ಎಫ್. ಎಂ. ನಂದಗಾವ್
ಪೀಠಿಕೆ
ನಮ್ಮ ಖಗೋಳ ಶಾಸ್ತ್ರ, ಭೂಗೋಳ ಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮೊದಲಾದ ವಿಜ್ಞಾನಗಳ, ಸೌರವ್ಯೂಹದ, ಪೃಥ್ವಿಯ, ಜೀವಜಗತ್ತಿನ ವೈಜ್ಞಾನಿಕ ತಿಳಿವಳಿಕೆಯು ಒಂದು ಬಗೆಯದಾದರೆ, ಆಯಾದೇಶ, ಜನಸಮುದಾಯದ ಪುರಾಣ ಗ್ರಂಥಗಳು ಪ್ರತಿಪಾದಿಸುವ ಜಗತ್ತಿನ ಉಗಮದ ರೀತಿಗಳು ಮತ್ತೊಂದು ಬಗೆಯಲ್ಲಿವೆ.
ನಾವು ಕಾಣುವ ಆಕಾಶದಾಚೆಯ ಅಂತರಿಕ್ಷದಲ್ಲಿ ಅಗಣಿತ ತಾರೆಗಳಿವೆ. ಅಸಂಖ್ಯಾತ ನಕ್ಷತ್ರ(ತಾರೆ)ಗಳು ಬಹು ಒತ್ತಾಗಿರುವುದರಿಂದ ಆಕಾಶದಲ್ಲಿ ಹಾಲು ಚೆಲ್ಲಿದಂತೆ ಸುತ್ತುವರಿದು ಕಾಣುವ ತೇಜಃಪುಂಜಗಳನ್ನು ಕ್ಷೀರಪಥ ಅಥವಾ ಆಕಾಶಗಂಗೆ ಎಂದು ಕರೆಯುತ್ತಾರೆ.
ನಮ್ಮ ಸೂರ್ಯನೂ ಒಂದು ನಕ್ಷತ್ರವೇ. ಆತನೂ ಒಂದು ಕ್ಷೀರಪಥದಲ್ಲಿರುವ ಒಂದು ನಕ್ಷತ್ರ. ನಮ್ಮ ಸೂರ್ಯನ ಬೆಳಕು ಭೂಮಿಗೆ ತಲುಪಲು ಎಂಟು ನಿಮಿಷಗಳು ಬೇಕು. ಅದೇ ನಮಗೆ ಹತ್ತಿರದ ನಕ್ಷತ್ರದ ಬೆಳಕು. ನಮ್ಮ ಬರಿಗಣ್ಣಿಗೆ ಕಾಣದ ಅದೆಷ್ಟೋ ನಕ್ಷತ್ರಗಳೂ ಇವೆ. ಭೂಮಿಯ ಮೇಲಿನ ಜೀವಜಗತ್ತಿಗೆ ಪೂರಕವಾಗಿರುವ ಸೂರ್ಯನನ್ನು ಸ್ವಯಂ ಬೆಳಕನ್ನು ಹೊಮ್ಮಿಸುವ ನಿಗಿ ನಿಗಿ ಉರಿಯುವ ಅನಿಲಗಳ ಅಗ್ನಿಗೋಲ ಎಂದು ಖಗೋಳ ವಿಜ್ಞಾನ ಹೇಳುತ್ತದೆ.
ಸಾವಿರಾರು ಮಿಲಿಯನ್ ವರ್ಷಗಳ ಹಿಂದೆ ಸೂರ್ಯನಿಂದ ಹೊರಚಿಮ್ಮಿದ ವಿವಿಧಗಾತ್ರದ ಅಗ್ನಿಗೋಲಗಳು ಕ್ರಮೇಣ ನಮ್ಮ ಸೌರವ್ಯೂಹದ ಗ್ರಹಗಳಾದವೆಂದು ಅಂದಾಜಿಸಲಾಗುತ್ತದೆ. ಆರು ಸಾವಿರ ವರ್ಷಗಳ ಹಿಂದೆ ಸೂರ್ಯನಿಂದ ಬೇರ್ಪಟ್ಟ ಭೂಗ್ರಹ-ನಮ್ಮ ಭೂಮಿ, ನಾಲ್ಕುನೂರು ಮಿಲಿಯನ್ ವರ್ಷಗಳ ಹಿಂದೆಗಟ್ಟಿ ಆಕಾರ ತಾಳಿತು. ಕ್ರಮೇಣವಾಗಿ ಗಿರಿಪರ್ವತಗಳ, ಬಯಲಿನ ನೆಲ, ಆಳ ಸಾಗರಗಳು ಅಸ್ತಿತ್ವಕ್ಕೆ ಬಂದವು. ಗೋಲಾಕಾರದ ಭೂಗ್ರಹದ ಸುತ್ತ ವಾಯುಗೋಳ ರಚನೆಯಾಯಿತು.
