Friday, 6 September 2019

ಮರಿಯಾ ಮಾತೆ

- ಸಿ ಮರಿಜೋಸೆಫ್

ನಮ್ಮ ದೇಶ ಹಬ್ಬಗಳ ದೇಶ. ವರ್ಷಾದ್ಯಂತ ಒಂದಲ್ಲ ಒಂದು ಹಬ್ಬಗಳನ್ನು ನಾವು ಆಚರಿಸುತ್ತೇವೆ. ಆದರೆ ಕ್ರೈಸ್ತರಿಗೆ ಇರುವುದು ವರ್ಷಕ್ಕೊಂದೇ ಹಬ್ಬ. ಅದು ಕ್ರಿಸ್ಮಸ್ ಎಂಬ ಪರಿಕಲ್ಪನೆ ಕ್ರೈಸ್ತರಲ್ಲದವರಲ್ಲಿ ಜನಜನಿತವಾಗಿದೆ. ಅದನ್ನು ಸ್ಪಷ್ಟಪಡಿಸಲು ಯಾರೂ ಯತ್ನಿಸಿದಂತಿಲ್ಲ. ಹಾಗೆ ನೋಡಿದರೆ ತಮ್ಮಲ್ಲಿ ಎಷ್ಟೆಲ್ಲ ಹಬ್ಬಗಳಿವೆ ಎಂದು ಕ್ರೈಸ್ತರಿಗೇ ಸರಿಯಾಗಿ ತಿಳಿದಿಲ್ಲ. ಕ್ರೈಸ್ತರಲ್ಲಿಯೂ ಇತರರ ಹಾಗೆಯೇ ಹಲವಾರು ಹಬ್ಬಗಳು ಆಚರಣೆಯಲ್ಲಿವೆ. ಮೂರುರಾಯರ ಹಬ್ಬ, ಪವಿತ್ರ ಕುಟುಂಬದ ಹಬ್ಬ, ಗರಿಗಳ ಹಬ್ಬ, ಪುನರುತ್ಥಾನ ಹಬ್ಬ, ಸ್ವರ್ಗಾರೋಹಣ ಹಬ್ಬ, ಪವಿತ್ರಾತ್ಮನ ಹಬ್ಬ, ಸಂತರ ಹಬ್ಬ, ಹುತಾತ್ಮರ ಹಬ್ಬ, ಪೇತ್ರ-ಪೌಲರ ಹಬ್ಬ, ಲೂರ್ದು ಮಾತೆಯ ಹಬ್ಬ, ಮರಿಯಾ ಮಾತೆಯ ಮೋಕ್ಷಸ್ವೀಕಾರದ ಹಬ್ಬ, ನಿರ್ಮಲ ಮಾತೆಯ ಹಬ್ಬ, ಜಪಮಾಲೆ ಹಬ್ಬ, ಕಾಣ್ಕೆಮಾತೆಯ ಹಬ್ಬ, ಸಮಾಧಿಗಳ ಹಬ್ಬ, ಕ್ರಿಸ್ತರಾಜರ ಹಬ್ಬ, ಆಯಾ ದೇವಾಲಯಗಳ ಹಬ್ಬ, ವನಚಿನ್ನಪ್ಪನವರ ಬೇಡುದಲೆ ಮುಂತಾದವುಗಳನ್ನು ಕ್ರೈಸ್ತರು ಸಂಭ್ರಮಾಚರಣೆಗಳಿಂದ ಆಚರಿಸುತ್ತಾರೆ. 

