Thursday, 7 November 2019

ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು - 6


ಹಿಂದಿನ ಸಂಚಿಕೆಯಲ್ಲಿ 'ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು' ಎಂಬ ವಿಷಯದಡಿಯಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಕರ್ನಾಟಕಕ್ಕೆ ಆಗಮಿಸಿದಂತಹ ಮಿಶನರಿಗಳು ತಮ್ಮ ಅಮೂಲ್ಯ ಸಮಯವನ್ನು ಸಾಹಿತ್ಯಿಕ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ತೊಡಗಿದ್ದರು ಎಂಬುದನ್ನು ತಿಳಿದಿದ್ದೇವೆ. ಈ ಪ್ರಸ್ತುತ ಸಂಚಿಕೆಯಲ್ಲಿ ಅವರ ಸೇವೆಯು ಸಾಮಾಜಿಕ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿಯೂ ವಿಸ್ತಾರವಾಗಿತ್ತು ಎಂಬುದನ್ನು ಸಾದಾರಪಡಿಸುವ ಪುಟ್ಟ ಪ್ರಯತ್ನ ಮಾಡಿರುತ್ತೇನೆ. 
ಸಾಮಾಜಿಕ ಕಾರ್ಯಗಳು : 
ಮಿಶನರಿಗಳ ಸಾಧನೆಯನ್ನು ಗಮನಿಸಿದಾಗ ಅವರ ಸೇವಾಹಸ್ತವು ಸಾಮಾಜಿಕ ರಂಗದಲ್ಲೂ ಸ್ವರ್ಶಿಸಿದ್ದುದನ್ನು ನಾವು ಕಾಣಬಹುದಾಗಿದೆ. ಮಿಶನರಿಗಳ ಪ್ರವೇಶದಿಂದ ಸಮಾಜದಲ್ಲಿ ಬಹಳಷ್ಟು ಮಾರ್ಪಾಡುಗಳಾದವು. 18ನೇ ಶತಮಾನದ ಅವಧಿಯನ್ನು ಅಥವಾ ಅದಕ್ಕಿಂತಲೂ ಪೂರ್ವದ ಅವಧಿಯನ್ನು ನೋಡಿದರೆ ಸಮಾಜದ ಜನರಲ್ಲಿ ಅಜ್ಞಾನ,ಅನಕ್ಷರತೆ, ಅಂಧಶ್ರದ್ಧೆ, ಮೂಢನಂಬಿಕೆಗಳಂತಹ ಸಂಗತಿಗಳು ತಾಂಡವವಾಡುತ್ತಿದ್ದವು, ಬೆರಳೆಣಿಸುವಷ್ಟು ಜನರು ಮಾತ್ರ ಬುದ್ಧಿಜೀವಿಗಳು, ತಾರ್ಕಿಕವಾದಿಗಳಾಗಿ ಜೀವಿಸುತ್ತಿದ್ದರು.