Friday, 6 September 2019

ವಿದ್ಯಾರ್ಥಿ ಎಂಬ ಜ್ಯೋತಿಗೆ ಶಿಕ್ಷಕರು ಹಣತೆಯಾಗಬೇಕಲ್ಲವೇ?

ಸಹೋ. ಜಾರ್ಜ್ ಫೆರ್ನಾಂಡಿಸ್ (ಜಾಜಿ) ಎಂ. ದಾಸಾಪುರ

ವಿದ್ಯಾರ್ಥಿಗಳ ಜೀವನದಲ್ಲಿ ಬಹಳ ಮಹತ್ತರವಾದ ಸ್ಥಾನವನ್ನು ವಹಿಸುವುದು ಶಿಕ್ಷಕರು ಎಂದರೆ ತಪ್ಪಾಗಲಾರದು. ಈ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ನೀರೆರೆದು ಪೋಷಿಸುವವರು ಈ ಶಿಕ್ಷಕರೇ ಹೌದು, ಈ ಶಿಕ್ಷಕ ವೃತ್ತಿಯೂ ಸಹ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ.

ಮೊತ್ತ ಮೊದಲನೆಯದಾಗಿ ನಮಗೆ ಶಿಕ್ಷಕರು ಎಂದು ಮೊದಲು ಗೋಚರಿಸಲ್ಪಡುವುದು ನಮ್ಮ ಮನೆಯಲ್ಲಿರುವ ನಮ್ಮ ಅಜ್ಜಿ, ಅಜ್ಜ, ಅಪ್ಪ, ಅಮ್ಮ, ಅಣ್ಣ, ಅಕ್ಕ, ತಮ್ಮ, ತಂಗಿ ಇತ್ಯಾದಿ. ನಾವೆಲ್ಲರೂ ಒಂದು ಕುಟುಂಬದ ಮೂಲಕ ಈ ಸಮಾಜಕ್ಕೆ ಕಾಲಿಡುತ್ತೇವೆ. ಹೀಗೆ ಸಮಾಜಕ್ಕೆ ನಮ್ಮನ್ನು ಪರಿಚಯಿಸಿ, ಅಲ್ಲಿಂದ ಉತ್ತಮ ನಾಗರೀಕರು ನಾವಾಗಬೇಕೆಂದು ನಮಗೆ ಮೂಲಭೂತ ಶಿಕ್ಷಣವನ್ನು ಶಿಕ್ಷಕರಾಗಿ ನಮಗೆ ಕಲಿಸಿಕೊಡುತ್ತಾರೆ. ಹೀಗೆ ನಮಗೆ ಶಿಕ್ಷಕ/ಕಿ ಎಂಬ ಪದ ಕುಟುಂಬದಿಂದಲೇ ಪರಿಚಯವಾಗುತ್ತದೆ. ಅಲ್ಲಿಂದ ಹೊರಟು ಶಾಲೆ ಮೆಟ್ಟಿಲನ್ನು ಹತ್ತುವ ನಮಗೆ ಈ ಶಿಕ್ಷಕ/ಕಿಯರು ಮೊದಲು ಅಪರಿಚಿತರಂತೆ ಕಂಡರೂ ಕಾಲ ಕಳೆದಂತೆ ಅವರೂ ನಮ್ಮ ಮಾರ್ಗದರ್ಶಕರು ಎಂಬುದು ನಮಗೆ ಗೊತ್ತಾಗುತ್ತದೆ. ಇಲ್ಲಿಂದ ನಮ್ಮ ವಿದ್ಯಾರ್ಥಿ ಜೀವನ ಆರಂಭವಾಗುತ್ತದೆ. ಹೀಗೆ ಶಿಕ್ಷಕರ ಮತ್ತು ವಿದ್ಯಾರ್ಥಿಯ ನಡುವೆ ಎಂದೆಂದೂ ಮರೆಯಲಾಗದ ಅವಿನಾಭಾವ ಸಂಬಂಧ ಏರ್ಪಡುತ್ತದೆ. 