ಇವಲ್ಲದೆ ದೇಸೀ ಸಂಸ್ಕೃತಿಗೆ ಅನುಗುಣವಾಗಿ ಆರುಕಟ್ಟುಹಬ್ಬ, ನೀರುತುಂಬುವ ಹಬ್ಬ, ಕೊಯ್ಲಿನ ಹಬ್ಬ, ಸುಗ್ಗಿಯ ಹಬ್ಬ, ಬೆಟ್ಟದ ಹಬ್ಬ, ತೆಪ್ಪದ ಹಬ್ಬ, ಬೆಳಕಿನ ಹಬ್ಬ, ಊರಹಬ್ಬ, ತೇರಹಬ್ಬಗಳನ್ನು ಧಾರ್ಮಿಕ ಸಂಸ್ಮರಣೆಯ ದಿನಗಳೊಂದಿಗೆ ಸಮೀಕರಿಸಿ ಆಚರಿಸುವ ಪದ್ಧತಿಗಳೂ ಇವೆ. ಇವೆಲ್ಲದರ ನಡುವೆ ಕ್ರಿಸ್ತದೀಕ್ಷೆ, ಹೊಸ ಸತ್ಪ್ರಸಾದ ಸ್ವೀಕಾರ, ಯಾಜಕದೀಕ್ಷೆ, ಕನ್ಯಾದೀಕ್ಷೆ, ಜುಬಿಲಿ, ಮದುವೆ, ಧಾರಾಮುಹೂರ್ತ, ಕರೆನೆರೆಊಟ, ಮೋಕ್ಷದೀಪ, ನಾಲ್ವತ್ತನೇ ದಿವಸದ ಕಾರ್ಯ ಮುಂತಾದ ಸಂಪ್ರದಾಯಗಳೂ, ವ್ರತನೇಮಗಳೂ ಬದುಕಿನ ಏಕತಾನದ ನಡುವೆ ಅವಿಸ್ಮರಣೀಯವಾಗಿ ಉಳಿಯುವ ರಿವಾಜುಗಳಾಗಿವೆ. 

ಜಾನಪದ ಸಿರಿಸಂಭ್ರಮದಲ್ಲಿ ಕೋಲಾಟದ ಪದಗಳು, ಸೋಬಾನೆ ಪದಗಳು, ಬೀಸೋ ಪದಗಳು, ಜಾವಸ್ತೋತ್ರಗಳು, ಜ್ಞಾನಸುಂದರಿ ನಾಟಕ, ಯೂಸ್ತಾಕಿಯುಸ್ ನಾಟಕ, ಜೋಸೆಫನವರ ನಾಟಕ, ಯೇಸುಸ್ವಾಮಿಯ ಹರಿಕತೆ ಮುಂತಾದವು ಸುಗ್ಗಿಯ ನಂತರದ ಬಿಡುವಿನ ದಿನಗಳಲ್ಲಿ ರಾಗಿ ಬೀಸುವಾಗ, ಹುಣಿಸೆಬೀಜ ಬೇರ್ಪಡಿಸುವಾಗ, ಮದುವೆ ಸಂದರ್ಭಗಳಲ್ಲಿ, ತಪಸ್ಸುಕಾಲದ ಆಚರಣೆಯಲ್ಲಿ ಕ್ರೈಸ್ತರ ಲಲಿತಕಲಾ ಪ್ರೌಢಿಮೆಗೆ ಕನ್ನಡಿಯಾಗುತ್ತವೆ. 

ಈ ಎಲ್ಲ ರಸಪೂರ್ಣ ಕಲಾಭಿವ್ಯಕ್ತಿಯ ನಡುವೆ ನಮ್ಮ ನಾಡಿನ ಸಂಸ್ಕೃತಿಯ ಅಂತರಗಂಗೆಯು ಗುಪ್ತಗಾಮಿನಿಯಾಗಿ ಪ್ರವಹಿಸುತ್ತಿರುವುದು ಸುಳ್ಳೇನಲ್ಲ. ಸುಗ್ಗಿಕಾಲದ ಸಂಕ್ರಾಂತಿಯ ಸಡಗರ ನಮ್ಮಲ್ಲಿ ಮೂರು ರಾಯರ ಹಬ್ಬವಾಗಿ ದನಕರುಕುರಿಗಳ ಅಲಂಕೃತ ಮೆರವಣಿಗೆಯಲ್ಲಿ ವೈಭವ ಪಡೆದುಕೊಳ್ಳುತ್ತದೆ. ಯುಗಾದಿಗೆ ಸಮಾನವಾಗಿ ಗರಿಗಳ ಹಬ್ಬವು ಒಬ್ಬಟ್ಟಿನ ಹಬ್ಬವಾಗಿ ಮಾರ್ಪಡುತ್ತದೆ. ಪುನರುತ್ಥಾನ ಹಬ್ಬವು ಬೆಳಕಿನ ಹಬ್ಬವಾಗುತ್ತದೆ, ಹೊಸ ಸತ್ಪ್ರಸಾದ ಸ್ವೀಕಾರವು ಮಕ್ಕಳ ಮುಂಜಿಯಾಗುತ್ತದೆ, ಯಾಜಕ ದೀಕ್ಷೆಯು ಸಂನ್ಯಾಸತ್ವ ಮತ್ತು ಮಠದ ಪ್ರಭಾವಗಳನ್ನು ಸತ್ವಶಾಲಿಯಾಗಿ ತೋರ್ಪಡಿಸಿದರೆ ಮದುವೆ ತಾಳಿ ಧಾರೆ ಕರೆನೆರೆಗಳು ಸಹಸಮಾಜದ ಭಾವದೀಪ್ತಿಯೊಂದಿಗೆ ಮೈಳೈಸಿದ ಸಂಸ್ಕೃತಿಯ ಅವಿನಾಭಾವ ನಿರೂಪಣೆಯಾಗುತ್ತದೆ. ಇನ್ನು ಕೋಲಾಟ, ನಾಟಕ ಹಾಡುಪಾಡು ಮುಂತಾದ ಜಾನಪದ ಪ್ರಕಾರಗಳಂತೂ ಈ ಮಣ್ಣಿನ ಮಕ್ಕಳ ಸಂವೇದನೆಗಳೊಂದಿಗೆ ಸಹಜವಾಗಿ ಬೆರೆತ ನೆಲದ ಸೊಗಡಾಗುತ್ತವೆ. 