ಶಿಕ್ಷಣವು ಕೂಡ ಸ್ವಾರ್ಥಪರ ನಿಲುವಿನಿಂದ ಕೇವಲ ಉಚ್ಚ ಜಾತಿಯವರಿಗೆ ಮಾತ್ರ ಲಭಿಸುತ್ತಿತ್ತು. ಇದರಿಂದ 12ನೇ ಶತಮಾನದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಗಳುಂಟಾಗಿದ್ದರೂ ಗಣನೀಯವಾದ ಪರಿಣಾಮ ಸಮಾಜದ ಮೇಲುಂಟಾಗಿರಲಿಲ್ಲ. ಆದರೆ 18 ಮತ್ತು 19ನೇ ಶತಮಾನದಲ್ಲಿ ಪಾಶ್ಚಾತ್ಯ ಸಂಪರ್ಕ ಅದರಲ್ಲೂ ಮಿಶನರಿ ಜನರ ಶೈಕ್ಷಣಿಕ ಕ್ಷೇತ್ರದಲ್ಲಿನ ಬದಲಾವಣೆಗಳಿಂದಾಗಿ ಸಮಾಜದ ಜನರಲ್ಲಿಯೂ ಹೊಸ ಹೊಸ ದೃಷ್ಟಿಕೋನಗಳು ನವೀನ ವಿಚಾರಧಾರೆಗಳು ಮೂಡತೊಡಗಿದವು. ಜನರು ಹಳೆಯ ಸಂಗತಿಗಳನ್ನು ಬಿಟ್ಟು ಪ್ರಗತಿಪರ ಸಂಗತಿಗಳಿಗೆ ಮಾರುಹೋಗಿ ತಮ್ಮನ್ನು ಕೂಡ ಆ ದಿಸೆಯಲ್ಲಿ ಕಾರ್ಯ ಪ್ರವೃತ್ತರನ್ನಾಗಿಸಿಕೊಂಡರು. ಮಿಶನರಿಗಳು ಬರಗಾಲದಿಂದ ತತ್ತರಿಸಿಹೋದ ಜನರಿಗೆ ಆರ್ಥಿಕವಾಗಿ ಸಹಾಯ ಮಾಡುವಲ್ಲಿ, ಮನೆ-ಮಠಗಳಿಲ್ಲದವರಿಗೆ ನಿವೇಶನಗಳನ್ನು ಕೊಡಿಸುವುದು, ಸಮಂಜಸ ವೃತ್ತಿಪರ ಮಾರ್ಗದರ್ಶನದಂತಹ ಕೆಲವು ಸಲಹೆಗಳನ್ನು ನೀಡಿ ಅವರನ್ನು ತರಬೇತುಗೊಳಿಸಿ ಕೆಲಸಕ್ಕೆ ತೊಡಗುವಂತೆ ಮಾಡುವುದು, ಅನಾರೋಗ್ಯಕ್ಕೀಡಾದಾಗ ಅವರಿಗೆ ಔಷಾಧೋಪಚಾರಗಳ ನೆರವು ನೀಡುವುದು, ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳನ್ನು, ಬೋರ್ಡಿಂಗ್ ಹೋಮ್‌ಗಳನ್ನು, ಅನಾಥಮಕ್ಕಳಿಗೆ ಅನಾಥಾಶ್ರಮಗಳಂತಹ ಶಾಲೆಗಳನ್ನು, ವಿಧವೆಯರಿಗೆ ಅನೇಕ ಕರ-ಕುಶಲ ತರಬೇತಿಯನ್ನು ನೀಡಿ ಅವರೆಲ್ಲರೂ ಸ್ವಾಭಿಮಾನ ಬಾಳ್ವೆ ನಡೆಸಲು ಮನೋಸ್ಥೈರ್ಯವನ್ನು ತುಂಬುವಂತಹ ಅನೇಕ ಸೃಜನಾತ್ಮಕ ಕಾರ್ಯಗಳನ್ನು ಕೈಗೊಂಡಿದ್ದರಿಂದ ಇವರ ಕ್ರಿಯಾತ್ಮಕ ಸಹಾಯ ಹಸ್ತಕ್ಕೆ ಮಾರುಹೋಗಿ ಸಾಮಾನ್ಯರು ಇವರ ಹಿಂಬಾಲಕರಾದರು. ಸಮಾಜದಲ್ಲಿಯು ಕೂಡ ಉತ್ತಮವಾದ ವಾತಾವರಣ ಸೃಷ್ಟಿಯಾಗಿ ಪ್ರಗತಿಪರ ಧೋರಣೆಳು ಕಂಡುಬಂದವು.
