Thursday, 7 November 2019

ಸಂವಾದವೆನ್ನುವುದು ಬೀದಿಜಗಳವಲ್ಲ........


ಪ್ರಜಾಸತ್ತೆಯ ಮೂಲಾಧಾರಗಳು ಕಂಪನಕ್ಕೊಳಗಾಗುತ್ತಿರುವ ಒಂದು ಬಗೆಯ ಬಿಕ್ಕಟ್ಟಿನ ಸಾಂಸ್ಕೃತಿಕ-ರಾಜಕೀಯ ಸನ್ನಿವೇಶದಲ್ಲಿ ಇಂದು ನಾವೆಲ್ಲರೂ ಬದುಕುತ್ತಿದ್ದೇವೆ. ಈ ಬಿಕ್ಕಟ್ಟು ಅತ್ಯಂತ ಸಂಕೀರ್ಣವಾಗಿದೆ, ಹಾಗೆಯೇ ಬಿಗುವಿನಿಂದಲೂ ಕೂಡಿದೆ. ಇಂತಹ ಒಂದು ಪರಿಸ್ಥಿತಿ ಈ ಹಿಂದೆ ಇದ್ದಿರಲಿಲ್ಲ. ಹಾಗಿರುವಾಗ ಇಂತಹ ಒಂದು ಸನ್ನಿವೇಶವನ್ನು ನಾವೆಲ್ಲರೂ ಅಪಾರ ತಾಳ್ಮೆಯಿಂದ, ವಿನಯದಿಂದ ಮತ್ತು ಜವಾಬ್ದಾರಿಯಿಂದ ನಿರ್ವಹಿಸಬೇಕು. 
ನಾವಿಂದು, ಸಮಾಜವನ್ನು ಮೌಲಿಕವಾಗಿ ಶ್ರೀಮಂತಗೊಳಿಸುವ ಮತ್ತು ಸಾಮಾಜಿಕ ಬಂಧುತ್ವವನ್ನು ಬೆಳೆಸುವ, ಗಟ್ಟಿಗೊಳಿಸುವ ನೆಲೆಯಲ್ಲಿ ಪ್ರಯತ್ನಿಸಬೇಕಾಗಿದೆ. ವಿಮರ್ಶೆಯ, ಸ್ವ-ವಿಮರ್ಶೆಯ ಮತ್ತು ವಿಚಾರಶೀಲತೆಯ ಗಟ್ಟಿತನದಿಂದ ಸೊಂಪಾದ ಸಾಮಾಜಿಕ ವ್ಯವಸ್ಥೆಯನ್ನು ಮರುನಿರ್ಮಿಸಬೇಕಾಗಿದೆ. ಇಂತಹ ಸಾಂಸ್ಕೃತಿಕ ಜರೂರುಗಳಿರುವ ಕಾಲಘಟ್ಟದಲ್ಲಿ ಈ ನಾಡಿನ ಪ್ರಜ್ಞಾವಂತ ನಾಗರಿಕರು, ವಿದ್ವಾಂಸರು, ಸಾಮಾಜಿಕ ಬದ್ಧತೆಯುಳ್ಳ ಚಿಂತಕರು ತಾವು ಪ್ರತಿನಿಧಿಸುತ್ತಿರುವ ಪಂಥಗಳು ಹೇಳುವುದೇ ಆತ್ಯಂತಿಕ `ಸತ್ಯ' ಎಂದು ಬಲವಾಗಿ ನಂಬುವುದನ್ನು ವಿಮರ್ಶೆಗೆ ಗುರಿ ಪಡಿಸುವ ಅಗತ್ಯತೆಯ ಬಗ್ಗೆ ಇತ್ತೀಚೆಗೆ ಕನ್ನಡದ ಬೌದ್ಧಿಕ ವಲಯದಲ್ಲಿ ಕೆಲವು ವಿದ್ವಾಂಸರು ಒಲವು ತೋರಿಸುತ್ತಿರುವುದು ಈ ಹೊತ್ತಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವೂ, ಅರ್ಥಪೂರ್ಣವೂ ಆಗಿದೆ. 
