ಊರ್ ಗ್ರಾಮದಿಂದ ಕಾನಾನಿಗೆ ಪ್ರಯಾಣಿಸುವ ಸಂದರ್ಭದಲ್ಲಿ ಅಬ್ರಹಾಮ ಮತ್ತು ಸಾರ ಫರೋಹನ ತೊಂದರೆಗೆ ಸಿಲುಕಿ ದೇವರ ಮಧ್ಯೆ ಪ್ರವೇಶದಿಂದ ಪಾರಾದ ಸಂಗತಿಯಂತೂ ನಮಗೆ ಗೊತ್ತೇ ಇದೆ. ಅವರಿಬ್ಬರೂ ಅಂತಃಪುರದಿಂದ ತೆರಳುವಾಗ ಫರೋಹನು ಅವರಿಗೆ ಕುರಿಮೇಕೆಗಳನ್ನು, ದಾಸ ದಾಸಿಯರನ್ನೂ, ಒಂಟೆಗಳನ್ನೂ ಇನ್ನೂ ಮುಂತಾದುವುಗಳನ್ನು ಕೊಟ್ಟನು. ಬಹುಶಃ ಹಾಗರಳು ಆ ದಾಸದಾಸಿಯರ ಕೊಡುಗೆಯಲ್ಲಿ ಒಬ್ಬಳಾಗಿರಬಹುದು. ಹಾಗಾಗಿ ಅವಳು ಈಜಿಪ್ಟಿನವಳು.
ಈಜಿಪ್ಟಿನ ದಾಸಿ ಹಾಗೂ ಸಾರಾಳ ಪ್ರತಿಸ್ಪರ್ಧಿಯಾಗಿದ್ದರೂ ಹಾಗರಳಿಗೆ ಹೆಮ್ಮೆ ಪಡಲು ಒಂದು ಆನಂದದ ಸಂಗತಿ ಇದ್ದೇ ಇದೆ. ಅದೇನೆಂದರೆ ಅವಳ ಪರವಾಗಿ ದೇವರು ಒಮ್ಮೆ ಅಲ್ಲ ಎರಡು ಬಾರಿ ಪ್ರೀತಿಯಿಂದ ಮಧ್ಯೆ ಪ್ರವೇಶಿಸಿದ್ದು. ಇನ್ನು ಹಾಗರಳು ಅಬ್ರಹಮನ ಸಂತತಿ ಬೆಳೆಸಲು ಒಪ್ಪಿದಳಾದರೂ ಅವಳೊಬ್ಬಳು ಮುಗ್ಧೆ. ಯಜಮಾನಿಯ ಅಜ್ಞೆಯನ್ನು ವಿರೋಧಿಸಲು ಅಲ್ಪ ಶಕ್ತಿ ಹೊಂದಿದವಳಾಗಿದ್ದಳು. ಸಾರಾಳು ಅಬ್ರಹಾಮನನ್ನು ತನ್ನ ದಾಸಿಯೊಂದಿಗೆ ಮಲಗಲು ಹೇಳಿದಾಗ, ಆ ಮುಗ್ಧ ದಾಸಿಯು ಆಧ್ಯಾತ್ಮಿಕ ವಿಪತ್ತಿನ ಜೀವನಕ್ಕೆ ಹೆಜ್ಜೆ ಇಡಬೇಕಾಗಿ ಬರುತ್ತದೆ. ಇದರ ಪರಿಣಾಮವಾಗಿ ಅವಳು ಗರ್ಭವತಿಯಾಗಿ ಗರ್ವದಿಂದ ಅಬ್ರಹಾಮನಿಗೆ ಹತ್ತಿರವಾಗ ತೊಡಗಿದಳು. ಇದನ್ನು ಕಂಡ ಸಾರಾಳು ತಾತ್ಸಾರಗೊಂಡು ಹೊಟ್ಟೆಕಿಚ್ಚಿನಿಂದ ಹಾಗರಳಿಗೆ ಕಿರುಕುಳ ಕೊಡಲು ಪ್ರಾರಂಭಿಸಿದಾಗ, ಆ ಕಿರುಕುಳವನ್ನು ತಾಳಲಾರದೆ ಹಾಗರಳು ಓಡಿಹೋಗುತ್ತಾಳೆ. ಅವಳಿಗೆ ಇದೊಂದು ಹತಾಶೆ ನಡೆಯಾಗಿತ್ತು.