ಇದೇ ನೇರದಲ್ಲಿ ಮಾತೃಪೂಜೆ, ಮಾತೃಸಂಸ್ಕೃತಿ, ಮಾತೃದೇವತೋಪಾಸನೆ ಇತ್ಯಾದಿಗಳೆಲ್ಲ ನಮ್ಮ ನಾಡಿನ ಅತಿ ಪುರಾತನ ನಡಾವಳಿಗಳು ಎಂಬುದನ್ನು ಮನನ ಮಾಡಿಕೊಂಡರೆ ಮೂಲತಃ ಇಲ್ಲಿನ ಮಣ್ಣಿನ ಮಕ್ಕಳೇ ಆದ ಕ್ರೈಸ್ತರು ಯೇಸುಕ್ರಿಸ್ತನ ತಾಯಿಯಾದ ಮಾತೆ ಮರಿಯಮ್ಮನನ್ನು ಶಕ್ತಿರೂಪಿಣಿಯಾಗಿ ಆರೋಗ್ಯದಾಯಿನಿಯಾಗಿ ಆರ್ದ್ರ ಅಂತಃಕರಣದ ಮಮತಾಮಯಿ ವಾತ್ಸಲ್ಯರೂಪಿ ಅಮ್ಮನಾಗಿ ಪರಿಭಾವಿಸುವುದರಲ್ಲಿ ಅತಿಶಯವೇನೂ ಇಲ್ಲ. 

ಯೇಸುವಿನ ಅಮ್ಮ ನಮಗೇ ಅಮ್ಮನಾಗಿ, ಜಗದೋದ್ಧಾರಕನನ್ನೇ ಹೊತ್ತು ಹೆತ್ತ ಅನುಪಮ ಹೆಣ್ಣಾಗಿ, ದೀನತೆಯ ಪ್ರತಿರೂಪವಾಗಿ, ಕರುಣೆಯ ಕಾರಂಜಿಯಾಗಿ, ಭರವಸೆಯ ತಾಯಾಗಿ, ಶಾಂತತೆಯ ಪ್ರತಿರೂಪವಾಗಿ, ಆಪತ್ತಿನಲ್ಲಿ ಆಶಾಕಿರಣವಾಗಿ, ದಿಕ್ಕುಗಾಣದ ಭವಸಮುದ್ರದಲ್ಲಿ ದೆಸೆದೋರುವ ನಕ್ಷತ್ರವಾಗಿ, ದಾವೀದನರಮನೆಯ ಪರಮೋನ್ನತ ಉಪ್ಪರಿಗೆಯ ಅನರ್ಘ್ಯ ಅಲಂಕಾರವಾಗಿ, ಪಾಪದಲ್ಲಿ ಬಿದ್ದವರಿಗೆ ರಕ್ಷಣೆಯ ಸ್ವಾಮಿನಿಯಾಗಿ, ದರಿದ್ರ ಸಂಕಷ್ಟಗಳಲ್ಲಿ ಆಶ್ರಯದಾತೆಯಾಗಿ, ಸಂನ್ಯಾಸಿ ಸಂನ್ಯಾಸಿನಿಯರ ಒಡತಿಯಾಗಿ ತೋರುವುದು ಸೋಜಿಗವೇನಲ್ಲ. 

