Friday, 6 September 2019

ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು

ಡಾ. ಸಿಸ್ಟರ್ ಪ್ರೇಮ (ಎಸ್. ಎಮ್. ಎಮ್. ಐ)
ಹಿಂದಿನ ಸಂಚಿಕೆಯಲ್ಲಿ 'ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು' ಎಂಬ ವಿಷಯದಡಿಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕಕ್ಕೆ ಆಗಮಿಸಿ ಕನ್ನಡ ಸಾಹಿತ್ಯವನ್ನು ಬೆಳೆಸಲು ಶ್ರಮಿಸಿದ ಮಿಶನರಿಗಳ ಬದುಕು ಮತ್ತು ಕೊಡುಗೆಗಳ ಮಹತ್ವವನ್ನು ತಿಳಿದಿರುತ್ತೇವೆ. ಈ ಪ್ರಸ್ತುತ ಸಂಚಿಕೆಯಲ್ಲಿ ಮಿಶನ್ ಸಂಸ್ಥೆಗಳು ಮತ್ತು ಅವುಗಳ ಕಾರ್ಯಗಳನ್ನು ಪರಿಚಯಿಸುವ ಪುಟ್ಟ ಪ್ರಯತ್ನವನ್ನು ಮಾಡಿದ್ದೇನೆ. 


ಮಿಶನ್ ಸಂಸ್ಥೆಗಳು ಮತ್ತು ಕಾರ್ಯಗಳು : 

ಕರ್ನಾಟಕದಲ್ಲಿ ಮಿಶನರಿ ಚಟುವಟಿಕೆಯು ಹದಿನೇಳನೇ ಶತಮಾನದಷ್ಟು ಹಿಂದಿನದ್ದು, ಇವರುಗಳು ಆಗಮಿಸಿದ ಕಾಲಾವಧಿಯಲ್ಲಿ ಒಂದೊಂದು ಪ್ರದೇಶವನ್ನು ಮುಖ್ಯ ಕಾರ್ಯಕ್ಷೇತ್ರವಾಗಿ ಆರಿಸಿಕೊಂಡು ಆ ಕ್ಷೇತ್ರಗಳ ಮೂಲಕ ಸೇವೆಗೈದರು. ನಮ್ಮ ನಾಡಿನಲ್ಲಿ ಗಣನೀಯ ಪ್ರಮಾಣದಲ್ಲಿ ಸೇವೆ ಸಲ್ಲಿಸಿದ ಮಿಶನರಿಗಳೆಂದರೆ - ಜೆಸ್ವಿಟ್ ಸೊಸೈಟಿ, ಲಂಡನ್ ಮಿಶನ್, ವೆಸ್ಲಿಯನ್ ಮಿಶನ್ ಮತ್ತು ಬಾಸೆಲ್ ಮಿಶನ್. ಈ ಮಿಶನ್ನುಗಳಿಂದ ಹಲವಾರು ಮಿಶನರಿಗಳು ಕರ್ನಾಟಕಕ್ಕೆ ಆಗಮಿಸಿ ಅವಿರತ ಸೇವೆಯನ್ನು ಸಲ್ಲಿಸಿರುತ್ತಾರೆ. 

ಕ್ರೈಸ್ತ ಧರ್ಮೀಯರಲ್ಲಿ ಮುಖ್ಯವಾಗಿ ಕಥೋಲಿಕರು ಮತ್ತು ಪ್ರೊಟಸ್ಟೆಂಟರೆಂದು ಎರಡು ಪಂಗಡಗಳಿವೆ. ಈ ಎರಡು ಪಂಗಡಗಳಲ್ಲಿಯೂ ಮಿಷನರಿಗಳಿದ್ದಾರೆ. ಕರ್ನಾಟಕಕ್ಕೆ ಮೊದಲು ಬಂದ ಮಿಶನರಿಗಳೆಂದರೆ ಕಥೋಲಿಕರು. ಆಮೇಲೆ ಕ್ರಿ. ಶ. 1810ರ ಸುಮಾರಿಗೆ ಪ್ರೊಟಸ್ಟೆಂಟ್ ಮಿಶನರಿಗಳು ಕರ್ನಾಟಕಕ್ಕೆ ಬಂದು ತಮ್ಮ ಸೇವಾ ಕಾರ್ಯವನ್ನು ಪ್ರಾರಂಭಿಸಿದರು. ಕಥೋಲಿಕ ಮಿಶನರಿಗಳ ದೃಷ್ಟಿಕೋನ ಮತೀಯ ಚೌಕಟ್ಟಿನಿಂದ ಬಹಳ ನಿರ್ಬಂಧಿತವಾಗಿತ್ತು. ಕಥೋಲಿಕ ಮತದ ವಿವರಣೆಗೆ ಬೇಕಾದ ಪರಿಭಾಷೆಯನ್ನು ಸೃಷ್ಟಿಸಿ, ಕನ್ನಡ ಧಾರ್ಮಿಕ ಭಾಷಾ ಪರಿಕರಗಳಿಗೆ ತಮ್ಮ ಕೊಡುಗೆಯನ್ನು ನೀಡಿದರು. ಕಥೋಲಿಕ ಮಿಶನರಿಗಳು ರಚಿಸಿದ ಸಾಹಿತ್ಯವನ್ನು ವಿಷಯನುಸಾರ ಆರು ಭಾಗಗಳನ್ನಾಗಿ ವಿಂಗಡಿಸಿಬಹುದು ತತ್ವ, ಆಚಾರ, ಬೋಧನೆ, ಬೈಬಲ್ ಚರಿತ್ರೆ, ಜೀವನ ಚರಿತ್ರೆಗಳು ಮತ್ತು ಅನ್ಯಮತ ಪ್ರಸ್ತಾಪ. ಕಥೋಲಿಕ ಮಿಶನರಿಗಳ ಕೃತಿಗಳು ಪ್ರಧಾನವಾಗಿ ಧಾರ್ಮಿಕವಾಗಿದ್ದವು ಸಾಹಿತ್ಯಿಕವಾಗಿರಲಿಲ್ಲ 