ನಾಲ್ಕು ಸಹಸ್ರ ಮಿಲಿಯನ್ ವರ್ಷಗಳವರೆಗೆ ಭೂಮಿಯಲ್ಲಿ ಯಾವುದೇ ಬಗೆಯ ಜೀವಿಗಳ ಉಗಮವಾಗಿರಲಿಲ್ಲ. ಸೂರ್ಯನನ್ನು ಪರಿ ಭ್ರಮಿಸುತ್ತಿರುವ ಭೂಮಿಯಲ್ಲಿ ಋತುಮಾನಗಳು ಉಂಟಾದವು. ಸೂರ್ಯನ ಬೆಳಕು, ಬಿಸಿ ಮತ್ತು ಶಕ್ತಿಯಿಂದ ಜೀವಜಗತ್ತು ಅಸ್ತಿತ್ವಕ್ಕೆ ಬಂದಿತು. ಮೊದಲು ಅಮೀಬಾ ಗಾತ್ರದ ಜೀವಿಗಳು ಉಂಟಾದವು. ನಿಧಾನವಾಗಿ ಬಗೆಬಗೆಯ ಸಸ್ಯ ಸಂಕುಲಗಳು, ಪ್ರಾಣಿ ಪಕ್ಷಿಗಳು ಅಸ್ತಿತ್ವಕ್ಕೆ ಬಂದವು ಎಂದು ನಮ್ಮ ವೈಜ್ಞಾನಿಕ ತಿಳಿವಳಿಕೆ ತಿಳಿಸುತ್ತದೆ. ಮಂಗನಿಂದ ಮಾನವ ಬಂದ ಎಂದೂ ವಿಜ್ಞಾನ ಪ್ರತಿಪಾದಿಸುತ್ತದೆ.
ಆದರೆ, ಜಗತ್ತಿನ ತುಂಬೆಲ್ಲ ಹರಡಿರುವ ಮಾನವರಲ್ಲಿ, ಅವರವರ ಸಮುದಾಯಗಳು ಬೆಳೆದು ಬಂದ ಪರಿಸರ ಮತ್ತು ಅವುಗಳ ಅನುಭವಜನ್ಯ ನಿಸರ್ಗದ ಅರಿವಿನ ಆಧಾರದಲ್ಲಿ ಭೂಮಿಯ ಹುಟ್ಟಿನ ಬಗೆಗೆ ಆಯಾ ಸಮುದಾಯಗಳು ತಮ್ಮದೇ ಆದ ಬಗೆಬಗೆಯ ವಿವರಣೆ ನೀಡುತ್ತಾ ಬಂದಿವೆ. ಆ ವಿವರಣಾತ್ಮಕ ಕತೆಗಳು, ನಂತರ ಆಯಾ ಸಮುದಾಯದ ಸಂಸ್ಕೃತಿಯ ಪ್ರತೀಕಗಳಾದವು, ಸಂಪ್ರದಾಯಗಳಾದವು, ಅವು, ಅವರವರ `ತಮ್ಮತನವನ್ನು ಗಟ್ಟಿಗೊಳಿಸುವ' ಪುರಾಣ ಕಥೆಗಳಾದವು.