ಹಾಗೆ ನೋಡಿದರೆ ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ತಾಯಿ ಮರಿಯಳನ್ನು ಪೂಜ್ಯಭಾವದಿಂದ ಕಾಣುವ ಪರಂಪರೆಯೇ ನಮ್ಮ ಕಣ್ಣೆದುರಿಗಿದೆ. ಮೊತ್ತಮೊದಲಿಗೆ ಮರಿಯಾ ಮಾತೆಯನ್ನು ಸ್ತೆಲ್ಲ ಮಾರಿಸ್ ಎಂದರೆ ಸಮುದ್ರದ ನಕ್ಷತ್ರ ಎಂದು ಕರೆದ ಕಾರ್ಮೆಲ್ ಗಿರಿಯ ಮಠವಾಸಿಗಳು ಕಾರ್ಮೆಲ್ ಮಾತೆಯ ಪ್ರಭಾವಳಿಯನ್ನು ಜಗತ್ತಿಗೆಲ್ಲ ಪಸರಿಸಿದರು. 

ಹಾಗೆಯೇ ಸಮುದ್ರಯಾನ ಮಾಡುತ್ತಾ ಹಲವಾರು ನಾಡುಗಳೊಂದಿಗೆ ವಾಣಿಜ್ಯ ಮಾರ್ಗಗಳನ್ನು ಕಲ್ಪಿಸಿದ ಪೋರ್ಚುಗೀಸರು, ಸ್ಪ್ಯಾನಿಷರು, ಫ್ರೆಂಚರು, ಡಚ್ಚರು, ಇಂಗ್ಲಿಷರು ಮೊದಲಾದ ಐರೋಪ್ಯ ನಾವಿಕರೊಂದಿಗೆ ಅವರ ಹಡುಗಳಲ್ಲಿ ತೆರಳಿದ ವಿವಿಧ ದೇಶಿಕ ಕ್ರೈಸ್ತ ಧರ್ಮಪ್ರಚಾರಕರು ಸ್ನಿಗ್ದ ಸೌಂದರ್ಯದ ಗೌರವರ್ಣದ ಕರುಣಾರ್ದ್ರ ನೇತ್ರಗಳ ವಿನಯವೇ ಮೈವೆತ್ತ ಮರಿಯಾ ಮಾತೆಯ ಪುತ್ಥಳಿಗಳನ್ನು ಹೊತ್ತೊಯ್ದು ಪ್ರೇಮಸಿಂಧುವಿನ ವಾತ್ಸಲ್ಯದ ಸಿಂಚನಗೈದರು. 

ನಮ್ಮ ದೇಶದ ಸಂದರ್ಭದಲ್ಲೇ ನೋಡುವುದಾದರೆ ಸುಮಾರು ಒಂದು ಶತಮಾನದ ಹಿಂದೆ ತಮಿಳುನಾಡಿನ ಸಮುದ್ರತೀರದಲ್ಲಿ ಚಂಡಮಾರುತದಿಂದ ಸಂಕಷ್ಟಕ್ಕೀಡಾಗಿದ್ದ ಪೋರ್ಚುಗೀಸರ ವ್ಯಾಪಾರಿ ಹಡಗೊಂದು ನಾವಿಕರ ಪ್ರಾರ್ಥನೆಯ ಫಲವಾಗಿ ಸುರಕ್ಷಿತವಾಗಿ ಲಂಗರು ಇಳಿಸಿದ್ದು ವೇಳಾಂಕಣಿ ಎಂಬ ತಾಣದಲ್ಲಿ. ಅಶಾಂತ ಸಮುದ್ರವನ್ನು ಮಣಿಸಿ ತಮಗೊಂದು ನೆಲೆ ಕರುಣಿಸಿದ ತಾಯಿ ಮರಿಯಳನ್ನು ಮನಸಾರೆ ವಂದಿಸಿದ ಪೋರ್ಚುಗೀಸ್ ನಾವಿಕರು ಆ ನೆಲದಲ್ಲಿ ಸುಂದರ ಚರ್ಚೊಂದನ್ನು ಕಟ್ಟಿ ಮರಿಯಾ ಮಾತೆಗೆ ಸಾಷ್ಟಾಂಗವಾಗಿ ಎರಗಿ ದೇವಪೂಜೆ ಮಾಡಿದರು. ಇಂದಿಗೂ ವೇಳಾಂಕಣಿ ಕ್ಷೇತ್ರವು ಪೂರ್ವ ದೇಶಗಳಲ್ಲೆಲ್ಲ ಅತ್ಯಂತ ಜನಪ್ರಿಯ ತೀರ್ಥಸ್ಥಳವಾಗಿದೆ. 