20ನೆಯ ಶತಮಾನದ ಖ್ಯಾತ ಬ್ರಿಟಿಷ್ ತತ್ತ್ವಜ್ಞಾನಿ ಬರ್ಟ್ರೆಂಡ್ ರಸೆಲ್‌ನನ್ನು ಒಮ್ಮೆ, 'ನೀವು ನಂಬಿದ ತತ್ತ್ವ-ಸಿದ್ಧಾಂತಕ್ಕಾಗಿ ಜೀವಕೊಡಲು ಸಿದ್ಧರಿದ್ದೀರಾ' ಎಂದು ಪ್ರಶ್ನಿಸಿದಾಗ, ಆತ 'ಇಲ್ಲ, ನಾಳೆ ಬೇರೊಬ್ಬ ಬುದ್ಧಿವಂತ ಬರಬಹುದು, ನನ್ನ ಸಿದ್ಧಾಂತ ತಪ್ಪು ಎಂದು ಹೇಳಿ ಅದನ್ನು ಸಾಬೀತು ಪಡಿಸಬಹುದು, ಹಾಗಾಗಿ ಈ ಹೊತ್ತು ನಾನು ನಂಬಿದ ಸಿದ್ಧಾಂತಕ್ಕಾಗಿ ನಾನೇಕೆ ನನ್ನ ಅಮೂಲ್ಯ ಪ್ರಾಣವನ್ನು ಕಳೆದುಕೊಳ್ಳಲಿ' ಎಂದು ಹೇಳಿದ್ದನಂತೆ. ಹೀಗೆ ತಾನು ನಂಬಿದ ವಿಚಾರಗಳ ಬಗ್ಗೆ ತಾನೇ ಸಂದೇಹಿಯಾಗಿ, ತನ್ನ ತಿಳಿವಳಿಕೆಯ ಬಗ್ಗೆ ಒಂದು ಬಗೆಯ ಮರುವಿಮರ್ಶೆಯ ನೋಟವನ್ನು ಹೊಂದಿದ್ದ ರಸೆಲ್, ತನ್ನ ಅರಿವು ಎಂಬುದು ತತ್ಕಾಲದ ಸಾಮಾಜಿಕ-ರಾಜಕೀಯ ವಿಚಾರಗಳ ಪ್ರೇರಣೆ, ಒತ್ತಾಯ, ಒತ್ತಡದಿಂದ ರೂಪುತಳೆದ ಲೋಕದರ್ಶನವಾಗಿದೆ ಎಂದು ಭಾವಿಸುತ್ತಾನೆ. 
ಆತ ತನ್ನ ಈ ಚಿಂತನೆಯನ್ನು 'ದಿ ಪ್ರಾಬ್ಲೆಮ್ಸ್ ಆಫ್ ಫಿಲಾಸಫಿ' ಎಂಬ ಅತ್ಯಂತ ಪ್ರಸಿದ್ಧ ಕೃತಿಯಲ್ಲಿ ಮುಂದಿಡುತ್ತಾನೆ. ಈ ಕೃತಿಯಲ್ಲಿ ಆತ `ಜ್ಞಾನ'ದ ಕುರಿತ ಸಿದ್ಧಾಂತಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸುತ್ತಾ, `ಸತ್ಯ'ದ ಬಗ್ಗೆ ಅನೇಕ ಕುತೂಹಲಕರವಾದ ಮಾತುಗಳನ್ನು ಹೇಳುತ್ತಾನೆ. ಆತನ ಪ್ರಕಾರ, ಯಾವುದು ಸತ್ಯ ಅಥವಾ ಯಾವುದು ಮಿಥ್ಯ ಎಂಬುದಾಗಿ ಮಾತ್ರ ನಾವಿಂದು ಪ್ರಶ್ನಿಸುತ್ತೇವೆ. ಬದಲಾಗಿ ಯಾವ ನಂಬಿಕೆಗಳು ಸತ್ಯ ಅಥವಾ ಯಾವ ನಂಬಿಕೆಗಳು ಮಿಥ್ಯ ಎಂಬುದಾಗಿ ನಾವು ಕೇಳುವುದಿಲ್ಲ. ವಾಸ್ತವದಲ್ಲಿ ಇವೆರಡು ಪ್ರಶ್ನೆಗಳು ಭಿನ್ನ ಭಿನ್ನ ಬಗೆಯವು. ಅಂದರೆ ನಮ್ಮ ನಂಬಿಕೆಗಳು ಮತ್ತು ಕೆಲವೊಂದು ಹೇಳಿಕೆಗಳು ನಾವು ನಂಬಿರುವ ಸತ್ಯ ಮತ್ತು ಅಸತ್ಯವನ್ನು ರೂಪಿಸುತ್ತವೆ ಎಂದು ತಿಳಿಯುವ ಆತ, ಸತ್ಯ ಎಂಬುದು ಸದಾ ಹುಸಿತನದ ಜೊತೆಗೂಡಿರುತ್ತದೆ ಎಂಬುದಾಗಿ ಹೇಳುತ್ತಾನೆ. 