ಜಗದ ಹುಟ್ಟಿನ-ಉಗಮದ ಪುರಾಣ ಕತೆಗಳು ಅಪಾರ ಸಂಖ್ಯೆಯಲ್ಲಿ ದೊರೆಯುತ್ತವೆ. ನಮ್ಮ ಭೂಗೋಳದ ಭೂ ಪ್ರದೇಶಗಳ ತುಂಬೆಲ್ಲ ಹರಡಿರುವ ಸಹಸ್ರಾರು ಸಮುದಾಯಗಳು, ತಮ್ಮದೇ ಆದ ವಿವಿಧ ಬಗೆಯಲ್ಲಿ ಜಗತ್ತಿನ ಸೃಷ್ಟಿಯ ಬಗೆಗೆ ಕತೆಗಳನ್ನು ಕಟ್ಟಿಕೊಂಡಿವೆ.
ಈ ಸೃಷ್ಟಿಯ ಕತೆಗಳು ಆಯಾ ಸಮುದಾಯಗಳ ಸಂಸ್ಖೃತಿ, ಸಂಪ್ರದಾಯ ಮತ್ತು ಅವು ಪಾಲಿಸುವ ಧರ್ಮದ ಆಶಯಗಳಂತೆ ರೂಪತಳೆದಿವೆ. ಸದ್ಯದ ಜಗತ್ತು ಹಿಂದೆ ಹೇಗೆ ರೂಪತಾಳಿತು ಎಂಬುದನ್ನು ವಿವರಿಸುವ ಈ ಕತೆಗಳು ಎಲ್ಲಾ ಸಮುದಾಯಗಳಲ್ಲಿ ಆಯಾ ಸಮುದಾಯಗಳ ಪೌರಾಣಿಕ ಕತೆಗಳೇ ಆಗಿವೆ.
ಅವು ಮೊದಲು ಮೌಖಿಕವಾಗಿ ರೂಪ ತಾಳಿ ನಂತರದ ಕಾಲಘಟ್ಟಗಳಲ್ಲಿ ಲಿಖಿತರೂಪದಲ್ಲಿ ಸ್ಥಾಪಿತಗೊಂಡಿವೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅವನ್ನು ಕೇವಲ ನಿಜವಾಗಿಯೂ ನಡೆದ ಘಟನೆಗಳ ಸುತ್ತ ಹೆಣೆದ ಐತಿಹಾಸಿಕ ದಾಖಲೆಗಳೆಂದು ಪರಿಗಣಿಸುವಂತಿಲ್ಲ. ಆದರೆ ಕೆಲವೊಮ್ಮೆ ಅವನ್ನು ಮಹಾನ್ ಸಾಹಿತ್ಯಕೃತಿಗಳೆಂದು ಗುರುತಿಸಬಹುದು. ಎಷ್ಟೇ ಆದರೂ, ಅವು ಆಯಾ ಸಮುದಾಯಗಳು ತಲಾತಲಾಂತರದಿಂದ ನಂಬಿಕೊಂಡು ಬಂದ ಸಂಗತಿಗಳು ಎಂಬುದನ್ನು ಅಲ್ಲಗಳೆಯಲಾಗದು.
ಸಾಮಾನ್ಯ ಮೂಲೋದ್ದೇಶದ ಆಧಾರದಲ್ಲಿ ಜಗದ ಸೃಷ್ಟಿಯ ಕತೆಗಳನ್ನು ಹಲವು ಬಗೆಯಲ್ಲಿ ವಿಂಗಡಿಸಲಾಗಿದೆ. ಆದಿಯಲ್ಲಿ ಇದ್ದ ಗೊಂದಲದ ಸ್ಥಿತಿಯಿಂದ ಸೃಷ್ಟಿಯ ಉಗಮ ಆರಂಭವಾಗುತ್ತದೆ. ಸೃಷ್ಟಿಕರ್ತ ಜಗತ್ತನ್ನು ಸೃಷ್ಟಿಸುತ್ತಾನೆ. ಆದಿ ಸಮುದ್ರದಲ್ಲಿ ದೇವಪುರುಷ, ಹಕ್ಕಿ ಇತ್ಯಾದಿಗಳು ಮುಳುಗು ಹಾಕುವುದರಿಂದ ಜಗತ್ತು