ಸಂವಹನೆ ಶುರುವಾಗುವುದೇ ಮಾತಿನಿಂದ. ಮಾತೆಂಬುದು ಜ್ಯೋತಿರ್ಲಿಂಗ. ಮಾತೇ ವಾಣಿ. ಮಾತೇ ದೇವರು. ಆ ಮಾತು, ವಾಣಿ, ಶಬುದವೆಂಬುದು ದೇವರಲ್ಲಿತ್ತು. ಆ ವಾಣಿಯೇ ದೇವರಾಗಿತ್ತು. ಲೋಕವೆಂಬುದು ಶಾಂತ ಪ್ರಶಾಂತ ಬ್ರಹ್ಮಾಂಡದಲ್ಲಿ ಗಾಢಾಂಧಕಾರದಲ್ಲಿ ವಿರಮಿಸುತ್ತಿದ್ದಾಗ ಸರ್ವಕ್ಕೂ ಈಶ್ವರನಾದ ಅಗೋಚರನಾದ ದೇವರ ರೂಹಿನಲ್ಲಿ ಆಡದೆ ಉಳಿದಿದ್ದ ಅನಾಹತ ಶಬ್ದವು ಲೋಕಸೃಷ್ಟಿಯ ತರುಣದಲ್ಲಿ ಬೆಳಕಾಗಲಿ ಎಂದು ಉಲಿಯಿತಲ್ಲವೇ? ಆ ಬೆಳಕೇ ಕೋಟ್ಯಂತರ ವರ್ಷಗಳಿಂದ ಇಡೀ ವಿಶ್ವದಲ್ಲಿ ನಕ್ಷತ್ರ ನಕ್ಷತ್ರಗಳಾಚೆಗೂ ಹಾಯುತ್ತಿದೆ.
ಮಹೋನ್ನತನ ಆ ಮೊದಲ 'ಉಲಿ' ಮಾನವರೂಪ ತಳೆದು ನಮ್ಮೊಡನೆ ನೆಲೆಸಿ ಜಗವನ್ನು ಮುನ್ನಡೆಸುತ್ತಿದೆ. ಹೀಗೆ ಮೊತ್ತಮೊದಲ ಸಂವಹನದ ರೂವಾರಿಯೂ ಆದ ಅವನ ವಾಣಿಯೂ ಸಂವಹನದ ವಿವಿಧ ರೂಪಗಳಲ್ಲಿ ವಿವಿಧ ಆಯಾಮಗಳಲ್ಲಿ ಆಧುನಿಕತೆಯ ಸ್ಪರ್ಶದೊಂದಿಗೆ ಜಗದೆಲ್ಲೆಡೆಯನ್ನೂ ತಲಪುತ್ತಿದೆ.
ಪವಿತ್ರ ಬೈಬಲಿನ ಹಳೆಯ ಒಡಂಬಡಿಕೆಯಲ್ಲೂ ದೇವರು ಆದಾಮನೊಡನೆ ಮಾತಾಡಿದರು, ಅಬ್ರಹಾಮನೊಡನೆ ಮಾತಾಡಿದರು, ಮೋಶೆಯೊಂದಿಗೆ ಮಾತಾಡಿದರು, ಪ್ರವಾದಿ ಎಲೀಯನೊಂದಿಗೆ ಮಾತಾಡಿದರು ಎಂಬುದನ್ನು ಅರಿತಿದ್ದೇವೆ. ಹಾಗೆಯೇ ದೇವರು ತಮ್ಮ ದೂತರ ಮೂಲಕ, ಕನಸುಗಳ ಮೂಲಕ, ಪ್ರವಾದಿಗಳ ಮೂಲಕ ಸಂದೇಶಗಳನ್ನು ರವಾನಿಸಿದರು ಎಂಬುದನ್ನೂ ಅರಿತಿದ್ದೇವೆ. ಇಷ್ಟೆಲ್ಲ ಆದ ಮೇಲೆ ಸಂವಹನದ ರೂವಾರಿಯಾದ ತಮ್ಮ ಪುತ್ರ ಯೇಸುಕ್ರಿಸ್ತನನ್ನೇ ಮಾನವ ರೂಪದಲ್ಲಿ ಭುವಿಗೆ ಕಳುಹಿಸಿದರು ಎಂಬುದನ್ನೂ ಅರಿತಿದ್ದೇವೆ.
