Thursday, 7 November 2019

ಪ್ರಾಣವಾಯು!


ಆಮ್ಲಜನಕದ ಮತ್ತೊಂದು ಹೆಸರು ಪ್ರಾಣವಾಯು. ಮಾನವನ ಪ್ರಾಣದ ಉಳಿವಿಗೆ, ಪ್ರಾಣವಾಯು ಬೇಕೇ ಬೇಕು. ಪ್ರಾಣ ವಾಯುವಿನ ಕೊರತೆಯಾದರೆ ಉಸಿರಾಟದಲ್ಲಿ ಏರುಪೇರು ಉಂಟಾಗಿ ಜೀವಕ್ಕೆ ಆಪತ್ತು ಖಚಿತ. ಹಾಗೆಯೇ ಆತ್ಮದ ಉಸಿರಾಟಕ್ಕೆ ಪ್ರಾರ್ಥನೆಯೇ ಪ್ರಾಣವಾಯು. ಪ್ರಾರ್ಥನೆ, ಮಾನವ ದೇವರಲ್ಲಿ ಸ್ಥಿರವಾಗಿ ಬೇರೂರಲು ಪೂರಕವಾದ ಪವಿತ್ರ ಸಾಧನ. ಪ್ರಾರ್ಥನೆ ದೇವ-ಮಾನವರ ಸಂಬಂಧವನ್ನು ವೃದ್ಧಿಗೊಳಿಸಿ, ಅವರಿಬ್ಬರ ಸಂಬಂಧವು ನಿರಂತರವಾಗಿ ಸಂವೃದ್ಧಿಯಾಗಿ ಪರಿಪೂರ್ಣಗೊಳ್ಳಲು ನಾಂಧಿಯಾಗುತ್ತದೆ.
ಮಾನವ ತ್ರೈಏಕದೇವರ ಅತ್ಯುನ್ನತ ಪ್ರೀತಿಯ ಸೃಷ್ಟಿ. ಅಷ್ಟು ಮಾತ್ರವಲ್ಲ ಸಕಲ ಸೃಷ್ಟಿಯ ಮುಕುಟ. ಇವರಿಬ್ಬರ ಸಂಬಂಧ ಅನಂತ. ಅದು ಎಂದು ಯಾರಿಂದಲೂ ಬಿಡಿಸಲಾರದ ಆತ್ಮೀಯ ಅನುಬಂಧ. ಅದರೆ ಇಂದು ಮಾನವ ಈ ಪರಮ ಸತ್ಯವನ್ನು ಮರೆತು ಲೌಕಿಕ ಆಶಾಪಾಶಕ್ಕೆ ಸಿಲುಕಿ, ಶಾಶ್ವತ ಆನಂದವನ್ನು ಸ್ವ-ಇಚ್ಚೆಯಿಂದ ಕಳೆದುಕೊಳ್ಳುತ್ತಿದ್ದಾನೆ. ಈ ಲೋಕದ ಸಿರಿಸಂಪತ್ತೆಲ್ಲವೂ ನಶ್ವರ ಎಂಬ ನಿತ್ಯ ಸತ್ಯವು ಮಾನವನ ಅರಿವಿನಲ್ಲಿ ಸ್ಥಿರವಾಗಿ, ಸದಾ ದೇವರೆಡೆ ಪಯಣಿಸಲು ಪ್ರಾರ್ಥನೆ ಮಾನವನ ಅಜ್ಞಾನಕ್ಕೆ, ಸುಜ್ಞಾನದ ಬೆಳಕನ್ನು ಚೆಲ್ಲುತ್ತದೆ. ಆಗ ಮಾನವ ಲೌಕಿಕ ಆಶಾಪಾಶಗಳಿಂದ ದೂರಸರಿಯಲು ಪ್ರಾರಂಭಿಸುತ್ತಾನೆ. ಏಕೆಂದರೆ ಸಕಲ ಅಧಿಪತ್ಯಕ್ಕೂ ಅಧಿಕಾರಕ್ಕೂ ಶಿರಸ್ಸು ಅವರೇ. ಅವರಲ್ಲಿ ಮಾತ್ರ ನೀವು ಪರಿಪೂರ್ಣತೆಯನ್ನು ಹೊಂದಲು ಸಾಧ್ಯ (ಕೊಲೊಸ್ಸೆ 2:10) ಎಂಬ ಅರಿವಿನ ಬೊಕ್ಕಸ ತೆರೆದುಕೊಳ್ಳುತ್ತದೆ.