ಸೃಷ್ಟಿಯಾಗುತ್ತದೆ. ಶೂನ್ಯಾವಸ್ಥೆಯಲ್ಲಿ ಜಗತ್ತು ಅಸ್ತಿತ್ವ ಪಡೆಯುತ್ತದೆ. ಆದಿ ತಂದೆತಾಯಿಗಳಿಂದ ಜಗತ್ತಿನ ಸೃಷ್ಟಿಯಾಗುತ್ತದೆ. ದೈವಿಸಂಭೂತ ಅವಳಿಜವಳಿಗಳಿಂದ ಸೃಷ್ಟಿಯು ರೂಪಗೊಳ್ಳುತ್ತದೆ. ಮೊಟ್ಟೆಯಿಂದ ವಿಶ್ವ ರೂಪತಾಳುತ್ತದೆ. ಆದಿಯಲ್ಲಿ ಇದ್ದ ಜೀವದ ಅಂಗಾಂಗಳು ಹರಿದು ಹಂಚುವುದರಿಂದ ಜಗತ್ತು ಹುಟ್ಟುತ್ತದೆ. ಅನಂತ ಜಲರಾಶಿಯಿಂದ ಅಥವಾ ಆಕಾಶದಿಂದ ಜಗತ್ತು ಜನಿಸುತ್ತದೆ, ಈ ಮಾಲಿಕೆಯಲ್ಲಿನ ಕತೆಗಳು, ಸೃಷ್ಟಿಯ ಹುಟ್ಟಿನ ಕೆಲವು ಪ್ರಾತಿನಿಧಿಕ ಕತೆಗಳು.
ಜಗದ ಸೃಷ್ಟಿಯ ಪೌರಾಣಿಕ ಕತೆಗಳು
1. ಭೂಮಿದೇವರು, ಆಕಾಶ ದೇವತೆ
ಈ ಜಗತ್ತಿನ ಆರಂಭದಲ್ಲಿ ಏನೂ ಇರಲಿಲ. ಎಲ್ಲೆಲ್ಲೂ ಶೂನ್ಯ. ಕತ್ತಲೋಕತ್ತಲು ತುಂಬಿತ್ತು. ಎತ್ತ ನೋಡಿದರತ್ತ ನೀರು ನೀರು. ಒಂದು ಬಗೆಯಲ್ಲಿ ಗೊಂದಲದ ಅವ್ಯವಸ್ಥೆಯ ಪರಿಸ್ಥಿತಿ ಇತ್ತು. ಆ ಆದಿ ಜಲರಾಶಿಯನ್ನು `ನನ್' ಸಾಗರ ಎಂದು ಗುರುತಿಸಲಾಗುತ್ತದೆ. ಹೀಗಾಗಿ `ನನ್' ಈಗ ಸಾಗರದೇವತೆ. `ನನ್' ಸಾಗರದ ಮಧ್ಯದಿಂದ ದಿನ್ನೆಯೊಂದು ಮೇಲೆದ್ದು ಬರುತ್ತದೆ,
ಆ ದಿನ್ನೆಯೇ ಇಂದಿನ ಇಜಿಪ್ತಿನ ಪಿರಾಮಿಡ್‍ಗಳ ಅವುಗಳ ಆಕಾರ ಪಡೆಯುವುದಕ್ಕೆ ಕಾರಣ ಎನ್ನಲಾಗುತ್ತದೆ. ಆ ದಿನ್ನೆಯನ್ನು `ಬೆನ್‌ಬೆನ್' ಎಂದು ಕರೆಯಲಾಗುತ್ತದೆ. ಈ `ಬೆನ್ ಬೆನ್' ದಿನ್ನೆಯಿಂದಲೇ ಮೊದಲ ಬಾರಿ ಸೂರ್‍ಯದೇವರು `ರಾ' ಜಗತ್ತಿಗೆ ಬೆಳಕು ಕೊಡುವುದಕ್ಕೆ ಮೊದಲ ಮಾಡಿದ್ದ ಎಂದು ಹೇಳಲಾಗುತ್ತದೆ. ಅದೇ ದಿನ್ನೆಯ ಮೇಲೆಯೇ ಮೊದಲ ದೇವರು `ಆಟಮ್' ನಿಂತುಕೊಂಡಿದ್ದು. `ಆಟಮ್', `ರಾ' ದೇವರ ಮಗದೊಂದು ಹೆಸರು ಎಂದು ಹೇಳಲಾಗುತ್ತದೆ.