ಮಾನವಕುಲಕ್ಕೆ ದೇವರ ಜೀವತಂತ ಸಂದೇಶವಾದ ಯೇಸುಕ್ರಿಸ್ತರು ಎರಡು ಸಾವಿರ ವರ್ಷಗಳ ಹಿಂದೆ ಮಾನವಪ್ರೇಮದ ಒಂದು ಶುಭಸಂದೇಶವನ್ನು ನಮಗೆ ಕೊಟ್ಟರು. ಅಲ್ಲದೆ ತಾವು ಸ್ವರ್ಗಕ್ಕೆ ಏರಿಹೋಗುವ ಮುನ್ನ `ಹೋಗಿ ಜಗದೆಲ್ಲೆಡೆಯಲ್ಲೂ ಶುಭಸಂದೇಶವನ್ನು ಸಾರಿರಿ' ಎನ್ನುತ್ತಾ ನಮಗೆಲ್ಲರಿಗೂ ಒಂದು ಅಭೂತಪೂರ್ವ ಕರೆ ನೀಡಿದರು. ಎರಡು ಸಾವಿರ ವರ್ಷ ಉರುಳಿದರೂ ಆ ದಿವ್ಯವಾಣಿ ಇಂದಿಗೂ ಈ ಕ್ಷಣಕ್ಕೂ ಅನುರಣಿಸುತ್ತಿದೆ. ಕುಬ್ಜನಲ್ಲೂ ಮಹೋನ್ನತ ದೇವರನ್ನು ಕಾಣುವ ನವಸಮಾಜದ ಪರಿಕಲ್ಪನೆ ಈ ಶುಭಸಂದೇಶದಲ್ಲಿದೆ. ಅಂದು ಯೇಸುಕ್ರಿಸ್ತನ ನೇರಶಿಷ್ಯರು ಹಾಗೂ ಅವರನ್ನು ನಂಬಿದ ಅನೇಕ ಅನುಯಾಯಿಗಳು ಪವಿತ್ರಾತ್ಮರ ಲೋಕಾದ್ವಿತೀಯ ಶಕ್ತಿಯನ್ನ ಆವಾಹಿಸಿಕೊಂಡು ಕಾಲ್ನಡೆಯಲ್ಲಿ ಊರೂರುಗಳನ್ನು ಸಂಚರಿಸಿ ಯಾವುದೇ ಆಧುನಿಕ ಪರಿಕರಗಳಿಲ್ಲದೆ ಬಾಯಿಮಾತಿನಲ್ಲಿ ಸುವಾರ್ತೆಯನ್ನು ಬಲು ಸಮರ್ಥವಾಗಿ ಸಾರಿದರು. ಅವರ ಮಾತುಗಳು ಎಲ್ಲ ದೇಶಗಳ ಎಲ್ಲ ಭಾಷೆಗಳ ಜನರನ್ನು ಸುಲಭವಾಗಿ ತಲಪಿದ್ದವು.
ಸುಮಾರು ಐನೂರು ವರ್ಷಗಳ ಹಿಂದೆ ಮಾನವಕೋಟಿಯು ಮುದ್ರಣಯಂತ್ರವನ್ನು ಕಂಡುಹಿಡಿದ ಮೇಲಂತೂ ಶುಭಸಂದೇಶ ಪ್ರಚಾರಕ್ಕೆ ಹೊಸ ವೇಗವನ್ನು ಒದಗಿಸಿತು. ಮುದ್ರಣಮಾಧ್ಯಮವು ವಿವಿಧ ದೇಶಭಾಷೆಗಳಿಗೆ ಶುಭಸಂದೇಶವನ್ನು ಹಂಚಿತಲ್ಲದೆ ಅದು ಇಂದಿಗೂ ಮುಂದುವರಿದುಕೊಂಡು ಬರುತ್ತಿರುವುದನ್ನು ಕಾಣುತ್ತಿದ್ದೇವೆ. ಮುದ್ರಣದಲ್ಲಿ ಮೊದಲು ಮೂಡಿಬಂದ ಪವಿತ್ರ ಬೈಬಲ್ ಶ್ರೀಗ್ರಂಥದ ಮೂಲಕ ಯೇಸುಕ್ರಿಸ್ತರು ಇಂದಿಗೂ ನಮ್ಮೊಂದಿಗೆ ಸಂವಹನೆ ನಡೆಸುತ್ತಿದ್ದಾರೆ.
ಇದೀಗ ಅತ್ಯಾಧುನಿಕ ಯುಗ. ಮುದ್ರಣಮಾಧ್ಯಮ ಮಾತ್ರವಲ್ಲದೆ ಇನ್ನೂ ತ್ವರಿತಗತಿಯಲ್ಲಿ ಜನರನ್ನು ತಲಪಬಲ್ಲ ರೇಡಿಯೋ, ದೂರದರ್ಶನ, ದೂರಸಂಪರ್ಕ, ಮಿಂಬಲೆ (ಜಾಲತಾಣ), ಮಿನ್ನಂಚೆ (ಇ-ಮೇಲ್), ಫೇಸ್ಬುಕ್ಕು, ವಾಟ್ಸಾಪು, ಟೆಲಿಗ್ರಾಮು ಮುಂತಾದ ಮಾಧ್ಯಮಗಳ ಮೂಲಕ ಕೋಟ್ಯಂತರ ಜನರಿಗೆ ಏಕಕಾಲಕ್ಕೆ ಮಿಂಚಿನ ವೇಗದಲ್ಲಿ ಸಂದೇಶಗಳನ್ನು ಸಂವಹನೆ ಮಾಡುವ ಸಾಧ್ಯತೆಗಳನ್ನು ಕಂಡುಹಿಡಿಯಲಾಗಿದೆ. ಇಂಡಿಯಾದಂತ ಅಭಿವೃದ್ಧಿಶೀಲ ದೇಶಗಳ ಶೇಕಡಾ ಎಂಬತ್ತರಷ್ಟು ಜನ ಇಂದು ಚೂಟಿಯಾದ ಕೈಫೋನುಗಳನ್ನು ಬಳಸಿ ಉಲಿಯುತ್ತಾ, ಕಲಿಯುತ್ತಾ, ನಲಿಯುತ್ತಾ ತಂತ್ರಜ್ಞಾನದ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ.