ನಮ್ಮ ದೇಶದ ಇತಿಹಾಸದ ಪುಟಗಳನ್ನು ಇಣುಕಿ ನೋಡಿದಾಗ ನಮಗೆ ಈ ಶಿಕ್ಷಕ ಮತ್ತು ವಿದ್ಯಾರ್ಥಿ ಸಂಬಂಧವು ಆಗಿನ ಕಾಲದಲ್ಲಿ ಗುರು ಶಿಷ್ಯರ ಸಂಬಂಧವಾಗಿತ್ತೆಂಬುದು ನಮಗೆ ತಿಳಿಯುತ್ತದೆ. ತಾವು ಕಲಿತದ್ದನ್ನು ತಮ್ಮ ಶಿಷ್ಯರಿಗೆ ಧಾರೆಯೆರೆಯುವುದರ ಮೂಲಕ ಒಬ್ಬ ವ್ಯಕ್ತಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬಲ್ಲ ಎಂಬುದನ್ನು ಅವರು ತೋರಿಸಿಕೊಟ್ಟರು. ಈ ಸಂಬಂಧ ಪ್ರೀತಿಯ ಹಾಗೂ ಸ್ನೇಹದ ಬಾಂಧವ್ಯವನ್ನು ಹೊಂದಿರುತ್ತಿತ್ತು. ಅದೇ ಬಾಂಧವ್ಯವನ್ನು ನಾವು ಈಗಲೂ ಸ್ಮರಿಸುತ್ತೇವಲ್ಲವೇ?

ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತಾ ಹೋಗುತ್ತಿದೆ. ಪ್ರತಿಯೊಂದು ಕ್ಷಣವೂ ವಿಸ್ಮಯಕಾರಿಯಾಗಿ ಗೋಚರವಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಶಿಕ್ಷಣದ ರುವಾರಿಗಳಾದ ಶಿಕ್ಷಕರು ಈ ಸಮಾಜದ ಒಳಿತಿಗಾಗಿ ಎಷ್ಟು ಶ್ರಮಿಸುತ್ತಿದ್ದಾರೆ? ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. ನಾ ಕಂಡಂತೆ ಹಲವಾರು ಶಿಕ್ಷಕ/ಕಿಯರು ತಮ್ಮ ತನುಮನಗಳನ್ನು ಧಾರೆಯೆರೆಯುವುದರ ಮೂಲಕ ತಮ್ಮ ವಿದ್ಯಾರ್ಥಿಗಳನ್ನು ಈ ದೇಶದ ಉತ್ತಮ ಪ್ರಜೆಗಳನ್ನಾಗಿಸಲು ಶ್ರಮಿಸುತಿದ್ದಾರೆ ಎಂದರೆ ತಪ್ಪಾಗಲಾರದು. 