ಆ `ಆಟಮ್' ಈ ಜಗತ್ತಿನ ಜೀವಜಾಲದ ಮೂಲ ಪುರುಷ. ಹೀಗಾಗಿ ಅವನು ಜಗತ್ತಿನ ಎಲ್ಲಾ ಜೀವರಾಶಿಗಳನ್ನು ಸೃಷ್ಟಿಸಿದಾತ. `ಬೆನ್ ಬೆನ್' ದಿನ್ನೆಯ ಮೇಲೆ ನಿಲ್ಲುವ ಮೊದಲು `ಆಟಮ್' `ನನ್' ಸಮುದ್ರದಲ್ಲಿ ದಿಕ್ಕೆದೆಸೆ ಇಲ್ಲದೇ ತೇಲುತ್ತಿದ್ದ. ಅವನಲ್ಲಿ ಗಂಡು ಹೆಣ್ಣು ಎರಡೂ ಅಂಶಗಳಿದ್ದವು. ಒಂದು ಬಾರಿ ಅವನಿಗೆ ತಾನು `ನನ್' ಸಮುದ್ರದಿಂದ ಹೊರ ಬಂದು ಜೀವ ಸೃಷ್ಟಿಯನ್ನು ಆರಂಭಿಸಬೇಕು ಎನ್ನಿಸುತ್ತದೆ. ಆಗ ಅವನು ಸಮುದ್ರದಿಂದ ಮೇಲೆ ಎದ್ದುಬಂದು `ಬೆನ್ ಬೆನ್' ದಿನ್ನೆಯ ಮೇಲೆ ನಿಂತುಕೊಳ್ಳುತ್ತಾನೆ.
`ಆಟಮ್' ತನ್ನಲ್ಲಿದ್ದ ಹೆಣ್ತನವನ್ನು ಬಳಸಿ ಜೀವ ಸೃಷ್ಟಿಗೆ ಮುಂದಾಗುತ್ತಾನೆ. ಗಾಳಿ ಮತ್ತು ಖಾಲಿ ಜಾಗದ ದೇವರು `ಶೂ' ಅನ್ನು ಹುಟ್ಟಿಸುತ್ತಾನೆ. ನಂತರ ಮತ್ತು `ಶೂ'ನ ಸೋದರಿ ಹಬೆ ಮತ್ತು ಮಂಜಿನ ದೇವತೆ `ಟೆಫ್ನಟ್' ಳಿಗೆ ಜನ್ಮ ನೀಡುತ್ತಾನೆ.
ಆತ ತನ್ನ ಎರಡೂ ಕೈಗಳನ್ನು ಕೂಡಿಸಿ, `ನಾನು ನನ್ನ ನೆರಳನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತೇನೆ. ನನ್ನಲ್ಲಿನ ಹೆಣ್ತನ ಮತ್ತು ಗಂಡುಗಳ ಸಂಯೋಗದಿಂದ ನನ್ನ ಬಾಯಲ್ಲಿ ಬೀಜವು ರೂಪತಾಳಿತು. ಆ ಬೀಜದ ಫಲವತ್ತತೆಯಿಂದ `ಶೂ' ಮತ್ತು `ಟೆಫ್ನಟ್' ದೇವರುಗಳು ಹುಟ್ಟಲಿ ಎಂದು ಆಶಿಸುತ್ತಾನೆ'. ಆಗ ಅವರಿಬ್ಬರೂ ಹುಟ್ಟುತ್ತಾರೆ.
ಆದಿ ದೇವರು `ಆಟಮ್' ಸೀನಿದಾಗ `ಶೂ' ದೇವರು ಹುಟ್ಟಿದ, ಉಗುಳಿದಾಗ `ಟೆಫ್ನಟ್' ದೇವತೆ ಜನಿಸುತ್ತಾಳೆ. `ಶೂ' ಅನ್ನುವುದು ಸೀನಿದಾಗ ಊಂಟಾಗುವ ಸಪ್ಪಳವಾದರೆ, `ಟೆಫ್ನಟ್' ಅನ್ನುವುದು ಉಗುಳುವಾಗ ಉಂಟಾಗುವ ಶಬ್ದ ಎನ್ನಲಾಗುತ್ತದೆ.