ಅ) ಜೆಸ್ವಿಟ್ ಸೊಸೈಟಿ: 

ಮೊತ್ತಮೊದಲಿಗೆ ನಮ್ಮ ಕನ್ನಡ ನಾಡಿಗೆ ಆಗಮಿಸಿದ ಮಿಶನರಿಗಳಲ್ಲಿ ಜೆಸ್ವಿಟ್ ಮಿಶನರಿ ಸಂಸ್ಥೆಗೆ ಸೇರಿದ ಲಿಯೋನಾರ್ಡೊ ಚಿನ್ನಾಮಿ ಆದ್ಯರು ಹಾಗೂ ಪ್ರಮುಖರು. ಇವರ ಮೂಲಕ ಈ ಮಿಶನ್ ಸಂಸ್ಥೆಯು ಕನ್ನಡ ಕ್ರೈಸ್ತ ಧಾರ್ಮಿಕ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದೆ. ಉದಾ: ಲಿಯೋನಾರ್ಡೊ ಚಿನ್ನಾಮಿ ಬರೆದ ಕ್ರೈಸ್ತ ಧರ್ಮದ ಮುಖ್ಯ ಧಾರ್ಮಿಕ ತತ್ವಗಳನ್ನು ಬೋಧಿಸುವ 'ದೀರ್ಘ ಪ್ರಶ್ನೋತ್ತರಾವಳಿ', 'ಕ್ರೈಸ್ತ ಧರ್ಮದ ಸಾರ ಸ್ವರೂಪ', 'ಕ್ರೈಸ್ತ ಸಂತರ ಜೀವನ ಚರಿತ್ರೆಗಳು', 'ಕ್ರೈಸ್ತ ಧರ್ಮ ಸಮರ್ಥನೆ', 'ಲತೀನ್-ಕನಾರಿಸ್​ನಿಘಂಟು’, ’ಪತಿತರ ಮಾರ್ಗ', 'ದೊಡ್ಡ ಜಪದ ಪುಸ್ತಕ', ಪಿಯೆರ್-ಅಗುಸ್ತ್ ಬುತೆಲೂ ರ 'ಸತ್ಯೋಪದೇಶ', 'ಜ್ಞಾನೋಪದೇಶ', ತಿಯೊದೊರ್ - ಆಂದ್ರೆ ಜೆರ್ಬಿಯೇ ನವರು ಬರೆದ 'ಪರಲೋಕ ರಾಜ್ಯದ ಬೀಗದ ಕೈ ಆಗಿರುವ ಪಶ್ಚಾತ್ತಾಪವೆಂಬ ದೇವದ್ರವ್ಯ ಅನುಮಾನವು, 'ದೇವರ ತಾಯಿಯ ಮಾಸವು', ಅಮಾಂ ಕೊನ್​ಸ್ತಾಂ ದೆಸೇಂನ 'ಜ್ಞಾನ ಬೊಕ್ಕಸವು', ಮತ್ತು 'ಜ್ಞಾನ ಒರೆಗಲ್ಲು' ಇವೆಲ್ಲವೂ ಕಥೋಲಿಕ ಕ್ರೈಸ್ತ ಮಿಶನರಿಗಳ ಕೊಡುಗೆಗಳು. 