ಜಗದಾದ್ಯಂತ ಹಲವಾರು ದೇಶಗಳಲ್ಲಿ ಹಬ್ಬಿ ಹರಡಿರುವ ವಿಶ್ವಧರ್ಮಸಭೆಯು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮೇಲ್ಕಂಡ ಎಲ್ಲ ಸಾಧನ ಸಲಕರಣೆಗಳ ಮೂಲಕ ತ್ವರಿತಗತಿಯಲ್ಲಿ ಮುನ್ನಡೆಯುತ್ತಿದೆ. ತನ್ಮೂಲಕ ಜಾಗತಿಕ ಚರ್ಚು ಆಧುನಿಕತೆಗೆ ಹೊರಳುತ್ತಿದೆ. ನಾವು ಕಂಡಂತೆ ಈಗಾಗಲೇ ಕ್ರೈಸ್ತ ಬಾನುಲಿ ಕೇಂದ್ರಗಳು ಬಂದುಹೋಗಿವೆ. ಕ್ರೈಸ್ತ ದೂರದರ್ಶನ ಚಾನಲ್ಲುಗಳೂ ಕಾರ್ಯ ನಿರ್ವಹಿಸುತ್ತಿವೆ. ಗುರುಮಠಗಳಲ್ಲಿ ಸಾಮಾಜಿಕ ಸಂವಹನೆಯ ಪಾಠಗಳಲ್ಲಿ ಆಧುನಿಕ ಸಾಧನಗಳ ಪ್ರಸ್ತಾಪ ಕಾಣುತ್ತಿದೆ. ಜಗದ್ಗುರುಗಳಾದ ಪರಮಪೂಜ್ಯ ಫ್ರಾನ್ಸಿಸ್‍ನವರೂ ಅದನ್ನು ಅನುಮೋದಿಸಿದ್ದಾರೆ.
ಹದಿನೈದನೇ ಶತಮಾನದಲ್ಲಿ ಮುದ್ರಣ ತಂತ್ರಜ್ಞಾನವು ಹುಟ್ಟುಹಾಕಿದ ಕ್ರಾಂತಿಯನ್ನೇ ಇಂದು ಕಳೆದ ಮೂರು ದಶಕಗಳಲ್ಲಿ ಎಲೆಕ್ಟ್ರಾನಿಕ್ ತಂತ್ರಜ್ಞಾನವು ಹುಟ್ಟುಹಾಕಿದೆ. ಅಥವಾ ಅದಕ್ಕಿಂತಲೂ ಹೆಚ್ಚಿನ ಸ್ಫೋಟವನ್ನು ಉಂಟುಮಾಡಿದೆ. ಅದನ್ನು ತೆಗಳದೆ ತಕ್ಕ ರೀತಿಯಲ್ಲಿ ನಮ್ಮ ಬದುಕಿಗೆ ಅಳವಡಿಸಿಕೊಳ್ಳುತ್ತಾ ಸಾಮಾಜಿಕ ಸಂಬಂಧಗಳನ್ನು ಕಟ್ಟಿಕೊಳ್ಳಬೇಕಿದೆ. ಧರ್ಮವೂ ಕೂಡಾ ಸಮತೂಕದಲ್ಲಿ ಅದನ್ನು ಸ್ವೀಕರಿಸಿ ದೈವಶಾಸ್ತ್ರದ ಹೊಸ ಹುಡುಕಾಟವನ್ನು ಮಾಡಬೇಕಿದೆ.