ಬೆಂಗಳೂರಿನ ಶಿವಾಜಿನಗರದ ಮರಿಯಾ ಮಾತೆಯ ಮಹಾದೇವಾಲಯವು ಮತ್ತೊಂದು ರೀತಿಯಲ್ಲಿ ಪ್ರಸಿದ್ಧವಾಗಿದೆ. ಅಂದು ಬಿಳೇಕಳ್ಳಿ ಎನಿಸಿಕೊಂಡಿದ್ದ ಈ ಪ್ರದೇಶದ ಮಣ್ಣಿಮಕ್ಕಳಾದ ತಿಗುಳ ರೈತಾಪಿವರ್ಗದ ಜನರು ಮೊತ್ತಮೊದಲು ಕ್ರೈಸ್ತ ಧರ್ಮವನ್ನು ಸ್ವೀಕರಿಸಿ ಮರಿಯಾ ಮಾತೆಯನ್ನು ಕಾಣ್ಕೆಮಾತೆ (ದರ್ಶನ ನೀಡಿದ ತಾಯಿ) ಎಂದು ಕರೆದು ಆಕೆಗೊಂದು ಮಂದಿರ ಕಟ್ಟಿ ನಡೆದುಕೊಳ್ಳುತ್ತಿದ್ದರು. ಮುಂದೆ 1813ರಲ್ಲಿ ಕ್ಲೀನೆ ಎಂಬ ಫ್ರೆಂಚ್ ಗುರುಗಳು ಈಗ ಇರುವ ಭವ್ಯ ಗೋಪುರದ ದೇವಾಲಯ ಕಟ್ಟಿದರು. ಒಂದು ಸಂದರ್ಭದಲ್ಲಿ ಈ ಸ್ಥಳದಲ್ಲಿ ಕೋಮುಗಲಭೆ ತಲೆದೋರಿ ಮುಸ್ಲಿಂ ಧರ್ಮದವರು ಈ ಚರ್ಚನ್ನು ಕೆಡವಲು ಉದ್ಯುಕ್ತರಾಗಿ ಮುನ್ನುಗ್ಗಿ ಬಂದಾಗ ಅವರೆಲ್ಲರಿಗೂ ಕಣ್ಣು ಕಾಣದೆ ಹೋಗಿ ತಟ್ಟಾಡಿದರೆಂದೂ, ಆಮೇಲೆ ಮಾತೆಯಲ್ಲಿ ಕ್ಷಮಾಪಣೆ ಕೋರಿದಾಗ ಅವರಿಗೆ ದೃಷ್ಟಿ ಮರಳಿ ಬಂದಿತೆಂದೂ ಪ್ರತೀತಿಯಿದೆ. ಈಗಲೂ ಶಿವಾಜಿನಗರದ ಮರಿಯಾ ಮಾತೆಗೆ ಕ್ರೈಸ್ತರು ಮಾತ್ರವಲ್ಲದೆ ಹಿಂದೂ ಮುಸ್ಲಿಮ್ ಬಾಂಧವರು ಭಕ್ತಿಯಿಂದ ನಡೆದುಕೊಳ್ಳುತ್ತಿರುವುದು ಮಾತ್ರ ಸತ್ಯ. 

