಲಿ ಅವನು ಒಡೆಯನಾಗುತ್ತಾನೆ, ಅವಳು ಒಡತಿಯಾಗುತ್ತಾಳೆ. ಅವಳೂ ಸಹ ದೇವರ ಪ್ರತಿರೂಪವಾಗಿದ್ದು ಪುರುಷನೊಂದಿಗೆ ಪ್ರಕೃತಿಗೆ ದೇವರ ಪ್ರೀತಿಯ ಹಾಗೂ ಶಕ್ತಿಯ ಸಾಕ್ಷಿಯಾಗುತ್ತಾಳೆ. ಅವಳನ್ನು ದೇವರು 'ಏಝರ್' (ಎಂದರೆ ಸಹಾಯ) ಎನ್ನುತ್ತಾರೆ. ಆದಾಮ ಸಂತಾನೋತ್ಪತ್ತಿಯ ಪಾತ್ರವನ್ನು ಪರಿಗಣಿಸಿ ಅವಳನ್ನು ಹವ್ವ (ಎಂದರೆ ಜೀವ) ಎಂದು ಹೆಸರಿಸುತ್ತಾನೆ. 

ಸೃಷ್ಟಿಗೆ ಒಡತಿಯಾದ ಇವಳು ಆದಾಮನ ಒಡನಾಡಿಯಾಗಿ, ಸಂಗಾತಿಯಾಗಿ, ಸಹಾಯಕಳಾಗಿ, ಅವನನ್ನು ಪೂರ್ಣಗೊಳಿಸುವ ಮತ್ತು ಸೃಷ್ಟಿಯ ಜವಾಬ್ದಾರಿಯುತ ಅವನೊಂದಿಗೆ ಸಮಾನವಾಗಿ ಹಂಚಿಕೊಳ್ಳುವವಳಾದಳು. ಹವ್ವಳ ಸೃಷ್ಟಿಯೊಂದಿಗೆ ದೇವರು ಸಂಬಂಧಗಳನ್ನು, ಸ್ನೇಹವನ್ನು, ಒಡನಾಟ ಮತ್ತು ಮದುವೆಯಂತಹ ಮನೋಭಾವಗಳನ್ನು ಜಗತ್ತಿಗೆ ಪರಿಚಯಿಸಿದರು.

ಇಲ್ಲಿ ನಾವು ಗಮನಿಸಬೇಕಾದದ್ದು, ಹವ್ವಳ ಸೃಷ್ಟಿಯಾಗುವವರೆಗೂ ಆದಾಮನಿಗೆ ತಾನು ಪುರುಷನೆಂಬ ಮನವರಿಕೆ ಇರುವುದಿಲ್ಲ. ಹವ್ವಳನ್ನು ಕಂಡ ನಂತರವೇ ತನಗೂ ಆಕೆಗೂ ಇದ್ದ ಏಕತೆಯನ್ನು, ವ್ಯತ್ಯಾಸವನ್ನು ಗುರುತಿಸುತ್ತಾನೆ. 