ಎಲೆಕ್ಟ್ರಾನಿಕ್ ಮಾಧ್ಯಮವು ಧರ್ಮಸಭೆಗೆ ಹೊಸದೇನಲ್ಲ. ಶ್ರೀಲಂಕಾದ ಕ್ರೈಸ್ತ ಬಾನುಲಿ ಕೇಂದ್ರವು ಹಲವಾರು ದಶಕಗಳಿಂದ ಇಂಡಿಯಾದ ವಿವಿಧ ಭಾಷೆಗಳಲ್ಲಿ ನಿಗದಿತ ಸಮಯಗಳಲ್ಲಿ ಸುವಾರ್ತ ಪ್ರಸಾರವನ್ನು ಬಲು ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದೆ, ಅದೇ ರೀತಿ ಫಾರ್ ಈಸ್ಟ್ ಬ್ರಾಡ್ಕಾಸ್ಟಿಂಗ್ ಕಂಪೆನಿಯು 1947ರಲ್ಲಿ ಚೀನಾ ದೇಶದ ಶಾಂಗೈನಲ್ಲಿ ಕಾರ್ಯಾರಂಭ ಮಾಡಿ ಇಂದಿಗೂ ಸುವ್ಯವಸ್ಥಿತವಾಗಿ ನಡೆಯುತ್ತಿದೆ. ಅಮೆರಿಕಾದ ಟ್ರಾನ್ಸ್ ವರಲ್ಡ್ ರೇಡಿಯೋ, 1931ರಿಂದಲೂ 90 ದೇಶಗಳಲ್ಲಿ ನೂರಕ್ಕೂ ಮಿಗಿಲಾದ ಭಾಷೆಗಳಲ್ಲಿ ಕಾರ್ಯಕ್ರಮ ನೀಡುತ್ತಿರುವ ಎಚ್ಸಿಜೆಬಿ ರೇಡಿಯೋ, ವ್ಯಾಟಿಕನ್ ರೇಡಿಯೋ, ವರಲ್ಡ್ ರೇಡಿಯೊ ನೆಟ್ವರ್ಕ್ ಮುಂತಾದವುಗಳು ಕೂಡಾ ಯಶಸ್ವೀ ಕಾರ್ಯಕ್ರಮಗಳನ್ನು ನೀಡುತ್ತಿವೆ. ಮಿಂಬಲೆಯ ಇಂದಿನ ಪ್ರಪಂಚದಲ್ಲಿ ಲೆಕ್ಕವಿಲ್ಲದಷ್ಟು ಮಿನ್ದಾಣಗಳು (ವೆಬ್ ಸೈಟ್) ಕ್ರಿಸ್ತವಾಕ್ಯವನ್ನು ಸಾರುತ್ತಿವೆ. ಅವುಗಳಲ್ಲಿ ಪ್ರಮುಖವಾದವು ವೆಬ್ ಎವಾಂಜೆಲಿಸಮ್ ಡಾಟ್ ಕಾಮ್, ಅಮೇಝಿಂಗ್ ಗ್ರೇಸ್ ಡಾಟ್ ಕಾಮ್, ಇ-ವ್ಯಾಂಜೆಲಿಸಮ್ ಡಾಟ್ ಕಾಮ್, ಸ್ಟ್ರೈಕ್ ಸಮ್‌ಒನ್ ಡಾಟ್ ಕಾಮ್, ಫಿಶ್ ದಿ ಡಾಟ್ ನೆಟ್, ಆಕ್ಸೆಸ್ ಜೀಸಸ್ ಡಾಟ್ ಆರ‍್ಗ್, ದಿ ಗುಡ್ ನ್ಯೂಸ್ ಡಾಟ್ ಆರ್ಗ್, ಪವರ್ ಟು ಚೇಂಜ್ ಡಾಟ್ ಕಾಮ್, ಕ್ರಿಶ್ಚಿಯಾನಿಟಿ ಡಾಟ್ ಕಾಮ್ ಮುಂತಾದವು ಮುಂಚೂಣಿಯಲ್ಲಿವೆ.
ದೂರದರ್ಶನ ಮಾಧ್ಯಮವನ್ನೂ ಶುಭಸಂದೇಶ ಪ್ರಸಾರಕ್ಕೆ ಯಶಸ್ವಿಯಾಗಿ ಬಳಸಿಕೊಂಡಿರುವ ಉದಾಹರಣೆಗಳನ್ನು ನಾವು ನಿತ್ಯವೂ ನೋಡುತ್ತಿದ್ದೇವೆ. ಯೂಟ್ಯೂಬ್ ಮಾಧ್ಯಮದಲ್ಲಿ ದೃಶ್ಯಗಳನ್ನು ಸಂಗ್ರಹಿಸಿಟ್ಟು ಬೇಕಾದಾಗ ತೆರೆದು ನೋಡುವ ಅವಕಾಶವೂ ಇದೆ. ಆಡಿಯೋ ಬೈಬಲ್ ಮೂಲಕ ಜನರು ಕಾರನ್ನು ಓಡಿಸುತ್ತಿರುವಾಗಲೇ ಪವಿತ್ರ ಬೈಬಲ್ ವಾಚನವನ್ನು ಆಲಿಸುವ ಸುಯೋಗ ಹೊಂದಿದ್ದಾರೆ.