ಅದೇ ರೀತಿ ದಾವಣಗೆರೆ ಬಳಿಯ ಹರಿಹರದಲ್ಲಿ ತುಂಬಿ ಹರಿಯುತ್ತಿದ್ದ ತುಂಗಭದ್ರೆಯಲ್ಲಿ ನಿಂತು ಸೂರ್ಯನಿಗೆ ಅರ್ಘ್ಯ ನೀಡುತ್ತಿದ್ದ ಪುರೋಹಿತನೊಬ್ಬ ದಿಢೀರನೇ ಬಂದ ನೆರೆಯಲ್ಲಿ ಸೆಳೆಯಲ್ಪಟ್ಟು ಮುಳುಗತೊಡಗಿದಾಗ ಮರದ ಬೊಂಬೆಯೊಂದು ಅವನನ್ನು ಕೈಹಿಡಿದು ದಡದತ್ತ ಎಳೆದುಹಾಕಿತು. ಸ್ವಲ್ಪ ಸಮಯದಲ್ಲಿ ಆಘಾತದಿಂದ ಹೊರಬಂದ ಆ ವಿಪ್ರನು ತನ್ನನ್ನು ಕಾಪಾಡಿದ ಆ ಬೊಂಬೆಯನ್ನು ಪೂಜ್ಯಭಾವದಿಂದ ಮನೆಗೆ ಕೊಂಡೊಯ್ದು ನಿತ್ಯವೂ ಪೂಜಿಸತೊಡಗಿದ. ಮುಂದೆ ಕ್ರೈಸ್ತ ಯೋಧನೊಬ್ಬನ ಪ್ರವೇಶವಾಗಿ ಆ ಬೊಂಬೆಯು ಮಾತೆ ಮರಿಯಳದೆಂದು ತಿಳಿದುಬಂದು ಆ ವಿಪ್ರನು ಕುಟುಂಬ ಸಮೇತ ಕ್ರೈಸ್ತಧರ್ಮ ಸ್ವೀಕರಿಸಿದನೆಂದು ಐತಿಹ್ಯವಿದೆ. ಹರಿಹರದಲ್ಲಿ ಈಗಲೂ ಕೂಡ ಕರ್ನಾಟಕ ಮಾತ್ರವಲ್ಲದೆ ಗೋವಾ, ತೆಲಂಗಾಣ, ಆಂಧ್ರಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮಾತೆಗೆ ಗೌರವ ಸಲ್ಲಿಸುವುದನ್ನು ನೋಡಬಹುದು. 

ಕಟ್ಟಾ ಸಂಪ್ರದಾಯಸ್ಥ ಯೆಹೂದ್ಯ ಜನಾಂಗದಲ್ಲಿದ್ದರೂ ದೇವರ ಮೇಲೆ ದೃಢನಂಬುಗೆಯಿಟ್ಟು ಕಾನೀನ ಮಗುವನ್ನು ಹೆತ್ತ ಮರಿಯಾ, ತನ್ನ ಪ್ರಿಯಕಂದ ಯೇಸುವನ್ನು ಅಂಗೈ ಮೇಲಿಟ್ಟುಕೊಂಡು ಆಡಿಸಿ ಮುದ್ದಾಡಿ ರಮಿಸಿ ಆತ ದೇವಪುತ್ರನೆಂಬುದನ್ನೂ ಮರೆತು ಧರ್ಮಬೋಧೆ ನೀತಿಬೋಧೆಗಳನ್ನು ಕಲಿಸಿ ಒಳ್ಳೆಯ ತಾಯಾಗಿ, ಒಳ್ಳೆಯ ಶಿಕ್ಷಕಿಯಾಗಿ, ಕಾಳಜಿಪೂರ್ವಕ ಹೆಂಗಸಾಗಿ ತನ್ನ ಕರ್ತವ್ಯವನ್ನು ಪರಿಪಾಲಿಸಿದಳು. ಮಗ ಯೇಸು ತನ್ನ ಮೂವತ್ಮೂರನೇ ವಯಸ್ಸಿನಲ್ಲೇ ಅಪಮಾನಕರ ಶಿಲುಬೆಯ ದಂಡನೆಗೆ ಒಳಗಾದಾಗಲೂ ಕೊನೆಯವರೆಗೂ ಹಿಂಬಾಲಿಸಿ ವ್ಯಾಕುಲ ಮಾತೆಯಾದಳು. ತನ್ನ ಕಣ್ಣಮುಂದೆಯೇ ತನ್ನ ಕರುಳಕುಡಿ ದಾರುಣಮಯವಾಗಿ ಅಸು ನೀಗಿದ್ದನ್ನು ಕಂಡು ಆ ಮಮತಾಮಯಿ ಮಾತೆ ಎಷ್ಟು ಸಂಕಟ ಪಟ್ಟಿರಬಹುದು. ಆದರೂ ಧೈರ್ಯ ತಂದುಕೊಂಡು ಯೇಸುವಿನ ಶಿಷ್ಯರನ್ನು ಸಂತೈಸಿ ಧೈರ್ಯ ತುಂಬಿ ಅವನ ಬೋಧನೆಯೆಲ್ಲವನ್ನೂ ಅವರಿಂದ ಮತ್ತೆ ಬರೆಸಿದ ಮಹಾತಾಯಿ ಮರಿಯಾ. ಯೇಸುವಿನ ಜನನ ವೃತ್ತಾಂತ ಮೊದಲ್ಗೊಂಡು ಯೌವನಾವಸ್ಥೆಯವರೆಗಿನ ಎಲ್ಲ ಕತೆಯನ್ನೂ ಶಿಷ್ಯರಿಗೆ ಅರುಹಿದ್ದು ಈಕೆಯೇ. 