ಆ) ಲಂಡನ್ ಮಿಶನರಿ ಸೊಸೈಟಿ: 

ಈ ಮಿಶನ್ ಸಂಸ್ಥೆಯ ಸಂಕ್ಷಿಪ್ತ ಚರಿತ್ರೆಯನ್ನು ಗಮನಿಸುವುದಾದರೆ ಡಾ. ಡೇವಿಡ್ ಬೋಗ್ ಎಂಬ ಬೋಧಕನೇ ಇದರ ಸ್ಥಾಪಕ. ಕ್ರಿ. ಶ. 1795 ಸೆಪ್ಟೆಂಬರ್ 21 ರಂದು ಯೇಸುಕ್ರಿಸ್ತನ ಸುವಾರ್ತೆಯನ್ನು ಲೋಕದ ಕಟ್ಟಕಡೆಯವರೆಗೂ ಸಾರಬೇಕೆಂಬ ಅಪ್ಪಣೆಯಂತೆ ಅನೇಕ ಸುವಾರ್ತ ಗುಂಪುಗಳಿಗೆ ಸೇರಿದ ವಿಶ್ವಾಸಿಗಳ ಗುಂಪು ವಿಶಾಲ ದೃಷ್ಟಿಯಿಂದ ಸೇರಿ ಬಂದು ಈ ಕಾರ್ಯವನ್ನೆಸಗುವುದು ತಮ್ಮ ಜವಾಬ್ದಾರಿಯೆಂದು ತಿಳಿದು ಸಮರ್ಪಣಾ ಭಾವದಿಂದ ತಮ್ಮನ್ನು ಸುವಾರ್ತಾ ಪ್ರಸರಣ ಸೇವೆಗೆ ಸಮರ್ಪಿಸಿಕೊಂಡರು. ಹೀಗೆ ಈ ಸಂಸ್ಥೆಯು ಲಂಡನ್ ಮಿಶನರಿ ಸಂಸ್ಥೆಯೆಂಬ ಹೆಸರನ್ನು ಪಡೆದುಕೊಂಡು ಕಾರ್ಯವನ್ನಾರಂಭಿಸಿತು. ಕ್ರಿ. ಶ. 1810 ಮೇ 5 ರಂದು ಲಂಡನ್ ಮಿಶನರಿ ಸಂಸ್ಥೆಯಿಂದ ಜಾನ್ ಹ್ಯಾಂಡ್ಸ್ ಎಂಬುವನು ಕರ್ನಾಟಕದ ಬಳ್ಳಾರಿಗೆ ಬಂದ ಮೊದಲ ಮಿಶನರಿ. ಈತನ ಮುಂದಾಳತ್ವದಲ್ಲಿ ಲಂಡನ್ ಮಿಶನ್ ಸಂಸ್ಥೆಯು ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಕಾರ್ಯವನ್ನಾರಂಭಿಸಿತು. 

ಈ ಸಂಸ್ಥೆಯ ಮಿಶನರಿಗಳೆಂದರೆ ಜಾನ್ ಹ್ಯಾಂಡ್ಸ್, ವಿಲಿಯಂ ರೀವ್, ಜಾನ್ ರೀಡ್, ಬೆನಾರ್ಡ್, ಲೂಕಸ್, ಪೊರ್ಬರ್ ಮತ್ತು ಲೈಡೆಕ್, ಬೆಂಜಮಿನ್ ರೈಸ್, ವಿಲಿಯಂ ಕ್ಯಾಂಬೆಲ್, ಹಿಕ್ಲಿಂಗ್, ಟಿ. ಇ. ಸ್ಲೀಟಿಕ್, ಇ. ಎಫ್. ಗುರ್ನಿ, ಸಿ. ಬಿ. ಫರ್ತ್ ಮತ್ತು ಸ್ತ್ರೀಯರಲ್ಲಿಯೂ ಕೂಡ ಮಿಸ್ ಬರೆತ್ ದೇಸಿಯರಾದ ಜೀವರತ್ನಮ್ಮ ಹಾಗೂ ಚಂದ್ರ ಲೀಲಮ್ಮ ಇವರೆಲ್ಲರೂ ಪ್ರೀತಿ, ತ್ಯಾಗ, ಕಷ್ಟ ಸಹಿಷ್ಣುತೆ, ಅನುಕಂಪ ಭಾವದಿಂದ ಜನರೊಂದಿಗೆ ಬೆರೆತಿದ್ದು ಅವರ ಕಾರ್ಯಸಾಧನೆಯ ಮೂಲಕ ಎಂದು ತಿಳಿದುಕೊಳ್ಳಬಹುದಾಗಿದೆ. 