ಸತ್ಯ ನ್ಯಾಯ ಮತ್ತು ನೀತಿಗಳನ್ನು ಎತ್ತಿಹಿಡಿಯುವುದಕ್ಕೆ ಕಂಕಣಬದ್ದವಾಗಿರುವ ಧರ್ಮಸಭೆಯು ಹೊಸದರಲ್ಲಿ ವಿದ್ಯುನ್ಮಾನ ಮಾಧ್ಯಮಗಳ ಕೆಡುಕುಗಳನ್ನು ಕುರಿತು ಜನರಿಗೆ ಎಚ್ಚರಿಸಿದ್ದು ಸಹಜವಾದ ಕ್ರಿಯೆಯೇ ಆಗಿತ್ತು (ಕ್ಯಾನನ್ 666). ಥಿಯೇಟರುಗಳಿಗೆ ಹೋಗಬೇಡಿ ಎಂದು ಜನರಿಗೆ ತಾಕೀತು ಮಾಡುತ್ತಿದ್ದ ಧರ್ಮಸಭೆ ಇಂದು ಮನೆಯೊಳಗೇ ನೂರಾರು ಚಾನಲ್ಲುಗಳ ಥಿಯೇಟರು ಬಂದು ಕುಳಿತಿರುವುದನ್ನು ಕಂಡು ಸುಮ್ಮನಾಗಿದೆ. ಇಂದು ಎಲೆಕ್ಟ್ರಾನಿಕ್ ಮಾಧ್ಯಮವು ಜನಮಾನಸವನ್ನು ಎಷ್ಟೊಂದು ಆವರಿಸಿಕೊಂಡಿದೆಯೆಂದರೆ ಅದನ್ನು ಹೊರತುಪಡಿಸಿ ಜನಜೀವನ ನಡೆಯುತ್ತಿಲ್ಲ. ಆದ್ದರಿಂದ ಅದರ ಕೆಡಕುಗಳ ಬಗ್ಗೆಯೇ ಹೇಳುತ್ತಾ ಜನರನ್ನು ಚರ್ಚಿನಿಂದ ಹೊರದೂಡುವುದಕ್ಕಿಂತ ಅದೇ ಮಾಧ್ಯಮವನ್ನು ಚರ್ಚಿನತ್ತ ತಿರುಗಿಸಿಕೊಳ್ಳುವ ಮೂಲಕ ಜನರನ್ನು ಸರಿದಾರಿಗೆ ಎಳೆಯಬಹುದೆಂಬುದನ್ನು ಮನಗಂಡಿದೆ. ನಿನ್ನೆ ಮೊನ್ನೆಯವರೆಗೂ ಸಾಮಾಜಿಕ ಸಂಬಂಧಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳು ಹಾಳುಗೆಡವುತ್ತಿವೆ, ಕುಟುಂಬದಲ್ಲಿ ಒಬ್ಬರಿಗೊಬ್ಬರು ಮಾತಾಡುತ್ತಿಲ್ಲ, ಎಲ್ಲರೂ ಟಿವಿಯಲ್ಲಿ ಮೊಬೈಲಿನಲ್ಲಿ ಮುಳುಗಿದ್ದಾರೆ ಎಂದೆಲ್ಲ ಪ್ರಬೋಧನೆ ನೀಡುತ್ತಿದ್ದ ಗುರುಗಳು ಇಂದು ವಾಟ್ಸಾಪಿನಲ್ಲಿ ಪ್ರಬೋಧನೆ ನೀಡುತ್ತಿದ್ದಾರೆ. ನಮ್ಮ ಬಲಿಪೂಜೆಗಳನ್ನು ನೇರಾನೇರ ಯೂಟ್ಯೂಬಿನಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಸ್ವರಪ್ರಸ್ತಾರ ಅಥವಾ ನೊಟೇಶನ್ ನೋಡಿಕೊಂಡು ಹಾಡು ಕಲಿಯುತ್ತಿದ್ದವರು ಇಂದು ಧ್ವನಿಮುದ್ರಿಕೆಗಳನ್ನು ಆಲಿಸಿ ಹಾಡು ಕಲಿಯುತ್ತಿದ್ದಾರೆ.
ಆದರೆ ಎಲ್ಲರೂ ಏಕಕಾಲಕ್ಕೆ ಒಂದೇ ಸಮುದಾಯವಾಗಿ ದೇವಾಲಯಕ್ಕೆ ತೆರಳಿ ಒಟ್ಟಿಗೆ ಪ್ರಾರ್ಥಿಸಿ, ಸ್ತುತಿಸಿ, ತಪ್ಪುಗಳಿಗೆ ಪಶ್ಚಾತ್ತಾಪ ಪಟ್ಟು, ಇತರರಿಗಾಗಿ ಪ್ರಾರ್ಥಿಸಿ, ಸೌಹಾರ್ದ ಮೆರೆದು, ಬಲಿಯರ್ಪಿಸಿ, ಒಂದೇ ರೊಟ್ಟಿಯನ್ನು ಪ್ರೀತಿಯಿಂದ ಒಟ್ಟಿಗೆ ಭುಜಿಸುವ ಆ ಅನ್ಯೋನ್ಯ ನಡವಳಿಕೆಗಳು ಟಿವಿಯಲ್ಲಿ ಪೂಜೆ ನೋಡುವುದರಿಂದ ಸಾಧ್ಯವಾಗುವುದೇ ಎಂಬುದು ಯಕ್ಷಪ್ರಶ್ನೆ. ದೇವಾಲಯದೊಳಗೆ ಕಂಡುಬರುವ ಮನಸೂರೆಗೊಳ್ಳುವ ಸ್ವರೂಪಗಳು, ಮನಮುಟ್ಟುವ ಪ್ರಬೋಧನೆಗಳು, ಮನತಣಿಸುವ ಗೀತೆಗಳು, ಪ್ರಾರ್ಥನೆಯ ಮೌಲ್ಯಗಳು, ಶಿಲುಬೆಹಾದಿಯ ಯಾತನೆಗಳು, ನಿರೀಕ್ಷೆ ಹುಟ್ಟಿಸುವ ಧ್ಯಾನಗಳು, ಮೌನ ಜಪಗಳೆಲ್ಲ ನೇಪಥ್ಯಕ್ಕೆ ಸರಿದು ಮೊಬೈಲ್ ಪೂಜೆಗಳು ಆಸ್ಪತ್ರೆಯ ಹಾಸಿಗೆಯ ಮೇಲೆ ಅಲುಗಾಡದೆ ಪವಡಿಸಿದ ರೋಗಿಯು ಆರೋಗ್ಯಕ್ಕಾಗಿ ಧ್ಯಾನಿಸುವಂತೆ ಆದೀತಲ್ಲವೇ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ.