`ಆಟಮ್' ದೇವರು ಇಬ್ಬರು ಮಕ್ಕಳನ್ನು ಸೃಷ್ಟಿಸಿದ ಮೇಲೆ, ಆಗ ಒಬ್ಬರಲ್ಲ ಒಟ್ಟು ಮೂವರು ದೇವರುಗಳ ಉಪಸ್ಥಿತಿ ಉಂಟಾಗುತ್ತದೆ. ಆಗ, ಕತ್ತಲು, ಗೊಂದಲ ಹೇಳ ಹೆಸರಿಲ್ಲದಂತೆ ಮಾಯವಾಗಿ, ವಿಶ್ವದಲ್ಲಿ ಬೆಳಕು ಮೂಡತೊಡಗುತ್ತದೆ.
ತನ್ನ ಮೊದಲ ಸೃಷ್ಟಿಯ ನಂತರ `ಆಟಮ್' ದೇವರು ಶ್ರಮದ ಕಾರಣ ದಣಿದಿರುತ್ತಾನೆ. ಅವನ ಬೆವರ ಹನಿ ನೆಲಕ್ಕೆ ಬಿದ್ದಾಗ, ಮೊದಲ ಸೃಷ್ಟಿಯ ಸಂತೋಷದಿಂದ ಅಳತೊಡಗಿದ ಸಂದರ್ಭದಲ್ಲಿ, ಅವನ ಕಣ್ಣೀರ ಹನಿಗಳು ಕೆಳಗೆ ಬಿದ್ದಾಗ, ಅವುಗಳಿಂದ ಮಾನವರು- ಗಂಡಸರುಹೆಂಗಸರು ಉಂಟಾಗುತ್ತಾರೆ. ಆದಿ ದೇವರು `ಆಟಮ್'ನ ಮಗದೊಂದು ಹೆಸರು `ರಾ' ಎಂದು ಹೇಳಲಾಗುತ್ತದೆ. ಹೀಗಾಗಿ, ಪುರಾತನ ಇಜಿಪ್ತಿನ ಜನ ತಮ್ಮನ್ನುತಾವು `ರಾನ ದನಕರುಗಳು' ಎಂದು ಕರೆದುಕೊಳ್ಳುತ್ತಿದ್ದರು.
ಇತ್ತಇಷ್ಟೆಲ್ಲಾ ನಡೆಯುವಾಗ, ಅತ್ತ ಆದಿ ದೇವರ ಮಕ್ಕಳಾದ `ಶೂ' ಮತ್ತು `ಟೆಫ್ನಟ್' ಅವರು ಗಂಡ ಹೆಂಡಿರಂತೆ ಜೀವನ ಆರಂಭಿಸುತ್ತಾರೆ. ಅವರಿಗೆ ಒಬ್ಬರು ಮಕ್ಕಳು ಹುಟ್ಟುತ್ತಾರೆ. ಅವರಿಗೆ ಹುಟ್ಟುವ ಆದಿ ದೇವರು `ಆಟಮ್'ನ ಮೊಮ್ಮಕ್ಕಳಿಗೆ `ಗೆಬ್' ಮತ್ತು `ನಟ್' ಎಂದು ಹೆಸರಿಡಲಾಗುತ್ತದೆ. ಈ `ಗೆಬ್' ಭೂದೇವರಾದರೆ, `ನಟ್' ಆಗಸ ದೇವತೆಯಾಗಿರುತ್ತಾಳೆ.
ಆದರೆ, ಅವರಿಬ್ಬರೂ ಹುಟ್ಟುವಾಗ ಒಬ್ಬರಿಗೊಬ್ಬರು ಅಪ್ಪಿಕೊಂಡು ಅಂಟಿಕೊಂಡೇ ಹುಟ್ಟುತ್ತಾರೆ. ಆಗ, ಆ ಇಬ್ಬರು ದೇವರುಗಳ ತಂದೆದೇವರು - ಗಾಳಿ ದೇವರು `ಶೂ', ಅವರಿಬ್ಬರ ಮಧ್ಯ ನುಸುಳುತ್ತಾನೆ. ಮಗಳು `ನಟ್' ಇರುಳಿನ ಆಗಸ ದೇವತೆಯನ್ನು ತಂದೆ ದೇವರು `ಶೂ' ಎತ್ತಿ ಹಿಡಿದು, ಭೂದೇವರು `ಗೆಬ್'ನಿಂದ ಬಿಡಿಸಿ ಮೇಲೆ ತಳ್ಳುತ್ತಾನೆ.