ಶಿಕ್ಷಣದ ಮಹತ್ವವನ್ನು ಮನಗಂಡ ಈ ಸಂಸ್ಥೆಯ ಮಿಶನರಿಗಳು ಅವಿದ್ಯಾವಂತರಾದ ಜನರಲ್ಲಿ ಮೌಢ್ಯಗಳನ್ನು ಅಳಿಸಿ ಸುಶಿಕ್ಷಿತರನ್ನಾಗಿ ಮಾಡಿ ಸಮಾಜಕ್ಕೆ ಉತ್ತಮ ಉತ್ಪಾದಕ ವ್ಯಕ್ತಿಗಳನ್ನು ಸೃಷ್ಟಿ ಮಾಡಬೇಕೆಂಬ ಛಲದಿಂದ ದುಡಿದರು. ಜನರಲ್ಲಿ ಹೊಸತನ್ನು ಹುಟ್ಟಿಸಬೇಕೆಂಬ ನಿಲುವು ಹೊಂದಿ ಸಂಸ್ಥೆಗಳನ್ನು ಸ್ಥಾಪಿಸಿದರು. ಇನ್ನೂ ಎಲ್ಲಕ್ಕಿಂತ ವಿಶೇಷವೆಂದರೆ ದೇಶೀ ಮಕ್ಕಳಿಗೆ ಆಧುನಿಕ ಶಿಕ್ಷಣದ ಮೂಲಕ ಶುಭಸಂದೇಶ ಸಾರಿ ಅವರೆಲ್ಲರನ್ನೂ ಧಾರ್ಮಿಕ ಶ್ರದ್ಧೆಯೆಡೆಗೆ ನಡೆಸುವುದು ಇವರ ಗುರಿಯಾಗಿತ್ತು. ಅಲ್ಲಿನ ಮಕ್ಕಳ ಬುದ್ಧಿಮಟ್ಟಕ್ಕೆ ಅನುಗುಣವಾಗಿ ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದ ಸರಳ ಕೃತಿಗಳನ್ನು ಹೊರಡಿಸಿ ಅವರನ್ನು ಕಾವ್ಯದೆಡೆಗೆ ಆಕರ್ಷಿಸುವ ಹಂಬಲ ಹೊಂದಿದ್ದರು. ಮತಾಂತರ ಹೊಂದಿದ ದೇಶೀಯ ಕ್ರೈಸ್ತರಿಗೂ ತತ್ವ ಬೋಧನೆಗಳನ್ನು ತಿಳಿಸಿಕೊಡುವುದಾಗಿ ಸೆಮಿನರಿ ಶಾಲೆಗಳಂತ ಶಾಲೆಗಳನ್ನು ಆರಂಭಿಸಿದರು. ಶಾಲೆಗಳಲ್ಲಿ ವಿಜ್ಞಾನ, ಗಣಿತ, ಭೂಗೋಳ ಎಂಬ ವಿಷಯಗಳ ಜೊತೆಗೆ ನೀತಿ-ಶಿಕ್ಷಣದಂತಹ ಶಿಕ್ಷಣವನ್ನು ಕೂಡ ಒದಗಿಸಿಕೊಟ್ಟರು. ಹೀಗೆ ಪ್ರಾರಂಭದಲ್ಲಿ ಉದಯಿಸಿದ ಲಂಡನ್ ಮಿಶನ್, ಶೈಕ್ಷಣಿಕ ಕ್ಷೇತ್ರಕ್ಕೆ ಬಹು ಅಮೂಲ್ಯ ಕೊಡುಗೆಯನ್ನು ನೀಡಿ ಕರ್ನಾಟಕದಲ್ಲಿ ಚಿರಸ್ಥಾಯಿ ಸಂಸ್ಥೆಯಾಗಿ ಹೆಸರುಗಳಿಸಿದೆ. 

ಇ) ವೆಸ್ಲಿಯನ್ ಮಿಶನ್ ಸೊಸೈಟಿ: 

ಲಂಡನ್ ಮಿಶನ್ನಿನ ಕಾರ್ಯವು ಬಿರುಸಾಗಿ ಪ್ರಸಾರವಾಗುತ್ತಿದ್ದಂತೆಯೇ 'ವೆಸ್ಲಿಯನ್ ಮಿಶನ್'ಎಂಬ ಸಂಸ್ಥೆಯು ಇಂಗ್ಲೆಂಡಿನಲ್ಲಿ ಹುಟ್ಟಿಕೊಂಡ ಭಕ್ತಿ ಚಳುವಳಿಯ ಸುವಾರ್ತಿಕ ಗುಂಪು. ಇದು ಲಂಡನ್ ನಗರದಲ್ಲಿ ಕ್ರಿ. ಶ. 1740ರಲ್ಲಿ ಜಾನ್​ವೆಸ್ಲಿ ಮತ್ತು ಚಾರ್ಲ್ಸ್​ವೆಸ್ಲಿ ಎಂಬುವರ ಮೂಲಕ ಸ್ಥಾಪನೆಯಾಯಿತು. ಈ ಸಂಘವೇ ವೆಸ್ಲಿಯನ್ ಮೆಥೋಡಿಸ್ಟ್ ಮಿಶನ್. ಈ ಸಂಘದವರು ಕರ್ನಾಟಕದಲ್ಲಿ ಕ್ರಿ. ಶ. 1833ರಲ್ಲಿ ಮೈಸೂರಿನಲ್ಲಿ ಕಾರ್ಯಾರಂಭ ಮಾಡಿದರು. ಮೈಸೂರನ್ನು ಪ್ರಮುಖ ಕ್ಷೇತ್ರವಾಗಿ ಹೊಂದಿ ವಿದ್ಯಾ ಕ್ಷೇತ್ರದ ಮೂಲಕ ಕ್ರೈಸ್ತ ಸುವಾರ್ತೆಯನ್ನು ಜನಸಮೂಹಕ್ಕೆ ಪರಿಚಯಿಸಬಹುದೆಂದು ನಂಬಿ ಶಾಲೆಗಳನ್ನು ಪ್ರಾರಂಭಿಸಿದರು. ಜನರಲ್ಲಿಯೂ ಅಜ್ಞಾನವೆಂಬ ಕತ್ತಲೆಯನ್ನು ದೂರ ಮಾಡಲು ವಿದ್ಯಾಭ್ಯಾಸ ಸಹಾಯ ಮಾಡುತ್ತದೆಂದು ಭಾವಿಸಿ ಇವರು ಹಗಲಿನಲ್ಲಿ ಚಿಕ್ಕಮಕ್ಕಳಿಗೂ, ಸಂಜೆಯಲ್ಲಿ ದೊಡ್ಡವರಿಗೂ ಶಾಲೆಗಳನ್ನು ಪ್ರಾರಂಭಿಸಿದರು. 