ಆತನ ಪ್ರಕಾರ ನಂಬಿಕೆಗಳು, ಹೇಳಿಕೆಗಳು ಇಲ್ಲದಿದ್ದರೆ ಸತ್ಯವೂ ಇಲ್ಲ ಮಿಥ್ಯವೂ ಇಲ್ಲ. ಹಾಗಾಗಿ ಇವೆರಡೂ ಯಾವಾಗಲೂ ಒಂದಕ್ಕೊಂದು ನಂಟನ್ನು ಇಟ್ಟುಕೊಂಡಿರುವ ಪರಿಕಲ್ಪನೆಗಳು. ಆದ್ದರಿಂದ ನಾವು ತಿಳಿದುಕೊಂಡಿರುವ `ಸತ್ಯ' ಅದು ನಮ್ಮ ನಂಬಿಕೆ ಮಾತ್ರ, ಅದು ನಿಜ ವಾಸ್ತವ ಆಗಿರಬೇಕಾಗಿಲ್ಲ. ನಾವು `ಮಿಥ್ಯೆ' ಅಂತ ಅಂದುಕೊಂಡಿರುವ ನಮ್ಮ ನಂಬಿಕೆ ನಾಳೆ ಸುಳ್ಳಾಗಿ ನಮಗೆ `ಸತ್ಯ' ದರ್ಶನವಾಗಬಹುದು. ಹಾಗಾಗಿ ರಸೆಲ್, ಸತ್ಯದ ವಿರುದ್ಧ ಸಿದ್ಧಾಂತವಾದ ಮಿಥ್ಯೆಯ ತತ್ತ್ವವನ್ನೂ ನಾವು ಸ್ವೀಕರಿಸಬೇಕು ಎಂದು ನಮ್ಮನ್ನು ಒತ್ತಾಯಿಸುತ್ತಾನೆ. ಒಟ್ಟಿನಲ್ಲಿ ರಸೆಲ್ ಹೇಳುವಂತೆ, ಸತ್ಯ ಮತ್ತು ಮಿಥ್ಯದ ನಿರ್ವಚನ ಎಂಬುದು ಇಷ್ಟೊಂದು ಅವಿಶ್ವಾಸದ ಕಥನವಾಗಿರುವಾಗ ನಮ್ಮ ತಿಳಿವಳಿಕೆ, ನಮ್ಮ ಲೋಕಜ್ಞಾನ, ತತ್ತ್ವ-ದರ್ಶನಗಳು ಕಾಲದಿಂದ ಕಾಲಕ್ಕೆ ಚರ್ಚೆಗೆ, ಸಂವಾದಕ್ಕೆ ಮುಕ್ತವಾಗಬೇಕು ಎಂದು ಹೇಳುವುದರಲ್ಲಿ ತೊಡಕೇನಿದೆ ಎಂಬುದು ನನಗರಿಯದು. 
