Thursday, 7 November 2019

ಸಂತ ಯೊವಾನ್ನರ ಶುಭಸಂದೇಶ –14

ಸಂತ ಯೊವಾನ್ನರ ಶುಭಸಂದೇಶ ಮತ್ತು ಸಮನ್ವಯ ಶುಭಸಂದೇಶಗಳ (ಮಾರ್ಕ, ಮತ್ತಾಯ ಮತ್ತು ಲೂಕ) ಮಧ್ಯೆ ಇರುವಂತಹ ತುಲನಾತ್ಮಕ ವಿಶ್ಲೇಷಣೆ. ಇಲ್ಲಿ ನಾವು ಎರಡು ಶುಭಸಂದೇಶಗಳ ಮಧ್ಯೆ ಏನು ಸಾಮ್ಯತೆಗಳಿವೆ ಎನ್ನುವುದರ ಬಗ್ಗೆ ನೋಡೋಣ. 

ಸಮಾನತೆಗಳು
1. ಸಂತ ಯೊವಾನ್ನರ ಶುಭಸಂದೇಶವು ಮತ್ತು ಸಮನ್ವಯ ಶುಭಸಂದೇಶಗಳೆಲ್ಲವೂ ಒಂದೇ ಸಂಪ್ರದಾಯದ ಅಡಿಪಾಯದ ಮೇಲೆ ನಿಂತಿದೆ; ಅದೇನೆಂದರೆ ಸಾಹಿತ್ಯದ ಪ್ರಕಾರ. ಈ ಎಲ್ಲಾ ಶುಭಸಂದೇಶಗಳಲ್ಲಿ  ಕಾಣುವಂತಹ ಸಾಹಿತ್ಯದ ಪ್ರಕಾರ ಒಂದೇ- ಅದು ಶುಭಸಂದೇಶದ ಸಾಹಿತ್ಯದ ಪ್ರಕಾರವಾಗಿದೆ. 
2. ಯೊವಾನ್ನರ ಶುಭಸಂದೇಶ ಮತ್ತು ಸಮನ್ವಯ ಶುಭಸಂದೇಶಗಳು ಯೇಸುಸ್ವಾಮಿಯ ಜನನ, ಜೀವನ, ಬೋಧನೆ, ಮರಣ ಹಾಗೂ ಪುನರುತ್ಥಾನದಿಂದ ಕೂಡಿವೆ. (ಸಂತ ಯೊವಾನ್ನರ ಶುಭಸಂದೇಶದಲ್ಲಿ ಯೇಸುಸ್ವಾಮಿಯ ಜನನದ ಪ್ರಕರಣ ಇಲ್ಲವಷ್ಟೇ) ಇವೆಲ್ಲವೂ ಕ್ರಿಸ್ತ ಕೇಂದ್ರಿತ ಶುಭಸಂದೇಶಗಳಾಗಿವೆ. ಕ್ರಿಸ್ತನ ಕಾರ್ಯಗಳನ್ನು ಕಥಾವಸ್ತುವನ್ನಾಗಿಟ್ಟುಕೊಂಡು, ಕ್ರಿಸ್ತನನ್ನ ಕಥಾನಾಯಕನನ್ನಾಗಿಟ್ಟುಕೊಂಡು ಈ ಶುಭಸಂದೇಶಗಳನ್ನು ಬರೆಯಲಾಗಿವೆ. 
3. ಈ ಶುಭಸಂದೇಶಗಳಲ್ಲಿ ಒಂದು ಸಾಮ್ಯತೆ ಎದ್ದು ಕಾಣುವುದೆಂದರೆ; ಅದು ಯೇಸುಸ್ವಾಮಿಯ ಬಹಿರಂಗ ಜೀವನ ಹಾಗೂ ದೈವೀ ರಾಜ್ಯದ ಕಾರ್ಯ ಪ್ರಾರಂಭವಾದದ್ದು ಎರಡು ಪ್ರಮುಖ ಪಟ್ಟಣಗಳಲ್ಲಿ ಅವು ಗಲಿಲೇಯ ಮತ್ತು ಜೆರುಸಲೇಮ್. 
4. ಕೆಲವು ಪ್ರಮುಖ ವ್ಯಕ್ತಿಗಳು ಹಾಗೂ ಸ್ಥಳಗಳು ಯೇಸುಸ್ವಾಮಿಯ ಬಹಿರಂಗ ಜೀವನಕ್ಕೆ ಮತ್ತು ದೈವೀ ರಾಜ್ಯದ ಕಾರ್ಯಕ್ಕೆ ಹೊಂದಿಕೊಂಡಿವೆ. ಇಲ್ಲಿ ಬರುವಂತಹ ವ್ಯಕ್ತಿಗಳು ಹಾಗೂ ಸ್ಥಳಗಳು ಸಮಾನತೆಯನ್ನು ಹೊಂದಿವೆ. ಉದಾಹರಣೆಯಾಗಿ- ವ್ಯಕ್ತಿಗಳು - ಮಾತೆ ಮೇರಿ, ಸ್ನಾನಿಕ ಯೋವಾನ್ನ, ಮಗ್ದಲದ ಮರಿಯ, ಮೇರಿ ಹಾಗೂ ಮಾಥ9. ಸ್ಥಳಗಳು - ಬೆಥನಿ, ಕಫೇರ್ನಾವುಮ್, ಗಲಿಲೀಯ ಹಾಗೂ ಜೆರುಸಲೇಮ್. 