ಅದೇ ವೇಳೆಯಲ್ಲಿ ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಕಟಿಬದ್ದವಾಗಿರುವ ಧರ್ಮಸಭೆಯು ಇಂದು ಪ್ರಪಂಚದಲ್ಲಿ ಸರ್ವವ್ಯಾಪಿಯಾಗಿರುವ ವಿದ್ಯುನ್ಮಾನ ಮಾಧ್ಯಮವನ್ನು ಪ್ರವೇಶಿಸಿ ಈಗಾಗಲೇ ಅಲ್ಲಿ ತಳವೂರಿರುವ ಅಧಿಕಾರದಾಹಿಗಳ, ಶ್ರೀಮಂತರ, ರಾಜಕಾರಣಿಗಳ, ಜೂಜುಕೋರರ, ರಾಜಕೀಯ ಪ್ರೇರಿತ ಸುಳ್ಳುಸುದ್ದಿಗಾರರ, ಆರ್ಥಿಕತೆಯ ಬುಡಮೇಲುಗಾರರ, ಲಂಪಟರ ಹಾಗೂ ಪ್ರಲೋಭನಕಾರರ ಮನತಿರುಗಿಸಬೇಕೆನ್ನುವ ಕೂಗು ಸಹಾ ಕೇಳಿಬರುತ್ತಿದೆ.
ಇತ್ತೀಚೆಗೆ ನಾವು ಪುಣ್ಯಭೂಮಿಯಾತ್ರೆಗೆ ಹೋಗಿದ್ದಾಗ ನಮ್ಮ ತಂಡದಲ್ಲಿದ್ದ ಗುರುವೊಬ್ಬರು ನಮಗಾಗಿ ಪ್ರತಿದಿನ ಬಲಿಪೂಜೆ ಅರ್ಪಿಸುತ್ತಿದ್ದರು. ಅವರು ತಮ್ಮ ಕೈಪೆಟ್ಟಿಗೆಯಲ್ಲಿ ಪೂಜಾವಸ್ತ್ರ, ದ್ರಾಕ್ಷಾರಸದ ಕುಪ್ಪಿ, ಪಾನಪಾತ್ರೆಗಳನ್ನೆಲ್ಲ ತುಂಬಿಕೊಂಡಿದ್ದರು. ಆದರೆ ಮಣಭಾರದ ಪೂಜಾಪುಸ್ತಕ ವಾಚನಗಳ ಗ್ರಂಥವಿಲ್ಲದೆ ಅವರು ಪೂಜೆಯರ್ಪಿಸುವುದು ಹೇಗೆಂಬ ಕುತೂಹಲ ನನಗಿತ್ತು. ಪುಟ್ಟ ಮೇಜನ್ನು ಬಲಿಪೀಠವಾಗಿ ಸಿದ್ಧಗೊಳಿಸಿದ ಮೇಲೆ ಅವರು ತಮ್ಮ ಮೊಬೈಲು ತೆರೆದು ಅದರಿಂದ ಅಂದಿನ ಪೂಜಾಪಠ್ಯವನ್ನು ಓದತೊಡಗಿದರು. ಹೀಗೆ ಪೂಜೆ ಸಾಂಗವಾಗಿ ನೆರವೇರಿತು. ಅಂದರೆ ಸಾವಿರಾರು ಪುಟಗಳ ಪೂಜಾರ್ಪಣೆಯ ಪಠ್ಯಗಳನ್ನು ಅಂಗೈ ಮೇಲಿನ ಮೊಬೈಲಿನಲ್ಲಿ ಹಿಡಿದಿಟ್ಟುಕೊಳ್ಳುವ ಮೂಲಕ ಚರ್ಚಿನ ಹೊರಗಡೆಯೂ ಪೂಜಾರ್ಪಣೆ ಸಾಧ್ಯವೆಂದಾಯಿತು. ಈ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ ಕ್ರಾಂತಿಯು ಒಂದು ವರದಾನವೆಂದೇ ಹೇಳಬಹುದು.