ಔದ್ಯೋಗಿಕ ಕಾರ್ಯಗಳು :
ಮಿಶನರಿಗಳು ಇಂಡಿಯಾಕ್ಕೆ ಆಗಮಿಸಿದ ನಂತರ ನಾಡಿನಾದ್ಯಂತ ಹಲವು ಸಮಸ್ಯೆಗಳು ನಿವಾರಿಸಲ್ಪಟ್ಟವು. ಬಡತನದ ದವಡೆಗೆ ಸಿಲುಕಿದ್ದವರು ಬಡತನದಲ್ಲೇ ಜೀವನ ಸಾಗಿಸುತ್ತಿದ್ದುದು, ಶ್ರೀಮಂತರು ದಬ್ಬಾಳಿಕೆಯ ಜೀವನ ನಡೆಸುತ್ತಿದ್ದುದನ್ನು ಗಮನಿಸಿದ ಇವರು ಬಡತನದಲ್ಲಿರುವವರಿಗೆ ಯೋಗ್ಯವಾದ ಕೆಲಸ ಕಾರ್ಯಗಳನ್ನು ಒದಗಿಸಿಕೊಟ್ಟು ಅವರನ್ನು ಅಭಿವೃದ್ಧಿ ಪಡಿಸುವುದಕ್ಕೆ ನಾನಾ ವಿಧವಾದ ಔದ್ಯೋಗಿಕ ಕಾರ್ಯಗಳನ್ನು ಕಲ್ಪಿಸಿಕೊಟ್ಟರು. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಯುವಪೀಳಿಗೆಗೂ ಉತ್ತಮ ಅವಕಾಶಗಳನ್ನು ಒದಗಿಸಿಕೊಟ್ಟು ಅವರ ಆರ್ಥಿಕ ಸ್ಥಿತಿಗತಿಯನ್ನು ಉತ್ತಮ ಗುಣಮಟ್ಟಕ್ಕೆ ಕೊಂಡೊಯ್ದ ಘಟನೆಗಳು ಇಲ್ಲಿ ಕಂಡು ಬರುತ್ತವೆ. 
ಮಿಶನರಿಗಳು ತಮ್ಮ ಕಾರ್ಖಾನೆಗಳನ್ನು ಮಂಗಳೂರು, ಮಲ್ಪೆ, ಕಣ್ಣಾನೂರು, ಮತ್ತು ಕಲ್ಲಿಕೋಟೆಗಳಲ್ಲಿ ಪ್ರಾರಂಭಿಸಿದರು. ಹಂಚಿನ ಮತ್ತು ಹತ್ತಿ ಬಟ್ಟೆಯ ಕಾರ್ಖಾನೆಗಳನ್ನು ತೆರೆದು ಸಾವಿರಾರು ನಿರಾಶ್ರಿತರಿಗೆ ಆಶ್ರಯ ಮತ್ತು ಉದ್ಯೋಗವಕಾಶ ಕಲ್ಪಿಸಿಕೊಟ್ಟಿದ್ದರು. ಬಾಸೆಲ್ ಮಿಶನ್ನಿನ ಹಂಚು ಸಮಸ್ತ ಇಂಡಿಯಾದಲ್ಲಿ ದೊಡ್ಡ ಹೆಸರುಗಳಿಸಿತ್ತು. ಈ ಕಾರ್ಖಾನೆಗಳು ಬಡ ಜನರಿಗೆ ನಿತ್ಯ ಜೀವನೋಪಾಯಕ್ಕೆ ನಿಧಿಯಾಗಿದ್ದವು. ಬಟ್ಟೆ ಕಾರ್ಖಾನೆಗಳು ಕೂಡ ಅಸ್ತಿತ್ವದಲ್ಲಿದ್ದವು. ಬಡವರಿಗೆ ಕೈಗೆಟಕಬಹುದಾದ ಬೆಲೆಯಲ್ಲಿ ಸಿಗುವುದರ ಜೊತೆಗೆ ಉತ್ತಮ ಗುಣಮಟ್ಟದ ಬಟ್ಟೆಗಳನ್ನು ತಯಾರಿಸಿದ ಈ ಕಾರ್ಖಾನೆಗಳು ಮಹಿಳೆಯರ ಕರಕುಶಲತೆಗೆ ಸಂಬಂಧಿಸಿದಂತೆ ನಿಟ್ಟಿಂಗ್, ಕ್ರಾಸ್ ಸ್ಟಿಚ್ಛ್ ಹೊಲಿಗೆ, ಇತ್ಯಾದಿ ಗುಡಿ ಕೈಗಾರಿಕೆಗಳ ತರಬೇತಿಯನ್ನು ನೀಡುತ್ತಿದ್ದವು. ಜೊತೆಗೆ ನೇಯುವ ಮಗ್ಗಗಳನ್ನು ಸ್ಥಾಪಿಸಿದರು ಮತ್ತು ಲೋಹಗಳಾದ ಸೀಸ, ಹಿತ್ತಾಳೆ, ಕಬ್ಬಿಣದ ವಸ್ತುಗಳನ್ನು