5. ಕೆಲವೊಂದು ಯೇಸುಸ್ವಾಮಿಯ ವಾಕ್ಯಗಳಲ್ಲಿ ಸಮಾನತೆಯನ್ನು ಈ ಶುಭಸಂದೇಶಗಳಲ್ಲಿ ಕಾಣಬಹುದಾಗಿದೆ. ಉದಾಹರಣೆಗೆ - ಯೊವಾನ್ನ 2:19, 4:44, 12:25-26, 13:16, 13:20 & 15:20 ಈ ಉಲ್ಲೇಖಗಳು ಬೇರೆ ಶುಭಸಂದೇಶದಲ್ಲಿಯೂ ಕಾಣಬಹುದು. 
6. ಸಂತ ಯೊವಾನ್ನ ಶುಭಸಂದೇಶದಲ್ಲಿ ಪ್ರತಿಯೊಂದು ಪವಾಡಕೊಂದು ಅರ್ಥವಿದೆ; ಇಲ್ಲಿ ಅದನ್ನು ಪವಾಡ ಎನ್ನದೆ ಅದೊಂದು ಸಂಕೇತ, ಚಿನ್ನೆ ಅಥವಾ ಸೂಚನೆ ಎಂದು ಕರೆಯಲಾಗುತ್ತದೆ. ಇದಕ್ಕಾಗಿಯೇ ಈ ಶುಭಸಂದೇಶದಲ್ಲಿ ಕೊಂಚ ಬೇರೆ ಹಾಗೂ ವಿಭಿನ್ನ ಪವಾಡಗಳನ್ನು ನಾವು ಕಾಣಬಹುದಾಗಿದೆ. ಆದರೂ ಇಲ್ಲಿ ಎರಡು ಪವಾಡಗಳು ಪುನರಾವರ್ತನೆಯಾಗಿವೆ. ಮೊದಲನೆಯದು - ಯೇಸುಸ್ವಾಮಿ ರೊಟ್ಟಿಯ ಪವಾಡ ಮಾಡಿದ್ದು ಹಾಗೂ ಎರಡನೆಯದು - ಯೇಸುಸ್ವಾಮಿ ನೀರಮೇಲೆ ನಡೆದ ಪವಾಡ. 
7. ಇನ್ನು ಕೆಲವು ಸಾಹಿತ್ಯದ ಪ್ರಕಾರಗಳು ಒಂದೇ ರೀತಿ ಇದೆ. ಸ್ನಾನಿಕ ಯೊವಾನ್ನರ ಕುರಿತು, ದೇವಾಲಯವನ್ನು ಶುದ್ಧೀಕರಿಸುವುದರ ಕುರಿತು, ಯೇಸುಸ್ವಾಮಿ ಜೆರುಸಲೇಮ್ ನಗರವನ್ನು ಪ್ರವೇಶಿಸುವುದರ ಕುರಿತು ಹಾಗೂ ಬಹುಪಾಲು ಯೇಸುಸ್ವಾಮಿಯ ಯಾತನೆ ಕುರಿತು ಈ ಎರಡು ಶುಭಸಂದೇಶಗಳಲ್ಲಿ ಒಂದೇ ಆದಂತಹ ಸಾಹಿತ್ಯ ಪ್ರಕಾರಗಳನ್ನು ಹೊಂದಿದೆ. ಇವೆಲ್ಲವೂ ಸಮಾನತೆಯನ್ನು ಹೊಂದಿವೆ ಎನ್ನುವುದರ ವಿಷಯವಾಗಿ ಕುರಿತಾದಂತಹ ಅಂಶಗಳಾಗಿವೆ. ಈಗ ವಿಭಿನ್ನತೆಗೆ ಹೋಗುವುದಕ್ಕಿಂತ ಮುಂಚೆ ಕೆಲವು ವಿಷಯಗಳು ತೀರಾ ವಿಭಿನ್ನವಾಗದೆ ಕೊಂಚ ಬೇರೆ ರೀತಿಯಾಗಿ ಅಥವಾ ಕೊಂಚ ಬದಲಾದ ರೀತಿಯಲ್ಲಿ ಬಿಂಬಿಸಲಾಗಿವೆ. ಅವುಗಳನ್ನು ನಾವು ಮೊದಲು ನೋಡೋಣ. ಉದಾಹರಣೆ - ಯೊವಾನ್ನರ ಶುಭಸಂದೇಶ 4:46- 54 - ಯೇಸುಸ್ವಾಮಿ ಇಲ್ಲಿ ಒಬ್ಬ ಯೆಹೂದಿ ಅಧಿಕಾರಿಯ ಮಗನನ್ನು ಗುಣಪಡಿಸುತ್ತಾರೆ. ಬಹಳಷ್ಟು ಮಂದಿ ಇದನ್ನು ಮತ್ತಾಯ 8:5-12 ಮತ್ತು ಲೂಕ 7: 1- 10ರಲ್ಲಿ ಬರುವ ಶತಾಧಿಪತಿಯ ಸೇವಕನು ಪವಾಡಕ್ಕೆ ತಾಳೆ ಹಾಕುತ್ತಾರೆ. ಸಮಾನವಾದಂತಹ ಅಂಶಗಳನ್ನು ಕಂಡರೂ ಸಹ ಇಲ್ಲಿ ಒಂದು ಸಣ್ಣ ವಿಭಿನ್ನತೆ ಎಂದರೆ ಯೊವಾನ್ನರ ಶುಭಸಂದೇಶದಲ್ಲಿ ಯೆಹೂದಿ ಅಧಿಕಾರಿಯ ಮಗ ಗುಣವಾದರೆ, ಬೇರೆ ಶುಭಸಂದೇಶಗಳಲ್ಲಿ ಶತಾಧಿಪತಿಯ ಮಗ ಗುಣ ಹೊಂದುತ್ತಾನೆ. 
2. ಯೊವಾನ್ನರ ಶುಭಸಂದೇಶ 12:1-18 ರಲ್ಲಿ ಯೇಸುಸ್ವಾಮಿಯನ್ನು ಒಬ್ಬ ಮಹಿಳೆ ಅಭ್ಯಂಗಿಸುತ್ತಾಳೆ. ಇದನ್ನು ಕೆಲವರು ಮತ್ತಾಯ 26: ಹಾಗೂ ಮಾಕ9 14:3-9 ದಲ್ಲಿ ಬರುವ ಮಹಿಳೆಯ ಸನ್ನಿವೇಶಕ್ಕೆ ತಾಳೆ ಹಾಕುತ್ತಾರೆ. ಇಲ್ಲಿ ಒಂದು ಸಮಾನತೆಯ ಅಂಶವೆಂದರೆ ಎರಡು ಅಭ್ಯಂಜನಗಳು ನಡೆಯುವುದು ಬೆಥನಿ ಎಂಬ ಸ್ಥಳದಲ್ಲಿಯೇ. ಆದರೆ ಕೊಂಚ ವಿಭಿನ್ನತೆಯನ್ನು ನಾವು ಕಾಣಬಹುದಾಗಿದೆ. 
- ಯೊವಾನ್ನರ ಶುಭಸಂದೇಶದಲ್ಲಿ ಈ ಅಭ್ಯಂಜನ ನಡೆಯುವುದು ತನ್ನ ಆಪ್ತ ಸ್ನೇಹಿತನಾದ ಲಾಜ಼ರನ ಮನೆಯಲ್ಲಿ. ಮಾರ್ಕ ಮತ್ತು ಮತ್ತಾಯನ ಶುಭಸಂದೇಶಗಳಲ್ಲಿ ಅಭ್ಯಂಜನ ನಡೆಯುವುದು ಕುಷ್ಟ ರೋಗಿ ಸೀಮೋನ ಎಂಬ ವ್ಯಕ್ತಿಯ ಮನೆಯಲ್ಲಿ. 

- ಯೊವಾನ್ನರ ಶುಭಸಂದೇಶದಲ್ಲಿ ಲಾಜ಼ರನ ಸಹೋದರಿ ಮೇರಿ ಈ ಅಭ್ಯಂಜನವನ್ನು ಮಾಡುತ್ತಾಳೆ ಆದರೆ ಮಾರ್ಕ ಮತ್ತು ಮತ್ತಾಯನ ಶುಭಸಂದೇಶದಲ್ಲಿ ಅನಾಮಧೇಯ ಮಹಿಳೆ ಈ ಅಭ್ಯಂಜನವನ್ನು ಮಾಡುತ್ತಾಳೆ.

ಸಹೋ. ವಿನಯ್ ಕುಮಾರ್

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...