ಕುರುಡರು ಮತ್ತು ಆನೆ
ವಿಭಿನ್ನ ಮತಗಳ ಮತ್ತು ದೇವರ ಕುರಿತಂತೆ ಹಲವು ಮಂದಿ ಪ್ರಜೆಗಳ ನಡುವೆ ಬಿಸಿಬಿಸಿ ಚರ್ಚೆ ನಡೆಯಿತಾದರೂ ಸರ್ವಸಮ್ಮತವಾದ ಉತ್ತರವೊಂದೂ ಸಿಕ್ಕಲಿಲ್ಲ. ಎಂದೇ, ಅವರು ದೇವರು ನೋಡಲು ಹೇಗಿರುತ್ತದೆ ಎಂಬುದನ್ನು ತಿಳಿಯಲು ಬುದ್ಧನ ಬಳಿ ಬಂದರು. ಒಂದು ಭವ್ಯವಾದ ಆನೆಯನ್ನೂ ನಾಲ್ವರು ಕುರುಡರನ್ನೂ ಕರೆ ತರುವಂತೆ ಬುದ್ಧ ತನ್ನ ಶಿಷ್ಯರಿಗೆ ಆದೇಶಿಸಿದ. ಅವರು ಅಂತೆಯೇ ಮಾಡಿದ ನಂತರ ಅವನು ನಾಲ್ವರು ಕುರುಡರನ್ನು ಅನೆಯ ಹತ್ತಿರ ಕರೆತಂದು ಆನೆ 'ನೋಡಲು' ಹೇಗಿರುತ್ತದೆ ಎಂಬುದನ್ನು ವಿವರಿಸಲು ಹೇಳಿದ.ಮೊದಲನೆಯ ಕುರುಡ ಆನೆಯ ಕಾಲನ್ನು ಮುಟ್ಟಿ ಆನೆ ಕಂಭದಂತಿದೆ ಎಂಬುದಾಗಿ ಹೇಳಿದ. ಎರಡನೆಯವನು ಹೊಟ್ಟೆಯನ್ನು ಮುಟ್ಟಿ ಹೇಳಿದ: "ಗೋಡೆಯಂತಿದೆ." ಮೂರನೆಯವನು ಕಿವಿಯನ್ನು ಮುಟ್ಟಿ ಹೇಳಿದ: "ಬಟ್ಟೆಯ ಚೂರಿನಂತಿದೆ." ನಾಲ್ಕನೆಯವನು ಬಾಲವನ್ನು ಮುಟ್ಟಿ ಹೇಳಿದ: "ಹಗ್ಗದಂತಿದೆ." ತತ್ಪರಿಣಾಮವಾಗಿ ಆನೆ ಹೇಗೆ ಗೋಚರಿಸುತ್ತದೆ ಎಂಬುದರ ಕುರಿತು ಬಿಸಿಬಿಸಿ ಚರ್ಚೆ ಆಯಿತು.
ಬುದ್ಧ ಪ್ರಜೆಗಳನ್ನು ಕೇಳಿದ: "ಪ್ರತೀ ಕುರುಡನೂ ಆನೆಯನ್ನು ಮುಟ್ಟಿದ್ದಾನಾದರೂ ಅವರು ಆನೆಯನ್ನು ಬೇರೆ ಬೇರೆ ರೀತಿಯಲ್ಲಿ ವರ್ಣಿಸಿದ್ದಾರೆ. ಅವರ ಉತ್ತರಗಳ ಪೈಕಿ ಯಾವುದು ಸರಿ?"
ನೀನು ತಪ್ಪು ಬದಿಗೆ ಬೆಣ್ಣೆ ಹಚ್ಚಿದ್ದೀಯ
ಮುಲ್ಲಾ ನಸ್ರುದ್ದೀನ್ ಊರಿನವರಿಗೆ ಒಂದು ಪ್ರವಚನ ನೀಡುತ್ತಿದ್ದ. ಪ್ರವಚನದ ಮಧ್ಯೆ ಒಂದು ಉದಾಹರಣೆ ನೀಡುತ್ತಾ, `ನೀವು ರೊಟ್ಟಿಯ ಒಂದು ಬದಿಗೆ ಬೆಣ್ಣೆ ಹಚ್ಚಿ ಮೇಲಕ್ಕೆ ಎಸೆಯಿರಿ. ನೀವು ಹೇಗೇ ಎಸೆದರೂ ಕೆಳಕ್ಕೆ ಬಿದ್ದಾಗ ಬೆಣ್ಣೆ ಹಚ್ಚಿದ ಬದಿ ಮೇಲಕ್ಕೇ ಇರುತ್ತದೆ' ಎಂದ. ಜನರೆಲ್ಲಾ ಅತ್ಯಂತ ಭಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದರು. ಆದರೆ ಒಬ್ಬ ಕಿಡಿಗೇಡಿ ಹುಡುಗ ಪರಿಶೀಲಿಸೋಣವೆಂದು ತಕ್ಷಣವೇ ತನ್ನ ಬಳಿಯಿದ್ದ ರೊಟ್ಟಿಗೆ ಬೆಣ್ಣೆ ಹಚ್ಚಿ ಮೇಲಕ್ಕೆಸೆದ. ಟಪಕ್ಕನೆ ಬೆಣ್ಣೆ ಹಚ್ಚಿದ ಬದಿ ಕೆಳಕ್ಕೆ ಬಿದ್ದು ಮಣ್ಣಾಯಿತು. ಅದನ್ನು ತೆಗೆದುಕೊಂಡು ಮುಲ್ಲಾನಿಗೆ ತೋರಿಸಿ `ನೋಡಿ, ನೀವು ಹೇಳಿದ್ದು ಸುಳ್ಳು' ಎಂದ. ಮುಲ್ಲಾ ಗಡ್ಡ ನೀವಿಕೊಂಡು ಮುಗುಳ್ನಗುತ್ತಾ, `ಇಲ್ಲಾ ನಾನು ಹೇಳಿದ್ದು ಸರಿಯಿದೆ. ನೀನು ತಪ್ಪು ಬದಿಗೆ ಬೆಣ್ಣೆ ಹಚ್ಚಿದ್ದೀಯ' ಎಂದ."ಧರ್ಮದ ಮೂಲಧರ್ಮ ಉಂಟಲ್ಲ, ಅದಕ್ಕೆ ಧರ್ಮವೇ ಇಲ್ಲ"
ಬುದ್ಧ ಮಹಾಕಶ್ಯಪನಿಗೆ ತಾವರೆ ನೀಡಿ ಮೌನವಾದ...