ನಾವು ಇಲ್ಲಿ ಮೊದಲು ಅರ್ಥಮಾಡಿಕೊಳ್ಳಬೇಕಾದದ್ದು ಸಂವಾದ ಎಂದರೆ ವಿವೇಕದಿಂದ-ವಿವೇಚನೆಯಿಂದ ಕೂಡಿದ ಒಂದು ಚಿಂತನೆ ಇನ್ನೊಂದು ಚಿಂತನೆಯನ್ನು ಗ್ರಹಿಸುವ, ಸಮಸ್ಯಾತ್ಮಕಗೊಳಿಸುವ, ಅದರ ಸಾಧಕ-ಬಾಧಕಗಳನ್ನು ಅರಿಯುವ ಪ್ರಯತ್ನವನ್ನು ಮಾಡುವುದು. ಅಂದರೆ ಅತ್ಯಂತ ದೀರ್ಘ ಕಾಲದಲ್ಲಿ ನಿಧಾನವಾಗಿ ಸಾಗುವ ಮತ್ತು ಸಾಕಷ್ಟು ಲಕ್ಷ್ಯಕೊಟ್ಟು ನಡೆಯುವ ಒಂದು ಬಗೆಯ ಬೌದ್ಧಿಕ ವಿದ್ಯಮಾನ ಇದು. ಪಶ್ಚಿಮದ 'ಡೆಲಿಬರೇಶನ್' ಪರಿಕಲ್ಪನೆಯಲ್ಲಿ ಬರುವ ವಿಚಾರಶೀಲ ಸಂವಾದದ ಅರ್ಥ ವಿಸ್ತಾರತೆ ಇದುವೇ ಆಗಿದೆ. ಇದು ಪರಸ್ಪರರ ನಿಲುವುಗಳ ಕುರಿತು ಪರಸ್ಪರರೇ ವಿಮರ್ಶೆ ಮಾಡುವುದಾಗಿದೆ, ತಮ್ಮ ತಮ್ಮ ಚಿಂತನೆಗಳ ಕುರಿತಂತೆ ಪರಸ್ಪರರು ಶೋಧನೆ ನಡೆಸುವುದಾಗಿದೆ. ಕೆಲವೊಮ್ಮೆ ತನ್ನ ಅರಿವಿನ ಕುರಿತು ತಾನೇ ತಾಳುವ ಸಂಶಯವೂ ಇದಾಗಿದೆ. ಹಾಗಾಗಿ ಇದು ಒಂದು ಬಗೆಯಲ್ಲಿ ಸಂಶೋಧನೆಯೇ ಸರಿ.
ಈ ಹಿನ್ನೆಲೆಯಲ್ಲಿ `ಸತ್ಯ'ದ ಬಗೆಗಿನ ನಮ್ಮ ಅಂಧವಿಶ್ವಾಸವನ್ನು ನಾವು ಮತ್ತೆ ಮತ್ತೆ ವಿಮರ್ಶೆಗೆ ಒಳಪಡಿಸುವ, ಭಿನ್ನವಾದ ವಿಚಾರಗಳ ಜೊತೆಗೆ ಒಂದು ಅರ್ಥಪೂರ್ಣವಾದ ಮಾತುಕತೆಗೆ ತೊಡಗುವ ಮೂಲಕ ಒಂದು ಆರೋಗ್ಯಕರ ಸಮಾಜ ನಿರ್ಮಾಣದ ನೆಲೆಯಲ್ಲಿ ನಾವು ಮುನ್ನಡೆಯಬೇಕಾದುದು ಇಂದು ತೀರಾ ಅವಶ್ಯವಾಗಿದೆ. ನಾವು ನಾವು ನಂಬಿದ ಸತ್ಯದ ಬಗ್ಗೆ ನಮಗೆ ಒಂದು ಅವಿಶ್ವಾಸವೂ ನಮ್ಮ ಜೊತೆಗೆ ಇರಬೇಕು, ಜೊತೆಗೆ ನಾವು ಭಾವಿಸಿದ ನಮ್ಮದಲ್ಲದ ಅನ್ಯರ ಕುರಿತಾದ ಹುಸಿತನದ ಬಗೆಗೂ ನಮಗೆ ಕೆಲವೊಮ್ಮೆ ನಂಬಿಕೆ ಹುಟ್ಟಬೇಕು. ಅದು ಸಾಧ್ಯವಾದಾಗ ಮಾತ್ರ `ನಮ್ಮದಲ್ಲ' ಎಂದು ನಾವು ಪ್ರಬಲವಾಗಿ ಪ್ರತಿಪಾದಿಸುವ, ನಮಗಿಂತ ವ್ಯತಿರಿಕ್ತ ಅಂತ ನಾವು ಪರಿಭಾವಿಸಿದ ಇನ್ನೊಂದು ಚಿಂತನೆಯ ಜೊತೆ ನಮಗೆ ಮಾತಾಡಲು, ಸಂವಾದಿಸಲು, ಮುಖಾಮುಖಿಯಾಗಲು ಸಾಧ್ಯವಾಗುತ್ತದೆ. ಯಾವಾಗ ಮಾತುಕತೆ, ಸಂವಾದ ಸಾಧ್ಯವಾಗುತ್ತದೋ, ಯಾವಾಗ ನಾವು ಇನ್ನೊಂದು ಚಿಂತನೆಯ ಬಗ್ಗೆ ಮುಕ್ತಭಾವ ಹೊಂದಲು ಸಾಧ್ಯವೋ ಆಗ ಸಮಾಜ ಸ್ವಸ್ಥವಾಗಿದೆ ಎಂದರ್ಥ. ಯಾವ ಸಮಾಜ ಮಾತುಕತೆಗೆ ಒಲವನ್ನು ತೋರಿಸುತ್ತದೋ ಆ ಸಮಾಜ ಪ್ರಗತಿಯ ಕಡೆಗೆ ಚಲಿಸುತ್ತಿದೆ ಎಂದರ್ಥ. ಆದರೆ ಯಾವಾಗ ಮಾತುಕತೆ ಇಲ್ಲವಾಗುತ್ತದೋ ಆಗ ಆ ಸಮಾಜದ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ ಎಂದರ್ಥ. 
