ಬಾಗಿಲನ್ನು ತಟ್ಟುವ ಸದ್ದು ಕೇಳಿ
ಮನಸ್ಸು ಕಳವಳಗೊಂಡಿದೆ
ಯಾರು?
ಯಾಕಾಗಿ ತಟ್ಟುತ್ತಿರುವರು?
ಬಂದು ಒಳಗೆ ಮಾಡುವುದಾದರೂ ಏನು?
ಒಳ ಬಿಟ್ಟು ಹೊರಗೆ ಹೋಗುವುದೆಂದು?
ಅಯ್ಯೊ ಏನೇನೋ ಪ್ರಶ್ನೆಗಳು
ಹೌದು
ಬಾಗಿಲು ತಟ್ಟುವ ಸದ್ದು ಕೇಳಿ
ಕಳವಳಕೊಂಡಿದೆ ಮನಸ್ಸು
ಇವಿಷ್ಟು ಪ್ರಶ್ನೆಗಳ ಜತೆಗೆ ಮತ್ತಷ್ಟು
ಸೇರಿಕೊಳ್ಳುತ್ತಿದೆ
ಬಂದವನು ಮನಸ್ಸು ಕೂಡಿ
ಏನು ಮಾಡಿಬಿಡುವನು?
ನನ್ನ ಸಹ್ಯ ಅಸಹ್ಯಗಳು ಅವನಿಗೆ
ಕಾಣಿಸಿಬಿಡುವುದೇ?
ಮುಖವಾಡಗಳು ಕಳ್ಳರಂತೆ ಸಿಕ್ಕಿಬಿಡುವುದೇ
ಅವನ ಪೋಲಿಸ್ ಕೈಗಳಿಗೆ
ಸಿಕ್ಕ ಮುಖವಾಡಗಳ ಕಂಡು
ರೋಸಿ
ಹೋಗಿಬಿಡುವನೇ ನನ್ನ ಬಿಟ್ಟು?
ಎಲ್ಲಾ ಈ ಗೊಂದಲಗಳಿಂದ
ಏಕೋ
ಅವನು ತಟ್ಟುತ್ತಿರುವುದನ್ನು ಕೇಳಿ
ಕೇಳದಂತೆ
ಸುಮ್ಮನೆ ಕುಳಿತು ಬಿಟ್ಟಿದ್ದೇನೆ.
• ಜೀವಸೆಲೆ
No comments:
Post a Comment