ಸಭೆಯ ಕೊನೆಗೆ ನುಡಿದ -
"ಧರ್ಮದ ಮೂಲಧರ್ಮ ಉಂಟಲ್ಲ, ಅದಕ್ಕೆ ಧರ್ಮವೇ ಇಲ್ಲ".'"ಸ್ವಾಮೀ ಈಗ ನಿಮ್ಮ ಇಡೀ ಜೀವನ ವ್ಯರ್ಥವಾಗುತ್ತದೆ"
ಒಂದು ಬಾರಿ ಮುಲ್ಲಾ ನಸ್ರುದ್ದೀನ್‌ದೋಣಿಯಲ್ಲಿ ಪ್ರಯಾಣ ಬೆಳೆಸುತ್ತಿದ್ದ. ಅವನಂತೆಯೇ ಒಂದಿಷ್ಟು ಸಹಯಾತ್ರಿಕರು ದೋಣಿಯಲ್ಲಿದ್ದರು. ಎಲ್ಲರೂ ಒಂದೇ ಮಟ್ಟದ ಬುದ್ಧಿವಂತರಾಗಿದ್ದರು. ಅದೇ ದೋಣಿಯಲ್ಲಿ ಪರವೂರಿನ ವ್ಯಕ್ತಿಯೊಬ್ಬನಿದ್ದ. ನೋಡಲು ಉತ್ತಮ ಬಟ್ಟೆಬರೆಯನ್ನು ಧರಿಸಿ ಪಂಡಿತನಂತೆ ಕಾಣುತ್ತಿದ್ದ ಅವನ ಮುಖದಲ್ಲಿ ಗರ್ವ ಎದ್ದು ಕಾಣುತ್ತಿತ್ತು. ಅವನು ನಸ್ರುದ್ದೀನ್‌ಮುಲ್ಲಾನಲ್ಲಿ ಮಾತಿಗೆ ಆರಂಭಿಸಿದ. ಹೀಗೆ ಮಾತನಾಡುವಾಗ ಮುಲ್ಲಾ ಒಂದು ಪದವನ್ನು ತಪ್ಪಾಗಿ ಉಚ್ಚರಿಸಿದ. ಪಂಡಿತ ಇದನ್ನು ಕೇಳಿ ಮುಲ್ಲಾನನ್ನು ಹಾಸ್ಯ ಮಾಡುತ್ತಾ ಜೀವನದಲ್ಲಿ ನೀನು ಒಮ್ಮೆಯೂ ಅಕ್ಷರಗಳ ಉಚ್ಚಾರವನ್ನೇ ಕಲಿತಿಲ್ಲವೇ ಎಂದು ಕೇಳುತ್ತಾನೆ. ಇಲ್ಲ ಎಂದ ಮುಲ್ಲಾನಿಗೆ ಹಾಗಾದರೆ ನಿನ್ನ ಅರ್ಧ ಜೀವನ ವ್ಯರ್ಥವಾಯಿತಲ್ಲ ಎನ್ನುತ್ತಾನೆ. ಅಷ್ಟೊತ್ತಿಗೆ ಗಾಳಿ ಜೋರಾಗಿ ಬೀಸಿ ದೋಣಿ ಅಲುಗಾಡಲಾರಂಭಿಸುತ್ತದೆ. ಆಗ ಮುಲ್ಲಾ ಪಂಡಿತನಿಗೆ ತಮಗೆ ಈಜಲು ಬರುತ್ತದೆಯೋ ಎಂದು ಕೇಳುತ್ತಾನೆ. ಇಲ್ಲ ಎನ್ನುತ್ತಾನೆ ಪಂಡಿತ. ಆಗ ಮುಲ್ಲಾ ಅವನಿಗೆ "ಸ್ವಾಮೀ ಈಗ ನಿಮ್ಮ ಇಡೀ ಜೀವನ ವ್ಯರ್ಥವಾಗುತ್ತದೆ. ಯಾಕೆಂದರೆ ದೋಣಿ ಮುಳುಗುತ್ತಿದೆ. ಬದುಕಬೇಕಾದರೆ ನೀರಿಗೆ ಹಾರಿ ಈಜಲೇಬೇಕು" ಎಂದು ಹೇಳಿ ನೀರಿಗೆ ಹಾರುತ್ತಾನೆ.'
*******************
No comments:
Post a Comment