ಹವ್ವಳಿಗೆ ಇದ್ದ ಬುದ್ಧಿ - ತಿಳುವಳಿಕೆ ದೇವರಿಂದ ಹಾಗೂ ಆದಾಮನಿಂದಲೇ ಬಂದದ್ದು. ಅವಳ ಹೃದಯ ಪರಿಶುದ್ಧವಾಗಿದ್ದು ಅವರಿಬ್ಬರೂ ನಾಚಿಕೆಪಡದೆ ಬೆತ್ತಲೆ ಓಡಾಡುತ್ತಿದ್ದರು. ಸೃಷ್ಟಿಯಾದೊಡನೆ ಮಾತನಾಡಿಕೊಳ್ಳಲು, ಭಾವನೆಗಳನ್ನಂಚಿಕೊಳ್ಳಲು ಬಾಷಾ ನೈಪುಣ್ಯತೆ ಅವರಿಗಿತ್ತು. ಹವ್ವಳಿಗೆ ಕೇಡಿನ ಅರಿವೇ ಇರಲಿಲ್ಲ. ಸೈತಾನನ ಕುಯುಕ್ತಿಗಳ ಶಂಕೆಯೂ ಅವಳಿಗಿರಲಿಲ್ಲ. ದೇವರು ಅವರಿಗೆ ಎಲ್ಲಾ ಜೀವಿಗಳನ್ನಾಳುವ ಅಧಿಕಾರವನ್ನು ಕೊಟ್ಟಿದ್ದರು. ಆದರೂ ಹವ್ವಳು ಸೈತಾನನಿಂದ ಶೋಧಿತಳಾಗಿ ಮೊದಲ ಪಾಪ ಗೈದಳು. ಆದಾಮನೂ ಅದರಲ್ಲಿ ಭಾಗಿಯಾದನು. ಆದರೆ ಇನ್ನೊಂದು ದೃಷ್ಟಿಯಿಂದ ನೋಡಿದರೆ ಹವ್ವಳನ್ನಾಗಲಿ ಆದಾಮನನ್ನಾಗಲಿ ದೂಷಿಸುವುದು ಸರಿಯಲ್ಲ. ಪಾಪ ಮಾಡುವುದಕ್ಕೂ ಪುಣ್ಯ ಮಾಡುವುದಕ್ಕೂ ಒಳಿತು ಕೆಡುಕುಗಳ ಅರಿವು ಇರಬೇಕು. ಅವರು ಕೆಡುಕನ್ನು ಮಾಡುವುದರಿಂದಲೇ ಅವರಿಗೆ ಒಳಿತು ಕೆಡುಕುಗಳ ಅರಿವಾಯಿತು. 

ಏಡನ್ ವನದಲ್ಲಿ ಅವರು ಹಣ್ಣನ್ನು ತಿಂದು ಅವರಿಗೆ ಪಾಪದ ಅರಿವು ಉಂಟಾದಾಗ ಅವರಿಬ್ಬರೂ ನಗ್ನತೆಯನ್ನು ಮುಚ್ಚಿಕೊಂಡರು. ಹೀಗೆ ಮಾನ ಮುಚ್ಚಿಕೊಳ್ಳುವುದರಿಂದ ಸಂಸ್ಕೃತಿಗೆ ದಾರಿಯಾಯಿತು. 


ಹವ್ವಳು ಮೊದಲ ಪಾಪವೆಸಗಿ, ದೇವರು ಅವಳಿಗೆ ಮಕ್ಕಳನ್ನು ಹೆರುವ ಶಿಕ್ಷೆ ಕೊಟ್ಟಿದ್ದರಿಂದಲೇ ಸಂತಾನೋತ್ಪತ್ತಿ ಸಾಧ್ಯವಾಯಿತು. ಸ್ತ್ರೀಯರ ಸಂತಾನಾಭಿವೃದ್ದಿ ಶಕ್ತಿ ನಿಜಕ್ಕೂ ಒಂದು ಆಶೀರ್ವಾದವೇ ಎಂದು ಹೇಳಬೇಕು. ಅವಳು ಆದಾಮನ ಸಂಗಾತಿಯಾಗಿ ಅವನ್, ಕಾಯಿನ್, ಅಝರ, ಆಬೇಲ್, ಸೆತ್ ಮತ್ತು ಅಕ್ಲಿಮಾ ಎಂಬ ಐದು ಮಕ್ಕಳಿಗೆ ಜನ್ಮವಿತ್ತಳು. ಹೀಗೆ ಹವ್ವಳು ಸೃಷ್ಟಿಯ ಮೊದಲ ಮಹಿಳೆ, ಮೊದಲ ಗೆಳತಿ, ಮೊದಲ ಹೆಂಡತಿ, ಮೊದಲ ತಾಯಿಯಾದಳು. 



**************** 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...