ಪ್ರಾರ್ಥನೆ: ಅದೊಂದು ವಿನಮ್ರ ನಿವೇದನೆ. ಪ್ರಾರ್ಥನೆಯಲ್ಲಿ ದೀನತೆ ಹಾಗೂ ಕೃತಜ್ಞತಾಭಾವ ತುಂಬಿರಬೇಕು. ಸದಾ ಹರ್ಷಚಿತ್ತರಾಗಿರಿ. ಎಡೆಬಿಡದೆ ಪ್ರಾರ್ಥಿಸಿರಿ. ಎಲ್ಲಾ ಸಂದರ್ಭಗಳಲ್ಲೂ ಉಪಕಾರಸ್ಮರಣೆ ಮಾಡಿರಿ (1ಥೆಸಲೋ 5:16) ಎನ್ನುತ್ತಾನೆ ಸಂತ ಪೌಲ. ಹಾಗೆಯೇ ಯಾವ ವಿಷಯದಲ್ಲೂ ಚಿಂತಿಸದೆ, ನಿಮ್ಮ ಅಗತ್ಯಗಳಿಗಾಗಿ ದೇವರಲ್ಲಿ ಪ್ರಾರ್ಥಿಸಿರಿ. ಪ್ರಾರ್ಥಿಸುವಾಗಲೆಲ್ಲಾ ನಿಮ್ಮಲ್ಲಿ ಕೃತಜ್ಞತಾಭಾವ ಇರಲಿ. ಆಗ ಮನುಷ್ಯಗ್ರಹಿಕೆಗೂ ಮೀರಿದ ದೈವಶಾಂತಿಯು ನಿಮ್ಮ ಹೃನ್ಮನಗಳನ್ನು ಕ್ರಿಸ್ತೇಸುವಿನ ಅನ್ಯೋನತೆಯಲ್ಲಿ ಸುರಕ್ಷಿತವಾಗಿ ಕಾಪಾಡುವುದು (ಫಿಲಿಪ್ಪಿ 4:6-7) ಎನ್ನುತ್ತಾನೆ. ಪ್ರಾರ್ಥನೆ ಫಲಿಸಬೇಕಾದರೆ ಮಾನವ ದೀನನಾಗಿ ಹಾಗೂ ಸಂಪೂರ್ಣವಾಗಿ ದೇವರಿಗೆ ಶರಣಾಗಬೇಕು. ಹೀಗೆ ಶರಣಾದ ಮಾನವ ತಾನು ಮಾಡಿದ ಪ್ರಾರ್ಥನೆ ಫಲಿಸದಿದ್ದರೂ ಪ್ರಾರ್ಥಿಸುವುದನ್ನು ಮಾತ್ರ ಬಿಡುವುದಿಲ್ಲ. ಯಾಕೆಂದರೆ ಅಂತವನು ತನ್ನ ಚಿತ್ತವನ್ನು ದೇವರ ಚಿತ್ತದಲ್ಲಿರಿಸಿ ದೇವರಿಗೆ ಸಂಪೂರ್ಣವಾಗಿ ಶರಣಾಗಿ ನನ್ನ ಚಿತ್ತದಂತೆ ಅಲ್ಲ ನಿಮ್ಮ ಚಿತ್ತದಂತೆ ಆಗಲಿ (ಮತ್ತಾ 26:39)ಎಂದು ದೇವರ ಚಿತ್ತವನ್ನು ಎಲ್ಲಾ ಸಮಯದಲ್ಲಿಯೂ ಅಂಗಿಕರಿಸುತ್ತಾನೆ. ಉದಾಹರಣೆಗೆ ತ್ರೈಏಕದೇವರು ಸೊದೋಮಿನ ನಾಶಕ್ಕೆ ಮುಂದಾದಾಗ ಅದರ ಪರವಾಗಿ ಅದನ್ನು ನಾಶಮಾಡದಂತೆ ಅಬ್ರಹಾಮ ದೇವರಲ್ಲಿ ವಿನಂತಿಸಿದ. ಆದರೆ ಅಂತಿಮವಾಗಿ ದೇವರ ಚಿತ್ತಕ್ಕೆ ತಲೆಬಾಗಿದ ಆನಂತರ ಅಬ್ರಹಾಮನೊಡನೆ ಮಾತನಾಡುವುದನ್ನು ಮುಗಿಸಿ ಸರ್ವೇಶ್ವರಸ್ವಾಮಿ ಹೊರಟುಹೋದರು. ಅಬ್ರಹಾಮನು ತನ್ನ ಮನೆಗೆ ಹಿಂದಿರುಗಿದನು (ಆದಿ 18:16-33).