ತಮ್ಮ ಕಾರ್ಯಗಾರದಲ್ಲಿ ತಯಾರಿಸುತ್ತಿದ್ದರು. ಇವರು ತಯಾರಿಸುತ್ತಿದ್ದ ಕಬ್ಬಿಣದ ಪೆಟ್ಟಿಗೆಗಳನ್ನು ಅಂದಿನ ಮದ್ರಾಸಿನ ಬ್ರಿಟೀಷ್ ಸರ್ಕಾರ ತನ್ನ ಎಲ್ಲಾ ಖಜಾನೆಗಳಲ್ಲಿಯೂ ಬ್ಯಾಂಕ್‌ಗಳಲ್ಲಿಯೂ ಉಪಯೋಗಿಸುತ್ತಿತ್ತು. ಮಿಶನರಿಗಳು ಕ್ರಿ.ಶ. 1874ರಲ್ಲಿ ಒಂದು ತಾಂತ್ರಿಕ ಕಾರ್ಯಗಾರವನ್ನು ಸ್ಥಾಪಿಸಿದರು, ಹಟ್ಟಂಗರ್ ಎಂಬ ತಾಂತ್ರಿಕ ಮಿಶನರಿ ಇದರ ಜವಬ್ದಾರಿ ವಹಿಸಿ ಒಬ್ಬ ನುರಿತ ಕೆಲಸದವರನ್ನಿಟ್ಟುಕೊಂಡು ಐದು ಜನ ತರಬೇತುದಾರರನ್ನು ಹೊಂದಿ ಕಾರ್ಯ ನಿರ್ವಹಿಸಿದಾಗ ಎರಡೇ ವರ್ಷಗಳಲ್ಲಿ ಈ ಕಾರ್ಯಗಾರ ವಿಶಾಲವಾಗಿ ಬೆಳೆದು ಅಲ್ಲಿ ಕೆಲಸ ಮಾಡುವವರ ಸಂಖ್ಯೆ ಇಪ್ಪತ್ತೈದಕ್ಕೆ ಏರಿತು. ಇದರಿಂದಾಗಿ ಅವರ ಜೀವನ ಕ್ರಮವು ಕ್ರಮವಾಗಿ ಸುಧಾರಿಸಲ್ಪಟ್ಟಿತು. ಕ್ರಿ.ಶ. 1851ರಲ್ಲಿ ಜಾನ್ ಹಲ್ಲರ್ ಎಂಬಾತನ ನೇತೃತ್ವದಲ್ಲಿ ಯೂರೋಪಿಯನ್ ಮಾದರಿಯ ನೇಯ್ಗೆಕಾರ್ಯವನ್ನು ಮಂಗಳೂರಿನಲ್ಲಿ ಆರಂಭಿಸಿದರು. ಜಗತ್ ಪ್ರಸಿದ್ಧವಾದ ಖಾಕಿ ಬಟ್ಟೆಯ ಸಂಶೋಧನೆ ಮಂಗಳೂರಿನ ಬಾಸೆಲ್‌ಮಿಶನ್ ನೇಯ್ಗೆಯ ಕಾರ್ಖಾನೆಯಲ್ಲಿ ಹಲ್ಗರ್‌ನಿಂದಾಯಿತು. ಕ್ರಿ.ಶ. 1865ರಲ್ಲಿ ಪ್ಲೆಚಿಸ್ಟ್ ನವೀನ ಮಾದರಿಯ ಹಗುರ ಭಾರದ ಹಂಚನ್ನು ನಿರ್ಮಾಣಗೊಳಿಸಿ ಪಶ್ಚಿಮ ಕರಾವಳಿಯಲ್ಲಿ ಮಾತ್ರವಲ್ಲ ಇಂಡಿಯಾದಲ್ಲಿಯೇ ವ್ಯಾಪಕವಾದ ಬೇಡಿಕೆ ಗಳಿಸುವಂತೆ ಸಿದ್ಧಪಡಿಸಿದರು. ಕ್ರಿ.ಶ. 1874ರಲ್ಲಿ ಮಂಗಳೂರಿನಲ್ಲಿಯೇ ಕಬ್ಬಿಣದ ಕಾರ್ಖಾನೆಯೊಂದನ್ನು ಆರಂಭಿಸಿದರು. ಈ ಕಾರ್ಖಾನೆಯಲ್ಲಿ ಶ್ರೇಷ್ಠ ಗುಣಮಟ್ಟದ ಹಾಗೂ ಭದ್ರವಾದ ಬೀಗಗಳು, ಖಜಾನೆಗಳು ಮತ್ತು ಕಾರ್ಖಾನೆಗಳಿಗೆ ಬೇಕಾಗುವ ವಿವಿಧ ರೀತಿಯ ಅಚ್ಚುಗಳನ್ನು ತಯಾರಿಸುತ್ತಿದ್ದರು. ಮನೆ ಸಾಮಾಗ್ರಿ ಹಾಗೂ ಉಪಯುಕ್ತವಾದ ಆಧುನಿಕ ಉಪಕರಣಗಳನ್ನು ಮಾರುವ ವ್ಯಾಪಾರ ಮಳಿಗೆಗಳನ್ನು ಮಂಗಳೂರಿನ ಕೆಲವೆಡೆಗಳಲ್ಲಿ ಸ್ಥಾಪಿಸಿದರು. 
19ನೇ ಶತಮಾನದ ಕೊನೆ ಘಟ್ಟದಲ್ಲಿ ಮಂಗಳೂರು, ಕಲ್ಲಿಕೋಟೆ, ಕಣ್ಣನೂರು, ಮಲ್ಪೆ, ಮೊದಲಾದ ಸ್ಥಳಗಳಲ್ಲಿ ಸುಮಾರು ಐದು ಹಂಚಿನ ಮತ್ತು ನೇಯ್ಗೆಯ ಕಾರ್ಖಾನೆಗಳು ಸ್ಥಾಪಿಸಲ್ಪಟ್ಟು ಅವುಗಳಲ್ಲಿ ಸಾವಿರಾರು ಜನರು ದುಡಿಯುತ್ತಿದ್ದರು. ಈ ಮಿಶನರಿಗಳು ಕರ್ನಾಟಕದ ಜನರಿಗೆ ಹೊಲಿಗೆ, ಬಡಿಗೆ, ನೇಯ್ಗೆ, ಮುಂತಾದ ಗುಡಿ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ತರಬೇತುಗೊಳಿಸಿದ್ದರಿಂದ ಇವರು ತಯಾರಿಸಿಕೊಟ್ಟ ವಸ್ತುಗಳು ಮತ್ತು ಬಟ್ಟೆಗಳು ಯೂರೋಪಿಗೂ, ಏಷ್ಯಾ ಮತ್ತು ಆಫ್ರಿಕಾದ ಅನೇಕ ರಾಷ್ಟ್ರಗಳಿಗೂ ರಫ್ತಾಗುತ್ತಿದ್ದವು. ಇದರಿಂದ ಸಾವಿರಾರು ಜನರ ಜೀವನೋಪಾಯಕ್ಕೆ ಅನುಕೂಲವಾಯಿತು. ಹಾಗೆಯೇ ಯುವಕರಿಗೆ ಗಡಿಯಾರ ತಯಾರಿಸುವುದು, ಬಟ್ಟೆ ನೇಯುವುದು, ಹಂಚು ತಯಾರಿ, ಸಾಬೂನು ಮಾಡುವುದು, ಮತ್ತು ಬಡಗಿಯ ಕೆಲಸ ಮುಂತಾದವುಗಳನ್ನು ಅವರುಗಳ ಜೀವನೋಪಾಯಕ್ಕಾಗಿ ಪರಿಚಯಿಸಿಕೊಟ್ಟರು.

ಮುಂದಿನ ಸಂಚಿಕೆಯಲ್ಲಿ ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯವನ್ನು ಬೆಳೆಸುವಲ್ಲಿ ದುಡಿದ ಕ್ರೈಸ್ತ ಸಾಹಿತಿಗಳ ಬದುಕು ಮತ್ತು ಬರಹವನ್ನು ಪರಿಚಯಿಸಲಾಗಿವುದು.

ಡಾ. ಸಿಸ್ಟರ್ ಪ್ರೇಮ (ಎಸ್. ಎಮ್. ಎಮ್. ಐ) 


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...