ಸ್ತ್ರೀಯರಲ್ಲೆಲ್ಲ ಶ್ರೇಷ್ಠಳೆನಿಸಿಕೊಂಡ ಆ ಮಹಾಸ್ತ್ರೀ ಕೊನೆಯುಸಿರೆಳೆದಾಗ ಪರಮದಯಾಕರನೂ ಸರ್ವಶಕ್ತನೂ ಆದ ದೇವರು ತನ್ನ ಪುತ್ರನಿಗೆ ಗರ್ಭಾಶ್ರಯ ನೀಡಿದ ಆ ಪವಿತ್ರ ಒಡಲನ್ನು ಮಣ್ಣಾಗಲು ಬಿಡದೆ ಸ್ವರ್ಗಕ್ಕೆ ಶರೀರಸಮೇತ ಕೊಂಡೊಯ್ದು ತನ್ನ ದೂತ ಸಂತರ ಸಮೂಹಕ್ಕೆಲ್ಲ ರಾಣಿಯನ್ನಾಗಿ ಮಾಡಿದರು. ಸೂರ್ಯನನ್ನು ಧರಿಸಿ, ಶೋಭಿಪ ಚಂದ್ರನನ್ನು ಪಾದದಡಿಯಿರಿಸಿ, ಶಿರಸ್ಸಿನಲ್ಲಿ ಹನ್ನೆರಡು ನಕ್ಷತ್ರಗಳ ಅಲಂಕಾರ ಮಾಡಿಕೊಂಡು, ಸೈತಾನನೆಂಬ ಸರ್ಪದ ತಲೆಯನ್ನು ಹಿಮ್ಮಡಿಯಲ್ಲಿ ನಸುಕಿ ಮನುಜರೆಲ್ಲರ ಕಡೆ ತನ್ನ ಕೃಪಾಕಟಾಕ್ಷ ಬೀರುತ್ತಿದ್ದಾಳೆ ಅಮ್ಮ ಮರಿಯಾ. 

ಮರಿ, ಮೇರಿ, ಮರಿಯಾ ಎಂಬ ಹೆಸರೇ ಒಂದು ಅನುಭೂತಿ. ಆಕೆಯ ಮುಖದರ್ಶನವಂತೂ ಬಣ್ಣನೆಗೆ ನಿಲುಕದ ಅಪ್ಯಾಯಮಾನವಾದ ಸಂಗತಿ. ಮರಿಯಾ ಮಾತೆಯೆಂಬ ಆ ತಾಯಿಯ ಕಂಗಳ ಕಾಂತಿ ಜಗವೆಲ್ಲವನ್ನೂ ತನ್ನ ದಯಾರ್ದ್ರ ದೃಷ್ಟಿಯಿಂದ ಈಕ್ಷಿಸುತ್ತಾ ಯೇಸುವಿನ ರಕ್ಷಣೆಯ ಹಾದಿಯಲ್ಲಿ ಕರವಿಡಿದು ಮುನ್ನಡೆಸಲಿ. 

******************** 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...