ಪ್ರಾರ್ಥನೆ ದೇವ ಮಾನವರ ನಡುವಿನ ಅತ್ಮೀಯ ಸಂವಾದ. ಅಲ್ಲಿ ಯಾವುದೇ ಮುಚ್ಚು-ಮರೆ ಇರುವುದಿಲ್ಲ. ಎಲ್ಲವು ಮುಕ್ತತೆಯಿಂದ ಕೂಡಿರುತ್ತದೆ. ಮಾನವ ದೇವರ ಅನಂತತೆಯನ್ನು ಹಾಗೂ ಅವರ ಸಾರ್ವಭೌಮತೆಯನ್ನು ಅಂಗೀಕರಿಸುತ್ತಾನೆ ಏಕೆಂದರೆ ನಮ್ಮ ಆಶೆ-ಆಕಾಂಕ್ಷೆಗಿಂತಲೂ ಬೇಡಿಕೆ-ಕೋರಿಕೆಗಿಂತಲೂ ಅಧಿಕವಾದುದನ್ನು ಮಾಡಲು ದೇವರು ಶಕ್ತರು ಎಂಬ ಅರಿವು ಅವನಲ್ಲಿ ಮನೆಮಾಡಿ ಅವನಂತರಂಗದಿಂದ ಕೃತಜ್ಞತಾಸ್ತುತಿ ಹೊರಹೊಮ್ಮುತ್ತದೆ. ಆಗ ದೈವೀಕ ಪ್ರೀತಿ ಅವನನ್ನು ಆವರಿಸುತ್ತದೆ. ಪಾವನತೆ ಅವನಲ್ಲಿ ಮನೆಮಾಡುತ್ತದೆ. ಪಾಪಕೃತ್ಯಗಳಿಂದ ಅವನು ದೂರಸರಿಯುತ್ತಾನೆ. ಸಂತ ಪೌಲನು ಹೇಳುವಂತೆ ಅಂತವರ ಮನಸ್ಸು ಪ್ರಾಪಂಚಿಕ ವಿಷಯಗಳ ಮೇಲೆ ಅಲ್ಲ, ಸ್ವರ್ಗೀಯ ವಿಷಯಗಳ ಮೇಲೆ ಕೇಂದ್ರಿಕೃತವಾಗಿರುತ್ತದೆ (ಕೊಲೋಸ್ಸೆ 3:3).
ಪ್ರಾರ್ಥನೆಯಲ್ಲಿ ಸಕ್ರಿಯವಾಗಿ ಪ್ರಗತಿ ಸಾಧಿಸಲು ಮಾನವನ ಸ್ವಜ್ಞಾನದಿಂದ ಸಾಧ್ಯವಿಲ್ಲ. ಈ ಅರಿವು ಮಾನವನಲ್ಲಿ ಮನೆಮಾಡಿದಾಗ ದೇವರು ಅಂತವರ ಪ್ರಾರ್ಥನೆಯನ್ನು ಪುರಸ್ಕರಿಸುವರು. ಈ ಹಂತವನ್ನು ತಲುಪಲು ಸುಜ್ಞಾನಕ್ಕಾಗಿ ಸ್ಥಿರಚಿತ್ತದಿಂದ ಪ್ರಾರ್ಥಿಸಬೇಕೆಂದು ಜ್ಞಾನೋಕ್ತಿಗಳಲ್ಲಿ ಸುಜ್ಞಾನಿಯು ನಿನ್ನ ಸ್ವಂತ ಬುದ್ದಿಯನ್ನೇ ನೆಚ್ಚಿಕೊಂಡಿರದಿರು; ಪೂರ್ಣ ಮನಸ್ಸಿನಿಂದ ಸರ್ವೇಶ್ವರನಲ್ಲಿ ನಂಬಿಕೆಯಿಡು. ನಿನ್ನ ನಡತೆಯಲ್ಲೆಲ್ಲಾ ನಿವೇದಿಸು ಆತನನ್ನು, ಆಗ ಸರಾಗಮಾಡುವನು ನಿನ್ನ ಮಾರ್ಗವನ್ನು. ನೀನೇ ಬುದ್ದಿವಂತನೆಂದು ಎಣಿಸದಿರು. ಸರ್ವೇಶ್ವರನಿಗೆ ಭಯಪಟ್ಟು ಕೆಟ್ಟದ್ದನ್ನು ತೊರೆದು ಬಿಡು. ಆಗ ನಿನಗೆ ದೇಹಾರೋಗ್ಯ ದೊರಕುವುದು, ನಿನ್ನ ಎಲುಬುಗಳಿಗೆ ಶಕ್ತಿಸಾರತ್ವ ಸಿಗುವುದು. ನಿನ್ನ ಆಸ್ತಿಯನ್ನರ್ಪಿಸಿ ಸರ್ವೇಶ್ವರನನ್ನು ಸನ್ಮಾನಿಸು, ನಿನ್ನಬೆಳೆಯ ಪ್ರಥಮ ಫಲವನ್ನು ಕಾಣಿಕೆಯಾಗಿಕೊಡು. ಆಗ ನಿನ್ನ ಕಣಜಗಳು ದವಸಧಾನ್ಯದಿಂದ ಭರ್ತಿಯಾಗುವುವು, ನಿನ್ನ ತೊಟ್ಟಿಗಳು ದ್ರಾಕ್ಷಾರಸದಿಂದ ತುಂಬಿ ತುಳುಕುವುವು (ಜ್ಞಾನೋಕ್ತಿ 3:5-10) ಎನ್ನುತ್ತಾನೆ.
ಪ್ರಾರ್ಥನೆ ಮಾನವನ ಹೃನ್ಮನಗಳನ್ನು ದಿನದಿಂದ ದಿನಕ್ಕೆ ಶುದ್ಧಿಕರಿಸುತ್ತದೆ. ಮಾನವ ಬದುಕಿನ ಮಹತ್ವದ ಅರಿವನ್ನು ಮೂಡಿಸುತ್ತದೆ. ಮಾನವ-ಮಾನವರ ನಡುವಿನ ದ್ವೇಷವನ್ನು ಧಮನಗೊಳಿಸುತ್ತದೆ. ಸ್ನೇಹದ ಕಾರಂಜಿಯನ್ನು ಮೊಳಗಿಸುತ್ತದೆ. ಕಷ್ಟ-ನಷ್ಟಗಳನ್ನು ಎದುರಿಸಲು ಬೇಕಾದ ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಆತ್ಮ ಸಾಕ್ಷಾತ್ಕಾರಕ್ಕೆ ನಾಂದಿಯಾಗುತ್ತದೆ. ಒಟ್ಟಾರೆ ಹೇಳುವುದಾದರೆ ಯಾವ ಮಾನವ ದೇವರಿಗೆ ಶರಣಾಗಿ ಲೋಕದ ಏರಿಳಿತಗಳಿಗೆ ಅಂಜದೆ-ಅಳುಕದೆ ಪ್ರಾರ್ಥನೆಯಲ್ಲಿ ಸ್ಥಿರವಾಗಿ ನೆಲೆ ನಿಲ್ಲುತ್ತಾನೋ ಅಂತವನು ಸೂರ್ಯನಂತೆ ಸದಾ ಪ್ರಕಾಶಿಸುತ್ತಾನೆ. ಅಂತವನಿಗೆ ಕತ್ತಲೆಂಬುದೇ ಇರುವುದಿಲ್ಲ. ಪುರುತ್ಥಾನಿ ಪ್ರಭು ಕ್ರಿಸ್ತನೇ ಅವನ ನಿತ್ಯಬೆಳಕಾಗಿ ಭಯಪಡಬೇಡ ಲೋಕಾಂತ್ಯದವರೆಗೂ ಸದಾ ನಾನು ನಿನ್ನೊಡನಿರುತ್ತೇನೆ (ಮತ್ತಾ 28:20) ಎಂಬ ಭರವಸೆಯ ಬೀಜವನ್ನು ಬಿತ್ತುತ್ತಲೇ ಇರುತ್ತಾನೆ. ಅದು ಹೆಮ್ಮರವಾದಾಗ ಪ್ರಾರ್ಥನೆಯ ಅನುಬಂಧ ಸದೃಢವಾಗತ್ತ ದೇವ-ಮಾನವರ ಸಂಬಂಧ ಪರಿಪೂರ್ಣವಾಗಿ ಜೀವನ ಪಾವನವಾಗುತ್ತದೆ.

ಫಾದರ್ ವಿಜಯ್ ಕುಮಾರ್, ಬಳ್ಳಾರಿ


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...