ಈ 21ನೇ ಶತಮಾನದಲ್ಲಿ ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಉತ್ತಮ ನಾಗರೀಕರನ್ನಾಗಿ ಮಾಡಲು ಈ ಶಿಕ್ಷಕರು ತಮ್ಮ ಸರ್ವ ಪ್ರಯತ್ನವನ್ನು ಮಾಡಲೇಬೇಕಾಗಿದೆ. ಕೇವಲ ಪರೀಕ್ಷೆಗಳಲ್ಲಿ ಬಾಯಿಪಾಠ ಮಾಡಿ ಅಂಕಗಳನ್ನು ಪಡೆಯುವಂತೆ ಮಾಡುವುದನ್ನು ತಡೆದು, ಒಬ್ಬ ವ್ಯಕ್ತಿ ಈ ಸಮಾಜದ ಒಳಿತಿಗಾಗಿ ಹೇಗೆ ಶ್ರಮಿಸಬೇಕೆಂಬುದನ್ನು ಕಲಿಸಿಕೊಡಬೇಕಾಗಿದೆ. ನೂರಕ್ಕೆ ನೂರು ಅಂಕಗಳನ್ನು ಪಡೆದವರು ಮಾತ್ರ ಬುದ್ಧಿವಂತರು, ಮತ್ತಿನ್ನೆಲ್ಲರು ದಡ್ಡರು ಎಂಬ ಮಾತನ್ನು ಅಲ್ಲಗಳೆಯಬೇಕಾಗಿದೆ. ಇಂದಿನ ಮಾಧ್ಯಮಗಳ ಹಾವಳಿಯ ಅಲೆಗೆ ಸಲುಕಿ ನಲುಗುತ್ತಿರುವ ಈ ವಿದ್ಯಾರ್ಥಿಗಳ ಜೀವನವನ್ನು ಪುಸ್ತಕದಿಂದಾಚೆ ಮತ್ತು ತರಗತಿಯ ಕೊಠಡಿಯಿಂದಾಚೆ ರೂಪುಗೊಳಿಸಬೇಕಿದೆ. ಮೊದಲು ಬದುಕು ಅಂದರೆ ಏನು ಎಂಬುದನ್ನು ಅವರಿಗೆ ಮನವಿಕೆ ಮಾಡಿಕೊಡಬೇಕಾಗಿದೆ. ಮೌಲ್ಯಯುತ ವ್ಯಕಿಗಳಾಗಿ ಹೇಗೆ ಬಾಳಬೇಕು ಎಂಬುದನ್ನು ತಮ್ಮ ಬೋಧನೆಯ ಮೂಲಕ ಅವರಲ್ಲಿ ಜಾಗೃತಿ ಮೂಡಿಸುವ ಅನಿವಾರ್ಯತೆ ಈಗ ಶಿಕ್ಷಕರ ಕೈಯಲ್ಲಿದೆ.


ಈ ಶಿಕ್ಷಕರು ಮನಸ್ಸು ಮಾಡಿದರೆ ರೋಗಗ್ರಸ್ತವಾಗಿರುವ ಈ ಸಮಾಜವನ್ನು ಸ್ವಚ್ಚ ಸಮಾಜವನ್ನಾಗಿ ಮಾಡಬಹುದು. ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಅವಲೋಕಿಸಿ ನೋಡಿದಾಗ ಅದರಲ್ಲಿ ಕಂಡುಬರುವ ಅಂಶವೇನೆಂದರೆ ವಿದ್ಯಾರ್ಥಿಗಳು ಕೇವಲ ಬಾಯಿಪಾಠದ ಯಂತ್ರಗಳಾಗಿ ಹೊರಹೊಮ್ಮುತ್ತಿದ್ದಾರೆ. ಭಾವನೆಗಳನ್ನು ಅರ್ಥೈಸಿಕೊಂಡು ಅವುಗಳಿಗೆ ಹೇಗೆ ಸ್ಪಂದಿಸಬೇಕು ಎಂಬ ಸಾಮಾನ್ಯ ಅರಿವು ಅವರಿಗಿಲ್ಲವಾಗಿದೆ. ಇಂದಿನ ಶಿಕ್ಷಕರು ಪ್ರಸ್ತುತ ಸಮಾಜದ ಅಗತ್ಯತೆಗಳನ್ನು ಮನಗಂಡು ವಿದ್ಯಾರ್ಥಿಗಳಿಗೆ ಈಗಿನಿಂದಲೇ ಅವುಗಳನ್ನು ಹೇಗೆ ಎದುರಿಸಿ ಮಂದೆ ಹೋಗಬೇಕೆನ್ನುವುದನ್ನು ತಮ್ಮ ಬೋಧನೆಯ ಮೂಲಕ ತಿಳಿಸಿಕೊಡಬೇಕಿದೆ. ಹೀಗೆ ನಿರ್ಜೀವ ಕಲ್ಲಿಗೆ ಜೀವ ಕೊಡುವ ತಾಕತ್ತು ಈ ಶಿಕ್ಷಕರಿಗಿದೆ ಎಂಬುದನ್ನು ಅವರು ಮರೆಯಬಾರದು. ಮುಖದಲ್ಲಿ ಸದಾ ಮಂದಹಾಸವನ್ನು ಸೂಸುತ್ತಾ, ಮುಗುಳುನಗೆಯನ್ನು ಬೀರುತ್ತಾ, ತಮಗೆ ಸಿಗುವ ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸುವ ಹೊಣೆ ಅವರದ್ದಾಗಿದೆ. 