ಹೀಗೆ ಹೇಳುವಾಗ `ಸತ್ಯ' ಎಂಬುದೇ ಇಲ್ಲ, ಎಲ್ಲವೂ ಹುಸಿಭ್ರಮೆ ಅಥವಾ `ಮಾಯೆ' ಎಂಬ `ಸತ್ಯ'ದ ಕುರಿತ ಅರಾಜಕ ಮನೋಸ್ಥಿತಿಗೆ ನಾವು ತಲುಪಬೇಕೆಂದೇನಲ್ಲ. ಬದಲಾಗಿ ಸತ್ಯದ ಹುಡುಕಾಟದಲ್ಲಿ ನಾವು ನಿರಂತರವಾಗಿ ಸಾಗುತ್ತಾ, ಆ ಮಾರ್ಗದಲ್ಲಿ ಅನೇಕ ಪ್ರಯೋಗಗಳಿಗೆ ನಮ್ಮನ್ನು ನಾವು ಒಡ್ಡಿಕೊಳ್ಳಬೇಕು ಎಂದರ್ಥ. ಹಾಗಾಗಿ ಒಂದು ಬಗೆಯ 'ಡೆಲಿಬರೇಶನ್' ಮಾದರಿಯ ಸಂವಾದ ಇವತ್ತಿನ ನಮ್ಮ ಸಮಾಜಕ್ಕೆ ಬಹಳ ಅಗತ್ಯವಾಗಿದೆ. ಹಾಗೆಯೇ ಈ ಬಗೆಯ ವಿಚಾರಶೀಲ ತಾತ್ತ್ವಿಕ ಸಂವಾದದ ಸಾರ್ವಜನಿಕ ಮಾತುಕತೆಗಳಲ್ಲಿ ನಾವು ಬಳಸುವ ಪದಪ್ರಯೋಗಗಳ ಬಗ್ಗೆ ನಮಗೆ ಅರಿವು, ಎಚ್ಚರ ಇರಬೇಕು. ಆ ಅರಿವು ಇದ್ದಾಗ ಮಾತ್ರ ಸಾರ್ವಜನಿಕ ಸಂವಾದದ ಮಾತುಗಳು ತತ್ತ್ವಜ್ಞಾನೀಯ ನೆಲೆಯಲ್ಲಿ ಮೂಡಿಬಂದು ಯೋಚನೆಗಳು ತರ್ಕಬದ್ಧವಾಗಿ ವ್ಯಕ್ತಗೊಳ್ಳುತ್ತವೆ. ಸಂವಾದ ಉನ್ನತ ಮಟ್ಟದಲ್ಲಿ ನಡೆದು ಹೆಚ್ಚು ಘನತೆಯನ್ನು ಮೆರೆಯುತ್ತದೆ. ಆ ಅರಿವು ಇಲ್ಲದೇ ಇದ್ದಾಗ ಸಂವಾದ ಬೀದಿಜಗಳದ ಮಾತುಗಳಾಗಿ ಕ್ಷುಲ್ಲಕವಾಗುವುದು ಮತ್ತು ಕರ್ಕಶವಾಗುವುದು. ಜೊತೆಗೆ ಸಂವಾದ ಎಂಬುದು ಸಮಾಜವನ್ನು ಸರಿ ಮಾಡುವ ಸಾಮರಸ್ಯದ ಚರ್ಚೆಯಾಗಿ ಉಳಿಯದೆ ಪರಸ್ಪರ ನಿಂದನೆಯ ಮತ್ತು ಅಸಹನೆಯ ವಾಗ್ಯುದ್ಧಗಳಿಗೆ ವೇದಿಕೆಯಾಗುತ್ತದೆ.

ಡಾ. ದಿನೇಶ್ ನಾಯಕ್
ಕನ್ನಡ ವಿಭಾಗ, ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ)
ಮಂಗಳೂರು


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...