ಹಾಗರಳು ಓಡಿಹೋಗುತ್ತಿರುವ ಸಂದರ್ಭದಲ್ಲಿ ಅವಳಿಗೆ ದೇವದೂತನ ವಾಣಿಯೊಂದು ಕೇಳಿಬರುತ್ತದೆ. ಆ ವಾಣಿಯು ಸಾರಾಳ ದಾಸಿ ಹಾಗರಳೇ, ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿರುವೆ ಎನ್ನಲು ಅವಳು ತಾನು ತನ್ನ ಯಜಮಾನಿಯಾದ ಸಾರಾಳ ಬಳಿಯಿಂದ ಹೋಗುತ್ತಿರುವುದಾಗಿ ತಿಳಿಸುತ್ತಾಳೆ. ಪ್ರತ್ಯುತ್ತರವಾಗಿ ಆ ವಾಣಿಯು,
" ನಿನ್ನ ಯಜಮಾನಿಯ ಬಳಿಗೆ ಹಿಂತಿರುಗು ಅವಳಿಗೆ ತಗ್ಗಿ ನಡೆದುಕೋ ನಿನ್ನ ಸಂತಾನವನ್ನು ಲೆಕ್ಕಿಸಲಾಗದಷ್ಟು ದೊಡ್ಡದಾಗಿಸುವೆನು ಹುಟ್ಟುವನು ಮಗನೊಬ್ಬನು ಗರ್ಭಿಣಿಯಾದ ನಿನಗೆ ಇಸ್ಮಾಯೇಲೆಂಬ ಹೆಸರನು ಇಡು ಅವನಿಗೆ ಕಾರಣ- ಸರ್ವೇಶ್ವರ ಕಿವಿಗೊಟ್ಟಿಹನು ನಿನ್ನ ಮೊರೆಗೆ ಬಾಳುವನು ಅವನು ಕಾಡುಗತ್ತೆಯಂತೆ ಎತ್ತುವನು ಕೈಯನು ಎಲ್ಲರ ಮೇಲೆ ಎತ್ತುವರೆಲ್ಲರೂ ಕೈ ಅವನ ಮೇಲೆ ಬಾಳುವನು ಸೋದರರಿಗೆ ಎದುರು-ಬದುರಾಗೆ" ಎಂದಿತು.
ಬೈಬಲ್ ನಲ್ಲಿ ದಾಖಲಾಗಿರುವ ದೇವದೂತನ ವರದಿಗಳಲ್ಲಿ ಇದೇ ಮೊದಲನೆಯದು. ದೂತನ ಬೇಟಿ ಹಾಗೂ ಆಶ್ವಾಸನೆ ಪಡೆದವರಲ್ಲಿ ಹಾಗರಳೇ ಪ್ರಥಮಳು. ಪೂರ್ವಜರ ವಂಶವೃಕ್ಷದಲ್ಲಿ ಗಂಡುಮಗುವಿನ ಜನನದ ಪ್ರಕರಣ ಮೊದಲನೆಯದು. ಸಾರಾಳಿಗೆ ಸಿಕ್ಕ ವಾಗ್ದಾನದಂತೆ ಹಾಗರಳಿಗೂ ದೊಡ್ಡ ಸಂತಾನ ಪ್ರಾಪ್ತಿಯಾಗುವ ಆಶ್ವಾಸನೆ ಸಿಗುತ್ತದೆ. ಅಂತೆಯೇ ಹಾಗರಳು ಯಜಮಾನಿಯ ಬಳಿಗೆ ಹಿಂದಿರುಗಬೇಕಾಯಿತು. ದಾಸಿಯು ಯಜಮಾನಿಯ ಬಳಿಯಲ್ಲೇ ಇದ್ದು ತಗ್ಗಿ-ಬಗ್ಗಿ ನಡೆಯುವುದು ಪೂರ್ವಜರ ನಿಯಮ ಹಾಗೂ ವಾಡಿಕೆಯಾಗಿತ್ತು.
ದೂತನ ಮುಖೇನ ದೇವರ ಮಾತುಗಳನ್ನು ಕೇಳಿ ಹಾಗರಳು ಉಲ್ಲಾಸಭರಿತಳಾಗಿ, 'ನನ್ನನ್ನು ನೋಡುವಾತ ದೇವರನ್ನು ನಾನಿಲ್ಲೇ ನೋಡಿಬಿಟ್ಟೆನಲ್ಲ' ಎಂದುಕೊಂಡು ಅವರಿಗೆ 'ಎಲ್ಲವನ್ನೂ ನೋಡುವಾತ ದೇವರು' ಎಂದು ಹೆಸರಿಟ್ಟಳು. ಅಂತೆಯೇ ಅಲ್ಲಿದ್ದ ಬಾವಿಗೆ 'ಲಹೈರೋಯಿ' ಎಂದರೆ 'ನನ್ನನ್ನು ನೋಡುವ ಜೀವ ಸ್ವರೂಪನ ಬಾವಿ' ಎಂದು ಹೆಸರಾಯಿತು.