ಅದೇ ರೀತಿ ಸಾವಿರಾರು ಪುಟಗಳ ದಪ್ಪ ಕೀರ್ತನೆ ಪುಸ್ತಕವನ್ನು ಕೈಯಲ್ಲಿಡಿದು ಹಾಡುವ ಬದಲಿಗೆ ದೇವಾಲಯದಲ್ಲಿ ಪ್ರೊಜೆಕ್ಟರ್ ಮೂಲಕ ಗೋಡೆಯ ಮೇಲೆ ಹಾಡನ್ನು ಮೂಡಿಸಿ ಎಲ್ಲರೂ ಗಾಯನದಲ್ಲಿ ಪಾಲುಗೊಳ್ಳುವ ಪ್ರಯೋಗಗಳು ಹಲವೆಡೆ ನಡೆದಿವೆ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಾಡುಗಳನ್ನು ಮೊಬೈಲಿನಲ್ಲಿ ನೋಡಿಕೊಂಡು ಹಾಡುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಮುದ್ರಣಮಾಧ್ಯಮದ ಬದಲು ಈ ರೀತಿಯ ಎಲೆಕ್ಟ್ರಾನಿಕ್ ಮಾಧ್ಯಮದ ಬಳಕೆಯು ಪರಿಸರಕ್ಕೆ ವರವಾಗಿದೆ ಎಂಬುದು ಸಂತೋಷದ ವಿಷಯ.
ಪ್ರವಾಸದ ಸಂದರ್ಭದಲ್ಲಿ ಅಪರಿಚಿತ ನಾಡಿನಲ್ಲಿ ದೇವಾಲಯವೊಂದರ ತಾಣವನ್ನು ಕಂಡುಹಿಡಿಯಲೂ ಸಹ ಮಿಂಬಲೆಯ ನಕಾಶೆಗಳು ಸಹಾಯ ಮಾಡುತ್ತಿವೆ. ಸುಮಾರು 1989ರಲ್ಲಿ ನಾನು ಒರಿಸ್ಸಾದ ಕೋರಾಪುಟ್ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವಾಗ ಭಾನುವಾರದ ಪೂಜೆಯಲ್ಲಿ ಭಾಗವಹಿಸಲು ಕಥೋಲಿಕ ಚರ್ಚನ್ನು ಹುಡುಕಿದ್ದೇ ಒಂದು ತ್ರಾಸದಾಯಕ ಸಂಗತಿಯಾಗಿತ್ತು. ಕಿಲೋಮೀಟರುಗಟ್ಟಲೆ ಕಾಲ್ನಡಿಗೆಯಲ್ಲಿ ಹೋಗಿ ಶಿಲುಬೆಯಿದ್ದ ಕಟ್ಟಡವನ್ನು ಹುಡುಕಿ ಅಲ್ಲಿನ ಪಾದ್ರಿಯನ್ನು ಮಾತಾಡಿಸಿ ಪೂಜಾ ವೇಳಾಪಟ್ಟಿ ತಿಳಿದುಕೊಂಡಿದ್ದೊಂದು ಸಾಹಸದ ಕೆಲಸವೇ ಆಗಿತ್ತು. ಇಂದು ಯಾವುದೇ ಊರಿಗೆ ಹೋದರೂ ಚರ್ಚಿನವರಲ್ಲದಿದ್ದರೂ ಇತರರು ಚರ್ಚಿನ ಬಗ್ಗೆ ಮಾಹಿತಿ ನೀಡುವುದನ್ನು ಮಿಂಬಲೆಯಲ್ಲಿ ಕಾಣಬಹುದು. ಹೀಗೆ ಕೆಲ ದಿನಗಳ ಹಿಂದೆ ನಾನು ಮತ್ತು ನನ್ನ ಶ್ರೀಮತಿ ಮಲೇಶಿಯಾ ದೇಶಕ್ಕೆ ಪ್ರವಾಸ ಹೋಗಿದ್ದಾಗ ನಮ್ಮ ಹೋಟೆಲಿನಿಂದ ದೇವಾಲಯಕ್ಕೆ ಟ್ಯಾಕ್ಸಿ ಮಾಡಿಕೊಂಡು ಹೋಗಿ ಬಂದದ್ದು ಮಿಂಬಲೆಯ ಸಹಾಯದಿಂದಲೇ. ಹೀಗೆ ಎಲೆಕ್ಟ್ರಾನಿಕ್ ಮಾಧ್ಯಮವು ನಮ್ಮ ದೈನಂದಿನ ವ್ಯವಹಾರಗಳಿಗೆ ಮಾತ್ರವಲ್ಲ ನಮ್ಮ ಆಧ್ಯಾತ್ಮಿಕ ಬದುಕಿಗೂ ನೆರವಾಗುತ್ತಿದೆ.
ಬೆಂಗಳೂರಿನಂತ ಮಹಾನಗರಗಳ ಕೆಲ ಚರ್ಚುಗಳು ತಮ್ಮದೇ ಆದ ಮೊಬೈಲ್ ಅಪ್ಲಿಕೇಶನ್ನುಗಳನ್ನು ಅಳವಡಿಸಿಕೊಂಡು ತಮ್ಮ ಸುಪರ್ದಿಯ ಭಕ್ತಾದಿಗಳಿಗೆ ದೇವಾಲಯದ ವಿವಿಧ ಕಾರ್ಯಕ್ರಮಗಳ ವೇಳಾಪಟ್ಟಿಯನ್ನೂ, ಧಾರ್ಮಿಕ ಪೋಷಣೆಯ ವಿವರಗಳನ್ನೂ ಒದಗಿಸುತ್ತಿದ್ದಾರೆ. ದೇವಾಲಯದ ವಿವಿಧ ಪ್ರಕಟನೆಗಳೂ, ಸೂಚನೆಗಳೂ ಇದರಲ್ಲಿ ಲಭ್ಯವಿರುತ್ತವಲ್ಲದೆ ಮುಖ್ಯ ವ್ಯಕ್ತಿಗಳ ಸಂಸ್ಥೆಗಳ ಸಂಪರ್ಕ ವಿವರಗಳೂ ಇದ್ದು ಭಕ್ತರು ಆಗಿಂದಾಗ್ಗೆ ವಿಷಯಗಳನ್ನು ಅರಿಯಬಹುದಾಗಿದೆ. ಹಾಗೂ ಚರ್ಚಿನ ಕಾರ್ಯಕ್ರಮಗಳಿಗೆ ಹಣ ವರ್ಗಾವಣೆಯನ್ನೂ ಮಾಡಬಹುದಾಗಿದೆ.