ಈ ಶಾಲೆಗಳು ಸಭೆಗಳ ಬೆಳವಣಿಗೆಗೆ ಕಾರಣವಾಗಬಹುದೆಂಬುದನ್ನು ಥಾಮಸ್ ಹಡ್ಸನ್ ಎಂಬ ಮಿಶನರಿ ತಾನು ಬಂದ ಮರುವರ್ಷವೇ ಕ್ರಿ. ಶ. 1834ರಲ್ಲಿ ನಂಬಿ ಬೆಂಗಳೂರಿನಲ್ಲಿ ಪ್ರಥಮ ಇಂಗ್ಲೀಷ್ ಶಾಲೆಯನ್ನು ಆರಂಭಿಸಿದ. ಥಾಮಸ್ ಹಡ್ಸನ್ ಮಿಶನರಿ ತಾನು ಬಂದ ಕೆಲವೇ ತಿಂಗಳುಗಳಲ್ಲಿ ಬೆಂಗಳೂರಿನ ಕಂಟೋನ್​ಮೆಂಟ್​ನಲ್ಲಿ ಮೊತ್ತಮೊದಲ ಇಂಗ್ಲೀಷ್ ಶಾಲೆಯನ್ನು ಮತ್ತು ತಾನು ನಿವೃತ್ತಿಯಾಗುವ ಹೊತ್ತಿಗಾಗಲೇ 60ಶಾಲೆಗಳನ್ನು ನಡೆಸುತ್ತಿದ್ದರು. ಒಟ್ಟಾರೆಯಾಗಿ ಇವರ ಶೈಕ್ಷಣಿಕ ಕಾರ್ಯವನ್ನು ಅವಲೋಕಿಸಿದರೆ ಲಂಡನ್ ಮಿಶನ್​ದವರಿಗಿಂತಲೂ ವ್ಯಾಪಕವಾದ ಮಿಶನ್ ಎಂದು ಗುರುತಿಸಬಹುದಾಗಿದೆ. ಈ ಸಂಸ್ಥೆಯ ಮಿಶನರಿಗಳ ಮುಖ್ಯ ಧ್ಯೇಯ ಸ್ಥಳೀಯ ಸರಕಾರದೊಂದಿಗೆ ಸೌಹಾರ್ದತೆ, ಭಾರತೀಯ ನಾಯಕತ್ವಕ್ಕೆ ಪ್ರೋತ್ಸಾಹ ಹಾಗೂ ಕ್ರೈಸ್ತ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಅಭ್ಯಾಸ, ಹಿರಿಯ ಮತ್ತು ಕಿರಿಯರಿಗೆ ತರಬೇತಿಯನ್ನು ಒದಗಿಸಿಕೊಡುವುದು ಆಗಿತ್ತು ಎಂದು ತಿಳಿಯಬಹುದು. 

ಮಿಶನರಿಗಳು ಓದುವುದಕ್ಕೆಂದು ಬರೆದ ಪಠ್ಯ ಪುಸ್ತಕಗಳಲ್ಲಿ ಇತಿಹಾಸ, ಗಣಿತ, ಭೌಗೋಳಿಕ ವ್ಯಾಪ್ತಿಯನ್ನೊಳಗೊಂಡ ಸಂಗತಿಗಳು ಪ್ರಮುಖವಾಗಿವೆ. ಭಾಷಾಧ್ಯಯನದಲ್ಲಿ ಕಂಡು ಬರುವ ನಿಘಂಟುಗಳು ಕೂಡ ಇಲ್ಲಿ ಬಹುಮುಖ್ಯವೆನಿಸಿವೆ ಮತ್ತು ಪಂಚತಂತ್ರಗಳಂತಹ ಕೃತಿಗಳನ್ನು ಅನುವಾದಿಸಿ ಪರಿಚಯಿಸುವಾಗ ನೈತಿಕ ಮೌಲ್ಯವಾಧರಿತ ವಿಷಯಗಳಿಗೆ ಕೊಟ್ಟ ಬೆಲೆಯನ್ನು ತಿಳಿಯಬಹುದಾಗಿದೆ. ಈ ಸಂಸ್ಥೆಯ ಮಿಶನರಿಗಳೆಂದರೆ ಥಾಮಸ್ ಹಡ್ಸನ್, ಜಾನ್ ಗ್ಯಾರೆಟ್, ಡ್ಯಾನಿಯೇಲ್ ಸ್ಯಾಂಡರ್ಸಸ್, ಜಾನ್ ಸ್ಟೀವನ್​ಸನ್ ಮತ್ತು ಹೆಬ್ರಿಹೇಗ್ ಈ ಎಲ್ಲಾ ಮಿಶನರಿಗಳ ಶೈಕ್ಷಣಿಕ ಕಾರ್ಯವು ಹಿರಿದಾಗಿದ್ದು, ಶಕ್ತಿಯುತ ಪುಸ್ತಕಗಳನ್ನು ಹೊರತಂದಿದ್ದಾರೆ. 