ಭೂದೇವರು `ಗೆಬ್' ಮತ್ತು ಆಗಸ ದೇವತೆ `ನಟ್' ಮದುವೆಯಾಗಿ ಸಂಸಾರಿಗಳಾದಾಗ ಅವರಿಗೆ `ಒಸ್ಸಿರಿಸ್', `ಐಸಿಸ್' ಮತ್ತು `ಸೆಟ್' ಹಾಗೂ `ನೆಫಥಿಸ್' ಹೆಸರಿನ ನಾಲ್ವರು ಮಕ್ಕಳಾಗುತ್ತಾರೆ. ಮುಂದೆ ಒಸ್ಸಿರಿಸ್ ಭೂಮಿಯನ್ನು ಆಳತೊಡಗುತ್ತಾನೆ. `ಒಸ್ಸಿರಿಸ್' ತನ್ನ ಸಹೋದರಿ `ಐಸಿಸ್'ಳನ್ನು ತನ್ನ ರಾಣಿಯನ್ನಾಗಿ ಸ್ವೀಕರಿಸುತ್ತಾನೆ. ಅವರಿಬ್ಬರು ಬಹುಕಾಲ ರಾಜ್ಯವಾಳುತ್ತಾರೆ. `ಒಸ್ಸಿರಿಸ್' ಮತ್ತು `ಐಸಿಸ್' ಫಲವಂತಿಕೆ ಮತ್ತು ಸುವ್ಯವಸ್ಥೆಗಳ ದೇವತೆಗಳು.
`ಸೆಟ್' ಮತ್ತು `ನೆಫೆಸಸ್‌ಳು' ದಂಪತಿಗಳು, ಒಳಿತಿನ ಪರವಾಗಿ ನಿಲ್ಲುವ `ಒಸ್ಸಿರಿಸ್' ಮತ್ತು `ಐಸಿಸ್' ದೇವರುಗಳ ಕಾರ್‍ಯಗಳಿಗೆ ಕಡಿವಾಣ ಹಾಕುವ, ಅವ್ಯವಸ್ಥೆಯನ್ನು ಪ್ರತಿಪಾದಿಸುವ ಕೆಡುಕಿನ ದೇವರುಗಳು. `ಹೋರಸ್' ದೇವರು `ಒಸ್ಸಿರಿಸ್' ಮತ್ತು `ಐಸಿಸ್' ದಂಪತಿಗಳ ಮಗ. ಇಜಿಪ್ತಿನ ಪುರಾಣಗಳಲ್ಲಿನ `ಹೊರಸ್' ದೇವರನ್ನು ಬದಿಗಿಟ್ಟು, ಉಳಿದ ಒಂಬತ್ತು ದೇವರುಗಳನ್ನು `ನವದೇವತೆಗಳು' ಎಂದು ಗುರುತಿಸಲಾಗುತ್ತದೆ.
---
ಇದು ಪುರಾತನ ಇಜಿಪ್ತಿನ ಹೆಲಿಯೊಪೊಲಿಸ್ ಪಟ್ಟಣದ ಪೂಜಾರಿಗಳ ಐತಿಹ್ಯಗಳ ಪ್ರಭಾವಳಿಯಲ್ಲಿ ರೂಪತಾಳಿದ್ದ ಜಗತ್ತಿನ ಹುಟ್ಟಿನಕತೆ. ಇದಲ್ಲದೇ ಇನ್ನು ಹಲವು ಜಗತ್ತಿನ ಹುಟ್ಟಿನ ಕತೆಗಳು ಇಜಿಪ್ತಿನ ವಿವಿಧೆಡೆ ಕಂಡುಬರುತ್ತವೆ.
***********
No comments:
Post a Comment