ಬಲಿಪೂಜೆಯ ಪವಿತ್ರ ವಾಚನಗಳನ್ನೂ ಹಾಡುಗಳನ್ನೂ ಮೊದಲೇ ವಾಟ್ಸಾಪು ಮೂಲಕ ಹಂಚಿಕೊಂಡು ಅಭ್ಯಾಸ ಮಾಡಿಕೊಳ್ಳುವ ಪ್ರಯೋಗಗಳೂ ಇತ್ತೀಚೆಗೆ ಚಾಲ್ತಿಗೆ ಬರುತ್ತಿವೆ. ಕ್ರಿಸ್ತಗಾನವೃಂದ ಎಂಬ ಒಂದು ವಾಟ್ಸಾಪ್ ಗುಂಪು (9481423743) ಕರ್ನಾಟಕದ ಎಲ್ಲ ಗಾನವೃಂದಗಳ ಪ್ರತಿನಿಧಿಗಳನ್ನು ಒಳಗೊಂಡಿದ್ದು ಬಲಿಪೂಜೆಗೆ ಅಗತ್ಯವಾದ ಹಾಡು, ಕೀರ್ತನೆ, ಪ್ರಾರ್ಥನೆ, ಪೂಜಾವಿಧಿ, ಧಾರ್ಮಿಕ ಸಂದೇಹಗಳನ್ನು ಸಂದೇಶಗಳನ್ನು ಹಂಚಿಕೊಳ್ಳುತ್ತಾ ಗಾಯನತಂಡಗಳಿಗೆ ನೆರವು ನೀಡುತ್ತಿದೆ. ದನಿ ಎಂಬ ಇ-ಮಾಸಿಕವು ಜಗತ್ತಿನಾದ್ಯಂತ ಕನ್ನಡ ಓದುಗರಿಗೆ ಕ್ರೈಸ್ತ ಸಾಹಿತ್ಯವನ್ನು ಉಣಬಡಿಸುತ್ತಿದೆ. ಕ್ರಿಸ್ತದನಿ ಎಂಬ ಬ್ಲಾಗು ಸಂವಾದ ಬಲಿಪೂಜೆ, ಜಪಸರ, ಪೂಜಾವಾಚನಗಳು, ಪ್ರಭೋಧನೆಗಳು, ಶಿಲುಬೆಹಾದಿ, ಧರ್ಮಸಾರ ಮುಂತಾದ ಧಾರ್ಮಿಕ ಸಾಹಿತ್ಯವನ್ನು ಒದಗಿಸುತ್ತಾ ಎಲ್ಲ ಕ್ರೈಸ್ತರಿಗೆ ವಿಶೇಷವಾಗಿ ಪ್ರವಾಸಿ ಕ್ರೈಸ್ತರಿಗೆ ಕೈಪಿಡಿಯಾಗಿದೆ. ಬಿಡುವಿಲ್ಲದ ಯಾಂತ್ರಿಕ ಜೀವನದ ನಡುವೆ ಸಮಯ ಸಿಕ್ಕಾಗ ಹಾಡುಗಳನ್ನು ಕೇಳಿ ಕಲಿಯುವ, ಪವಿತ್ರವಾಚನವನ್ನು ಮನನ ಮಾಡುವ ಅವಕಾಶವನ್ನು ಒದಗಿಸಿರುವ ಈ ಒಂದು ಸುಂದರ ತಂತ್ರಜ್ಞಾನಕ್ಕೆ ಯಾರಾದರೂ ಮನ ಸೋಲಲೇಬೇಕು.
ಇಂಥಾ ಒಂದು ಯಶಸ್ವೀ ತಂತ್ರಜ್ಞಾನವನ್ನು ಬಳಸಿಕೊಂಡು "ಜಗದೆಲ್ಲೆಡೆಗೆ ಶುಭಸಂದೇಶವನ್ನು ಸಾರುವ" ಕಾಯಕವನ್ನು ನಾವೆಲ್ಲರೂ ಮುಂದುವರಿಸೋಣ. ಧರ್ಮಸಭೆಯೊಂದಿಗೆ ಕೈಗೂಡಿಸೋಣ.
• ಸಿ ಮರಿಜೋಸೆಫ್
No comments:
Post a Comment