ಜನರೆಲ್ಲರೂ ಅವಳನ್ನು ದಾಸಿ ಎಂದು ಕರೆದರೆ ದೇವರು ಮಾತ್ರ ಅವಳನ್ನು ಹಾಗರ ಎಂದು ಹೆಸರಿಡಿದು ಕರೆಯುತ್ತಾರೆ. ಅವಳ ಮಾತನ್ನು ಆಲಿಸಿ, ಅವಳನ್ನು ಒಂದು ಜನಾಂಗದ ತಾಯಿ ಎಂದು ಕರೆಯುತ್ತಾರೆ. ದೇವರಿತ್ತ ವಾಗ್ದಾನದಂತೆ ಹಾಗರಳು ಒಂದು ಗಂಡು ಮಗುವಿಗೆ ಜನ್ಮವಿತ್ತು ಅವನನ್ನು ಇಸ್ಮಾಯೇಲ್ ಎಂದು ಹೆಸರಿಸುತ್ತಾಳೆ.
ಸುಮಾರು ಹದಿನಾರು ವರ್ಷಗಳ ನಂತರ ಇಸ್ಮಾಯೇಲ್ ಮತ್ತು ಈಸಾಕ ಇಬ್ಬರೂ ದೊಡ್ಡವರಾಗಿ ಜೊತೆಗೆ ಆಡಿ ನಲಿದಾಡುತ್ತಿರುವುದನ್ನು ಕಂಡು ಸಾರಳಿಗೆ ಹೊಟ್ಟೆಕಿಚ್ಚು ಹುಟ್ಟುತ್ತದೆ. ತನ್ನ ಮಗ ಈಸಾಕನಂತೆ ಇಸ್ಮಾಯೇಲನು ಸಹ ಆಸ್ತಿಯಲ್ಲಿ ಸಮಾನ ಬಾಧ್ಯಸ್ಥನಾಗುವನೆಂದು ತಿಳಿದು ಅವನನ್ನು ಮತ್ತು ಅವನ ತಾಯಿ ಹಾಗರಳನ್ನು ಮನೆಯಿಂದ ಹೊರದೂಡಲು ಅಬ್ರಹಾಮನಿಗೆ ಹೇಳಿಬಿಡುತ್ತಾಳೆ. ಅವಳ ಮಾತಿಗೆ ಕಿವಿಗೊಟ್ಟ ಅಬ್ರಹಾಮನು ಹಾಗೆಯೇ ಮಾಡುತ್ತಾನೆ. ಇದರ ಪರಿಣಾಮವಾಗಿ ಹಾಗರಳು ತನ್ನ ಮಗನೊಂದಿಗೆ ಬೆರ್ಷೆಬಾ ಎಂಬ ಕಾಡಿನಲ್ಲಿ ಅಲೆಯಬೇಕಾಗುತ್ತದೆ. ಕಟ್ಟಿ ತಂದ ಊಟ ನೀರು ಎಲ್ಲಾ ಮುಗಿದ ಮೇಲೆ ಇಸ್ಮಾಯೇಲನ ಸ್ಥಿತಿ ನೋಡಲಾಗದೆ ಅವನನ್ನು ದೂರದ ಪೊದೆಯಲ್ಲಿಟ್ಟು ಜೋರಾಗಿ ಅಳುವಾಗ ಅಲ್ಲಿ ಒಂದು ಚಿಲುಮೆ ಕಾಣುತ್ತದೆ. ಇಸ್ಮಾಯೇಲ್ ಎಂಬ ಹೆಸರಿಗೆ ತಕ್ಕಂತೆ ದೇವರು ಅವರ ಮೊರೆಯನ್ನು ಆಲಿಸುತ್ತಾರೆ. ಚಿಲುಮೆಯಲ್ಲಿನ ನೀರು ಕುಡಿದು ಅವರಿಬ್ಬರೂ ತೃಪ್ತರಾಗುತ್ತಾರೆ. ಅಲ್ಲಿ ಅವರಿಗೆ ಮತ್ತೊಮ್ಮೆ ದೂತನ ವಾಣಿ ಕೇಳಿಬರುತ್ತದೆ. ಆ ವಾಣಿ ಹೀಗೆನ್ನುತ್ತದೆ "ಹಾಗರಳೇ, ನಿನಗೇನು ಆಯಿತು? ಅಂಜಬೇಡ; ಆ ಹುಡುಗನು ಬಿದ್ದಿರುವ ಸ್ಥಳದಿಂದಲೇ ಅವನ ಕೂಗು ದೇವರನ್ನು ಮುಟ್ಟಿತು; ನೀನೆದ್ದು ಹೋಗಿ ಅವನನ್ನು ಎತ್ತಿಕೋ. ಅವನನ್ನು ಕೈ ಬಿಡಬೇಡ; ಅವನಿಂದ ಒಂದು ದೊಡ್ಡ ರಾಷ್ಟ್ರ ಉತ್ಪತ್ತಿಯಾಗುವಂತೆ ಮಾಡುತ್ತೇನೆ". ಹೀಗೆ ಎರಡನೇ ಬಾರಿ ರಾಷ್ಟ್ರ ಉತ್ಥಾನದ ಆಶ್ವಾಸನೆ ದೇವರಿಂದ ಅವಳಿಗೆ ಸಿಗುತ್ತದೆ.