ಈ ಶಿಕ್ಷಕ ವೃತ್ತಿ ಪವಿತ್ರವಾದ ವೃತ್ತಿ ಎಂದು ತಿಳಿದು ಆ ವಿದ್ಯಾರ್ಥಿಗಳ ಜೀವನದಲ್ಲಿ ಸದಾ ಗೆಲುವು ಅವರಿಗೆ ದೊರೆಯಲು ಅವರಿಗೆ ಬೇಕಾದ ಉತ್ಸಾಹ ಎಂಬ ನೀರನ್ನು ದಿನವೂ ಎರೆಯುತ್ತಾ, ಅದೇ ವಿದ್ಯಾರ್ಥಿಗಳು ಮುಂದೊಂದು ದಿನ ಸಾಧನೆಯ ಶೀಖರವನ್ನೇರಲೆಂದು ಪ್ರಾರ್ಥಿಸುವವರು ಈ ಶಿಕ್ಷಕರೆ. ಅಂತೆಯೇ ಅವರು ಸಾಧನೆಗೈದಾಗ ಖುಷಿ ಪಡುವವರು ಈ ಶಿಕ್ಷಕರು ತಾನೇ? ವಿದ್ಯಾರ್ಥಿಗಳ ಪ್ರತಿ ನೋವಿನಲ್ಲೂ ನಲಿವಿನಲ್ಲೂ ಜೊತೆಗಿದ್ದು ಅಮ್ಮನಂತೆ ಮತ್ತು ಅಪ್ಪನ ಹಾಗೆ ಪ್ರೀತಿ ತೋರುತ್ತಾ ತಂದೆತಾಯಿಯ ಸ್ಥಾನವನ್ನು ತುಂಬುವವರು ಈ ಶಿಕ್ಷಕರೆ. ಈ ಶಿಕ್ಷಕರು ತಮ್ಮ ಬಳಿ ಬರುವ ಶಿಷ್ಯ ವೃಂದವನ್ನು ನಿಸ್ವಾರ್ಥತೆಯಿಂದ ತಿದ್ದಿ ತೀಡಿ, ಬದುಕಿನ ಅರ್ಥವನ್ನು ತಮ್ಮ ಪಾಠ ಪ್ರವಚನಗಳ ಮೂಲಕ ಅವರಿಗೆ ತಿಳಿಸಿಕೊಟ್ಟು, ಬದುಕಿನಲ್ಲಿ ಎದುರಾಗುವ ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸಿ ಸಮಾಜದ ಹಾಗೂ ತಮ್ಮ ಕುಟುಂಬಗಳ ಏಳ್ಗೆಗಾಗಿ ಪ್ರತಿಕ್ಷಣವೂ ಅವರು ದುಡಿಯುವಂತೆ ಅವರನ್ನು ಪ್ರೇರೆಪಿಸುವ ಜವಾಬ್ದಾರಿ ನಿಮ್ಮದು ಒಲವಿನ ಶಿಕ್ಷಕರೆ. ಹಾಗಾದರೆ ಈ ಶಿಕ್ಷಕ ವೃತ್ತಿ ಎಷ್ಟೊಂದು ಮೌಲ್ಯವುಳ್ಳದ್ದೆಂದು ನಿಮಗೆ ಗೊತ್ತಲ್ಲವೇ? ಅದಕ್ಕಾಗಿ ನಿಮಗೆಲ್ಲಾ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತಾ ವಿದ್ಯಾರ್ಥಿ ಎಂಬ ಜ್ಯೋತಿಗೆ ಹಣತೆಯು ನೀವಾಗಿ ಅದು ಸದಾ ಸಕರಾತ್ಮಕವಾಗಿ ಪ್ರಜ್ವಲಿಸುವಂತೆ ನೋಡಿಕೊಳ್ಳಿ. 



***********









No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...