ಈ) ಬಾಸೆಲ್ ಮಿಶನ್ ಸೊಸೈಟಿ: 

ಕ್ರೈಸ್ತ ಧರ್ಮ ಪ್ರಚಾರಕ್ಕಾಗಿ ಜರ್ಮನ್ ಮಾತೃಭಾಷೆಯ ಪ್ರೊಟೆಸ್ಟೆಂಟ್ ಕ್ರೈಸ್ತ ಶ್ರೀಸಾಮಾನ್ಯರಿಂದ ಕ್ರಿ. ಶ. 1815, ಸೆಪ್ಟೆಂಬರ್25ರಂದು ಸ್ವಿಜರ್ಲೆಂಡ್​ನ ಬಾಸೆಲ್ ನಗರದಲ್ಲಿ ಈ ಸಂಸ್ಥೆ ಸ್ಥಾಪನೆಯಾಯಿತು. ಕ್ರಿ. ಶ 1834ರಲ್ಲಿ ಭಾರತಕ್ಕೆ ಬಂದ ಬಾಸೆಲ್ ಮಿಷನ್ ಸಂಸ್ಥೆ, ಕ್ರಿ. ಶ. 1834 ಅಕ್ಟೋಬರ್ 30ರಂದು ಕರ್ನಾಟಕದ ಕರಾವಳಿಯ ಮಂಗಳೂರು ನಗರಕ್ಕೆ ಆಗಮಿಸಿತು. ಉತ್ತರ ಕರ್ನಾಟಕದ ಬಹುದೊಡ್ಡ ಪ್ರಶಂಸನೀಯ ಸಂಸ್ಥೆಯನಿಸಿದ ಬಾಸೆಲ್ ಮಿಷನ್ ಸಾಧಿಸಿದ ಸಾಧನೆಯನ್ನು ಯಾವೊಬ್ಬ ವ್ಯಕ್ತಿಯು ಎಳೆ-ಎಳೆಯಾಗಿ ಅಳೆದು ನೋಡಿದರೆ ಹುಬ್ಬೇರಿಸುವಷ್ಟರ ಮಟ್ಟಿಗೆ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡಿದೆ. 

ಯುರೋಪಿನಲ್ಲಿ ಸಂಭವಿಸಿದ ದಂಗೆಯ ದೆಸೆಯಿಂದ ಅಶಾಂತಿ, ಅಸಮಾಧಾನಗಳು ಹುಟ್ಟಿದ ಸಂಧರ್ಭದಲ್ಲಿ ಕೆಲ ಭಕ್ತಿಪರವಶ ಕ್ರೈಸ್ತರ ಪ್ರಾರ್ಥನೆ ಹಾಗೂ ಸಮಯೋಚಿತ ಪ್ರತಿಷ್ಠೆಯ ಫಲಿತಾಂಶವೆಂಬಂತೆ ಬಾಸೆಲ್ ಇವ್ಯಾಂಜಿಕಲ್ ಮಿಷನರಿ ಸಂಘವು ಸ್ಯಾಮುವೆಲ್ ಹೆಬಿಕ್, ಜಾನ್ ಕ್ರಿಸ್ಟಿಯನ್ ಲೆಹೆನರ್ ಮತ್ತು ಕ್ರಿಸ್ಟೋಫರ್ ಲಿಯೋನ್​ಹಾರ್ಡ್ ಗ್ರೈನರ್ ಎಂಬ ಮೂವರು ಮಿಷನರಿಗಳಿಂದ ಕರ್ನಾಟಕದಲ್ಲಿ ಸ್ಥಾಪಿಸಲ್ಪಟ್ಟಿತು. ನಂತರ ಮಂಗಳೂರಿನಲ್ಲಿ ಹಬ್ಬಿಕೊಂಡು ದೇಶೀಯ ಜನರ ಸಹಾಯವನ್ನು ಪಡೆದು ಬಾಸೆಲ್ ಮಿಶನರಿಗಳು ಕನ್ನಡ ಕಲಿಯಲಾರಂಭಿಸಿದರು. ಧರ್ಮ ಪ್ರಚಾರದ ಜೊತೆ-ಜೊತೆಯಲ್ಲೇ ಶೈಕ್ಷಣಿಕ ಪದ್ಧತಿಗೆ ಹೆಚ್ಚಿನ ಇಂಬನ್ನು ಕೊಟ್ಟರು. ಸ್ಥಳೀಯರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲು ಶಾಲೆಗಳು ಬಹು ಮುಖ್ಯ ವಾಹಿನಿಗಳೆಂದು ಅರಿತು ಪ್ರತಿಯೊಬ್ಬರನ್ನು ಸುಶಿಕ್ಷಿತರನ್ನಾಗಿ ಮಾಡಬೇಕೆನ್ನುವ ಹಂಬಲ ವ್ಯಕ್ತಪಡಿಸಿದರು. ಕ್ರಮೇಣ ಈ ಸಂಸ್ಥೆ ಕೊಡಗು, ಧಾರವಾಡ ಮತ್ತು ಬಿಜಾಪುರ ಜಿಲ್ಲೆಗಳಿಗೂ ಹಬ್ಬಿತು. ಗ್ರಂಥೋದ್ಯಮ, ಶಿಕ್ಷಣ ಮತ್ತು ಕೈಗಾರಿಕೋದ್ಯಮಗಳನ್ನು ಪ್ರಮುಖವಾಗಿ ತನ್ನ ಗುರಿಯಾಗಿಸಿಕೊಂಡು ಮತಪ್ರಚಾರ ಕಾರ್ಯ ಮಾಡಿದ ಖ್ಯಾತಿ ಈ ಸಂಸ್ಥೆಯದು. 