ಅಲ್ಲಿಂದ ಹೊರಟ ತಾಯಿ ಮಗ ಇಬ್ಬರೂ ಸೀನಾಯ್ ಪರ್ಯಾಯ ದ್ವೀಪದಲ್ಲಿದ್ದ ಪಾರಾನಿನಾ ಅರಣ್ಯಕ್ಕೆ ತಲಪಿ ಅಲ್ಲಿ ಬೀಡುಬಿಟ್ಟರು. ಹಾಗರಳು ಇಸ್ಮಾಯೇಲನಿಗೆ ಈಜಿಪ್ಟಿನಿಂದ ಹೆಣ್ಣನ್ನು ತಂದು ಮದುವೆ ಮಾಡಿಸಿದಳು. ಹೀಗೆ ದೇವರ ವಾಗ್ದಾನದಂತೆ ಇಸ್ಮಾಯೇಲನ ಸಂತತಿ ಬೆಳೆಯಿತು. ಅವನ ಸಂತತಿಯು ಹವಿಲ ಹಾಗೂ ಶೂರ್ ಮಧ್ಯೆಯಿರುವ ಪ್ರದೇಶದಲ್ಲಿ ವಾಸವಾಗಿದ್ದು; ಶೂರ್ ಈಜಿಪ್ಟಿನ ಪೂರ್ವಕ್ಕೆ ಅಸ್ಸೀರಿಯಾಗೆ ಹೋಗುವ ಹಾದಿಯಲ್ಲಿದೆ. ಹೀಗೆ ಸಂಬಂಧಿಕರೆಲ್ಲರೂ ಎದುರುಬದುರಾಗಿಯೇ ವಾಸಮಾಡಿದರು ಎಂದು ಪವಿತ್ರ ಗ್ರಂಥದಲ್ಲಿ ಹೇಳಲಾಗಿದೆ.
ಒಂಟಿ ಮಹಿಳೆಯಾಗಿ ಕಾಡಿನಲ್ಲಿ ಹಾಗರಳು ತನ್ನ ಮಗನೊಂದಿಗೆ ಅಲೆಯುವಾಗ ಅವಳಿಗಾಗಿ ಬಂಧು ಮಿತ್ರರಾರೂ ನೆರವಾಗಲಿಲ್ಲ. ಅಂಥ ಸಂದರ್ಭದಲ್ಲಿ ದೇವರು ಅವಳ ಮೊರೆಗೆ ಕಿವಿಗೊಟ್ಟರು, ಅವಳನ್ನು ಈಕ್ಷಿಸಿದರು, ಆಶ್ವಾಸನೆ ನೀಡಿ ವಿಶ್ವಾಸಾರ್ಹರಾದರು. ಅವಳ ಮುಗ್ಧತೆ ಹಾಗೂ ದೈವಾಜ್ಞೆಯ ಪಾಲನೆ ಅವಳನ್ನು ದೇವರ ಕೃಪೆಗೆ ಪಾತ್ರಳಾಗುವಂತೆ ಮಾಡಿತು. ದೇವದೂತನ ಮುಖೇನ ದೇವರಿತ್ತ ವಾಗ್ದಾನ ಚಾಚೂತಪ್ಪದೆ ಹೀಗೆ ಈಡೇರಿಯೇ ತೀರಿತು.
• ದೀಪ್ತಿ ಫ್ರಾನ್ಸಿಸ್ಕಾ, ಯಡವನಹಳ್ಳಿ
No comments:
Post a Comment