ಈ ಮಿಷನ್ನಿನ ಮಿಶನರಿಗಳ ಪ್ರಗತಿಯನ್ನು ಗಮನಿಸಿದರೆ ಮೊತ್ತಮೊದಲಿಗೆ ಧರ್ಮ ಪ್ರಚಾರದ ಕಾರ್ಯವನ್ನು ಬದಿಗಿಟ್ಟು ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದನ್ನು ಅರಿಯಬಹುದು ಕಾರಣ ಶೈಕ್ಷಣಿಕ ಕ್ಷೇತ್ರದಿಂದಲೇ ಉಳಿದೆಲ್ಲ ಕ್ಷೇತ್ರಗಳು ಅಭಿವೃದ್ಧಿ ಸಾಧಿಸಬಹುದೆಂಬುದನ್ನು ಮನಗಂಡರು. ಹೀಗಾಗಿ ಶಾಲೆಗಳನ್ನು ಸ್ಥಾಪಿಸಿ ಅವುಗಳಲ್ಲಿ ಸಾಧ್ಯವಿರುವ ಎಲ್ಲಾ ವಿಧವಾದ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಸಂಗತಿಗಳನ್ನು ಒದಗಿಸಿಕೊಟ್ಟದ್ದು ಇವರ ಶ್ರೇಷ್ಠತೆಯನ್ನು ಎತ್ತಿ ತೋರಿಸುತ್ತದೆ. 

ಉತ್ತರ ಕರ್ನಾಟಕದಲ್ಲಿ ಮರಾಠಿ ಭಾಷೆಯ ಪ್ರಭಾವವಿದ್ದ ಸಮಯದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಡಾ. ಮೋಗ್ಲಿಂಗ್, ಡಾ. ಹೆಬಿಕ್ ಅವಿರತವಾಗಿ ಶ್ರಮಿಸಿದರು. ಪಾಶ್ಚಿಮಾತ್ಯ ಪದ್ಧತಿಯ ಶಿಕ್ಷಣವನ್ನು ಇಲ್ಲಿನ ಜನರು ವಿರೋಧಿಸುತ್ತಿದ್ದ ಕಾಲದಲ್ಲಿ ಈ ಮಿಷನರಿಗಳು ಮನೆ ಮನೆಗೆ ಹೋಗಿ ಪಾಲಕರ ಮನವೊಲಿಸಿ ಮಕ್ಕಳಿಗೆ ಶಿಕ್ಷಣವನ್ನು ಕಲಿಸಿಕೊಡಲು ಮುಂದಾದರು. ಶಾಲೆಗಳನ್ನು ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಸ್ಥಾಪಿಸಿದರು. ಮಿಷನರಿಗಳು ಕೇವಲ ಶಾಲೆಗಳನ್ನು ಸ್ಥಾಪಿಸಿದ್ದು ಮಾತ್ರವಲ್ಲದೇ ಅದಕ್ಕೆ ಅವಶ್ಯವಿರುವ ಪಠ್ಯ ಪುಸ್ತಕಗಳ ರಚನೆ, ಸರಬರಾಜು, ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ನಕ್ಷೆಗಳು, ಪಠ್ಯಗಳು, ಪ್ರಾಯೋಗಿಕಾತ್ಮವಾದ ಸಲಕರಣೆಗಳು, ಬೋಧಕರಿಗೆ ಅವಶ್ಯವಿರುವ ಬೋಧನಾ ಕೈಪಿಡಿಗಳು, ದಿನಚರಿಗಳು, ಕ್ರೀಡೆಗೆ ಸಂಬಂಧಿಸಿದ ಕ್ರೀಡಾವಸ್ತು ಸಲಕರಣೆಗಳ ಸೌಲಭ್ಯಗಳನ್ನು ಒದಗಿಸಿ ಕೊಡುವುದರ ಮೂಲಕ ಗುಣಾತ್ಮಕ ಶಿಕ್ಷಣವನ್ನು ಒದಗಿಸುವಲ್ಲಿ ಪರಿಶ್ರಮಿಸಿದರು. ಈ ದಿಸೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯಗೈದ ಮಿಶನರಿಗಳೆಂದರೆ ಡಬ್ಯ್ಲೂ. ಜಿ. ವರ್ಥ್,ರೆವರೆಂಡ್ ಕಿಟೆಲ್,ಜಿಗ್ಲರ್,ಗ್ರೇಟರ್,ಗಸ್ತಾವ್ ಕೀಜ್, ಲೆಹ್ನರ್, ವೈಗಲ್ ಮುಂತಾದವರು. 

ಬಾಸೆಲ್ ಮಿಶನ್ನಿನ ಮಿಶನರಿಗಳು ಮಾಡಿದ ಕೆಲಸ ಇತರೆಲ್ಲ ಮಿಶನ್ನಿನ ಮಿಶನರಿಗಳಿಗಿಂತಲೂ ಅದ್ಭುತವಾದುದು. ಕನ್ನಡ ಪಠ್ಯಪುಸ್ತಕಗಳನ್ನು ವಿಷಯಾನುಸಾರವಾಗಿ ವಿವಿಧ ಕೃತಿಗಳಿಂದ ಆರಿಸಿ ಬರೆದದ್ದು, ಹಳಗನ್ನಡ ಕೃತಿಗಳಿಂದ ಅವಲೋಕಿಸಿ ಬರೆದದ್ದು, ನೀತಿ ಕಥೆಗಳನ್ನು ಶಿಕ್ಷಣ ಪದ್ಧತಿಯಲ್ಲಿ ಅಳವಡಿಸಿ ಮಕ್ಕಳ ನೈತಿಕ ಗುಣಮಟ್ಟವನ್ನು ಕಥೆಗಳ ಮೂಲಕ ಹೆಚ್ಚಿಸಿದರೆ ಸಮಾಜದ ನೈತಿಕ ಗುಣಮಟ್ಟವನ್ನು ಕಾಪಾಡಿಕೊಳ್ಳಬಹುದು ಎಂಬೆಲ್ಲಾ ಸಂಗತಿಗಳನ್ನು ಅರ್ಥೈಸಿಕೊಂಡು ಆ ದಿಸೆಯಲ್ಲಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿದರು. ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿರುವ ಪ್ರಾಯೋಗಿಕಾತ್ಮಕ ಪರೀಕ್ಷೆಗಳನ್ನು ಏರ್ಪಾಡಿಸುದುವುದರ ಮೂಲಕ ಅವರ ಬುದ್ಧಿಮಟ್ಟವನ್ನು ಪರೀಕ್ಷಿಸಿ ತಮ್ಮ ಮಿಷನರಿ ಕಾರ್ಯಗಳಲ್ಲಿ ಅವರುಗಳನ್ನು ತೊಡಗಿಸಿಕೊಳ್ಳುತ್ತಿದ್ದರು. 

ಒಟ್ಟಾರೆಯಾಗಿ 18 ಮತ್ತು 19ನೇ ಶತಮಾನದ ಶೈಕ್ಷಣಿಕ ವ್ಯವಸ್ಥೆಯನ್ನು ಗಮನಿಸಿದರೆ ಒಂದು ಪ್ರಬುದ್ಧವಾದ ಪ್ರಗತಿದಾಯಕವಾದ ವ್ಯವಸ್ಥೆಯಾಗಿ ಈ ಮಿಶನ್ ಸಂಸ್ಥೆಯು ರೂಪುಗೊಂಡು ಪ್ರತಿಯೊಬ್ಬರಲ್ಲಿಯೂ ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿರುಚಿ ಹುಟ್ಟಿಸಿದ್ದನ್ನು ಇಲ್ಲಿ ಗಮನಿಸಬಹುದು. ನಾಲ್ಕು ಮಿಶನ್ನುಗಳಿಂದ ಆಗಮಿಸಿದ ಮಿಶನರಿಗಳು ತಮ್ಮ ಅಮೂಲ್ಯ ಸಮಯವನ್ನು ಕೆಲವು ಉಪಯುಕ್ತ ಕಾರ್ಯಗಳಿಗೆ ವಿನಿಯೋಗಿಸಿಕೊಂಡು ಅಮರ ಸೇವೆಗೆ ಸಾಕ್ಷಿಗಳಾಗಿದ್ದಾರೆ. 

ಮುಂದಿನ ಸಂಚಿಕೆಯಲ್ಲಿ ಈ ಮೇಲೆ ತಿಳಿಸಿದ ಮಿಶನ್ ಸಂಸ್ಥೆಗಳ ಕಾರ್ಯವೈಖರಿಯ ಬಗ್ಗೆ ತಿಳಿಸಲಾಗುವುದು. 



*********** 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...